• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಬ್ಬಗಳ ಆಚರಣೆ : ಅನಿವಾಸಿಯ ಅಂತರಾಳ

By Staff
|

ಹಬ್ಬಗಳ ಆಚರಣೆ : ಅನಿವಾಸಿಯ ಅಂತರಾಳ
ತವರು ಬಿಟ್ಟರೂ, ತವರ ಬಂಧ ಬಿಡದು. ಹೀಗಾಗಿಯೇ ಎನ್‌ಆರ್‌ಐಗಳು ಹಬ್ಬವನ್ನು ಹಬ್ಬದಂತೆಯೇ ಆಚರಿಸುತ್ತಾರೆ! ತವರನ್ನು ಮಿಸ್‌ ಮಾಡಿಕೊಳ್ಳುವುದು ಬಿಟ್ಟರೇ, ಹಬ್ಬದ ಖುಷಿ-ಸಂಭ್ರಮಕ್ಕೇನು ಕೊರತೆಯಿಲ್ಲ. ವಿಚಿತ್ರಾನ್ನ 203ನೇ ಸಂಚಿಕೆಯಲ್ಲಿ ಹಬ್ಬದ ಸಮಾಚಾರ.

*ಶ್ರೀವತ್ಸ ಜೋಶಿ

Ganesha has eaten up one holiday instead of Modaka this time!‘‘ಈಬಾರಿ ಗಣೇಶ ಹಬ್ಬ ಭಾನುವಾರದಂದು ಬಂದಿದ್ದರಿಂದ ಒಂದು ರಜಾ ಖೋತಾ. ಬಹುಶಃ ಕಳೆದವರ್ಷ ಯಾವುದೋ ನೌಕರರ ಸಂಘದವರು ಗಣೇಶೋತ್ಸವ ಸಂದರ್ಭದಲ್ಲಿ ವಿನಾಯಕನನ್ನು ಸರಿಯಾಗಿ ಸತ್ಕರಿಸಿಲ್ಲ, ಅದಕ್ಕೇ ಈಸಲ ವಿಘ್ನರಾಜ ನೌಕರರ ಪಾಲಿಗೆ ರಜಾವಿಘ್ನನಾಗಿ ಸೇಡುತೀರಿಸಿಕೊಂಡಿದ್ದಾನೆ...’’ - ಇದು ಡುಂಡಿರಾಜ್‌ ಉವಾಚ, ಅವರ ಮಾತು-ಕ(ವಿ)ತೆ ಅಂಕಣ(ವಿಜಯಕರ್ನಾಟಕ) ದಲ್ಲಿ. ಡುಂಡಿರಾಜ್‌ ಗಣೇಶನ ಮನದಿಂಗಿತವನ್ನು ಚೆನ್ನಾಗಿ ಬಲ್ಲವರು. ಏಕೆಂದರೆ ಡುಂಡಿರಾಜ ಎಂದರೆ ಗಣೇಶನದೇ ಒಂದು ಹೆಸರು ಮತ್ತು ಅವರಿಗೂ ಪನ್‌/ಫನ್‌ ಲವಿಂಗ್‌ ಗಣೇಶನೇ ಆರಾಧ್ಯದೈವ. ಹಾಗಾಗಿ ಅವರು ಹೇಳಿದ್ದು ನಿಜವಿರಲೂಬಹುದು.

