• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಂಗುರದ ಬೆರಳು ನಿಜಕ್ಕೂ ‘ಸೆಕ್ಸಿ’ಯೇ?

By Staff
|

ಉಂಗುರದ ಬೆರಳು ನಿಜಕ್ಕೂ ‘ಸೆಕ್ಸಿ’ಯೇ?

ಇದು ಗೋಕುಲಾಷ್ಟಮಿಗೂ ಇಮಾಮ್‌ ಸಾಬ್‌ಗೂ ಇರುವ ಸಂಬಂಧವಲ್ಲ! ಉಂಗುರ ಧರಿಸಿದ ಬೆರಳು ಮತ್ತು ಸತಿಪತಿಯರ ದಾಂಪತ್ಯಸುಖದ ಪ್ರಮಾಣ ಇವೆರಡಕ್ಕೂ ನೇರಸಂಬಂಧವಿದೆ! ವಿಚಿತ್ರಾನ್ನ 202ನೇ ಸಂಚಿಕೆಯಲ್ಲಿ ಪೂರಕ ಒಗ್ಗರಣೆ ಜೊತೆಗೆ ವಿವರಣೆ.

*ಶ್ರೀವತ್ಸ ಜೋಶಿ

Why wedding ring is always worn on Ring finger?‘‘ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿನ ನಡುವೆ ಬಂಗಾರವಿಲ್ಲದ ಬೆರಳು... ಎಂದು ಭಾವಗೀತೆಯಲ್ಲಿ ಕವಿ ಬೆರಳುಮಾಡಿದ್ದು ಹೆಣ್ಣಿನ ಯಾವ ಬೆರಳಿನ ಕುರಿತು?’’

ಈ ಪ್ರಶ್ನೆಯನ್ನು ಯಾರಾದದೂ ನಿಮ್ಮ ಮೇಲೆಸೆದರೆ ಏನೆಂದು ಉತ್ತರಿಸುತ್ತೀರಿ? ಇನ್ನಾವುದು, ಬಂಗಾರದ ಉಂಗುರವಿರಬೇಕಾಗಿದ್ದ (ಆದರೆ ಆ ಉಂಗುರವನ್ನು ಹಾಕಿರದ) ‘ಉಂಗುರದ ಬೆರಳು’ ಅಥವಾ Ring finger ಎಂದು ತಾನೆ? ಸುಲಭವಾದ ಉತ್ತರ. ಆದರೆ, ನೀವು ಯಾವಾಗಾದರೂ ಯೋಚಿಸಿದ್ದೀರಾ ಉಂಗುರದ ಬೆರಳಿಗೇ ಯಾಕೆ ಉಂಗುರ ತೊಡಿಸುವುದು ಅಥವಾ ಹಾಕಿಕೊಳ್ಳೋದು? ನಿಶ್ಚಿತಾರ್ಥದಂದು/ ವಿವಾಹಮಹೋತ್ಸವದಂದು ವಧು-ವರರು ಕೊಡಕೊಳ್ಳುವ ಉಂಗುರವನ್ನು ಉಂಗುರದ ಬೆರಳಿಗೇ ಹಾಕಿಕೊಳ್ಳುವ ಸಂಪ್ರದಾಯ ಹೇಗೆ ಬಂತು? ದೇಶ-ಜಾತಿ-ಧರ್ಮ ಭೇದಗಳಿಲ್ಲದೆ ಜಗತ್ತಿನೆಲ್ಲೆಡೆಯಲ್ಲೂ Ring fingerಗೇ ಯಾಕೆ ಆ ಸೌಭಾಗ್ಯ?

