• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತ ಪ್ರವಾಸದಿಂದಾಯ್ದ ಚೂರುಪಾರು ಸುದ್ದಿಸೂರು...

By Staff
|

A busy street in Bengalooru* ಕೈಕೊಡುವುದು ಎಂದಾಗ ನೆನಪಾಯ್ತು, ಪ್ರಸ್ತುತ ಕರ್ನಾಟಕದಲ್ಲಿ ಕೈಯೇತರ ಪಕ್ಷಗಳ ಸಮ್ಮಿಶ್ರ ಸರಕಾರವಿದ್ದರೂ ರಾಜಕೀಯ ವಲಯಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಮಾತು, ಕಥೆ-ಕಟ್ಟುಕಥೆ-ಕಪೋಲಕಲ್ಪಿತಕಥೆ ಎಲ್ಲವೂ ಕೈಯ ವಿಚಾರವಾಗಿಯೇ! ಅದೇ, ಅಧಿಕಾರದ ಕೈಬದಲಾವಣೆ ಅಥವಾ ಸುಸಂಸ್ಕೃತವಾಗಿ ಹೇಳುವುದಾದರೆ ಹಸ್ತಾಂತರ. ಅದರ ದಿನಗಣನೆ/ಕ್ಷಣಗಣನೆ. ಕುರ್ಚಿವ್ಯಾಮೋಹದವರಿಗೆ ಮಾತ್ರವಲ್ಲದೆ ಸುಖಾಸುಮ್ಮನೆ ಕಿಚಾಯಿಸುವವರಿಗೆ, ಕಿಚ್ಚು ಹಚ್ಚುವವರಿಗೆ ಕೂಡ ಪರ್ವಕಾಲ. ಹಸ್ತಾಂತರ ಪ್ರಹಸನದಿಂದಾಗಿ ರಾಜ್ಯದ ಅಭಿವೃದ್ಧಿ ಕಾರ್ಯಗಳೆಲ್ಲ ಬೆಂಗಳೂರಿನ ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿಹಾಕಿಕೊಂಡಿರುವಂತಿದೆಯೆಂದು ಶ್ರೀಸಾಮಾನ್ಯನ ಗೋಳು. ಆದರೆ ಅದನ್ನು ಕೇಳುವವರು ಯಾರು?

* "ಬೆಂಗಳೂರಲ್ಲಿ ಟ್ರಾಫಿಕ್ ಯದ್ವಾತದ್ವಾ ಹೆಚ್ಚಿದೆ" ಎಂದಷ್ಟೇ ಹೇಳಿದರೆ ಅದು ಕಡಲಿನ ಒಂದು ಬದಿಯನ್ನಷ್ಟೇ ತಿಳಿದುಕೊಂಡಂತಾಗುತ್ತದೆ. ಕರ್ನಾಟಕದ ಇತರ ಎಲ್ಲ ಪ್ರದೇಶಗಳ ಜನ, ಮುಖ್ಯವಾಗಿ ಹಳ್ಳಿಗಳ ಯುವಜನತೆ ಗುಳೇಎದ್ದು ಬೆಂಗಳೂರಿಗೆ ವಲಸೆ ಹೋಗಿದ್ದಾರೆ ಎಂದರೆ ಕಥೆಯ ಕರಾಳಮುಖದ ಅರಿವಾಗುತ್ತದೆ. ಸಾಲದೆಂಬಂತೆ ಹೊರರಾಜ್ಯಗಳಿಂದಲೂ ಹಲವು ನಮೂನೆಯ ಜನರು ಬೆಂಗಳೂರಲ್ಲಿ ಬೀಡುಬಿಟ್ಟಿದ್ದಾರೆ. ಅಷ್ಟೇ ಅಲ್ಲ, ಪ್ರಸಕ್ತ ವಿದ್ಯಮಾನಗಳನ್ನು ಗಮನಿಸಿದರೆ ಬೀಡು ಬಿಟ್ಟಿದ್ದಾರೆಯ ಜತೆಗೇ ಬಾಂಬು ನೆಟ್ಟಿದ್ದಾರೆ ಎಂಬ ಘೋರವಿಚಾರವನ್ನೂ ನಡುಗುತ್ತಲೇ ಮನವರಿಕೆ ಮಾಡಿಕೊಳ್ಳಬೇಕಾಗುತ್ತದೆ! Bangalore has gone to dogs ಎಂಬ ಉದ್ಗಾರದಲ್ಲಿ (ಅದು ಬೀದಿನಾಯಿಗಳ ಕಾಟದಿಂದ ಬೇಸತ್ತವರು ಹೇಳಿದ್ದಾದರೂ) ಕಹಿಸತ್ಯವಿದೆ.

