• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಾಹ್ಯಾಕಾಶದಿಂದ ‘ಉನ್ನತ ವ್ಯಾಖ್ಯೆ’ಯಲ್ಲಿ ನೇರಪ್ರಸಾರ!

By Staff
|


ಆದರೆ ಮೊನ್ನೆಯ ನೇರಪ್ರಸಾರ ಪ್ರಯೋಗ ಅಂತಿಂಥದಲ್ಲ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’, ಡಿಸ್ಕವರಿ ಚಾನೆಲ್‌, ಜಪಾನ್‌ನ ರಾಷ್ಟ್ರೀಯ ಟೆಲಿವಿಶನ್‌ ನೆಟ್‌ವರ್ಕ್‌ - ಹೀಗೆ ತಂತ್ರಜ್ಞಾನದಲ್ಲಿ ಅತಿರಥಮಹಾರಥರ ಸಂಯುಕ್ತ ಪ್ರಯತ್ನವದು. ಮೊಟ್ಟಮೊದಲಬಾರಿಗೆ ಬಾಹ್ಯಾಕಾಶದಿಂದ ಹೈ-ಡೆಫಿ‚ನಿಶನ್‌ ರೂಪದಲ್ಲಿ ದೃಶ್ಯ-ಶ್ರವ್ಯ ನೇರಪ್ರಸಾರ. ಅದನ್ನು ಅಮೆರಿಕದಲ್ಲಿ ‘ಡಿಸ್ಕವರಿ ಎಚ್‌ಡಿ ಥಿಯೇಟರ್‌’ ಚಾನೆಲ್‌ನಲ್ಲಿ ಮತ್ತು ಜಪಾನ್‌ನಲ್ಲಿ ಅಲ್ಲಿನ ಎನ್‌ಎಚ್‌ಕೆ ಚಾನೆಲ್‌ನಲ್ಲಿ ಏಕಕಾಲಕ್ಕೆ ಬಿತ್ತರಿಸಲಾಯಿತು. ಪ್ರಪಂಚದಾದ್ಯಂತ ಡಿಸ್ಕವರಿ ಚಾನೆಲ್‌ನ ಶೋರೂಮ್‌ಗಳಲ್ಲಿನ ದೊಡ್ಡದೊಡ್ಡ ಟಿವಿಪರದೆಗಳ ಮೇಲೂ ಅದು ಪ್ರಸಾರವಾಯಿತು.

Internation Space Station - Destiny Laboratoryಎಚ್‌ಡಿ ಅಥವಾ ಹೈ-ಡೆಫಿ‚ನಿಶನ್‌ ಟಿವಿಯದೇನು ವಿಶೇಷತೆ?