ಈ ಪ್ರಶ್ನೆಗೆ ಮಾನವಶರೀರಶಾಸ್ತ್ರ ಮತ್ತು ವೈದ್ಯಕೀಯ ವಿಜ್ಞಾನಗಳಿಂದ ನಿಖರ ಮಾಹಿತಿಗಳನ್ನು ಆಧರಿಸಿ ಉತ್ತರವನ್ನು ಹುಡುಕಿದರೆ ಉಂಗುರದ ಬೆರಳಿನದೊಂದು ‘ಮೋಹಕ’ ಪ್ರಪಂಚ ತೆರೆದುಕೊಳ್ಳುತ್ತದೆ! ಹೆಣ್ಣು-ಗಂಡಿನ ಬೆಸುಗೆಯನ್ನು ಹೊರಜಗತ್ತಿಗೆ ತಿಳಿಸುವ ಡಂಗುರವಾಗುವ ಮದುವೆಯುಂಗುರ ‘ಉಂಗುರದ ಬೆರಳ’ಲ್ಲೇ ಯಾಕೆ ನೆಲೆನಿಲ್ಲುವುದೆಂಬ ಸ್ವಾರಸ್ಯಕರ ಸಂಗತಿ ತಿಳಿಯುತ್ತದೆ; ಉಂಗುರ ಧರಿಸಿದ ಬೆರಳು ಮತ್ತು ಸತಿಪತಿಯರ ದಾಂಪತ್ಯಸುಖದ ಪ್ರಮಾಣ ಇವೆರಡಕ್ಕೂ ನೇರಸಂಬಂಧವಿದೆಯೆಂಬ ಅದ್ಭುತಸತ್ಯದ ಅರಿವಾಗುತ್ತದೆ!

ಆ ಸ್ವಾರಸ್ಯಕರ ಸತ್ಯದ ಸರಳವಾದ ಪರಿಚಯ ಈ ವಾರದ ವಿಚಿತ್ರಾನ್ನದಲ್ಲಿ.

*

ಮದುವೆಯ ಉಡುಗೊರೆಯಾಗಿ ಅಥವಾ ಮದುವೆಯಾಗುತ್ತೇನೆಂಬ ಪ್ರಮಾಣವಚನದ ಪ್ರತೀಕವಾಗಿ ಗಂಡು ಹೆಣ್ಣಿಗೆ, ಹೆಣ್ಣು ಗಂಡಿಗೆ ಉಂಗುರ ತೊಡಿಸುವ ಸಂಪ್ರದಾಯಕ್ಕೆ ಸುಮಾರು 5000 ವರ್ಷಗಳ ಇತಿಹಾಸವಿದೆ. ಉಂಗುರದ ಸುತ್ತ ಹೆಣೆದ ಕಥೆಗಳು ನಮ್ಮ ‘ಅಭಿಜ್ಞಾತ ಶಾಕುಂತಲ’ವೂ ಸೇರಿದಂತೆ ಜಗತ್ತಿನ ಎಲ್ಲ ಸಂಸ್ಕೃತಿಗಳಲ್ಲೂ ಇವೆ. ಜೀವನದಲ್ಲಿ suffering ಶುರು ಆಗೋದು engagement ring ನಿಂದಲೇ ಎಂಬ ಕುಹಕವೂ ಇದೆ :-)

ಪ್ರಾಚೀನ ಈಜಿಪ್ಟ್‌ ನಾಗರಿಕತೆಯಲ್ಲಿ ಮದುವೆಯುಂಗುರದ ಬಳಕೆಯಿತ್ತೆಂಬ ಕುರುಹುಗಳು ಸಿಕ್ಕಿವೆಯಂತೆ. ಅದಾದಮೇಲೆ ಇವತ್ತಿನವರೆಗೂ ಪ್ರಪಂಚದಲ್ಲಿ ಹೆಚ್ಚಿನೆಲ್ಲ ಸಮಾಜಗಳಲ್ಲಿ ಮದುವೆಯುಂಗುರವನ್ನು ತೊಡಿಸುವ/ತೊಡುವ ಸಂಪ್ರದಾಯ ಚಾಚೂ ತಪ್ಪದೆ ಬಂದಿದೆ. ಬಹುತೇಕವಾಗಿ ಉಂಗುರದ ಬೆರಳಿಗೇ ಮದುವೆಯುಂಗುರವನ್ನು ಹಾಕಿಕೊಳ್ಳುವುದಾಗಿದೆ. ಪಾಶ್ಚಾತ್ಯ ದೇಶಗಳಲ್ಲಿ ಎಡಗೈಯ ಬೆರಳಿಗಾದರೆ ಭಾರತೀಯ ಸಂಸ್ಕೃತಿಯಲ್ಲಿ ಬಲಗೈಯ ಬೆರಳಿಗೆ. ಅಂತೂ ಎಡ-ಬಲವಾದರೂ ಬೆರಳು ಅದೇ, ನಾಲ್ಕನೆಯ ಬೆರಳು ಅಥವಾ ಉಂಗುರದ ಬೆರಳು.

