ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾದುಕಾ ಪ್ರಸಂಗ

By Staff
|
Google Oneindia Kannada News
Srivathsa Joshi *ಶ್ರೀವತ್ಸ ಜೋಶಿ

ಇಲ್ಲ, ಇದು ರಾಮಾಯಣದಲ್ಲಿ ಬರುವ ಭರತನ ಭ್ರಾತೃಪ್ರೇಮದ ಪಾದುಕಾ ಪ್ರಸಂಗವಲ್ಲ, ದೇವಸ್ಥಾನದ ಹೊರಗಡೆ ಬಿಟ್ಟ ಪಾದರಕ್ಷೆಗಳು ಅಲ್ಲಿಂದ ಮಾಯವಾಗಿಬಿಡುವ ಸರ್ವಸಾಮಾನ್ಯವಾದ ಪ್ರಸಂಗಗಳ ಪೈಕಿಯೂ ಅಲ್ಲ; ಬಾಟಾ ಕಂಪೆನಿಯ ಚಪ್ಪಲಿಗಳ ಬೆಲೆ ಯಾಕೆ ಹತ್ತರ ಅಪವರ್ತ್ಯದ ಸಂಖ್ಯೆಗಿಂತ ಒಂದು ಪೈಸೆ ಕಡಿಮೆ ಇರುತ್ತದೆ ಎಂಬುದರ ಕುರಿತು ಸಾಮಾನ್ಯಜ್ಞಾನದ ಕ್ಷ-ಕಿರಣವೂ ಅಲ್ಲ.

ಆದರೂ ಇವತ್ತಿನ ವಿಷಯ ಪಾದುಕೆಗಳ ಬಗ್ಗೆಯೇ ಎನ್ನುವುದಂತೂ ನಿಜ. ಒಂದರ್ಥದಲ್ಲಿ ಪಾದುಕೆಗಳ ಬಗ್ಗೆ ಎನ್ನುವುದಕ್ಕಿಂತಲೂ ಪಾದುಕೆಗಳು ಇಲ್ಲದಿರುವ ಅಂದರೆ ‘ಪಾದುಕಾರಹಿತ’ (barefoot) ಸ್ಥಿತಿಯ ಬಗ್ಗೆ. ನೀವಿದನ್ನು ಎಲ್ಲಿ ಕುಳಿತು (ಆಫೀಸಿನಲ್ಲಿ ದಿನಾ ಬೆಳಿಗ್ಗೆ ಹಾಟ್‌ಮೈಲ್‌, ಯಾಹೂಮೈಲ್‌ ಚೆಕ್‌ ಮಾಡಿದ ಕೂಡಲೆ ದಟ್ಸ್‌ಕನ್ನಡ ಪುಟಗಳ ಮೇಲೆ ಕಣ್ಣಾಡಿಸುವವರ ಪೈಕಿಯವರಾದರೆ ಆಫೀಸಿನಲ್ಲಿ, ಮಿಕ್ಕವರು ಮನೆಯಲ್ಲಿ, ಸೈಬರ್‌ಕೆಫೆಯಲ್ಲಿ, ಲೈಬ್ರರಿಯಲ್ಲಿ ಇತ್ಯಾದಿ) ಓದುತ್ತಿರುವಿರಿ ಎಂಬುದನ್ನವಲಂಬಿಸಿ ಈಕ್ಷಣಕ್ಕೆ ನೀವು ಪಾದುಕೆಗಳನ್ನು ಧರಿಸಿಕೊಂಡವರಾಗಿರಬಹುದು ಅಥವಾ ಪಾದುಕಾರಹಿತ ಸ್ಥಿತಿಯಲ್ಲಿರಬಹುದು. ಹೇಗಿದ್ದರೂ ಪರವಾಇಲ್ಲ, ಯಾಕೆಂದರೆ ಈ ಲೇಖನವು ನಿಮ್ಮ ಪಾದುಕೆಗಳ ಬಗ್ಗೆಯಂತೂ ಅಲ್ಲ!

