ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ವಶಕ್ತ ಶ್ರೀಹರಿಗೂ ಸೊಳ್ಳೆಕಾಟ?

By *ಶ್ರೀವತ್ಸ ಜೋಶಿ
|
Google Oneindia Kannada News

Mosquito menace - Even God can't help
ರಾಮ ಇದ್ದನಾ ರಾಮಾಯಣ ಆದದ್ದು ಹೌದಾ ಎಂದೆಲ್ಲ ಹೇಗೆ ಪ್ರಶ್ನಿಸಬಾರದೋ ಹಾಗೆಯೇ ರಾಮಾಯಣಕಾಲದಲ್ಲಿ ಸೊಳ್ಳೆಗಳಿದ್ವಾ ರಾಮನಿಗೆ ಕಚ್ತಿದ್ವಾ ಎಂದೂ ಪ್ರಶ್ನಿಸಬಾರದು, ಸುಮ್ನೆ ತಲೆಹರಟೆ ಬೇಡ ಎಂದು ನೀವಂದುಕೊಳ್ಳುವ ಮೊದಲೇ...Ok, ಬೆಂಗಳೂರಿನಲ್ಲಿ ಸೊಳ್ಳೆಗಳ ಕಾಟ ಮಿತಿ ಮೀರಿರುವುದರಿಂದ ಶ್ರೀವತ್ಸಜೋಶಿ ಅವರ ವಿಚಿತ್ರಾನ್ನ ಪುರಾಣ ಚೂಡಾಮಣಿಯಿಂದ ಈ ಲೇಖನವನ್ನು ಪುನಃ ಕರೆದು ತರಲಾಗಿದೆ - ಸಂಪಾದಕ

ಅನ್ನಮಾಚಾರ್ಯ (ಅನ್ನಮಯ್ಯ) ವಿರಚಿತ ತೆಲುಗು ಸಂಕೀರ್ತನೆಯೊಂದು ಹೀಗೆ ಆರಂಭವಾಗುತ್ತದೆ: ವಿನ್ನಪಾಲು ವಿನವಲೇ ವಿಂತವಿಂತಲು... ಪನ್ನಗಪು ದೋಮತೆರ ಪೈಕೆತ್ತವೇಲಯ್ಯ..." - ಭಗವಂತನಿಗೆ ಸುಪ್ರಭಾತ ಹೇಳಿ ಎಬ್ಬಿಸುವ ಸನ್ನಿವೇಶದ ಸಾಲುಗಳಿವು. ಇಂಥ ಭಾವಾರ್ಥವನ್ನು ಬಿಂಬಿಸುವ ಉದಯರಾಗದ ಭಕ್ತಿಗೀತೆಗಳು ಎಲ್ಲ ಭಾಷೆಗಳಲ್ಲೂ ಬೇಕಷ್ಟಿವೆ. ರಂಗನಾಯಕ ರಾಜೀವಲೋಚನ ರಮಣನೆ ಬೆಳಗಾಯಿತು... ಎಂದು ನಮ್ಮ ಪುರಂದರದಾಸರು ಹಾಡಿದ್ದಾರೆ, ಬೆಳಗು ಜಾವದಿ ಬಾರೊ ಹರಿಯೆ... ಎಂದು ವಾದಿರಾಜರು ಹರಿಯನ್ನು ಕರೆದಿದ್ದಾರೆ. ಕನಕದಾಸರಂತೂ ಏಳು ನಾರಾಯಣನೆ ಏಳು ಲಕ್ಷ್ಮೀರಮಣ ಏಳು ಕಮಲಾಕ್ಷ ಕಮಲನಾಭ... ಎನ್ನುತ್ತ ಗಂಟೆ ಏಳಾಯ್ತು ಇನ್ನಾದರೂ ಏಳು ಎಂದು ಇನ್‌ಡೈರೆಕ್ಟಾಗಿ ಎಚ್ಚರಿಸಿದ್ದಾರೆ. ಇರಲಿ ತಮಾಷೆಮಾತು ಬೇಡ, ಒಟ್ಟಿನಲ್ಲಿ ಉತ್ತಿಷ್ಟೋತ್ತಿಷ್ಟ ಎಂಬ ಸಾಲು ಇಲ್ಲದೆ ಬಹುಶಃ ಯಾವ ದೇವರ ಸುಪ್ರಭಾತವೂ ಸುಪ್ರಭಾತವೆನಿಸಲಾರದು ಎಂದು ನಮಗೆಲ್ಲ ಚೆನ್ನಾಗಿ ಗೊತ್ತು.

