• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತ್ರಿಮೂರ್ತಿಗಳ ದರ್ಪದ ಧಗೆ ಮತ್ತು ಕೇದಗೆ

By Staff
|


ನಾನು ಒಂದರಿಂದ ಐದನೇ ತರಗತಿವರೆಗೆ ಕಲಿತ ನಮ್ಮೂರಿನ ಏಕೋಪಾಧ್ಯಾಯ ಶಾಲೆಯ ಪಕ್ಕದಲ್ಲೇ ಒಂದು ದೊಡ್ಡ ‘ಕೇದಗೆ ವನ’ ಇತ್ತು. ಅದರ ಪಕ್ಕದಲ್ಲೊಂದು ಸಣ್ಣ ಕೆರೆ, ನೀರಿನ ಒಂದು ತೋಡು. ಶಾಲೆಗೆ ನೀರು ಸರಬರಾಜು ಅಲ್ಲಿಂದಲೇ. ಸರತಿಯಂತೆ ದಿನಾ ಇಬ್ಬರು ವಿದ್ಯಾರ್ಥಿಗಳಿಗೆ ನೀರುತಂದು ತುಂಬಿಸಿಡುವ ಪಾಳಿ. ತಾಮ್ರದ ಕೊಡಪಾನದಲ್ಲಿ ನೀರು ತುಂಬಿಸಿಕೊಂಡುಬಂದು ಕುಡಿಯುವ ನೀರಿನ ಹೂಜಿಯನ್ನು ತುಂಬಿಸಬೇಕು, ಶಾಲೆಯ ಪುಟ್ಟ ಮೈದಾನದ ಸುತ್ತ ಬೆಳೆಸಿದ್ದ ಹೂಗಿಡಗಳಿಗೂ ನೀರೆರೆಯಬೇಕು.

ತಂತಮ್ಮ ಪಾಳಿ ಬಂದಾಗ ಇದು ಎಲ್ಲರಿಗೂ ಖುಶಿಯ ಕೆಲಸವೇ. ಆದರೆ ಒಂದೇಒಂದು ತೊಂದರೆಯೆಂದರೆ ನೀರಿನ ಕೆರೆಯ ಹತ್ತಿರ ಕೇದಗೆವನವಿರುವುದು, ಅಲ್ಲಿ ಕೇದಗೆ ಹೂವಿನ ಪರಿಮಳಕ್ಕೆ ನಾಗರಹಾವು, ಕಾಳಿಂಗಸರ್ಪ ಇತ್ಯಾದಿ ಬಂದಿರುತ್ತದೆ ಎಂದು ದೊಡ್ಡವರು ಹೆದರಿಸಿಟ್ಟಿರುತ್ತಿದ್ದರು. ಅದಕ್ಕೆ ತಕ್ಕಂತೆ ಯಾವಾಗಾದರೂ ಕೆರೆಯಲ್ಲಿ ನೀರುಹಾವೋ ಬೇಸಗೆಯ ದಿನಗಳಲ್ಲಿ ಕೇರೆಹಾವೋ ಕಾಣಿಸಿಕೊಳ್ಳುತ್ತಿದ್ದುದೂ ಉಂಟು. ಅದನ್ನೇ ನಾವು ಕಾಳಿಂಗಸರ್ಪ, ಹೆಬ್ಬಾವು ಎಂದು ಮುಂತಾಗಿ ನಮಗೆ ತಿಳಿದಿದ್ದ ಹಾವುಪ್ರಬೇಧಗಳನ್ನೆಲ್ಲ ಹೆಸರಿಸಿ ಹೆದರಿಕೊಳ್ಳುತ್ತಿದ್ದೆವು. ಅಂತೂ ಹಿತಾನುಭವ ನೀಡಬೇಕಿದ್ದ ಕೇದಗೆ ಪರಿಮಳ ಒಂದು ರೀತಿಯಲ್ಲಿ ನಮಗೆ ಭಯೋತ್ಪಾದಕವಾಗಿತ್ತು!

Kedage Bushಕರಾವಳಿಯಲ್ಲಿ, ಪಶ್ಚಿಮಘಟ್ಟಗಳ ತಪ್ಪಲಲ್ಲಿ ಕೆರೆನದಿ ದಂಡೆಗಳ ಜೌಗುಪ್ರದೇಶಗಳಲ್ಲಿ ಹುಲುಸಾಗಿ ಬೆಳೆಯುವ ಕೇದಗೆ ಅಲ್ಲಿನ ಜನಪದ ಸಂಸ್ಕೃತಿಯಲ್ಲಿ ಮಿಳಿತವಾಗಿರುವ ಹೂವು. ಹಳ್ಳಿಹೆಂಗಸರು ಕೇದಗೆಯ ಎಸಳನ್ನು ಮಡಚಿ ತಲೆಗೆ ಮುಡಿದುಕೊಳ್ಳುತ್ತಾರೆ. ಕೇದಗೆ ಅಲ್ಲಿ ಬರೀ ಹೂವು ಮಾತ್ರವಲ್ಲ. ಕೇದಗೆ ಎಂಬ ಹೆಸರಿನ ಮನೆ, ಮನೆತನಗಳಿವೆ. ಯಕ್ಷಗಾನದ ವೇಷಭೂಷಣಗಳಲ್ಲಿ ‘ಕೇದಗೆ ಮುಂದಲೆ’ ಅಥವಾ ‘ಕೇದಗೆ ಮುಂಡಾಸು’ ಸಹ ಒಂದು ಆಕರ್ಷಕ ಪ್ರಕಾರ.