ಬಂಗಾರದ ಮನುಷ್ಯ ಚಿತ್ರದ ಕೊನೆಯ ದೃಶ್ಯ - ಆ ಚಿತ್ರವನ್ನು ನೋಡಿರುವ ಪ್ರತಿಯಾಬ್ಬರ ಮನದಲ್ಲೂ ಅಚ್ಚಳಿಯದೇ ನಿಂತಿರುವಂಥದ್ದು - ನಿಮಗೆ ನೆನಪಿರಬಹುದು. ಅದೇ, ಊಟಮಾಡುತ್ತಿರುವಾಗಲೂ ಕೆಟ್ಟಮಾತುಗಳು ಕೇಳಿಬಂದಾಗ ಕೈಗೆತ್ತಿಕೊಂಡ ತುತ್ತನ್ನು ಅಲ್ಲೇಬಿಟ್ಟು ಮನೆಯಿಂದ ಹೊರನಡೆವ ಡಾ।ರಾಜ್‌, ಪಾದರಕ್ಷೆಗಳನ್ನು ಒಮ್ಮೆ ಹಾಕಿಕೊಂಡರೂ ಆಮೇಲೆ ಅವನ್ನೂ ಅಲ್ಲೇ ಬಿಟ್ಟು ಪಾದುಕಾರಹಿತನಾಗಿಯೇ ನಡೆಯುತ್ತ ದೂರದೂರ ಸಾಗಿ ಅಂತರ್ಧಾನರಾಗುವ ದೃಶ್ಯ - ಅದಕ್ಕೇ ಅವರು ‘ಬಂಗಾರದ ಮನುಷ್ಯ’; ಪಾದುಕಾರಹಿತನಾಗಿ ನಡೆದದ್ದರಿಂದ ಶ್ರೀರಾಮಚಂದ್ರನಿದ್ದಂತೆ! ಯಾಕೆಂದರೆ ರಾಮಾಯಣದಲ್ಲಿ, ಭರತನು ಪಾದುಕೆಗಳನ್ನೊಯ್ದ ಮೇಲೆ ವನವಾಸದ ಉಳಿದ ಅವಧಿಯನ್ನು ಶ್ರೀರಾಮಚಂದ್ರನು ಪಾದುಕಾರಹಿತನಾಗಿಯೇ ಕಳೆದದ್ದಲ್ಲವೇ? ಹೋಗಲಿ, ರಾಮಾಯಣದ ಕಥೆಯೆಲ್ಲ ಯಾಕೆ, ಪ್ರಖ್ಯಾತ ಚಿತ್ರನಿರ್ದೇಶಕ ದಿ।ಜಿ.ವಿ.ಐಯರ್‌ ಪಾದುಕಾರಹಿತರಾಗಿಯೇ ಜೀವನವನ್ನು (ಅಕ್ಷರಶಃ ಕಾಲುಗಳನ್ನು) ಸವೆದ ಸಂಗತಿ ನಮಗೆಲ್ಲ ಗೊತ್ತಿರುವಂಥದ್ದೇ ಆಗಿದೆ.

ಹಾಗಾಗಿ ‘ಪಾದುಕಾರಹಿತ ಸ್ಥಿತಿ’ ಎಂದರೆ ಊಹಿಸಲಸದಳ ಸಂಗತಿಯೇನೂ ಅಲ್ಲ; ವಿಚಿತ್ರಾನ್ನದಲ್ಲಿ ಮಂಥನಗೊಳ್ಳುತ್ತಿದೆಯೆಂದ ಮೇಲೆ ಸಂಕೀರ್ಣ ವಿಚಾರ ಅಲ್ಲವೇ ಅಲ್ಲ. ಆದರೆ ಆ ಸ್ಥಿತಿಗೆ ಒಂದು intangible ಹಿರಿಮೆ, ಘನತೆಯಿದೆ ನೋಡಿ, ಅದು ಮುಖ್ಯವಾದದ್ದು; ಚಿಂತನಯೋಗ್ಯವಾದದ್ದು.