ಆದರೆ, ಜಗನ್ನಿಯಾಮಕನಾದ ಭಗವಂತನೂ ನಮ್ಮಂತೆಯೇ ರಾತ್ರಿಯಾದಾಗ ಮಲಗುತ್ತಾನೆ ಮತ್ತು ಹಗಲಲ್ಲಿ ಮಾತ್ರ ಎಚ್ಚರವಾಗಿರುತ್ತಾನೆ ಎಂಬ ಕಲ್ಪನೆ ಯಾಕೋ ಸ್ವಲ್ಪ ವಿಚಿತ್ರವೆನಿಸುವುದಿಲ್ಲವೇ? ಅದರಲ್ಲೂ ದೇವರು ನಮಗಿಂತ ಸ್ವಲ್ಪ ತಡವಾಗಿ ಏಳುತ್ತಾನೆ, ನಾವು ಅವನನ್ನು ಪ್ರತಿಬೆಳಿಗ್ಗೆಯೂ ಸುಪ್ರಭಾತ ಹಾಡಿ ಎಬ್ಬಿಸಬೇಕಾಗುತ್ತದೆ ಎನ್ನುವುದಂತೂ ಮತ್ತೂ ವಿಚಿತ್ರವಾದ ಕಲ್ಪನೆ! ಅಷ್ಟೇ ಸಾಲದೆಂಬಂತೆ ಅದಕ್ಕಿಂತಲೂ ಒಂದುಹೆಜ್ಜೆ ಮುಂದೆ ಎನಿಸುವಂಥ ಅದ್ಭುತ ಕಲ್ಪನೆಯೊಂದು ಅನ್ನಮಾಚಾರ್ಯರ ಸಂಕೀರ್ತನೆಯ ಈ ಸಾಲುಗಳಲ್ಲಿದೆ, ಅದರಕಡೆಗೆ ಈಗ ನಿಮ್ಮ ಗಮನವನ್ನು ಸೆಳೆಯಬಯಸುತ್ತೇನೆ.