ತುಳುನಾಡ ವೀರರಾದ ಕೋಟಿ-ಚೆನ್ನಯರ ತಾಯಿಯ ಹೆಸರು ‘ಸ್ವರ್ಣ ಕೇದಗೆ’ಯೆಂದೇ ಇದ್ದದ್ದು. ಆಕೆ ಬ್ರಾಹ್ಮಣ ಮನೆತನದ ಹುಡುಗಿ. ಅವಳ ಮದುವೆಮಾಡಿಸಲಾಗದ ಹೆತ್ತವರು ಆಕೆಯ ಕಣ್ಣುಕಟ್ಟಿ ಕಾಡಲ್ಲಿ ಬಿಟ್ಟುಬಂದರು. ಆಮೇಲೆ ಶೇಂದಿಸಂಗ್ರಾಹಕನೊಬ್ಬ ಅವಳನ್ನು ಮನೆಗೆತಂದು ಸಾಕಿಸಲಹಿ ಮದುವೆಮಾಡಿಸಿದ, ಆಕೆ ‘ದೇಯಿಬೈದೆತಿ’ಯಾದಳು, ಕೋಟಿಚೆನ್ನಯರು ಹುಟ್ಟಿದರು. ಸ್ವರ್ಣಕೇದಗೆ, ಬಂಗಾರ್ದ ಕೇದಗೆ, ಕೇದಗೆಕೆಂಚಮ್ಮ ಮುಂತಾದ ಹೆಸರಿನ ಯಕ್ಷಗಾನ ಪ್ರಸಂಗಗಳು ಅನೇಕವಿವೆ.

ಕೇದಗೆಯ ಮರ (ಅಥವಾ ಪೊದೆ) ಉಪಯುಕ್ತತೆಯ ದೃಷ್ಟಿಯಲ್ಲಿ ಒಂದು ರೀತಿಯಲ್ಲಿ ಕಲ್ಪವೃಕ್ಷವಿದ್ದಂತೆ. ಪರಿಮಳಯುಕ್ತ ಹೂವಿನಿಂದ ‘ಕೇವಡಾ’ ಅತ್ತರನ್ನೂ, ಎಣ್ಣೆಯನ್ನೂ ತಯಾರಿಸುತ್ತಾರೆ. ಸುಗಂಧದ್ರವ್ಯವಾಗಿ, ಆಹಾರಪದಾರ್ಥಗಳಲ್ಲಿ (ಮುಖ್ಯವಾಗಿ ಉತ್ತರಭಾರತದ ರಸಗುಲ್ಲ, ರಸಮಲಾಯಿ, ಬರ್ಫಿ ಮುಂತಾದ ಸಿಹಿತಿಂಡಿಗಳಲ್ಲಿ, ಐಸ್‌ಕ್ರೀಮ್‌ನಲ್ಲಿ) ಸಹ ಇದು ಬಳಕೆಯಾಗುತ್ತದೆ. ಕೇದಗೆಯ ಕಾಂಡ ಮತ್ತು ಬೇರುಗಳಲ್ಲಿ ಔಷ-ಧೀಯ ಗುಣವಿದ್ದು ಆಯುರ್ವೇದಪದ್ಧತಿಯಲ್ಲಿ ಕಫ-ಪಿತ್ತ ದೋಷಜನ್ಯ ಕಾಯಿಲೆಗಳಿಗೆ ಚಿಕಿತ್ಸೆಯಾಗಿ ಬಳಸುತ್ತಾರೆ.

