ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧಾನ್ಯಲಕ್ಷ್ಮಿಗೆ ಧನ್ಯವಾದ

By Staff
|
Google Oneindia Kannada News

ಧಾನ್ಯಲಕ್ಷ್ಮಿಗೆ ಧನ್ಯವಾದ
ಕರ್ನಾಟಕದ ಪಶ್ಚಿಮ ಕರಾವಳಿಯಲ್ಲಿ ಶರದೃತುವಿನ ಸುಂದರ ವಾತಾವರಣದಲ್ಲಿ ನವರಾತ್ರಿ ದೀಪಾವಳಿಗಳ ಜತೆಜತೆಯಲ್ಲೇ ಒಂದು ವಿಶಿಷ್ಟ ಆಚರಣೆ ನಡೆಯುತ್ತದೆ. ಅದೇ ಹೊಸ್ತೂಟ! ಅಂದು ಭೂತಾಯಿಗೆ ಅನ್ನದಾತ, ತನ್ನದೇ ಆದ ರೀತಿಯಲ್ಲಿ ಕೃತಜ್ಞತೆ ಸಲ್ಲಿಸುತ್ತಾನೆ. ಕರ್ನಾಟಕದಲ್ಲಿ ಮಾತ್ರವಲ್ಲ, ಭಾರತದಲ್ಲಿ ಮಾತ್ರವಲ್ಲ, ವಿಶ್ವದ ವಿವಿಧ ಭಾಗಗಳಲ್ಲಿ ಅನ್ನ ನೀಡಿದ ತಾಯಿಗೆ ಜನ ಧನ್ಯವಾದ ಅರ್ಪಿಸುವ ಆಚರಣೆಗಳಿವೆ. ವಿಚಿತ್ರಾನ್ನ 207ರಲ್ಲಿ ಈ ಬಗ್ಗೆ ಹೆಚ್ಚಿನ ವಿವರಣೆ.

Srivathsa Joshi ಶ್ರೀವತ್ಸ ಜೋಶಿ

‘‘ತಲೆಸ್ನಾನ ಮಾಡಿದ ದಿನ ಸ್ತ್ರೀಯ ಸೌಂದರ್ಯ ದ್ವಿಗುಣವಾಗಿರುತ್ತದೆ.’’

ಇದೇನಿದು! ನವರಾತ್ರಿಯ ದೇವಿಪಾರಾಯಣ ಸೌಂದರ್ಯಲಹರಿಯಿಂದಲೇ ಆರಂಭವಾಯಿತಲ್ಲ ಎಂದು ಹುಬ್ಬೇರಿಸಬೇಡಿ. ಸದ್ಯಕ್ಕೆ ಮೇಲಿನ ಹೇಳಿಕೆಯ ಸತ್ಯಾಸತ್ಯತೆಯನ್ನು ಸೌಂದರ್ಯಾರಾಧಕರ ಕಣ್ಣುಗಳಿಗೇ (ಅಲ್ಲಿಯೇ ತಾನೆ ಸೌಂದರ್ಯ ನೆಲೆಗೊಳ್ಳುವುದು?) ಬಿಟ್ಟುಬಿಡೋಣ. ಆದರೆ ಇದೇ ಸೌಂದರ್ಯಮೀಮಾಂಸೆಯನ್ನು ಇನ್ನೂ ವಿಸ್ತರಿಸಿದರೆ ಇನ್ನೊಂದು ಸ್ವೀಕೃತಸಿದ್ಧಾಂತವೂ ರೂಪುಗೊಳ್ಳುತ್ತದೆ. ಅದೇನೆಂದರೆ ‘‘ನಮಗೆ ಆಶ್ರಯವಿತ್ತಿರುವ ಭೂಮಾತೆಯನ್ನೂ ಒಬ್ಬ ಸ್ತ್ರೀ ಎಂದು ಪರಿಗಣಿಸಿದರೆ, ಅವಳ ದೇಹಸಿರಿಯನ್ನು ತೊಯ್ದುತೊಪ್ಪೆಗೊಳಿಸುವ ಮುಂಗಾರು ಮಳೆಯನ್ನೇ ಅವಳ ತಲೆಸ್ನಾನವೆಂದು ಪರಿಗಣಿಸಿದರೆ, ಮುಂಗಾರಿನ ನಂತರದ ಪ್ರಕೃತಿಸೌಂದರ್ಯವೂ ದ್ವಿಗುಣವಾಗಿರುತ್ತದೆ.’’