ಅನ್ನಮಯ್ಯ ಹೇಳುತ್ತಿರುವುದೇನೆಂದರೆ ದೇವಾಧಿದೇವಾ, ನಿನ್ನ ಭಕ್ತಕೋಟಿ ಜನರು ವಿವಿಧ ಕೋರಿಕೆಗಳೊಂದಿಗೆ ಕಾಯುತ್ತಿದ್ದಾರೆ. ಆದಿಶೇಷನ ಹರಡಿದಹೆಡೆಗಳನ್ನೇ ಸೊಳ್ಳೆಪರದೆಯಾಗಿಸಿ ಮಲಗಿದ್ದೀಯಲ್ಲ, ಅದನ್ನು ಮೇಲೆತ್ತಿ ಎದ್ದು ಹೊರಗೆ ಬರುತ್ತೀಯಾ?" ಎಂದು. ತೆಲುಗಿನಲ್ಲಿ ದೋಮ ಎಂದರೆ ಸೊಳ್ಳೆ, ದೋಮತೆರ ಎಂದರೆ ಸೊಳ್ಳೆಪರದೆ (ಪೂರಕಮಾಹಿತಿ: ಹೈದರಾಬಾದ್‌ನಲ್ಲಿ ಹುಸೇನ್‌ಸಾಗರ್ ಪಕ್ಕದಲ್ಲಿರುವ ಪ್ರದೇಶಕ್ಕೆ ದೋಮಾಲಗೂಡ' ಎಂದು ಹೆಸರು. ಅಲ್ಲಿ ಸೊಳ್ಳೆಕಾಟ ವಿಪರೀತ ಎಂದು ಬೇರೆ ಹೇಳಬೇಕಿಲ್ಲವಷ್ಟೆ? ಆಶ್ಚರ್ಯವೆಂದರೆ ಹೈದರಾಬಾದ್‌ನಲ್ಲಿ ದೋಮಾಲಗೂಡ ಎಂಬ ಬಡಾವಣೆ ಇರುವಂತೆಯೇ ಅಮೆರಿಕದ ಕ್ಯಾಲಿಫೋರ್ನಿಯಾ, ಪೆನ್ಸಿಲ್ವೇನಿಯಾ ಮುಂತಾದ ಸಂಸ್ಥಾನಗಳಲ್ಲಿ Mosquito valley ಹೆಸರಿನ ಊರು/ಪ್ರದೇಶಗಳಿವೆ). ಅನ್ನಮಯ್ಯನ ಪ್ರಕಾರ ಶ್ರೀಮನ್ನಾರಾಯಣನಿಗೆ ಪನ್ನಗಪು ದೋಮತೆರ' ಎಂದರೆ ಆದಿಶೇಷನ ಹೆಡೆಗಳೇ ಸೊಳ್ಳೆಪರದೆ. ಎಂಥ ಅದ್ಭುತವಾದ ಕಲ್ಪನೆ! ಅದಕ್ಕಿಂತಲೂ ಮುಖ್ಯವಾಗಿ ಅನ್ನಮಯ್ಯನ ಈ ಸಾಲುಗಳಲ್ಲಿ ಸೂಚಿತವಾಗಿರುವ ಕಟುಸತ್ಯವೆಂದರೆ ಸರ್ವಶಕ್ತ ಶ್ರೀಹರಿಗೂ ಸೊಳ್ಳೆಕಾಟವಿದೆ, ಮಲಗುವಾಗ ಸೊಳ್ಳೆಪರದೆಯ ಆಸರೆ ಬೇಕಾಗುತ್ತದೆ!

ಶ್ರೀಮನ್ನಾರಾಯಣನಿಗೆ ಸೊಳ್ಳೆಕಡಿತದ ಉಪದ್ರವ ಗಾಢವಾಗಿ ಅನುಭವಕ್ಕೆ ಬಂದದ್ದು ಬಹುಶಃ ರಾಮಾವತಾರದಲ್ಲೇ ಇರಬಹುದು. ಹಾಗೆನ್ನುವಾಗ ಒಂದು ಸಂಗತಿ - ಕೇವಲ ಹೋಲಿಕೆಗಾಗಿ - ನನಗೆ ನೆನಪಾಗುತ್ತದೆ. ಇಲ್ಲಿ ಅಮೆರಿಕದಲ್ಲಿ ಬೇಸಗೆಯಲ್ಲಿ ಒಂದೆರಡು ದಿನಗಳ ಕ್ಯಾಂಪಿಂಗ್‌ಗೆಂದು ಟೆಂಟ್-ಗಿಂಟ್ ಗಂಟುಮೂಟೆ ಕಟ್ಟಿಕೊಂಡು ಕಾಡಿಗೆ ಹೋಗುತ್ತಾರೆ. ಕಾಡಿನಲ್ಲಿ ಕ್ಯಾಂಪಿಂಗ್‌ಗೆ ಮೀಸಲಿಟ್ಟ ಸ್ಥಳದಲ್ಲಿ ಸಣ್ಣಸಣ್ಣ ಡೇರೆಗಳನ್ನು ಹೂಡಿ ರಜಾದಿನಗಳನ್ನು ಕಳೆಯುತ್ತಾರೆ. ಊಟ ನಿದ್ರೆ ಆಟಪಾಠ ವಿನೋದ ಎಲ್ಲ ಅಲ್ಲಿಯೇ. ಮೂರ್ನಾಲ್ಕು ವರ್ಷಗಳ ಹಿಂದೆ ನಾವೂ ಕೆಲವು ಗೆಳೆಯರು ಸೇರಿ ವಾಷಿಂಗ್ಟನ್ ಡಿಸಿ ಸಮೀಪದ ಶೆನ್ಯಾಂಡೊ ವ್ಯಾಲಿ ಕಾಡಿನಲ್ಲಿ ಕ್ಯಾಂಪಿಂಗ್ ಮಾಡಿದ್ದೆವು. ಅದೇಮೊದಲಸಲ ಕ್ಯಾಂಪಿಂಗ್ ಹೋಗುವವರಿಗೆ ಆಗ ಅನುಭವಿಗಳು ಕೊಟ್ಟಿದ್ದ ಕಿವಿಮಾತಲ್ಲಿ "have good stock of mosquito repellent spray, especially in the evenings too many mosquitoes attack you!" ಎಂಬುದೂ ಸೇರಿತ್ತು. ಸೊಳ್ಳೆಗಳ ತೀವ್ರತೆ ಮೊದಲಸಂಜೆಯೇ ನಮಗೆ ಅನುಭವವಾಗಿ ಆ ಹಿತೋಪದೇಶದ ಮಹತ್ವ ಅರಿವಾಗಿತ್ತು.

