ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಕ್ಷಂತಿ ಪುಣ್ಯಾನಿ ಪುರಾ ಕೃತಾನಿ

By Staff
|
Google Oneindia Kannada News

ರಕ್ಷಂತಿ ಪುಣ್ಯಾನಿ ಪುರಾ ಕೃತಾನಿ
ಇದು ಸೈಬರ್‌ಪ್ರಪಂಚ. ಇಲ್ಲಿ ‘ಮಾನವೀಯತೆ’ ಎಂಬುದು, ಈಮೈಲ್‌’ಗಳಲ್ಲಿ ಪುಟ್ಟ ಕತೆ/ಚಿತ್ರಗಳ ರೂಪದಲ್ಲಿ ಹರಿದಾಡುತ್ತದೆ. ಕತೆಗಳ ಅಸಲಿ ತನ ಏನೇ ಇರಲಿ, ಮೈಮನಗಳಿಗೆ ಅವು ಮುದ ನೀಡುವುದಂತೂ ಸತ್ಯ. ಇಂತಹ ಕತೆಗಳಲ್ಲಿ ಡಾ.ಹೊವರ್ಡ್‌ ಕೆಲ್ಲಿಯ ಕತೆಯೂ ಒಂದು. ಇದು ಕತೆ ಮಾತ್ರವಲ್ಲ ಸತ್ಯಕತೆಯೂ ಹೌದು. ಒಂದು ಲೋಟ ಬಿಸಿಹಾಲಿನಿಂದ ಹಾಸ್ಪಿಟಲ್‌ಬಿಲ್‌ ಚುಕ್ತಾ ಆದ ಈ ಚೆಂದದ ಕತೆ ವಿಚಿತ್ರಾನ್ನ-189ನೇ ಸಂಚಿಕೆಯಲ್ಲಿ ನಿಮ್ಮನ್ನು ಖುಷಿಪಡಿಸಲಿದೆ.

Srivathsa Joshi *ಶ್ರೀವತ್ಸ ಜೋಶಿ

‘‘ಬಡಹುಡುಗನೊಬ್ಬ ಸಣ್ಣಪುಟ್ಟ ಸರಕುಸಾಮಾನುಗಳನ್ನು ಮನೆಮನೆಗೆ ಹೋಗಿ ಮಾರಿಕೊಂಡು ಅದರಿಂದ ಬಂದ ದುಡ್ಡನ್ನು ತನ್ನ ಶಾಲೆಯ ಫಿ‚ೕಸ್‌ಗೆ ಹೊಂದಿಸಿ ಜೀವನ ನಡೆಸುತ್ತಿದ್ದ. ಒಂದು ದಿನ ಮಟಮಟ ಮಧ್ಯಾಹ್ನದ ವೇಳೆ. ಬಿಸಿಲೇರಿದ್ದರೂ ಇನ್ನೂ ಹೆಚ್ಚಿನ ವ್ಯಾಪಾರ ಆಗಿರಲಿಲ್ಲ. ಹುಡುಗನ ಹೊಟ್ಟೆ ಹಸಿಯುತ್ತಿತ್ತು. ಜೇಬಿನಲ್ಲಿದ್ದುದು ಬರೀ ಒಂದು ಡೈಮ್‌ (= ಹತ್ತು ಸೆಂಟ್ಸ್‌) ಮಾತ್ರ. ಮುಂದಿನ ಮನೆಯಲ್ಲಿ ‘ಊಟ ಬಡಿಸುತ್ತೀರಾ?’ ಎಂದು ಕೇಳಬೇಕೆಂದುಕೊಂಡ, ಆದರೆ ಪುಟ್ಟಹುಡುಗಿಯಾಬ್ಬಳು ಬಾಗಿಲುತೆರೆದಾಗ ‘ಊಟ ಕೊಡಿ’ ಎಂದು ಬೇಡುವ ಮನಸ್ಸಾಗಲಿಲ್ಲ.