ಶರನ್ನವರಾತ್ರಿಯ ವೇಳೆ ಈರೀತಿ ದ್ವಿಗುಣಗೊಳ್ಳುವ ಪ್ರಕೃತಿಸೌಂದರ್ಯವನ್ನು ಸವಿಯಲು ನೀವು ಬೇರೆಲ್ಲೂ ಹೋಗಬೇಕಾಗಿಲ್ಲ. ನಮ್ಮದೇ ಚಿನ್ನದನಾಡಿನ ಗಂಧದಬೀಡಿನ ಕರುನಾಡ ಐಸಿರಿಯ ಪಶ್ಚಿಮಘಟ್ಟಗಳ ಆಚೀಚೆ ದೃಷ್ಟಿಹಾಯಿಸಿದರೆ ಸಾಕು. ಮೂರ್ನಾಲ್ಕು ತಿಂಗಳ ಸತತ ಮಳೆಯ ನಂತರದ ಹಸಿರರಾಶಿಯನ್ನು ಒಮ್ಮೆ ಕಣ್ತುಂಬಿಸಿಕೊಂಡರೆ ಸಾಕು. ‘ಸದ್ಧಿರದ ಪಸುರುಡೆಯ ಮಲೆನಾಡ ಬನಗಳಲಿ...’ ಎಂಬ ಕುವೆಂಪು ಕವಿತೆಯೋ ‘ಕನ್ನಡನಾಡಿನ ಕರಾವಳಿ... ಕನ್ನಡದೇವಿಯ ಪ್ರಭಾವಳಿ...’ ಎಂಬ ಚಿತ್ರಗೀತೆಯೋ ನಿಮಗರಿವಿಲ್ಲದಂತೆಯೇ ಮನದಲ್ಲಿ ಗುಂಯ್‌ಗುಟ್ಟಿದರೆ ನಳನಳಿಸುವ ಪ್ರಕೃತಿಗೆ ಅದಾಗಲೇ ನೀವು ಮಾರುಹೋಗಿದ್ದೀರೆಂದೇ ಅರ್ಥ.

ಈ ಪರಿಯ ಪರಿಸರದಲ್ಲಿ, ಅಂದರೆ ಕರ್ನಾಟಕದ ಪಶ್ಚಿಮ ಕರಾವಳಿಯಲ್ಲಿ ಶರದೃತುವಿನ ಸುಂದರ ವಾತಾವರಣದಲ್ಲಿ ನವರಾತ್ರಿ ದೀಪಾವಳಿಗಳ ಜತೆಜತೆಯಲ್ಲೇ ಒಂದು ವಿಶಿಷ್ಟ ಆಚರಣೆ ನಡೆಯುತ್ತದೆ. ಅದೇ ಹೊಸ್ತೂಟ, ಹೊಸ ಅಕ್ಕಿಯ ಊಟ ಅಥವಾ ಶುದ್ಧಸಂಸ್ಕೃತದಲ್ಲಿ ಹೇಳುವುದಾದರೆ ನವಾನ್ನ. ಸ್ಥಳೀಯ ತುಳು ಸಂಸ್ಕೃತಿಯಲ್ಲಿ ‘ಪುದ್ವಾರ್‌’, ‘ಪುದ್ದಾರ್‌’ ಅಥವಾ ‘ಕುರಾಲ್‌ ಪರ್ಬ’ ಎಂದು ಪ್ರಮುಖವಾದ ಹಬ್ಬ. ಮುಂಗಾರಿನಲ್ಲಿ ಬೆಳೆದ ಫಸಲನ್ನು ಮನೆಯಾಳಗೆ ತುಂಬಿಸುತ್ತ (‘ಇಲ್ಲ್‌ ದಿಂಜಾವುನೆ’ ಎಂದೇ ತುಳುವಿನಲ್ಲಿ ರೂಢಿ) ಧಾನ್ಯ ಬೆಳೆದುಕೊಟ್ಟದ್ದಕ್ಕಾಗಿ ಭೂತಾಯಿಗೆ ಧನ್ಯವಾದ ಸಲ್ಲಿಸಿ ಸಂಭ್ರಮಪಡುವ ಹಬ್ಬ.

