• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಚನವಾಗುವಷ್ಟೇ ವಿಷವ ತುಂಬಿ...

By Staff
|

ವಿಷ(ಯ) ಅದಲ್ಲ. ನಿಮ್ಮ ತಲೆಯಾಳಗೊಂದು ಜಾಣ್ಮೆಲೆಕ್ಕದ ಹುಳ (ವಿಷಜೀವಿಯಲ್ಲ, ವರಿಪಡಬೇಡಿ) ಬಿಡಬೇಕೆಂದು ನನ್ನ ಅಸಲಿ ಯೋಜನೆ. ಅದನ್ನಿಲ್ಲಿ ಈಗ ಬರೆಯುತ್ತಿದ್ದೇನೆ.

ಒಂದಾನೊಂದು ರಾಜ್ಯದ ಪ್ರಜೆಗಳಲ್ಲಿ ಒಂದು ವಿಶಿಷ್ಟವಾದ ನಂಬಿಕೆ ರೂಢಿಯಲ್ಲಿತ್ತು. ಅದೇನೆಂದರೆ ಯಾರಾದರೂ ವಿಷ ಸೇವಿಸಿದರೆ (ಅಂದರೆ ಅಕಾಸ್ಮಾತ್ತಾಗಿಯೋ, ಆತ್ಮಹತ್ಯೆಗಾಗಿಯೋ, ಅಥವಾ ಬೇರಾವುದೇ ಸಂದರ್ಭದಿಂದಾಗಿಯೋ) ಅವನನ್ನು ಬದುಕಿಸುವ ಏಕೈಕ ಮಾರ್ಗವೆಂದರೆ ಇನ್ನೂ ತೀಕ್ಷ್ಣವಾದ ವಿಷವನ್ನು ಅವನಿಗೆ ಕುಡಿಸುವುದು; ಆಮೂಲಕ ವಿಷಕ್ಕೇ ವಿಷವುಣಿಸಿ ಅದನ್ನು ಹತ್ತಿಕ್ಕಿ, ವ್ಯಕ್ತಿಯನ್ನು ಬದುಕಿಸುವುದು. ಒಂಥರಾ ‘‘ಮುಳ್ಳನ್ನು ಮುಳ್ಳಿಂದಲೇ ತೆಗೆದಂತೆ...’’ ಅಥವಾ ‘‘ಶೀತಂ ಶೀತೇನ ವಾರ್ಯತೆ...’’ ಎಂದಂತೆ. ಅದು ಬರೀ ನಂಬಿಕೆಯಷ್ಟೇ ಅಲ್ಲ ಎಷ್ಟೋ ಜನರ ಜೀವ ಉಳಿಸುವುದರಲ್ಲಿ ಅದ್ಭುತವಾಗಿ ಯಶಸ್ವಿಯಾಗಿತ್ತು ಕೂಡ!

ಹೀಗಿರಲು, ಆ ರಾಜ್ಯದ ರಾಜನಿಗೆ ಒಂದು ಯೋಚನೆ ಬಂತು - ಹೇಗಾದರೂ ಮಾಡಿ ತಾನು ಅತ್ಯಂತ ಪ್ರಬಲವಾದ ವಿಷವನ್ನು ತನ್ನ ಸುಪರ್ದಿಯಲ್ಲಿಟ್ಟುಕೊಳ್ಳಬೇಕು; ಯಾರೇ ತನಗೆ ವಿಷ ಕುಡಿಸಿದರೂ ತನ್ನ ಬಳಿಯಿರುವ ಪವರ್‌ಫುಲ್‌ ವಿಷದಿಂದ ಅದನ್ನು ಶಮನಗೊಳಿಸುವಂತಿರಬೇಕು. ಯೋಚನೆಯೇನೋ (ಸ್ವಾರ್ಥದ್ದೇ ಆದರೂ) ಒಳ್ಳೆಯದೇ. ಯಾಕೆಂದರೆ ರಾಜನೇ ಸತ್ತರೆ ಪ್ರಜೆಗಳ ಗತಿ!? ಆದರೆ ಅಂಥ ಶಕ್ತಿಯುತ ವಿಷವನ್ನು ಸಂಗ್ರಹಿಸುವುದೆಂತು? ಅದು ಶಕ್ತಿಯುತವೇ ಹೌದು ಎಂದು ಸಾಬೀತಾಗುವುದೆಂತು?