ಎಚ್‌ಡಿ ಟಿವಿಯಲ್ಲಿ ಚಿತ್ರದ ಗುಣಮಟ್ಟವು ಸಾಂಪ್ರದಾಯಿಕ ಅನಲಾಗ್‌ ಚಿತ್ರಕ್ಕಿಂತ 6 ಪಟ್ಟು ಹೆಚ್ಚು ಸ್ಪಷ್ಟ ಮತ್ತು ತೀಕ್ಷ್ಣವಾಗಿರುತ್ತದೆ. ಇದಕ್ಕೆ ಕಾರಣವೇನೆಂದರೆ ಸಾಮಾನ್ಯ ಅನಲಾಗ್‌ ಚಿತ್ರ ಮೂಡಲು 480 ಅಡ್ಡಗೆರೆಗಳಿರುವುದಾದರೆ ಎಚ್‌ಡಿ ಟಿವಿಯಲ್ಲಿ 1080 ಅಡ್ಡಗೆರೆಗಳು. ಸಾಮಾನ್ಯ ಚಿತ್ರದ ರೂಪಾನುಪಾತ (aspect ratio) 4 : 3 ಇದ್ದರೆ ಎಚ್‌ಡಿ ಚಿತ್ರದಲ್ಲಿ ಅದು 16 : 9 ಆಗಿರುತ್ತದೆ. ಹೈ-ಡೆಫಿನಿಶನ್‌ (ಅಥವಾ ನನ್ನ ಕನ್ನಡೀಕರಣದಂತೆ ’ಉನ್ನತವ್ಯಾಖ್ಯೆ’) ಎಂಬ ವಿಶೇಷತೆ ಬಂದಿರೋದು ಅದಕ್ಕೇ. ಅಷ್ಟೇ ಅಲ್ಲದೆ ಎಚ್‌ಡಿಟಿವಿಯಲ್ಲಿ ಸಿನೆಮಾಸ್ಕೋಪ್‌ದಂತೆ ಆಗಲವಾದ ಚಿತ್ರ. ಜತೆಗೆ ಡೊಲ್ಬಿ ಡಿಜಿಟಲ್‌ ಸ್ಟಿರಿಯಾ ಆವೃತ್ತಧ್ವನಿ (surround sound) ಸಹ ಸೇರಿ ಎಚ್‌ಡಿ ಟಿವಿ ವೀಕ್ಷಣೆಯೆಂದರೆ ಬರೀ ಆನಂದವಲ್ಲ, ಅದೊಂದು ಅನನ್ಯ ಅನುಭವ!

ಎಚ್‌ಡಿಟಿವಿ ಕಾರ್ಯಕ್ರಮಗಳನ್ನು ನೋಡಲಿಕ್ಕೆ ಮೂರು ಮೂಲಭೂತ ಅಗತ್ಯಗಳಿವೆ. ಎಚ್‌ಡಿ-ರೆಡಿ ಅಥವಾ ಎಚ್‌ಡಿ-ಕಂಪಾಟಿಬಲ್‌ ಟೆಲಿವಿಷನ್‌ ಸೆಟ್‌, ಎಚ್‌ಡಿ ಸಿಗ್ನಲ್‌ಗಳನ್ನು ಸ್ವೀಕರಿಸಬಲ್ಲ ಡಿಕೋಡರ್‌ ಗ್ರಾಹಕಪೆಟ್ಟಿಗೆ, ಮತ್ತು ಎಚ್‌ಡಿ ರೂಪದಲ್ಲಿ ಕಾರ್ಯಕ್ರಮವನ್ನು ಪ್ರಸಾರಮಾಡುವ ಟಿವಿ ಕೇಂದ್ರ. ಮುಂದುವರೆದ ರಾಷ್ಟ್ರಗಳಲ್ಲಿ ಈಗೀಗ ಎಚ್‌ಡಿ ಟಿವಿಯ ಜನಪ್ರಿಯತೆ ಹೆಚ್ಚುತ್ತಿದೆ. ಅಮೆರಿಕದಲ್ಲಿ ಇನ್ನು ಕೆಲವರ್ಷಗಳೊಳಗೆ ಟಿವಿ ಎಂದರೆ ಎಚ್‌ಡಿಟಿವಿ ಎನ್ನುವಂತಾಗಲಿದೆ (ಫೆಬ್ರುವರಿ 17, 2009ರಂದು ಅಮೆರಿಕದಲ್ಲಿ ಅನಲಾಗ್‌ ಟಿವಿ ಟ್ರಾನ್ಸ್‌ಮಿಶನ್‌ನ ಕೊನೆಯ ದಿನ. ಅಲ್ಲಿಂದ ಮುಂದೆ ಎಲ್ಲ ಚಾನೆಲ್‌ಗಳೂ ಡಿಜಿಟಲ್‌ ರೂಪದಲ್ಲೇ ಪ್ರಸಾರವಾಗಬೇಕೆಂದು ಫೆಡರಲ್‌ ಕಮ್ಯುನಿಕೇಶನ್‌ ಕಮಿಶನ್‌ ಈಗಾಗಲೇ ಕಾಯಿದೆ ಮಾಡಿದೆ). ಬೀಜಿಂಗ್‌ನಲ್ಲಿ 2008ರಲ್ಲಿ ನಡೆಯುವ ಒಲಂಪಿಕ್ಸ್‌ ಪಂದ್ಯಾವಳಿಯ ನೇರಪ್ರಸಾರ ಎಚ್‌ಡಿ ರೂಪದಲ್ಲಿರಲಿದೆ.

