• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ನೆನೆ’ಯದೆ ಇರಲಾರೆ ಸ್ವಾಮೀ ನಿನ್ನ...

By Staff
|

ನೆನೆಯುವುದು ಎಲ್ಲರಿಗೂ ಇಷ್ಟ! ಮನಸ್ಸಿಗೆ ಹತ್ತಿರವಾದವರನ್ನು ನೆನೆಯುವುದಾದರೂ ಇರಬಹುದು.. ಮಳೆಯಲ್ಲಿ ನೆನೆಯುವುದಾದರೂ ಆಗಬಹುದು.. ಒಟ್ಟಿನಲ್ಲಿ ನೆನೆಯುವ ಪ್ರಕ್ರಿಯೆಯಲ್ಲಿ ಏನೋ ಒಂದು ಸುಖವಿದೆ. ಸುಖದ ಜೊತೆಗೆ ಸ್ವಾರಸ್ಯವೂ ಇದೆ. ಈ ಬಗ್ಗೆ ವಿಚಿತ್ರಾನ್ನ 247ರಲ್ಲಿ ಏನೇನೋ ಇದೆ!

  • ಶ್ರೀವತ್ಸ ಜೋಶಿ

In rain to stay drier, do you walk or run?ನಿಘಂಟು ತೆರೆದು ನೋಡಿದರೆ ನೆನೆ ಎಂಬ ಕ್ರಿಯಾಧಾತುರೂಪದ ಶಬ್ದಕ್ಕೆ ನಿಮಗೆ ನಾನಾ ಅರ್ಥಗಳೂ, ಸಮಾನಾರ್ಥಕ ಪದಗಳೂ ಸಿಗಬಹುದು. ಆದರೆ ಸ್ಥೂಲವಾಗಿ ಮತ್ತು ಮುಖ್ಯವಾಗಿ ಎರಡು ಅರ್ಥಗಳು - ಒಂದು, ನೆನಪಿಸಿಕೊಳ್ಳು; ಇನ್ನೊಂದು ಒದ್ದೆಯಾಗು. ಇವೆರಡೂ ಮೇಲ್ನೋಟಕ್ಕೆ ಒಂದಕ್ಕೊಂದು ಸಂಬಂಧವಿಲ್ಲದ ಅರ್ಥಗಳು. ಆದರೆ ಪರಸ್ಪರ ಪೂರಕವಾಗಿಯೂ ಪರ್ಯಾಯವಾಗಿಯೂ ಉಪಯೋಗಿಸಿದರೆ/ಅರ್ಥೈಸಿಕೊಂಡರೆ ಭಲೇ ಸ್ವಾರಸ್ಯವನ್ನು ಕೊಡುವಂಥವು!

ಹೇಗಂತೀರಾ? ಸರಳವಾದ ಮತ್ತು ಸವಿಯಾದ ಉದಾಹರಣೆಯೆಂದರೆ - ಅಮ್ಮ ಮಾಡಿಕೊಡುತ್ತಿದ್ದ ಗರಿಗರಿದೋಸೆಯ ರುಚಿಯನ್ನೂ ಅದರ ಹಿಂದಿನ ಪ್ರೀತಿಯನ್ನೂ ಮನದಲ್ಲೇ ನೆನೆದೆ; ಹಾಗೆಯೇ ನಾಳೆಬೆಳಿಗ್ಗೆಗೆ ದೋಸೆ ಮಾಡಬೇಕೆಂದು ಅರ್ಧ ಪಾವು ಉದ್ದಿನಬೇಳೆ ಒಂದೂವರೆ ಪಾವು ಅಕ್ಕಿ ನೆನೆಸಿದೆ..." ಅಥವಾ, "ಮದುವೆಯೂಟದಲ್ಲಿದ್ದ ರುಚಿರುಚಿ ಕೋಸಂಬರಿಯನ್ನು ನೆನೆದೆ, ಆಸೆಯಾಗಿ ಕೂಡಲೇ ಒಂದಿಷ್ಟು ಹೆಸರುಬೇಳೆ ನೆನೆಸಿದೆ..." - ಹೀಗೆ ಇಷ್ಟದ ತಿಂಡಿತಿನಿಸು ಯಾವುದೇ ಇರಲಿ, ಅದನ್ನು ನೆನೆಯುವುದು, ಅದರಿಂದಾಗಿ ಬಾಯಲ್ಲಿ ನೀರೂರಿ ನಾಲಿಗೆ ನೆನೆಯುವುದು, ಅದರ ತಯಾರಿಗಾಗಿ ಅಕ್ಕಿ-ಬೇಳೆ ನೆನೆಯುವುದು - ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ ಮತ್ತು ಪರಸ್ಪರ ಪೂರಕ ಪ್ರಕ್ರಿಯೆಗಳಲ್ಲವೇ?