ಕುಡಿಯಲು ಸ್ವಲ್ಪ ನೀರು ಕೊಡುತ್ತೀರಾ? ಎಂದಷ್ಟೇ ಕೇಳಿದ. ಅದೂ ನಡುಗುವ ಧ್ವನಿಯಲ್ಲಿ. ಆತ ನಿಜವಾಗಿಯೂ ಹಸಿವೆಯಿಂದ ಬಳಲಿದ್ದಾನೆ ಎಂದು ಅರಿತ ಆ ಪುಟ್ಟ ಬಾಲೆ, ನೀರಿನ ಬದಲಿಗೆ ಒಂದು ಲೋಟ ಬಿಸಿಬಿಸಿ ಹಾಲನ್ನು ತಂದು ಅವನಿಗೆ ಕುಡಿಯಲು ಕೊಟ್ಟಳು. ನಿಧಾನವಾಗಿ ಹಾಲನ್ನು ಗುಟುಕರಿಸಿ ದಣಿವಾರಿಸಿಕೊಂಡ ಹುಡುಗ ‘ನಾನು ಎಷ್ಟು ದುಡ್ಡು ಕೊಡಬೇಕು?’ ಎಂದು ವಿನಯದಿಂದ ಕೇಳಿದ. ‘ಇಲ್ಲ, ನಮ್ಮಮ್ಮ ಹೇಳಿಕೊಟ್ಟಿದ್ದಾರೆ, ಕರುಣೆಯಿಂದ ಮಾಡಿದ ಕೆಲಸಕ್ಕೆ ಕಾಸು ಇಸ್ಕೊಳ್ಳಬಾರದು. ನೀನೇನೂ ಕೊಡುವುದು ಬೇಡ!’ ಎಂದಳು ಹುಡುಗಿ.

ಹಾಗಾದರೆ ನಾನು ನನ್ನ ಎದೆಯಾಳದಿಂದ ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿ ಹುಡುಗ ಮುನ್ನಡೆದ. ಬಿಸಿಹಾಲು ಕುಡಿದು ಅವನಿಗೆ ದೈಹಿಕವಾಗಿ ಶಕ್ತಿಮೂಡಿದ್ದರೆ ಆ ಮನೆಯವರ ಸ್ನೇಹಪರ ಔದಾರ್ಯವನ್ನು ಕಂಡು ಮಾನಸಿಕವಾಗಿ ಹೊಸದೊಂದು ಹುರುಪೂ ಮೂಡಿತ್ತು; ದೇವರಲ್ಲಿ ನಂಬಿಕೆಯೂ ಚಿಗುರಿತ್ತು. ಯಾಕೆಂದರೆ ಅಲ್ಲಿಯವರೆಗೆ ಬಹುಕಷ್ಟದ ಬದುಕಿನಿಂದ ಆತ ಸಾಕಷ್ಟು ಹೈರಾಣಾಗಿದ್ದ. ಆಮೇಲೆ ಮತ್ತೊಂದಷ್ಟು ವರ್ಷಗಳ ಕಾಲ ದುಡಿದು ಸಂಪಾದಿಸಿ ಅದರಿಂದ ವಿದ್ಯೆ ಗಳಿಸಿ ಆ ಹುಡುಗ ಡಾ। ಹೊವರ್ಡ್‌ ಕೆಲ್ಲಿ ಎಂಬ ಹೆಸರಿನ ಪ್ರಖ್ಯಾತ ವೈದ್ಯನಾದ, ಪೆನ್ಸಿಲ್ವೇನಿಯಾ ಸಂಸ್ಥಾನದ ಒಂದು ಪಟ್ಟಣದಲ್ಲಿ ಸುಸಜ್ಜಿತ ಚಿಕಿತ್ಸಾಲಯವನ್ನೂ ತೆರೆದ!

ಕೆಲವಾರು ವರ್ಷಗಳ ನಂತರ ಡಾ।ಕೆಲ್ಲಿಯ ಚಿಕಿತ್ಸಾಲಯಕ್ಕೆ ಒಬ್ಬ ಹೆಂಗಸು ರೋಗಿಯಾಗಿ ಬಂದಳು. ಅವಳಿದ್ದ ಹಳ್ಳಿಯ ವೈದ್ಯರು ಆಕೆಯ ರೋಗವನ್ನು ಗುಣಪಡಿಸಲಾಗದೆ ಡಾ।ಕೆಲ್ಲಿಯ ಆಸ್ಪತ್ರೆಗೆ ಅವಳನ್ನು ಕಳಿಸಿದ್ದರು. ರೋಗಿಯ ಹೆಸರು ಮತ್ತು ಊರಿನ ವಿವರಗಳನ್ನು ಓದಿದಾಕ್ಷಣ ಡಾ।ಕೆಲ್ಲಿಗೆ ಒಮ್ಮೆ ವಿದ್ಯುತ್‌ಸಂಚಾರವಾದಂತಾಯಿತು. ಒಡನೆಯೆ ತನ್ನ ಕುರ್ಚಿಯಿಂದೆದ್ದು ಆಸ್ಪತ್ರೆಯ ಕೆಳ ಅಂತಸ್ತಿನ ಒಂದು ಕೋಣೆಯಲ್ಲಿದ್ದ ರೋಗಿಯತ್ತ ನಡೆದರು ಡಾ।ಕೆಲ್ಲಿ. ಮಂಚದ ಮೇಲೆ ಕಳಾಹೀನವಾಗಿ ಮಲಗಿದ್ದ ಆ ಹೆಂಗಸಿನ ಗುರುತು ತಕ್ಷಣಕ್ಕೆ ಸಿಕ್ಕಿತು. ಅವಳನ್ನು ಹೇಗಾದರೂ ಮಾಡಿ ಬದುಕಿಸಬೇಕೆಂದು ಪಣತೊಟ್ಟ ಡಾ।ಕೆಲ್ಲಿ ಕೊನೆಗೂ ಅದರಲ್ಲಿ ಯಶಸ್ವಿಯಾದರು.