ಆದರೆ ಡುಂಡಿರಾಜರಿಗೆ ತಿಳಿಸದೇ ಇದ್ದ ಸೀಕ್ರೇಟೊಂದನ್ನು ಗಣಪ ನಮ್ಮ ಕಿವಿಯಲ್ಲಿ ಗುಟ್ಟಾಗಿ ಉಸುರಿದ್ದಾನೆ. ಅದೇನೆಂದರೆ ಆ್ಯಕ್ಚುವಲಿ ಗಣೇಶನ ಹಬ್ಬ ಈಸಲ ಭಾನುವಾರ ಬಂದದ್ದು ಅಮೆರಿಕನ್ನಡಿಗರ ಮೇಲೆ ಗಣಪ ತೋರಿದ ಕೃಪಾಕಟಾಕ್ಷದಿಂದ ಎಂಬುದು! ಇಲ್ಲಿಯವರು ವಾರದ ದಿನಗಳಲ್ಲಿ ಹಬ್ಬ ಬಂದರೂ ಅದನ್ನು ವೀಕೆಂಡ್‌ಗೇ ಪೋಸ್ಟ್‌ಪೋನ್‌/ಪ್ರಿಪೋನ್‌ ಮಾಡುವ ಪರಿಪಾಠವನ್ನು ಕಂಡು ಕನಿಕರಗೊಂಡ ಗಣಪ ಆ ಔದಾರ್ಯವನ್ನು ತೋರಿಸಿದ್ದಾನಂತೆ. ಅಷ್ಟೇ ಅಲ್ಲ, ಮುಂದೊಂದು ವರ್ಷ ಒಮ್ಮೆ ಶುಕ್ರವಾರದಂದು ಗಣೇಶಹಬ್ಬ ಬರುವಂತೆ ಮಾಡಿ ಮಧ್ಯಪ್ರಾಚ್ಯ ದೇಶಗಳಲ್ಲಿರುವ ಅನಿವಾಸಿ ಕನ್ನಡಿಗರನ್ನೂ (ಅವರಿಗಲ್ಲಿ ವಾರದ ರಜಾ ಶುಕ್ರವಾರ) ಸಂತೈಸಲಿದ್ದಾನಂತೆ! ಗಣೇಶನ ‘ಗ್ಲೋಬಲ್‌ ಥಿಂಕಿಂಗ್‌’ ನಿಜಕ್ಕೂ ಮೆಚ್ಚೆಬಲ್‌ ಅಲ್ಲವೇ?

ಗಣಪನ ಇನ್‌ಟೆನ್ಷನ್‌ ಏನೇ ಇರಲಿ, ವೀಕೆಂಡ್‌ಗೆ ಸರಿಯಾಗಿ ಗೌರಿ-ಗಣೇಶ ಬಂದಿದ್ದು ಅನಿವಾಸಿ ಆಸ್ತಿಕರಿಗೆ ಯಾವುದೇ ಟೆನ್ಷನ್‌ ಇಲ್ಲದೆ ಆರಾಮಾಗಿ ಹಬ್ಬವನ್ನಾಚರಿಸಲು ಸಾಧ್ಯವಾಯ್ತು ಮತ್ತು ಸರಿಯಾಗಿ ಹಬ್ಬದ ದಿನವೇ ಹಬ್ಬವನ್ನಾಚರಿಸಿದ ತೃಪ್ತಿ-ಸಂತೋಷ ಸಿಕ್ಕಿತು ಅನ್ನೋದಂತೂ ನಿಜ.

‘‘ನೀವುಗಳೆಲ್ಲ ಅಲ್ಲಿ ನಮ್ಮ ಭಾರತೀಯ ಹಬ್ಬಗಳನ್ನು ಯಾವರೀತಿ ಆಚರಿಸ್ತೀರಿ? ಅಲ್ಲಿನ ನಿಮ್ಮ ಹಬ್ಬದಾಚರಣೆ ಬಗ್ಗೆ ಬರೀರಿ, ನಾವೂ ತಿಳಿದುಕೊಳ್ತೇವೆ...’’ ಎಂಬ ಒಕ್ಕಣೆಯ ಈಮೈಲ್‌ಗಳು ಹಬ್ಬಗಳ ಆಸುಪಾಸಿನ ದಿನಗಳಲ್ಲಿ (ಶುಭಾಶಯ ಸಂದೇಶದ ಜತೆಗೇ ಎಡಿಷನಲ್‌ ರಿಕ್ವೆಸ್ಟ್‌ ಆಗಿ) ಭಾರತದಲ್ಲಿರುವ ಈ-ಮಿತ್ರರಿಂದ ನನಗೆ ಬರುವುದುಂಟು. ಈ ಸಲವೂ ಒಂದಿಷ್ಟು ಮಂದಿ ಅದೇ ರಿಕ್ವೆಸ್ಟನ್ನು ಮಾಡಿದ್ದಾರೆ. ಆದ್ದರಿಂದ ವಿಚಿತ್ರಾನ್ನದ ಈ ಸಂಚಿಕೆಯಲ್ಲಿ ‘ಹಬ್ಬಗಳ ಆಚರಣೆ : ಅನಿವಾಸಿಯ ಅಂತರಾಳ’ ಎಂಬ ಶೀರ್ಷಿಕೆಯಿಟ್ಟುಕೊಂಡು ಕೆಲ ಲಹರಿಗಳು ಇಲ್ಲಿವೆ, ಪರಾಂಬರಿಸಿ.

