• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇವತ್ತು ಬರಿಯಲಿಕ್ಕೆ ವಿಷಯ ಏnilಆ !!

By Staff
|


ಪ್ರಿಯ ಓದುಗರೇ, ವಿಚಿತ್ರಾನ್ನದ 219ನೇ ಸಂಚಿಕೆಯಲ್ಲಿ ಏನಿಲ್ಲ! ಏನೂ ಇಲ್ಲ!!! ಏನೇನೂ ಇಲ್ಲ!!! -ಹೀಗಾಗಿ ಪೀಠಿಕೆ ಸಹಾ ಬೇಕಿಲ್ಲ...!!!!!

  • ಶ್ರೀವತ್ಸ ಜೋಶಿ
ಆಶುಭಾಷಣ (ಪಿಕ್‌-ಏಂಡ್‌-ಸ್ಪೀಕ್‌) ಅಥವಾ ಆಶುಅಭಿನಯ (ಪಿಕ್‌-ಎಂಡ್‌-ಆ್ಯಕ್ಟ್‌)ವನ್ನು ಯಾವತ್ತಾದರೂ ಮಾಡಿದ ಅನುಭವವಿರಬಹುದು ನಿಮಗೆ. ಕಾಲೇಜ್‌ಡೇ ಮುಂತಾದ ಸಾಂಸ್ಕೃತಿಕ ಸ್ಪರ್ಧೆಗಳಲ್ಲೋ ಮೋಜುಮಸ್ತಿಯ ಗೆಟ್‌-ಟುಗೆದರ್‌ಗಳಲ್ಲೋ ಆಶುಭಾಷಣದ ಮಜವನ್ನು ನೋಡಿಯಾದರೂ ಗೊತ್ತಿರಬಹುದು.

ಮಡಚಿಟ್ಟಿರುವ ಚೀಟಿಗಳ ರಾಶಿಯಿಂದ ಒಂದನ್ನೆತ್ತಿಕೊಂಡು ಅದರಲ್ಲಿ ಏನು ಬರೆದಿರುತ್ತದೆಯೋ ಆ ವಿಷಯದ ಬಗ್ಗೆ ಒಂದೆರಡು ನಿಮಿಷ ಭಾಷಣ ಬಿಗಿಯಬೇಕು. ಬಹುತೇಕವಾಗಿ ಚೀಟಿಯಲ್ಲಿರುವ ವಿಷಯವೂ ಹಾಸ್ಯಮಯವೇ ಆಗಿರುವುದರಿಂದ ಅದರ ಮೇಲಣ impromptu speech ಕೂಡ ಸಕ್ಕತ್‌ ಮಜಾ ಆಗಿಯೇ ಇರುತ್ತದೆ.

ಒಮ್ಮೆ ಆಶುಭಾಷಣ ಸ್ಪರ್ಧೆಯಾಂದರಲ್ಲಿ ಭಾಗವಹಿಸಿದ್ದ ಒಬ್ಬ ಸ್ಪರ್ಧಾಳುವಿಗೆ ಒಂದು ವಿಚಿತ್ರ ಸನ್ನಿವೇಶ ಎದುರಾಯಿತಂತೆ. ತನ್ನ ಸರದಿ ಬಂದಾಗ ವೇದಿಕೆಯ ಮೇಲೆ ಹೋಗಿ ಬುಟ್ಟಿಯಿಂದ ಚೀಟಿಯನ್ನು ಎತ್ತಿಕೊಂಡು ತೆರೆದುನೋಡಿದರೆ ಅದರಲ್ಲೇನಿದೆ? ಖಾಲಿ ಚೀಟಿ! ಒಂದುಕ್ಷಣ ತಬ್ಬಿಬ್ಬಾದ ಆಕೆ ಸ್ಪರ್ಧೆಯ ತೀರ್ಪುಗಾರರಿಗೆ ತನಗೆ ಬಂದ ವಿಷಯದ ಬಗ್ಗೆ ತಿಳಿಸಿದಳಂತೆ, ಅರ್ಥಾತ್‌ ತನ್ನ ಚೀಟಿಯಲ್ಲಿ ವಿಷಯವೇ ಇಲ್ಲದಿರುವುದನ್ನು ತಿಳಿಸಿದಳಂತೆ. ತೀರ್ಪುಗಾರರಿಗೂ ಕಸಿವಿಸಿ. ಪರವಾಇಲ್ಲಮ್ಮ ಇನ್ನೊಂದು ಚೀಟಿಯನ್ನು ಎತ್ತಿಕೋ ಎನ್ನಬೇಕೇ ಅಥವಾ ನಿನಗೆ ತೋಚಿದ ಯಾವುದೇ ವಿಷಯದ ಬಗ್ಗೆಯಾದರೂ ನಿಗದಿತ ಅವಧಿಯಲ್ಲಿ ಭಾಷಣ ಮಾಡು ಎನ್ನಬೇಕೇ ಎಂದು ಅರಿಯದ ಉಭಯಸಂಕಟ.