ಆ ಬೆರಳಿಗೆ ಬೇರೆಲ್ಲ ಬೆರಳುಗಳಿಗಿಂತ ಗೌರವದ ಸ್ಥಾನ. ಅದು ಯಾವುದೋ ಒಂದು ವಿಶೇಷ ಮಾಂತ್ರಿಕಶಕ್ತಿಯನ್ನು ಹೊಂದಿದೆ ಎಂದು ಅನಾದಿಕಾಲದಿಂದಲೂ ಮನುಷ್ಯ ನಂಬಿಕೊಂಡುಬಂದಿದ್ದಾನೆ. ಆ ಬೆರಳಿನಿಂದ ಹೃದಯಕ್ಕೆ ನಾಡಿಯಾಂದು ಹರಿಯುತ್ತದೆ ಎಂಬ ನಂಬಿಕೆಯೂ ಇದೆ. ನಂಬಿಕೆಗಳಿಗೆ ತಕ್ಕಂತೆ ಪ್ರಪಂಚದ ವಿವಿಧ ಭಾಷೆಗಳಲ್ಲಿ ಆ ಬೆರಳಿಗೆ ವಿಶೇಷ ಹೆಸರುಗಳಿವೆ. ಲ್ಯಾಟಿನ್‌, ಜರ್ಮನ್‌, ಜಪಾನಿ ಭಾಷೆಗಳಲ್ಲಿ ಅದಕ್ಕೆ ಔಷ-ಧೀಯಶಕ್ತಿಯನ್ನು ಕಲ್ಪಿಸಿ ಹೆಸರಿಡಲಾಗಿದೆಯಾದರೆ ಯುರೋಪ್‌ನ ಹೆಚ್ಚಿನ ಭಾಷೆಗಳಲ್ಲಿ (ಫ‚ೆ್ರಂಚ್‌, ಡಚ್‌, ಇಟಾಲಿಯನ್‌, ಸ್ಪಾನಿಶ್‌, ಸ್ವೀಡಿಶ್‌, ಟರ್ಕಿಶ್‌ ಇತ್ಯಾದಿ) ರಿಂಗ್‌ ಫಿ‚ಂಗರ್‌ ಎನ್ನಲಾಗುತ್ತದೆ. ರಿಂಗ್‌ ಎಂದರೆ ಉಂಗುರ ಎಂಬ ಅರ್ಥದಲ್ಲೂ, ಮ್ಯಾಜಿಕಲ್‌ ರಿಂಗ್ಸ್‌ ಎಂಬ ಅರ್ಥದಲ್ಲೂ.