Mat made of Kedageಕೇದಗೆಯ ಉದ್ದುದ್ದದ ಎಲೆಗಳ ಉಪಯೋಗವೂ ಸಾಕಷ್ಟಿದೆ. ಎಳೆಯ ಎಲೆಗಳನ್ನು ಕೆಲವರು ತಿನ್ನುತ್ತಾರೆ. ಅನ್ನಕ್ಕೆ ಘಮ ಬರಲು ಬೇಯಿಸುವಾಗ ಎಲೆಯ ಚೂರನ್ನು ಸೇರಿಸುವ ಕ್ರಮವಿದೆ. ರೇಷ್ಮೆಸೀರೆ ಮಡಚಿಟ್ಟಿದ್ದರೊಳಗೆ ತಾಜಾತನಕ್ಕಾಗಿ ಕೇದಗೆ ಎಲೆಯನ್ನು ಸೇರಿಸಿಡುತ್ತಾರೆ. ಇದೆಲ್ಲಕ್ಕಿಂತಲೂ ಮುಖ್ಯವಾಗಿ ಕೇದಗೆ ಎಲೆಗಳನ್ನು ಚಾಪೆ, ಬುಟ್ಟಿ, ಬೀಸಣಿಗೆ ಮೊದಲಾದುವನ್ನು ತಯಾರಿಸಲು ಉಪಯೋಗಿಸುತ್ತಾರೆ. ಈಗ ಪ್ಲಾಸ್ಟಿಕ್‌ಯುಗದಲ್ಲಿ ಕೇದಗೆ ಎಲೆಗಳ ಚಾಪೆಗಳಿಗೆ ಬೇಡಿಕೆಯೂ ಇಲ್ಲ, ಅದನ್ನು ಹೆಣೆಯುವವರೂ ಇಲ್ಲ,ಆ ಮಾತು ಬೇರೆ.

ಕೇದಗೆ ಎಲೆಗಳಿಂದ ಮಾಡಿದ ಚಾಪೆ-ಬುಟ್ಟಿಗಳೇ ನನಗೆ ಏಕಾಏಕಿ ಕೇದಗೆಯ ನೆನಪಾಗಲು ಕಾರಣ. ಮೊನ್ನೆ ಇಲ್ಲಿ ಒಂದು ಜನಪದಮೇಳದಲ್ಲಿ ಅಮೆರಿಕದ ವಿವಿಧ ಗ್ರಾಮೀಣಪ್ರದೇಶಗಳ ಕರಕುಶಲಸಾಮಗ್ರಿಗಳ ಪ್ರದರ್ಶನವಿತ್ತು. ಅದರಲ್ಲಿ ಹವಾಯಿಸಂಸ್ಥಾನದ ‘ಲೌಹಲ’ ಹೆಣಿಗೆಯ ಬುಟ್ಟಿ, ಚಾಪೆಗಳೂ ಇದ್ದುವು. ನೋಡಲಿಕ್ಕೆ ನಮ್ಮೂರಿನ ಕೇದಗೆ ಎಲೆಯ ಚಾಪೆಗಳಂತೆಯೇ ಕಾಣುತ್ತಿದ್ದುವು. ಕೌತುಕ ಹುಟ್ಟಿಸಿದ ‘ಲೌಹಲ’ದ ಬಗ್ಗೆ ಅಂತರ್ಜಾಲವನ್ನೊಂದಿಷ್ಟು ಮಥಿಸಿದಾಗ ಗೊತ್ತಾಯ್ತು - ಹವಾಯಿದ್ವೀಪದ ಲೌಹಲ ಮತ್ತು ನಮ್ಮಲ್ಲಿನ ಕೇದಗೆ ಇವೆರಡೂ ಒಂದೇ, ಸಸ್ಯಶಾಸ್ತ್ರೀಯವಾಗಿ pandanus odoratissimus ಎಂದು ಕರೆಯಲ್ಪಡುವ ಹೂವಿನ ಸಸ್ಯ!

*

ಕೇದಗೆ ಎಲೆಗಳ ಸುಂದರ ಹೆಣಿಗೆಯ ಚಾಪೆಯನ್ನು ನೋಡಿದಾಗ ಕೇದಗೆಯ ಬಗ್ಗೆಯೇ ಒಂದು ವಿಚಿತ್ರಾನ್ನ ಸಂಚಿಕೆಯನ್ನು ಹೆಣೆಯಬೇಕೆಂದೆನಿಸಿತು. ಅದನ್ನೀಗ ನೀವು ಓದಿಯೂ ಆಯ್ತು. ಇನ್ನು ಈ ವಾರದ ಪ್ರಶ್ನೆ :

ಕನ್ನಡಕ್ಕೆ ಸಂಬಂಧಿ-ಸಿದಂತೆ ಕೇದಗೆ, ಮಲ್ಲಿಗೆ, ಸಂಪಿಗೆ ಇವು ಬರೀ ಹೂವುಗಳ ಹೆಸರು ಮಾತ್ರವಲ್ಲ. ಇನ್ನೂ ಏನೋ ಒಂದು ಆಗಿವೆ, ಏನಿರಬಹುದು? ತೀರಾ ಹಳಗನ್ನಡ, ನಡುಗನ್ನಡದ್ದೇನೋ ಇರಬಹುದು ಎಂದು ತಲೆಕೆಡಿಸಿಕೊಳ್ಳಬೇಡಿ. ಇದು 21ನೇ ಶತಮಾನದ ಗಣಕಯಂತ್ರಕನ್ನಡಕ್ಕೆ ಸಂಬಂಧಿಸಿದ ವಿಷಯ. ಯೋಚಿಸಿ ತಿಳಿದುಕೊಂಡು ಬರೆಯಿರಿ. ವಿಳಾಸ - srivathsajoshi@yahoo.com

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more