ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪದಾನದ ಅತ್ಯುನ್ನತ ರೂಪ - ಆಕಾಶದೀಪ

By ಶ್ರೀವತ್ಸ ಜೋಶಿ
|
Google Oneindia Kannada News

ಕಾರ್ತೀಕ ಮಾಸದಲ್ಲಿ ಒಂದೇ ಒಂದು ದೀಪವನ್ನು ಹಚ್ಚಿದರೂ ಅದು ಅಶ್ವಮೇಧ ಯಜ್ಞವನ್ನು ಮಾಡಿದಷ್ಟೇ ಪುಣ್ಯಪ್ರದವಾದದ್ದೆಂದು ನಂಬಿಕೆಯಿದೆ. ಆ ಬಗ್ಗೆ ವಿಚಿತ್ರಾನ್ನ-211ರಲ್ಲಿ ಬೆಳಕು.

ಇದೀಗ ಆರಂಭವಾಗಿರುವ ಕಾರ್ತೀಕ ಮಾಸವು (ಚಾಂದ್ರಮಾನ ರೀತ್ಯಾ ಎಂಟನೆಯ ತಿಂಗಳು) ಕೃಷ್ಣನಿಗೆ ಅತ್ಯಂತ ಪ್ರಿಯವಾದುದು ಎಂಬ ಪ್ರತೀತಿಯಿದೆ. ಯುಗಗಳಲ್ಲಿ ಕೃತ(ಸತ್ಯ)ಯುಗ, ಧರ್ಮಗ್ರಂಥಗಳಲ್ಲಿ ವೇದಗಳು, ನದಿಗಳ ಪೈಕಿ ಗಂಗಾ, ಗಿಡಗಳ ಪೈಕಿ ತುಳಸಿ, ತೀರ್ಥಕ್ಷೇತ್ರಗಳಲ್ಲಿ ದ್ವಾರಕಾ, ತಿಥಿಗಳಲ್ಲಿ ಏಕಾದಶಿ ಮತ್ತು ಮಾಸಗಳ ಪೈಕಿ ಕಾರ್ತೀಕ - ಇವಿಷ್ಟೂ ಕೃಷ್ಣನ ನೆಚ್ಚಿನವು ಎನ್ನುತ್ತವೆ ಸ್ಕಂದಪುರಾಣ, ಪದ್ಮಪುರಾಣ, ಭಾಗವತ ಇತ್ಯಾದಿ ಕೃಷ್ಣಕಥೆಯ ಪುರಾಣಗಳು.

ಕಾರ್ತೀಕ ಮಾಸವನ್ನು 'ದಾಮೋದರ’ ಮಾಸವೆಂದೂ (ಮುಖ್ಯವಾಗಿ ವೈಷ್ಣವ ಪಂಥಾನುಯಾಯಿಗಳು) ಕರೆಯುತ್ತಾರೆ. ನಮಗೆಲ್ಲ ಗೊತ್ತಿರುವಂತೆ ದಾಮೋದರ ಎಂಬುದು ಶ್ರೀಕೃಷ್ಣನ ಒಂದು ಹೆಸರು. ಆದರೆ, ಕಾರ್ತೀಕ ಮಾಸಕ್ಕೆ ಯಾಕೆ ಆ ಹೆಸರು ಬಂತು ಮತ್ತು ಅದಕ್ಕಿಂತಲೂ ಮೊದಲು ಕೃಷ್ಣನಿಗೆ ಯಾಕೆ ದಾಮೋದರ ಎಂಬ ಹೆಸರು?

ಈ ವಿವರಗಳಿಗೆ ನಾವು ಶ್ರೀಕೃಷ್ಣ ಪರಮಾತ್ಮನ ಬಾಲಲೀಲೆಗಳನ್ನು ನೆನಪಿಸಿಕೊಳ್ಳಬೇಕಾಗುತ್ತದೆ.

ನಂದಗೋಕುಲದಲ್ಲಿ ಬಾಲಕೃಷ್ಣನ ತುಂಟಾಟಗಳಿಗೆ ಕೊನೆಯೆಂಬುದೇ ಇಲ್ಲ. ಅದೊಂದು ದಿನ ತಾಯಿ ಯಶೋದೆ ಹಾಲೂಡಿಸುವುದನ್ನು ಅರ್ಧಕ್ಕೇ ನಿಲ್ಲಿಸಿ ಬೇರೆ ಕೆಲಸಕ್ಕೆ ತೊಡಗಿದಳು ಎಂಬ ಸಿಟ್ಟಿನಿಂದ ಮನೆಯಾಳಗಿನ ಬೆಣ್ಣೆಗಡಿಗೆಗಳನ್ನೆಲ್ಲ ಒಡೆದುಹಾಕಿದ್ದನಂತೆ ಆ ಬಾಲರೂಪಿ ಭಗವಂತ! ಎಷ್ಟು ರಮಿಸಿದರೂ ಅವನ ಚೇಷ್ಟೆಗಳು ನಿಲ್ಲದಾದಾಗ ಯಶೋದೆ ಒಂದು ಉಪಾಯ ಹೂಡಿದಳು. ದನಕರುಗಳನ್ನು ಕಟ್ಟಲಿಕ್ಕೆ ಉಪಯೋಗಿಸುವ ಹಗ್ಗವನ್ನು ತಂದು ಕೃಷ್ಣನ ಹೊಟ್ಟೆಯ ಸುತ್ತ ಕಟ್ಟಿದಳು. ಹಗ್ಗದ ಇನ್ನೊಂದು ತುದಿಯನ್ನು ಒರಳುಕಲ್ಲಿಗೆ ಬಿಗಿದಳು. ಹೀಗೆ ಹೊಟ್ಟೆಗೆ ಹಗ್ಗ ಕಟ್ಟಲ್ಪಟ್ಟ ಕೃಷ್ಣ 'ದಾಮೋದರ’ ಎನಿಸಿಕೊಂಡ.