Wedded people showing their ring on ring fingerಸಂಸ್ಕೃತದಲ್ಲಿ ಉಂಗುರದ ಬೆರಳನ್ನು ‘ಅನಾಮಿಕಾ’ ಎಂದರೆ ಹೆಸರಿಲ್ಲದ್ದು ಎನ್ನುತ್ತಾರೆ. ಹೆಸರಿಲ್ಲದಿರುವುದೂ ಅದರ ಮೇಲಿನ ಗೌರವಭಾವದಿಂದಲೇ, ಏಕೆಂದರೆ ಪೂಜ್ಯವಾದುದನ್ನು - ಅದು ವಸ್ತುವೇ ಇರಲಿ, ವ್ಯಕ್ತಿಯೇ ಇರಲಿ - ಹೆಸರೆತ್ತಿ ಕರೆಯಬಾರದು ಎಂಬ ನಂಬಿಕೆಯಿದೆ. ಸಂಸ್ಕೃತದಂತೆಯೇ ಪರ್ಷಿಯನ್‌, ರಷ್ಯನ್‌, ಮಾಂಡರಿನ್‌ ಭಾಷೆಗಳಲ್ಲಿ ಸಹ ಈ ಗೌರವಾನ್ವಿತ ಬೆರಳು ಹೆಸರಿಲ್ಲದ ಬೆರಳೆಂದೇ (ಅನಾಮಿಕ ಎಂದು ಅರ್ಥ ಬರುವಂತೆ) ಗುರುತಿಸಲ್ಪಡುತ್ತದೆ. ಉಂಗುರದ ಬೆರಳಿನ ಗೌರವವನ್ನು, ಪಾವಿತ್ರ್ಯವನ್ನು ಸಮರ್ಥಿಸುವ ಇನ್ನೊಂದು ಅಂಶವೆಂದರೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಪೂಜೆ-ಪುನಸ್ಕಾರಗಳಲ್ಲಿ ‘ದರ್ಭೆಹುಲ್ಲಿನ ಪವಿತ್ರಕ’ವನ್ನು ಉಂಗುರದ ಬೆರಳಿಗೇ ಹಾಕಿಕೊಳ್ಳುವುದು.

ಇಲ್ಲಿ ಇನ್ನೊಂದು ಸ್ವಾರಸ್ಯವಿದೆ. ಇಷ್ಟೆಲ್ಲ ಗೌರವವಿದ್ದರೂ ಐದು ಕೈಬೆರಳುಗಳ ಪೈಕಿ ಬಲಹೀನವಾದದ್ದೆಂದರೆ ಇದೇ ಉಂಗುರದಬೆರಳು! ಬೇಕಿದ್ದರೆ ನಿಮ್ಮದೇ ಕೈಬೆರಳುಗಳ ಬಲಾಬಲವನ್ನು ಒಮ್ಮೆ ಪರೀಕ್ಷಿಸಿ ನೋಡಿ. ಅಂಗಾತ ಹಿಡಿದ ನಿಮ್ಮ ಬಲಗೈಯ ಹೆಬ್ಬೆರಳು, ತೋರುಬೆರಳು, ಮಧ್ಯದಬೆರಳು ಮತ್ತು ಕಿರುಬೆರಳು ಈ ನಾಲ್ಕನ್ನೂ ಒಂದೊಂದಾಗಿ ಸ್ವತಂತ್ರವಾಗಿ ಒಳಮಡಚಿಕೊಳ್ಳಬಹುದು. ಆದರೆ ಉಂಗುರಬೆರಳನ್ನು ಮಡಚುವ ಪ್ರಯತ್ನಮಾಡಿದರೆ ಅದು ಮಧ್ಯದಬೆರಳನ್ನೂ ತನ್ನೊಂದಿಗೆ ಕರೆಯುತ್ತದೆ. ಕಾರಣವೇನೆಂದರೆ ಉಂಗುರದಬೆರಳು ಮಧ್ಯದಬೆರಳಿನ ಸ್ನಾಯುವನ್ನೇ ಅವಲಂಬಿಸಿರುವುದು.

