ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಪ್ಪಳವೆಂದರೆ ಹಲಸಿನ ಹಪ್ಪಳವಯ್ಯಾ...!

By Staff
|
Google Oneindia Kannada News


Jackfruit Papad - A Coastal Karnataka Delicacy ಸ್ವಚ್ಛಗೊಳಿಸಿದ ತೊಳೆಗಳನ್ನು ದೊಡ್ಡ ಹಂಡೆಯಲ್ಲಿ ಕುದಿಯುತ್ತಿರುವ ನೀರಿಗೆ ಹಾಕಿ ಸ್ವಲ್ಪ ಉಪ್ಪನ್ನೂ ಸೇರಿಸಿ ಚೆನ್ನಾಗಿ ಬೇಯಿಸುವುದು, ಬೆಂದ ನಂತರ ನೀರನ್ನು ಬಸಿದು ತೊಳೆಗಳನ್ನಷ್ಟೇ ಇನ್ನೊಂದು ದೊಡ್ಡಪಾತ್ರೆಗೆ ವರ್ಗಾಯಿಸಿ ಅಚ್ಚಖಾರದ ಪುಡಿ ಸೇರಿಸಿ ಕಲಸುವುದು ಮತ್ತು ಬಿಸಿಬಿಸಿಯಾಗಿರುವಾಗಲೇ ಕಡೆಯುವಕಲ್ಲಿನಲ್ಲಿ ರುಬ್ಬಿ ಹಿಟ್ಟುಮಾಡುವುದು - ಇವೆಲ್ಲ ನಮ್ಮ ತಾಯಿಯವರ ಡಿಪಾರ್ಟ್‌ಮೆಂಟ್‌. ರುಬ್ಬಿದ ಹಿಟ್ಟನ್ನು ಒಂದು ದೊಡ್ಡಪಾತ್ರೆಯಲ್ಲಿಟ್ಟರೆ ನಾಳೆಬೆಳಿಗ್ಗೆಗೆ ಅದು ಚೆನ್ನಾಗಿ ಹುಳಿಗಟ್ಟಿದ್ದಾಗುತ್ತದೆ/ಆಗಬೇಕು.

ಹಪ್ಪಳತಯಾರಿಯಲ್ಲಿನ ಇನ್ನೊಂದು ದೊಡ್ಡ ಕೆಲಸ - ತೋಟದಿಂದ ಬಾಳೆ ಎಲೆಗಳ ತುಂಡುಗಳನ್ನು (ಒಂದೊಂದೂ ಸುಮಾರು ನೂರಿಂಚು ಚದರ) ಮಾಡಿ ತರುವುದು. ಸಾವಿರದಷ್ಟು ಹಪ್ಪಳ ಹಾಕಲು ಸಾವಿರಕ್ಕಿಂತ ಸ್ವಲ್ಪ ಹೆಚ್ಚೇ ಬಾಳೆಲೆ ತುಂಡುಗಳನ್ನು ಮಾಡಿಟ್ಟುಕೊಳ್ಳಬೇಕು. ಸರಿಯಾಗಿ ಲೆಕ್ಕವಿಡೋದ್ರಲ್ಲಿ ಎತ್ತಿದಕೈ ಎಂದು ಸ್ವಲ್ಪ ಹೊಗಳಿ ನನ್ನನ್ನು ಆ ಕೆಲಸಕ್ಕೆ ಕರಕೊಂಡು ಹೋಗುವ ಅಕ್ಕ ತಾನು ಇತ್ತೀಚೆಗೆ ನೋಡಿದ ಕನ್ನಡ ಸಿನೆಮಾದ ಕಥೆ ಹೇಳುತ್ತೇನೆ ಎಂಬ ಪ್ರಲೋಭನೆಯನ್ನೂ ಒಡ್ಡುತ್ತಾಳೆ. ಅಂತೂ ಬೇಕಷ್ಟು ಸೊಳ್ಳೆಕಚ್ಚಿಸಿಕೊಂಡಾದರೂ ಕತ್ತಲಾಗುವುದರೊಳಗೆ ಬಾಳೆಲೆತುಂಡುಗಳನ್ನು ಬುಟ್ಟಿಯಲ್ಲಿ ತುಂಬಿಸಿತಂದಿದ್ದೇವೆ. ಅವನ್ನೆಲ್ಲ ಬಟ್ಟೆಯಿಂದ ಒರೆಸಿ ಸ್ವಚ್ಛಮಾಡಿ ಕಟ್ಟುಗಳನ್ನಾಗಿರಿಸುವುದರಲ್ಲಿ ಮನೆಯವರೆಲ್ಲ ನೆರವಾಗಿದ್ದಾರೆ.

