• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ನೆನೆ’ಯದೆ ಇರಲಾರೆ ಸ್ವಾಮೀ ನಿನ್ನ...

By Staff
|

In rain to stay drier, do you walk or run?ನೆನೆ ಪದದಿಂದಲೇ ವ್ಯುತ್ಪತ್ತಿಯಾದ ನೆನೆಗುದಿ ಎಂಬೊಂದು ಪದ ಇದೆ. ಅನಿಶ್ಚಿತತೆ, ಪೇಚು, ತಳಮಳ ಎಂದು ಅರ್ಥ. ಬಹುಶಃ ನೆನೆಸಲು ಬಳಸುವ ನೀರು ಅತಿಬಿಸಿಯಾಗಿ ಕುದಿಯತೊಡಗಿದರೆ ಆ ವಸ್ತು ಅಥವಾ ಸಂಗತಿ ಆಗ ನೆನೆಗುದಿಯಲ್ಲಿ ಬಿದ್ದಂತೆಯೇ. ಕಾವೇರಿ ನೀರು ಹಂಚಿಕೆಯ ಸಮಸ್ಯೆ ನೆನೆಗುದಿಗೆ ಅತಿ ಸಮರ್ಪಕ ಉದಾಹರಣೆ. ಯಾಕೆಂದರೆ ಅದರಲ್ಲಿ ನೆನೆಸಲು ನೀರೂ ಇದೆ, ಆ ನೀರು ಸರಿಯಾಗಿ ಬಟವಾಡೆಯಾಗಿಲ್ಲ ಎಂಬುದನ್ನು ನೆನೆದು ನೆನೆದು ಕುದಿಯುವ ನೆತ್ತರೂ ಇದೆ, ನ್ಯಾಯಬದ್ಧ ತೀರ್ಪು ಮಾತ್ರ ನೋಟಕ್ಕೆ ನಿಲುಕುತ್ತಿಲ್ಲ ಅಷ್ಟೇ!

ನೀರಿನ ವ್ಯಾಜ್ಯದ ವಿಷಯ ಬಿಟ್ಟು ಮಳೆಯ ವಿಚಾರಕ್ಕೆ ಬಂದರೆ, ನೆನೆಯುವುದೆಂದರೆ ಒದ್ದೆಯಾಗುವುದೆಂದೂ ನೆನಪಿಸಿಕೊಳ್ಳುವುದೆಂದೂ ಅರ್ಥಗಳು ತುಂಬಾ ಚೆನ್ನಾಗಿ ಹೊಂದಿಕೊಳ್ಳುತ್ತವೆ. ಅದು, ಆಲಿಕಲ್ಲು ಹೆಕ್ಕಲು ಅಂಗಳಕ್ಕೋಡಿ ಮಳೆಯಲ್ಲಿ ನೆನೆದದ್ದನ್ನು ನೆನೆಯುವುದಿರಲಿ, ಮರ್ಫಿಯ ನಿಯಮದಿಂದಾಗಿ ಕೊಡೆ ಮರೆತ ದಿನವೇ ಮಳೆ ಸುರಿದು ನೆನೆಯಬೇಕಾಗಿ ಬಂದದ್ದನ್ನು ನೆನೆಯುವುದಿರಲಿ, "ಮಳೆಯಲ್ಲಿ ನೆನೆಯಬೇಡ ಅಂತ ಎಷ್ಜು ಸರ್ತಿ ಹೇಳಿಲ್ಲಾ ನಿನಗೆ? ಈಗ ನೋಡು ನೆಗಡಿಯಾಗ್ತದೆ" ಎಂದು ಅಮ್ಮ ಗದರಿಸಿದ್ದನ್ನು ನೆನೆಯುವ ಸಂದರ್ಭವಿರಲಿ - ಮಳೆ ನೆನೆಸುವುದೇ ಹಾಗೆ!

