ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಪರಿಸರ ದಿನ-2007ಧರೆಗೆ ಡವಡವ - ಡಿಮ್‌ ಡಿಮ್‌ ಡಿಂಡಿಮ...

By Staff
|
Google Oneindia Kannada News


Global Dimming - Cause and Effect ಗಂಧಕ ಮತ್ತು ಇಂಗಾಲ ಧೂಳಿನ ಮಿಶ್ರಣವು ಈ ಪ್ರಕ್ರಿಯೆಯಲ್ಲಿ ಡಬಲ್‌ ಆಕ್ಷನ್‌ ಹೀರೋ ಥರ ವರ್ತಿಸುತ್ತದೆ. ಒಂದನೆಯದಾಗಿ ಅದು ಸೂರ್ಯಕಿರಣಗಳನ್ನು ಪ್ರತಿಫಲಿಸುತ್ತದೆ, ಎರಡನೆಯದಾಗಿ ಇನ್ನೂ ಹೆಚ್ಚು ಮೋಡಗಳುಂಟಾಗುವಂತೆ ಮಾಡಿ ಆ ಮೋಡಗಳ ದೆಸೆಯಿಂದ ಮತ್ತಷ್ಟು ಸೂರ್ಯಕಿರಣಗಳು ಪ್ರತಿಫಲನಗೊಳ್ಳುವಂತೆ ಮಾಡುತ್ತದೆ. ತತ್ಪರಿಣಾಮವಾಗಿ ಭೂಲೋಕಕ್ಕೆ ಕಡಿಮೆ ಬೆಳಕು, ಕಡಿಮೆ ಶಾಖ. ವಿಜ್ಞಾನಿಗಳ ವಿವರಣೆಯಲ್ಲಿ ಅದು ಗ್ಲೋಬಲ್‌ ಡಿಮ್ಮಿಂಗ್‌.

ಆದರೆ ವಾತಾವರಣಕ್ಕೆ ಗಂಧಕ ಇಂಗಾಲ ಮಿಶ್ರಣವನ್ನು ತೂರಿಬಿಡುವ ಕೆಟ್ಟಕೆಲಸ ಮನುಷ್ಯನಿಂದ ಮಾತ್ರ ಆಗುತ್ತಿರುವುದಲ್ಲ. ಭೂಮಿಯೇ ಆವಾಗಾವಾಗ ಜ್ವಾಲಾಮುಖಿಯಾಗುವ ಪ್ರಕ್ರಿಯೆಯಲ್ಲಿ ಅಪಾರ ಪ್ರಮಾಣದಲ್ಲಿ ಗಂಧಕದ ಡಯಾಕ್ಸೈಡ್‌ ಉತ್ಪಾದನೆಯಾಗಿ ವಾತಾವರಣದಲ್ಲಿ ತೇಲತೊಡಗುತ್ತದೆ. ಒಮ್ಮೆ ಜ್ವಾಲಾಮುಖಿ ಹೊಗೆಯನ್ನುಗುಳಿದರೂ ಅದರ ಪರಿಣಾಮ ವರ್ಷಗಟ್ಟಲೆ ಇರುತ್ತದೆ.

