ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಂ ಲಂಘಯತೆ ಗಿರಿಂ!

By ಶ್ರೀವತ್ಸ ಜೋಶಿ
|
Google Oneindia Kannada News

The Pun special in Vichitranna!
ನಿಮಗೆಲ್ಲ ಗೊತ್ತೇ ಇರುವಂತೆ ವಿಚಿತ್ರಾನ್ನ ಭಕ್ಷ್ಯದ ಒಂದು ಅತಿಪ್ರಮುಖ ಇನ್‌ಗ್ರೇಡಿಯೆಂಟ್‌ ಎಂದರೆ - ಶಬ್ದಸರಸ, ಶ್ಲೇಷೆ ಅಥವಾ 'ಪನ್‌'. ಅಕ್ಷರಗಳನ್ನು ತಿಪ್ಪರಲಾಗಹಾಕಿಸಿ, ಪದಗಳನ್ನು ಹಿಗ್ಗಾಮುಗ್ಗಾ ಟ್ವಿಸ್ಟಿಸಿ, ಬೇರೆಬೇರೆ ಭಾಷೆಗಳ ಮಿಶ್ರತಳಿ ಶಬ್ದಗಳನ್ನು ವ್ಯುತ್ಪತ್ತಿಸಿ ಒಗ್ಗರಣೆ ಹಾಕಿದರೇ ಅದು ವಿಚಿತ್ರಾನ್ನ ಎನಿಸಿಕೊಳ್ಳುವುದೇನೊ ಅನ್ನುವಷ್ಟು 'ಪನ್‌' ಇಲ್ಲಿ ಬಳಕೆಯಾಗುತ್ತದೆ. ಬಹುತೇಕವಾಗಿ ಇದು ಓದುಗರ ಮನಸ್ಸಿಗೆ ಕಚಗುಳಿಯಿಟ್ಟಂತಾಗಿ ನಕ್ಕುನಲಿಸಿ ಮನಸ್ಸಂತೋಷಪಡಿಸಿದರೆ ಎಲ್ಲೋ ಕೆಲವರಿಗೆ ಕಿರಿಕಿರಿಯೆನಿಸುವುದೂ ಇದೆ; ಎಷ್ಟೆಂದರೂ 'ಲೋಕೊ ವಿಭಿನ್ನ ರುಚಿಃ' ತಾನೆ?

ಅಂದಮಾತ್ರಕ್ಕೆ ಅಧಿಕಸ್ಯ ಅಧಿಕಂ ಫಲಂ ಎಂದುಕೊಂಡು ಕೇವಲ ಪನ್‌ಗಳನ್ನೇ ಸುರಿವ ಪನ್‌ನೀರುದಾನಿಯಾಗೋದು ಒಳ್ಳೇದಲ್ಲ, ಅತಿ ಸರ್ವತ್ರ ವರ್ಜ್ಯಯೇತ್‌ ಆದ್ದರಿಂದ ಯಾವುದೇ ಬರವಣಿಗೆಯಾಗಲೀ ಅಥವಾ ಒಂದು ಭಾಷಣವೇ ಆಗಲೀ ವಿಷಯ-ವಿಚಾರಗಳಿಂದ ಸಂಪನ್ನವಾಗಿರುವುದು ಮುಖ್ಯ. ಆಮೇಲೆ ಹಿತಮಿತವಾಗಿ some punನವಾಗಿರಬೇಕು, ಅಷ್ಟೆ.

ವಿಚಿತ್ರಾನ್ನದ ಒಂದು ಸಂಚಿಕೆಯನ್ನು ಬರೀ ಪನ್‌ಗಳಿಂದಲೇ ಸಿಂಗರಿಸಬೇಕೆಂದು ಓದುಗಮಿತ್ರರಿಂದ ಕೋರಿಕೆಪತ್ರಗಳು ಬರುತ್ತಿರುತ್ತವೆ. ಸರಿ, ಇವತ್ತು ಅಂಥ ಪ್ರಯೋಗವೊಂದಕ್ಕೆ ಕಾಲ ಒದಗಿಬಂದಿದೆ - ಇವತ್ತು ಸರ್ವಂ ಪನ್‌ ಮಯಂ! ಪನ್‌ ವಿಶೇಷಾಂಕದಲ್ಲೂ ತುಸು ವಿಭಿನ್ನ ವೈಶಿಷ್ಟ್ಯವಿರಲೆಂದು ಎಲ್ಲ ಪನ್‌ಗಳನ್ನೂ ಭಗವಂತನಿಗೆ ನೈವೇದ್ಯ ಮಾಡಿ ಪ್ರಭು ಕೇ ನಾಮ್‌ ಅರ್ಪಿಸುತ್ತಿದ್ದೇನೆ. ಇವತ್ತಿನ ಎಲ್ಲ ಪನ್‌ಗಳೂ 'ದೇವ'ರಿಗೆ ಅಥವಾ'ದೇವ'ಲೋಕಕ್ಕೆ ಸಂಬಂಧಪಟ್ಟವು. ಪನ್‌ಗಳಿದ್ಯಾತಕೋ ಕಾವೇರಿ ರಂಗನ ನೋಡದ... :-)

