ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲೈ 2007, ಅದಕೇಳು ಇದಕೇಳು...

By Staff
|
Google Oneindia Kannada News


‘‘ಮೂರು ದಿನದಾ ಬಾಳು...’’:

ನಮ್ಮದಲ್ಲ, ನೀರಿನ ಮೇಲಿನ ಗುಳ್ಳೆಯದೂ ಅಲ್ಲ, ನಮ್ಮ ‘ನ್ಯೂ ಇಯರ್‌ ರಿಸೊಲ್ಯುಶನ್‌’ ಯಾನೆ ’ಹೊಸ ವರ್ಷದ ಸಂಕಲ್ಪ’ಗಳದು. ಜನವರಿ 1ನೇ ತಾರೀಕಿಗೆ ಅತಿನಿಷ್ಠೆಯಿಂದ ಅದ್ದೂರಿಯಾಗಿ ಅ-ಧಿ-ಕೃತವಾಗಿ ಜಾರಿಗೊಳ್ಳುವ ಈ ರಿಸೊಲ್ಯುಶನ್‌ಗಳು ಹೆಚ್ಚೆಂದರೆ ಜನವರಿ 2 ಮತ್ತು ಅಲ್ಪಸ್ವಲ್ಪವಾಗಿ 3 ರಂದು ಬದುಕುಳಿದಿರುತ್ತವೆ. ಜನವರಿ 4 ರ ನಂತರ ಏನಿದ್ದರೂ ಮುಂದಿನವರ್ಷದಿಂದ ‘ಇದನ್ನು’ಮಾಡುತ್ತೇನೆ, ‘ಅದನ್ನು’ ಮಾಡುತ್ತೇನೆ ಎಂಬ ರಿ-ರಿಸೊಲ್ಯುಶನ್‌ಗಳ ಚಿಂತನೆ.

‘‘ಭಾರತ ಕ್ರಿಕೆಟ್‌ ತಂಡದ ಏಳುಬೀಳು’’:

ಇತ್ತೀಚೆಗೆ ವಿಜಯಮಾಲೆಯಲ್ಲಿ ಹೂಗಳಿಲ್ಲದೆ ಬರೀ ಹಗ್ಗ ಮಾತ್ರ ಆಗಿ ಅದು ಕೊರಳಿಗೆ ಬಿದ್ದ ಸೋಲಿನ ಉರುಳಾಗಿ ಪರಿಣಮಿಸಿರುವುದರಿಂದ ರೋಸಿಹೋಗಿರುವ ಕ್ರಿಕೆಟ್‌ ಅಭಿಮಾನಿಗಳು, ಎದುರಾಳಿ ಪಡೆಯ ವಿಕೆಟ್‌ಗಳು ಬೀಳಲಿ ನಮ್ಮ ತಂಡದ ಆಟಗಾರರು ಚೆನ್ನಾಗಿ ಫಿ‚ೕಲ್ಡಿಂಗ್‌ ಮಾಡಿ ಬಿದ್ದಾದರೂ ಚೆಂಡು ಹಿಡಿದು ಏಳಲಿ ಎಂದು ಹಾರೈಸಿದ್ದಾರೆ.

‘‘ಭೂಗೋಳವಿಡೀ ಬೋಳು ಬೋಳು!’’:

2007 ಅಂತಾರಾಷ್ಟ್ರೀಯ ‘ಧ್ರುವ’ ವರ್ಷ (International Polar Year). ಈಬಗ್ಗೆ ಬೇರೆ ಏನೇನು ಆಚರಣೆಗಳನ್ನು ಹಮ್ಮಿಕೊಳ್ಳಲಾಗಿದೆಯೋ ಗೊತ್ತಿಲ್ಲ. ಆದರೆ ಉತ್ತರಧ್ರುವದಿಂದ ಹಿಮಕರಡಿಗಳೆಲ್ಲ ಮತ್ತು ದಕ್ಷಿಣಧ್ರುವದಿಂದ ಪೆಂಗ್ವಿನ್‌ಗಳೆಲ್ಲ ಭೂಮಧ್ಯೆರೇಖೆಯ ಅಕ್ಕಪಕ್ಕದಲ್ಲಿ ಜಮಾಯಿಸಿ ಸಮ್ಮೇಳನವೊಂದನ್ನು ಆಯೋಜಿಸಿವೆಯಂತೆ! ಸಮ್ಮೇಳನ ಉ.ಧ್ರುವದಲ್ಲಾಗಬೇಕೋ ದ.ಧ್ರುವದಲ್ಲಾಗಬೇಕೋ ಎಂದು ಧ್ರುವೀಕರಣದ ಚರ್ಚೆಯಾಗಿ ಕೊನೆಗೂ ಓತಪ್ರೋತಕಟಿಪ್ರಮಾಣವೆಂಬಂತೆ ಈ ಏರ್ಪಾಡು. ತಂತಮ್ಮ ಧ್ರುವಗಳಷ್ಟೇ ಈ ಪ್ರಪಂಚವೆಂದು ತಿಳಿಯುವ ಜೀವಿಗಳಿಗೆ ‘‘ಉತ್ತರಧ್ರುವದಿಂ ದಕ್ಷಿಣಧ್ರುವಕೂ... ಭೂಗೋಳವಿಡೀ ಬೋಳು ಬೋಳು!’’

