• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಪ್ಪಳವೆಂದರೆ ಹಲಸಿನ ಹಪ್ಪಳವಯ್ಯಾ...!

By Staff
|

ಮಧ್ಯಾಹ್ನ ಸೂರ್ಯ ನೆತ್ತಿಯ ಮೇಲಕ್ಕೆ ಬರುವ ಹೊತ್ತಿಗೆ ಹಪ್ಪಳಗಳೆಲ್ಲ ಅರೆಬರೆಯಾಗಿ ಒಣಗಿರುತ್ತವೆ. ಈ ಹಂತದಲ್ಲಿ ಕೆಲವೊಂದಿಷ್ಟನ್ನು ಒಳತಂದು ಬಾಳೆಲೆಯಿಂದ ಪ್ರತ್ಯೇಕಿಸಿ ಒಂಚೂರು ತೆಂಗಿನೆಣ್ಣೆ ಹಚ್ಚಿ ತಿನ್ನುವುದು (ಜಾಸ್ತಿ ತಿನ್ನಬೇಡ್ರೋ ಹೊಟ್ಟೆನೋವು ಬರುತ್ತೆ ಎಂಬ ಹಿರಿಯರ ದಬಾಯಿಸುವಿಕೆಯ ನಡುವೆಯೂ) ಬಲು ಮಜಾ! ಸುಮಾರು ಒಂದೂವರೆ ಎರಡು ಗಂಟೆಗಳಾಗುವಾಗ ಎಲ್ಲ ಹಪ್ಪಳಗಳೂ ಚೆನ್ನಾಗಿ ಒಣಗಿರುತ್ತವೆ. ಆಗಲೇ ಅವನ್ನು ಬಾಳೆಲೆಯಿಂದ ಪ್ರತ್ಯೇಕಿಸಿ ಮತ್ತೆ ಸಂಜೆಯವರೆಗೂ ಮಾರನೆ ದಿನವೂ ಬಿಸಿಲಲ್ಲಿ ಒಣಗಿಸಬೇಕು. ಬಾಳೆಲೆಯ ಗೆರೆಗಳು ಪ್ರತಿಯಾಂದು ಹಪ್ಪಳದ ಮೇಲೂ ಉದ್ದುದ್ದ ಗೆರೆಗಳ ಅಚ್ಚಿನ ವಿನ್ಯಾಸವನ್ನು ಮೂಡಿಸಿ ಹಪ್ಪಳದ ಅಂದವನ್ನು ಹೆಚ್ಚಿಸಿರುತ್ತವೆ.

ಮೂರು ದಿನಗಳ ನಂತರ ಒಣಗಿದ ಹಪ್ಪಳಗಳೆಲ್ಲ ಸ್ವಲ್ಪ ತಣ್ಣಗಾಗಿ ಬಾಡಿದರೆ ಕಟ್ಟುಗಳನ್ನಾಗಿ ಮಾಡಿಡುವುದು ಸುಲಭವಾಗುತ್ತದೆ. ತಲಾ 25 ಅಥವಾ 50 ಹಪ್ಪಳಗಳ ಕಟ್ಟು ಮಾಡಿ ಬಾಳೆನಾರಿನ ಹಗ್ಗದಿಂದ ಕಟ್ಟಿಟ್ಟು ಬೇಕಿದ್ದರೆ ಇಡಿಯ ಕಟ್ಟುಗಳನ್ನೇ ಇನ್ನೊಂದು ದಿನ ಬಿಸಿಲಲ್ಲಿ ಒಣಗಿಸಿಟ್ಟರೆ ಸೈ ಆಮೇಲೆ ಡಬ್ಬದಲ್ಲಿ ತುಂಬಿಸಿಡಬಹುದು. ರಜೆ ಮುಗಿಸಿ ವಾಪಸಾಗುವ ಅಣ್ಣಂದಿರ ಅಕ್ಕಂದಿರ ಸೂಟ್‌ಕೇಸ್‌ಗಳಲ್ಲಿ ಈ ಕಟ್ಟುಗಳು ಅಮ್ಮನ ಪ್ರೀತಿಯ ಸಿಂಚನದೊಂದಿಗೆ ಪ್ಯಾಕ್‌ ಆಗುತ್ತವೆ. ನಮ್ಮ ಮನೆಯಂಗಳದಿ ಒಣಗಿದಾ ಹಪ್ಪಳ ದೂರದೂರುಗಳಿಗೆ ಪಯಣಿಸಿ ಅಲ್ಲಿ ಇಷ್ಟಮಿತ್ರರಿಗೆಲ್ಲ ಇಷ್ಟವಾಗುತ್ತದೆ. ಬಟವಾಡೆಯಾಗಿ ಉಳಿದದ್ದು ನಮ್ಮನೆಯ ಉಗ್ರಾಣದಲ್ಲೇ ಮುಂದೆ ಮಳೆಗಾಲದಲ್ಲಿ ಧೋ ಎಂದು ಮಳೆಸುರಿಯುವಾಗ ಹಿತಕರವಾದ ತಿನಿಸಾಗುವುದಕ್ಕಾಗಿ ದಾಸ್ತಾನಾಗುತ್ತದೆ.