1815ರಲ್ಲಿ ಇಂಡೊನೇಶ್ಯಾದ ಮೌಂಟ್‌ ಟ್ಯಾಂಬೊರಾ ಪರ್ವತದಲ್ಲಾದ ಜ್ವಾಲಾಮುಖಿಯ ಪ್ರಕೋಪ ಎಷ್ಟಿತ್ತೆಂದರೆ ಸ್ಥಳೀಯವಾಗಿ ತತ್‌ಕ್ಷಣದ ಸಾವುನೋವುಗಳಷ್ಟೇ ಅಲ್ಲದೆ ವಾತಾವರಣವನ್ನು ಸೇರಿದ ಗಂಧಕದಿಂದಾಗಿ ಮುಂದಿನ ವರ್ಷ (1816)ದಲ್ಲಿ ದೂರದೂರದ ಅಮೆರಿಕ ಖಂಡ, ಯುರೋಪ್‌ ಖಂಡಗಳಲ್ಲಿ ಬೇಸಿಗೆಕಾಲವೇ ಇರಲಿಲ್ಲ! ಆ ವರ್ಷ ಅಮೆರಿಕದ ಈಶಾನ್ಯ ಭಾಗದಲ್ಲಿ ಜೂನ್‌ನಲ್ಲೂ ಹಿಮಪಾತವಿತ್ತಂತೆ, ವರ್ಜೀನಿಯಾದಲ್ಲಿ ಜುಲೈ 4ರಂದು (ಅಮೆರಿಕದ ಸ್ವಾತಂತ್ರ್ಯದಿನ, ಬೇಸಿಗೆಯ ಬಿಸಿ ಧಗೆಯಿರುವ ಕಾಲ) ಮಂಜುಮುಸುಕಿದ ವಾತಾವರಣವಿತ್ತಂತೆ!

1991ರಲ್ಲಿ ಫಿಲಿಪ್ಪೀನ್ಸ್‌ನಲ್ಲಿ ಮೌಂಟ್‌ ಪಿನಾಟುಬೊದಲ್ಲಿ ಕೊತಕೊತ ಕುದಿದ ಜ್ವಾಲಾಮುಖಿ ಸುಮಾರು 20 ಮಿಲಿಯನ್‌ ಟನ್‌ಗಳಷ್ಟು ಗಂಧಕವನ್ನು ಉಗುಳಿತು. ಪರಿಣಾಮವಾಗಿ ಭೂಗೋಳದ ಉತ್ತರಾರ್ಧದಲ್ಲಿ ಮುಂದಿನೆರಡು ವರ್ಷಗಳಲ್ಲಿ ಹವಾಮಾನ ವೈಪರೀತ್ಯ - 1992ರ ಬೇಸಿಗೆಯಲ್ಲಿ ತುಂಬಾ ಮಳೆ, 1993ರಲ್ಲಿ ಪ್ರವಾಹ ಉಂಟಾಯಿತು.

ಇತ್ತೀಚಿನ ವರ್ಷಗಳಲ್ಲಿ ಗ್ಲೋಬಲ್‌ ಡಿಮ್ಮಿಂಗ್‌ ಆಗುತ್ತಿರುವುದಕ್ಕೆ ಇನ್ನೊಂದು ಕಾರಣವಿದೆ. ಭೂಮಿಯ ಮೇಲೆ ಕಾರು-ಲಾರಿ-ಬಸ್ಸು ವಾಹನಗಳು ಹೊಗೆಯುಗುಳುತ್ತ ಹೇಗೆ ‘ಗ್ಲೋಬಲ್‌ ವಾರ್ಮಿಂಗ್‌’ಗೆ ಕಾರಣವಾಗಿವೆಯೋ ಅಂತೆಯೇ ಆಕಾಶದಲ್ಲಿ ಹಾರುವ ವಿಮಾನಗಳು ಉಗುಳುವ ಹೊಗೆ ‘ಗ್ಲೋಬಲ್‌ ಡಿಮ್ಮಿಂಗ್‌’ಗೆ ಕಾಣಿಕೆಯಿತ್ತಿದೆ! 2001 ಸಪ್ಟೆಂಬರ್‌ 11ರ ದುರ್ಘಟನೆಯ ನಂತರ ಸುಮಾರು ನಾಲ್ಕೈದು ದಿನ ಇಡೀ ಅಮೆರಿಕ ದೇಶದ ಮೇಲಿನ ಆಕಾಶದಲ್ಲಿ ವಿಮಾನಸಂಚಾರ ಪೂರ್ಣವಾಗಿ ನಿಂತುಹೋಗಿತ್ತಲ್ಲ? ಸಪ್ಟೆಂಬರ್‌ 11ರಿಂದ 14ರವರೆಗೆ ದೇಶದ 4000 ಕೇಂದ್ರಗಳಲ್ಲಿ ದಾಖಲಾದ ಉಷ್ಣತಾಮಾನ ಅಂಕಿಅಂಶಗಳನ್ನು ಕ್ರೋಡೀಕರಿಸಿದಾಗ ತಿಳಿದುಬಂದದ್ದೇನೆಂದರೆ ವಾತಾವರಣದ ಉಷ್ಣತೆ ಆ ಅವಧಿಗಿಂತ ಮೊದಲ ಮತ್ತು ನಂತರದ ದಿನಗಳಿಗೆ ಹೋಲಿಸಿದರೆ ಸುಮಾರು ಮೂರು ಡಿಗ್ರಿಗಳಷ್ಟು ಹೆಚ್ಚಿತ್ತು. ಅಂದರೆ, ವಿಮಾನಗಳ ಹಾರಾಟವಿಲ್ಲದ್ದರಿಂದ ಗ್ಲೋಬಲ್‌ ಡಿಮ್ಮಿಂಗ್‌ ಆಗದೆ ಉಷ್ಣತೆ ಏರಿತ್ತು!