ಮೊದಲ್‌ 'ಪನ್‌'ದಿಪೆ ನಿನಗೆ ಗಣನಾಥಾ... ಶುರುವಿಗೆ ನಮ್ಮೆಲ್ಲರ ನೆಚ್ಚಿನ ಗಣಪನ (ವಿಚಿತ್ರಾನ್ನ ಅಂಕಣದ ಆರಾಧ್ಯದೈವ) ಕುರಿತಾದ ಒಂದು ಪನ್‌. ಖ್ಯಾತ ಹನಿಗವನ ಕವಿ ಎಚ್‌.ಡುಂಡಿರಾಜ್‌ ತನ್ನ ಅಂಕಣ ಮಾತು ಕ(ವಿ)ತೆಯಲ್ಲಿ, ಸಾರ್ವಜನಿಕ ಗಣೇಶೋತ್ಸವಗಳಲ್ಲಿ ವಿವಿಧ ಸ್ವರೂಪಗಳಲ್ಲಿ ಕಾಣಸಿಗುವ ಗಣಪನ ಬಗ್ಗೆ ಬರೆಯುತ್ತ ''ಗನ್‌ ಹಿಡಿದ ಸೈನಿಕನಂತಿರುವ ವಿಘ್ನೕಶ್ವರ ನಿಜವಾಗಿಯೂ ಗನ್‌ಪತಿಯೇ ಸೈ'' ಎಂದಿದ್ದರು. ಹೌದಲ್ಲ!? ಗಣಪ 'ಗನ್‌'ಪತಿಯಾಗಿರುವುದು ಸಹಜವೇ. ಹೇಗಿದ್ದರೂ ಆತ 'ಗನ್‌'ಗಾಧರನ ಸುಪುತ್ರ!

ಗನ್‌ಪತಿಯ ಫನ್‌ ಸ್ವಭಾವ ಚೆನ್ನಾಗಿ ಅರ್ಥವಾಗಬೇಕಾದರೆ ಅವನನ್ನು ಸ್ತುತಿಸುವ ಶ್ಲೋಕದ ಈ ರೂಪವನ್ನು ಓದಬೇಕು.

ಗಜಾನನಂ ಭೂ
'ತಗಣಾ'ದಿ ಸೇವಿತಂ
ಕಾಫಿಯ ಚೊಂಬು ಫಲಾಹಾರ ಭಕ್ಷಿತಂ
ಉಮಾಸುತಂ show
'ಕವಿ ನಾಶ' ಕಾರಣಂ
ನಮಾಮಿ ವಿಘ್ನೕಶ್ವರ ಪಾದ 'ಪನ್‌'ಕಜಂ

ಗಣಪ ಬರೆದ ಭಗವದ್ಗೀತೆಯ (ಶ್ರೀಕೃಷ್ಣ ಪರಮಾತ್ಮನು ಅರ್ಜುನನಿಗೆ ಬೋಧಿಸಿದುದನ್ನು, ವ್ಯಾಸಮಹರ್ಷಿ ಡಿಕ್ಟೇಷನ್‌ ಕೊಟ್ಟು ಗಣಪನಿಂದ ಬರೆಸಿದ್ದು) ಸ್ತುತಿಪಾಠದಲ್ಲಿ ಮೂಕಂ ಕರೋತಿ ವಾಚಾಲಂ... ಎಂಬ ಶ್ಲೋಕ ಬರುತ್ತದೆ. ಅದರ ಎರಡನೆ ಸಾಲಿನಲ್ಲೇ ಅಧ್ಭುತವಾಗಿ ಪನ್‌ ಇರುವುದರಿಂದ ಅದನ್ನು ಇವತ್ತಿನ ಶೀರ್ಷಿಕೆಯಾಗಿ ಆರಿಸಿಕೊಂಡದ್ದಾಗಿದೆ.

