• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮತ್ತು ನೊಸ್‌ಟಾಲ್ಜಿಯಾ...

By Staff
|

ಮತ್ತು ನೊಸ್‌ಟಾಲ್ಜಿಯಾ...

ಹೂವಿನ ಪರಿಮಳ ನಮ್ಮ ಮನಸ್ಥಿತಿಯನ್ನು ಉತ್ತೇಜಿಸುತ್ತದಾ? ಆಹ್ಲಾದದ, ಆನಂದದ ಹಿತಾನುಭವಕ್ಕೆ ಪ್ರಚೋದಕವಾಗುತ್ತದಾ? ಪರಿಮಳದ ಸಾನಿಧ್ಯದಲ್ಲಿ ನಮ್ಮ ಮನಸ್ಸು ಹೆಚ್ಚು ಉಲ್ಲಾಸಿತವಾಗಿರುತ್ತದಾ? ಸಾಮಾನ್ಯ ಸಂಗತಿಗಳೂ ಹೆಚ್ಚುಹೆಚ್ಚು ಆತ್ಮೀಯ, ಆಪ್ಯಾಯಮಾನ ಅನ್ನಿಸ್ತವಾ? ಈ ಬಗ್ಗೆ ವಿಜ್ಞಾನ ಏನ್‌ ಹೇಳುತ್ತೆ ಅನ್ನೋದನ್ನು ವಿಚಿತ್ರಾನ್ನ -197ನೇ ಸಂಚಿಕೆ ಹೇಳುತ್ತಿದೆ. ಇಂತಹ ಸಹಜ ಕುತೂಹಲಗಳು ನಿಮ್ಮಲ್ಲೂ ಮೂಡಲಿ.

Srivathsa Joshi *ಶ್ರೀವತ್ಸ ಜೋಶಿ
ಎರಡು ವಾರಗಳ ಹಿಂದೆ ಇಲ್ಲಿ ವಾಷಿಂಗ್‌ಟನ್‌ನಲ್ಲಿ ನಮ್ಮ ‘ಕಾವೇರಿ’ ಕನ್ನಡ ಸಂಘವು ಕನ್ನಡ ಚಲನಚಿತ್ರ ‘ರಾಮ ಭಾಮ ಶಾಮ’ದ ಪ್ರದರ್ಶನವನ್ನು ಏರ್ಪಡಿಸಿತ್ತು. ನಕ್ಕುನಗಿಸುವ ಭಲೇ ಕಾಮೆಡಿ ಚಿತ್ರವನ್ನು ವೀಕ್ಷಿಸಲು ಸಾಕಷ್ಟು ಕನ್ನಡಿಗರು ಸೇರಿದ್ದರು - ಸುಮಾರು 250 ಸಾಮರ್ಥ್ಯದ ಚಿತ್ರಮಂದಿರ ಹೌಸ್‌ಫುಲ್‌ ಆಗುವಷ್ಟು! ಚಿತ್ರದ ನಿರ್ದೇಶಕ, ನಟ ರಮೇಶ್‌ ಕಳೆದವರ್ಷವಷ್ಟೇ ಇಲ್ಲಿ ಲೈವ್‌ ಪರ್ಫಾರ್ಮೆನ್ಸ್‌ನಲ್ಲಿ ಜನರ ಮನಸೂರೆಗೊಂಡಿದ್ದು, ಕೈಕುಲುಕಿ ಎಲ್ಲರೊಂದಿಗೆ ಆತ್ಮೀಯವಾಗಿ ಪರಿಚಯಮಾಡಿಕೊಂಡದ್ದು ಬಹುಶಃ ಅಷ್ಟು ಮಂದಿ ಈ ಸಿನೆಮಾ ನೋಡಲು ಬರುವುದಕ್ಕೆ ಒಂದು ಕಾರಣವಿರಬಹುದು; ಅಥವಾ, ‘ಆಕಿಗ್‌ ಬ್ಯಾಸ್ರ ಆತೇನು...? ಮುಂದ...?’ ಎಂದು ಧಾರವಾಡಕನ್ನಡವನ್ನೇ ಚಿತ್ರದುದ್ದಕ್ಕೂ ಮಾತಾಡುವ ವಿಶೇಷ ಪಾತ್ರದಲ್ಲಿ ಏಕಮೇವಾದ್ವಿತೀಯ ಕಮಲಹಾಸನ್‌ ಇದ್ದಾರೆಂಬುದೂ ಕಾರಣವಿರಬಹುದು. ಅಂತೂ ಹೌಸ್‌ಫುಲ್‌ ಪ್ರದರ್ಶನದಲ್ಲಿ ಆ ಸಿನೆಮಾವನ್ನು ಎಲ್ಲರೂ ಮನಸಾರೆ ಆನಂದಿಸಿದರು. ಬಹಳ ದಿನಗಳ ನಂತರ ಒಂದು ಒಳ್ಳೆಯ ಹಾಸ್ಯಮಯ ಚಿತ್ರವನ್ನು ನೋಡಿದೆವು ಎಂದು ಸಂತೃಪ್ತರಾಗಿ ಹಿಂತೆರಳಿದರು.

