ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಗಾರದಮನುಷ್ಯ ‘ರಾಜೀವ’ ಈಗ ನಿರ್ಜೀವ!

By Super
|
Google Oneindia Kannada News

ಬಂಗಾರದಮನುಷ್ಯ 'ರಾಜೀವ' ಈಗ ನಿರ್ಜೀವ! ಕಾಲನ ಆಟದಲ್ಲಿ ಇಂದು ರಾಜ್‌ ನಿರ್ಗಮನ... ನಾಳೆ ಇನ್ನೊಬ್ಬರ ನಿರ್ಗಮನ... ಮತ್ಯೋರದೋ ಆಗಮನ... ಹೌದು, ಸಂಕಲನ-ವ್ಯವಕಲನಗಳು ಬದುಕಿನ ಎರಡು ಮುಖಗಳು. ಅದನ್ನು ಪ್ರತಿನಿಧಿಸುವ ಯುಗಾದಿ ಹಿನ್ನೆಲೆಯಲ್ಲಿ ವಿಚಿತ್ರಾನ್ನ ; ಸ್ಪೆಷಲ್‌ ಕುಹೂಕುಹೂ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಿತ್ತು. ಹಿರಿಯಣ್ಣನಿಗೆ ನಮಿಸುತ್ತಲೇ, ಬಹುಮಾನ ವಿಜೇತರಿಗೆ ಅಭಿನಂದನೆ ಸಲ್ಲಿಸೋಣವೇ?

ಬೇರಾವ ಗಣ್ಯವ್ಯಕ್ತಿಯ ನಿಧನವಾರ್ತೆಯನ್ನೂ ಬಹುಶಃ ನಾವೆಲ್ಲ ಮನಸ್ಸಿಗೆ ಇಷ್ಟೊಂದು ಹಚ್ಚಿಕೊಂಡಿದ್ದಿಲ್ಲ, ಆದರೆ ನಮ್ಮ 'ಬಂಗಾರದ ಮನುಷ್ಯ' ಡಾ।ರಾಜ್‌ ಇನ್ನಿಲ್ಲ ಎಂಬ ಸುದ್ದಿಯನ್ನು ಅರಗಿಸಿಕೊಳ್ಳುವುದು ನಮಗೆಲ್ಲ ಬಹಳ ಕಷ್ಟಕರವೆನಿಸಿತು. ಅಂತರ್ಜಾಲದಲ್ಲಿ ಕನ್ನಡಪುಟಗಳಲ್ಲೆಲ್ಲ ಅದೇ ಸುದ್ದಿ, ಕನ್ನಡಗುಂಪುಗಳಲ್ಲೆಲ್ಲ ಅದೇ ಶೋಕಾಚರಣೆ, ಸಾವಿನ ನಂತರದ ಚಿತ್ರಗಳು, ಉದ್ರಿಕ್ತಗೊಂಡ ಬೆಂಗಳೂರಿನ ದೃಶ್ಯಗಳ ವಿಡಿಯಾ ತುಣುಕುಗಳು... ಏಪ್ರಿಲ್‌ 12ರಂದು ಮನಸ್ಸಿಗೆ ಕವಿದ ಕರಾಳಛಾಯೆ ವರ್ಣಿಸಲಸದಳವಾದದ್ದು. ಅದಾದ ಮೇಲೆ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಹರಿದು ಬಂದ ಭಾವಾತಿರೇಕದ ಕೆಲ ಘಟನೆಗಳಂತೂ ನೋವನ್ನು ಇನ್ನೂ ಹೆಚ್ಚಿಸಿದಂಥವು.

'ಅಣ್ಣಾವ್ರ' ಅಸಂಖ್ಯಾತ ಅಭಿಮಾನಿಗಳಲ್ಲಿ ನಾನೂ ಒಬ್ಬ. ಅವರ ಅವಿಸ್ಮರಣೀಯ ಅಭಿನಯದ ವಿಷಯದಲ್ಲಂತೂ ಹೌದೇ, ಅದಕ್ಕಿಂತಲೂ ಹೆಚ್ಚು ಅಭಿಮಾನ ಅವರು ಹಾಡಿದ ಚಿತ್ರಗೀತೆಗಳು ಮತ್ತು ಭಕ್ತಿಗೀತೆಗಳ ಬಗ್ಗೆ. ಆ ಹಾಡುಗಳೆಲ್ಲವೂ ನನಗೆ ಎಷ್ಟು ಆಪ್ಯಾಯಮಾನವೆಂದರೆ ಸದಾ 'ಗುನ್‌ಗುನ್‌'ಇಸುತ್ತಿರುವುದು ಮಾತ್ರವಲ್ಲ, ನನ್ನ ನೆಚ್ಚಿನ 'ಪನ್‌'ಇಸಲೂ ಅವನ್ನು ನಾನು ಬಳಸುವುದುಂಟು! ಒಮ್ಮೆ ಮನೆಯಲ್ಲಿ ಹೊಸವರ್ಷದ ಕ್ಯಾಲೆಂಡರನ್ನು(ರಾಘವೇಂದ್ರ ಸ್ವಾಮಿಗಳ ಚಿತ್ರವಿದ್ದದ್ದು) ಎಲ್ಲಿ ತೂಗುಹಾಕುವುದು ಎಂಬ ಪ್ರಶ್ನೆಗೆ hallಅಲ್ಲಾದರೂ ಹಾಕು kitchenಅಲ್ಲಾದರೂ ಹಾಕು ರಾಘವೇಂದ್ರ... ಎಂದು ನನ್ನ ಫಿ‚್ರೕ ಎಡ್ವೈಸ್‌ ಕೊಟ್ಟಿದ್ದೆ.