ನಾಸಾ ಚಟುವಟಿಕೆಗಳು ಎಚ್‌ಡಿ ಟಿವಿಯಲ್ಲಿ ನೇರಪ್ರಸಾರವಾಗುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ ಜುಲೈಯಲ್ಲಿ ಡಿಸ್ಕವರಿ ಸ್ಪೇಸ್‌ ಶಟಲ್‌ನ ಉಡಾವಣೆಯನ್ನು ಕೆನಡಿ ಸ್ಪೇಸ್‌ ಸೆಂಟರ್‌ನಿಂದ ಎಚ್‌ಡಿ ಟಿವಿಯಲ್ಲಿ ನೇರಪ್ರಸಾರ ಮಾಡಲಾಗಿತ್ತು. ಯಾತ್ರೆಗೆ ಇನ್ನೇನು ಕೆಲಕ್ಷಣಗಳಷ್ಟೇ ಇರುವ ಮುನ್ನ ವ್ಯೋಮಯಾನಿಗಳು ಕುಟುಂಬದವರೊಂದಿಗೆ ಕಳೆದ ಭಾವಮಯ ಸನ್ನಿವೇಶಗಳು, ಉಪಾಹಾರ ಸೇವನೆ, ಕೇಸರಿಬಣ್ಣದ ವಿಶೇಷ ಉಡುಪುಧಾರಣೆ, ಉಡ್ಡಯನಪೂರ್ವ ಶಿಷ್ಟಾಚಾರಗಳೆಲ್ಲ ಮುಗಿದಮೇಲೆ ಕೌಂಟ್‌ಡೌನ್‌ನ ನಂತರ ಸ್ಪೇಸ್‌ಶಟಲನ್ನು ಹೊತ್ತ ರಾಕೆಟ್‌ ಆಗಸಕ್ಕೆ ಚಿಮ್ಮಿದ್ದು, ದೃಷ್ಟಿಸೀಮೆಯಿಂದ ಅದು ಅಗೋಚರವಾಗುವವರೆಗಿನ ದೃಶ್ಯಗಳೆಲ್ಲವನ್ನೂ ಸ್ಪಟಿಕಸ್ಪಷ್ಟವಾಗಿ ಎಚ್‌ಡಿಟಿವಿ ಬಿತ್ತರಿಸಿತ್ತು.