ಅವತ್ತು ಸಿನೆಮಾವೀಕ್ಷಕರು ಅಷ್ಟೊಂದು ಹಿರಿಹಿರಿಹಿಗ್ಗಲಿಕ್ಕೆ ಚಿತ್ರದಲ್ಲಿ ತುಂಬಿತುಳುಕುತ್ತಿದ್ದ ಮನರಂಜನೆಯಷ್ಟೇ ಅಲ್ಲದೆ ಬೇರೆಯೇ ಒಂದು ಸಂಗತಿಯೂ ಪರೋಕ್ಷವಾಗಿ ಕಾರಣವಾಯ್ತೆಂಬುದನ್ನು ನಾನೀಗ ಪ್ರತಿಪಾದಿಸಿದರೆ ಮೊದಲು ನೀವು ನಂಬಲಿಕ್ಕಿಲ್ಲ, ಅದಕ್ಕೂ ಇದಕ್ಕೂ ಏನ್ಸಂಬಂಧ ಎಂದು ಡಿಸ್ಕಾರ್ಡ್‌ ಮಾಡಿಬಿಡಬಹುದು, ಈ ಲಾಜಿಕ್‌ನಲ್ಲಿ ಏನೇನೂ ಸೆನ್ಸ್‌ ಇಲ್ಲ ಎನ್ನಬಹುದು. ಪರವಾ ಇಲ್ಲ, ಆದರೆ ಈ ಲೇಖನವನ್ನು ಓದಿ ಮುಗಿಸಿದಾಗ ನಿಮಗೆ ಆ ಬಗ್ಗೆ ಮರುಚಿಂತನೆ ಅರ್ಥಪೂರ್ಣವೆನಿಸಬಹುದು, ವಾದದಲ್ಲಿ ತಿರುಳಿರೋದು ನಿಜ ಅನಿಸಲೂಬಹುದು!

ಏನಿಲ್ಲ, ಅವತ್ತು ಪಿಕ್ಚರ್‌ ನೋಡ್ಲಿಕ್ಕೆ ಬಂದಿದ್ದ ಸ್ನೇಹಜೀವಿ ಕನ್ನಡತಿಯಾಬ್ಬರು, ಅವರ ಮನೆಯ ಕೈತೋಟದಲ್ಲೇ ಅರಳಿದ ಮಲ್ಲಿಗೆಹೂಗಳ ಇಷ್ಟುದ್ದ ಮಾಲೆ ತಂದಿದ್ದರು! ಪಿಕ್ಚರ್‌ ಶುರುವಾಗುವ ಮೊದಲು ‘ನಮಸ್ಕಾರ... ಹೇಗಿದ್ದೀರಾ?...’ಗಳ ಪರಸ್ಪರ ವಿನಿಮಯದ ವೇಳೆ ತನ್ನ ಓರಗೆಯವರಿಗೆಲ್ಲ, ಅಪರೂಪಕ್ಕೆ ಭೇಟಿಯಾದ ಸ್ನೇಹಿತೆಯರಿಗೆಲ್ಲ, ಮತ್ತು ‘ಓಹ್‌... ಮಲ್ಲಿಗೆನಾ? ನಿಮ್ಮನೆಲೇ ಆಗಿದ್ದಾ?’ ಎಂದು ಮೂಗರಳಿಸಿದವರಿಗೆಲ್ಲ ಒಂದೊಂದು ತುಂಡು ಮಲ್ಲಿಗೆಮಾಲೆ ವಿತರಣೆ ಸಹ ಮಾಡಿದ್ದರು! ತಗೊಳ್ಳಿ, ಥಿಯೇಟರ್‌ ತುಂಬ ಮಲ್ಲಿಗೆಯ ಘಮಲೋ ಘಮಲು! ಮಲ್ಲಿಗೆ ಪರಿಮಳ, ಅದೂ ಮೈಸೂರುಮಲ್ಲಿಗೆ ಎಂದ ಮೇಲೆ ಕೇಳಬೇಕೆ? ಮದುವೆಮನೆ ಸಂಭ್ರಮದಂತೆ, ಹಬ್ಬ-ಪೂಜೆಗಳ ಸಡಗರದಂತೆ ಮನಸ್ಸಿಗೆ ಖುಶಿಯೋ ಖುಶಿ - ಹೂ ಮುಡಿದುಕೊಂಡವರಿಗಷ್ಟೇ ಅಲ್ಲ, ಇತರರಿಗೂ.