ಪಶ್ಚಿಮಘಟ್ಟಗಳ ತಪ್ಪಲಲ್ಲಿ ಹುಟ್ಟಿಬೆಳೆದ ನಮಗೆ ಹಪ್ಪಳವೆಂದರೆ ಹಲಸಿನಹಪ್ಪಳವೊಂದೇ ಗೊತ್ತು. ಉದ್ದಿನಹಪ್ಪಳ, ಅವಲಕ್ಕಿಹಪ್ಪಳ, ಗೆಣಸಿನಹಪ್ಪಳ ಇತ್ಯಾದಿಯೆಲ್ಲ ಏನಿದ್ದರೂ ‘ಘಾಟಿ’ ಎಂಬ ಭಾವನೆ. ಮಳೆಗಾಲದಲ್ಲಂತೂ ಗಂಜಿಯೂಟದ ಜತೆಗೆ ಹಪ್ಪಳ ಬೇಕು, ಸಂಜೆ ಶಾಲೆಯಿಂದ ಬಂದು ಮಳೆ ನೋಡುತ್ತ ಕುರುಕಲು ತಿಂಡಿ ತಿನ್ನುತ್ತ ಕೂರುವ ದಿವ್ಯಾನುಭವಕ್ಕೂ ಹಪ್ಪಳವೇ ಬೇಕು. ಅದೂ ಎಣ್ಣೆಯಲ್ಲಿ ಕರಿದದ್ದಕ್ಕಿಂತ ಕೆಂಡದ ಮೇಲೆ ಸುಟ್ಟು ಒಂಚೂರು ಕೊಬ್ರಿಎಣ್ಣೆ ಸವರಿದ್ದಾದರೆ ಅದರ ಘಮವೇ ಬೇರೆ.

ಇನ್ನೂ ಒಂದು ವೈವಿಧ್ಯ ಬೇಕಿದ್ದರೆ ಹತ್ತಿಪ್ಪತ್ತು ಸುಟ್ಟಹಪ್ಪಳಗಳನ್ನು ಕುಟ್ಟಿ ಪುಡಿಮಾಡಿ ತೆಂಗಿನತುರಿ ಬೆಲ್ಲದಹುಡಿ ಮತ್ತು ಒಂಚೂರು ತುಪ್ಪ ಸಹ ಸೇರಿಸಿ ತಿನ್ನುವ ಸೊಬಗು! ಹಾಗೆಯೇ ನಮ್ಮಲ್ಲಿ ಶುಕ್ರವಾರದ ಒಪ್ಪೊತ್ತಿನೂಟ ಉಪವಾಸದ ಫಲಾಹಾರಕ್ಕೂ ಹಲಸಿನ ಹಪ್ಪಳ, ಮದುವೆ-ಮುಂಜಿ ಮಂಗಳಕಾರ್ಯಗಳ ಭೋಜನದಲ್ಲೂ ಹಲಸಿನ ಹಪ್ಪಳ.