ಆದರೆ ಆ ಸ್ಪರ್ಧಾಳು ಅತಿಜಾಣೆ. ಅದಕ್ಕಿಂತಲೂ ಹೆಚ್ಚಾಗಿ ಸ್ವಾಭಿಮಾನಿ. ಮಿಕ್ಕ ಸ್ಪರ್ಧಿಗಳಿಗಿಲ್ಲದ ಹೆಚ್ಚುವರಿ ಆಯ್ಕೆಯ ಅವಕಾಶ ತನಗೆ ಬೇಡ ಎಂದು ನಿರಾಕರಿಸಿ, ‘‘ಪರವಾಇಲ್ಲ ಬಿಡಿ, ಈ ‘ವಿಷಯ ಏನೂ ಇಲ್ಲ’ದ ಬಗ್ಗೆಯೇ ಮಾತಾಡ್ತೇನೆ’’ ಎಂದು ಅದ್ಭುತವಾದ ಭಾಷಣ ಬಿಗಿದೇಬಿಟ್ಟಳು. ಇಲ್ಲದ ವಿಷಯವೇ ಅವಳ ಪ್ರತಿಭೆಯ ಮೂಸೆಯಲ್ಲಿ ಅದ್ಭುತ ವಿಷಯವಾಗಿ ಹೊಳೆಯಿತು. ತೀರ್ಪುಗಾರರೂ ಆಯೋಜಕರೂ ಸಭಿಕರೂ ಸಹಸ್ಪರ್ಧಿಗಳೂ ತಲೆದೂಗುವಂತೆ ವಿಷಯರಹಿತ ವಿಷಯದ ಬಗ್ಗೆ ವಾಗ್ಝರಿ ಹರಿಯಿತು. ಬಹುಶಃ ಪ್ರಥಮಬಹುಮಾನವನ್ನೂ ಆ ಸ್ಪರ್ಧಿ ತನ್ನದಾಗಿಸಿಕೊಂಡಳೋ ಏನೊ!