ಮತ್ತೆ, ಮಲ್ಲಿಗೆ ಘಮಲು ಇದ್ದ ಮಾತ್ರಕ್ಕೆ ಸಿನೆಮಾ ಯಾಕೆ ಇಷ್ಟ ಆಗಬೇಕು? ಹೂವಿನ ಪರಿಮಳ ನಮ್ಮ ಮನಸ್ಥಿತಿಯನ್ನು ಉತ್ತೇಜಿಸುತ್ತದಾ? ಆಹ್ಲಾದದ, ಆನಂದದ ಹಿತಾನುಭವಕ್ಕೆ ಪ್ರಚೋದಕವಾಗುತ್ತದಾ? ಪರಿಮಳದ ಸಾನಿಧ್ಯದಲ್ಲಿ ನಮ್ಮ ಮನಸ್ಸು ಹೆಚ್ಚು ಇತ್ಯಾತ್ಮಕ (positive) ಆಗಿರುತ್ತದಾ? ಸಾಮಾನ್ಯ ಸಂಗತಿಗಳೂ ಹೆಚ್ಚುಹೆಚ್ಚು ಆತ್ಮೀಯ, ಆಪ್ಯಾಯಮಾನ ಅನ್ನಿಸ್ತವಾ?

ಹೌದು! ಎನ್ನುತ್ತದೆ ವಿಜ್ಞಾನ.

ಯಾವುದೇ ವಾಸನೆಯು (ಅದು ಪರಿಮಳ ಎಂದೆನಿಸಿಕೊಳ್ಳುವ ಒಳ್ಳೆಯ ವಾಸನೆಯೇ ಇರಲಿ ಅಥವಾ ದುರ್ನಾತ ಎಂದು ಕರೆಯಲ್ಪಡುವ ಕೆಟ್ಟ ವಾಸನೆಯೇ ಇರಲಿ) ಮನುಷ್ಯನ ಮನಸ್ಥಿತಿ, ನಡವಳಿಕೆ ಮತ್ತು ಶಕ್ತಿಸಾಮರ್ಥ್ಯಗಳ ಮೇಲೆ ವಿಶಿಷ್ಟರೀತಿಯಲ್ಲಿ ಪರಿಣಾಮ ಬೀರುತ್ತದೆ. ವಿಶಿಷ್ಟವಾಗಿ ಅಂದಿದ್ದೇಕೆಂದರೆ, ಒಂದು ಮಾದಕದ್ರವ್ಯ ಅಥವಾ ಔಷ-ಧಿಯನ್ನು ನಾವು ಸೇವಿಸಿದಾಗ ಅದು ನಮ್ಮ ಶರೀರದ ಮೇಲೆ ಮತ್ತು ಮನಸ್ಸಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದಲ್ಲ? ಆದರೆ ವಾಸನೆ ಹಾಗಲ್ಲ, ಅದು ನಮ್ಮ ಮೇಲೆ ಕೆಲಸ ಮಾಡುವುದಕ್ಕಿಂತಲೂ ನಾವೇ ಪೂರ್ವಾನುಭವಗಳನ್ನಾಧರಿಸಿ ಅದನ್ನು ಗ್ರಹಿಸುವುದು. ಬಿಡಿಸಿಹೇಳಬೇಕೆಂದರೆ, ವಾಸನೆ ತಾನಾಗಿಯೇ ನಮ್ಮ ಮೇಲೆ ಏನೂ ಪರಿಣಾಮ ಬೀರಲಾರದು; ಆ ವಾಸನೆಯಾಂದಿಗೆ ಯಾವುದಾದರೂ ಸಂಗತಿಯನ್ನು, ಘಟನೆಯನ್ನು ನಾವು ಮೊದಲೇ ತಳುಕುಹಾಕಿಟ್ಟಿದ್ದಿರುತ್ತದೆ. ಅದನ್ನು ಜ್ಞಾಪಿಸಿಕೊಂಡು ನಾವು ಆ ವಾಸನೆಯನ್ನು ಗ್ರಹಿಸಿ, ಬೇಕಾದ ರೀತಿಯಲ್ಲಿ ಪ್ರತಿಕ್ರಿಯಿಸುತ್ತೇವೆ.