ಹೀಗೆ ‘ಅಬಲೆ’ಯಾಗಿದ್ದೂ ಗೌರವಪಡೆವ ಬೆರಳಿಗೇ ಬಂಗಾರದ ಉಂಗುರ ಸಿಕ್ಕಿರುವುದು ಮತ್ತು ಅದು ಮದುವೆಯ ಪವಿತ್ರಬಂಧದ ಸಂಕೇತ ಎಂಬ ಸಂಪ್ರದಾಯವಿರುವುದು ನಿಜಕ್ಕೂ ಕುತೂಹಲದ ವಿಚಾರ. ಶತಶತಮಾನಗಳಿಂದ ಬಂದಿರುವ ಈ ಸಂಪ್ರದಾಯಕ್ಕೆ ಇದೀಗ ವಿಜ್ಞಾನವು ಕೊಟ್ಟಿರುವ ಹೊಸ ಆಯಾಮವೆಂದರೆ ಉಂಗುರದ ಬೆರಳಿನ ಉದ್ದವು ವ್ಯಕ್ತಿಯಲ್ಲಿರುವ ಕಾಮವಾಂಛೆ ಅಥವಾ ಲೈಂಗಿಕಸಾಮರ್ಥ್ಯದ ಬಗ್ಗೆ ಬಹಳಷ್ಟನ್ನು ತಿಳಿಸಬಲ್ಲದಂತೆ!

ಈಗೊಂದು ಸಣ್ಣ ಪರೀಕ್ಷೆ ಮಾಡಿ. ನಿಮ್ಮ ಬಲಗೈಯ ಎಲ್ಲ ಬೆರಳುಗಳನ್ನೊಮ್ಮೆ ಸೂಕ್ಷ್ಮವಾಗಿ ನೋಡಿ. ತೋರುಬೆರಳು (Index finger) ಮತ್ತು ಉಂಗುರದ ಬೆರಳು (Ring finger) ಇವೆರಡರ ಉದ್ದವನ್ನು ಗಮನಿಸಿ. ಯಾವುದರ ಉದ್ದ ಹೆಚ್ಚು ಇದೆ? ತೋರುಬೆರಳಿನದೇ ಅಥವಾ ಉಂಗುರಬೆರಳಿನದೇ? ನಿಮ್ಮ ಉತ್ತರವನ್ನು ಈ ಕೆಳಗಿನ ಫಲಿತಾಂಶಗಳೊಂದಿಗೆ ತಾಳೆಮಾಡಿ ನೋಡಿ.

ಸಾಮಾನ್ಯವಾಗಿ ಗಂಡಸರಿಗೆ ತೋರುಬೆರಳಿಗಿಂತ ಉಂಗುರಬೆರಳು ಉದ್ದವಾಗಿರುತ್ತದೆ, ಅಂಥವರ ಪುರುಷತ್ವ, ಸಂತಾನೋತ್ಪತ್ತಿಯ ಸಾಮರ್ಥ್ಯಗಳು ಅದ್ಭುತವಾಗಿರುತ್ತವೆ, ಅವರನ್ನು testosterone tiger ಎನ್ನಲಡ್ಡಿಯಿಲ್ಲ.

ಹೆಂಗಸರಿಗೆ ಇದರ ತದ್ವಿರುದ್ಧ. ತೋರುಬೆರಳಿಗಿಂತ ಉಂಗುರದಬೆರಳು ಗಿಡ್ಡವಾಗಿದ್ದರೆ ಅವರ ಸ್ತ್ರೀಶಕ್ತಿ ಪರಾಕಾಷ್ಟೆಯಲ್ಲಿರುತ್ತದೆ. ಈಸ್ಟ್ರೊಜನ್‌, ಪ್ರೊಲಾಕ್ಟಿನ್‌ ಮೊದಲಾದ ಸ್ತ್ರೀವಿಶೇಷ ಹಾರ್ಮೋನ್‌ಗಳು ಅಂಥವರಲ್ಲಿ ವಿಪುಲವಾಗಿರುತ್ತವೆ.

