• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪೊರ್ಟರಿಕೊ ಪಂಚತಾರಾ ಹೊಟೆಲಲ್ಲಿ ‘ಕೊಕಿ’ ಕಪ್ಪೆಯ ಜೋಗುಳ!

By Staff
|

ಕಪ್ಪೆಗಳ ಕೂಗು ಕೇಳಿ ನನಗಾದ ದಿವ್ಯರೋಮಾಂಚನವನ್ನು ನನ್ನ ಪ್ರೊಜೆಕ್ಟ್‌ಟೀಮ್‌ನವರಿಗೂ ತಿಳಿಸಿದೆ. ನನ್ನ ದೇಶದಲ್ಲಿ ನನ್ನ ಊರಲ್ಲಿ ಇದೇ ತರಹ ಕಪ್ಪೆಸಂಗೀತ ಕೇಳಿಬರುತ್ತದೆ ಎಂದೆಲ್ಲ ವಿವರಿಸಿದೆ. ಪೊರ್ಟರಿಕೊಗೆ ಇದೇ ಮೊದಲಬಾರಿ ಬಂದಿರುವ ನಾನು ಎಲ್ಲಾ ಬಿಟ್ಟು ಮೊದಲು ಕಪ್ಪೆಗಳನ್ನು ಗಮನಿದ್ದನ್ನು ಕೇಳಿದ ಪೊರ್ಟರಿಕನ್ನರಿಗೆ ತುಂಬ ಖುಶಿಯಾಯಿತು. ಯಾಕೆ ಗೊತ್ತೇ? ಕಪ್ಪೆ ಅಲ್ಲಿಯ ರಾಷ್ಟ್ರೀಯ ಪ್ರಾಣಿ; ಪೊರ್ಟರಿಕೊ ರಾಷ್ಟ್ರದ ಹೆಮ್ಮೆಯ ಸಂಕೇತ! ಅಲ್ಲಿಗೆ ಬರುವ ಪ್ರವಾಸಿಗಳು ಹಿಂದಿರುಗುತ್ತ ನೆನಪಿಗಾಗಿ ಒಯ್ಯುವುದು ಕಪ್ಪೆಯ ವಿವಿಧ ಅವತಾರಗಳನ್ನು, ಗೊಂಬೆ ಕಲಾಕೃತಿಗಳನ್ನು, ಆಟಿಗೆಗಳನ್ನು.

ನಮ್ಮಲ್ಲಿ ಕಪ್ಪೆಗಳು ವಿಧವಿಧ ರೀತಿಯಲ್ಲಿ ಕೂಗಿದರೂ ಸಾಮಾನ್ಯವಾಗಿ ಅದನ್ನು ‘ಕಪ್ಪೆ ವಟಗುಟ್ಟುವುದು’ ಎನ್ನುತ್ತೇವಲ್ಲ? (ಭಾರತದಲ್ಲಿ ಕಪ್ಪೆಗಳಿಗೂ ಇಂಗ್ಲಿಷ್‌ ವ್ಯಾಮೋಹ. ಅವು ನೀರು ನೀರು ಎನ್ನುವ ಬದಲು ವಟರ್‌ ವಟರ್‌... ಎನ್ನುತ್ತವೆ ಎಂಬ ಕುಚೋದ್ಯಜೋಕ್‌ ನಿಮಗೆ ಗೊತ್ತಿರಬಹುದು). ಪೊರ್ಟರಿಕೊದ ಕಪ್ಪೆಗಳು ವಟಗುಟ್ಟುವುದಲ್ಲ, ಬದಲಿಗೆ ನಮ್ಮಲ್ಲಿನ ಚೈತ್ರಮಾಸದ ಕೋಗಿಲೆ ಅಥವಾ ಬೇರಾವುದೇ ಹಕ್ಕಿಯ ಕೂಗನ್ನು ಹೋಲುವ ವಿಶಿಷ್ಟ ರೀತಿಯ ಧ್ವನಿಯದು. ಕೊ-ಕಿ... ಕೊ-ಕಿ... ಎಂದು ಲಯಬದ್ಧವಾಗಿ ಉಲಿಯುವ ಈ ಕಪ್ಪೆಗಳನ್ನು ಪೊರ್ಟರಿಕೊದಲ್ಲಿ ‘ಕೊಕಿ’ (ಸ್ಪಾನಿಶ್‌ನಲ್ಲಿ Coqui )ಎಂದೇ ಹೇಳುತ್ತಾರೆ! ಕಡಲಕಿನಾರೆಯೆಂದಲ್ಲ, ಪೊರ್ಟರಿಕೊ ದ್ವೀಪವಿಡೀ ಎಲ್ಲ ಕಡೆಯೂ ಅವು ಕೊಕಿ... ಕೊಕಿ... ಎಂದು ಉಲಿಯುತ್ತಿರುತ್ತವಂತೆ.