ಹಾಗೆಯೇ ಈ ಮೊದಲು ಕೂಡ ಹೈ-ಡೆಫಿ‚ನಿಶನ್‌ ಕೆಮರಾಗಳನ್ನು ಉಪಯೋಗಿಸಿ ಸ್ಪೇಸ್‌ಸೆಂಟರ್‌ನೊಳಗಿನ ಚಟುವಟಿಕೆಗಳನ್ನು ಚಿತ್ರೀಕರಿಸಿಕೊಂಡದ್ದಿದೆ. ಐಮ್ಯಾಕ್ಸ್‌ ರೂಪದಲ್ಲಿ ಚಿತ್ರೀಕರಣ ಮಾಡಿ ಡಾಕ್ಯುಮೆಂಟರಿ ಸಿನೆಮಾ ತಯಾರಿಸಿದ್ದಿದೆ. (ಕಳೆದವರ್ಷ ಸ್ನೇಹಿತ ರಂಗನಾಥ್‌ ಕಶ್ಯಪ್‌ ನಮ್ಮನೆಗೆ ಬಂದಿದ್ದ ಸಂದರ್ಭದಲ್ಲಿ ನಾವೆಲ್ಲ ವಾಷಿಂಗ್‌ಟನ್‌ ಡಿಸಿಯ ಏರ್‌ ಏಂಡ್‌ ಸ್ಪೇಸ್‌ ಮ್ಯೂಸಿಯಂನ ಐಮ್ಯಾಕ್ಸ್‌ ಚಿತ್ರಮಂದಿರದಲ್ಲಿ ಇಂಟರ್‌ನ್ಯಾಶನಲ್‌ ಸ್ಪೇಸ್‌ ಸೆಂಟರ್‌ ಕುರಿತ 3ಡಿ ಚಿತ್ರವನ್ನು ನೋಡಿದ್ದೆವು). ಇವೆಲ್ಲ ಸ್ಪೇಸ್‌ಸೆಂಟರ್‌ನಲ್ಲಿ ರೆಕಾರ್ಡಿಂಗ್‌ ಮಾಡಿಟ್ಟು ವ್ಯೋಮಯಾತ್ರಿಗಳು ಅಲ್ಲಿಂದ ಭೂಮಿಗೆ ಹಿಂದಿರುಗಿದ ಮೇಲೆ ಸಂಸ್ಕರಣ ಮಾಡಿ ಪ್ರದರ್ಶನಯೋಗ್ಯಗೊಳಿಸಿದ್ದಾಗಿತ್ತು. ಆದರೆ ಮೊನ್ನೆ ನವೆಂಬರ್‌ 15ರಂದು ಆದದ್ದು, ಪ್ರಪ್ರಥಮ ಬಾರಿಗೆ ಬಾಹ್ಯಾಕಾಶದಿಂದ ಹೈಡೆಫಿ‚ನಿಶನ್‌ ಫ‚ಾರ್ಮಾಟ್‌ನಲ್ಲಿ ನೇರಪ್ರಸಾರ!

ಬಾಹ್ಯಾಕಾಶ ಸಂಪರ್ಕಕ್ಷೇತ್ರದಲ್ಲಿ ಇದೊಂದು ಮಹತ್ವದ ಹೆಜ್ಜೆ. ಇದಕ್ಕೆ ಬೇಕಾದ ಸಲಕರಣೆಗಳು (ವಿಶೇಷವಾಗಿ ತಯಾರಾದ ಸೊನಿ ಕೆಮರಾ, ಮಿನಿಟವರ್‌ ಕಂಪ್ಯೂಟರ್‌ ಇತ್ಯಾದಿ) ಎರಡು ತಿಂಗಳ ಹಿಂದೆ ಸಪ್ಟೆಂಬರ್‌ನಲ್ಲಿ ‘ಅಟ್ಲಾಂಟಿಸ್‌’ ಶಟಲ್‌ನಲ್ಲಿ ಸ್ಪೇಸ್‌ಸೆಂಟರ್‌ಗೆ ರವಾನೆಯಾಗಿದ್ದವು. ಅಕ್ಟೋಬರ್‌ನಲ್ಲಿ ಒಮ್ಮೆ ಪರೀಕ್ಷಾರ್ಥ ಪ್ರಸಾರ ಕೈಗೊಂಡು ಎಲ್ಲ ಸರಿಯಾಗಿದೆಯೆಂದು ದೃಢಪಟ್ಟ ನಂತರ ನವೆಂಬರ್‌ 15ರಂದು ನೇರಪ್ರಸಾರ ನಡೆಯಿತು. 20 ನಿಮಿಷಗಳ ಅವ-ಧಿ-ಯಲ್ಲಿ ಕಮಾಂಡರ್‌ ಮೈಕೆಲ್‌ ಲೊಪೆಜ್‌ ನಮಗೆ ಸ್ಪೇಸ್‌ ಸೆಂಟರ್‌ನ ಗೈಡೆಡ್‌ ಟೂರ್‌ ಮಾಡಿಸಿದರು. ಪ್ಯಾಂಟ್‌-ಶರ್ಟ್‌ ಸಾಮಾನ್ಯ ಉಡುಪಿನಲ್ಲೇ ಕಾಣಿಸಿಕೊಂಡು ನಮ್ಮಲ್ಲಿದ್ದ ‘ಗಗನಯಾತ್ರಿ’ ಇಮೇಜನ್ನು ತಿದ್ದಿದರು. ಆಹಾರಪೊಟ್ಟಣಗಳು, ಸೂಪ್‌/ಜ್ಯೂಸ್‌ ಸ್ಯಾಶೆಗಳನ್ನೂ ತೋರಿಸಿ ತಮ್ಮ ಆಹಾರಕ್ರಮವನ್ನು ವಿವರಿಸಿದರು. ಭೂಲೋಕದ ನೆನಪಾದಾಗ ಭೂಮಿಯತ್ತ ಇಣುಕಲು ನೌಕೆಯಾಳಗಿರುವ ‘ಕಿಟಿಕಿ’ಯನ್ನು ತೋರಿಸಿದರು!