ಸೆಪ್ಟೆಂಬರ್‌ ತಿಂಗಳಲ್ಲಿ ಬರುವ ಕನ್ಯಾಸಂಕ್ರಮಣದ ನಂತರ ನಿರ್ನಾಲ್‌(ತುಳು ಹೆಸರು) ಮಾಸದ ಮೊದಲ ದಿನ ಅಥವಾ ಮೊದಲ ಶುಕ್ರವಾರದಂದು ಮುಂಗಾರುಬೆಳೆಯ ಕಟಾವು ಆರಂಭವಾಗಬೇಕು. ಅವತ್ತು ಮನೆಮಂದಿಗೆಲ್ಲ ಸಡಗರ. ಕೃಷಿಗೆ ಬಳಸುವ ವಿವಿಧ ಉಪಕರಣಗಳೂ ಸೇರಿದಂತೆ ಎಲ್ಲವೂ ಮತ್ತು ಎಲ್ಲರೂ ಶುಚಿಗೊಂಡು ಧಾನ್ಯಲಕ್ಷ್ಮಿಯ ಸ್ವಾಗತಕ್ಕೆ ಸಿದ್ಧರಾಗುತ್ತಾರೆ.

ಮನೆಯ ಯಜಮಾನ ಬತ್ತದಗದ್ದೆಗೆ ನಮಸ್ಕಾರಮಾಡಿ ಮೊಟ್ಟಮೊದಲ ತೆನೆಗೊಂಚಲನ್ನು ಕೊಯ್ಯುತ್ತಾನೆ. ಆಮೇಲೆ ಮನೆಮಂದಿಯೆಲ್ಲ ಸರದಿಯಂತೆ ಒಂದೊಂದು ಹಿಡಿಯಷ್ಟು ತೆನೆ ಕೊಯ್ದು (ಒಟ್ಟು ಬೆಸ ಸಂಖ್ಯೆಯ ಗೊಂಚಲುಗಳಿರುವಂತೆ) ಬೆತ್ತದಿಂದ ಮಾಡಿದ ಮೊರದಲ್ಲಿಟ್ಟು ಮನೆಗೆ ತರುತ್ತಾರೆ. ಬತ್ತದ ತೆನೆಯ ಜತೆಯಲ್ಲೇ ಮಾವಿನೆಲೆ, ಹಲಸಿನಮರದ ಎಲೆ, ಎಳೆಮುಳ್ಳುಸೌತೆ, ಸಿಂಗಾರ (ಅಡಿಕೆಮರದ ಹೂ), ‘ದಡ್ಡಾಲ್‌’ ಎಂಬಮರದ ನಾರು (ಮುಂದೆ ಇದು ತೆನೆಯನ್ನು ಮನೆಯಲ್ಲಿನ ವಿವಿಧ ವಸ್ತುಗಳಿಗೆ ಕಟ್ಟಲು ಉಪಯೋಗವಾಗುತ್ತದೆ) ಇತ್ಯಾದಿಯೆಲ್ಲವೂ ಪೂಜಾಸಾಮಗ್ರಿಯಾಗಿ ಅಣಿಗೊಳ್ಳುತ್ತವೆ. ಧೂಪ ದೀಪ ಗಂಧ ಅಕ್ಷತೆಯಾಂದಿಗೆ ಮನೆದೇವರಿಗೆ ಪೂಜೆ ಸಲ್ಲುತ್ತದೆ. ಬತ್ತವನ್ನು ಬಿಡಿಸಿ ಅಕ್ಕಿಕಾಳನ್ನು ಮನೆಯಾಳಗೆಲ್ಲ ಚೆಲ್ಲಿ ಸಾಂಕೇತಿಕವಾಗಿ ಮನೆಯನ್ನು ಧಾನ್ಯದಿಂದ ತುಂಬಲಾಗುತ್ತದೆ. ಇದು ಹಬ್ಬದ ಒಂದು ಹಂತ.