ಮೂರ್ನಾಲ್ಕು ವಾರಗಳ ಕಾಲ ಸತತ ಚಿಕಿತ್ಸೆ-ಸುಶ್ರೂಷೆಗಳ ನಂತರ ಆ ಹೆಂಗಸು ಆಸ್ಪತ್ರೆಯಿಂದ ಹೊರಡುವ ದಿನ ಬಂತು. ಅವಳ ಚಿಕಿತ್ಸೆ ಮತ್ತು ಔಷಧಿಗಳ ಖರ್ಚುವೆಚ್ಚದ ಬಿಲ್ಲನ್ನು ಆಸ್ಪತ್ರೆಯ ಲೆಕ್ಕಪತ್ರ ಸಿಬ್ಬಂದಿ ತಯಾರಿಸಿದರು. ಡಾ।ಕೆಲ್ಲಿ ಅದನ್ನು ಅಪ್ರೂವ್‌ ಮಾಡಿದರು, ಜತೆಯಲ್ಲೇ ಒಂದು ಷರಾ ಬರೆದರು. ಬಿಲ್‌ನ ಒಂದು ಪ್ರತಿಯನ್ನು ರೋಗಿಯ ರೂಮ್‌ಗೆ ಕಳಿಸಲಾಯಿತು. ಅಷ್ಟು ದೀರ್ಘಾವಧಿಯ ಚಿಕಿತ್ಸೆ, ಜೀವರಕ್ಷಕ ಔಷಧಿಗಳು ಹಾಗಾಗಿ ಕನಿಷ್ಠ ಒಂದೆರಡು ಸಾವಿರ ಡಾಲರ್‌ಗಳಷ್ಟಾದರೂ ಆಗಿರಬಹುದು, ತನ್ನ ಬದುಕಿನ ಸರ್ವವೂ ಆ ಮೆಡಿಕಲ್‌ಬಿಲ್‌ಗೆ ಸಂದಾಯವಾಗಬೇಕಾದೀತು ಎಂದು ಅಳುಕಿನಿಂದಲೇ ಲಕೋಟೆಯನ್ನು ತೆರೆದ ಹೆಂಗಸಿಗೆ ಒಂದು ಆಶ್ಚರ್ಯ ಕಾದಿತ್ತು:

ಬಿಲ್‌ನ ಕೆಳಮೂಲೆಯಲ್ಲಿ, ಒಟ್ಟು ಮೊಬಲಗಿನ ಬಲಭಾಗದಲ್ಲಿ, ಡಾ। ಕೆಲ್ಲಿ ಬರೆದಿದ್ದ ಷರಾ ಏನೆಂದರೆ, ‘‘ಒಂದು ಲೋಟ ಬಿಸಿಬಿಸಿ ಹಾಲಿನ ರೂಪದಲ್ಲಿ ಪಾವತಿಯಾಗಿದೆ. ಬಾಕಿ ಶುಲ್ಕ: ಸೊನ್ನೆ’’! ಅದರ ಕೆಳಗೆ ಟಿಪಿಕಲ್‌ ವೈದ್ಯಲಿಪಿಯಲ್ಲಿ ಡಾ।ಕೆಲ್ಲಿ ಎಂದು ಹಸ್ತಾಕ್ಷರ.