ಸೆನ್ಸ್‌ ಆಫ್‌ ಹ್ಯೂಮರ್‌ ಸಿಕ್ಕಾಪಟ್ಟೆ ಇರುವ ಗಣಪನೇನೋ ಈ ರೀತಿಯ ಪನ್‌ಗಳನ್ನು ಮೆಚ್ಚಿಕೊಳ್ಳಬಹುದು. ಆದರೆ ದೇವಲೋಕದಲ್ಲಿನ ಇತರ ದೇವಾಧಿದೇವತೆಗಳದು ಪನ್‌ ಬಗ್ಗೆ ಏನು ನಿಲುವು, ಧೋರಣೆಗಳು ಎಂದು ತಿಳಿದುಕೊಳ್ಳುವುದು ಕ್ಷೇಮಕರವಲ್ಲವೇ? ನನಗೆ ತಿಳಿದ ಪ್ರಕಾರ ಪಾಂಡುರಂಗ ವಿಠಲನಿಗೆ ಪನ್‌ ಖಂಡಿತವಾಗಿಯೂ ಇಷ್ಟವಾಗುತ್ತದೆ. 'ಪನ್‌'ಢರಾಪುರದಲ್ಲಿ ಅವನು ನೆಲೆಸಿರುವುದೇ ಇದಕ್ಕೆ ಸಾಕ್ಷಿ! ಇನ್ನು, ಸತ್ಯನಾರಾಯಣನಂತೂ 'ಪನ್‌'ನಗ ಶಯನ ಪಾವನ ಚರಣ. ಆದ್ದರಿಂದ ಅವನಿಗೂ ಪನ್‌ ಚಲ್ತಾ ಹೈ. ಕುಬೇರನ ವಿಷಯಕ್ಕೆ ಬಂದರೆ 'ಕುಬೇರನಿಗೇನಿರಬೇಕು' ಎಂಬ ಜನಜನಿತ ಗತಪ್ರತ್ಯಾಗತ ಪನ್‌ ಅವನ ಹೆಸರಿಗೇ ಇರುವುದರಿಂದ ಪನ್‌ ಬಗ್ಗೆ ಆತ ಖಂಡಿತ ಜಿಪುಣನಲ್ಲ.

ಹೀಗೆ ದೇವತೆಗಳಿಗೆಲ್ಲ ಪನ್‌ ಇಷ್ಟವಿದೆಯಾದ್ದರಿಂದ ಈಗ ದೇವಲೋಕದ ಪನ್‌ ಇನ್ಸಿಡೆಂಟ್‌ಗಳ ಪೈಕಿ ಕೆಲವನ್ನು ಅವಲೋಕಿಸೋಣವೇ? ಇದು ಹರಿಕಥಾಶ್ರವಣವೇನೂ ಅಲ್ಲ, ಪನ್‌ ಲಹರಿಯನ್ನು ಮನಬಂದಂತೆ ಹರಿಯಲುಬಿಟ್ಟ ಕಥಾನಕಗಳ ಶ್ರವಣ!

ದೇವರ್ಷಿ ನಾರದ ಒಂದು ಹಸುವನ್ನು ಸಾಕಿದ್ದನಂತೆ. ತ್ರಿಲೋಕಸಂಚಾರದ ಟ್ರಾವೆಲಿಂಗ್‌ನಲ್ಲೇ ಆತ ಯಾವಾಗಲೂ ಬ್ಯುಸಿಯಾದ್ದರಿಂದ ಆ ಹಸುವಿಗೆ ಮೇವು ಒದಗಿಸುವುದರ ಬಗ್ಗೆ ನಿಗಾ ವಹಿಸುವುದು ಅವನಿಗೆ ಸಾಧ್ಯವಾಗುವುದಿಲ್ಲ. ಹುಟ್ಟಿಸಿದವ ಹುಲ್ಲು ಮೇಯಿಸದೇ ಇರುತ್ತಾನೆಯೇ ಎಂದುಕೊಂಡು ಒಂಥರಾ ಅಲಕ್ಷ್ಯ ಮಾಡಿದ್ದೂ ಇರಬಹುದು. ಕೊನೆಗೂ ಆ ಹಸು ಹಸಿವನ್ನು ತಾಳಲಾರದೆ ಆಕ್ರಂದಿಸತೊಡಗಿತು. ಸ್ವರ್ಗವಾಣಿಯ ಪತ್ರಕರ್ತರು ಜಾಗ್ರತರಾಗಿ 'ಮೇನಕಾ'ದಿ ಪ್ರಾಣಿದಯಾಸಂಘದವರಿಗೂ ಗೊತ್ತಾಗಲೆಂದು ಮುಖಪುಟದಲ್ಲೇ ದೊಡ್ಡ ಅಕ್ಷರಗಳಲ್ಲಿ ತಲೆಬರಹ ಛಾಪಿಸಿದರು: 'ನಾರದನ ದನದ ರೋದನ'!

