• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇವತ್ತು ಬರಿಯಲಿಕ್ಕೆ ವಿಷಯ ಏnilಆ !!

By Staff
|


‘ಏನೂ ಇಲ್ಲ’ (ಅಥವಾ ಸೊನ್ನೆ) ಎಂಬುದನ್ನು ಎಲ್ಲವೂ ಇದೆ ಎಂಬ ಅರ್ಥದಲ್ಲಿ ಸುಮಾರು ಕ್ರಿ.ಶ 5ನೇ ಶತಮಾನದಲ್ಲೇ ಉಪಯೋಗಿಸಿದ್ದು ನಮ್ಮವನೇ ಆದ ಆರ್ಯಭಟ್ಟ. ಆತ ಸಂಖ್ಯೆಗಳನ್ನು ಬರೆಯುವಾಗ ಸೊನ್ನೆಯ ಬದಲು ‘ಖ’ ಅಕ್ಷರವನ್ನು ಬಳಸಿದ್ದಾನೆ. ಸಂಸ್ಕೃತದಲ್ಲಿ ‘ಖ’ಎಂದರೆ ಗೊತ್ತಲ್ಲ? ಆಕಾಶ. (ಖಗ = ಪಕ್ಷಿ; ಖಗೋಳ = ಭೂಮ್ಯಾಕಾಶಗಳು ಸೇರಿದ ಬ್ರಹ್ಮಾಂಡ)

‘‘ನಿಮ್ಮತ್ರ ಒಂದು ಇಂಪಾರ್ಟೆಂಟ್‌ ವಿಷಯ ಮಾತಾಡೋದಿತ್ತು...’’ ಎಂದು ಪೀಠಿಕೆಹಚ್ಚುವವರನ್ನು ಗಮನಿಸಿ. ಅವರ ಎರಡನೇ ವಾಕ್ಯ ಶುರುವಾಗುವುದೇ ‘‘ಏನಿಲ್ಲ... ಒಂದು ಸ್ವಲ್ಪ ಕೈಗಡ ಸಿಗಬಹುದಾ?’’ ಎಂಬ ಅನುಮಾನಭರಿತ ಧ್ವನಿಯಲ್ಲಿ. ಇಂಪಾರ್ಟೆಂಟ್‌ ಆದ ವಿಷಯ ಏಕಾಏಕಿ ‘ಏನಿಲ್ಲ’ ಆಗುವುದು ಅದು ಹೇಗೋ!

ಮೂರು ಮತ್ತೊಂದು ಹೆಂಗಸು ಒಟ್ಟುಸೇರಿದಲ್ಲಿ ಲೋಕಾಭಿರಾಮದ ಅಂತೆಕಂತೆಗಳ ಸಂತೆಮಾತುಕತೆ ಸಾಗುತ್ತಿದ್ದಾಗ ಯಾರಾದರೂ ಮಧ್ಯಪ್ರವೇಶಿಸಿ ಏನ್‌ ಮಾತಾಡ್ತಿದ್ರಿ ಎಂದು ಕೇಳಿದರೆ ಥಟ್ಟನೆ ಬರುವ ಉತ್ತರ ‘‘ಏನೂ ಇಲ್ಲ’’ ಎಂದೇ. ಜತೆಯಲ್ಲೇ ಏನೋ ‘ಮಹಾ’ ಒಂದನ್ನು ಗುಟ್ಟಾಗಿಟ್ಟ ಬಿಂಕ ಬೇರೆ! ಹಾಗೆಯೇ ತನ್ನ ರೂಮ್‌ನಲ್ಲೇ ಕುಳಿತು ಬ್ರಹ್ಮಾಂಡವನ್ನೇ ಸೃಷ್ಟಿಸುತ್ತಿದ್ದೇನೋ ಎನ್ನುವಂಥ ಕೆಲ್ಸದಲ್ಲಿ ತಲ್ಲೀನವಾಗಿರುವ ಮಗ/ಮಗಳನ್ನು ಏನ್ಮಾಡ್ತಿದ್ದೀಯಮ್ಮಾ ಊಟಕ್ಕೆ ಬಾ... ಎಂದು ಕರೆದರೆ ಉತ್ತರ ಬರೋದು ‘‘ಏನೂ ಇಲ್ಲ’’ ಎಂದೇ.