ಉದಾಹರಣೆ ಬೇರೇನೂ ಬೇಡ. ಮಲ್ಲಿಗೆಯೇ ಇದೆ. ಬರೀ ಮಲ್ಲಿಗೆಯ ಪರಿಮಳವಷ್ಟೇ ನಮ್ಮ ಮೇಲೆ ಯಾವ ಪರಿಣಾಮವನ್ನೂ ಮಾಡದು. ಆ ಪರಿಮಳವನ್ನು ನಾವು ಮದುವೆಮನೆ ಸಂಭ್ರಮಕ್ಕೆ, ಪೂಜೆಪುನಸ್ಕಾರಗಳ ವಾತಾವರಣಕ್ಕೆ ನಮಗೆ ಗೊತ್ತಿಲ್ಲದಂತೆಯೇ ಎಸೋಸಿಯೇಟ್‌ ಮಾಡಿಟ್ಟಿರುತ್ತೇವೆ. ಮಲ್ಲಿಗೆ ಪರಿಮಳ ಮೂಗಿಗೆ ಬಡಿದಾಕ್ಷಣ ಮನಸ್ಸಲ್ಲೇ ನಾವು ಮದುವೆಮನೆಯಲ್ಲೋ, ದೇವಸ್ಥಾನದಲ್ಲೋ ಇದ್ದಂತೆ ಒಂದು ಕ್ಷಣವಾದರೂ ಕಲ್ಪಿಸಿಕೊಳ್ಳುತ್ತೇವೆ. ಮನಸ್ಸಿಗೆ ಒಂಥರಾ ಹಿತಾನುಭವವಾಗುತ್ತದೆ.

ಇದಕ್ಕೆ ಕಾರಣವೇನೆಂದರೆ, ಮಿಕ್ಕ ನಾಲ್ಕು (ದೃಶ್ಯ, ಶ್ರವಣ, ಸ್ಪರ್ಶ ಮತ್ತು ರುಚಿ) ಜ್ಞಾನಗಳಿಗಿಂತ ವಿಭಿನ್ನವಾಗಿ ವಾಸನಾ ಜ್ಞಾನವನ್ನು ನಾವೆಲ್ಲ Associative Learning ಮೂಲಕವೇ ಗ್ರಹಿಸುವುದು. ಡೆಟ್ಟಾಲ್‌ ಅಥವಾ ಫಿನಾಯಲ್‌ ವಾಸನೆ ಎಂದರೆ ಆಸ್ಪತ್ರೆ ವಾತಾವರಣ, ಆತಂಕದ ಪರಿಸ್ಥಿತಿ. ಅಮೋನಿಯಾ ವಾಸನೆ ಎಂದರೆ ಕಾಲೇಜಿನ ಕೆಮೆಸ್ಟ್ರಿ ಲ್ಯಾಬೊರೆಟರಿ. ಮೀಥೈಲ್‌ ಸಾಲಿಸಿಲೇಟ್‌ ಪರಿಮಳ ಬಂದರೆ ವಿಕ್ಸ್‌/ಅಯಾಡೆಕ್ಸ್‌/ಅಮೃತಾಂಜನ್‌ ಡಬ್ಬಿ. ನ್ಯಾಪ್ತಲಿನ್‌ ಪರಿಮಳ ಬಂದರೆ ಚಿಕ್ಕಂದಿನಲ್ಲಿ ಅಮ್ಮ ಟ್ರಂಕ್‌ನಲ್ಲಿಟ್ಟ ಹೊಸಬಟ್ಟೆಗಳನ್ನು ತೆಗೆದು ಉಡಲಿಕ್ಕೆ ಕೊಡುತ್ತಿದ್ದುದರ ನೆನಪು. ಕಾಫಿ‚ಬೀಜಗಳನ್ನು ರೋಸ್ಟ್‌ ಮಾಡಿದ ಪರಿಮಳ ಬಂದರೆ ಚಿಕ್ಕಮಗಳೂರಿನ ಪಾಂಡುರಂಗಕಾಫಿ‚ಹುಡಿ ಅಂಗಡಿಯೆದುರಿನ ರಸ್ತೆಯಲ್ಲಿ ನಡೆದಾಡಿದ ಅನುಭವ. ಎಣ್ಣೆಯಲ್ಲಿ ತಿಂಡಿ ಕರಿವಾಗಿನ ಘಮ ಬಂತೆಂದರೆ ಯಾವುದೋ ಫೇವರಿಟ್‌ ರೆಸ್ಟೊರೆಂಟಿನ ಕಲ್ಪನೆ... ಹೀಗೆ ಪ್ರತಿಯಾಂದು ವಾಸನೆಗೂ ನಾವೆಲ್ಲ ಒಂದು ನಿರ್ದಿಷ್ಟ ಸಂಗತಿಯನ್ನು ಎಸೋಸಿಯೇಟ್‌ ಮಾಡಿಕೊಂಡಿರುತ್ತೇವೆ.