ಮಾರಿಕಾಂಬಾ (ಶಿರಸಿಯ ಮಾರಿಕಾಂಬಾ ದೇವಸ್ಥಾನ ತುಂಬ ಪ್ರಖ್ಯಾತವಾದುದು) ದೇವಿಯು ಇಷ್ಟಪಡುವ ಪನ್‌ ಒಂದಿದೆ. ಅದರ ರಸಾಸ್ವಾದನೆಯಾಗಬೇಕಾದರೆ ಸ್ವಲ್ಪ ಬಿಸ್ಕೇಟ್‌ ಹಾಕಬೇಕಾಗುತ್ತದೆ. ಬಿಸ್ಕೇಟಾಯಣದ ವಿಚಿತ್ರಾನ್ನದಲ್ಲಿ ತಿಳಿಸಲಾಗಿತ್ತಲ್ವೇ, ಪಾರ್ಲೆ-ಜಿ ಬಿಸ್ಕೇಟ್ಸ್‌ ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಮಾರಾಟವಾಗುವ ಬಿಸ್ಕೇಟ್ಸ್‌ ಎಂದು? ಓದುಗರೊಬ್ಬರು ಪ್ರತಿಕ್ರಿಯಿಸಿದ್ದರು - 'ಮಧುಮೇಹ ಕಾಯಿಲೆಯವರು ಪಾರ್ಲೆ-ಗ್ಲುಕೋಸ್‌ ಬಿಸ್ಕೇಟ್‌ ತಿನ್ನಬಾರದಲ್ಲ?' ಆಗಲೇ ಮಾರಿಕಾಂಬಾ ದೇವಿ ಕನಸಲ್ಲಿ ಕಾಣಿಸಿಕೊಂಡು ''ಮಧುಮೇಹವುಳ್ಳವರಿಗಾಗಿಯೇ ಬ್ರಿಟಾನಿಯಾ Marie ಬಿಸ್ಕೇಟ್‌ಗಳಿರುವುದು ಮತ್ತು ಅವರೆಲ್ಲ ಮಾರಿಯೇ ಗತಿಯೆಂದು ಮನ್ನಿಸು ತಪ್ಪೆಂದು ಮಕ್ಕಳು ನಾವು ಬಂದೆವು... ಹಾಡಬೇಕಾಗುವುದು'' ಎಂದು ಅಮ್ಮಣೆ (ಅಪ್ಪಣೆಯಲ್ಲ) ಕೊಟ್ಟದ್ದು. ಇದೀಗ ಬಂದಿರುವ ಹೊಸ ಡೌಟು ಎಂದರೆ, ನಾರಿ ಮುನಿದರೆ Marie ಬಿಸ್ಕೇಟ್‌ ಹಾಕಬಹುದೇ? ಎಂದು.