ಮೊದಲೇ ಹೇಳಿಬಿಡುತ್ತೇನೆ - ಅನಿವಾಸಿಗಳ ಹಬ್ಬದಾಚರಣೆ ಕ್ರಮಗಳನ್ನಾಗಲೀ ಅವರ ಜೀವನಶೈಲಿಯನ್ನೇ ಆಗಲಿ ಜನರಲೈಸ್‌ ಮಾಡಲಿಕ್ಕಾಗದು (ಕೆಲವರು ಹಾಗೆ ಮಾಡಿ ಅನಿವಾಸಿಗಳ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯಗಳನ್ನು ಮೂಡಿಸುತ್ತಾರೆ). ‘ಅನಿವಾಸಿಗಳನ್ನು ಅಳೆಯೋದು ಅಂದರೆ ಕುರುಡರು ಆನೆ ಮುಟ್ಟಿದ ಹಾಗೆ’ ಎಂದು ನಾನು ಅಂದುಕೊಳ್ಳುತ್ತೇನೆ. ಅವರವರ ಭಾವಕ್ಕೆ ಅವರವರ ಭಕುತಿಗೆ ಅವರವರ ತೆರನಾಗಿ ಇರುತಿಹರು ಅನಿವಾಸಿಗಳು... ಎಂದರೆ ಅತಿಶಯೋಕ್ತಿಯಲ್ಲ.

A celebration of Indian festivals in Americaಇಲ್ಲಿಗೆ ಬಂದವರಲ್ಲೆಲ್ಲ ಭಾರತೀಯ ಸಂಸ್ಕೃತಿಯನ್ನು ಉಳಿಸಿಬೆಳೆಸಬೇಕೆಂಬ ತುಡಿತವಿದ್ದೇ ಇರುತ್ತದೆಯೆಂದು ಹೇಳಲಾಗದು. ಕೆಲವರು ದೇಶಬಿಟ್ಟು ಬಂದು ಇಲ್ಲಿ ಸೆಟ್ಲ್‌ ಆದಮೇಲೆ ವಿಶೇಷ ಪರಿಸ್ಥಿತಿಗಳಿಂದಾಗಿ, ಒತ್ತಡಗಳಿಂದಾಗಿ ಅಥವಾ ಕೀಳರಿಮೆಯಿಂದಾಗಿ ತಾಯ್ನಾಡ ವೇಷ ಭಾಷೆ ಆಚಾರ ವಿಚಾರ ಎಲ್ಲವನ್ನೂ ಮರೆಯುತ್ತಾರೆ. ಕೆಲವರು ‘ರೋಮ್‌ನಲ್ಲಿ ರೋಮನ್‌ಆಗಿರು’ ತತ್ವವನ್ನು ಅಳವಡಿಸುತ್ತಾರೆ. ಇನ್ನು ಕೆಲವರು ‘ನೋಡಿ ಸ್ವಾಮಿ ನಾವಿರೋದೇ ಹೀಗೆ...’ ಎಂದು ಯಾವೊಂದು ಬದಲಾವಣೆಗಳೂ ಇಲ್ಲದೆ ಹಾಗೇ ಇರುತ್ತಾರೆ.

ಆದರಿಂದಲೇ, ಅಮೆರಿಕದಲ್ಲಿ ಭಾರತೀಯ ಹಬ್ಬಗಳನ್ನು ಹೇಗೆ ಆಚರಿಸುತ್ತೀರಿ ಎಂಬ ಪ್ರಶ್ನೆಗೆ ನಿರ್ದಿಷ್ಟವಾದ ಉತ್ತರ ಕಂಡುಕೊಳ್ಳುವುದು ಕಷ್ಟ. ಹಬ್ಬಗಳ ಅಥವಾ ಇನ್ನಿತರ ಧಾರ್ಮಿಕ ವಿಚಾರ ಬಂದಾಗ ವ್ಯತ್ಯಾಸಗಳೇನೇ ಇದ್ದರೂ ತಾಯ್ನೆಲದ ಸಂಸ್ಕೃತಿಯ ಸೆಳಕು ಯಾವುದೋ ಒಂದು ವಿಧದಲ್ಲಿ, ಎಷ್ಟೋ ಒಂದು ಪ್ರಮಾಣದಲ್ಲಿ ಪ್ರತಿಯಾಬ್ಬ ಅನಿವಾಸಿಗೂ ಬಂದೇಬರುತ್ತದೆ - ಎಂಬ ಸಾಮಾನ್ಯ ಅಂಶದ ಹೊರತಾಗಿಯೂ.