‘‘ನಾಳೆ ಎಂಬುವವನ ಬಾಳು ಹಾಳು!’’:

ಇನ್ನೇಕೆ ತಡ, ಹೊಸವರ್ಷ ಬರುತ್ತದೆ ಆಗ ಶುರುಮಾಡೋಣ ಎಂದು ಪೋಸ್ಟ್‌ಪೋನಿಸಿದ್ದು ಸಾಕು, ಡಯಟಿಂಗ್‌ ಇವತ್ತಿಂದಲೇ ಶುರುಮಾಡು, ಕೊಬ್ಬು ಕೊಲೆಸ್ಟ್ರಾಲುಗಳ ಕೊಲೆ ಮಾಡು; ಅದಕ್ಕೆ ಮೊದಲು ಹಾಳು-ಮೂಳು ಜಂಕ್‌ಫುಡ್‌ ತಿನ್ನುವುದಿಲ್ಲ ಎಂಬ ಪ್ರಮಾಣಮಾಡು! (ಎಂದು ತನಗೆ ತಾನೇ ಹೇಳಿಕೊಳ್ಳುತ್ತ ಹೊಸವರ್ಷದ ಕೇಕ್‌ ರುಚಿ ಹೇಗಿದೆ ನೋಡುತ್ತೇನೆ ಎಂದು ದೊಡ್ಡ ಪೀಸ್‌ ಒಂದನ್ನು ಬಾಯಿಗೆ ಹಾಕಿಕೊಳ್ಳುವ 70mm ಸೊಕ್ಕಿದಸುಬ್ಬಮ್ಮ).

‘‘ಕೇಳಲು ತಯಾರಿದ್ದೇನೆ, ಹೇಳು’’:

ಎಷ್ಟೊಂದು ಹಿತವೆನಿಸಬಹುದು ಈ ಮಾತುಗಳು! ಈ ಜಗತ್ತಿನಲ್ಲಿ ‘ಹೇಳು’ವವರೇ ಹೆಚ್ಚು, ‘ಕೇಳು’ವವರು ಕಡಿಮೆ. ಕೇಳುವ ಕಿವಿಗಳು ಸಿಕ್ಕರೆ ಖುಶಿಯಾಗೋದು ಕವಿಗಷ್ಟೇ ಅಲ್ಲ, ರವಿ (ಬೆಳಗೆರೆ) ಬರೆದಂತೆ ‘‘ಮಕ್ಕಳು, ತುಂಬ ವಯಸ್ಸಾದವರು, ಕೆಲಸಕ್ಕೆ ಹೋಗದ ಹೆಣ್ಣುಮಕ್ಕಳು, ಯಾರಾದರೂ ತಮ್ಮ ಮಾತು ಕೇಳಿಸಿಕೊಳ್ಳಲಿ ಅಂತ ಚಡಪಡಿಸುವವರು...’’ ಇವರೆಲ್ಲರಿಗೂ! ಹೊಸ ವರ್ಷದಲ್ಲಾದರೂ ಕೇಳುವ ಕಿವಿಗಳ ನಿರೀಕ್ಷೆ ಅವರೆಲ್ಲರದು!

‘‘ಪನ್‌ಡಿತರು ಮಾಡಿದ ಹೋಳು’’

ಪದಗಳನ್ನು ತುಂಡರಿಸುವ ಚಟದ ಡುಂಡಿರಾಜರಂಥ ಪನ್‌ಡಿತರು ಈ ಹೊಸವರ್ಷದ ಇಸವಿಯನ್ನು ಹೋಳು ಮಾಡಿದಾಗ ಅಲ್ಲಿ ಕಂಡುಬಂದದ್ದೇನು? ಇಬ್ಬರು ಜೇಮ್ಸ್‌ಬಾಂಡ್‌! ಯಾಕೆ, ಗೊತ್ತಾಗಲಿಲ್ಲವೇ? 2007 ಇಸವಿಯನ್ನು 2 ಮತ್ತು 007 ಎಂದು ಹೋಳುಮಾಡಿದರೆ ಡಬಲ್‌ ಜೇಮ್ಸ್‌ಬಾಂಡ್‌ ಆಗುತ್ತದಲ್ಲವೇ?

*

ಈ ಮೇಲಿನ ಪ್ರಾಸಪದಗಳ ಪೈಕಿ ಯಾವುದಕ್ಕಾದರೂ ಇನ್ನೂಹೆಚ್ಚು ರುಚಿಕಟ್ಟಾದ ವ್ಯಾಖ್ಯಾನ ನಿಮ್ಮಲ್ಲಿದ್ದರೆ ಅವಶ್ಯವಾಗಿ ಬರೆದು ತಿಳಿಸಿ. 2007ಕ್ಕೆ ಅದನ್ನೋದಿ ತುಂಬಾ ಸಂತೋಷವಾಗಬಹುದು. ಹಾಗೆಯೇ 2007ನ್ನು ನಾವೆಲ್ಲರೂ ಸೇರಿ ಎಂಜಾಯಿಸೋಣ. ಮತ್ತೊಮ್ಮೆ ವಿಚಿತ್ರಾನ್ನ ಬಳಗಕ್ಕೆಲ್ಲ ಹೊಸವರ್ಷದ ಹಾರ್ದಿಕ ಶುಭಾಶಯಗಳು!

- [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X