ಕಛೇರಿಸಮಯದಲ್ಲಿ ಕದ್ದುಮುಚ್ಚಿ ದಟ್ಸ್‌ಕನ್ನಡ ಬ್ರೌಸಿಸುವಾಗ ಬಾಸ್‌ ಬಂದು ವಾಟ್ಸ್‌ ದಟ್‌? ಎಂದು ಕೇಳಿದರೆ ದಟ್ಸ್‌ ಕನ್ನಡ ಎನ್ನುವ ಬದಲು ಬಾಯಿಂದ ಬರೋದು ‘ನಥಿಂಗ್‌’ ಎಂದೇ. ಅಂದರೆ, ಎಲ್ಲವೂ ಆಗಿದ್ದದ್ದು ಕ್ಷಣಾರ್ಧದಲ್ಲಿ ಏನೂಇಲ್ಲ ಆಗುತ್ತದೆ! ಬರ್ತ್‌ಡೇಗೆ ಏನು ಗಿಫ‚್‌್ಟ ತರಲಿ ಡಾರ್ಲಿಂಗ್‌? ಎಂಬ ಪ್ರಶ್ನೆಗೆ ನಥಿಂಗ್‌ ಎಂದೇ ಉತ್ತರಿಸಿದರೂ ಆ ‘ನಥಿಂಗ್‌’ ಚಿನ್ನ ವಜ್ರ ವೈಡೂರ್ಯಗಳದೇ ಇರಲಿ ಎಂಬುದೇ ಇಂಗಿತವಾಗಿರುತ್ತದೆಯಲ್ಲ, ಅಲ್ಲಿ ನಥಿಂಗ್‌ ಅಸಲಿಗೆ ಎವೆರಿಥಿಂಗೇ ಆಗಿರುತ್ತದೆ! ಈಗಲಾದರೂ ಒಪ್ಪುತ್ತೀರಾ, ಸಮ್‌ಥಿಂಗ್‌ಗಿಂತ ನಥಿಂಗ್‌ ಯಾವಾಗಲೂ ಕಾಂಪ್ಲಿಕೇಟೆಡ್ಡು.

‘‘ಇಂಥವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು... (He/she was conspicuous by absence...) ಎಂಬ ಮಾತನ್ನು ನೀವು ಕೇಳಿರಬಹುದು. ಎಂಥಾ ವಿರೋಧಾಭಾಸ ನೋಡಿ. ಅನುಪಸ್ಥಿತಿ, ಅವರು ಅಲ್ಲಿ ಇಲ್ಲವೇ ಇಲ್ಲ. ಅಂಥಾದ್ದರಲ್ಲಿ ‘ಎದ್ದು ಕಾಣುವುದು’ ಎಂದರೆ ಅಲ್ಲೇನೋ ಇದೆಯೇ? ಎಷ್ಟೋ ‘ಇಲ್ಲ’ಗಳಿಗೆ ನಮ್ಮೆಲ್ಲ ಭಾಷೆಗಳಲ್ಲೂ ಶಬ್ದ ಭಂಡಾರವಿದೆ. ತೂತು, ಹೊಂಡ, ನಷ್ಟ, ನುಕ್ಸಾನು, ಗೈರುಹಾಜರ್‌ ಮುಂತಾದ ಪದಗಳೆಲ್ಲ ‘ಇಲ್ಲ’ವನ್ನು ತಿಳಿಸುವುದಕ್ಕೆ ತಾನೆ ಉಪಯೋಗವಾಗೋದು? ಇಲ್ಲೊಂದು ಸ್ವಲ್ಪ ಯೋಚನೆ ಮಾಡಿ. ಈ ‘ಇಲ್ಲ’ ಎನ್ನುವ ಸ್ಥಿತಿ, ‘ಇದೆ’ಗೆ ಸಾಪೇಕ್ಷವಾಗಿಯಷ್ಟೇ ಇರೋದಲ್ವೇ?

ಬೇರೇನೂ ಬೇಡ, ಸುಖಾಸುಮ್ನೆ ಹಲ್ಲುನೋವಿನ ಉಪದ್ರವ ಕೊಡುವ ದಂತಕುಳಿ (cavity)ಯನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ಹಲ್ಲು ‘ಇದೆ’, ಆ ಹಲ್ಲಿನ ಸ್ವಲ್ಪ ಭಾಗ ‘ಇಲ್ಲ’ ಅದೇ ದಂತಕುಳಿ. ಆ ಹಲ್ಲೇ ಇಲ್ಲದಿರುತ್ತಿದ್ದರೆ ಕುಳಿಯ ಅಸ್ತಿತ್ವ ಎಲ್ಲಿರುತ್ತಿತ್ತು? ಅಷ್ಟೇ ಅಲ್ಲ, ಹಲ್ಲೇ ಇಲ್ಲದಿರುತ್ತಿದ್ದರೆ ಅದರ ‘ಇಲ್ಲ’ದಿರುವಿಕೆಯದೇ ಇನ್ನೊಂದು ಕುಳಿ ಆಗುತ್ತಿತ್ತು. ತೀರಾ ಕಾಂಪ್ಲಿಕೇಟೆಡ್‌? ಕನ್ನಡದಲ್ಲಿ ಅರ್ಥವಾಗದಿದ್ದರೆ ಇಂಗ್ಲಿಷಲ್ಲಿ ಓದಿ: A hole is always a hole in something: take away the thing, and the hole goes too; more precisely, it is replaced by a bigger if not better hole, itself relative to its surroundings, and so tributary to something else.