ಅನಂತರ ಬತ್ತದತೆನೆಯ ಒಂದೆರಡು ಗೊಂಚಲುಗಳನ್ನು ಪ್ರತ್ಯೇಕಿಸಿ ಮಾವಿನೆಲೆ ಅಥವಾ ಹಲಸಿನಎಲೆಯನ್ನು ಕವಚವಾಗಿ ಕಟ್ಟಿ ಈರೀತಿಯ ಗೊಂಚಲುಗಳನ್ನು ದಡ್ಡಾಲ್‌ ಮರದ ನಾರನ್ನುಪಯೋಗಿಸಿ ಮನೆಯ ಒಳಹೊರದ ಪ್ರಮುಖ ವಸ್ತುಗಳಿಗೆಲ್ಲ - ತೆಂಗಿನಮರ, ಅಡಿಕೆಮರ, ದನದಕೊಟ್ಟಿಗೆಯ ತೊಲೆ, ನೇಗಿಲು ಮೊದಲಾದ ಕೃಷಿ ಸಲಕರಣೆಗಳು, ವಾಹನಗಳು, ಯಂತ್ರಗಳು, ಮನೆಯ ಕಂಬಗಳು, ಅಡುಗೆಮನೆಯಲ್ಲಿ ಅಕ್ಕಿತುಂಬಿಸಿಟ್ಟ ಪಾತ್ರೆ... ಹೀಗೆ - ಕಟ್ಟಲಾಗುತ್ತದೆ. ದೈನಂದಿನ ಜೀವನದ ಅವಿಭಾಜ್ಯ ಅಂಗಗಳಾದ ಅವೆಲ್ಲದರ ಮೇಲೂ ಧಾನ್ಯಲಕ್ಷ್ಮಿಯ ಅನುಗ್ರಹವನ್ನು ಪ್ರಾರ್ಥಿಸಲಾಗುತ್ತದೆ.

ಮಾರನೆದಿನ (ಅಥವಾ ಅನುಕೂಲಕರವಾಗಿ ಮುಂದೆ ವಿಜಯದಶಮಿ, ಹುಣ್ಣಿಮೆ ಅಥವಾ ಯಾವುದಾದರೂ ಶುಭದಿನ) ಹಬ್ಬದ ದ್ವಿತೀಯಾರ್ಧ. ಈಮೊದಲು ಕೊಯ್ದುತಂದ ತೆನೆಯನ್ನು ಅಕ್ಕಿಯಾಗಿ ಮಾಡುತ್ತಾರೆ. ಅದೇ ಹೊಸ ಅಕ್ಕಿ, ಹೊಸ ಫಸಲು. ಹೊಸ ಅಕ್ಕಿ ಊಟಕ್ಕೆ ನೆಂಟರಿಷ್ಟರನ್ನು ಆಮಂತ್ರಿಸಲಾಗುತ್ತದೆ. ತೆಂಗಿನಕಾಯಿಹಾಲಿನಲ್ಲಿ ಹೊಸ ಅಕ್ಕಿಯನ್ನು ಬೇಯಿಸಿ ಮಾಡಿದ ಗಂಜಿಯೇ ಅವತ್ತಿನ ಪರಮಾನ್ನ! ಕೆಲವೊಂದು ಮನೆತನಗಳ ವಿಶೇಷ ಸಂಪ್ರದಾಯವೆಂದರೆ ‘ಹೊಸ್ತೂಟ’ದ ದಿನ ಬಾಳೆಎಲೆಯ ಪಕ್ಕದಲ್ಲೇ ಅರಸಿನದ ಎಲೆಯನ್ನೂ ಇಟ್ಟು ಅದರಲ್ಲಿ ಈ ಹೊಸ ಅಕ್ಕಿಯ ಪಾಯಸವನ್ನು ಬಡಿಸುವುದು. ಅರಸಿನದೆಲೆಯ ಮೇಲೆ ಬಿಸಿಪಾಯಸ ಬಿದ್ದಾಗಿನ ಪರಿಮಳವನ್ನು ಇಲ್ಲಿ ಅಕ್ಷರಗಳಲ್ಲಿ ಹೇಗೆ ಬಣ್ಣಿಸಲಿ!