ಸ್ವಾರಸ್ಯವೆಂದರೆ, ಕೋಕಿ ಕಪ್ಪೆಗಳದು ಸೂರ್ಯಾಸ್ತದ ಲಾಗಾಯ್ತು ಸೂರ್ಯೋದಯದವರೆಗೆ ಮಾತ್ರ ನಡೆಯುವ ಸಂಗೀತಕಛೇರಿ. ಹಗಲಲ್ಲಿ ಅವು ಗೂಡುಸೇರಿ ವಿರಮಿಸುತ್ತವೋ ಏನೊ. ವರ್ಷದ 365 ರಾತ್ರಿಗಳೂ ಕೊಕಿ... ಕೊಕಿ... ಅದೇ ರಾಗ ಅದೇ ತಾಳ. ಪೊರ್ಟರಿಕನ್ನರಿಗೆ ಅದು ಪ್ರತಿರಾತ್ರಿಯೂ ನಿದ್ದೆ ತರಿಸುವ ಜೋಗುಳ. ಅದನ್ನು ಎಷ್ಟು ಹಚ್ಚಿಕೊಂಡಿದ್ದಾರೆಂದರೆ ಬೇರೆ ದೇಶಕ್ಕೆ ಹೋದಾಗ ಕೋಕಿಲಾಲಿಯನ್ನು ಅವರು ಮಿಸ್‌ ಮಾಡಿಕೊಳ್ಳುತ್ತಾರಂತೆ! ಕೊಕಿ ಉಲಿಯನ್ನು ಧ್ವನಿಮುದ್ರಿಸಿಕೊಂಡು ಅದನ್ನು ಪ್ಲೇಯಿಸಿ ನಿದ್ದೆಬರಿಸಿಕೊಳ್ಳುವವರೂ ಇದ್ದಾರಂತೆ!

Lullaby of Coqui frogs in Puerto Rico!ಕೊ-ಕಿ...ಕೊ-ಕಿ... ಎಂದು ಹಾಡುವುದು ಗಂಡು ಕೊಕಿಗಳು ಮಾತ್ರ. ಅದು ಎರಡು ಉದ್ದೇಶಕ್ಕೆ ಎಂದು ಪರಿಸರವಿಜ್ಞಾನಿಗಳು ವಿವರಿಸುತ್ತಾರೆ: ‘ಕೊ’ಎಂಬ ಮೊದಲ ಸ್ವರ 1160 ಹರ್ಟ್ಸ್‌ ಕಂಪನಾಂಕದ್ದು, ಇತರ ಗಂಡುಕೊಕಿಗಳನ್ನು ಹಿಮ್ಮೆಟ್ಟಿಸಿ ತನ್ನ ಟೆರಿಟರಿ ಸ್ಥಾಪಿಸಿಕೊಳ್ಳುವುದಕ್ಕೆ; ಎರಡನೆಯ ‘ಕಿ’ ಸ್ವರ 2090 ಹರ್ಟ್ಸ್‌ ಕಂಪನಾಂಕದಲ್ಲಿ, ಹೆಣ್ಣುಕಪ್ಪೆಗಳನ್ನು ಆಕರ್ಷಿಸಲಿಕ್ಕೆ! ಇನ್ನೊಂದು ಆಶ್ಚರ್ಯವೆಂದರೆ ಕೊಕಿ ಕಪ್ಪೆ ಪೊರ್ಟರಿಕೊದಲ್ಲಿ ಮಾತ್ರ ಕೂಗುವುದು. ಅದರ ವಿಶಿಷ್ಟ ಕೂಗನ್ನು ಅಧ್ಯಯನ ಮಾಡಲು ಒಮ್ಮೆ ಜರ್ಮನ್‌ ವಿಜ್ಞಾನಿಗಳು ಒಂದಿಷ್ಟು ಕೊಕಿಗಳನ್ನು ತಮ್ಮ ದೇಶಕ್ಕೆ ಒಯ್ದರಂತೆ. ಅಲ್ಲಿ ಅವು ಏನು ಮಾಡಿದರೂ ಚಕಾರ ಶಬ್ದವೆತ್ತಲಿಲ್ಲ; ಮತ್ತೆ ಪೊರ್ಟರಿಕೊಗೆ ತಂದುಬಿಟ್ಟಾಗ ಸೂರ್ಯಾಸ್ತವಾಗುವುದೇ ತಡ ಯಥಾಪ್ರಕಾರ ಕೊಕಿ... ಕೊಕಿ... ಎಂದು ಆಲಾಪನೆ ಆರಂಭಿಸಿದವಂತೆ!