ಗಣೇಶನ ಹಬ್ಬವನ್ನೇ ತೆಗೆದುಕೊಳ್ಳಿ. ಭಕ್ತಿಭಾವದಿಂದ ಸಾಂಪ್ರದಾಯಿಕ ಶ್ರದ್ಧೆಯಿಂದ ’ನಮ್ಮೂರಲ್ಲಿ, ನಮ್ಮನೇಲಿ ಹಬ್ಬ/ಪೂಜೆ ಮಾಡಿದ ಹಾಗೇ ಇರಬೇಕು’ ಎಂದುಕೊಂಡು ಗಣೇಶಚೌತಿ ಹಬ್ಬವನ್ನಾಚರಿಸುವ ಕುಟುಂಬಗಳು ಇಲ್ಲಿ ಬೇಕಾದಷ್ಟು ಇವೆ. ‘ಹೋಮ್‌ ಡಿಪೊ’ದಿಂದ (ಹೋಮ್‌ ಡಿಪೊ ಎಂದರೆ ಮನೆ ಕಟ್ಟುವುದರಿಂದ ಹಿಡಿದು ಮನೆಗೆ ಸಂಬಂ-ಸಿದ ಯಾವತ್ತೂ ಸಾಮಗ್ರಿಗಳು ದೊರಕುವ ಡಿಪಾರ್ಟ್‌ಮೆಂಟಲ್‌ ಸ್ಟೋರ್‌) ಆವೆಮಣ್ಣನ್ನು ತಂದು, ಅದನ್ನು ಹದಗೊಳಿಸಿ ವಿಗ್ರಹ ಮಾಡಿ ಬಣ್ಣ ಬಳಿದು ಅತ್ಯಾಕರ್ಷಕವಾಗಿ ಗೌರಿ-ಗಣಪನ ಪೂಜೆ ಮಾಡಿ, ಕಡಬು-ಕಜ್ಜಾಯಗಳ ನೈವೇದ್ಯ ಅರ್ಪಿಸಿ ಕೃತಾರ್ಥರಾಗುವವರೂ ಇಲ್ಲಿದ್ದಾರೆ.

ಹಬ್ಬ ಎಂದರೆ ಬರೀ ಪೊಗದಸ್ತಾದ ಊಟ ಅಷ್ಟೇ ಅಲ್ಲ, ವಾತಾವರಣದಲ್ಲಿನ ಆ ‘ಸಂಭ್ರಮ’ವನ್ನೂ ಸಾಧ್ಯವಾದಷ್ಟು ಮಟ್ಟಿಗೆ ಸೃಷ್ಟಿಸಿಕೊಂಡು (ಸಾಧ್ಯವಾಗದಿದ್ದರೆ ಕಲ್ಪಿಸಿಕೊಂಡಾದರೂ) ಹಬ್ಬದ ಕಳೆಯನ್ನು ಕೂಡಿಸುವ ಪ್ರಯತ್ನ. ಅಷ್ಟಾದ ಮೇಲೂ ‘‘ಭಾರತದಲ್ಲಾದರೆ ಹಬ್ಬದ ಮಜಾನೇ ಬೇರೆ!’’ ಎಂದು ಹಬ್ಬದ ನೆಪದಲ್ಲಿ ಮದರ್‌-ಇಂಡಿಯಾವನ್ನು ಮಿಸ್‌ ಮಾಡ್ಕೊಳ್ಳೋದಂತೂ ಇದ್ದೇ ಇದೆ ಬಿಡಿ. ಅದಕ್ಕೆ ಕಾರಣವೂ ಇದೆ. ದೀಪಾವಳಿ ಸಂಭ್ರಮವನ್ನು ಇಲ್ಲಿದ್ದು ಅದೆಷ್ಟೇ ಕಲ್ಪಿಸಿಕೊಂಡರೂ, ಹೊಸಬಟ್ಟೆ-ಬಗೆಬಗೆ ಪಕ್ವಾನ್ನ ಊಟದತಟ್ಟೆಯಲ್ಲಿದ್ದರೂ, ಪಟಾಕಿ ಹೊಡೆಯಲಿಕ್ಕಿಲ್ಲವಲ್ಲ ಎಂದಮೇಲೆ ಸಡಗರ ಮಸುಕಾಗಿ ಹೋಗುತ್ತದೆ. ಹಾಗೆಯೇ ಸಂಕ್ರಾಂತಿಗೆ ಕಬ್ಬು ಎಲ್ಲಿಂದ ತರೋಣ, ವಿಜಯದಶಮಿಗೆ ಶಮಿ(ಬನ್ನಿ) ಎಲ್ಲಿಂದ ತರೋಣ... ಇತ್ಯಾದಿ ಹಬ್ಬವನ್ನು ಪರಿಪೂರ್ಣವಾಗಿ ಮಾಡಲಾಗಲಿಲ್ಲವಲ್ಲ ಎಂಬ ಕೊರಗು. ಆಗ ಬಾಲ್ಯ ನೆನಪಾಗುತ್ತದೆ, ಅಮ್ಮ ನೆನಪಾಗುತ್ತಾಳೆ. ಹಬ್ಬದ ಮಧ್ಯೆಯೂ ತಾಯಿಯ/ತಾಯ್ನಾಡಿನ ನೆನಪಿನ ನೋವಿನ ಅಲೆಯಾಂದು ಬೇಡಾ ಅಂದರೂ ಬಂದು ಹೋಗುತ್ತದೆ.

