• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಲೈ 2007, ಅದಕೇಳು ಇದಕೇಳು...

By Staff
|

‘‘ಒಪ್ಪೊತ್ತಾದರೂ ಸಿಗಲಿ ಕೂಳು’’:

ಐಟಿ/ಬಿಟಿ ಕ್ರಾಂತಿಯೆಂದಾಗಲೀ, ಸುವರ್ಣಕರ್ನಾಟಕವೆಂದಾಗಲೀ, ಇನ್ನೊಂದು ಮತ್ತೊಂದಾಗಲೀ ಬೆಂಗಳೂರು ಬೆಳೆಯುತ್ತದೆಯೇ ವಿನಹ ಹಳ್ಳಿಯಲ್ಲಿ ಬರಡುಭೂಮಿಯನ್ನಿಟ್ಟುಕೊಂಡ ಬಡಬೋರೇಗೌಡನದು ಅದೇ ಅಳಲು - ವರ್ಷಕ್ಕೊಮ್ಮೆ ಹೊಸ ವರ್ಷ ಬಂದು ಮಿಕ್ಕೆಲ್ಲರಿಗೂ ಹರ್ಷ ತಂದರೂ ಅವನು ಮಾತ್ರ ನಿತ್ಯ ನೊಂದ ಜೀವಿ.

‘‘ಈವರ್ಷವೂ ನಾ ಹೇಳಿದ್ದಷ್ಟನ್ನೇ ಕೇಳು’’:

ಪ್ರಧಾನಿ ಮನಮೋಹನಸಿಂಗರಿಗೆ ಸೋನಿಯಾಗಾಂ-ಧಿ- ಕಿವಿಮಾತು. ಆದರೆ ಸಿಂಗ್‌ಜೀ ಧರಿಸಿದ ಟರ್ಬನ್‌ನಿಂದ ಕಿವಿಗಳು ಮುಚ್ಚಿಹೋಗುವುದರಿಂದ ಮತ್ತು ಸೋನಿಯಾಗಾಂ-ಧಿ-ಯ ಅಸ್ಪಷ್ಟ ಉಚ್ಚಾರದಿಂದ ಆ ಮಾತು ಪೂರ್ಣ ಪ್ರಮಾಣದಲ್ಲಿ ಪರಿಣಾಮಕಾರಿಯಾಗುವುದಿಲ್ಲ. ಗಂಡಂದಿರನ್ನು ಹದ್ದುಬಸ್ತಿನಲ್ಲಿಡುವ ಹೆಂಡತಿಯರೂ ಸೇರಿದಂತೆ ವಿಶ್ವದೆಲ್ಲೆಡೆ ಈರೀತಿಯ ‘ರಿಮೋಟ್‌ ಕಂಟ್ರೋಲ್‌’ ಆಡಳಿತಕೇಂದ್ರಗಳೆಲ್ಲ ಇದೇ ಏಕರೀತಿಯ ಆದೇಶವನ್ನು ನೀಡಿವೆಯಂತೆ.

‘‘ಗುಡ್‌ಬೈ ಪಡೆಯಿತು ಗೀಳು!’’

ಅಗ್ನಿಕಾರ್ಯ, ಸೋಮಪಾನ, ದ್ಯೂತಕ್ರೀಡೆ ಮುಂತಾದ ‘ಸತ್‌’ಗುಣಗಳೆಲ್ಲ ಡಿಸೆಂಬರ್‌ 31ರ ರಾತ್ರಿಯ ಓಲ್ಡ್‌ಮ್ಯಾನ್‌ ಬರ್ನಿಂಗ್‌ ಜತೆಗೇ ‘ಸತ್‌’ಹೋದುವು ಎಂಬ ಭ್ರಮೆ - ಆ ಗೀಳನ್ನು ಬಿಟ್ಟವರಿಗೂ, ಅವರ ನಿಕಟವರ್ತಿಗಳಿಗೂ.

‘‘ಕಸ ಕಸಾಪಗಳ ಕಸಿವಿಸಿಯ ಗೋಳು’’:

2006ರ ಕೊನೆಯಲ್ಲಿ ನಡೆದ ಶಿವಮೊಗ್ಗ ಸಾಹಿತ್ಯ ಸಮ್ಮೇಳನದಲ್ಲಿ ಕಸ (ಕರ್ನಾಟಕ ಸರಕಾರ) ಮತ್ತು ಕಸಾಪ (ಕನ್ನಡ ಸಾಹಿತ್ಯ ಪರಿಷತ್ತು)ಗಳ ಗೋಳಿನ ಬಿಕ್ಕಳಿಕೆ ಪಳೆಯುಳಿಕೆಗಳು ಈ ವರ್ಷಕ್ಕೂ ಮುಂದುವರಿಯಬಹುದು ಎಂದು ಕೆಲವರ ಅಂಬೋಣ (ಮತ್ತು ಆಶಯ ಕೂಡ)!

‘‘ಯಡ್ಡಿಯ ಚಡ್ಡಿಯಲ್ಲಿ ಚೇಳು!’’