ಇದು ಲಿವರ್‌ಪೂಲ್‌ ವಿಶ್ವವಿದ್ಯಾಲಯದ ಜನಸಂಖ್ಯಾ ಜೀವಶಾಸ್ತ್ರ ಸಂಶೋಧನಾ ವಿಭಾಗದ ಡಾ। ಮೆನಿಂಗ್‌ ಮತ್ತು ತಂಡದವರು ವಿಶೇಷ ಅಧ್ಯಯನದಿಂದ, ವಿವಿಧ ವಯೋಮಾನದ ಸಾವಿರಾರು ಜನ ಹೆಣ್ಣು-ಗಂಡುಗಳನ್ನು ಸಂದರ್ಶಿಸಿ ಅವರ ಪ್ರತಿಕ್ರಿಯೆಗಳ ಅಂಕಿಅಂಶಗಳನ್ನು ಕ್ರೋಡೀಕರಿಸಿ ಪ್ರಕಟಿಸಿರುವ ಫಲಿತಾಂಶ.

ಆದರೆ, ಬೆರಳುಗಳ ಉದ್ದಕ್ಕೂ ಲೈಂಗಿಕಸಾಮರ್ಥ್ಯಕ್ಕೂ ತಾಳೆಯಿದೆ ಅಥವಾ ಇರಬಹುದು ಎಂಬ ತರ್ಕಕ್ಕೆ ಏನು ಆಧಾರ?

ಆ ತರ್ಕದ ಹಿಂದಿರುವುದು ಜೀವಶಾಶ್ತ್ರದ ಒಂದು ಮೂಲಭೂತ ವಿಷಯವಾದ ‘ಡಿಎನ್‌ಎ’ (DNA = Deoxyribonucleic acid). ಶರೀರದ ವಿವಿಧ ಅಂಗಗಳ ಸಂರಚನೆಯನ್ನು ನಿರ್ಧರಿಸುವ ಮತ್ತು ನಿಯಂತ್ರಿಸುವ ಜೀವಾಂಶವೇ ಡಿಎನ್‌ಎ. ಯಾವುದೇ ಜೀವಿಯು ಗರ್ಭಾವಸ್ಥೆಯಲ್ಲಿರುವಾಗಲೇ ಅದರ ವಿವಿಧ ಅಂಗರಚನೆಯ ಪರಸ್ಪರ ಹೊಂದಾಣಿಕೆಗಳು ನಿರ್ಧರಿತವಾಗಿರುತ್ತವೆ. ಹುಟ್ಟಿದ ಮೇಲೆ ಏನಿದ್ದರೂ ಆ ಅಂಗಗಳ ಬೆಳವಣಿಗೆ ಮಾತ್ರ ಆಗುವುದು. ಜೀವಿಯು ಒಂದು ಕೋಶವಾಗಿದ್ದಲ್ಲಿಂದ ಹಿಡಿದು ತಲೆ-ಶರೀರ-ಕೈಕಾಲು-ಬಾಲ ಇತ್ಯಾದಿ ಅಂಗಗಳೊಂದಿಗೆ ಪರಿಪೂರ್ಣ ರಚನೆಯಾಗುವಂತೆ ನೋಡಿಕೊಳ್ಳುವುದು ಡಿಎನ್‌ಎಯ ಜವಾಬ್ದಾರಿ. ಆ ಪ್ರಕ್ರಿಯೆ ಎಷ್ಟು ಕರಾರುವಾಕ್ಕಾಗಿ ನಡೆಯುತ್ತದೆಯೆಂದರೆ, ಕೈಬೆರಳುಗಳನ್ನೇ ಉದಾಹರಣೆಯಾಗಿ ಪರಿಗಣಿಸಿದರೂ ಯಾವ ಬೆರಳು ಎಷ್ಟು ಉದ್ದವಿರಬೇಕು, ಬೆರಳುಗಳ ಪರಸ್ಪರ ಅನುಪಾತ ಎಷ್ಟಿರಬೇಕು ಇತ್ಯಾದಿಯನ್ನೆಲ್ಲ ಡಿಎನ್‌ಎ ತೀರ್ಮಾನಿಸುತ್ತದೆ.