ಆ ದೃಷ್ಟಿಯಿಂದ ನೋಡಿದರೆ ಗ್ಲೋಬಲ್‌ ಡಿಮ್ಮಿಂಗ್‌ ಗಾಬರಿಯಾಗುವಂಥದ್ದೇನಲ್ಲ. ಮಾತ್ರವಲ್ಲ, ಗ್ಲೋಬಲ್‌ ವಾರ್ಮಿಂಗ್‌ಅನ್ನು ಸ್ವಲ್ಪವಾದರೂ ಹದ್ದುಬಸ್ತಿನಲ್ಲಿಡಲಿಕ್ಕೆ ಅದು ನೆರವಾಗುತ್ತದೆ. ಎಲ್ಲಿಯವರೆಗೆಂದರೆ ಕೆಲವು ಅರೆಮೇಧಾವಿಗಳು ಕೃತಕವಾಗಿ ಗಂಧಕದ ಹೊಗೆಯನ್ನು ವಾತಾವರಣಕ್ಕೆ ಸೇರಿಸಿ ಗ್ಲೋಬಲ್‌ ಡಿಮ್ಮಿಂಗ್‌ ಮೂಲಕ ಗ್ಲೋಬಲ್‌ ವಾರ್ಮಿಂಗ್‌ಅನ್ನು ನಿಯಂತ್ರಿಸಬಹುದೇ ಎಂಬ ಯೋಚ(ಜ)ನೆಗೂ ತೊಡಗಿದ್ದರೆ ಆಶ್ಚರ್ಯವಿಲ್ಲ.

ತಪ್ಪು ಮಾಡುವುದು, ಅದನ್ನು ಮುಚ್ಚುವುದಕ್ಕಾಗಿ ಅಥವಾ ಸರಿಯೆಂದು ಸಾಬೀತುಪಡಿಸುವುದಕ್ಕಾಗಿ ಇನ್ನೊಂದು ತಪ್ಪು ಮಾಡುವುದು - ಇದನ್ನು ಮಾನವಜನಾಂಗಕ್ಕೆ ಯಾರೂ ಕಲಿಸಿಕೊಡಬೇಕಾದ್ದಿಲ್ಲ ತಾನೆ? ಪ್ರಕೃತಿಯನ್ನು ಇಷ್ಟೆಲ್ಲ use ಮತ್ತು abuse ಮಾಡುವ ಭೂಲೋಕವಾಸಿಗಳ ಕಸರತ್ತುಗಳನ್ನು ನೋಡಿ ಒಂದುದಿನ ಸೂರ್ಯ ನಿಜಕ್ಕೂ ಕಣ್ಮುಚ್ಚದಿದ್ದರೆ ಸಾಕು, ಅಷ್ಟೇ!

- [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X