ಬರೀ ತಿಂಡಿ ವಿಷಯವಲ್ಲ, ಸ್ವಲ್ಪ ದೈವಭಕ್ತಿ-ಆಧ್ಯಾತ್ಮಗಳ ಬಗ್ಗೆಯೂ ಮಾತಾಡೋಣ. ಅದರಲ್ಲೇ ಒಂದು ಮಜಾ ನೋಡಿ! ರಾಮನಾಮ ಪಾಯಸ ಮಾಡಲು ಯಾವ ಬೇಳೆ ನೆನೆಯುವುದೂ ಬೇಡ, ಕೇವಲ ವಿಠಲನನ್ನು ನೆನೆದರೆ ಸಾಕಂತೆ - ಪುರಂದರದಾಸರೇ ಹಾಗೆ ಹೇಳಿದ್ದಾರೆ. ಇರಲಿ, ದಾಸರಪದಗಳಲ್ಲಿ/ ಭಕ್ತಿಗೀತೆಗಳಲ್ಲಿ ನೆನೆ ಕ್ರಿಯಾಪದವು ಸ್ಮರಿಸು/ಧ್ಯಾನಿಸು/ಬಯಸು/ಚಿಂತಿಸು ಎಂಬರ್ಥದಲ್ಲೇ ಬರೋದು. ಈ ಲೇಖನಕ್ಕೆ ನಾನು ಶೀರ್ಷಿಕೆಯಾಗಿ ಬಳಸಿದ "ನೆನೆಯದೆ ಇರಲಾರೆ ಸ್ವಾಮೀ ನಿನ್ನ..." ಎಂಬ ಹಾಡನ್ನೇ ತೆಗೆದುಕೊಳ್ಳಿ. ಅದನ್ನು ಗುರುರಾಘವೇಂದ್ರಸ್ವಾಮಿಯ ಭಕ್ತನಾಗಿ ಡಾ|ರಾಜ್ ಹಾಡಿದ್ದು. ಹಾಗೆಯೇ "ಅನುದಿನ ನಿನ್ನ ನೆನೆದು ಮನವು ನಿನ್ನಲಿ ನಿಲ್ಲಲಿ..." ಎಂಬ ಹಾಡು ಮತ್ತು "ಹರಿಯನು ನೆನೆಯದ ನರಜನ್ಮವೇಕೆ..." ಇತ್ಯಾದಿ ಎಷ್ಟೋ ಹಾಡುಗಳಿವೆ.

