• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾಂಗಲ್ಯಮ್‌ ತಂತು ನಾನೇನಾ...?

By Staff
|

ಎಷ್ಟೇ ಚಿನ್ನದ ಒಡವೆಗಳಿದ್ದರೂ, ಕರಿಮಣಿ ಸರಕ್ಕಿರುವ ಪಾವಿತ್ರ್ಯತೆ ಒಂದಿಷ್ಟು ಸಹಾ ಕುಗ್ಗಿಲ್ಲ! ದಾಂಪತ್ಯದಲ್ಲಿ ಎಷ್ಟೇ ಅಪಸ್ವರಗಳಿದ್ದರೂ, ಎಷ್ಟೇ ಅಸಮಾಧಾನಗಳಿದ್ದರೂ, ಎರಡು ಹೃದಯಗಳನ್ನು ಬೆಸೆಯುವ ಕರಿಮಣಿ/ ಮಂಗಳಸೂತ್ರದ ಶಕ್ತಿ ಅಪರಿಮಿತ! ದಾಂಪತ್ಯ ಮುರಿಯುವ ಮುನ್ನ ‘ತಾಳಿ... ತಾಳಿ ... ತಾಳಿ...’ ಎಂದು ‘ತಾಳಿ’ಧರೆಯನ್ನು, ಮತ್ತೊಂದು ಕಡೆ ‘ತಾಳಿ’ಬಿಗಿದವನನ್ನು ‘ತಾಳಿ’ ಎಚ್ಚರಿಸುತ್ತದೆ! ಮಹಿಳಾ ದಿನಾಚರಣೆ(ಮಾ.8) ಬೆನ್ನಲ್ಲಿ, ಮಹಿಳಾಮಣಿಗಳಿಗೆ ಆಪ್ತವಾದ ವಿಷಯ ಈ ವಾರದ ವಿಚಿತ್ರಾನ್ನದಲ್ಲಿ...

  • ಶ್ರೀವತ್ಸ ಜೋಶಿ

Mangalsutra/Thaali/Karimani - The most sentimental ornament for a womanಅದು ‘‘ಮಾಂಗಲ್ಯಮ್‌ ತಂತುನಾ ಅನೇನ...’’ ಆಗಬೇಕು (ಪೂರ್ಣರೂಪ: ‘‘ಮಾಂಗಲ್ಯಮ್‌ ತಂತುನಾನೇನ ಮಮ ಜೀವನ ಹೇತುನಾ। ಕಂಠೆ ಬಧ್ನಾಮಿ ಸುಭಗೇ ತ್ವಂ ಜೀವ ಶರದಾಂ ಶತಮ್‌।।’’ ಜತೆಯಲ್ಲಿ ಗಟ್ಟಿಮೇಳ, ಶುಭಾಶೀರ್ವಾದದ ಅಕ್ಷತೆಕಾಳು, ವಿವಾಹಮಹೋತ್ಸವದ ವೈಭವೋತ್ತುಂಗ ಕ್ಷಣ); ಆದರೆ ಬೇಕಂತಲೇ ‘‘ತಂತು ನಾನೇನಾ?’’ ಎಂದು ಪ್ರಶ್ನಾರ್ಥಕ ಶೀರ್ಷಿಕೆ ಇವತ್ತಿನ ಲೇಖನಕ್ಕೆ. ‘ ಸೆಂಟಿಮೆಂಟಲ್‌’ ವಸ್ತುವೊಂದರ ಸ್ವಾರಸ್ಯಗಳ ಮಂಥನ ನಿಮ್ಮ ಪಠಣಕ್ಕೆ.

