• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಲ್ಲರಲ್ಲೂ ಇದ್ದೇ ಇದೆ ‘ವಚನ ಗೊಂದಲ’!?

By Staff
|

ಶ್ರೀವತ್ಸ ಜೋಶಿ ಅವರೇ, ನಾನು ನಿಮ್ಮ ‘ವಿಚಿತ್ರಾನ್ನ’ ಅಂಕಣವನ್ನು ತುಂಬ ಮೆಚ್ಚುತ್ತೇನೆ. ನಿಮ್ಮ ಸೂಕ್ಷ್ಮ ಗ್ರಹಿಕೆ ಮತ್ತು ಅಭಿವ್ಯಕ್ತಿ ಎರಡೂ ಹಿತವಾಗಿದೆ. ಅಭಿನಂದನೆಗಳು. ನಾನು ಕನ್ನಡ ಲೇಖಕಿಯೂ ಮತ್ತು ಹಲವು ವರ್ಷಗಳ ಕಾಲ ಕಾಲೇಜಿನ ಉಪನ್ಯಾಸಕಿಯೂ ಆಗಿದ್ದುದರಿಂದ ನಿಮ್ಮ ‘ವಚನ’ ದ ಗೊಂದಲಕ್ಕೆ ನನ್ನ ಧ್ವನಿಯನ್ನೂ ಸೇರಿಸ ಬಯಸುತ್ತೇನೆ.

Shanta Nagarajನೀವು ಹೇಳಿರುವಂತೆ ಏಕ ಮತ್ತು ಬಹುವಚನಗಳ ವಿಚಿತ್ರ ರೂಢಿಗಳೇ ಇವೆ ನಮ್ಮಲ್ಲಿ. ಉದಾಹರಣೆಗೆ ನಮ್ಮ ಸಾಹಿತ್ಯ ಲೋಕದ ಮಕುಟಮಣಿಗಳಾದ ಪಂಪ, ರನ್ನರಾದಿಯಾಗಿ ಮೊನ್ನೆಮೊನ್ನೆಯ ಮುದ್ದಣ್ಣನವರೆಗೆ ಎಲ್ಲರೂ ‘ಏಕವಚನಕ್ಕೇ’ ಸೀಮಿತರು!! ಆದರೆ ಅದೇ ದಾಸ ಸಾಹಿತ್ಯದ ಕನಕ ಪುರಂದರಾದಿಗಳು ಬಹುವಚನ ವಂದಿತರು!!!

ನಮ್ಮ ಪಠ್ಯಪುಸ್ತಕಗಳಲ್ಲೇ ‘ರಾಮಾಶ್ವಮೇಧಯಾಗ’ ವನ್ನು ಮುದ್ದಣ್ಣಕವಿ ರಚಿಸಿದ್ದಾನೆ ಎಂದೂ ‘ನಳಚರಿತ್ರೆ’ಯನ್ನು ಕನಕದಾಸರು ರಚಿಸಿದ್ದಾರೆ ಎಂದೂ ಮುದ್ರಿಸಿದ್ದರೂ ನಮಗೆ ಏನೇನೂ ಮುಜುಗರವಾಗುವುದಿಲ್ಲ.

ಇನ್ನು ಮಾತಿನ ಒರಸೆಯಲ್ಲೂ ಅಷ್ಟೆ. ನಾಟಕ ಚಲನಚಿತ್ರ ಕಲಾವಿದರು, ಅದು ರಾಜಕುಮಾರನೇ ಆಗಿರಲಿ, ಅಶ್ವತ್ಥನೇ ಆಗಿರಲಿ, ಇತ್ತೀಚಿನ ‘ಮುಂಗಾರುಮಳೆ’ಯ ಗಣೇಶನೇ ಆಗಿರಲಿ ಎಲ್ಲರೂ ಪರಮಾಪ್ತವಾಗಿ ಎಲ್ಲರ ನಾಲಿಗೆಯ ಮೇಲೆ ಏಕವಚನದಲ್ಲೇ ನಲಿದಾಡುತ್ತಾರೆ. ಅದೇ ಸಂಗೀತ ವಿದ್ವಾಂಸರೂ ವಿದುಷಿಗಳೂ ಬಹುವಚನದ ಬಹುಮಾನ ಪಡೆಯುತ್ತಾರೆ.