ಪೊರ್ಟರಿಕೊದಲ್ಲಿ ನಾನು ನಾಲ್ಕು ರಾತ್ರಿಗಳಲ್ಲಿ ಕೊಕಿ ಜೋಗುಳದೊಂದಿಗೆ ಸುಖನಿದ್ದೆ ಮಾಡಿದೆ. ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಆಫಿ‚ೕಸ್‌ ಕೆಲಸವೂ ಮುಗಿಯುತ್ತ ಬಂತು, ಶಿಶುಕಲ್ಯಾಣಯೋಜನೆಯನ್ನು ಗಣಕದಲ್ಲಿ ಅಳವಡಿಸುವ ಪ್ಲಾನ್‌ ಸಿದ್ಧವಾಯ್ತು. ಅಂದು ಅಲ್ಲಿ 33 ಡಿಗ್ರಿ ಸೆಲ್ಸಿಯಸ್‌ನ ಹಿತಕರ ವಾತಾವರಣ. ವಾಷಿಂಗ್ಟನ್‌ನಿಂದ ನನ್ನ ಉತ್ತಮಾರ್ಧಳು ಫೋನಲ್ಲಿ ಹೇಳಿದಳು - ಇವತ್ತಿಲ್ಲಿ ಚಳಿ ಹೆಚ್ಚಿದೆ, ಆಗಾಗ ಹಿಮ ಉದುರುತ್ತಿದೆ, 33 ಡಿಗ್ರಿ ಫ‚ಾ್ಯರನ್‌ಹೀಟ್‌. ಆದರೂ ಮನೆಗೆ ಮರಳಬೇಕಲ್ಲ? ಬೆಚ್ಚಗಿನ ನಾಡಿನಿಂದ ಹಿಮಾವೃತ ಬೆಚ್ಚನೆಯ ಗೂಡಿಗೆ ವಾಪಸ್‌. ಕಿವಿಯಲ್ಲಿನ್ನೂ ಕೊಕಿ ಕೂಗು ಅನುರಣಿಸುತ್ತಿದೆ!

ಮುಂದಿನವಾರ : ಪೊರ್ಟರಿಕೊ ದ್ವೀಪದಲ್ಲಿ ಮಸಾಲೆದೋಸೆ, ‘ಮಸಾಲೆ’ಕೇಕ್‌! ಅಲ್ಲಿಯವರೆಗೆ ಕೊಕಿ ಕಪ್ಪೆಯ ಕಲರವವನ್ನು ಕೇಳುತ್ತೀರಾದರೆ ಇಲ್ಲಿ ಕ್ಲಿಕ್ಕಿಸಿ.

-srivathsajoshi@yahoo.com

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X