*

ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ನಮಗೆ ಸುಮಾರಾಗಿ ಶಾಲೆಗೆ ಹೋಗುವುದಕ್ಕಾರಾಂಭಿಸುವವರೆಗೂ ಪಾದರಕ್ಷೆಗಳನ್ನು ಹಾಕಿಕೊಳ್ಳುವ ಕ್ರಮವಿರುತ್ತಿರಲಿಲ್ಲ. ನಮ್ಮ ಹಳ್ಳಿಶಾಲೆಗೆ ಎಷ್ಟೋ ವಿದ್ಯಾರ್ಥಿಗಳು ಬರಿಕಾಲ್ನಡಿಗೆಯಲ್ಲಿ ಬರುವವರು. ಪಾದರಕ್ಷೆಗಳನ್ನು ಧರಿಸಿ ಬರುವ ಕೊಂಚಮಟ್ಟಿನ ‘ಉಳ್ಳವರು’, ಮಾತ್ರವಲ್ಲ ಅಧ್ಯಾಪಕರು ಸಹಿತ ತರಗತಿಕೋಣೆಯಾಳಗೆ ಹೋಗುವಾಗ ಪಾದರಕ್ಷೆಗಳನ್ನು ಹೊರಗೆಬಿಡಬೇಕಿತ್ತು. ಶಾಲೆಯ ಪಾವಿತ್ರ್ಯ ಎಷ್ಟಿತ್ತು ನೋಡಿ! ದೇವಸ್ಥಾನದಲ್ಲಂತೂ ಹೊರಗಿನ ಪ್ರಾಕಾರದೊಳಕ್ಕೆ ಸಹ ಬರಿಗಾಲಲ್ಲಿ ಮಾತ್ರ ಪ್ರವೇಶ. ನಮ್ಮೂರಲ್ಲಿ ಕೆಲವರು ದೇವಸ್ಥಾನದ ದಾರಿಯಾಗಿ ನಡೆದುಹೋಗುವಾಗ, ದೇವರ ದರ್ಶನ ಮಾಡಿಕೊಂಡು ಹೋಗುವಷ್ಟು ಪುರುಸೊತ್ತಿಲ್ಲವಾಗಿ, ದಾರಿಯಲ್ಲೇ ಒಂದು ಕ್ಷಣ ನಿಂತು ಪಾದರಕ್ಷೆಗಳನ್ನು ಕಳಚಿ ಕಣ್ಮುಚ್ಚಿ ದೇವರಿಗೆ ನಮಿಸಿ ಆಮೇಲೆ ಮುನ್ನಡೆಯುತ್ತಿದ್ದರು. ಪಾದುಕಾರಹಿತರಾದರೆ ಮಾತ್ರ ದೇವರು ತನ್ನನ್ನು ಅನುಗ್ರಹಿಸಬಹುದು ಎಂಬ ಪೂಜ್ಯಭಾವದ ಅಭಿವ್ಯಕ್ತಿ ಅದು.

ಮತ್ತೊಂದು ನೆನಪು ನಮ್ಮ ತಂದೆಯವರ ಪರಿಪಾಠದ್ದು. ಶ್ರಮಜೀವಿಯಾಗಿದ್ದ ಅವರು ಮನೆ ಸುತ್ತಲ ಕೆಲಸಗಳನ್ನು ಮಾಡುವಾಗ, ತೋಟಕ್ಕೆ ಹೋಗುವಾಗ ಇತ್ಯಾದಿ ಬರಿಗಾಲಲ್ಲೇ ನಡೆಯುತ್ತಿದ್ದರು. ನಮ್ಮೂರಿಂದ ಕಾರ್ಕಳ ಪೇಟೆಗೋ ಅಥವಾ ಇನ್ನಾವುದೋ ದೂರದೂರಿಗೆ (ಮೊದಲೆಲ್ಲ ನಡೆದುಕೊಂಡೇ, ಆಮೇಲೆ ಬಸ್‌ ಸರ್ವಿಸ್‌ ಶುರುವಾದ ಮೇಲೆ ಬಸ್‌ನಲ್ಲಿ) ಹೋಗುವಾಗ ಮಾತ್ರ ಅವರು ಪಾದರಕ್ಷೆ ಹಾಕಿಕೊಳ್ಳುತ್ತಿದ್ದರು. ಅಷ್ಟಾದರೂ ಪೇಟೆಯಲ್ಲಿ ಅವರ ನೆಚ್ಚಿನ ಅಂಗಡಿಮುಂಗಟ್ಟುಗಳೊಳಗೆ ಪ್ರವೇಶಿಸುವಾಗ ಪಾದರಕ್ಷೆಗಳನ್ನು ಕಳಚಿಟ್ಟು ಒಳಗೆ ಕಾಲಿಡುತ್ತಿದ್ದರು. ಕಾರ್ಕಳದಲ್ಲಿ ಪ್ರಖ್ಯಾತ ಮೆ।ಟಿ.ವಾಸುದೇವ ನಾಯಕ್‌ ಜವಳಿ ಅಂಗಡಿಗೆ ನಮ್ಮ ತಂದೆಯವರು ಬಟ್ಟೆ ಖರೀದಿಇಲ್ಲದಿದ್ದರೂ ವಾಸುದೇವನಾಯಕರನ್ನು ಮಾತಾಡಿಸಿ ಬರಲಿಕ್ಕಾದರೂ ಹೋಗುತ್ತಿದ್ದುದುಂಟು; ಆಗಲೂ ಅಷ್ಟೇ, ದೇವಸ್ಥಾನವನ್ನು ಪ್ರವೇಶಿಸಿದಂತೆ ಪಾದರಕ್ಷೆಗಳನ್ನು ಹೊರಗಿಟ್ಟೇ ಒಳನಡೆಯುತ್ತಿದ್ದರು. ಅಂಗಡಿಯಾಡೆಯನಿಗೆ ಅವನ ಅಂಗಡಿಯೆಂದರೆ ‘ಅನ್ನವೊದಗಿಸುವ’ ದೇಗುಲ, ಅದರ ಪಾವಿತ್ರ್ಯಕ್ಕೆ ತಾನು ಗೌರವ ಕೊಡಬೇಕೆಂಬುದು ಅವರ ಉದಾತ್ತ ಚಿಂತನೆಯಾಗಿತ್ತಿರಬಹುದು.