ಮಂಗಳಸೂತ್ರ, ತಾಳಿ, ಕಂಠಿ, ಕರಿಮಣಿ ಇತ್ಯಾದಿ ವಿವಿಧ ಹೆಸರುಗಳಿರುವ, ಅತಿ ಪಾವಿತ್ರ್ಯದ, ಅತ್ಯಂತ ಭಾವನಾತ್ಮಕವಾದ ಆಭರಣವಿದೆಯಲ್ಲ - ಅದರಲ್ಲಿ ‘ಮಾಂಗಲ್ಯ’ ಯಾವುದು, ಮಾಂಗಲ್ಯಧಾರಣದ ಸಂಪ್ರದಾಯ ಹೇಗೆ ಬಂತು, ಬಂಗಾರದೊಡವೆಯಲ್ಲಿ ಕರಿಮಣಿಗಳೇಕೆ, ಕರಿಮಣಿಸರದಲ್ಲಿ ಹವಳವೇಕೆ - ಇವೇ ಮುಂತಾದ ಸಂಗತಿಗಳ ಬಗ್ಗೆ ಒಂದಿಷ್ಟು ಮನರಂಜನೆ ಮತ್ತೊಂದಿಷ್ಟು ಮೋಜಿನೊಂದಿಗೆ ಮಾಹಿತಿ. ಬಿಡಿ ಬಿಡಿಯಾದ ಕರಿ ಮಣಿಗಳ ರೂಪದಲ್ಲಿ ಪ್ರಸ್ತುತಿ. ಹತ್ತುಹಲವು ಆಕರಗಳಿಂದ ಸಂಗ್ರಹಿಸಿರುವ ಇದರಲ್ಲಿ ವೈಜ್ಞಾನಿಕ ನಿಖರತೆಯನ್ನಾಗಲೀ ಇದಮಿತ್ಥಂ ಎನ್ನುವುದನ್ನಾಗಲೀ ಕಂಡುಕೊಳ್ಳುವುದು ಕಷ್ಟ. ಇದನ್ನು ಮನಸ್ಸಲ್ಲಿಟ್ಟು ಈ ಕರಿ ಮಣಿಗಳ ಸರ ಮಾಡಿಕೊಳ್ಳಬೇಕೆಂದು ವಾಚಕರಲ್ಲಿ ವಿನಂತಿ.

  • ಋಗ್ವೇದವನ್ನು ಆಧರಿಸಿದ ಗೃಹ್ಯಸೂತ್ರಗಳಲ್ಲಿ ವಿವಾಹವಿ-ಧಿ-ಯೆಂದರೆ ವಾಗ್ದಾನ, ಪ್ರದಾನ, ವರಣ, ಪಾಣಿಗ್ರಹಣ, ಸಪ್ತಪದಿ - ಈ ಐದು ಅಂಶಗಳು ಮಾತ್ರ. ಗೃಹ್ಯಸೂತ್ರಗಳಲ್ಲಿ ಬರುವ ಸೋಮ-ಸೂರ್ಯಾ ವಿವಾಹದ ಉಲ್ಲೇಖದಲ್ಲಿ ‘ಮಾಂಗಲ್ಯಧಾರಣ’ ಸೇರಿಲ್ಲ. ಹಾಗಾಗಿ ವೇದಗಳಲ್ಲಿ ಮಂಗಲಸೂತ್ರ/ತಾಳಿ/ಕರಿಮಣಿಸರ ಪ್ರಸ್ತಾಪವಿಲ್ಲ. ‘ಮಾಂಗಲ್ಯಮ್‌ ತಂತುನಾನೇನ...’ ವೇದಗಳಲ್ಲಿರುವ ಮಂತ್ರವಲ್ಲ, ಆಧುನಿಕ ಸಂಸ್ಕೃತಪಂಡಿತರು ರಚಿಸಿದ ಶ್ಲೋಕ.
  • ವಾಲ್ಮೀಕಿರಾಮಾಯಣದಲ್ಲಿ, ವ್ಯಾಸಭಾರತದಲ್ಲಿ, ಕಾಳಿದಾಸನ ರಘುವಂಶ ಕಾವ್ಯದಲ್ಲಿ, ಗೋದಾದೇವಿ (ಆಂಡಾಳ್‌) ಶ್ರೀಮನ್ನಾರಾಯಣನನ್ನು ಮದುವೆಯಾಗುವಂತೆ ಕನಸುಕಾಣುವುದರಲ್ಲಿ - ಹೀಗೆ ಪುರಾಣಗ್ರಂಥಗಳಲ್ಲಿ ವಿವಾಹಸಮಾರಂಭಗಳ ಯಥೇಷ್ಟ ವರ್ಣನೆಯಿದ್ದರೂ ಯಾವುದರಲ್ಲೂ ಮಾಂಗಲ್ಯಧಾರಣದ ಉಲ್ಲೇಖವಿಲ್ಲ.
  • ಹಿಂದು ಮ್ಯಾರೇಜ್‌ ಆ್ಯಕ್ಟ್‌ (1955) ಪ್ರಕಾರ ಗಂಡು-ಹೆಣ್ಣು ಸಪ್ತಪದಿಯ ಏಳನೆಯ ಹೆಜ್ಜೆಯನ್ನು ಜೊತೆಯಾಗಿ ಇಟ್ಟಾಗ ಅವರಿಬ್ಬರ ವಿವಾಹವಿಧಿ-- ಸಂಪೂರ್ಣವೂ ಕಾನೂನುಬದ್ಧವೂ ಆದಂತೆ. ಅಂದರೆ, ಕಾನೂನಿನಲ್ಲೂ ಮಾಂಗಲ್ಯಧಾರಣಕ್ಕೆ ಸಪ್ತಪದಿಗಿರುವಂತೆ ನಿರ್ದಿಷ್ಟ ಮಾನ್ಯತೆಯಿಲ್ಲ!