ಇವತ್ತು ವಿಚಿತ್ರಾನ್ನದಲ್ಲಿ ಇಂಥದೊಂದು ಪರಿಸ್ಥಿತಿ ಬಂದಿದೆ. ಅದೇನಾಯ್ತೆಂದರೆ, ಇನ್ನೇನು ಈ ಕ್ಯಾಲೆಂಡರ್‌ ವರ್ಷ ಮುಗಿದೇಬಿಟ್ಟಿತಲ್ಲ, (ಅಂದಹಾಗೆ 2006 ಎಷ್ಟು ಫ‚ಾಸ್ಟ್‌ ಆಗಿ ಮುಗಿದುಹೋಯಿತು ಎನಿಸ್ತಿಲ್ಲ ನಿಮಗೂ?) ಈವರ್ಷದ ಆರಂಭದಲ್ಲಿ ಕಣ್ತಪ್ಪಿನಿಂದಾಗಿ ಐವತ್ತೆರಡರ ಬದಲು ಐವತ್ತೇ ವಿಷಯಗಳನ್ನು ತೆಗೆದಿರಿಸಿದ್ದರಿಂದ ವಿಷಯಗಳ annual stock ಮುಗಿದಿದೆ; ಈವಾರ ಮತ್ತು ಮುಂದಿನವಾರಕ್ಕೆ ವಿಚಿತ್ರಾನ್ನವಾಗಿಸಲು ವಿಷಯ ಇಲ್ಲ! ‘ನಿರ್ಧನೋಸ್ಮಿ’ ಎಂಬ ಸಂಸ್ಕೃತವಾಕ್ಯವನ್ನು ನಮ್ಮ ಹೈಸ್ಕೂಲ್‌ ಸಂಸ್ಕೃತಪಂಡಿತರು ‘‘ಇಲ್ಲದ ಹಣ ಉಳ್ಳವನಾಗಿದ್ದೇನೆ’’ ಎಂದು ಕನ್ನಡೀಕರಿಸುತ್ತಿದ್ದರು. ಆ ಪರಿಯಲ್ಲಿ ಇವತ್ತು ವಿಚಿತ್ರಾನ್ನಕ್ಕೆ ‘‘ಇಲ್ಲದ ವಿಷಯ ಉಳ್ಳವನಾಗಿದ್ದೇನೆ’’!

ಅಂದಮಾತ್ರಕ್ಕೆ ಈ ಎರಡು ವಾರಗಳಲ್ಲಿ ವಿಚಿತ್ರಾನ್ನ ಅಂಕಣವನ್ನೇ ನಾಪತ್ತೆಯಾಗಿಸುವ ಘೋರ ಪ್ರಮಾದ ಸಂಭವಿಸುತ್ತದೆಯೆಂದೇನೂ ತಿಳಿಯಬೇಡಿ. ವಿಷಯವಿಲ್ಲದಿದ್ದರೇನಂತೆ, ಆ ಆಶುಭಾಷಣ ಸ್ಪರ್ಧಿಯಂತೆ ನಾವೂ ‘ಇಲ್ಲದ ವಿಷಯ’ವನ್ನೇ ಬೆಲ್ಲದಂಥ ಸವಿಯ ವಿಷಯವನ್ನಾಗಿಸಿ ವಿಚಿತ್ರಾನ್ನ ಕುಕ್ಕಿಸಬಹುದಲ್ಲ? ಖಂಡಿತವಾಗಿ, ಆದರೆ ಅದಕ್ಕೆ ನಿಮ್ಮ ಸಹಕಾರವೂ ಬೇಕು. ಹೇಗೆಂದರೆ ಈವಾರ ನಾನು ‘‘ಏnilಆ’’ ಬಗ್ಗೆ ಬರೆಯುವುದು. ಮುಂದಿನವಾರಕ್ಕೆ ನೀವೆಲ್ಲರೂ ‘‘ಏನಿಲ್ಲ’’ ಕುರಿತು ಕುಟ್ಟಿದ (= ಟೈಪಿಸಿದ) ಬರಹಗಳನ್ನು ಅಳವಡಿಸಿ ವಿಚಿತ್ರಾನ್ನ ಬೇಯಿಸುವುದು. ತನ್ಮೂಲಕ ನಾನೂ ನೀವೂ ನಥಿಂಗ್‌ನಿಂದ ಸಮ್‌ಥಿಂಗನ್ನು ಸೃಷ್ಟಿಸಿದ ಪವಾಡಪುರುಷ(ಬೈದವೇ ‘ಪವಾಡಪುರುಷ’ ಇದಕ್ಕೆ ಫೆಮಿನಿಯನ್‌ ಜೆಂಡರ್‌ ಪದ?)ರಾಗುವುದು!