ಪಾದುಕಾರಹಿತ ಸ್ಥಿತಿಯ ಮಹತ್ವಕ್ಕೆ ಸಂಬಂಧಿಸಿದಂತೆಯೇ ನನಗೆ ಇನ್ನೂ ಒಂದು ನೆನಪಾಗುವುದೆಂದರೆ ನನ್ನ ಇಂಜನಿಯರಿಂಗ್‌ ಕಾಲೇಜ್‌ ಸಹಪಾಠಿ ಕೇಶವಮೂರ್ತಿ ಎಂಬ ಸ್ನೇಹಿತನದು. ಮೈಸೂರಲ್ಲಿ ಹುಟ್ಟಿಬೆಳೆದು, ಅಲ್ಲಿನ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಪಿಯುಸಿವರೆಗೆ ವಿದ್ಯಾಭ್ಯಾಸ ಮುಗಿಸಿ ಇಂಜನಿಯರಿಂಗ್‌ಗೆ ದಾವಣಗೆರೆಗೆ ಬಂದಿದ್ದ ಕೇಶವಮೂರ್ತಿ, ಹಾಸ್ಟೆಲಲ್ಲಿ ನನ್ನ ರೂಮ್‌ಮೇಟ್‌. ಹಾಸ್ಟೆಲ್‌ ಮೆಸ್‌ನೊಳಕ್ಕೆ ಎಲ್ಲರೂ ಚಪ್ಪಲಿಹಾಕಿಕೊಂಡೇ ಹೋಗಿ ಹಾಗೆಯೇ ಊಟ ಮಾಡುತ್ತಿದ್ದುದು ಕೇಶವಮೂರ್ತಿಗೆ ಮೊದಮೊದಲು ತೀರಾ ಮುಜುಗರ ತರುತ್ತಿತ್ತು; ಅದನ್ನವನು ನಮ್ಮೆಲ್ಲರೊಂದಿಗೆ ವ್ಯಕ್ತಪಡಿಸುತ್ತಿದ್ದುದೂ ಉಂಟು. ಕ್ರಮೇಣ ಅವನಿಗೂ ಚಪ್ಪಲಿ ಹಾಕಿಕೊಂಡಿರುವಾಗಲೇ ಊಟ ಮಾಡುವುದು ರೂಢಿಯಾಯಿತೆನ್ನಿ.