ಮೆಡಿಕಲ್‌ಬಿಲ್‌ನ ಆ ಹಾಳೆಗೇ ಮುತ್ತಿಕ್ಕಿ ಗಳಗಳನೆ ಅತ್ತ ಹೆಂಗಸು ಮನದಲ್ಲೇ ದೇವರನ್ನು ನೆನೆದಳು - ‘‘ಭಗವಂತಾ, ನಿನ್ನ ಪ್ರೀತಿಪ್ರೇಮಗಳ ಮಾಯೆ ಮನುಕುಲದಲ್ಲಿನ್ನೂ ಜೀವಂತವಾಗಿದೆ, ಹೃದಯದಿಂದ ಹೃದಯಕ್ಕೆ ಪಸರಿಸುತ್ತಿದೆ. ನಿನಗೆ ಶರಣುಶರಣು.’’

*

ಸೈಬರ್‌ಪ್ರಪಂಚದಲ್ಲಿ ‘ಫಾರ್ವರ್ಡೆಡ್‌ ಈಮೈಲ್‌’ಗಳಲ್ಲಿ ಈಮೇಲಿನ ಕತೆಯಂಥವು, ನಮ್ಮ ಮನಸ್ಸು-ಹೃದಯಗಳಿಗೊಂದು ಹಾಯೆನಿಸುವ ತಂಗಾಳಿಯಲೆಯನ್ನು ತರುವಂಥವು, ಬೇಕಾದಷ್ಟು ಬರುತ್ತಿರುತ್ತವೆ. ಅವುಗಳಲ್ಲಿ ಬಹುತೇಕವಾಗಿ ಕಪೋಲಕಲ್ಪಿತವೇ ಹೆಚ್ಚು. ಇನ್ನು ಕೆಲವು ಮಾನವೀಯತೆಯ ಹೆಸರಲ್ಲಿ ಬ್ಲಾಕ್‌ಮೈಲ್‌ ಮಾಡಿ ‘ಇದನ್ನು ಇಂತಿಷ್ಟುಮಂದಿಗೆ ಫ‚ಾರ್ವರ್ಡ್‌ ಮಾಡಿ, ಇಲ್ಲಾಂದರೆ ಕಷ್ಟನಷ್ಟ ಅನುಭವಿಸಬೇಕಾಗುತ್ತದೆ...’ ಎಂದು ದಬ್ಬಾಳಿಕೆಯ ಆದೇಶವನ್ನೂ ಹೊತ್ತುಕೊಂಡೇ ಬರುವುದೂ ಇದೆ. ದಬ್ಬಾಳಿಕೆಯ ಭಾಗವನ್ನಷ್ಟೇ ನಿರ್ಲಕ್ಷಿಸಿ ಉಳಿದ ತಿರುಳನ್ನು ಅಂತಹ ಈಮೈಲ್‌ಗಳಿಂದ ನಾನು ಸಂಗ್ರಹಿಸಿಟ್ಟುಕೊಳ್ಳುತ್ತೇನೆ. ನನ್ನ ಔಟ್‌ಲುಕ್‌ ಎಕ್ಸ್‌ಪ್ರೆಸ್‌ನಲ್ಲಿ ಅದಕ್ಕೆಂದೇ ಒಂದು ಪ್ರತ್ಯೇಕ ಫ‚ೋಲ್ಡರ್‌ ಇದೆ.

ಈ ಮೇಲಿನ ‘ಕತೆ’ಯನ್ನೂ ನಾನು ಫ‚ಾರ್ವರ್ಡೆಡ್‌ ಈಮೈಲ್‌ ಫ‚ೋಲ್ಡರ್‌ನಿಂದಲೇ ತೆಗೆದು ಕನ್ನಡೀಕರಿಸಿದ್ದು. ಇದನ್ನು ಓದುವಾಗೆಲ್ಲ ನನಗೆ ಸಂಸ್ಕೃತ ಸುಭಾಷಿತವೊಂದು ನೆನಪಾಗುತ್ತದೆ:

ವನೆ ರಣೆ ಶತ್ರುಜಲಾಗ್ನಿ ಮಧ್ಯೆ
ಮಹಾರ್ಣವೆ ಪರ್ವತ ಮಸ್ತಕೆ ವಾ
ಸುಪ್ತಂ ಪ್ರಮತ್ತಂ ವಿಷಮಸ್ಥಿತಂ ವಾ
ರಕ್ಷಂತಿ ಪುಣ್ಯಾನಿ ಪುರಾ ಕೃತಾನಿ ।।