ಒಪ್ಪಂದದ ಪ್ರಕಾರ ಈಗಿನ್ನು ಬಿ.ಎಸ್‌ ಯಡಿಯೂರಪ್ಪ ಮುಖ್ಯಮಂತ್ರಿ ಗದ್ದುಗೆಯನ್ನೇರಬೇಕು; ಆದರೆ ಪಕ್ಷದೊಳಗೆ/ಹೊರಗೆ ಅವರ ಎಡವಟ್ಟುಗಳು ಚಡಪಡಿಕೆಗಳು ಉಪದ್ವ್ಯಾಪಗಳನ್ನು, ಸಾರಾಯಿನಿಷೇಧದಂಥ ನಿರ್ಣಯಗಳನ್ನು ಮಂಡಿಸಿರುವ ಈವರ್ಷದ ಅವರ ಪರಿಸ್ಥಿತಿಯನ್ನು ನೋಡಿ ನಗುತ್ತಿರುವವರ ಉವಾಚವಿದು.

‘‘ಉಪಟಳವನ್ನು ಇನ್ನೂ ಕೊಂಚ ತಾಳು...’’

ಇದು ಅಮೆರಿಕಾಧ್ಯಕ್ಷನಿಗೆ ಆಲ್‌‘ಕೈ’ದಾ ಕಾಣದ ಕೈ ಆದ ಒಸಾಮನ ಉವಾಚ, ಅದೂ ವಿಡಿಯೋ ಟೇಪ್‌ನಲ್ಲಿ! ‘‘ಸದ್ದಾಮನ ಸದ್ದಡಗಿಸಿರಬಹುದು, ಆದರೆ ನನ್ನ ಉಪಟಳವನ್ನು ನೀನು ಈ ವರ್ಷವೂ ತಾಳಬೇಕು. ಮತ್ತೆ ಗೊತ್ತಲ್ಲ, ತಾಳಿದವನು ಬಾಳಿಯಾನು... ಇಲ್ಲದಿದ್ದರೆ ತಾಲಿಬಾನು!’’

‘‘ಬೆರಳು ತೋರಿದರೆ ನುಂಗುತ್ತೇನೆ ತೋಳು!’’

ಕೊಳ್ಳುಬಾಕತನ ದಿನೇದಿನೇ ಹೆಚ್ಚುತ್ತಿರುವಾಗಲೇ ಮತ್ತಷ್ಟು ಬಹುರಾಷ್ಟ್ರೀಯ ಕಂಪೆನಿಗಳು, ಉತ್ಪನ್ನಗಳು ನಮ್ಮ ನೆಲದಲ್ಲೇ ತಳವೂರುತ್ತ ಹೀಗನ್ನುತ್ತಿವೆಯೋ ಅನಿಸುತ್ತದಲ್ಲವೇ?

‘‘ಎಲ್ಲಸೇರಿ ಎಬ್ಬಿಸೋಣ ಧೂಳು!’’

ನನಗೆ ಈಸಲ ಹೊಸವರ್ಷದ ಹೊಸ್ತಿಲಲ್ಲಿ ಬಂದ ಇ-ಶುಭಾಶಯಪತ್ರಗಳ ಪೈಕಿ, ಹೈದರಾಬಾದ್‌ ನಿವಾಸಿ ಕನ್ನಡಿಗ ಗುರು ಚತುರ್ವೇದಿಯವರು ಕಳಿಸಿದ್ದರಲ್ಲಿ ಈ ರೀತಿ ಬರೆದದ್ದಿತ್ತು! ಅವರಂಥ ಕಟ್ಟಾ ಕನ್ನಡಾಭಿಮಾನಿಗಳು, ಬನವಾಸಿಬಳಗ/ ಕರ್ನಾಟಕರಕ್ಷಣಾವೇದಿಕೆಯಂಥ ಅರ್ಥಪೂರ್ಣ ಸಂಘಟನೆಗಳು ನಿಜಕ್ಕೂ ಬೃಹತ್‌ ಧೂಳೆಬ್ಬಿಸಲು ಪಣ ತೊಟ್ಟಂತಿದೆ. ಅವರಿಗೆಲ್ಲ ಜಯವಾಗಲಿ!

‘‘ಹಂಪಿಯಂತೆ ಬೀಳದಿರಲಿ ಪಾಳು’’

ಸೂರೆಗೊಳ್ಳುವ ಸೌಂದರ್ಯದ, ಸಾಂಸ್ಕೃತಿಕ ಮಹತ್ವದ, ಸ್ವರ್ಗಸದೃಶ ಪರಿಸರದ ಅನೇಕ ರಮಣೀಯ ತಾಣಗಳಿವೆ ನಮ್ಮ ನಾಡಿನಲ್ಲಿ. ಅವನ್ನೆಲ್ಲ ಪ್ರಚುರಪಡಿಸಿ ಪ್ರವಾಸೋದ್ಯಮವನ್ನು ಇನ್ನಷ್ಟು ಚುರುಕುಗೊಳಿಸಬಹುದು. ಮನಸ್ಸಿದ್ದರೆ ಮಾರ್ಗ, ಆ ಮಾರ್ಗವು ಪ್ರವಾಸಿಕ್ಷೇತ್ರಗಳಿಗೆ ರಾಜಮಾರ್ಗವೂ ಆಗಬಹುದು!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more