ರಾಜ ತನ್ನ ಆಸ್ಥಾನವೈದ್ಯನನ್ನೂ ಕೋಶಾಧಿಕಾರಿಯನ್ನೂ ಕರೆಸಿ, ಒಂದು ವಾರದೊಳಗೆ ಅವರಿಬ್ಬರೂ ಪ್ರತ್ಯೇಕವಾಗಿ ವಿಷ ತಯಾರಿಸಿಕೊಂಡು ಬರಬೇಕೆಂದು ಆಜ್ಞೆಯಿತ್ತ; ವಾರದ ನಂತರ ತಾನು ಏನು ಮಾಡಲಿದ್ದೇನೆಂಬುದನ್ನೂ ವಿವರಿಸಿದ - ಅವರಿಬ್ಬರೇ ಆ ವಿಷಗಳ ಪರೀಕ್ಷಕರೂ ಆಗಬೇಕು. ಇನ್ನೊಬ್ಬನ ವಿಷವನ್ನು ಮೊದಲು ಕುಡಿದು ಆಮೇಲೆ ತನ್ನದನ್ನು ಕುಡಿದು ತೋರಿಸಬೇಕು. ಯಾರು ಬದುಕಿಕೊಳ್ಳುತ್ತಾರೋ ಅವನ ವಿಷ ಪ್ರಬಲವಾದುದು ಎಂದು ಸಿದ್ಧವಾದಂತಾಗುತ್ತದೆ. ಆಮೇಲದು ರಾಜನ ಸ್ವತ್ತಾಗುತ್ತದೆ.

ಸರಿ, ವೈದ್ಯ ತನ್ನ ಮನೆಗೆ ತೆರಳಿ ವಿಷವಿನ್ಯಾಸಕ್ಕೆ ಶುರು ಹಚ್ಚಿದ. ಕೋಶಾಧಿಕಾರಿಯೋ ಕಂಗಾಲಾಗಿ ಹೋದ. ‘‘ದುಡ್ಡು ಮಾಡಿದ್ದೇನೆ, ದುಡ್ಡು ತಿಂದಿದ್ದೇನೆ... ಆದರೆ ಈಗ ವಿಷ ತಯಾರಿಸಿ ಅದನ್ನೇ ಕುಡಿಯಬೇಕೆಂದರೆ!? ವೈದ್ಯನಿಗಾದರೆ ಏನು, ಅವನು ಆ ಕ್ಷೇತ್ರದಲ್ಲಿ ಪಳಗಿದವನು. ನನಗೆಲ್ಲಿಯ ವಿಷಜ್ಞಾನ?’’ ಎಂದು ಹತಾಶನಾದರೂ, ಏನಾದರೂ ಮಾಡಿ ವೈದ್ಯನೇ ಸಾಯುವಂತೆ ತಾನು ಬದುಕುಳಿಯುವಂತೆ ಉಪಾಯ ಹುಡುಕಿದ.