ನಮಗೆ ಶೆನ್ಯಾಂಡೋ ವ್ಯಾಲಿಯಲ್ಲಿ ಮೂರು ಅಹೋರಾತ್ರಿಗಳ ವನವಾಸದಲ್ಲೇ ಸೊಳ್ಳೆಕಾಟ ಸಾಕುಸಾಕಾಗಿದ್ದರೆ ಇನ್ನು ಹದಿನಾಲ್ಕು ವರ್ಷಗಳ ಕಾಲ ವನವಾಸವೆಂದರೆ ತಮಾಷೆನಾ? ಶ್ರೀರಾಮಚಂದ್ರನಿಗೆ ಎಷ್ಟು ಸೊಳ್ಳೆ ಕಚ್ಚಿರಬೇಡ! ರಾಮ-ಸೀತೆಯರಿಗೆ ಒಂದಿನಿತೂ ಅಪಾಯ-ಅನನುಕೂಲಗಳಾಗದಂತೆ ಹಗಲೂರಾತ್ರಿ ಕಟ್ಟೆಚ್ಚರದಿಂದ ಕಾಪಾಡಲು ಲಕ್ಷ್ಮಣನಿದ್ದ, ರಾವಣಾದಿ ಜಿರಳೆಗಳು ಪರ್ಣಕುಟಿಯ ಒಳಗೆ ಬರದಂತೆ ಅವನು ಲಕ್ಷ್ಮಣರೇಖೆ'ಯನ್ನೂ ಎಳೆದಿದ್ದ. ಆದರೂ, ಸೊಳ್ಳೆಸಂಹಾರಕ್ಕೆ ಲಕ್ಷ್ಮಣನ ಬಳಿ ಏನು ಉಪಾಯವಿತ್ತು ಎಂದು ವಾಲ್ಮೀಕಿಯಾಗಲೀ ತುಲಸೀದಾಸರಾಗಲೀ ಫಣಿರಾಯ ತಿಣುಕುವಂತೆ ಮಾಡಿದ ಇತರ ರಾಮಾಯಣ ಕವಿಗಳಾರೇ ಆಗಲೀ ವಿವರಿಸಿದ್ದಾರೋ ನಾನರಿಯೆ. ತ್ರೇತಾಯುಗದಲ್ಲೂ ಬಲ್ಸಾರಾ ಕಂಪೆನಿಯು ಒಡೊಮಸ್ ಕ್ರೀಂಅನ್ನು ಉತ್ಪಾದಿಸುತ್ತಿತ್ತಾ? ಕಛು‌ಆ ಛಾಪ್ ಮಚ್ಛರ್ ಬತ್ತಿ (Tortoise brand mosquito coil) ಅಯೋಧ್ಯೆಯ ಮಾರುಕಟ್ಟೆಯಲ್ಲಿ ಆಗಲೂ ಸಿಗ್ತಿತ್ತಾ? ವನವಾಸಕ್ಕೆ ಹೊರಡುವಾಗ ಲಕ್ಷ್ಮಣ ಮಾಡಿಕೊಂಡ ತಯಾರಿಗಳಲ್ಲಿ ಅದರ ಪ್ಯಾಕೆಟ್ ಸಹ ಇತ್ತಾ? ಗುಡ್‌ನೈಟ್ ಮಸ್ಕಿಟೊಮ್ಯಾಟ್‌ಗಳ ಬಳಕೆಯಂತೂ ರೂಲ್ಡ್‌ಔಟ್ - ಅದಕ್ಕೆ ಕರೆಂಟ್ ಬೇಕಲ್ಲ? ನಮಗೆ ತಿಳಿದಮಟ್ಟಿಗೆ ರಮಾನಂದ ಸಾಗರ್ ತೋರಿಸಿದ ಟಿವಿ ರಾಮಾಯಣದ ಯಾವುದೇ ದೃಶ್ಯದಲ್ಲೂ ಲೈಟ್‌ಕಂಬ ಕಂಡುಬಂದದ್ದಿಲ್ಲ!