ಆದರೆ, ಈ ಎಲ್ಲ ಹಾಡುಗಳನ್ನು ದೇವರಿಗೆ ಅಭಿಷೇಕಮಾಡುವಾಗ ಹೇಳಿದರೆ ದೇವರನ್ನು ನೀರಲ್ಲಿ ನೆನೆಸುತ್ತೇನೆ ಎಂದೂ, ಪೂಜೆಗೆ ಮೊದಲು ಸ್ನಾನಮಾಡುವಾಗ (ಪುಣ್ಯನದಿಯಲ್ಲಿ ಮುಳುಗೇಳುವಾಗ) ಹೇಳಿದರೆ ತಾನೇ ನೆನೆಯುತ್ತೇನೆಂದೂ ಅರ್ಥ ಬರುತ್ತದಾ ನೋಡಿ! "ಸನಕ ಸನಂದನ ಸನತ್ಸುಜಾತರೂ, ಘನಶುಕ ಶೌನಕ ವ್ಯಾಸ ವಾಲ್ಮೀಕರೂ ನೆನೆದು ನೆನೆದು ಕೊಂಡಾಡುವರು..." ಅಂತ ಒಂದು ಉದಯರಾಗದ ಹಾಡಿನಲ್ಲಿ ಬರುತ್ತದೆ. ನೆನೆದು ನೆನೆದು ಎಂಬ ದ್ವಿರುಕ್ತಿಯಿಂದ, ಆ ಋಷಿಮುನಿಗಳೆಲ್ಲ ಸರಯೂನದಿಯಲ್ಲಿ ಸ್ನಾನಿಸುತ್ತ ಧ್ಯಾನಿಸುತ್ತ ಇರುವ ಚಿತ್ರಣವೇ ಕಣ್ಮುಂದೆ ಬರುತ್ತದೆ, ವಿಶೇಷವಾಗಿ ವಾರಣಾಸಿಯ ಚಿತ್ರಗಳಲ್ಲಿ ಗಂಗಾನದಿಯಲ್ಲಿ ಮೀಯುವ ಸಾಧುಸಂತರನ್ನು ಕಂಡಾಗ.

ಮತ್ತೆ, ನವಂಬರ್ ಕನ್ನಡಿಗರಿರುತ್ತಾರಲ್ಲ? ಆ 30 ದಿನಗಳಲ್ಲಿ ಕನ್ನಡಾಭಿಮಾನ ಉಕ್ಕಿ ಹರಿಯುವವರು. ಕನ್ನಡನಾಡು ನುಡಿಯ ಬಗೆಗಿನ ಪ್ರೀತಿರಸಧಾರೆಯಿಂದ ಕನ್ನಡಮ್ಮನನ್ನು ನೆನೆಯುವವರು (= ಒದ್ದೆಯಾಗಿಸುವವರು). ಮಿಕ್ಕ 11 ತಿಂಗಳುಗಳಲ್ಲಿ ಬೇಕಿದ್ದರೆ ಕನ್ನಡಮ್ಮ ತನ್ನದೇ ಕಣ್ಣೀರಿಂದಲೇ ನೆನೆಯಬೇಕೋ ಏನೊ. ಮುತ್ತಯ್ಯ ಭಾಗವತರು "ಭುವನೇಶ್ವರಿಯ ನೆನೆ ಮಾನಸವೇ..." ಎಂದು ಹಾಡಿದ್ದು ನವೆಂಬರ್ ಕನ್ನಡಿಗರನ್ನು ಕುರಿತಾಗಿಯೇ ಇರಬಹುದೇ?

ಕೆಲವರು ನಾಯಿ ಸಾಕುತ್ತಾರೆ, ಅದರ ಅಪರಿಮಿತ ಸ್ವಾಮಿನಿಷ್ಠೆ ಪ್ರೀತಿಗಳಿಂದ ಸಂತಸಪಡುತ್ತಾರೆ. ಸ್ವತಃ ಮಕ್ಕಳ ಮೇಲೆ ತೋರಿಸುವುದಕ್ಕಿಂತಲೂ ಹೆಚ್ಚು ಮಮತೆಯ ಮಹಾಪೂರವನ್ನು ನಾಯಿಯ ಮೇಲೆ ಹರಿಸುತ್ತಾರೆ. ಮುದ್ದಿನ ಟಾಮಿ ಬಂದು ತಮ್ಮ ಕಾಲು ನೆಕ್ಕಿದರೂ ಅವರಿಗೆ ಖುಶಿಯೇ ಹೊರತು ಹೇಸಿಗೆಯಾಗುವುದಿಲ್ಲ. ಅಂಥವರು ಆಚಾರವಿಲ್ಲದ ನಾಲಿಗೆ..." ಎಂಬ ದಾಸರಪದದ "ಚರಣಕಮಲ ನೆನೆ ನಾಲಿಗೆ..." ಸಾಲನ್ನು ನಾಯಿಯ ನಾಲಿಗೆಯ ಜೊಲ್ಲಿನಿಂದ ತಮ್ಮ ಕಾಲು ಒದ್ದೆಯಾಗುವುದಕ್ಕೆ ಅನ್ವಯಿಸುತ್ತಾರಿರಬಹುದೇ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more