ಒರಳುಕಲ್ಲಿಗೆ ಕಟ್ಟಿದಮೇಲಾದರೂ ತುಂಟಪೋರ ಒಂದುಕಡೆ ಸುಮ್ಮನಾಗಬಹುದು ಎಂದು ಯಶೋದೆಯ ಅಂದಾಜು. ಆದರೆ ಕೃಷ್ಣ ಹಗ್ಗದೊಂದಿಗೆ ಆ ಒರಳುಕಲ್ಲನ್ನೂ ಎಳೆದುಕೊಂಡು ಹೋಗಿ, ಅದು ಅವಳಿಮರಗಳಿಗೆ ಸಿಕ್ಕಿಹಾಕಿಕೊಂಡು ಅವು ಮುರಿದುಬಿದ್ದು ಮೋಕ್ಷಹೊಂದಿದುವು, ಮತ್ತೆ ಕುಬೇರನ ಮಕ್ಕಳಾಗಿ ಪುನರುಜ್ಜೀವವಾದರು... ಇತ್ಯಾದಿ ಕಥೆ ಮುಂದುವರಿಯುತ್ತದೆ.

ಕೃಷ್ಣ ಈ ರೀತಿ 'ದಾಮೋದರ ’ನಾದ ಘಟನೆ ನಡೆದದ್ದು ಕಾರ್ತೀಕ ಮಾಸದಲ್ಲಿ. ಆದ್ದರಿಂದಲೇ ಕಾರ್ತೀಕ ಮಾಸಕ್ಕೆ ದಾಮೋದರ ಮಾಸ ಎಂಬ ಹೆಸರು. ಮತ್ತೆ ಕೃಷ್ಣನಿಗೆ ಈ ಮಾಸವು ಅತಿ ಪ್ರಿಯವೂ ಆಗಿರುವುದರಿಂದ ಕೃಷ್ಣಭಕ್ತರ ನಾಲಗೆಯಲ್ಲಿ ಈ ತಿಂಗಳಿಡೀ ದಾಮೋದರನದೇ ಗುಣಗಾನ - ಜಿಹ್ವೇ ಪಿಬಸ್ವಾಮೃತಮೇತದೇವ... ಗೋವಿಂದ ದಾಮೋದರ ಮಾಧವೇತಿ!

ದಾಮೋದರ (ಕಾರ್ತೀಕ) ಮಾಸದಲ್ಲಿ ಪ್ರತಿದಿನವೂ ದಾಮೋದರನನ್ನು ಪೂಜಿಸಬೇಕು, ದಾಮೋದರಾಷ್ಟಕವನ್ನು ಪಠಿಸಬೇಕು, ವೃತನಿಯಮಗಳನ್ನು ಪಾಲಿಸಬೇಕು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ದಾಮೋದರನಿಗೆ ದೀಪದಾನ ಮಾಡಬೇಕು!

ಕಾರ್ತೀಕಮಾಸಕ್ಕೂ ದೀಪಕ್ಕೂ ಇರುವ ನಂಟು ಯುಗಯುಗಗಳಿಂದಲೂ ಬಂದದ್ದು. ಕಾರ್ತೀಕ ಮಾಸದಲ್ಲಿ ಒಂದೇ ಒಂದು ದೀಪವನ್ನು ಹಚ್ಚಿದರೂ ಅದು ಅಶ್ವಮೇಧ ಯಜ್ಞವನ್ನು ಮಾಡಿದಷ್ಟೇ ಪುಣ್ಯಪ್ರದವಾದದ್ದೆಂದು ನಂಬಿಕೆಯಿದೆ. ಮೇರು-ಮಂದಾರ ಪರ್ವತಗಳಷ್ಟು ಪ್ರಮಾಣದಲ್ಲಿ ಪಾಪ ಸಂಚಯವಾಗಿದ್ದವರೂ ಕಾರ್ತೀಕಮಾಸದಲ್ಲಿ ದೀಪ ಬೆಳಗಿದರೆ ಆ ಪಾಪಗಳೆಲ್ಲ ಕಣ್ಣುಮುಚ್ಚಿತೆರೆಯುವುದರೊಳಗೆ ಆ ದೀಪಜ್ಯೋತಿಯಾಂದಿಗೇ ಉರಿದುಹೋಗುತ್ತವೆಯಂತೆ.

English summary
Donating Light is the essence of Diwali(Karthika masa). Akasha Deepa (sky-bag with lights) is a symbol of friendship and fraternity among Hindus. An article by Srivathsa Joshi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X