ಹಾಗೆಲ್ಲ ಪುರಾಣೇತಿಹಾಸಗಳನ್ನು ಲೇವಡಿ ಮಾಡಬಾರದಯ್ಯಾ, ರಾಮ ಇದ್ದನಾ ರಾಮಾಯಣ ಆದದ್ದು ಹೌದಾ ಎಂದೆಲ್ಲ ಹೇಗೆ ಪ್ರಶ್ನಿಸಬಾರದೋ ಹಾಗೆಯೇ ರಾಮಾಯಣಕಾಲದಲ್ಲಿ ಸೊಳ್ಳೆಗಳಿದ್ವಾ ರಾಮನಿಗೆ ಕಚ್ತಿದ್ವಾ ಎಂದೂ ಪ್ರಶ್ನಿಸಬಾರದು, ಸುಮ್ನೆ ತಲೆಹರಟೆ ಬೇಡ ಎಂದು ನೀವಂದುಕೊಳ್ಳುವ ಮೊದಲೇ ಅದನ್ನಲ್ಲಿಗೇ ನಿಲ್ಲಿಸೋಣ. ಆದರೆ ಸೊಳ್ಳೆಕಾಟವನ್ನು ತಪ್ಪಿಸಲು ನಾವು ಮನುಷ್ಯಜಾತಿಯವರು ಇದುವರೆಗೂ ಮಾಡಿರುವ ತಂತ್ರಗಳು, ಹೂಡಿರುವ ಉಪಾಯಗಳು, ಅವ್ಯಾವುದರಿಂದಲೂ ಫಲಸಿಗದೆ ಪರದಾಡಿರುವ ಕಷ್ಟಗಳು, ಅವೆಲ್ಲದರ ನಂತರವೂ ಸೊಳ್ಳೆಗಳೇ ಗೆದ್ದು ಮಲೇರಿಯಾ ಡೆಂಗ್ಯೂ ಚಿಕೂನ್‌ಗುನ್ಯಾ ಇತ್ಯಾದಿ ಮಹಾಮಾರಿಗಳನ್ನು ನಮ್ಮಮೇಲೆ ಛೂಬಿಟ್ಟಿರುವುದು - ಇವನ್ನೆಲ್ಲ ನೆನೆಸಿಕೊಂಡರೆ ಸೊಳ್ಳೆಗಳ ವಿಷಯದಲ್ಲಿ ತಲೆಹರಟೆ ಖಂಡಿತ ಸಲ್ಲದು. ಸೊಳ್ಳೆ ಸತ್ಯವಾಗಿಯೂ ಸೀರಿಯಸ್ ಸಬ್ಜೆಕ್ಟ್!