ಹೊಸ್ತೂಟ ಆಚರಣೆಯಾಳಗಿನ ಇನ್ನೊಂದು ಸಂಪ್ರದಾಯವೆಂದರೆ ಹೊಸಅಕ್ಕಿ ನೆನೆಸಿ ರುಬ್ಬಿದ ಹಿಟ್ಟನ್ನು ಹರಿವಾಣಕ್ಕೆ ಹಾಕಿ ಅದರಲ್ಲಿ ಮನೆಯ ಪುಟ್ಟ ಮಗುವಿನ ಕೈಗಳನ್ನು, ಕಾಲುಗಳನ್ನು ಅದ್ದಿ ಅದರ ಮುದ್ರೆಗಳನ್ನು ದೇವರಕೋಣೆಯ ಗೋಡೆಯ ಮೇಲೆ ಮೂಡಿಸುವುದು. ಇವು ಧಾನ್ಯಲಕ್ಷ್ಮಿಯ ಪುಟ್ಟಪುಟ್ಟ ಹೆಜ್ಜೆಗಳು, ಆಮೂಲಕ ಧಾನ್ಯಲಕ್ಷ್ಮಿಯು ಮನೆಯಾಳಗೆ ಪ್ರವೇಶಿಸಿದಳು ಎಂದು ನಂಬಿಕೆ. ಒಂದಕ್ಕಿಂತ ಹೆಚ್ಚು ಸಣ್ಣ ಮಕ್ಕಳಿರುವ ಕುಟುಂಬಗಳಲ್ಲಂತೂ ಗೋಡೆಯಮೇಲೆ ಅಕ್ಕಿಹಿಟ್ಟಿನ ಪುಟ್ಟಪುಟ್ಟ ಮುದ್ರೆಗಳನ್ನು ಮೂಡಿಸಲು ಪೈಪೋಟಿ.

ಧಾನ್ಯಲಕ್ಷ್ಮಿಗೆ ಸ್ವಾಗತಕೋರಿ, ಆಕೆ ಬಂದುನಿಂತದ್ದಕ್ಕೆ ಧನ್ಯವಾದ ಸೂಚಿಸುವ ಸಂಭ್ರಮದಾಚರಣೆಯ ಕಲ್ಪನೆ ನಿಜಕ್ಕೂ ಅದ್ಭುತವಾದುದಲ್ಲವೇ? ಹಾಗೆ ನೋಡಿದರೆ ಈ ಕಲ್ಪನೆ ಕೇವಲ ಕನ್ನಡಕರಾವಳಿಯಲ್ಲಷ್ಟೇ ಇರುವ ಸಂಪ್ರದಾಯವಲ್ಲ. ಪಕ್ಕದ ಕೊಡಗಿನಲ್ಲಿ ಆಚರಿಸುವ ‘ಹುತ್ತರಿ ಹಬ್ಬ’ದ ಆಶಯವೂ ಅದೇ. ಪ್ರಾದೇಶಿಕವಾಗಿ ವರ್ಷದ ಬೇರೆಬೇರೆ ಅವ-ಧಿಯಲ್ಲಿ ಮೊದಲ ಫಸಲನ್ನು ಕಟಾವುಮಾಡಿ ಮನೆತುಂಬಿಸುವ, ಮನತುಂಬಿಸುವ ಪರ್ವಾಚರಣೆಗಳು ಎಲ್ಲ ಕಡೆಯೂ ಇವೆ. ಕೇರಳದ ಓಣಂ ಆಗಲೀ, ಆಂಧ್ರದ ಸಂಕ್ರಾಂತಿಯಾಗಲೀ, ತಮಿಳ್ನಾಡಿನ ಪೊಂಗಲ್‌ ಆಗಲೀ ಅವುಗಳ ಹಿನ್ನೆಲೆಯೂ ಬೆಳೆಕೊಟ್ಟ ಭೂತಾಯಿಗೆ ಬೆಲೆಬಾಳುವ ನಮನಗಳನ್ನು ಅರ್ಪಿಸುವುದೇ ಆಗಿದೆ.