Associative Learning ಅಥವಾ ಸಂಯೋಜನಾ ಕಲಿಕೆ ಎಂದರೇನೆಂಬುದು ಸರಿಯಾಗಿ ಅರ್ಥೈಸಿಕೊಳ್ಳಲು, ರಷ್ಯನ್‌ ವಿಜ್ಞಾನಿ ಇವಾನ್‌ ಪಾವ್ಲೊ ತನ್ನ ನಾಯಿಯ ಮೇಲೆ ಮಾಡಿದ ಪ್ರಯೋಗವನ್ನು ಉಲ್ಲೇಖಿಸಬಹುದು. ನಾಯಿಗೆ ಆಹಾರ ಹಾಕುವಾಗೆಲ್ಲ ಆತ ಘಂಟೆ ಬಡಿಯುತ್ತಿದ್ದ. ಕೊನೆಕೊನೆಗೆ ಯಾವ ಹೊತ್ತಿಗಾದರೂ ಸರಿ, ಘಂಟಾನಾದ ಆದರೆ ನಾಯಿಯ ಬಾಯಲ್ಲಿ ಜೊಲ್ಲು ಸುರಿಯಲಾರಂಭವಾಗುತ್ತಿತ್ತು. ನಾಯಿ ಘಂಟಾನಾದವನ್ನು ಆಹಾರಸೇವನೆಯಾಂದಿಗೆ ಎಸೋಸಿಯೇಟ್‌ ಮಾಡಿಕೊಂಡಿತ್ತು! ವಾಸನೆ/ಪರಿಮಳಗಳ ವಿಷಯದಲ್ಲಿ ನಾವು ಮಾಡಿಕೊಂಡಿರುವ ಸಂಯೋಜನೆಗಳೂ ಪಾವ್ಲೊನ ನಾಯಿ ಮಾಡಿದಂತೆಯೇ. ಅದಕ್ಕೆ ಕಾರಣವೆಂದರೆ ಆಗಲೇ ಹೇಳಿದಂತೆ ವಾಸನಾಜ್ಞಾನವನ್ನು ಸಂಯೋಜನೆಯ ಹೊರತಾಗಿ ಗ್ರಹಿಸಲಿಕ್ಕೇ ಸಾಧ್ಯವಿಲ್ಲ.

ಆಯ್ತಪ್ಪಾ, ಸಂಯೋಜನೆಗಳಿಲ್ಲದೆ ವಾಸನೆಗ್ರಹಿಸೋದು ಅಸಾಧ್ಯವೆಂಬ ಮಾತಿರಲಿ. ಆದರೆ ವಾಸನೆಯು ನಮ್ಮ ಮನಸ್ಸನ್ನು ತಟ್ಟುವ, ಭಾವನೆಗಳಿಗೆ ಪಲಕುಹಾಕುವುದರ ಹಿಂದಿನ ರಹಸ್ಯವೇನು? ಇದರ ವಿವರಣೆಯಲ್ಲೂ, ಮಿಕ್ಕ ನಾಲ್ಕು (ದೃಶ್ಯ, ಶ್ರವಣ, ಸ್ಪರ್ಶ ಮತ್ತು ರುಚಿ) ಜ್ಞಾನಗಳಿಗಿಂತ ಹೆಚ್ಚಾಗಿ ವಾಸನೆಯನ್ನು ಗ್ರಹಿಸುವ ಗ್ರಂಥಿಗಳಿಗೂ ಮಿದುಳಿನಲ್ಲಿ ಸಂಯೋಜನಾ ಕಲಿಕೆ, ಭಾವನೆಗಳ ನಿಯಂತ್ರಣಕೇಂದ್ರ ಇತ್ಯಾದಿ ಡಿಪಾರ್ಟ್‌ಮೆಂಟ್‌ಗಳಿಗೂ ಡೈರೆಕ್ಟ್‌ ಲಿಂಕ್‌ ಇದೆ ಎಂಬುದನ್ನು ವಿಜ್ಞಾನಿಗಳು ಸಾಬೀತುಪಡಿಸಿದ್ದಾರೆ.