ನಾಳೆ ಬೆಳಿಗ್ಗೆ ಐದೂವರೆ-ಆರಕ್ಕೆಲ್ಲ ಹಪ್ಪಳ ಹಾಕುವ ಕೆಲಸ ಶುರು ಆಗಲಿದೆ. ಏಳುವರೆಗೆ ಸೂರ್ಯಭಗವಾನ್‌ ಕಣ್ಬಿಟ್ಟಾಗ ಅವನಿಗೆ ಅಂಗಳದಲ್ಲಿ ಹಪ್ಪಳಕಾಣುವಂತಿರಬೇಕು ಎಂಬ ಗುರಿ. ರುಬ್ಬಿಟ್ಟಿರುವ ಹಿಟ್ಟಿಗೆ ಒಂದೆರಡು ಮುಷ್ಠಿಯಷ್ಟು ಎಳ್ಳು ಅಥವಾ ಓಮಗಳ ಪೈಕಿ ಒಂದನ್ನು ಚಿಮುಕಿಸಿ ಅದನ್ನು ಇನ್ನೊಮ್ಮೆ ಚೆನ್ನಾಗಿ ಕಲಸುತ್ತಾರೆ ನಮ್ಮಮ್ಮ.

ಮನೆಯ ಹೊರಗಿನ ಜಗಲಿಯ ಮಧ್ಯಭಾಗದಲ್ಲಿ ಹಿಟ್ಟಿನಪಾತ್ರೆ. ಹತ್ತಿರದಲ್ಲೇ ಬಾಳೆಲೆತುಂಡುಗಳ ಬುಟ್ಟಿ. ಆಚೆಗೊಂದು ಈಚೆಗೊಂದು ಮಣೆಜೋಡಿಯಾಂದಿಗೆ ಹಪ್ಪಳ ಒತ್ತಿಕೊಡಲು ಇಬ್ಬರು ಅಣ್ಣಂದಿರು. ಅಂಗಳದಲ್ಲಿ ಹಪ್ಪಳ ಒಣಗಿಸಲು ತೆಂಗಿನಮಡಲುಗಳಿಂದ ಮಾಡಿದ ಚಾಪೆಗಳನ್ನು (ಅವನ್ನು ಇಂಥ ಉಪಯೋಗಗಳಿಗೆಂದೇ ಸ್ವತಹ ನಮ್ಮ ತಂದೆಯವರೇ ಹೆಣೆದಿಟ್ಟಿರುವುದು) ಹಾಸುತ್ತೇವೆ.

ಒಂದೊಂದೇ ಬಾಳೆಲೆತುಂಡಿನ ಮೇಲೆ (ಬಾಳೆಲೆಯ ಉಲ್ಟಾ ಸೈಡು. ಊಟ ಮಾಡುವ ಸೈಡ್‌ ಅಲ್ಲ. ಒಣಗಿದ ನಂತರ ಬಾಳೆಲೆಯಿಂದ ಹಪ್ಪಳವನ್ನು ಪ್ರತ್ಯೇಕಿಸಲು ಸುಲಭವಾಗುತ್ತದೆಂದು ಈ ಉಪಾಯ) ಹಿಟ್ಟಿನ ಉಂಡೆ ಇಟ್ಟುಕೊಡುತ್ತಾರೆ ಅಮ್ಮ. ಅದರ ಮೇಲೆ ಪ್ಲಾಸ್ಟಿಕ್‌ ಹಾಳೆಯಿಟ್ಟು ಎರಡು ಮಣೆಗಳ ನಡುವೆ ಅಪ್ಪಚ್ಚಿ ಮಾಡಿದರೆ ಬಾಳೆಲೆ ಮೇಲೆ ವೃತ್ತಾಕಾರದ ಹಪ್ಪಳ ಮೂಡುತ್ತದೆ. ಪ್ಲಾಸ್ಟಿಕ್‌ ಸರಿಸಿ ತೆಗೆದಾಗ ಹಪ್ಪಳ ರೆಡಿ.