ಇತ್ತ ವೈದ್ಯನು ಆರು ದಿನಗಳ ಸತತ ಪ್ರಯತ್ನದ ನಂತರ ಒಂದು ವಿಶೇಷ ವಿಷವನ್ನು ತಯಾರಿಸಿದ. ತನ್ನದೇ ಪ್ರಬಲ ವಿಷವಾಗಿರುತ್ತದೆಂದು ಬೀಗಿದ. ಆದರೆ ಏಳನೆ ದಿನವಾಗುವಾಗ ಅವನಿಗೂ ಸ್ವಲ್ಪ ನಡುಕ ಹುಟ್ಟಿತು. ‘‘ಈ ತರಲೆ ಕೋಶಾಧಿಕಾರಿ ವಿಷ ತಯಾರಿಸಲೂ ಗೊತ್ತಿಲ್ಲದವನಾದರೂ ವಿಷಕ್ಕಿಂತ ಕಟುವಾದ ಉಪಾಯವನ್ನಂತೂ ತಯಾರಿಸಿಯೇ ಇರುತ್ತಾನೆ... ಹಾಗಾಗಿ ನಾನು ಎಕ್ಸ್ಟ್ರಾ ಕೇರ್‌ಫುಲ್‌ ಆಗಿರಬೇಕು...’’ ಎಂದುಕೊಂಡ. ಕೋಶಾಧಿಕಾರಿಯ ಪ್ಲಾನ್‌ ಏನಿರಬಹುದು ಎಂದು ಊಹೆಯನ್ನೂ ಮಾಡಿ (ಆತ ಬರೀ ವೈದ್ಯನಲ್ಲ, ಮನಃಶಾಸ್ತ್ರಜ್ಞನೂ ಆಗಿದ್ದಿರಬೇಕು - ಸರಿಯಾಗಿಯೇ ಊಹಿಸಿದ!) ಅದನ್ನು ಸೋಲಿಸುವ ಸೂಪರ್‌ಪ್ಲಾನ್‌ ಒಂದನ್ನು ರಚಿಸಿಕೊಂಡ.

ಸತ್ವಪರೀಕ್ಷೆಯ ಸಮಯ ಬಂತು. ನಿಜಕ್ಕೂ ಅದು ವಿಷದ ‘ಸತ್ವ’ಪರೀಕ್ಷೆ! ಎರಡೂ ವಿಷಗಳಿಗೆ ಅಮೃತಘಳಿಗೆ! ಕೋಶಾಧಿಕಾರಿ ಮತ್ತು ವೈದ್ಯ ಇಬ್ಬರೂ ತಂತಮ್ಮ ‘ವಿಷ’ಗಳೊಂದಿಗೆ ಆಸ್ಥಾನಕ್ಕೆ ಬಂದರು. ರಾಜನ ಸಮ್ಮುಖದಲ್ಲೇ ‘‘ಮಹಾರಾಜ್‌ ಕೀ ಜೈ ಹೊ!’’ ಎಂದುಹೇಳಿ ರಾಜಾಜ್ಞೆಯಂತೆಯೇ - ಮೊದಲು ಇನ್ನೊಬ್ಬನ, ಆಮೇಲೆ ತನ್ನ - ವಿಷವನ್ನು ಸೇವಿಸಿದರು. ಸ್ವಲ್ಪವೇ ಹೊತ್ತಿನಲ್ಲಿ ಕೋಶಾಧಿಕಾರಿ ಕಣ್ಮುಚ್ಚಿ ಕೊನೆಯುಸಿರೆಳೆದ. ವೈದ್ಯ ವಿಜೇತನಾದ. ಆದರೆ, ರಾಜ ಏನು ಅಪೇಕ್ಷಿಸಿದ್ದನೋ (ಅತಿಪ್ರಬಲ ವಿಷವನ್ನು ತನ್ನದಾಗಿಸುವುದು) ಅದು ಸಾಧ್ಯವಾಗಲಿಲ್ಲ!

ಹಾಗಾದರೆ ಅಲ್ಲಿ ನಿಜಕ್ಕೂ ಏನು ನಡೆಯಿತು? ಉತ್ತರವನ್ನು ಹೇಳುವ ಸರದಿ ನಿಮ್ಮದು. ಒಂದು ಹಿಂಟ್‌ ಬೇಕಿದ್ದರೆ ಗಮನದಲ್ಲಿಟ್ಟುಕೊಳ್ಳಿ. ಇದು ‘ನೀರು ಕುಡಿದಷ್ಟು’ ಸುಲಭವಾಗಿದೆ! ನಿಮ್ಮ ಉತ್ತರವನ್ನು ಬರೆದುತಿಳಿಸಲು ವಿಳಾಸ - srivathsajoshi@yahoo.com

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more