(ಅಡವಿಯಲ್ಲಿ, ಯುದ್ಧಭೂಮಿಯಲ್ಲಿ, ವೈರಿಪಾಳಯದಲ್ಲಿ, ನೀರು ಅಥವಾ ಬೆಂಕಿಯಿಂದಾವೃತ್ತ ಪ್ರದೇಶದಲ್ಲಿ, ಸಮುದ್ರಮಧ್ಯದಲ್ಲಿ ಅಥವಾ ಪರ್ವತದ ತುದಿಯಲ್ಲಿ ಏಕಾಂಗಿಯಾಗಿ ಅಸಹಾಯಕನಾಗಿ ಮಲಗಿರುವವನಿಗೆ, ಸಂಕಷ್ಟದಲ್ಲಿ ಸಿಲುಕಿರುವವನಿಗೆ ಅವನ ಪೂರ್ವ ಸುಕೃತ ಪುಣ್ಯವೇ ಸಂರಕ್ಷಣೆಯಾದಗಿಸುತ್ತದೆ.)

ಬಿಸಿಹಾಲಿನ ಲೋಟದಿಂದ ಹಾಸ್ಪಿಟಲ್‌ಬಿಲ್‌ ಚುಕ್ತಾ ಆದ ಈ ಕತೆಗೂ ‘ರಕ್ಷಂತಿ ಪುಣ್ಯಾನಿ ಪುರಾ ಕೃತಾನಿ’ ಎಂಬ ಶೀರ್ಷಿಕೆ ಸರಿಹೋಗುತ್ತದಲ್ಲವೆ? ಬಿಸಿಲಲ್ಲಿ ಅಲೆದು ಹಸಿದಿದ್ದ ಹುಡುಗನಿಗೆ ನೀರಿನ ಬದಲು ಒಂದು ಲೋಟ ಬೆಚ್ಚಗಿನ ಹಾಲು ಸಿಕ್ಕಿದ್ದೇ ಅವನ ಪೂರ್ವ ಸುಕೃತದ ಫಲವಾದರೆ, ಕುಡಿಯಲು ಹಾಲು ಕೊಟ್ಟ ಹುಡುಗಿ ದೊಡ್ಡವಳಾದ ಮೇಲೆ ಜೀವನ್ಮರಣ ಹೋರಾಟದಲ್ಲಿ ಅವನಿಂದಲೇ ಚಿಕಿತ್ಸೆ ಪಡೆದು ಬದುಕಿಕೊಂಡದ್ದು, ಚಿಕಿತ್ಸೆಯ ಶುಲ್ಕ ಒಂದುಲೋಟ ಹಾಲಿನ ರೂಪದಲ್ಲಿ ಈಗಾಗಲೇ ಪಾವತಿಯಾಗಿದೆಯೆಂದು ಡಾಕ್ಟರ್‌ ಶಿಫಾರಸು ಮಾಡಿದ್ದು ನಮ್ಮ ಕಣ್ಮುಂದೆಯೇ ನಡೆಯಿತೇನೊ ಎನ್ನುವಂಥ ಸುಕೃತದ ಫಲ!

ಆಶ್ಚರ್ಯವೆಂದರೆ ಇದು ಕಟ್ಟುಕತೆಯಲ್ಲ. Touching tale ಆಗಲು ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಅತಿರಂಜನೆ-ಉತ್ಪ್ರೇಕ್ಷೆಗೊಳಗಾಗಿದೆಯೆನ್ನುವುದನ್ನು ಬಿಟ್ಟರೆ ಇದು ಸತ್ಯಕತೆ. ಡಾ।ಹೊವರ್ಡ್‌ ಕೆಲ್ಲಿಯ ಜೀವನಚರಿತ್ರೆಯಲ್ಲಿ ಪ್ರಸ್ತಾಪಿತವಾಗಿರುವ ಈ ಕತೆ ಅಸಂಖ್ಯಾತ ಈಮೈಲ್‌ಫ‚ಾರ್ವರ್ಡ್‌ಗಳಲ್ಲಷ್ಟೇ ಅಲ್ಲ, ವ್ಯಕ್ತಿತ್ವವಿಕಸನದ ಬಗೆಗಿನ ಅನೇಕ ಪುಸ್ತಕಗಳಲ್ಲೂ ಪ್ರಕಟವಾಗಿದೆ. ಪರ್ಸನಾಲಿಟಿ ಡೆವಲಪ್‌ಮೆಂಟ್‌ನ ಅದೆಷ್ಟೊ ಉಪನ್ಯಾಸಗಳಲ್ಲಿ, ವರ್ಕ್‌ಷಾಪ್‌ಗಳಲ್ಲಿ ಪ್ರತಿಧ್ವನಿಸಿದೆ.