‘ನೀನು ಆರ್‌.ಕೆ ಶ್ರೀಕಂಠನ್‌ ಸಂಗೀತ ಕೇಳಿದೆಯಾ? ಚೆನ್ನಾಗಿ ಹಾಡುತ್ತಾರಲ್ಲ’? ಎಂದೇ ಮಾತಾಡುತ್ತೇವೆ. ಅದು ಕದ್ರಿಯಾಗಿರಬಹುದು, ಭೀಮಸೇನ ಜೋಶಿ, ಎಂ.ಎಸ್‌ ಶೀಲಾ, ಡಾ. ಟಿ. ಎಸ್‌. ಸತ್ಯವತಿ ಯಾರೇ ಆಗಿರಬಹುದು, ಇಂಥವರಿಗೆ ಏಕವಚನ ಬಳಸುವುದು ಮಾತಾಡುವವರ ಸಭ್ಯತೆಗೆ ಕಮ್ಮಿಯಾಗಿಬಿಡುತ್ತದೆ. ನಮ್ಮಲ್ಲೇ ಎಷ್ಟೊಂದು ತರತಮಭಾವ!! ಇದನ್ನು ಕಂಡೇ ನಮ್ಮ ಕನ್ನಡದ ಮಧ್ವಾಚಾರ್ಯರು ‘‘ಪಂಚಭೇದ ಸತ್ಯ, ತಾರತಮ್ಯ ಸತ್ಯ’’ ಎನ್ನುವ ಫ‚ರ್ಮಾನು ಹೊರಡಿಸಿದರೇನೋ!!

ಇನ್ನು ನೀವು ಹೇಳಿರುವ ತೆಲುಗಿನ ಸ್ತ್ರೀವಾಚಕ ನಪುಂಸಕ ಪ್ರಯೋಗಕ್ಕೆ ಒಂದು ಸಣ್ಣ ವಿವರಣೆ. ತೀನಂಶ್ರೀಯವರು ತಮ್ಮ ದ್ರಾವಿಡ ಭಾಷಾ ವಿಜ್ಞಾನದಲ್ಲಿ ಲಿಂಗ ಮತ್ತು ವಚನಗಳನ್ನು ವಿವರಿಸುವಾಗ ಬೇರೆಯದೇ ತತ್ವವನ್ನು ಪ್ರತಿಪಾದಿಸುತ್ತಾರೆ. ದ್ರಾವಿಡ ಭಾಷೆಗಳಲ್ಲಿ ಲಿಂಗವಚನಗಳು ಸಂಸ್ಕೃತದಂತೆ ಅಲ್ಲ. ಅದು ಮಹತ್‌ ಮತ್ತು ಅಮಹತ್‌ ಎನ್ನುವ ಎರಡೇ ಪ್ರಭೇದದಲ್ಲಿದೆ ಎನ್ನುತ್ತಾರೆ. ಮಹತ್‌ ಅಂದರೆ ಬುದ್ಧಿ ಇರುವುದು. ಅಮಹತ್‌ ಎಂದರೆ ಬುದ್ಧಿ ಇಲ್ಲದ್ದು.

ವಸ್ತುಗಳೂ ಪಶುಪಕ್ಷಿ ಪ್ರಾಣಿಗಳೂ ಅದು ಗಂಡಾಗಿರಲೀ ಹೆಣ್ಣಾಗಲೀ ‘ಬಂತು, ಹೋಯಿತು, ನಿಂತಿದೆ’ ಇತ್ಯಾದಿಯಾಗಿಯೇ ಸಂಭೋದಿತವಾಗುತ್ತದೆ. ಪಕ್ಕದ ಮನೆನಾಯಿ ನಮ್ಮ ಪಾಲಿಗೆ ಬರೀ ನಾಯಿಯೇ. ‘ನಿಮ್ಮ ನಾಯಿ ಕಟ್ಟಿಹಾಕಿ, ನಾನು ನಿಮ್ಮ ಮನೆಗೆ ಬರಬೇಕು ಅದು ಕಚ್ಚಿದರೆ ಕಷ್ಟ’ ಎಂದು ನಾವಂದರೆ ಅವರು ‘ಇಲ್ಲಾ ಅವನು ಹಾಗೆಲ್ಲ ಕಚ್ಚಲ್ಲ ಬನ್ನಿ’ ಎನ್ನುತ್ತಾರೆ.ನಮಗೆ ಅದು ಅಮಹತ್‌ ಆದರೆ ಅವರಿಗೆ ಅದರ ಜಾಣತನ ಗೊತ್ತಿರುವುದರಿಂದ ಮಹತ್‌ ಆಗುತ್ತದೆ.