ಹೇಗಿದೆ ಐಡಿಯಾ? ನೀವು ರೆಡಿಯಾ?

ಈ ‘ಏನೂ ಇಲ್ಲ’ ಅಥವಾ ಅದರ ವಿವಿಧರೂಪಗಳಾದ (ಏನೂ ಇಲ್ಲದಕ್ಕೆ ರೂಪದ ಮಾತೇನು ಬಂತು?) nothing, none, nil, null, no, nah, nayಗಳು ತುಂಬಾ ಸರಳವಾದ ಸಂಗತಿಗಳು ಎಂದು ನೀವಂದುಕೊಂಡಿದ್ದರೆ ತಪ್ಪು. ಆಳವಾಗಿ ಯೋಚಿಸಿದರೆ ಠಏನೋ ಇದೆ’ಗಿಂತ ‘ಏನೂ ಇಲ್ಲ’ವೇ ಬಹಳ ಸಂಕೀರ್ಣವಾದುದು. ಹೇಗೆಂದಿರಾ? ಒಂದನೇ ಕ್ಲಾಸಲ್ಲಿ ಲೆಕ್ಕ ಕಲಿಸಿದ ಮೇಷ್ಟ್ರು ಎಂಟರಿಂದ ಎಂಟು ಕಳೆದರೆ ಏನು ಉಳಿಯಿತು ಎಂದಿದ್ದಕ್ಕೆ ನಮ್ಮ ಉತ್ತರವೇನಿತ್ತು? ‘‘ಏನೂ ಇಲ್ಲ’’ ತಾನೆ? ಏಕೆಂದರೆ ಸೊನ್ನೆ ಎಂದರೆ ‘‘ಏನೂ ಇಲ್ಲ’’ ಎಂದರ್ಥ. ಅದನ್ನು ಅರಗಿಸಿಕೊಂಡು ಮುಂದಿನ ತರಗತಿಗಳಿಗೆ ಬಂದಾಗ ಸೊನ್ನೆಗಿಂತಲೂ ಕಡಿಮೆಯ ಸಂಖ್ಯೆಗಳಿವೆಯೆಂದರು! ಅಂದರೆ, ‘‘ಏನೂ ಇಲ್ಲ’’ದ ಆಚೆಯೂ ಏನೋ ಇದೆ!

ಓ ದೇವರೇ ಕಾಪಾಡು ಅಂತೀರಾ? ಆತನೋ ‘‘ಏನೂ ಇಲ್ಲ’’ದ ಸ್ಥಿತಿಯಿಂದ ‘‘ಎಲ್ಲವೂ ಇದೆ’’ಯನ್ನು ನಿರ್ಮಿಸಿದ ಭೂಪ! Its believed that in the beginning, there was nothing and GOD created everything out of nothing! ಆ ದೇವಪರಮಾತ್ಮನ ಪರಮಭಕ್ತರಾದ ನಾವೂ ‘ಎಲ್ಲವೂ ಇದೆ’ಯನ್ನೂ ‘ಏನೂ ಇಲ್ಲ’ವನ್ನೂ ಬೇಕಾದಂತೆ ಬದಲಾಯಿಸಿಕೊಳ್ಳುವವರು; ದೇವರ ಸೃಷ್ಟಿಯ ಬ್ರಹ್ಮಾಂಡದಲ್ಲಿ ಏನಿದೆ ಏನಿಲ್ಲ ಎಂದು ಬಣ್ಣಿಸುತ್ತ ಎಲ್ಲವೂ ಇದೆಯೆನ್ನುವವರು; ಮರುಕ್ಷಣದಲ್ಲಿ ಅತೃಪ್ತರಾಗಿ ಏನೂ ಇಲ್ಲ ಎನ್ನುವವರು!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more