ಹೌದು, ಈ ‘ಇದೆ’, ‘ಇಲ್ಲ’ಗಳು ಭೌತಿಕ ಗಡಿಗಳನ್ನು ದಾಟಿ ಪಾರಮಾರ್ಥಿಕ ಅಧ್ಯಾತ್ಮಿಕದತ್ತ ನೆಗೆಯಬಲ್ಲವು. ಇರುವುದೆಲ್ಲವನ್ನು ಬಿಟ್ಟು ಇಲ್ಲದರೆಡೆಗೆ ತುಡಿತವಿರುವವರಿರುತ್ತಾರೆ, ಅವರೆಲ್ಲ ಗೋಪಾಲಕೃಷ್ಣ ಅಡಿಗರ ಪದ್ಯದಲ್ಲಿ ಬಣ್ಣಿಸಲ್ಪಡುವವರು. ‘ಇರು’ವುದನ್ನು ಬಿಟ್ಟು ‘ಏನೂ ಇಲ್ಲ’ವಾಗುವುದೇ ಮೋಕ್ಷ ಗಳಿಸಿದಂತೆ ಎನ್ನುವವರೂ ಇದ್ದಾರೆ, ಅವರು ಬೌದ್ಧ ಭಿಕ್ಷುಗಳು. ನೀನು ಸನ್ನೆಯಾದರೆ ನಾನು ಸೊನ್ನೆಯಾಗುತ್ತೇನೆ... ಎನ್ನುವವರಿರುತ್ತಾರೆ, ಅವರು ದೇವರಿಗೆ ಕಂಡೀಶನಲ್‌ ಸವಾಲು ಹಾಕುವ ಆಸ್ತಿಕರು; ದೇವರು ದಿಂಡರು ತನಗೊಂದೂ ಗೊತ್ತಿಲ್ಲ, I dont know nothing ಎಂದು ಡಬಲ್‌ ನೆಗೆಟಿವನ್ನು ಸ್ಟೈಲಾಗಿ ಉಲಿದು ಸ್ಟ್ರಾಂಗ್‌ ಪಾಸಿಟಿವ್‌ ಆಗಿಸುವವರಿರುತ್ತಾರೆ, ಅವರು ಅಮೆರಿಕನ್‌ ಇಂಗ್ಲಿಷ್‌ ಯಪ್ಪಿಗಳು!

ನೋಡಿದ್ರಾ, ನಥಿಂಗ್‌ ಬಗ್ಗೆ ಇಷ್ಟೆಲ್ಲ ಮಾತು ‘ಆಡೊ’ದಿದೆಯೆಂದು ಮೊದಲೇ ಗೊತ್ತಿದ್ದರೆ ಇವತ್ತಿನ ಹರಟೆಗೆ ಮಚ್‌ ‘ಆಡೊ’ ಎಬೌಟ್‌ ನಥಿಂಗ್‌ ಎಂದೇ ಶೀರ್ಷಿಕೆ ಕೊಟ್ಟು ಶೇಕ್ಸ್‌ಪಿಯರನನ್ನೊಮ್ಮೆ ಅವನ ಸಮಾಧಿಯಲ್ಲೇ ಶೇಕುವಂತೆ ಮಾಡಬಹುದಿತ್ತು ಅಲ್ಲವೇ? ಇರಲಿ, ಈಗ ನೀವು ಶೇಕಿಸದೆ ಶೋಕಿಸದೆ ನಥಿಂಗ್‌ ಬಗ್ಗೆ ಸಮ್‌ಥಿಂಗ್‌/ಎನಿಥಿಂಗ್‌/ಎವೆರಿಥಿಂಗ್‌ ತಿಳಿಸುವುದಿದ್ದರೂ ಪತ್ರಿಸಿ. ಆಯ್ದ ಹತ್ತು ಬರಹಗಳನ್ನು ಪೋಣಿಸಿ ಈವರ್ಷದ ಕೊನೆಯ ಸಂಚಿಕೆಯನ್ನು ಮುಂದಿನ ಮಂಗಳವಾರದಂದು ಪ್ರಕಟಿಸಲಾಗುವುದು.

ಪತ್ರಿಸಲು ವಿಳಾಸ srivathsajoshi@yahoo.com

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more