ಇನ್ನು ಆ ನೇರಪ್ರಸಾರವು ತಾಂತ್ರಿಕವಾಗಿ ಹೇಗೆ ಸಾಧ್ಯವಾಯಿತು ಎಂದು ಸಂಕ್ಷಿಪ್ತವಾಗಿ ಹೇಳುವುದಾದರೆ, ಇಂಟರ್‌ನ್ಯಾಶನಲ್‌ ಸ್ಪೇಸ್‌ಸೆಂಟರ್‌ನಿಂದ ದೂರಸಂಪರ್ಕ ಉಪಗ್ರಹಕ್ಕೆ ಕಳಿಸಲ್ಪಟ್ಟ ಸಂಕೇತಗಳು ಅಲ್ಲಿಂದ ಅಮೆರಿಕದ ನ್ಯೂಮೆಕ್ಸಿಕೊ ಸಂಸ್ಥಾನದಲ್ಲಿನ ನಾಸಾ ಪರೀಕ್ಷಾಕೇಂದ್ರಕ್ಕೆ ಪ್ರತಿಫಲಿತವಾದುವು. ಅಲ್ಲಿಂದ ಟೆಕ್ಸಸ್‌ನ ಹ್ಯೂಸ್ಟನ್‌ನಲ್ಲಿರುವ ಜಾನ್ಸನ್‌ ಸ್ಪೇಸ್‌ ಸೆಂಟರ್‌ಗೆ, ಡಿಸ್ಕವರಿ ಚಾನೆಲ್‌ ಮತ್ತು ಜಪಾನ್‌ನ ರಾಷ್ಟ್ರೀಯ ಟೆಲಿವಿಶನ್‌ ಚಾನೆಲ್‌ನ ಸ್ವಾಮ್ಯದ ಅಪ್‌ಲಿಂಕಿಂಗ್‌ ಟ್ರಕ್‌ಗಳಿಗೆ ವರ್ಗಾವಣೆ. ಆಯಾ ಚಾನೆಲ್‌ಗಳ ಉಪಗ್ರಹಗಳಿಂದ ಚಂದಾದಾರರ ಡಿಶ್‌ ಆ್ಯಂಟೆನಾಗಳ ಮೂಲಕ ಟೆಲಿವಿಶನ್‌ ಸೆಟ್‌ಗಳಿಗೆ - ಹೀಗೆ ಭೂಮ್ಯಾಕಾಶಗಳ ಮಧ್ಯೆ ದೃಶ್ಯ-ಶ್ರವ್ಯ ಸಂಕೇತಗಳ ಸಂವಹನ. ಎಲ್ಲವೂ ಅರೆಕ್ಷಣದಲ್ಲಿ. ’ನಾಸಾ’ ನಿಯಂತ್ರಣಕೇಂದ್ರದಿಂದ ಕಾಮೆಂಟೇಟರ್‌ ಮಾತಾಡಿದ್ದು ಮಾತ್ರ ಸ್ವಲ್ಪ ಪ್ರತಿಧ್ವನಿಯಾಂದಿಗೆ ಕೇಳಿಸುತ್ತಿತ್ತು. ಉಳಿದಂತೆ ಅದ್ಭುತ ಅತ್ಯದ್ಭುತವೆಂದು ಮೂಗಿನಮೇಲೆ ಬೆರಳಿಡುವಂಥ ಅನುಭವ ಆ ಕಾರ್ಯಕ್ರಮ.