ಸೊಳ್ಳೆ ಸಂಹಾರ ವಿಧಾನಗಳ ಪಟ್ಟಿಮಾಡುವುದು ಅಥವಾ ಅವುಗಳ ಒಳಿತುಕೆಡುಕುಗಳನ್ನು ವಿಶ್ಲೇಷಿಸುವುದು ಈ ಹರಟೆಯ ಉದ್ದೇಶವಲ್ಲ. ಆದರೂ, ನಾನು ತೀರಾ ಇತ್ತೀಚೆಗೆ ನೋಡಿದ ಹೊಚ್ಚಹೊಸದಾದ ಸೊಳ್ಳೆಸಂಹಾರತಂತ್ರಜ್ಞಾನ ಮತ್ತು ನನ್ನ ಬಾಲ್ಯದಿಂದಲೂ ನನಗೆ ಗೊತ್ತಿರುವ, ನಮ್ಮ ಹಳ್ಳಿಗಳಲ್ಲಿ ಈಗಲೂ ಪ್ರಚಲಿತವಿರುವ ಸೊಳ್ಳೆನಿವಾರಣತಂತ್ರ - ಇವೆರಡನ್ನು ಮಾತ್ರ ಇಲ್ಲಿ ಉಲ್ಲೇಖಿಸಬೇಕಾಗುತ್ತದೆ.

ಮೊನ್ನೆ ಭಾರತಪ್ರವಾಸದ ವೇಳೆ ಬೆಂಗಳೂರಿನಲ್ಲಿ ನೋಡಿದ್ದು, ಟೆನಿಸ್ ಬ್ಯಾಟ್‌ನಂತೆ ಕಾಣುವ ಒಂದು ವಿದ್ಯುದುಪಕರಣ. ಸೊಳ್ಳೆಸಂಹಾರಶಸ್ತ್ರವಾಗಿ ಅದೀಗ ಬೆಂಗಳೂರಲ್ಲಿ ಎಷ್ಟು ಪಾಪ್ಯುಲರ್ ಎಂದರೆ ಟ್ರಾಫಿಕ್‌ಸಿಗ್ನಲ್‌ಗಳ ಬಳಿ ನ್ಯೂಸ್‌ಪೇಪರ್/ಮ್ಯಾಗಜೀನ್ ಮಾರುವಂತೆ ಅದನ್ನೂ ಮಾರುತ್ತಿದ್ದರು. 220 ವೋಲ್ಟ್ ವಿದ್ಯುತ್‌ನಿಂದ ಚಾರ್ಜ್ ಮಾಡಿಟ್ಟುಕೊಳ್ಳಬೇಕು, ಆಮೇಲೆ ಪ್ಲಗ್‌ನಿಂದ ತೆಗೆದು, ಕೊಠಡಿಯಲ್ಲಿ ಸೊಳ್ಳೆ ಹಾರಾಡುತ್ತಿರುವುದು ಕಂಡಾಗೆಲ್ಲ ಅದರ ಮೇಲೆ ಬೀಸಬೇಕು. ಚಾರ್ಜ್ ಆಗಿರುವ ಬ್ಯಾಟ್‌ನ ಬಲೆಗೆ ತಾಕಿದ ಸೊಳ್ಳೆ ಛಿಟ್‌ಛಿಟಿಲ್ ಎಂದು ಸಶಬ್ದವಾಗಿ ಸ್ಪಾಟ್ ಡೆತ್! ಬ್ಯಾಟ್ ಬೀಸುತ್ತ ಸೊಳ್ಳೆ ಸಂಹಾರನಿರತರಾದವರನ್ನು ನೋಡಿದಾಗ ಇದೇನಪ್ಪಾ ಟೆನಿಸ್ ಬ್ಯಾಟ್ ಹಿಡಿದು ಏಕಾಂಗಿಯಾಗಿ ಸ್ಕ್ವಾಷ್ ಆಡುವಂತೆ ಅದೂ ಚೆಂಡಿಲ್ಲದೆಯೇ ಆಡ್ತಿದ್ದಾರಾ ಅಂತನಿಸಿದರೆ ಆಶ್ಚರ್ಯವಿಲ್ಲ. ಈ ಸಾಧನದ ಇನ್ನೊಂದು ಪ್ರಯೋಜನವೆಂದರೆ ಸೊಳ್ಳೆಸಂಹಾರದ ಜತೆಯಲ್ಲೇ ಒಳ್ಳೆಯ ವ್ಯಾಯಾಮ!