ಅಲ್ಲಿಗೆ, ನಾವು ಇವತ್ತಿನ ಮುಖ್ಯ ವಿಷಯಕ್ಕೆ ಬಂದ ಹಾಗಾಯ್ತು. ಅದೇನೆಂದರೆ, ಮಳೆಯಲ್ಲಿ ನೆನೆಯಬೇಕಾದ ಸಂದರ್ಭ ಅನಿವಾರ್ಯವಾಗಿ ಬಂದಾಗ, ಇದ್ದುದರಲ್ಲಿ ಕಡಿಮೆ ಒದ್ದೆಯಾಗಬೇಕಾದರೆ ನಡೆದುಕೊಂಡು ಹೋಗಬೇಕಾ ಅಥವಾ ಓಡಬೇಕಾ ಎಂಬ ಜಿಜ್ಞಾಸೆ ಅಥವಾ ತರ್ಕ. ಅರ್ಥವಾಗಲಿಲ್ಲವೇ? ವಿಶಾಲವಾದ ಒಂದು ಬಯಲಲ್ಲಿ ಇಬ್ಬರು ವ್ಯಕ್ತಿಗಳು - ಅವರ ಹೆಸರುಗಳು ಲಗುಬಗೆ ಲಕ್ಕಪ್ಪ ಮತ್ತು ಜಡತ್ವದ ಜಗ್ಗಣ್ಣ ಅಂತಿಟ್ಕೊಳ್ಳಿ - ಏನೋ ಕೆಲಸ ಮಾಡುತ್ತಿರಬೇಕಾದರೆ ಹಠಾತ್ತನೆ ಮಳೆ ಬೀಳತೊಡಗುತ್ತದೆ. ಕೊಡೆ ರೈನ್‍ಕೋಟು ಏನೂ ಇಲ್ಲದ ಅವರು ಹತ್ತಿರದ ಮರದ ಕೆಳಗೆ ಹೋಗಿ ನಿಂತುಕೊಳ್ಳಬೇಕೆಂದಿದ್ದರೂ ಅದು ಸುಮಾರು ೫೦೦ ಮೀಟರ್‌ಗಳಷ್ಟು ದೂರವಿದೆ. ಲಕ್ಕಪ್ಪ ಮಳೆಯಲ್ಲಿ ಓಡುತ್ತಾನೆ, ಮೂರೇ ನಿಮಿಷದಲ್ಲಿ ಮರದ ಆಶ್ರಯ ಪಡೆಯುತ್ತಾನೆ. ಜಗ್ಗಣ್ಣ ನಿಧಾನವಾಗಿ ನಡೆದುಕೊಂಡು ಬರಲು ಆರು ನಿಮಿಷ ತಗಲುತ್ತದೆ. ಜಿಜ್ಞಾಸೆಯೇನೆಂದರೆ ಲಕ್ಕಪ್ಪನಿಗಿಂತ ಜಗ್ಗಣ್ಣ ಹೆಚ್ಚು ಒದ್ದೆಯಾಗಿರುತ್ತಾನೆಯೇ, ಹೌದಾದರೆ ಎಷ್ಟು ಹೆಚ್ಚು? ಎರಡರಷ್ಟು?

ನಿಮಗೆ ಆಶ್ಚರ್ಯವಾಗಬಹುದು, ಮಳೆಯಲ್ಲಿ ನಡೆಯುವುದಕ್ಕಿಂತ ಓಡಿದರೆ ಕಡಿಮೆ ನೆನೆಯುತ್ತೇವೆ ಎನ್ನೋದು ಸಾಮಾನ್ಯಜ್ಞಾನವಾದರೂ, ಆ ಪ್ರಮಾಣ - ಅಂದರೆ ಶೇಕಡಾವಾರು ಎಷ್ಟು ಕಡಿಮೆ ಒದ್ದೆಯಾಗುತ್ತೇವೆ ಎಂಬುದು - ನಮ್ಮ ನಿರೀಕ್ಷೆಗಿಂತ ಕಡಿಮೆಯಿರುತ್ತದೆ. ಓಡಿದರೆ ಕಡಿಮೆಹೊತ್ತು ಮಳೆಯಲ್ಲಿರುತ್ತೇವೆ ಹೌದಾದರೂ ಓಟದ ರಭಸದಿಂದಾಗಿ ಹೆಚ್ಚು ಮಳೆಹನಿಗಳು ನಮ್ಮ ದೇಹವನ್ನು ನೆನೆಸಿರುತ್ತವೆ! ಹಾಗಾಗಿ ಓಡಲಿಕ್ಕೆ ವ್ಯಯಿಸಿದ ಶ್ರಮ, ಒದ್ದೆಯಾಗುವುದರಲ್ಲಿನ ಉಳಿತಾಯಕ್ಕೆ ಹೋಲಿಸಿದರೆ really not worth it!