ಡಾ। ಹೊವರ್ಡ್‌ ಕೆಲ್ಲಿ (1858-1943) ಆ ಕಾಲದ ಶ್ರೇಷ್ಠ ವೈದ್ಯರು. ಬಾಲ್ಟಿಮೊರ್‌ನಲ್ಲಿರುವ ಜಗವ್ವಿಖ್ಯಾತ ಮತ್ತು ಅಮೆರಿಕದ ಮೊಟ್ಟಮೊದಲ ವೈದ್ಯಕೀಯ ಸಂಶೋಧನಾ ವಿಶ್ವವಿದ್ಯಾಲಯವಾದ ‘ಜಾನ್ಸ್‌ ಹಾಪ್‌ಕಿನ್ಸ್‌’ನ ನಾಲ್ಕು ಮಂದಿ ಸಂಸ್ಥಾಪಕ ವೈದ್ಯರಲ್ಲಿ ಡಾ।ಕೆಲ್ಲಿ ಒಬ್ಬರು. 1895ರಲ್ಲಿ ಅವರು ‘ಸ್ತ್ರೀರೋಗ ಮತ್ತು ಪ್ರಸೂತಿಶಾಸ್ತ್ರ’ವನ್ನು ವಿಶ್ವವಿದ್ಯಾಲಯದಲ್ಲಿ ಆರಂಭಿಸಿ ಜೀವನದುದ್ದಕ್ಕೂ ಅದೇ ವಿಭಾಗದಲ್ಲಿ ಬೋಧಕರಾಗಿ ಮತ್ತು ಚಿಕಿತ್ಸಕರಾಗಿದ್ದರು.

ಪ್ರಸ್ತುತ ಕತೆಯಲ್ಲಿ ಡಾ।ಕೆಲ್ಲಿಯ ವೈದ್ಯಕೀಯ ಪರಿಣತಿ ಅಥವಾ ‘ಕೈಗುಣ’ಕ್ಕಿಂತಲೂ ಮೆರೆಯುವುದು ಹಳೆಯ ಋಣವೊಂದರ ಮರುಸಂದಾಯದ ಹೃದಯಸ್ಪರ್ಶಿ ಗುಣಶ್ರೇಷ್ಠತೆ. ಡಾ।ಕೆಲ್ಲಿಯಾಂದಿಗೆ ಸುಮಾರು 20 ವರ್ಷಗಳ ಸ್ನೇಹ-ಒಡನಾಟವಿದ್ದ ಔಡ್ರೆ ಡೇವಿಸ್‌ ಎಂಬ ಲೇಖಕ ಕೆಲ್ಲಿಯ ಜೀವನಚರಿತ್ರೆ ಬರೆದಿದ್ದಾನೆ. ಅದರಲ್ಲಿ ಕೆಲ್ಲಿಯ ಪರ್ಸನಲ್‌ ಜರ್ನಲ್‌ನಿಂದ ಉದ್ಧೃತ ಅಂಶಗಳೂ ಅನೇಕವಿವೆ, ಅವುಗಳಲ್ಲೊಂದು ಹಾಲು-ಹಾಸ್ಪಿಟಲ್‌ಬಿಲ್ಲುಗಳ ಈ ಕತೆ. ಆದರೆ ಕತೆಯ ಸತ್ಯರೂಪವಾಗಿ ಕೆಲ ಅಂಶಗಳನ್ನು ಗಮನಿಸಬೇಕು.