ಎಷ್ಟೊ ಕಡೆ ಸಮಾರಂಭಗಳಲ್ಲಿ ವೇದಿಕೆಗೆ ಅಥವಾ ಮದುವೆಛತ್ರದಲ್ಲಿ ವೇದಿಕೆಯ ಮೇಲಿರುವ ಕಲ್ಯಾಣಮಂಟಪದ ಹತ್ತಿರಕ್ಕೆ ಹೋಗುವಾಗ ಪಾದುಕಾರಹಿತರಾಗಿರಬೇಕೊ ಬೇಡವೊ ಎಂಬ ಇಬ್ಬಂದಿತನ ನಮಗೆ ಎದುರಾಗುವುದಿದೆ. ಪಾದರಕ್ಷೆಗಳನ್ನು ಹಾಕಿಕೊಂಡೇ ಹೋದರೆ ಉದ್ಧಟತನವನ್ನು ತೋರಿದಂತಾಗುತ್ತದೊ ಏನೊ, ವೇದಿಕೆಯ ಪಾವಿತ್ರ್ಯವನ್ನು ಮಲಿನಮಾಡಿದಂತಾಗುತ್ತದೊ ಏನೊ ಎಂಬ ಅನುಮಾನ ಒಂದೆಡೆ, ಪಾದರಕ್ಷೆಗಳನ್ನು ಕಳಚಿಟ್ಟುಹೋದರೆ ವಾಪಸ್‌ ಬಂದಾಗ ಆ ಜನಜಂಗುಳಿಯಲ್ಲವು ಎಲ್ಲಿ ಮಾಯವಾಗಿಬಿಡುತ್ತವೊ ಎಂಬ ಹೆದರಿಕೆ ಇನ್ನೊಂದೆಡೆ. ಒಂದು ಮಾತಂತೂ ನಿಜ, ಚಪ್ಪಲಿ ಹಾಕೋದು ಬಿಡೋದು ಅವರವರ ಇಷ್ಟವಾದರೂ ಈ ಎಲ್ಲ ಸನ್ನಿವೇಶಗಳಲ್ಲಿ ನಮ್ಮೊಳಗಿನ ಸಂಸ್ಕಾರ-ಸಂಸ್ಕೃತಿಯ ಸೂಕ್ಷ್ಮಗಳು ಎಷ್ಟು ನವಿರಾಗಿ ಪ್ರಸ್ತುತಗೊಳ್ಳುತ್ತವೆ ಎಂದು ಅನಿಸುವುದಿಲ್ಲವೇ?

*

ಅಷ್ಟೆಲ್ಲ ಭಾವುಕವಾದ ಪೀಠಿಕೆಯ ಕೊಂಕಣ ಸುತ್ತಿ ಸೀಧಾಸಾದಾ ವಿಷಯದ ಮೈಲಾರಕ್ಕೆ ಬಂದರೆ, ವಿಷಯ ಏನಪ್ಪಾ ಅಂತಂದ್ರೆ, ಪಾದುಕಾರಹಿತ ಸ್ಥಿತಿಯಲ್ಲಿ ಅಂದರೆ ಪಾದರಕ್ಷೆಗಳನ್ನು ಧರಿಸದೆ ಕಾರು ಚಲಾಯಿಸಬಹುದೇ? ವಿಶೇಷವಾಗಿ ಇಲ್ಲಿ ಅಮೆರಿಕದಲ್ಲಿ ಪಾದುಕಾರಹಿತರಾಗಿ ಕಾರುಚಾಲನೆಗೆ ಕಾನೂನಿನ ಅಂಗೀಕಾರವಿದೆಯೇ ಅಥವಾ ನಿಷೇಧವಿದೆಯೇ ಎಂಬ ಜಿಜ್ಞಾಸೆ!

ಯಾಕೆ ಈ ಪ್ರಶ್ನೆ ಬಂತು? ಬಂಗಾರದ ಮನುಷ್ಯ ರಾಜೀವನಂತೆ, ಮರ್ಯಾದಾಪುರುಶೋತ್ತಮನಾದ ಶ್ರೀರಾಮಚಂದ್ರನಂತೆ, ಅಥವಾ ಜಿ.ವಿ.ಐಯರ್‌ರಂತೆ ಪಾದುಕಾರಹಿತನಾಗಿ (ಮನೆಯಿಂದ ಹೊರಗೆ ಹೋಗುವಾಗ) ನಡೆದಾಡುವಂಥ ಮಹಾನುಭಾವ ನಾನಲ್ಲವಾದರೂ ಕಾರು ಚಲಾಯಿಸುವಾಗ ಮಾತ್ರ ಪಾದುಕಾರಹಿತ ಸ್ಥಿತಿ ನನಗೆ ಬಹಳ ಇಷ್ಟವಾದದ್ದು! ಇದನ್ನು ಕೇಳಿ ನಿಮಗೆ ಸಿಕ್ಕಾಪಟ್ಟೆ ಆಶ್ಚರ್ಯವಾಗಿರಬಹುದಾದರೂ ನಿಜವಾಗ್ಲೂ ಹೇಳುತ್ತೇನೆ - ನಾನು ಭಾರತದಲ್ಲಿದ್ದಾಗ ನನ್ನ ಮಾರುತಿಕಾರನ್ನು ಡ್ರೈವಿಸುತ್ತಿದ್ದದ್ದು ಪಾದುಕಾರಹಿತನಾಗಿ; ಇಲ್ಲಿ ಅಮೆರಿಕೆಗೆ ಬಂದಮೇಲೆ ನನ್ನ ಹೊಂಡಾ ಎಕಾರ್ಡ್‌ಅನ್ನು ಡ್ರೈವಿಸುವುದೂ ಪಾದುಕಾರಹಿತನಾಗಿ!