*

ರಾಮಾಯಣದಲ್ಲಿ ರಾಕ್‌-ಏಂಡ್‌-ರೋಲ್‌ ಎಪಿಸೋಡ್‌ ಒಂದಿದೆ ಗೊತ್ತೇ? ಅದು, ಗೌತಮ-ಅಹಲ್ಯೆಯರ ಕಥೆಯಲ್ಲಿ ಬರೋದು. ಅಪ್ರತಿಮ ಸುಂದರಿಯಾಗಿದ್ದ ಅಹಲ್ಯೆಯ ಮೇಲೆ ಇಂದ್ರನ ಕಣ್ಣು ಬಿದ್ದು, ಆತ ಗೌತಮ ಮುನಿಯ ವೇಷ ಧರಿಸಿ ಅಹಲ್ಯೆಯನ್ನು ತನ್ನವಳನ್ನಾಗಿಸುತ್ತಾನೆ. ಮುಗ್ಧೆಯಾದ ಅಹಲ್ಯೆ ಈ ಕಪಟವೇನೂ ಅರಿಯದೆ ಇಂದ್ರನನ್ನು ಸಂತೋಷಪಡಿಸುತ್ತಾಳೆ. ಆಮೇಲೆ ಅಸಲಿ ಗೌತಮ ಮುನಿ ಅಲ್ಲಿಗೆ ಬಂದಾಗ, ಇಂದ್ರನಿಗೂ ಅಹಲ್ಯೆಗೂ ತಾವು ಮಾಡಿದ ತಪ್ಪಿನ ಅರಿವಾಗುತ್ತದೆ. ಗೌತಮ ಮುನಿ ಇಬ್ಬರನ್ನೂ ಶಪಿಸುತ್ತಾನೆ. ವಾಲ್ಮೀಕಿ ರಾಮಾಯಣದಲ್ಲಿ ಅಹಲ್ಯೆಗೆ ಅನಿರ್ದಿಷ್ಟಾವಧಿ ತಪಗೈಯುವಂತೆ ಶಾಪವಿದ್ದರೆ, ತುಳಸೀದಾಸ ಬರೆದ ರಾಮಚರಿತಮಾನಸದಲ್ಲಿ ಅಹಲ್ಯೆಗೆ ಕಲ್ಲಾಗುವಂತೆ ಶಾಪ ಸಿಗುತ್ತದೆ. ಆದರೆ ನಿಜವಾಗಿ ನಡೆದದ್ದೇನೆಂದರೆ, ಇಂದ್ರನನ್ನೂ ಸೆಳೆಯುವಂಥ ಸೌಂದರ್ಯ ಅಹಲ್ಯೆಗೆ ಇದೆಯೆಂದು ಗೌತಮಮುನಿ ಹೆಮ್ಮೆಯಿಂದ ''ಅಹಲ್ಯೆ You Rock!! ಎಂದಾಗ ಶಿಲೆಯಾಗಿ ಹೋಗುತ್ತಾಳೆ ಅಹಲ್ಯೆ. ಮುಂದೆ ಶ್ರೀರಾಮ-ಲಕ್ಷ್ಮಣರು ಸೀತಾನ್ವೇಷಣೆಯ ವೇಳೆ ಗೌತಮಮುನಿಯ ಆಶ್ರಮದತ್ತ ಬರುವಾಗ ಶ್ರೀರಾಮನ ಪಾದ ಆ ಶಿಲೆಗೆ ತಾಗಿ ಶ್ರೀರಾಮ ''ಅಹಲ್ಯೆ, You roll!! '' ಎನ್ನುತ್ತಾನೆ; ಶಿಲೆಯಾಗಿದ್ದ ಅಹಲ್ಯೆ ಮತ್ತೆ ಸುಂದರಿಯಾಗುತ್ತಾಳೆ!

ತಮಿಳ್ನಾಡಿನಲ್ಲಿ ಸಿನೆಮಾತಾರೆಗಳಿಗೂ ದೇವಸ್ಥಾನಗಳನ್ನು ಕಟ್ಟಿ ಪೂಜಿಸುವ ಕ್ರೇಜಿ ಭಕ್ತರು ಇದ್ದಾರೆಂಬುದು ಗೊತ್ತಲ್ಲ? ಈರೀತಿ ತಮಿಳರಿಂದ ಪೂಜೆಗೊಳಗಾದ ದೇವಿ (ಶ್ರೀದೇವಿ ಅಲ್ಲ) ಯಾಬ್ಬಳು ದೇವಲೋಕದ ಮೀಟಿಂಗ್‌ಗಳನ್ನು ಇಲ್ಲಿಂದಲೇ ಅಟೆಂಡ್‌ ಮಾಡುತ್ತಾಳಂತೆ. ದೇವಲೋಕದ ಕಮಾನುಗಳಮೇಲೆ ಸ್ವಾಗತತೋರಣಗಳ ಮೇಲೆಲ್ಲ ಕೆತ್ತಿರುವ ಶ್ಲೋಕಗಳು ತಮಿಳ್‌ ಲಿಪಿಯಲ್ಲೇ ಇರಬೇಕೆಂದು ಪ್ರಸ್ತಾಪಿಸಿದ್ದಾಳಂತೆ. ಆಕೆಯ ಪ್ರಸ್ತಾಪ ಜ್ಯಾರಿಯಾಗದಾದರೂ ಒಂದೊಮ್ಮೆ ಆದರೆ, ಅಕ್ಷರಗಳಿಗೂ ಬರಗಾಲದ ತಮಿಳ್‌ ಲಿಪಿಯಲ್ಲಿ ಶ್ಲೋಕಗಳು ಹೇಗೆ ನರಳಬಹುದು ನೋಡಿ. 'ಸ'ಕಾರವನ್ನು 'ಚ'ಕಾರ ವಾಗಿ ಬರೆದರೆ ಆಕಾಶಾತ್ಪತಿತಂ ತೋಯಂ ಯಥಾ ಗಚ್ಛತಿ 'ಚಾ ಗರಂ' ಆಗಬಹುದು! ಚಾ ಮಾತ್ರವಲ್ಲ, ಕಾಪಿ ಕುಡಿವ ತಮಿಳರನ್ನು ಬಿಟ್ಟು ಬೇರೆಯವರೆಲ್ಲ ಗರಂ ಆಗಬಹುದು!