  • ಕಳೆದ ಶತಮಾನಗಳಲ್ಲಿ ಭಾರತದ ಮೇಲೆ ದಾಳಿಮಾಡುತ್ತಲೇ ಇದ್ದ ಮುಸ್ಲಿಂ ದುಷ್ಟಶಕ್ತಿಗಳು ಅಪ್ರಾಪ್ತವಯಸ್ಸಿನ ಬಾಲಕಿಯರನ್ನು ಅಪಹರಣಮಾಡುತ್ತಿದ್ದರು. ಹುಡುಗಿಗೆ ಮದುವೆಯಾಗಿದೆಯೆಂದು ಗೊತ್ತಾದರೆ ದಾಳಿಕೋರರು ಅವಳ ತಂಟೆಗೆ ಬರುತ್ತಿರಲಿಲ್ಲ. ಅದಕ್ಕಾಗಿ ಬಾಲ್ಯವಿವಾಹ ಮತ್ತು ಮದುವೆಯಾಗಿರುವುದಕ್ಕೆ ಪುರಾವೆಯಾಗಿ ಕೊರಳಲ್ಲಿ ತಾಳಿ ಅಥವಾ ಮಂಗಲಸೂತ್ರ ಧರಿಸುವ ಪದ್ಧತಿ ಆರಂಭವಾಗಿರಬಹುದು ಎಂದು ಇತಿಹಾಸಜ್ಞರ ಅಭಿಪ್ರಾಯ.
  • ಆದರೆ, ಹಯಗ್ರೀವ-ಅಗಸ್ತ್ಯ ಸಂಭಾಷಣೆಯನ್ನು ಸೂತನೊಬ್ಬ ನಿರೂಪಿಸಿದಂತಿರುವ ಲಲಿತಾಸಹಸ್ರನಾಮದಲ್ಲಿ ‘‘ಕಾಮೇಶಬದ್ಧ ಮಾಂಗಲ್ಯಸೂತ್ರ ಶೋಭಿತ ಕಂಧರಾ’’ (ಕಾಮೇಶನಿಂದ ಕಟ್ಟಲ್ಪಟ್ಟ ಮಂಗಲಸೂತ್ರವನ್ನು ಧರಿಸಿರುವವಳು) ಎಂಬ ಸಾಲು ಬರುತ್ತದೆ. ಆದಿಶಂಕರರು ರಚಿಸಿದ ಸೌಂದರ್ಯಲಹರಿಯಲ್ಲಿ, ಶಿವನು ಪಾರ್ವತಿಗೆ ಮಂಗಲಸೂತ್ರವನ್ನು ಕಟ್ಟಿದನೆಂದಿದೆ. ಲಲಿತಾಸಹಸ್ರನಾಮ, ಸೌಂದರ್ಯಲಹರಿಗಳು ಮುಸ್ಲಿಂದಾಳಿಗಿಂತಲೂ ಹಿಂದಿನಕಾಲದಿಂದ ಚಾಲ್ತಿಯಿರುವ ಸ್ತೋತ್ರಗಳಾಗಿದ್ದು ಮಾಂಗಲ್ಯಧಾರಣವನ್ನು ಪ್ರಸ್ತಾಪಿಸಿವೆ!
  • ವಿವಾಹಿತ ಹೆಂಗಸಿನ ಮೇಲೆ ಕೆಟ್ಟದೃಷ್ಟಿ ಬೀಳದಿರಲೆಂದೇ ಮಂಗಲಸೂತ್ರದಲ್ಲಿ ಕಪ್ಪುಬಣ್ಣದ ಮಣಿಗಳಿರುವುದು ಎಂಬ ನಂಬಿಕೆಯಿದೆ. ಕಪ್ಪು ಮಣಿಗಳಿಗೆ ಋಣಾತ್ಮಕ ಶಕ್ತಿಕ್ಷೇತ್ರವನ್ನೆಲ್ಲ ಹೀರಿಕೊಂಡು ಅದು ವಧುವನ್ನು ಮತ್ತು ಅವಳ ಕುಟುಂಬವನ್ನು ತಗಲದಂತೆ ಮಾಡುವ ಗುಣವಿರುತ್ತದಂತೆ. ಕರಿಮಣಿಗಳನ್ನು ಒಂದೊಂದಾಗಿ ಪೋಣಿಸಿದಾಗ ಅದೊಂದು ಸುಂದರ ಸರಮಾಲೆಯಾಗುವುದನ್ನು, ಗಂಡಿನ ಕುಟುಂಬವೆಂಬ ಸೂತ್ರದೊಂದಿಗೆ ನವವಿವಾಹಿತ ಹೆಣ್ಣು ಅಷ್ಟೇ ಸುಲಲಿತವಾಗಿ ಹೊಂದಿಕೊಳ್ಳಬೇಕು/ಹೊಂದಿಕೊಳ್ಳುತ್ತಾಳೆ ಎಂಬ ಆಶಯಕ್ಕೆ ಹೋಲಿಸುತ್ತಾರೆ.