ಇಷ್ಟೆಲ್ಲ ಆಗಿಯೂ ಅಂಥದೇನು ಮಹಾ ಇರೋದು ಈ ಬಾಹ್ಯಾಕಾಶದ ಎಚ್‌ಡಿಟಿವಿ ನೇರಪ್ರಸಾರದಲ್ಲಿ ಎನಿಸಬಹುದು ನಮಗೆಲ್ಲ. ಹೌದು, ಜನಸಾಮಾನ್ಯರಿಗೆ ಅದರಲ್ಲೇನೂ ವಿಶೇಷ ಮನರಂಜನೆಯಿಲ್ಲ, ಹೇಳಿಕೊಳ್ಳುವಂಥ ಜ್ಞಾನಾರ್ಜನೆಯೂ ಇಲ್ಲ. ಆದರೆ ಬಾಹ್ಯಾಕಾಶ ಸಂಶೋಧನಾ ವಿಜ್ಞಾನಿಗಳಿಗೆ, ಇಂಜನಿಯರುಗಳಿಗೆ, ಮಾಧ್ಯಮಗಳವರಿಗೆ ಹೈ-ಡೆಫಿ‚ನಿಷನ್‌ ರೂಪದಲ್ಲಿ ಮಾಹಿತಿಲಭ್ಯವಾದರೆ ಎಷ್ಟೋ ಪ್ರಯೋಜನವಿದೆ. ಹಾಗಾಗಿಯೇ ಮೊನ್ನೆಯ ಯಶಸ್ವಿ ಪ್ರಯೋಗಕ್ಕೆ ‘ನಾಸಾ’ ತುಂಬ ಮಹತ್ವಕೊಟ್ಟಿದೆ - 1969ರಲ್ಲಿ ಮೊಟ್ಟಮೊದಲು ಚಂದ್ರನ ಮೇಲೆ ಮಾನವ ಪದಾರ್ಪಣ ಮಾಡಿದ್ದಾಗಿನಷ್ಟೇ!

*

ಬಾಲಂಗೋಚಿ (ಇದೂ ಒಂದು ‘ಹೈ-ಡೆಫಿ‚ನಿಶನ್‌’) : ಎಚ್‌ಡಿ ಟಿವಿಯ ಬಗ್ಗೆ ಬೆಂಗಳೂರಿನ ಸ್ನೇಹಿತನಿಗೆ ಹೇಳಿದಾಗ ಅವನ ಉದ್ಗಾರ - ‘‘ಭಾರತದಲ್ಲಿ/ಕರ್ನಾಟಕದಲ್ಲಿ ಇನ್ನೂ ಎಚ್‌ಡಿ ಟಿವಿ ಪ್ರಸಾರಣದ ತಂತ್ರಜ್ಞಾನ ಬಂದಿಲ್ಲ; ಬರುವ ದಿನಗಳೇನೂ ದೂರವಿರಲಿಕ್ಕಿಲ್ಲ. ಸದ್ಯಕ್ಕಂತೂ ಹರದನಹಳ್ಳಿಯ ಮಣ್ಣಿನ ಮಗ, ಮೊಮ್ಮಗ, ಮರಿಮಗ ಇವರುಗಳ ಪ್ರಹಸನಗಳೇ ಕರ್ನಾಟಕದ ಮಟ್ಟಿಗೆ ‘ಎಚ್‌.ಡಿ’ ಟಿವಿ ಮನರಂಜನೆ!’’ -srivathsajoshi@yahoo.com

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more