ಬಹುಶಃ ಆ ಭಾವನೆ (ಹಬ್ಬದ ವೇಳೆ ತಾಯ್ನಾಡನ್ನು ಮಿಸ್‌ ಮಾಡ್ಕೋಳ್ತಿದ್ದೇನೆ ಎಂಬ ಒಂದು ಸೂಕ್ಷ್ಮ ವೇದನೆ) ಕೊಂಚವಾದರೂ ಕಡಿಮೆಯಾಗಲಿ ಎಂಬ ಉದ್ದೇಶದಿಂದ ಹಬ್ಬಗಳ ಸಾಮೂಹಿಕ ಆಚರಣೆ ಪದ್ಧತಿಯನ್ನು ಅನಿವಾಸಿ ಕುಟುಂಬಗಳು ಅಳವಡಿಸಿಕೊಂಡದ್ದು. ವರ್ಷದುದ್ದಕ್ಕೂ ಒಂದೊಂದು ಹಬ್ಬವನ್ನು ಒಬ್ಬೊಬ್ಬರ ಮನೆಯಲ್ಲಿ ಆಚರಿಸೋದು, ಆ ಊರಲ್ಲಿ/ಅಕ್ಕಪಕ್ಕದಲ್ಲಿ ವಾಸಿಸುವ ಪರಿಚಿತ ಆತ್ಮೀಯ ಸ್ನೇಹಿತರೆಲ್ಲ ಅಲ್ಲೇ ಸೇರೋದು. ಹಬ್ಬದ ನೆಪದಲ್ಲಿ ಗೆಟ್‌-ಟುಗೆದರ್‌, ಮೋಜು-ಮನರಂಜನೆ. ಉದಾಹರಣೆಗೆ ನಮ್ಮ ವಾಷಿಂಗ್ಟನ್‌ ಡಿಸಿ ಪ್ರದೇಶದ ಕನ್ನಡಿಗ ಕುಟುಂಬಗಳೊಳಗೆ ‘ಇಂಥಿಂಥ ಹಬ್ಬ ಇಂಥವರ ಮನೆಯಲ್ಲಿ...’ ಎಂಬ ಒಂದು ಅಲಿಖಿತ ಸಂಪ್ರದಾಯವೇ ರೂಢಿಯಲ್ಲಿದೆ. ಸಂಕ್ರಾಂತಿಯಿಂದ ಹಿಡಿದು ದೀಪಾವಳಿವರೆಗೂ ಬೇರೆಬೇರೆ ಹಬ್ಬಗಳ ಗೆಟ್‌-ಟುಗೆದರ್‌ ಬೇರೆಬೇರೆ ಮನೆಗಳಲ್ಲಿ.

