• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪೊರ್ಟರಿಕೊ ಪಂಚತಾರಾ ಹೊಟೆಲಲ್ಲಿ ‘ಕೊಕಿ’ ಕಪ್ಪೆಯ ಜೋಗುಳ!

By Staff
|

ಪೊರ್ಟರಿಕೊಗೆ ಮೊದಲಬಾರಿ ತೆರಳಿದ್ದ ನಮ್ಮ ವಿಚಿತ್ರಾನ್ನ ಭಟ್ಟರು, ಎಲ್ಲಾ ಬಿಟ್ಟು ಅಲ್ಲಿನ ಕಪ್ಪೆಗಳ ಮೇಲೆ ಕಣ್ಣಿಟ್ಟರು! ಯಾಕೆ ಗೊತ್ತೇ? ಕಪ್ಪೆ ಅಲ್ಲಿಯ ರಾಷ್ಟ್ರೀಯ ಪ್ರಾಣಿ; ಪೊರ್ಟರಿಕೊ ರಾಷ್ಟ್ರದ ಹೆಮ್ಮೆಯ ಸಂಕೇತ!... ಇಂತಹ ಅನೇಕ ವೈಶಿಷ್ಟ್ಯಗಳು ಪೊರ್ಟರಿಕೊದಲ್ಲಿವೆ. ಅವುಗಳನ್ನು ಈವಾರ ಮತ್ತು ಮುಂದಿನವಾರ ಓದಬಹುದು.

  • ಶ್ರೀವತ್ಸ ಜೋಶಿ

"Enjoy the warm weather in Puerto Rico!"

ಶುಕ್ರವಾರ ಸಂಜೆ ಆಫಿ‚ೕಸ್‌ ಮುಗಿಯುವ ಸ್ವಲ್ಪ ಮೊದಲಷ್ಟೇ ಕರೆದು, ‘‘ಮುಂದಿನವಾರ ನೀನು ಟೂರ್‌ ಹೋಗಬೇಕಾಗಿದೆ, ಸೋಮವಾರ ಬೆಳಗ್ಗೆಯೇ ಹೊರಡಬೇಕು, ಶುಕ್ರವಾರ ಸಂಜೆಯವರೆಗೂ ಅಲ್ಲಿರಬೇಕಾಗುತ್ತದೆ...’’ ಎಂದು ಮ್ಯಾನೇಜರ್‌ ಆದೇಶವಿತ್ತರೆ ಆತ ಹಿಡಿಶಾಪಕ್ಕೆ ಗುರಿಯಾಗುವ ಸಂಭವವೇ ಹೆಚ್ಚು. ಅದೆಂತಹ ಚ್ಯಾಲೆಂಜಿಂಗ್‌ ಎಸೈನ್‌ನೆಂಟ್‌ ಇದ್ದರೂ ಕೊನೆ ಘಳಿಗೆಯಲ್ಲಿ ಫ‚ೆ್ಲೖಟ್‌, ಹೊಟೆಲ್‌, ರೆಂಟಲ್‌ ಕಾರ್‌ ಬುಕಿಂಗ್‌ ತಲೆನೋವನ್ನು ಆಹ್ವಾನಿಸಿಕೊಳ್ಳುವುದು ಸ್ವಲ್ಪ ಕಷ್ಟವೇ ಆಗುತ್ತದೆ. ಸಂಸಾರಸ್ಥರಿಗಂತೂ ಮನೆಕಡೆಯ ವ್ಯವಸ್ಥೆಗೆ ಪರ್ಯಾಯಗಳನ್ನು ಮಾಡಿಕೊಳ್ಳುವ ಹೆಚ್ಚುವರಿ worry.

ಇಂತಿರಲು, ಮೊನ್ನೆ ಜನವರಿ 26ರ ಶುಕ್ರವಾರ ಸಂಜೆ ಖುದ್ದು ನನಗೇ ಈರೀತಿಯ ಒಂದು ಆದೇಶ ಬಂತು! ನಮ್ಮ ಕಂಪೆನಿಯು ಇನ್ನೊಂದು ಐಟಿ ಕಂಪೆನಿಯ ಸಹಭಾಗಿತ್ವದಲ್ಲಿ ಪೊರ್ಟರಿಕೊ ಸರಕಾರದ ಶಿಶುಕಲ್ಯಾಣ ಇಲಾಖೆಯ ಕಂಪ್ಯೂಟರೀಕರಣಕ್ಕೆ ಯೋಜನೆಯನ್ನು ಸಿದ್ಧಪಡಿಸುತ್ತಿರುವುದರಿಂದ, ಯೋಜನಾಹಂತದ ಸಲಹೆಗಾರನಾಗಿ ಪೊರ್ಟರಿಕೊ ರಾಜಧಾನಿ ಸಾನ್‌ಹ್ವಾನ್‌ಗೆ ಒಬ್ಬ ಸಾಫ್ಟ್‌ವೇರಿಗ ಹೋಗಿಬರಬೇಕು. ಒಂದು ವಾರದ ಕೆಲಸ. ಆ ಎಸೈನ್‌ಮೆಂಟ್‌ ಬಂದದ್ದು ನನ್ನ ಹೆಗಲಿಗೆ. ಅದನ್ನು ನಾನು ನಗುಮೊಗದಿಂದ ಒಪ್ಪಿಕೊಳ್ಳುವಂತೆ ಒಡ್ಡಿದ ಆಮಿಷವೆಂದರೆ ಪೊರ್ಟರಿಕೊದ ಬೆಚ್ಚಗಿನ ವಾತಾವರಣ. ಒಂದುವಾರದ ಮಟ್ಟಿಗೆ ವಾಷಿಂಗ್ಟನ್‌ನ ಕೊರೆಯುವ ಚಳಿಯಿಂದ ಮುಕ್ತಿ. ವಾರ್ಮ್‌ ವೆದರ್‌ ಎಂಜಾಯಿಸುವಂತೆ ಬಾಸ್‌ ಆದೇಶ ಪ್ಲಸ್‌ ಆಶೀರ್ವಾದ.