ಹಲಸಿನ ಹಪ್ಪಳದ ಬಗ್ಗೆ ನಮ್ಮ ಅಭಿಮಾನತೀವ್ರತೆಯ ಸಾರಾಂಶ ಹೇಳಬೇಕೆಂದರೆ - ಒಬ್ಬಂಟಿಯಾಗಿರಲಿ ಮನೆಮಂದಿಯೆಲ್ಲ ಸೇರಿರಲಿ, ಹಳ್ಳಿಯಲ್ಲಿರಲಿ ದಿಲ್ಲಿಯಲ್ಲಿರಲಿ, ಬಿಸಿಲಿರಲಿ ಮಳೆಯಿರಲಿ, ಊಟದ ಮೊದಲಿರಲಿ ಊಟದ ಜತೆಗಿರಲಿ ಊಟವಾದ ನಂತರವಿರಲಿ, ಬೆಳಗ್ಗೆಯಿರಲಿ ಮಧ್ಯಾಹ್ನವಿರಲಿ ಸಂಜೆಯಿರಲಿ... ಸುಟ್ಟ/ಕರಿದ ಹಲಸಿನಹಪ್ಪಳಕ್ಕೆ ಸಾಟಿಯಾದ ತಿನಿಸು ಬೇರಾವುದೂ ಸಿಗದು!

*

ಈಗ 2007ರ ಪ್ರಸ್ತುತ ಪ್ರಪಂಚಕ್ಕೆ ಬರೋಣ. ಮೂವತ್ತು ವರ್ಷಗಳಲ್ಲಿ ಎಲ್ಲಕಡೆಯಂತೆ ನಮ್ಮ ಹಳ್ಳಿಯಲ್ಲೂ ಬಹಳಷ್ಟು ಬದಲಾವಣೆಗಳಾಗಿವೆ. ಅವಿಭಕ್ತ ಕುಟುಂಬಗಳೀಗ ಇಲ್ಲ. ಹಳ್ಳಿಯ ದೊಡ್ಡದೊಡ್ಡ ಮನೆಗಳಲ್ಲೂ ಇರುವವರ ಸಂಖ್ಯೆ ತಲಾ ಎರಡು ಅಥವಾ ಮತ್ತೊಂದು ಅಷ್ಟೆ. ಸಾವಿರಗಟ್ಟಲೆ ಹಲಸಿನಹಪ್ಪಳ ತಯಾರಿಸುವ ಕಷ್ಟಕರ ಕೆಲಸ ಮಾಡಲು ಬೇಕಷ್ಟು ಕರಗಳಿಲ್ಲ.

ಕೈಗಾರಿಕಾಕ್ರಾಂತಿ ಹಪ್ಪಳ ಕ್ಷೇತ್ರದಲ್ಲೂ ಆಗಿದ್ದು ನಮ್ಮೂರಲ್ಲೇ ಒಂದು ಹಪ್ಪಳಕಾರ್ಖಾನೆ ಸ್ಥಾಪನೆಯಾಗಿದೆ. ಅಲ್ಲಿ ಮಳೆಗಾಲದಲ್ಲೂ ಹಪ್ಪಳ ತಯಾರಿಸಬಹುದಾದ್ದರಿಂದ ತೋಟದಲ್ಲಿ ಬೆಳೆದ ಹಲಸನ್ನು ಕಾರ್ಖಾನೆಗೆ ಕೊಟ್ಟು ರೆಡಿಮೇಡ್‌ ಹಪ್ಪಳ ತರುವ ಸುಲಭಸೌಕರ್ಯ ಲಭ್ಯವಿದೆ. ಜನಜೀವನದ ಬೇರೆಲ್ಲ ಮಜಲುಗಳೂ ವಾಣಿಜ್ಯಮಯವಾಗಿರುವಾಗ ಹಪ್ಪಳ ಮಾತ್ರ ಬಾಕಿಯುಳಿದೀತೇ?