ಒಂದು ದಂತಚಿಕಿತ್ಸಾಲಯದಲ್ಲಿ ಒಮ್ಮೆ ಒಂದು ಪ್ರಯೋಗವನ್ನು ಕೈಗೊಳ್ಳಲಾಯಿತು. ಹಲ್ಲು ಕೀಳಿಸಲು ಬರುವ ರೋಗಿಗಳನ್ನು ಎರಡು ಬೇರೆಬೇರೆ ವೈಟಿಂಗ್‌ರೂಮ್‌ಗಳಿಗೆ ವಿಂಗಡಿಸಲಾಯಿತು. ಒಂದು ವೈಟಿಂಗ್‌ರೂಮ್‌ನಲ್ಲಿ ಕಿತ್ತಳೆ ಪರಿಮಳದ ಆಹ್ಲಾದಕರ ರೂಮ್‌ ಫ್ರೆಶನರ್‌ ಸಿಂಪಡಿಸಲಾಗಿತ್ತು. ಇನ್ನೊಂದು ರೂಮ್‌ನಲ್ಲಿ ಅಂಥ ಯಾವ ಸಿಂಪರಣೆಯೂ ಇಲ್ಲದೆ ಅದು ಮಾಮೂಲಿ ಕೊಠಡಿಯಾಗಿದ್ದಿತು. ಹಲ್ಲುಕೀಳುವ ಬಗೆಗಿನ ಉದ್ವಿಗ್ನತೆ, ಕೀಳುವಾಗ ಆದ ನೋವು ಇತ್ಯಾದಿಗಳ ಪ್ರಮಾಣವನ್ನು ತಿಳಿಸುವಂತೆ ಆಮೇಲೆ ಆ ರೋಗಿಗಳಿಗೆ ಪ್ರಶ್ನಾವಳಿಯನ್ನು ಹಂಚಲಾಯಿತು. ಏರ್‌ಫ್ರೆಶನರ್‌ ಸಿಂಪಡಿಸಿದ್ದ ಕೊಠಡಿಯಲ್ಲಿದ್ದ ರೋಗಿಗಳು ಸೂಚಿಸಿದ ಉದ್ವಿಗ್ನತೆ/ನೋವುಗಳ ಪ್ರಮಾಣವು ಉಳಿದ ರೋಗಿಗಳು ಸೂಚಿಸಿದ್ದಕ್ಕಿಂತ ಗಣನೀಯವಾಗಿ ಕಡಿಮೆ ಇತ್ತು! ಕಿತ್ತಳೆಪರಿಮಳ ಅವರ ಮನಸ್ಥಿತಿಯ ಮೇಲೆ ಅಷ್ಟೊಂದು ಪರಿಣಾಮ ಬೀರಿತ್ತು!

ಆಫಿ‚ೕಸುಗಳಲ್ಲಿ, ಶೈಕ್ಷಣಿಕ ಸಂಸ್ಥೆಗಳಲ್ಲಿ, ವಾಣಿಜ್ಯಮಳಿಗೆಗಳಲ್ಲಿ, ಸಿನೆಮಾ ಥಿಯೇಟರ್‌ಗಳಲ್ಲಿ, ಆಸ್ಪತ್ರೆಗಳಲ್ಲಿ ಏರ್‌ಫ್ರೆಶನರ್‌ ಸಿಂಪಡಿಸುವುದರ (ಅಥವಾ ಸಿಂಪಡಿಸಬೇಕಾದ) ಉದ್ದೇಶ ಅದೇ. ಅಲ್ಲಿರುವ ಅಥವಾ ಅಲ್ಲಿಗೆ ಬರುವ ಜನರಿಗೆ ‘ಹಿತಾನುಭವ’ ಒದಗಿಸುವುದು. ಆ ಹಿತಾನುಭವದಿಂದಾಗಿ positive approach ತನ್ನಿಂತಾನೇ ಮೂಡುತ್ತದೆ. ಕಾರ್ಯಾಲಯಗಳಲ್ಲಿ ಸಿಬ್ಬಂದಿಯ ಸಾಮರ್ಥ್ಯ, ಉತ್ಪಾದಕತೆಯಲ್ಲಿ ವೃದ್ಧಿ ಕಂಡುಬರುತ್ತದೆ. ಗ್ರಾಹಕರು ಮತ್ತೆಮತ್ತೆ ಅದೇ ಅಂಗಡಿಗಳಿಗೆ ಭೇಟಿಕೊಟ್ಟು ಖರೀದಿಮಾಡುವ ಸಾಧ್ಯತೆ ಹೆಚ್ಚುತ್ತದೆ. ವಿದ್ಯಾರ್ಥಿಗಳ ವಿಷಯಗ್ರಹಣಾ ಸಾಮರ್ಥ್ಯ ಹೆಚ್ಚುತ್ತದೆ. ರೋಗಿಗಳಿಗೆ ಹಾಯೆನಿಸುವ ಆಹ್ಲಾದವೇ ಕಾಯಿಲೆ ಗುಣವಾಗುವುದಕ್ಕೆ ಸಹಾಯವಾಗುತ್ತದೆ (Aromatherapyಯ ಮೂಲತತ್ವವೇ ಅದೇ ತಾನೆ?)