ವಿದೇಶಗಳಲ್ಲೂ ‘ಹೊಸ ಅಕ್ಕಿ ಊಟ’ವನ್ನು ಸಂಭ್ರಮಿಸುವ ಪದ್ಧತಿಯಿದೆ. ಬಾಂಗ್ಲಾದೇಶದಲ್ಲಿ ಅಗ್ರಹಾಯಣ (ಮಾರ್ಗಶಿರ) ಮಾಸದ ಹುಣ್ಣಿಮೆಯಂದು ‘ನವಾನ್ನ’ ಹಬ್ಬವನ್ನಾಚರಿಸುತ್ತಾರೆ. ವಿಶೇಷವೆಂದರೆ ಅಲ್ಲಿನ ಹಿಂದುಗಳೂ ಮುಸ್ಲಿಮರೂ ಇದನ್ನು ಆಚರಿಸುತ್ತಾರೆ! ಚೀನಾ, ವಿಯೆಟ್ನಾಂ, ಮಲಯಾ, ಇಂಡೊನೇಶ್ಯಾ - ಹೀಗೆ ಅಕ್ಕಿ ಪ್ರಧಾನ ಬೆಳೆಯಾಗಿರುವ ರಾಷ್ಟ್ರಗಳಲ್ಲೆಲ್ಲ ಹೊಸ ಅಕ್ಕಿ ಊಟದ ಸಂಪ್ರದಾಯ ಒಂದಲ್ಲ ಒಂದು ವಿಧದಲ್ಲಿ ಆಚರಣೆಯಲ್ಲಿದೆ. ಅಕ್ಕಿಯ ಹೊರತಾಗಿ ಗೋಧಿ-, ಜೋಳ ಇತ್ಯಾದಿ ಬೆಳೆಯುವ ಯುರೋಪ್‌ನ ರೋಮನ್‌, ಗ್ರೀಕ್‌ ಸಂಸ್ಕೃತಿಗಳೂ ‘ಹಾರ್ವೆಸ್ಟ್‌ ಫೆಸ್ಟಿವಲ್‌’ ಎಂದು ಅತ್ಯಂತ ಭಕ್ತಿ ಶ್ರದ್ಧೆಗಳಿಂದ ಆಚರಿಸುತ್ತವೆ.

ಒಟ್ಟಾರೆಯಾಗಿ ಮನುಕುಲದ ಚರಿತ್ರೆಯುದ್ದಕ್ಕೂ ಭೂತಾಯಿ ಕೊಡುವ ಸಮೃದ್ಧ ಫಲ ಸಂಪತ್ತನ್ನು ಅನುಭವಿಸಿ ಕೃತಜ್ಞತೆಸಲ್ಲಿಸುವ ಪರಿಪಾಟ ನಡೆದುಕೊಂಡುಬಂದಂತಿದೆ. ವಿವಿಧ ಧರ್ಮಗಳ ಸ್ಥಾಪನೆಗೂ ಮೊದಲಿನ ಕಾಲದ ಕೃಷಿಕರು ಬಹುಶಃ ತಾವು ಬೆಳೆಸಿದ ಬೆಳೆಗಳಲ್ಲಿ ಒಂದುರೀತಿಯ ಭೂತಶಕ್ತಿಯನ್ನು ಗುರುತಿಸಿರಬಹುದು. ಬೆಳೆಯನ್ನು ಕೊಯ್ದಾಗ ಆ ಭೂತಶಕ್ತಿಗಳು ಮುಕ್ತಿಹೊಂದುತ್ತವೆಂದೂ ಅವುಗಳ ಉಪಶಮನವಾಗಬೇಕೆಂದೂ ನಂಬಿರಬಹುದು. ವಿವಿಧ ಸಂಸ್ಕೃತಿಗಳಲ್ಲಿ ಹೊಸ ಬೆಳೆಯ ಕಟಾವಿಗೆ ಸಂಬಂ-ಸಿದಂತೆ ಇರುವ ಕೆಲ ವಿ-ಧಿ-ವಿಧಾನಗಳನ್ನು ಗಮನಿಸಿದರೆ ಈ ಅಂಶ ಸ್ಪಷ್ಟವಾಗುತ್ತದೆ.