ಡೇವಿಸ್‌ ಬರೆದ ಜೀವನಚರಿತ್ರೆಯ ಪ್ರಕಾರ, ಹೊವರ್ಡ್‌ ಕೆಲ್ಲಿ ಹುಡುಗನಾಗಿದ್ದಾಗ ಬಡತನದಲ್ಲೇನೂ ಇರಲಿಲ್ಲ. ಶ್ರೀಮಂತ ಮನೆತನದಿಂದ ಬಂದ ಅವನಿಗೆ ಮನೆಮನೆಗೆ ಹೋಗಿ ವಸ್ತುಗಳ ಮಾರಾಟಮಾಡಿ ದುಡ್ಡುಸಂಪಾದಿಸುವ ಅಗತ್ಯವಿರಲಿಲ್ಲ. ವಿದ್ಯಾಭ್ಯಾಸ, ಊಟ, ವಸತಿಯ ವೆಚ್ಚವಷ್ಟೇ ಅಲ್ಲದೆ ತಿಂಗಳಿಗೆ 5 ಡಾಲರ್‌ ‘ಪಾಕೆಟ್‌ ಮನಿ’ ಸಹ ಹೆತ್ತವರಿಂದ ಕೆಲ್ಲಿಯ ಕಿಸೆಗೆ ಸೇರುತ್ತಿತ್ತು. 1879ರಲ್ಲಿ 21ನೆ ವರ್ಷದ ಹುಟ್ಟುಹಬ್ಬಕ್ಕೆ ಅವನ ತಂದೆ ಮತ್ತು ಅತ್ತೆಯಂದಿರಿಂದ ತಲಾ 100 ಡಾಲರ್‌ಗಳ ಚೆಕ್‌ಗಳನ್ನು ಉಡುಗೊರೆಯಾಗಿ ಪಡೆದ ಪುಣ್ಯವಂತ ಹೊವರ್ಡ್‌ ಕೆಲ್ಲಿ! ಆಗಿನ ಕಾಲದ ನೂರು ಡಾಲರ್‌ ಎಂದರೆ ನಿಜಕ್ಕೂ ದೊಡ್ಡ ಮೊತ್ತ. 22 ವರ್ಷದವನಾದರೂ ನಿರುದ್ಯೋಗಿಯಾಗಿದ್ದ ಕೆಲ್ಲಿಯನ್ನು ಕೊಲರಾಡೊ ಸ್ಪ್ರಿಂಗ್‌ಗೆ ಕಳಿಸಿದ್ದರು. ಅಲ್ಲಿ 40 ಡಾಲರ್‌ಗೆ ಕುದುರೆಯಾಂದನ್ನು ಖರೀದಿಸಿ, ಅಂಚೆಬಟವಾಡೆಯ ಕೆಲಸವನ್ನು ಮಾಡಿದ್ದ.

ಅಲ್ಲಿಂದ ಒಂದೇ ವರ್ಷದಲ್ಲಿ ಪೆನ್ಸಿಲ್ವೇನಿಯಾಕ್ಕೆ ವಾಪಸಾದ ಕೆಲ್ಲಿ ಒಂದು ಫ‚ಾರ್ಮ್‌ಹೌಸ್‌ನಲ್ಲಿ ವಾಸಿಸತೊಡಗಿದ. ಪ್ರಕೃತಿಪ್ರಿಯನಾಗಿದ್ದ ಅವನಿಗೆ ಪ್ರಕೃತಿಯ ಮಡಿಲಲ್ಲಿ ವಾಸ, ಪ್ರಾಣಿ-ಪಕ್ಷಿಗಳ ಒಡನಾಟ, ಮೈಲುಗಟ್ಟಲೆ ಕಾಲ್ನಡಿಗೆ (ಹೈಕಿಂಗ್‌) ಇತ್ಯಾದಿ ಖುಶಿಕೊಡುವ ವಿಚಾರಗಳಾಗಿದ್ದುವು. ಕೆಲ್ಲಿ ವೈದ್ಯಕೀಯ ವಿದ್ಯಾಭ್ಯಾಸಗಳಿಸಿ ಪ್ರಸಿದ್ಧ ವೈದ್ಯನಾಗಿ ಮನುಕುಲದ ಸೇವೆಯನ್ನು ಮಾಡಬೇಕೆಂಬುದು ಅವನ ತಂದೆಯ ಹೆಬ್ಬಯಕೆ. ಅದನ್ನು ಮನ್ನಿಸಿಯೇ ಆತ ವೈದ್ಯನಾದದ್ದು.