  • ತಮಿಳುನಾಡಿನ ಕೆಲ ಬುಡಕಟ್ಟು ಜನಾಂಗಗಳಲ್ಲಿ (ಪಾಂಡಿಚೇರಿಯ ಆರೊಬಿಂದೊ ಆಶ್ರಮಕ್ಕೆ ಸೇರಿದ ಗ್ರಾಮದಲ್ಲೂ) ಇರುವ ಒಂದು ನಂಬಿಕೆಯೆಂದರೆ ತಾಳಿ/ಮಂಗಲಸೂತ್ರವು ಹುಲಿಯುಗುರಿನ ಸಂಕೇತ. ಹಿಂದಿನಕಾಲದಲ್ಲಿ ಕಾಡಿನಲ್ಲೇ ವಾಸಿಸುತ್ತಿದ್ದವರಲ್ಲಿ, ಹುಲಿಯ ಬೇಟೆಯಾಡಿ ಸಾಕ್ಷಿಯಾಗಿ ಅದರ ಉಗುರನ್ನು ತಂದ ಯೋಧ ತರುಣನನ್ನು ವರಿಸುವುದು ಪ್ರತಿಯಾಬ್ಬ ಕನ್ಯೆಯ ಕನಸಾಗಿತ್ತು. ಅವನು ತಂದುಕೊಟ್ಟ ಹುಲಿಯುಗುರನ್ನು ಕೊರಳಲ್ಲಿ ಧರಿಸುವುದೆಂದರೆ ಅದೊಂದು ವಿಶೇಷ ಗರ್ವ, ಗೌರವ.
  • ಮಾಂಗಲ್ಯಧಾರಣವು ದ್ರಾವಿಡಮೂಲದ ಒಂದು ಸಂಪ್ರದಾಯ ಮತ್ತು ಕ್ರಮೇಣ ಉತ್ತರಭಾರತಕ್ಕೂ ಪಸರಿಸಿದ್ದೆಂಬ ವಾದವಿದೆ. ಮಂಗಲಸೂತ್ರ ಅಥವಾ ತಾಳಿಯಲ್ಲಿ ಪ್ರಾದೇಶಿಕವಾಗಿ, ಮತಪಂಥಗಳಿಗನುಸಾರವಾಗಿ ಅಲ್ಪಸ್ವಲ್ಪ ವ್ಯತ್ಯಾಸಗಳೂ ಕಂಡುಬರುತ್ತವೆ. ಬ್ರಾಹ್ಮಣವರ್ಗದಲ್ಲಿ ಎರಡು ಪದಕಗಳ ತಾಳಿ, ಕಾಯಸ್ಥ/ಮರಾಠಾ ಸ್ತ್ರೀಯರಿಗೆ ಒಂದು ಪದಕದ ತಾಳಿ, ವೈಶ್ಯ ಮತ್ತು ಚಿನಿವಾರ ಪಂಗಡಗಳಲ್ಲಿ ಚಿನ್ನ ವಜ್ರ ವೈಢೂರ್ಯಗಳಿರುವ ತಾಳಿ... ಹೀಗೆ ವೈವಿಧ್ಯಗಳು. ವೀರಶೈವ ಸ್ತ್ರೀಯರು ತಾಳಿಯಾಂದಿಗೇ ಲಿಂಗದ ಕರಂಡಕವನ್ನು ಕಟ್ಟಿಕೊಳ್ಳುವುದೂ ಇದೆ. ದಕ್ಷಿಣಭಾರತದಲ್ಲಿ ಹಿಂದುಗಳಷ್ಟೇ ಅಲ್ಲದೆ ಕ್ರಿಶ್ಚಿಯನ್‌ ಮತ್ತು ಮುಸ್ಲಿಂ ಮತಸ್ಥ ಸ್ತ್ರೀಯರೂ ವಿವಾಹಾನಂತರ ತಾಳಿ/ಕರಿಮಣಿಸರ ಧರಿಸುತ್ತಾರೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X