ಈ ಪದ್ಧತಿ ವಾಷಿಂಗ್ಟನ್‌ ಡಿಸಿಯ ಕನ್ನಡಿಗರದು ಮಾತ್ರವಲ್ಲ. ಕಳೆದ ತಿಂಗಳು ಇಲ್ಲೇ ಸಮೀಪದ ರಿಚ್‌ಮಂಡ್‌ಗೆ (ವರ್ಜೀನಿಯಾ ಸಂಸ್ಥಾನದ ರಾಜಧಾನಿ) ಹೋಗುವ ಸಂದರ್ಭ/ಅವಕಾಶ ಸಿಕ್ಕಿತ್ತು. ಅಲ್ಲಿನ ಹಿರಿಯ ಕನ್ನಡಿಗ ದಂಪತಿಯಾದ ಗೋಪಾಲಕೃಷ್ಣ(ಗೋಪಿ)-ಗಾಯತ್ರಿ ಅವರು ವರಮಹಾಲಕ್ಷ್ಮೀಪೂಜೆಯ ದಿನ ಸಂಜೆಗೆ ಸ್ನೇಹಿತರನ್ನೆಲ್ಲ ಆಮಂತ್ರಿಸಿದ್ದರು. ರಿಚ್‌ಮಂಡ್‌ ಕನ್ನಡಿಗರ ಪೈಕಿ ಅನೇಕರು ಅಲ್ಲಿ ಸೇರಿದ್ದರು. ಗೋಪಿ-ಗಾಯತ್ರಿ ಮನೆಯಲ್ಲಿ ಪ್ರತಿವರ್ಷವೂ ವರಮಹಾಲಕ್ಶ್ಮೀವೃತದ ದಿನ ಸುಂದರವಾಡ ಅಲಂಕಾರದೊಂದಿಗೆ ದೇವಿಗೆ ಪೂಜೆ ಆಮೇಲೆ ಆಮಂತ್ರಿತರಿಗೆಲ್ಲ ಪ್ರಸಾದ ಊಟ ಇತ್ಯಾದಿ ಇಟ್ಟುಕೊಂಡಿರುತ್ತಾರಂತೆ. ಇತ್ತ ಹಬ್ಬದ ಆಚರಣೆಯೂ ಆಯ್ತು, ಅತ್ತ ಸ್ನೇಹಸಂಪರ್ಕ ನವೀಕರಣವೂ ಆಯ್ತು!

ನನಗೆ ಗೊತ್ತಿರುವಂತೆ ಗಣೇಶಚೌತಿಯ ವೇಳೆ ಲಾಸ್‌ ಏಂಜಲೀಸ್‌ನಲ್ಲಿ ಹಲವಾರು ಕನ್ನಡಿಗ ಕುಟುಂಬಗಳು ಸೇರಿ, ಭಾರತದಿಂದ ಸುಮಾರು ನೂರಕ್ಕೂ ಹೆಚ್ಚು ಗಣೇಶವಿಗ್ರಹಗಳನ್ನು ತರಿಸಿ ಸಾಮೂಹಿಕ ಗಣೇಶಪೂಜೆಯನ್ನಿಟ್ಟುಕೊಳ್ಳುತ್ತಾರೆ. ಫಿಲಡೆಲಿ-ಯಾದ ‘ಭಾರತೀಯ ಮಂದಿರ’ದಲ್ಲಿ ಮರಾಠಿಗರು, ಕನ್ನಡಿಗರು ಸೇರಿ ಸಾರ್ವಜನಿಕ ಗಣೇಶೋತ್ಸವವನ್ನು ಹಮ್ಮಿಕೊಳ್ಳುತ್ತಾರೆ. ಅಮೆರಿಕದಲ್ಲಿ ಮೊಟ್ಟಮೊದಲ ಸಾರ್ವಜನಿಕ ಗಣೇಶೋತ್ಸವ ಎಂಬ ಹೆಗ್ಗಳಿಕೆ ಅವರದು. ದೀಪಾವಳಿ ಸಂದರ್ಭದಲ್ಲಿ ‘ಮೇಳ’ಗಳು, ಸುಡುಮದ್ದು ಪ್ರದರ್ಶನಗಳು ಇತ್ಯಾದಿಯನ್ನು ಆಯೋಜಿಸುವ ಸಮೂಹಸಂಸ್ಥೆಗಳು ಅಮೆರಿಕದ ಅನೇಕ ಶಹರಗಳಲ್ಲಿವೆ.

ಹೀಗೆ ಅಮೆರಿಕದಲ್ಲಿ ಭಾರತೀಯ ಹಬ್ಬಗಳ ವೈಶಿಷ್ಟ್ಯ, ವೈವಿಧ್ಯ ಹೇಗಿರುತ್ತದೆಯೆಂದು ಪ್ರಾತಿನಿ-ಧಿಕವಾಗಿ ಬಣ್ಣಿಸಬಹುದು. ತವರುದೇಶವನ್ನು ‘ಮಿಸ್‌ ಮಾಡುವ’ ಒಂದು ಅಂಶದ ಹೊರತಾಗಿ ಹಬ್ಬ ಸಂಭ್ರಮ ಇಲ್ಲೂ ಕಡಿಮೆಯೇನೂ ಇರುವುದಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು.

- srivathsajoshi@yahoo.com

ಅಥರ್ವಶೀರ್ಷ ಎಂಬ ಗಣೇಶಸೂಕ್ತ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more