ನೀವು ಅಮೆರಿಕದಲ್ಲಿರುವವರಾದರೆ ಅಥವಾ ನಿಮಗೆ ಅಮೆರಿಕನ್‌ ಸ್ನೇಹಿತರಾರಾದರೂ ಇದ್ದರೆ ನೀವು yada yada yada... ಎಂಬ ಪದಪುಂಜವನ್ನು ಅವಾಗಾವಾಗ ಕೇಳುತ್ತಿರುತ್ತೀರಿ. ಸಂಭಾಷಣೆಯಲ್ಲಿ 'ಇತ್ಯಾದಿತ್ಯಾದಿ...' ಎನ್ನುವುದಕ್ಕೆ, ಇಂಗ್ಲಿಷ್‌ನಲ್ಲಿ etc.etc ... ಅಥವಾ so on and so forth… blah blah blah… ಎನ್ನುವಂತೆ, ಅದರ ಉಪಯೋಗವಾಗುತ್ತದೆ. ನನ್ನ ಅಮೆರಿಕನ್‌ ಸ್ನೇಹಿತನೊಬ್ಬನ ಪ್ರಕಾರ (ಅವನಿಗೆ ಭಾರತ, ಹಿಂದುಧರ್ಮ, ಭಗವದ್ಗೀತೆ ಇತ್ಯಾದಿಯ ಪರಿಚಯ ಸಾಕಷ್ಟು ಇದೆ) ಶ್ರೀಕೃಷ್ಣ ಪರಮಾತ್ಮನೂ ಈ ಪದಪುಂಜವನ್ನು ಬಳಸಿದ್ದಾನಂತೆ! ಎಲ್ಲಿ ಎಂದು ಕೇಳಿದರೆ, ಭಗವದ್ಗೀತೆಯ ಶ್ಲೋಕ yada yada ಹಿ ಧರ್ಮಸ್ಯ... ಇದೆಯಲ್ಲ!?

Punಪಪುರಾಣ ಸಮಾಪ್ತವಾಗುವ ಮುನ್ನ, ಗನ್‌ಗಾಧರ-ಗನ್‌ಪತಿ ಫಾದರ್‌-ಸನ್‌ ಜೋಡಿಯಿಂದ ಆರಂಭಿಸಿದ್ದನ್ನು ಇನ್ನೊಂದು ಫಾದರ್‌-ಸನ್‌ (ಅಥವಾ ಸನ್‌-ಗ್ರಾಂಡ್‌ಸನ್‌ ಜೋಡಿ ಎಂದರೂ ಸರಿಯೇ) ಜೋಡಿಯ ಪನ್‌. ಸ್ವಾರಸ್ಯಕರವಾಗಿ ಇದೂ 'ದೇವ'ಲೋಕಕ್ಕೆ ಸಂಬಂಧಿಸಿದ್ದೇ!

ದೇವೇಗೌಡ 'ಮಣ್ಣಿನ ಮಗ'ನಾದರೆ ಅವರ ಪುತ್ರ ಕುಮಾರಸ್ವಾಮಿ?

- ಮಣ್ಣಿನ ಮೊಮ್ಮಗ!

ಇದೀಗ ಮುಖ್ಯಮಂತ್ರಿ ಪಟ್ಟಾಭಿಷೇಕಗೊಂಡಿರುವ ಈ ಗ್ರಾಂಡ್‌ಸನ್‌ನಿಂದ ಕನ್ನಡಿಗರಿಗೆಲ್ಲ ಗ್ರಾಂಡ್‌ ಸನ್‌ಮಂಗಳವಾಗಲಿ ಎಂದು ಹಾರೈಸುತ್ತ,

English summary
A humorous substitution of pun words that are alike in sound but different in meaning. Srivathsa Joshi writes on Pun.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X