ಹಪ್ಪಳಸಹಿತ ಬಾಳೆಲೆ ತುಂಡುಗಳನ್ನು ಒಂದೊಂದು ಕೈಯಲ್ಲಿ ಎರಡೆರಡು ಮೂರ್ಮೂರು ಸೇರಿಸಿ ಅಂಗಳಕ್ಕೆ ಒಯ್ಯುವ ಕೆಲಸವನ್ನು ಉತ್ಸಾಹದಿಂದ ಮಾಡುತ್ತಾರೆ ಪುಟ್ಟಮಕ್ಕಳು. ಚಾಪೆಗಳ ಮೇಲೆ ಅವನ್ನು ಅಂದವಾಗಿ ಜೋಡಿಸಿ(ಆಗಲೂ ಎಣಿಸಿ)ಡುವ ಕೆಲಸ ಮತ್ತೊಮ್ಮೆ ಲೆಕ್ಕದಲ್ಲಿ ಗಟ್ಟಿಗನಾದ ನನ್ನದು.

ಒತ್ತಿದ ಹಪ್ಪಳವನ್ನು ಅಂಗಳಕ್ಕೆ ಸಾಗಿಸುವಾಗ ಕೆಲವೊಮ್ಮೆ ಆಯತಪ್ಪಿ ಕೈಯಿಂದ ಕೆಳಕ್ಕೆ ನೆಲದ ಮೇಲೆ ಧೊಪ್ಪನೆ ಬಿತ್ತಲ್ಲಾ... ಆಗುವುದೂ ಇದೆ. ಹಾಗೆ ಬಿದ್ದು ಸ್ವಲ್ಪಸ್ವಲ್ಪ ಮಣ್ಣಾದ ಹಪ್ಪಳಗಳನ್ನು ಪ್ರತ್ಯೇಕವಾಗಿ ಒಣಗಿಸಿದರೆ ಆಮೇಲೆ ಅವು ನಮ್ಮನೆಯ ನಾಯಿಗೆ ಅರ್ಪಣೆಯಾಗುತ್ತವೆ. ಹಾಗೆಯೇ ಹಪ್ಪಳ ಒಣಗುತ್ತಿರುವಾಗ ಕಾಗೆ ಬಂದು ಹೊಂಚುಹಾಕುವುದು, ಕೆಲವೊಮ್ಮೆ ಎತ್ತಿಕೊಂಡುಹೋಗುವುದು, ಕಾಗೆಯನ್ನು ಅಟ್ಟಿಸುವ ಭರದಲ್ಲಿ ನಮ್ಮನೆಯ ನಾಯಿ ಹಪ್ಪಳಗಳನ್ನು ತುಳಿಯುತ್ತ ಓಡುವುದು ಇವೇ ಮುಂತಾದ ಚಿಕ್ಕಪುಟ್ಟ ಅವಘಡಗಳು ಆಗುವುದಿದೆ.

ಹಾಗೆ ಭ್ರಷ್ಟವಾದ ಹಪ್ಪಳಗಳೆಲ್ಲ ವೇಸ್ಟ್‌ ಖಾತೆಗೆ ಸೇರುತ್ತವೆ. ಅಂದಹಾಗೆ ಗಿಣಿಕಚ್ಚಿದ ಪೇರಳೆಯಾದರೆ ಅತಿರುಚಿಯಾಗಿರುತ್ತದೆ ಎಂದು ಸವಿಯುವ ನಾವು ಕಾಗೆ ಮುಟ್ಟಿದ ಹಪ್ಪಳವನ್ನು ದೋಷಪೂರಿತವೆಂದು ಪರಿಗಣಿಸುವುದು ತಾರತಮ್ಯದ ಒಂದು ನಮೂನೆಯಲ್ಲವೆ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X