ಯಾಕೆ ವಾಸನೆಗೆ ಅಂಥ ವಿಶೇಷ ಶಕ್ತಿ? ಪ್ರೊ। ರಚೆಲ್‌ ಹರ್ಟ್ಸ್‌ ಎಂಬ ಮಹಿಳಾವಿಜ್ಞಾನಿ ಕೊಡುವ ವಿವರಣೆ ಆಸಕ್ತಿಕರವಾಗಿದೆ. ವಾಸನೆ ಎಂದರೆ ಒಂದು ರೀತಿಯ ರಾಸಾಯನಿಕ ಅಂಶವು ಮೂಗಿನ ಮೂಲಕ ನಮ್ಮ ದೇಹವನ್ನು ಪ್ರವೇಶಿಸುವುದು. ಈ ರಾಸಾಯನಿಕಕ್ಕೆ ಮಿದುಳಿನಲ್ಲಿ ಸ್ಮರಣಕೋಶ (memory cell)ಗಳನ್ನು ಪ್ರಚೋದಿಸುವ ಶಕ್ತಿ ಇದೆ. ಅಂದರೆ ನಮ್ಮ ಆಘ್ರಾಣಶಕ್ತಿಯು ನೆನಪುಗಳ ಉಗ್ರಾಣದ ಕೀಲಿಕೈ ಇದ್ದಂತೆ! ಎಷ್ಟು ತೀವ್ರವಾಗಿ ಮತ್ತು ಪ್ರಬಲವಾಗಿ ಈ ವಾಸನಾ ರಾಸಾಯನಿಕಗಳು ಮಿದುಳನ್ನು ತಲುಪುತ್ತವೋ ಅಷ್ಟೇ ತೀವ್ರವಾಗಿ ನಮ್ಮ ಭಾವನೆಗಳ ಮೆರವಣಿಗೆ ಶುರುವಾಗುತ್ತದೆ. ಆ ಮೆರವಣಿಗೆ ಬಹುತೇಕವಾಗಿ ಹಳೆ ನೆನಪುಗಳದೇ ಆಗಿರುತ್ತದೆ ಎಂಬುದನ್ನು ಮುಖ್ಯವಾಗಿ ಗಮನಿಸಬೇಕು.

ನಮ್ಮ ಮಿದುಳಿನಲ್ಲಿ ಹಳೆನೆನಪುಗಳ ಸಂಗ್ರಹದ ಸ್ಮರಣಿಕೆಯನ್ನು Proustian Memory ಎನ್ನುತ್ತಾರೆ, 19ನೇ ಶತಮಾನದ ಖ್ಯಾತ ಫ್ರೆಂಚ್‌ ಕಾದಂಬರಿಕಾರ ಮಾರ್ಸೆಲ್‌ ಪ್ರೌಸ್ಟ್‌ನ ಹೆಸರಲ್ಲಿ. ಪ್ರೌಸ್ಟ್‌ ಬರೆದ ಏಳು ಸಂಪುಟಗಳ ಕಾದಂಬರಿ The Remembrance of Things Pastನ ಒಂದು ಅಧ್ಯಾಯದಲ್ಲಿ, ಚಹದಲ್ಲಿ ಅದ್ದಿದ ಬ್ರೆಡ್‌ಚೂರುಗಳ ಸ್ವಾದವು ಹೇಗೆ ಅವನ ಕಣ್ಮುಂದೆ ಬಾಲ್ಯದ ದಿನಗಳಲ್ಲಿ ತನ್ನ ಅತ್ತೆ ಆ ರೀತಿ ಚಹ ಮತ್ತು ಬ್ರೆಡ್‌ ಕೊಡುತ್ತಿದ್ದದ್ದು, ಅವಳ ಮನೆ, ವಠಾರ, ಅಂಗಡಿಗಳು, ಚರ್ಚ್‌, ಪೇಟೆ, ಅಲ್ಲಿನ ಜನರು... ಹೀಗೆ ಸಮಗ್ರ ಚಿತ್ರಣವನ್ನೂ ಚಿತ್ತಭಿತ್ತಿಯಲ್ಲಿ ಮೂಡಿಸಿತ್ತು ಎಂಬುದನ್ನು ವಿವರಿಸುತ್ತಾನೆ.