* ಅಂದಮಾತ್ರಕ್ಕೆ ಬೆಂಗಳೂರು ಸರ್ವನಾಶವಾಗಿದೆ ಎಂದೇನಿಲ್ಲ. ಮಲ್ಲೇಶ್ವರಂ, ಗಾಂಧಿಬಜಾರ್ ಮೊದಲಾದ ಅಚ್ಚಕನ್ನಡ ಪ್ರದೇಶಗಳಲ್ಲಿ ಅಡ್ಡಾಡುವಾಗ ಈಗಲೂ ಅದೇ ಹಾಯೆನಿಸುವ ಉಲ್ಲಾಸಮಯ ವಾತಾವರಣವಿದೆ. ಹಣ್ಣು-ಹೂವಿನಂಗಡಿಗಳು, ಪೂಜಾಸಾಮಗ್ರಿಗಳ ಅಂಗಡಿಗಳು, ಕುರುಕಲು ತಿಂಡಿಗಳನ್ನು ತಯಾರಿಸಿಕೊಡುವ ಸುಬ್ಬಮ್ಮನಂಗಡಿಗಳು ಇತ್ಯಾದಿ ಬೆಂಗಳೂರಿನ ಕೆಲ ಪ್ರದೇಶಗಳಾದರೂ ಬೆಂಗಳೂರಾಗಿಯೇ ಇರುವುದಕ್ಕೆ ಕಾರಣವಾಗಿವೆ. ಕಬ್ಬನ್‍ಪಾರ್ಕ್, ಲಾಲ್‍ಬಾಗ್‍ನಂಥ ಉದ್ಯಾನಗಳು ಈಗಲೂ ನಳನಳಿಸುತ್ತಿವೆ, ವರ್ಷಂಪ್ರತಿಯಂತೆ ಲಾಲ್‌ಬಾಗ್‌ನಲ್ಲಿ ಫಲಪುಷ್ಪಪ್ರದರ್ಶನ ನೋಡಲು ಜನ ಮುಗಿಬೀಳುತ್ತಾರೆ. ಬೆಳಗ್ಗೆ ಹೊತ್ತು ಹರಿಯುವ ಮುನ್ನ ಲಾಲ್‌ಬಾಗ್‌ವರೆಗೆ ಸ್ಕೂಟರ್/ಕಾರ್ ದೌಡಾಯಿಸಿ ಅಲ್ಲಿ ಒಂದರ್ಧ ಗಂಟೆ ವಾಕ್ ಮಾಡಿ ಕರಗಿಸಬೇಕು; ಮತ್ತೆ ಅಲ್ಲೇಪಕ್ಕ ಎಂಟಿಆರ್ ಹೊಟೆಲಲ್ಲೋ ಇನ್ನಾವುದೋ ದರ್ಶಿನಿಯಲ್ಲೋ ತುಪ್ಪದೋಸೆ ವಡೆಸಾಂಬಾರ್ ಚೌಚೌಭಾತ್ ತಿಂದು ತೂಕವನ್ನು ಸರಿದೂಗಿಸಬೇಕು. ಎವರೇಜ್ ಬೆಂಗಳೂರಿಗನಿಗೆ ಇದುವೇ ಜೀವ ಇದು ಜೀವನ!

* ಹಬ್ಬ ಹರಿದಿನಗಳು ಬಂತೆಂದರೆ ಉದ್ಯಾನನಗರಿಯಿಡೀ ಬಣ್ಣಾ ನನ್ನ ಒಲವಿನ ಬಣ್ಣ ನನ್ನ ಬದುಕಿನ ಬಣ್ಣ... ಎನ್ನುತ್ತ ವರ್ಣರಂಜಿತವಾಗುತ್ತದೆ. ಆದರೂ ಯಾಕೋ ಏನೋ ಆ ವೈಭವದಲ್ಲಿ ಈಗೀಗ ಹೆಚ್ಚಾಗಿ ವಾಣಿಜ್ಯ ಅಂಶ ಮೂಗುತೂರಿಸಿರುವುದು ಭಾಸವಾಗುತ್ತಿದೆ. ಉದಾಹರಣೆಗೆ ಮೊನ್ನೆ ಶ್ರಾವಣ ಶುಕ್ರವಾರದಂದು ವರಮಹಾಲಕ್ಷ್ಮೀ ವ್ರತದ ಅಬ್ಬರವನ್ನು ಗಮನಿಸಿದರೆ ಅಲ್ಲಿ ಭಕ್ತಿಗಿಂತ ಪ್ರದರ್ಶನರತಿಯೇ ಜಾಸ್ತಿ ಇತ್ತೆಂದು ಯಾರಿಗಾದರೂ ಅನಿಸುತ್ತಿತ್ತು. ಪೂಜೆ-ಪುನಸ್ಕಾರಗಳ ಕರ್ಫೂರದ ಕಂಪು ಕ್ರಮೇಣವಾಗಿ ಕರಗುತ್ತಿದ್ದು ಆ ಜಾಗದಲ್ಲಿ ಕಮರ್ಷಿಯಲ್ ಕಮಟುವಾಸನೆ ಮೂಗಿಗೆ ಬಡಿಯತೊಡಗಿದೆಯೆಂದರೆ ತಪ್ಪಾಗಲಾರದು.