ಓಕೆ, ಆದರೆ ಯಾಕೆ ಎಂದು ಉಪ್ಪಿ ಸ್ಟೈಲಲ್ಲಿ ಕೇಳ್ತಿದ್ದೀರಾ? ಪಾದುಕಾರಹಿತನಾಗಿ ಕಾರು ಚಲಾಯಿಸುವುದರಲ್ಲಿ ಒಂದು ವರ್ಣನಾತೀತ ಅಮಿತಾನಂದವಿದೆ, ಅದರ ರುಚಿ ಒಮ್ಮೆ ಸಿಕ್ಕಮೇಲೆ (ಕಾರ್‌ ಡ್ರೈವಿಂಗ್‌ ಕಲಿಕೆಯ ಶ್ರೀಗಣೇಶಾಯನಮಃ ಮಾಡುವಾಗ ಡ್ಯಾಷ್‌ಬೋರ್ಡ್‌ ಗಣಪನಿಗೆ ನಮನ ಸಲ್ಲಿಸುವ ವೇಳೆ ಪಾದರಕ್ಷೆಗಳನ್ನು ಕಳಚಿ ಆಮೇಲೆ ಹಾಕಿಕೊಳ್ಳಲಿಕ್ಕೆ ಮರೆತದ್ದಿರಲೂಬಹುದು) ಈಗ ಅದೇ ಒಳ್ಳೆಯದೆನಿಸುತ್ತದೆ. ನನ್ನ ಈ ವಿಚಿತ್ರ ಅಭ್ಯಾಸವನ್ನು ನೋಡಿದ/ಕೇಳಿದ ಎಷ್ಟೋ ಜನ ಈಬಗ್ಗೆ ಆಶ್ಚರ್ಯಚಿಹ್ನೆಗಳಾದದ್ದೂ ಇದೆ. ಅವರಿಗೆಲ್ಲ ‘ಪಾದುಕಾರಹಿತ ಸ್ಥಿತಿ’ಯ ಆಧ್ಯಾತ್ಮ ತತ್ವಗಳನ್ನು ನಾನು ಬೋಧಿಸುವುದಿಲ್ಲವಾದರೂ (ಯಾಕೆಂದರೆ ಕಾರಿಂದ ಇಳಿಯಬೇಕಿದ್ದರೆ ನಾನೂ ಪಾದರಕ್ಷೆಗಳನ್ನು ಧರಿಸುವವನೇ) ಒಂದು ರೀತಿಯ ಸಂತೋಷ, ಹೆಮ್ಮೆ ನನಗೆ ಆಗುತ್ತದೆ.