ಆದರೆ ಕಾಲಕ್ರಮೇಣ ಭೂತಶಕ್ತಿ ನಿವಾರಣೆಗಿಂತಲೂ, ಶರದೃತುವಿನ ಬೆಳೆಕೊಯ್ಲು ಮುಂಬರುವ ದಿನಗಳಲ್ಲಿ (ವಿಶೇಷತಃ ಚಳಿಗಾಲದಲ್ಲಿ) ಏಕೈಕ ಆಹಾರಮೂಲ ಆಗಿರುತ್ತದೆಯೆಂಬ ಅರಿವು ಅಂಥ ಜೀವಸ್ರೋತವನ್ನು ಕರುಣಿಸಿದ ಪ್ರಕೃತಿಮಾತೆಯ ಮೇಲೆ ಮಮತೆ ಗೌರವಗಳನ್ನು ಮೂಡಿಸಿರಬೇಕು. ಅಂತೆಯೇ ಆಚರಣೆಗಳೆಲ್ಲ ಭೂತಶಕ್ತಿನಿವಾರಣೆಯಿಂದ ಬದಲಾಗಿ ಧನ್ಯವಾದ ಸಮರ್ಪಣೆಯತ್ತ ಕೇಂದ್ರೀಕೃತವಾದುವು. ಆಯಾಯ ಪ್ರದೇಶದ ಋತುಮಾನಕ್ಕನುಗುಣವಾಗಿ ವರ್ಷದಲ್ಲೊಮ್ಮೆ ಧನ್ಯವಾದ ಸಮರ್ಪಣೆಗೆಂದೇ ಒಂದು ಹಬ್ಬದಾಚರಣೆಯ ರೂಢಿಯಾಯಿತು.

ಹಾಗಾಗಿಯೇ, ಆಧುನಿಕತೆಯ ಸೋಗಿನಲ್ಲಿ, ವಾಣಿಜ್ಯೀಕರಣದ ಪರಮಾವ-ಧಿ-ಯಲ್ಲಿ, ದೀರ್ಘವಾರಾಂತ್ಯದ ಮೋಜಿನಲ್ಲಿ ನಡೆಯುವುದಾದರೂ ಅಮೆರಿಕನ್‌ ಆಚರಣೆ ‘ಥಾಂಕ್ಸ್‌ಗಿವಿಂಗ್‌’ನದೂ ಕೂಡ ಅಕ್ಷರಶಃ ’ಧಾನ್ಯಲಕ್ಷ್ಮಿಗೆ ಧನ್ಯವಾದ’ ಸಲ್ಲಿಸುವ ಆಶಯವೇ!

ಆ ಮಟ್ಟಿಗೆ ಧನಲಕ್ಷ್ಮಿಗಿಂತ ಧಾನ್ಯಲಕ್ಷ್ಮಿಯೇ ಮೇಲು. ಜಗತ್ತಿನೆಲ್ಲೆಡೆಯಲ್ಲೂ ಸಾಮುದಾಯಿಕ ಮಟ್ಟದಲ್ಲಿ ಸ್ವಾಗತವೈಭವ ಆದರಾತಿಥ್ಯಗಳು ಸಿಗುವುದು ಅವಳಿಗೇ ಅಲ್ಲವೇ?

- [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X