ಹೌದು, ಕಾಲ ಬದಲಾದಂತೆ ಎಲ್ಲವೂ ಬದಲಾಗುತ್ತದೆ. ಹಲಸಿನ ಹಪ್ಪಳದ ವೈಭವದ ಬಗ್ಗೆ ನನ್ನ ಈ ಬರಹದಂತೆಯೇ ಅಂತರ್ಜಾಲದಲ್ಲಿ ಬ್ಲಾಗುಗಳಲ್ಲಿ ಅಲ್ಲಿ ಇಲ್ಲಿ ಉಲ್ಲೇಖಗಳು ಇರುವಷ್ಟು ಹಲಸಿನಹಪ್ಪಳ ವಿಶ್ವವ್ಯಾಪಿಯಾಗಿದೆ. ಗೂಗಲ್‌ನಲ್ಲಿ jackfruit papad ಎಂದು ಸರ್ಚಿಸಿದರೆ ಕೆನಡಾದೇಶದಲ್ಲಿ ಕಳೆದವರ್ಷ ಆಹಾರತಂತ್ರಜ್ಞಾನಕ್ಷೇತ್ರದ ವಿಚಾರಸಂಕಿರಣವೊಂದರಲ್ಲಿ ಹಲಸಿನಹಪ್ಪಳ ಕುರಿತ ಉಪನ್ಯಾಸ ಸಹ ಸೇರಿತ್ತೆಂಬ ಸಂಗತಿ ತಿಳಿಯುತ್ತದೆ. ಆ ಮಟ್ಟಿಗೆ ಹಲಸಿನಹಪ್ಪಳದ ಘಮ ಎಲ್ಲೆಲ್ಲೂ ಹರಡಿದೆ. ಆದರೆ ವಿಷಾದದ ಸಂಗತಿಯೆಂದರೆ ಆ ಘಮದಲ್ಲೀಗ ಕಮರ್ಷಿಯಲ್‌ ಕಮಟು ಗಾಢವಾಗಿರುತ್ತದೆ. ನಮ್ಮ ಮನೆಯಂಗಳದಿ ನಾವೇ ಒಣಗಿಸಿದ ಹಪ್ಪಳಕ್ಕಿರುವ ಆಪ್ಯಾಯಮಾನವಾದ ‘ಮಣ್ಣಿನ ವಾಸನೆ’ ಮಾತ್ರ ಹೇಳಹೆಸರಿಲ್ಲವಾಗಿದೆ.

- ಠ್ಟಜಿಡಚಠಿಜಠಚ್ಜಟಠಜಜಿಃಢಚಜಟಟ.್ಚಟಞ

ಚಿತ್ರಸಂಪುಟ : ಹಲಸಿನ ಹಪ್ಪಳ ವಿಚಿತ್ರಾನ್ನ ವಿಶೇಷಾಂಕದ ಜತೆ ಪ್ರಕಟಿಸಲು ಹಪ್ಪಳದ ಚಿತ್ರಗಳ ಹುಡುಕಾಟದಲ್ಲಿದ್ದಾಗ ನನಗೆ ನೆರವಾದವರು ಲೀಡ್ಸ್‌(ಯುಕೆ)ದಲ್ಲಿರುವ ನಮ್ಮಣ್ಣ ನರಹರಿ ಜೋಶಿ. ಮನೆಯಲ್ಲಿದ್ದ ಹಪ್ಪಳದ ಕಟ್ಟನ್ನು ಬಿಡಿಸಿ ಹಪ್ಪಳ ಸುಟ್ಟು/ಕರಿದು/ಮೈಕ್ರೊವೇವಿಸಿ ವಿವಿಧ ಚಿತ್ರಗಳನ್ನು ಅವರು ನನಗೆ ಕಳಿಸಿದ್ದಾರೆ. ಆ ಚಿತ್ರಸಂಪುಟ ಇಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X