ಇದು, ನಾನೇ ಸೃಷ್ಟಿಸಿ ಪ್ರತಿಪಾದಿಸುತ್ತಿರುವ ತರ್ಕವೆಂದುಕೊಳ್ಳಬೇಡಿ ಮತ್ತೆ! ಈ ಕುರಿತು ಪರೀಕ್ಷೆ ಪ್ರಯೋಗಗಳನ್ನು ನಡೆಸಿ ಸೈನ್ಸ್ ಫೊರಮ್‌ಗಳಲ್ಲಿ ಪೇಪರ್ ಪ್ರೆಸೆಂಟ್ ಮಾಡಿದವರಿದ್ದಾರೆ, ಪುಸ್ತಕ ಬರೆದವರಿದ್ದಾರೆ. 1977ರಲ್ಲಿ ಜರ್ಲ್ ವಾಕರ್ ಎಂಬುವವ ಬರೆದ The Flying Circus Of Physics ಪುಸ್ತಕದಲ್ಲಿ, ಓಡುವುದೇ ಒಳ್ಳೆಯ ಆಯ್ಕೆ ಎಂದಿದ್ದರೆ, ರೀಡಿಂಗ್ ಯುನಿವರ್ಸಿಟಿಯ ಹವಾಮಾನಶಾಸ್ತ್ರಜ್ಞರು ಪ್ರಸ್ತುತಪಡಿಸಿದ Raindrops keep falling on my head ಪ್ರಬಂಧದಲ್ಲಿ ಅದರ ಗಣಿತವಿಶ್ಲೇಷಣೆಯೂ ಇದೆ. ಪ್ರಯೋಗಾಲಯದಲ್ಲಿ ಎರಡು ವುಡನ್‌ಬ್ಲಾಕ್‌ಗಳ ಮೇಲೆ ಕೃತಕ ಮಳೆ ಸುರಿಸಿ ಅವನ್ನು ಬೇರೆಬೇರೆ ವೇಗದಲ್ಲಿ ಚಲಿಸಿದಾಗ ಅವುಗಳ ಮೇಲೆ ಬಿದ್ದ ಮಳೆಹನಿಗಳ ಲೆಕ್ಕವಿದೆ. ಅದೇ ಅಚ್ಚರಿಯಾಗೋದು ಕೆಲವೊಮ್ಮೆ - ಮಳೆಗರೆದ ಹನಿಹನಿಗೆ ಭೂತಾಯಿ ಲೆಕ್ಕ ಬರೆಯದಿದ್ದರೂ ಈ ಸಂಶೋಧಕ ವಿಜ್ಞಾನಿಗಳಿಗೆ ಆ ಲೆಕ್ಕದಲ್ಲೂ ಆಸಕ್ತಿ!

ನಾರ್ತ್ ಕೆರೊಲಿನಾದ ಸಂಶೋಧಕರಾದ ಥಾಮಸ್ ಪೀಟರ್‌ಸನ್ ಮತ್ತು ಟ್ರೆವರ್ ವಾಲೆಸ್ ಬರೆದಿರುವ Running In The Rain ಪ್ರಬಂಧದಲ್ಲಿ ಈ ಬಗ್ಗೆ ಮತ್ತಷ್ಟು ಅಂಕಿಅಂಶಗಳಿವೆ. ಜೋರಾದ ಗಾಳಿಯಿಲ್ಲದೆ ಮಳೆ ಮಾತ್ರ ಬೀಳುತ್ತಿದ್ದರೆ, ನಡೆಯುವುದಕ್ಕಿಂತ ಓಡುವುದರಿಂದ ನೆನೆಯುವ ಪ್ರಮಾಣದಲ್ಲಿ 10% ಮಾತ್ರ ಉಳಿತಾಯ. ಆದರೆ ಗಾಳಿಯೂ ಬೀಸುತ್ತಿದ್ದರೆ ಆಗ ನಡೆಯುವುದರಲ್ಲೂ ಓಡುವುದರಲ್ಲೂ ನೆನೆಯುವ ಅನುಪಾತ 40%ದಷ್ಟು ವ್ಯತ್ಯಾಸವಾಗಬಹುದು. ಗಾಳಿ ಬೀಸುತ್ತಿರುವ ದಿಕ್ಕಿನಲ್ಲೇ ಗಾಳಿಯಷ್ಟೇ ವೇಗದಲ್ಲಿ ಓಡಿದರೆ ಒಂಚೂರೂ ಒದ್ದೆಯಾಗದೇ ಬರಬಹುದು! ಆದರೆ ಅದೇನಿದ್ದರೂ ಥಿಯರಿಯಲ್ಲಷ್ಟೇ; ಪ್ರಾಕ್ಟಿಕಲ್ ಪ್ರಪಂಚದಲ್ಲಿ ಮಳೆಬಂದಾಗ ಓಡಿದರೂ ನಡೆದರೂ ನೆನೆಯದೆ ಇರಲಾರೆ ಸ್ವಾಮೀ..."!