ನೋಡಿ, ಪಟ್ಟಣಗಳಲ್ಲಾದರೆ ಮನುಷ್ಯರಿಗೂ ಸೊಳ್ಳೆಗಳಿಗೂ ಸಮಾನಸಂವಿಧಾನ. ಹೇಗಂತೀರಾ? ಇಹಲೋಕಕ್ಕೆ ಗುಡ್‌ಬೈ ಹೇಳಿಹೊರಡುವಾಗ ವಿದ್ಯುತ್‌ಚಿತೆಯ ಸೌಕರ್ಯ! ಆದರೆ ಹಳ್ಳಿಗಳಲ್ಲಿ ವಿದ್ಯುತ್ ಸೌಲಭ್ಯ ಇದ್ದರೂ ನಿರಂತರ ಸರಬರಾಜು ಇರಬೇಕಷ್ಟೇ? ಹಳ್ಳಿಗಳಲ್ಲಿ ವಿದ್ಯುತ್ತನ್ನೇ ಅವಲಂಬಿಸಿಕೊಂಡು ಶವಸಂಸ್ಕಾರವೂ ನಡೆಯದು ಸೊಳ್ಳೆಸಂಹಾರವೂ ಸಾಧ್ಯವಾಗದು. ನಮ್ಮ ಹಳ್ಳಿಪರಿಸರದಲ್ಲಿ ಸೊಳ್ಳೆಕಾಟ ತಡೆಗಟ್ಟಲು ಬಳಸುವ ಸುಲಭೋಪಾಯವೆಂದರೆ ಮುಸ್ಸಂಜೆಯ ಹೊತ್ತು ಮನೆಯಂಗಳದ ಒಂದುಮೂಲೆಯಲ್ಲಿ ಮಣ್ಣಿನಬೋಗುಣಿಯಲ್ಲಿ ಬೆಂಕಿಹಚ್ಚಿ ಅಡಿಕೆಸಿಪ್ಪೆಯನ್ನು ಅದರಮೇಲೆ ಹಾಕಿ ಹೊಗೆಯೆಬ್ಬಿಸುವುದು. ಈ ಉದ್ದೇಶಕ್ಕೆಂದೇ ಆಗ್ಗುಡೆತಾ ಮರಾಯಿ' (ತುಳುಭಾಷೆಯಲ್ಲಿ ಬೆಂಕಿಬೋಗುಣಿ) ಹೆಚ್ಚಾಗಿ ಎಲ್ಲರ ಮನೆಗಳಲ್ಲೂ ಇರುತ್ತದೆ. ಸಂಜೆ ಒಂದರ್ಧಗಂಟೆ ಮನೆಯೊಳಗೆ/ಹೊರಗೆ ಹೊಗೆ ಹರಡಿದರೆ ಸಾಕು, ಆಮೇಲೆ ಆ ರಾತ್ರಿಯಿಡೀ ಒಂದೇ‌ಒಂದು ಸೊಳ್ಳೆ ಕೂಡ ಮನೆಯ ಸರಹದ್ದಿನೊಳಗೆ ಬರುವ ಧೈರ್ಯ ತೋರಿಸುವುದಿಲ್ಲ.