ಇನ್ನು ಮಹತ್‌ನಲ್ಲಿ ಎರಡು ಪ್ರಭೇದ. ಅದು ಗಂಡು ಮತ್ತು ಹೆಣ್ಣು. ಇವೂ ಸಹ ಸಮಯಕ್ಕೆ ತಕ್ಕಂತೆ ನಿರ್ದೇಶಿತವಾಗುತ್ತದೆ. ‘ಹಸೆ ಮೇಲೆ ಹೆಣ್ಣು ಕೂತಿದೆ’ ‘ಅವರ ಮನೆಗೆ ಇವತ್ತು ಗಂಡು ಬರುತ್ತೆ’ ‘ಮೆರವಣಿಗೆ ಬರ್ತಾಯಿದೆ’ ‘ಗುಂಪು ಚದುರಿತು’ ‘ಕೂಸು ಬಡವಾಯ್ತು’ ‘ಮುದುಕ ಅರಚತ್ತೆ’ ‘ಮುದುಕಿ ಹೇಳಿದ್ದಕ್ಕೆ ತಲೆ ಆಡಿಸತ್ತೆ’ ಇಂಥಾ ಮಾತುಗಳು ಜನಜನಿತ.

ಇದಕ್ಕೆ ಕಾರಣ ಇಷ್ಟೇ. ವರವಧು ಹಿರಿಯ ಅಜ್ಞಾಧಾರಕರು ಆಕ್ಷಣಕ್ಕೆ ಅವರಿಗೆ ಬುದ್ಧಿಯಿಲ್ಲ. ಮಾಬ್‌ ಹ್ಯಾವ್‌ ನೋ ಸೆನ್ಸ್‌ ಎನ್ನುವಂತೆ ಗುಂಪಿಗೆ ಬುದ್ಧಿಯಿಲ್ಲ. ಮಕ್ಕಳಿಗೆ ಮತ್ತು ವಯಸ್ಸಾದ ಮೇಲೆ ಬುದ್ಧಿ ಕಮ್ಮಿಯೇ! ಹೀಗೆ ಕನ್ನಡದ ಲಿಂಗ ವಚನಗಳು ಬಹಳ ವೈಜ್ಞಾನಿಕವಾಗಿ ಅರ್ಥಪೂರ್ಣವಾಗಿ ನಿರ್ಮಿಸಲ್ಪಟ್ಟಿದೆ ಎಂದು ವಿದೇಶೀ ಭಾಷಾತಜ್ಞರೂ ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು ತೆಲುಗಿನ ಮಂದಿಗೆ ‘ಒಂಟಿ ಹೆಣ್ಣಿಗೆ ಬುದ್ಧಿಯಿಲ್ಲ’ ಎಂದೇ ನಂಬಿಕೆ!! ಅದಕ್ಕೇ ‘ಅದಿ ವಸ್ತುಂದಿ, ಇದಿ ಪೋತುಂದಿ’ ಎನ್ನುವ ಪ್ರಯೋಗವಿದೆ. ಅದೇ ಇಬ್ಬರು ಮಹಿಳೆಯರಿದ್ದರೆ ಗೌರವಾನ್ವಿತರಾಗಿ ‘ವಸ್ತಾರು ಪೋತಾರು’ ಎಂದೇ ಬಳಸುತ್ತಾರೆ. ಒಗ್ಗಟ್ಟಿನಲ್ಲಿ ಬಲವಿದೆ ನೋಡಿ!! ಅದಕ್ಕೇ.

ಮತ್ತಷ್ಟು ನಮ್ಮ ಬುದ್ಧಿಗೂ ಸವಾಲಾಗುವಂಥಾ ಇಂಥಾ ಲೇಖನಗಳು ನಿಮ್ಮಿಂದ ಬರಲಿ ಎಂದು ಆಶಿಸುತ್ತಾ ಪತ್ರ ಮುಗಿಸುವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X