ಬಾಳೆಗೊನೆ ಕಾಯಿಯಾಗಿದ್ದದ್ದು ಹಣ್ಣಾಗತೊಡಗಿದರೆ 'ಬಾಳೆ ಬಂಗಾರವಾಯಿತು... ನನ್ನ ಸೆಳೆವ ಗೊನೆಯೇ ಹಣ್ಣಾಗಿ ಹೋಯಿತು...' ಎಂದು ಹೇಳಿದರೇ ನನಗೆ ಸಮಾಧಾನ. ಯಾರಾದರೂ ಅತ್ತರೆ 'ಕಣ್ಣೀರ ಧಾರೆ ಇದೇಕೆ ಇದೇಕೆ...', ನಕ್ಕರೆ 'ನೀ ನಕ್ಕರೆ ಎಂಥ ಚಂದ...' - ಎಂಥ ಸನ್ನಿವೇಶಗಳಿಗೂ ಅಣ್ಣಾವ್ರ ಹಾಡುಗಳ ಮೂಲಕವೇ ಪ್ರತಿಕ್ರಿಯಿಸುವಷ್ಟು ಹುಚ್ಚು ನನಗೆ ಡಾ।ರಾಜ್‌ ಹಾಡುಗಳದು. ಚಿಕಾಗೊದಲ್ಲಿ ಡ್ರೈವ್‌ ಮಾಡುತ್ತ ಒಂದು ರಸ್ತೆಯ ಹೆಸರು Yakley Avenue ಎಂದು ಕಾಣಿಸಿಕೊಂಡಾಗ ನನಗೆ ಥಟ್ಟನೆ ನೆನಪಾದದ್ದು ಅಣ್ಣಾವ್ರು ಹಾಡಿದ 'ಯಾಕ್ಲೇ ಅನುಮಂತಣ್ಣಾ... ಗುರ್‌ಗುಡ್ತೀಯಾ?' ಅನ್ನೋ ಸಾಲು!

ವಿಚಿತ್ರಾನ್ನ ಅಂಕಣದ ಅನೇಕ ಬರಹಗಳಲ್ಲೂ ಡಾ।ರಾಜ್‌ ಮೇಲಿನ ನನ್ನ ಅಭಿಮಾನವು ಪ್ರತ್ಯಕ್ಷವಾಗಿ/ಪರೋಕ್ಷವಾಗಿ ಪ್ರಕಟಗೊಂಡಿದೆ. 2002ರಲ್ಲಿ ಅಂಕಣ ಶುರುವಾದ ದಿನಗಳಲ್ಲಿ ಎರಡನೆ ಸಂಚಿಕೆಯಲ್ಲೇ ನಾನು ನಾಲ್ಕಕ್ಷರ ಪದಗಳ ಪಟ್ಟಿಮಾಡುತ್ತಿದ್ದಾಗ ಸಾಕ್ಷಾತ್ಕಾರ, ಸಂಧ್ಯಾರಾಗ, ಆಕಸ್ಮಿಕ, ಧ್ರುವತಾರೆ ಮುಂತಾದ ಸಿನೆಮಾಹೆಸರುಗಳನ್ನು ಉಲ್ಲೇಖಿಸಿದ್ದೆ. ಆಮೇಲೂ ಸಂದರ್ಭ ಸಿಕ್ಕಾಗೆಲ್ಲ ಡಾ।ರಾಜ್‌ ಚಿತ್ರಗಳ ಹೆಸರುಗಳನ್ನು, ಹಾಡುಗಳ ಸಾಲುಗಳನ್ನು ವಿಚಿತ್ರಾನ್ನದಲ್ಲಿ ಧಾರಾಳವಾಗಿ ಬಳಸಿಕೊಂಡಿದ್ದೇನೆ. ಮೊನ್ನೆಯಷ್ಟೇ 'ಪಾದುಕಾ ಪ್ರಸಂಗ'ದಲ್ಲಿ ಬರಿಗಾಲಲ್ಲಿ ನಡೆಯುವುದರ ಬಗ್ಗೆ ಬರಿಯುತ್ತ ಬಂಗಾರದ ಮನುಷ್ಯ ಚಿತ್ರದಲ್ಲಿ ಡಾ।ರಾಜ್‌ ಪಾದರಕ್ಷೆಗಳನ್ನು ಬಿಟ್ಟು ನಡೆದುಹೋಗುವ ದೃಶ್ಯವನ್ನು ನೆನಪಿಸಿಕೊಂಡಿದ್ದೆ.