ಪ್ರೌಸ್ಟ್‌ಗೆ ಚಹ ಮತ್ತು ಬ್ರೆಡ್‌ಚೂರುಗಳ ಸ್ವಾದ ಅದ್ಭುತ ಲೋಕವೊಂದನ್ನು ಸೃಷ್ಟಿಸಿದಂತೆ, ನಮ್ಮಲ್ಲಿ ಪ್ರತಿಯಾಬ್ಬರಿಗೂ ಒಂದಲ್ಲ ಒಂದು ಪರ್ಸನಲ್‌ ಫೇವರಿಟ್‌ ಸ್ವಾದವಿರುತ್ತದೆ - ನಿಸ್ಪೃಹ ಮನಸ್ಸಿನ ಬಾಲ್ಯದ ದಿನಗಳನ್ನು ಮನಃಪಟಲದಲ್ಲಿ ಮೂಡಿಸಬಲ್ಲ ವಿಶೇಷ ಶಕ್ತಿಯುಳ್ಳದ್ದು. ಅದು ಹಳೇ ಪುಸ್ತಕದ ಪುಟಗಳ ವಾಸನೆಯಿರಬಹುದು, ಚಾಕೊಲೇಟ್‌ ಹುಡಿಯ ಪರಿಮಳವಿರಬಹುದು, ಸೈಕಲ್‌ ಬ್ರಾಂಡ್‌ ಅಗರಬತ್ತಿಯ ಪರಿಮಳವಿರಬಹುದು, ಪೊಪಿನ್ಸ್‌ ರೋಲ್‌ನಲ್ಲಿ ದ್ರಾಕ್ಷೆಯ ಸ್ವಾದವಿರಬಹುದು, ಜಾನ್ಸನ್‌ ಏಂಡ್‌ ಜಾನ್ಸನ್‌ ಬೇಬಿ ಪೌಡರ್‌ ಪರಿಮಳವಿರಬಹುದು ಅಥವಾ ಕೇವಲ ಬಲೂನ್‌ನ ಒಂದುರೀತಿಯ ರಬ್ಬರ್‌ ವಾಸನೆಯಿರಬಹುದು - ನೊಸ್ಟಾಲ್ಜಿಯಾ ಪ್ರಪಂಚಕ್ಕೆ ಅದು ರಹದಾರಿಯಾಗಿಬಿಡುತ್ತದೆ.

ಅಷ್ಟಕ್ಕೂ Nostalgia ಎಂದರೆ ಏನು? 17ನೇ ಶತಮಾನದಲ್ಲಿ ಆ ಪದ ಹುಟ್ಟಿಕೊಂಡಾಗ ಅದೊಂದು ರೋಗದ ಹೆಸರಾಗಿತ್ತು! "The pain a sick person feels because he wishes to return to his native land, and fears never to see it again" ಎಂಬುದು ಅದರ ವಿವರಣೆಯಾಗಿತ್ತು. ಈಗ ಅರ್ಥ ಬದಲಾಗಿದೆ. ನೊಸ್ಟಾಲ್ಜಿಯಾ ಎಂದರೆ ಹಳೆನೆನಪುಗಳು, ಬಹುತೇಕವಾಗಿ ಸವಿನೆನಪುಗಳು. ಅವು ಸವಿಯಾಗಿರಬೇಕಿದ್ದರೆ ಹೆಚ್ಚಾಗಿ ಬಾಲ್ಯದವೇ ಆಗಿರಬೇಕು. ಸಂಯೋಜನಾ ಕಲಿಕೆಯ ಹಂತದಲ್ಲಿ ಘಟಿಸಿದವಾದರೆ ವಾಸನೆ/ಪರಿಮಳ ಗ್ರಹಿಸಿದಾಗೆಲ್ಲ ಮರುಕಳಿಸುವಂಥವಾಗಿರಬೇಕು!

ಅಂದಮೇಲೆ Nose ಮತ್ತು Nostalgiaಗಳದು ‘ಸುಗಂಧಭರಿತ’ ಸಂಬಂಧ ಅನಿಸುವುದಿಲ್ಲವೇ?

- srivathsajoshi@yahoo.com

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more