1984ರಲ್ಲಿ ಕೆಲವು ಜೀವಶಾಸ್ತ್ರಜ್ಞರು ಕಂಡುಕೊಂಡಂತೆ ಈ ಲೋಕದ ಹೆಚ್ಚಿನ ಜೀವಜಂತುಗಳಲ್ಲಿ homeobox ಎಂಬ ವಿಶೇಷ ಡಿಎನ್‌ಎ ಇರುತ್ತದೆ. ಮನುಷ್ಯಜೀವಿಯಲ್ಲೂ ಈ ಡಿಎನ್‌ಎ ಇದೆ; ಮಾತ್ರವಲ್ಲ, ಮನುಷ್ಯನ ಅಂಗರಚನೆಯ ವೇಳೆ ಕೈಬೆರಳುಗಳ ಪೈಕಿ ನಾಲ್ಕನೆಯದರ (ಉಂಗುರದ ಬೆರಳು ಎಂದು ನಾವು ಯಾವುದನ್ನು ಆಯ್ದುಕೊಂಡಿದ್ದೇವೋ ಅದು) ಮತ್ತು ಜನನಾಂಗಗಳ ಸಂರಚನೆಗೆ ಇದೇ homeobox ಡಿಎನ್‌ಎ ಬಳಕೆಯಾಗುತ್ತದೆ. ಒಂದೇ ಡಿಎನ್‌ಎಯಿಂದ ರೂಪಿತವಾದ ಈ ಅಂಗಗಳೊಳಗೆ ಸಹಜವಾಗಿಯೇ ಒಳ್ಳೆಯ ಅಂಡರ್‌ಸ್ಟಾಂಡಿಂಗ್‌ ಇರುತ್ತದೆ. ಬೆರಳುಗಳ ಉದ್ದ ಮತ್ತು ಜನನಾಂಗಗಳ ಚಟುವಟಿಕೆಗಳು ಒಂದಕ್ಕೊಂದು ಅನುಪಾತದಲ್ಲಿರುತ್ತವೆ.

ಉಂಗುರದಬೆರಳು ಮತ್ತು ಮನುಷ್ಯನ ಪ್ರೇಮಕಾಮಗಳ ಸಂಬಂಧ ರಹಸ್ಯವು ಇದುವರೆಗೂ ಈ ಹೊಮೊ‘ಬಾಕ್ಸ್‌’ನಲ್ಲಿ ಬೆಚ್ಚಗೆ ಅವಿತುಕೊಂಡಿತ್ತು. ಅದನ್ನೀಗ ಜೀವವಿಜ್ಞಾನಿಗಳು ಅನಾವರಣಗೊಳಿಸಿದ್ದಾರೆ. ಹಾಗಾಗಿ ವೈಜ್ಞಾನಿಕವಾಗಿಯೂ ಉಂಗುರದ ಬೆರಳು ‘ಸೆಕ್ಸಿ’ಯಾಗಿದೆ ಎಂದು ಧಾರಾಳವಾಗಿ ಹೇಳಬಹುದಾಗಿದೆ! ಅಷ್ಟು ಮಾತ್ರವಲ್ಲ, ಸೆಕ್ಸಿಯಾದ ಉಂಗುರದ ಬೆರಳು ಮದುವೆ-ದಾಂಪತ್ಯ-ಸಂತಾನೋತ್ಪತ್ತಿ ಇತ್ಯಾದಿಯೆಲ್ಲವನ್ನೂ ಅರ್ಥಪೂರ್ಣವಾಗಿ ಪ್ರತಿನಿಧಿ-ಸುತ್ತದೆ ಎಂದಾಯಿತು. ಅದಕ್ಕೋಸ್ಕರವೇ ಸತಿಪತಿಯರ ಮಿಲನದ ಬಾಹ್ಯಸಂಕೇತವಾಗಿ ಉಂಗುರದಬೆರಳಿಗೆ ಬಂಗಾರದ ಉಂಗುರ!

*

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more