Map of Puerto Ricoನಿಮ್ಮ ಭೂಗೋಳ ಜ್ಞಾನವನ್ನು ತಾಜಾ ಗೊಳಿಸುತ್ತೀರಾದರೆ, ಫ್ಲೊರಿಡಾದಿಂದ ಆಗ್ನೇಯಕ್ಕೆ ಸುಮಾರು 1000 ಮೈಲು ದೂರದಲ್ಲಿ ಅಟ್ಲಾಂಟಿಕ್‌ ಸಮುದ್ರದಲ್ಲಿ ಕೆರಿಬಿಯನ್‌ ದ್ವೀಪಸಮೂಹವಿದೆ; ಅವುಗಳ ಪೈಕಿ ಪೊರ್ಟರಿಕೊ ಸಹ ಒಂದು ಪುಟ್ಟ ದ್ವೀಪರಾಷ್ಟ್ರ. ಒಂದು ರೀತಿಯಲ್ಲಿ ರಾಷ್ಟ್ರವಲ್ಲದ ರಾಷ್ಟ್ರ, ಏಕೆಂದರೆ ಅದು ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಸೇರಿದ ಕಾಮನ್‌ವೆಲ್ತ್‌ ಪ್ರದೇಶ. ಅಮೆರಿಕದಿಂದ ಅಲ್ಲಿಗೆ ಹೋಗಲು ಪಾಸ್‌ಪೋರ್ಟ್‌

ವೀಸಾ ಇತ್ಯಾದಿ ಏನೂ ಬೇಡ, ದೇಶದೊಳಗಿನ ಜಾಗಗಳಿಗೆ ಹೋಗುವಂತೆ ಡ್ರೈವರ್ಸ್‌ ಲೈಸನ್ಸ್‌ ಅಥವಾ ಇತರ ಯಾವುದೇ ಗುರುತುಪತ್ರ ಸಾಕು. ಅಂದಹಾಗೆ ಕ್ರಿ.ಶ 1493ರಲ್ಲಿ ಕೊಲಂಬಸ್ಸನು ಅಲ್ಲಿ ಅಟೆಂಡೆನ್ಸ್‌ ಹಾಕಿಯೇ ಆಮೇಲೆ ಮುಂದುವರೆದು ಅಮೆರಿಕ ಖಂಡವನ್ನು ಕಂಡುಹಿಡಿದದ್ದು. ಆ ದೃಷ್ಟಿಯಿಂದ, ಅಮೆರಿಕವೆಂಬ ಭವ್ಯಸೌಧದ ‘ಪೊರ್ಟಿಕೊ’ ಇದ್ದಂತೆ ಪೊರ್ಟರಿಕೊ.

ಆ ದ್ವೀಪವು ಸುಮಾರು 110 ಮೈಲು ಅಗಲ, 40 ಮೈಲು ಉದ್ದವುಳ್ಳ ಆಯತಾಕಾರದ ಪ್ರದೇಶ. ಅಲ್ಲಿನ ಶಾಲಾವಿದ್ಯಾರ್ಥಿಗಳಿಗೆ ದೇಶದ ಮೇರೆಗಳನ್ನು ನೆನಪಿಡುವುದು ತುಂಬ ಸುಲಭ - ಉತ್ತರಕ್ಕೆ ಸಮುದ್ರ, ದಕ್ಷಿಣಕ್ಕೆ ಸಮುದ್ರ, ಪೂರ್ವಕ್ಕೂ ಸಮುದ್ರ, ಪಶ್ಚಿಮಕ್ಕೂ ಸಮುದ್ರ! ಆಶ್ಚರ್ಯವೆಂದರೆ ಮೂರುವರೆಸಾವಿರ ಚದರಮೈಲುಗಳಷ್ಟೇ ವಿಸ್ತೀರ್ಣದ ಆ ದ್ವೀಪದಲ್ಲಿ ಎಲ್ಲ ಭೌಗೋಳಿಕ ವೈವಿಧ್ಯಗಳು - ಪರ್ವತಶ್ರೇಣಿ, ನದಿ/ಸರೋವರ, ನಿತ್ಯಹರಿದ್ವರ್ಣದ ಕಾಡು, ಜತೆಯಲ್ಲೇ ಒಂದಿಷ್ಟು ಮರುಭೂಮಿ - ಎಲ್ಲವೂ ಇವೆ! ಉಷ್ಣವಲಯದಲ್ಲಿ ಭೂಮಧ್ಯರೇಖೆಗೆ ಸಮೀಪವಿರುವುದರಿಂದ ಅಲ್ಲಿ ಹಗಲುರಾತ್ರಿಗಳ ಪ್ರಮಾಣ ವರ್ಷದುದ್ದಕ್ಕೂ ಒಂದೇ ಆಗಿರುತ್ತದೆ. ಅಮೆರಿಕದ ಇತರ ಭಾಗಗಳಂತೆ ಹಗಲಿನ ಬೆಳಕನ್ನು ಉಳಿತಾಯ ಮಾಡುವ ಮತ್ತು ಅದಕ್ಕಾಗಿ ಗಡಿಯಾರಗಳನ್ನು ಹಿಂದುಮುಂದು ಮಾಡಿಕೊಳ್ಳುವ ತಲೆಬಿಸಿ ಅಲ್ಲಿನ ಪ್ರಜೆಗಳಿಗಿಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more