ನಗರವಾಸಿಗಳು ಸೊಳ್ಳೆಕಾಟದ ತಡೆಗೆ ಬಳಸುವ ಕ್ರೀಂ, ಕಾಯ್ಲ್, ಮ್ಯಾಟ್, ವೇಪರ್ ಇತ್ಯಾದಿ ಮಾಡರ್ನ್ ತಂತ್ರಗಳೆಲ್ಲದಕ್ಕಿಂತ ಪ್ರಬಲವಾದ ಉಪಾಯವಿದು. ನಿಜಕ್ಕೂ ಎಷ್ಟು ಪರಿಣಾಮಕಾರಿ ಎಂದರೆ ಮಂಗಳೂರು ನಗರದಲ್ಲಿ ವಾಸಿಸುವ ನನ್ನ ಸೋದರಮಾವ ತಿಂಗಳಿಗೊಮ್ಮೆ ಬೆಳ್ತಂಗಡಿಯ ಹಳ್ಳಿಮನೆಗೆ ಹೋಗಿ ವಾಪಸಾಗುವಾಗ ಕಾರಿನ ಡಿಕ್ಕಿಯಲ್ಲಿ ಒಂದು ಗೋಣಿಚೀಲದಷ್ಟು ಅಡಿಕೆಸಿಪ್ಪೆ ಒಯ್ಯುತ್ತಾರೆ. ಮಂಗಳೂರಿನ ತನ್ನ ಮನೆಯಲ್ಲಿ ಸಂಜೆಹೊತ್ತು ಪುಟ್ಟದಾದ ಪಾತ್ರೆಯೊಂದರಲ್ಲಿ ಬೆಂಕಿಹಾಕಿ ಅಡಿಕೆಸಿಪ್ಪೆ ಪೇರಿಸಿ ಹೊಗೆಯೆಬ್ಬಿಸುತ್ತಾರೆ, ಅದನ್ನು ಮನೆಯ ಎಲ್ಲ ಕೊಠಡಿಗಳಿಗೂ ಒಯ್ದು ಧೂಮವಲಯವನ್ನು ಸೃಷ್ಟಿಸಿಕೊಳ್ಳುತ್ತಾರೆ. ಅವರ ಮನೆಯೊಳಗೆ ಪ್ರವೇಶ ನಿಷಿದ್ಧ ಎಂದು ಬಹುಶಃ ಈಗ ಮಂಗಳೂರಿನ ಎಲ್ಲ ಸೊಳ್ಳೆಗಳಿಗೆ ಗೊತ್ತಾಗಿರುವಂತಿದೆ!

ಅಂದಹಾಗೆ ವೈಕುಂಠದಲ್ಲಿ ಶ್ರೀಮನ್ನಾರಾಯಣನೂ ಅಡಿಕೆಸಿಪ್ಪೆಯ ಆಗ್ಗುಡೆ' ವ್ಯವಸ್ಥೆ ಮಾಡಿ ಸೊಳ್ಳೆನಿವಾರಣೆ ಮಾಡಿಕೊಂಡರೆ ಆದಿಶೇಷನಿಗೆ ಸ್ವಲ್ಪ ಆರಾಮಾಗಬಹುದೇನೊ!

ಕೊನೆಯದಾಗಿ ಒಂದು ಹ್ಯೂಮರ್ ಬೈಟ್ (bite) ಸೊಳ್ಳೆಕಡಿತಕ್ಕೆ ಸಂಬಂಧಿಸಿದಂತೆ. "ಭಾರತಿ ಎಂಬ ಹುಡುಗಿಗೆ ಕಚ್ಚಿದ ಸೊಳ್ಳೆಗಳು ಆಮೇಲೆ ಯಾವ ಹಾಡನ್ನು ಗುಂಯ್‌ಗುಡುತ್ತವೆ?" ಉತ್ತರ: "ಈ ಮಣ್ಣು ನಮ್ಮದು... ಈ ಗಾಳಿ ನಮ್ಮದು... ಕಲಕಲನೆ ಹರಿಯದಿರುವ ನೀರು ನಮ್ಮದು... ಕಣಕಣದಲು ಭಾರತಿಯ ರಕ್ತ ನಮ್ಮದು... ನಮ್ಮದು ನಮ್ಮದು..."!

English summary
Mosquito menace - Even God can't help! A infotainment write up by Srivathsa Joshi, Oneindia Kannada Columnist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X