ವೈದ್ಯನಾದರೂ ತನ್ನ ನೆಚ್ಚಿನ ಹವ್ಯಾಸವಾದ ‘ಕಾಡಲ್ಲಿ ಕಾಲ್ನಡಿಗೆ’ಯನ್ನು ಮುಂದುವರಿಸಿದ್ದ ಕೆಲ್ಲಿ ಅದೊಂದು ದಿನ ಪೆನ್ಸಿಲ್ವೇನಿಯಾದ ಹಳ್ಳಿಯಾಂದರ ಮನೆಬಾಗಿಲು ತಟ್ಟಿ ನೀರು ಕೇಳಿದ್ದು, ಪುಟ್ಟ ಹುಡುಗಿಯಾಬ್ಬಳು ನೀರಿನ ಬದಲು ಹಾಲು ತಂದುಕೊಟ್ಟದ್ದು ಹೌದು. ಕೆಲ್ಲಿಗೆ ದೇವರಲ್ಲಿ ಅವತ್ತೇ ನಂಬಿಕೆ ಹುಟ್ಟಿತು ಅನ್ನೋದು ಉತ್ಪ್ರೇಕ್ಷೆ, ಯಾಕೆಂದರೆ ಮೊದಲಿಂದಲೂ ಆತ ಪಕ್ಕಾ ಆಸ್ತಿಕ, ಧರ್ಮಶೃದ್ಧಾಳು ಆಗಿದ್ದನಂತೆ. ಅಂತೆಯೇ ಮುಂದೆ ಅವನ ಆಸ್ಪತ್ರೆಗೆ ಬರುವಾಗ ಆ ರೋಗಿ ಹೆಂಗಸು ಜೀವನ್ಮರಣ ಹೋರಾಟದಲ್ಲಿದ್ದಳು, ಅವಳ ಊರಿನ ವೈದ್ಯರು ಕೈಚೆಲ್ಲಿದ ನಂತರವಷ್ಟೇ ಬಾಲ್ಟಿಮೊರ್‌ನ ಜಾನ್ಸ್‌ ಹಾಪ್‌ಕಿನ್ಸ್‌ ಆಸ್ಪತ್ರೆಗೆ ಅವಳನ್ನು ಕರೆತಂದುದಾಗಿತ್ತು ಎಂಬುದೆಲ್ಲ ಉತ್ಪ್ರೇಕ್ಷೆ.

ಅವಳ ಬಿಲ್‌ ಮೇಲೆ ‘ಈಗಾಗಲೇ ಪಾವತಿಯಾಗಿದೆ’ ಎಂದು ಡಾ।ಕೆಲ್ಲಿ ಷರಾ ಬರೆದದ್ದೇನೊ ಹೌದು. ಆದರೆ ಡಾ।ಕೆಲ್ಲಿ ‘ಹಾಲು ಕೊಟ್ಟ ಹುಡುಗಿ’ಗೆ ಮಾತ್ರ ಶುಲ್ಕವಿನಾಯಿತಿ ಮಾಡಿದ್ದಲ್ಲ. ಅವರ ಬಳಿ ಚಿಕಿತ್ಸೆಗೆ ಬರುತ್ತಿದ್ದ ರೋಗಿಗಳ ಪೈಕಿ ಸರಾಸರಿ ನಾಲ್ಕರಲ್ಲಿ ಮೂವರಿಂದ ಅವರು ಸೇವಾಶುಲ್ಕ ಪಡೆಯುತ್ತಿರಲಿಲ್ಲ. ಶ್ರೀಮಂತ ರೋಗಿಗಳಿಂದ ಮಾತ್ರ ದುಡ್ಡು ವಸೂಲಿ ಮಾಡುತ್ತಿದ್ದರು; ಬಡವರಿಗೆ ಮುಫ‚ತ್ತಾಗಿ ಚಿಕಿತ್ಸೆ ಮಾಡುತ್ತಿದ್ದರು; ತಾನೇ ಸಂಬಳ ಕೊಟ್ಟು ದಾದಿಯಾಬ್ಬಳನ್ನು ನೇಮಿಸಿ ಅವರ ಸುಶ್ರೂಷೆಯ ವ್ಯವಸ್ಥೆ ಮಾಡುತ್ತಿದ್ದರು!

ದಣಿವಾಗಿದ್ದಾಗ ಬಿಸಿಹಾಲು ಕೊಟ್ಟು ಸತ್ಕರಿಸಿದ್ದ ಹುಡುಗಿಗೆ ವರ್ಷಗಳ ನಂತರ ಚಿಕಿತ್ಸೆ ಮಾಡಬೇಕಾಗಿ ಬಂದಾಗ ಮಾತ್ರ ಡಾ।ಕೆಲ್ಲಿ ಶುಲ್ಕವನ್ನು ಮನ್ನಾ ಮಾಡಿದ್ದಷ್ಟೇ ಅಲ್ಲದೆ ‘ಒಂದು ಲೋಟ ಹಾಲಿನ ರೂಪದಲ್ಲಿ ಈಗಾಗಲೆ ಪಾವತಿಯಾಗಿದೆ’ ಎಂಬ ಷರಾ ಬರೆದರು.

ಮಾನವೀಯತೆಯನ್ನು ಮೆರೆದರು!

- [email protected]


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X