ಅಂತೂ ಎಲ್ಲ ಪ್ರಯೋಗ ಪರೀಕ್ಷೆಗಳ ಒಟ್ಟು ತಾತ್ಪರ್ಯ ಒಂದೇ: ಮಳೆ ಬಂತು ಮಾರಾಯ... ಕೊಡೆ ಹಿಡಿಯೊ ಸುಬ್ರಾಯ... ಎಂದು ಏದುಸಿರು ಬಿಡುತ್ತಾ ಓಡುವುದರಲ್ಲಿ ಹೇಳಿಕೊಳ್ಳುವಂಥ ಪ್ರಯೋಜನವೇನೂ ಇಲ್ಲ. ಸ್ವಾತಿಮುತ್ತಿನ ಮಳೆಹನಿಗಳು ಮೆಲ್ಲಮೆಲ್ಲನೆ ಧರೆಗಿಳಿಯುತ್ತಿದ್ದರೆ ಅವನ್ನೆಲ್ಲ ಆನಂದಿಸಿ ಅನುಭವಿಸುತ್ತ ಮೆಲ್ಲ ಮೆಲ್ಲನೆ ನಡೆದುಕೊಂಡು ಹೋಗುವುದೇ ಹೆಚ್ಚಿನ ಖುಶಿ. ಮತ್ತೆ, ಮಳೆಯಲ್ಲಿ ನೆನೆದು ನೆಗಡಿಯಾದರೆ ಹೇಗೂ ಇದ್ದದ್ದೇ... ಆ...ಕ್ಷಿ...!

ಸರಿ, ಇಷ್ಟೆಲ್ಲ ನೆನೆದ ಮೇಲೆ ಈಗ ಈವಾರದ ಪ್ರಶ್ನೆ. ನೆನೆ ಎಂದೊಡನೆ ನೀವು ನೆನೆಯಬಹುದಾದ, ಹಿಂದಿಚಿತ್ರರಂಗವನ್ನಾಳಿದ ಆ ಮೋಹಕ ಮಾದಕ ಮಧುರರೂಪದ ನಾಯಕಿ ಯಾರು? ಆದರೆ ನೆನಪಿಡಿ - ಮಳೆಯಲ್ಲಿ ನೆನೆದ ನರ್ಗಿಸ್ ಎಂದಾಗಲೀ, ಜಲಪಾತದಡಿ ನೆನೆದ ಮಂದಾಕಿನಿ ಎಂದಾಗಲೀ, ಅಥವಾ ನೆನೆದೂ ನೆನೆದೂ ನೆನಪುಗಳನ್ನು ನಿರಂತರ ನೆನೆಸಿಟ್ಟ ಬೇರಾವ ನಟಿಯ ಹೆಸರನ್ನಾಗಲೀ ಬರೆದರೆ ಈ ಪ್ರಶ್ನೆಗದು ಉತ್ತರವಾಗುವುದಿಲ್ಲ; ಸರಿಯುತ್ತರದ ಸುಳಿವು ಸಿಗಲು ಬೇಕಿದ್ದರೆ ಡಾ|ಶ್ರೀರಾಮ್ ಅವರನ್ನು ನೆನೆಯಿರಿ!

ಉತ್ತರ/ಅನಿಸಿಕೆ/ಅದೂ-ಇದೂ ಬರೆದುತಿಳಿಸಲು ವಿಳಾಸ-srivathsajoshi@yahoo.com

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X