* ನನ್ನ ಪ್ರವಾಸದ ವೇಳೆಯಲ್ಲೇ ಭಾರತ ಸ್ವಾತಂತ್ರ್ಯೋತ್ಸವದ 60ನೇ ವರ್ಧಂತಿಯ ಸುಸಂದರ್ಭವೂ ಒದಗಿಬಂತು. ಈ 60 ಸಂವತ್ಸರಗಳಲ್ಲಿ ನಮ್ಮ ದೇಶ ಸಾಧಿಸಿದ ಪ್ರಗತಿಯ ಗುಣಗಾನ ನಡೆಯಿತು. ಪ್ರಪ್ರಥಮ ಮಹಿಳಾ ರಾಷ್ಟ್ರಪತಿಯ ಆಯ್ಕೆ ಸಹ ಪ್ರಗತಿಯಂಶಗಳಲ್ಲಿ ಸ್ಥಾನಪಡೆಯಿತು. ಪತ್ರಿಕೆಗಳು ವಿಶೇಷ ಸಂಚಿಕೆಗಳನ್ನೂ ವಿಶೇಷ ಪುಟಗಳನ್ನೂ ಪ್ರಕಟಿಸಿ ಷಷ್ಟ್ಯಬ್ದಿಪೂರ್ತಿಯ ಸಿಂಹಾವಲೋಕನ ಮಾಡಿದವು. ನನ್ನ ಕಣ್ಣಿಗೆ ಬಿದ್ದವುಗಳ ಪೈಕಿ ಔಟ್‍ಲುಕ್ ನಿಯತಕಾಲಿಕವು ಹೊರತಂದ ವಿಶೇಷ ಸಂಚಿಕೆ ಸಂಗ್ರಹಯೋಗ್ಯವಾಗಿತ್ತು.

* ಟೈಮ್ಸ್ ಆಫ್ ಇಂಡಿಯಾ ದಿನಪತ್ರಿಕೆಯು ಆಗಸ್ಟ್ 15ರ ಸಂಚಿಕೆ(ಕೋಲ್ಕತ್ತಾ ಆವೃತ್ತಿ)ಯ ಮುಖಪುಟದಲ್ಲಿ Still sexy at sixty ಎಂದು ದಪ್ಪಕ್ಷರಗಳ ತಲೆಬರಹಕೊಟ್ಟು ತನ್ನ ಮಾಮೂಲಿ ಟೈಮ್ಸ್ ಆಫ್ ಇಂಡಿಯಾತನವನ್ನು ಧಾರಾಳವಾಗಿ ಪ್ರದರ್ಶಿಸಿತು. ಭಾರತಾಂಬೆಯೆ ಜನಿಸಿ ನಿನ್ನೊಳು ಧನ್ಯನಾದೆನು ದೇವಿಯೇ... ಎಂದು ಪುಳಕಿಸುವ, ಭರತಭೂಮಿ ನನ್ನ ತಾಯಿ ನನ್ನ ಪೊರೆವ ತೊಟ್ಟಿಲು ಎಂದು ಹರುಷದಿಂದ ಎದೆಯುಬ್ಬಿಸುವ ಶ್ರೀಸಾಮಾನ್ಯ ದೇಶಪ್ರೇಮಿ ಪ್ರಜೆಯ ಮನಸ್ಸಿಗೆ, ಭಾರತಮಾತೆಯನ್ನು ಸೆಕ್ಸಿ ಎಂಬ ವಿಶೇಷಣದಿಂದ ಕರೆದರೆ ಅಸಹ್ಯವೆನಿಸೀತೆಂದು ಗೊತ್ತಿದ್ದರೂ ಆ ಪತ್ರಿಕೆಯದು ಈಗಲೂ ಅದೇ ಉಡಾಫೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more