ಆದರೆ ನಾನೊಬ್ಬನೇ ಅಂಥ ವಿಚಿತ್ರ ಮನುಷ್ಯ ಅಂತಂದುಕೊಳ್ಳಬೇಡಿ. Is it illegal to drive barefoot? ಎಂಬ ವಿಷಯದ ಕುರಿತು ಅಮೆರಿಕದಲ್ಲಿ, ಅಂತರ್ಜಾಲದಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಜೇಸನ್‌ ಹೈಮ್‌ಬಾಗ್‌ ಎನ್ನುವ ಅಮೆರಿಕನ್‌ ಪ್ರಜೆಯಾಬ್ಬ ಇಲ್ಲಿನ ಐವತ್ತೂ ಸಂಸ್ಥಾನಗಳ ಡಿ.ಎಮ್‌.ವಿ ಇಲಾಖೆಗಳಿಗೆ ‘ನಿಮ್ಮ ಸಂಸ್ಥಾನದಲ್ಲಿ ಪಾದುಕಾರಹಿತರಾಗಿ ಕಾರುಚಾಲನೆಗೆ ಕಾನೂನಿನ ಸಮ್ಮತಿಯಿದೆಯೇ ಇಲ್ಲವೇ?’ ಎಂಬ ಸ್ಪಷ್ಟೀಕರಣವನ್ನು ಕೋರಿ ಪತ್ರ ಬರೆದು 42 ಸಂಸ್ಥಾನಗಳ ಇಲಾಖೆಗಳಿಂದ ಉತ್ತರವನ್ನೂ ಪಡೆದಿದ್ದಾನೆ, ಮತ್ತು ಆ ಉತ್ತರಗಳೆಲ್ಲ ‘ಧಾರಾಳವಾಗಿ! ಕಾರು ಚಲಾಯಿಸುವಾಗ ಪಾದರಕ್ಷೆಗಳನ್ನು ಧರಿಸಿಯೇ ಇರಬೇಕೆಂಬ ಯಾವ ನಿಯಮವೂ ನಮ್ಮಲ್ಲಿಲ್ಲ...’ ಎಂದೇ ಆಗಿವೆ! ಆ ಉತ್ತರಗಳ ಸಂಗ್ರಹವು ಅಂತರ್ಜಾಲಪುಟವೊಂದರಲ್ಲಿ ಇದೆ, ನೋಡಿ. ಇಂಟರೆಸ್ಟಿಂಗ್‌ ಏನೆಂದರೆ, ಮೋಟರ್‌ಬೈಕ್‌ ಚಲಾಯಿಸಲು ಕಡ್ಡಾಯವಾಗಿ ಪಾದರಕ್ಷೆಗಳನ್ನು ಧರಿಸಿರಬೇಕು ಎಂದು ಬಹುತೇಕ ಸಂಸ್ಥಾನಗಳ ಕಾಯಿದೆಗಳು ತಿಳಿಸುತ್ತವೆ; ಕಾರ್‌ ಡ್ರೈವಿಂಗ್‌ ವೇಳೆ ಫೂಟ್‌ವೇರ್‌ ಕಡ್ಡಾಯವೇ ಇಲ್ಲವೇ ಎಂಬುದರ ಬಗ್ಗೆ ಮಾತ್ರ ಅವು ಮೌನವಾಗಿವೆ.

ಇರಲಿ, ಪರ್ಸನಲ್‌ ಪ್ರಿಫರೆನ್ಸ್‌ ವಿಷಯಗಳ ಪೈಕಿ ಅದೂ ಒಂದು. ಅವರವರ ಭಾವಕ್ಕೆ ಅವರವರ ಭಕುತಿಗೆ ಅವರವರ ಕನ್ವೀನಿಯೆನ್ಸಿಗೆ... ಆದರೆ barefoot ಫಿಲಾಸಫಿಯನ್ನು ಇಡೀ ಜೀವನಶೈಲಿಗೆ ಅಳವಡಿಸಿಕೊಂಡವರು ಎಷ್ಟೋ ಜನ ಇದ್ದಾರೆ. ಬರಿಗಾಲಿನ ಜೀವನಯಾತ್ರೆ ಅವರಿಗೆ ನೀಡುವ ಆತ್ಮತೃಪ್ತಿ, ಆರೋಗ್ಯಪುಷ್ಟಿ, ಅದರ ಬಗ್ಗೆ ಸಾರ್ವಜನಿಕರ ವಾರೆದೃಷ್ಟಿ - ಇವೆಲ್ಲವುಗಳ ಕುರಿತಾದ ಸೋದಾಹರಣ ವಿಶ್ಲೇಷಣೆಯ ಪ್ರಬಂಧವೊಂದಿದೆ. ಅದನ್ನು ಓದಿದರೆ ನಿಮಗೂ ‘ಪಾದುಕಾರಹಿತ ಸ್ಥಿತಿ’ಯ ನಿಜವಾದ ಮಹತ್ವದ ಅರಿವಾದೀತು!

ನಿಮ್ಮ ಅನಿಸಿಕೆ, ಅಭಿಪ್ರಾಯ, ಸಲಹೆ-ಸೂಚನೆಗಳನ್ನು ತಿಳಿಸುತ್ತ ಪತ್ರಿಸಿ. ವಿಳಾಸ -[email protected]


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X