ವಿಚಿತ್ರಾನ್ನದಲ್ಲಿ ಆಗಾಗ ಮೂಡಿಬಂದ ರಸಪ್ರಶ್ನೆ ಸಂಚಿಕೆಗಳಲ್ಲೂ ಡಾ।ರಾಜ್‌ ಪ್ರತಿಭೆಗೆ ಸಂಬಂಧಿಸಿದಂತೆ ಒಂದಾದರೂ ರೆಫ‚ರೆನ್ಸ್‌ ಬಂದೇ ಬರುತ್ತದೆ. ತೀರಾ ಇತ್ತೀಚಿನ ಯುಗಾದಿ ಸ್ಪೆಷಲ್‌ ಕುಹೂಕುಹೂ ರಸಪ್ರಶ್ನೆಯಲ್ಲೂ ಇತ್ತಲ್ಲ ಡಾ।ರಾಜ್‌ ಹಾಡಿನ ಕುರಿತು ಒಂದು ಪ್ರಶ್ನೆ? ವಿಧಿಲೀಲೆಯೆಂದರೆ, ಆ ರಸಪ್ರಶ್ನೆ ಸ್ಪರ್ಧೆಯನ್ನು ರಚಿಸುವಾಗ ಬದುಕಿದ್ದ ಅಣ್ಣಾವ್ರು ಫಲಿತಾಂಶ ಪ್ರಕಟಣೆಯ ವೇಳೆಗೀಗ ಕನ್ನಡಮಣ್ಣಲ್ಲಿ ಮಣ್ಣಾಗಿ ಹೋದರು.

ಮೂರು ವರ್ಷಗಳ ಹಿಂದೆ 2003 ಏಪ್ರಿಲ್‌ನಲ್ಲಿ ಡಾ।ರಾಜ್‌ ಹುಟ್ಟುಹಬ್ಬದ ಸ್ಪೆಷಲ್‌ ಎಂದು 'ಹತ್ತರಲ್ಲಿ ಹತ್ತು ಮುತ್ತು ರಾಜ್‌' ಎಂಬ ಶೀರ್ಷಿಕೆಯ ವಿಚಿತ್ರಾನ್ನ ಸಂಚಿಕೆಯನ್ನು ತಯಾರಿಸಿದ್ದೆ. ಅದರ ಕೊನೆಯಲ್ಲಿ, 'ಬಂಗಾರದ ಮನುಷ್ಯ' ಚಿತ್ರದಲ್ಲಿ ಡಾ।ರಾಜ್‌ ಅಭಿನಯಿಸಿ 'ಜೀವ' ತುಂಬಿದ ಪಾತ್ರದ ಹೆಸರೇನು ಬಲ್ಲಿ'ರಾ'? ಎಂಬ ಪ್ರಶ್ನೆಯನ್ನೂ ಸೇರಿಸಿದ್ದೆ; 'ರಾಜೀವ' ಎಂಬ ಸರಿಯುತ್ತರವನ್ನು ಓದುಗರಲ್ಲನೇಕರು ಬರೆದು ತಿಳಿಸಿದ್ದರು. ರಾಜ್‌ ಯಾವ ಪಾತ್ರಕ್ಕೆ ಜೀವ ತುಂಬಿಸಿಲ್ಲ ಹೇಳಿ!? ಅಷ್ಟೊಂದು ತನ್ಮಯತೆಯಿಂದ ಅವರು ಅಭಿನಯಿಸಿದ, ನೂರಕ್ಕೆ ನೂರಾಗಿ ಜೀವ ತುಂಬಿದ ಪಾತ್ರಗಳನ್ನು ನೋಡಿಯೇ ಅಲ್ಲವೇ ನಾವೆಲ್ಲ ಬದುಕಿನ ಆದರ್ಶಗಳನ್ನು ಕಲಿತದ್ದು? ಅಂತಹ ಬಂಗಾರದಮನುಷ್ಯ ರಾಜೀವ ಇನ್ನು ನಮ್ಮೊಂದಿಗಿಲ್ಲ, ರಾಜೀವ (= ರಾಜ್‌ ಜೀವ) ಇನ್ನು ನಿರ್ಜೀವ ಎಂದು ಊಹಿಸಿಕೊಳ್ಳುವುದೇ ಕಷ್ಟ.

ಅಮರವಾಗಲಿ ಅಣ್ಣಾವ್ರ ಮೇಲಿನ ನಮ್ಮೆಲ್ಲರ ಅಭಿಮಾನ!

* * *

ಯುಗಾದಿ ಹಬ್ಬದ ಸ್ಪೆಷಲ್‌ ಕುಹೂಕುಹೂ ರಸಪ್ರಶ್ನೆ ಸ್ಪರ್ಧೆಗೆ ಬಂದಿರುವ ಪ್ರತಿಕ್ರಿಯೆ ಅದ್ಭುತ. ಈ ಸಲವೂ ಪ್ರವೇಶಪತ್ರಗಳ ಸಂಖ್ಯೆ ನೂರನ್ನು ದಾಟಿದೆ. ಅಮೆರಿಕ, ಯುರೊಪ್‌, ಜಪಾನ್‌, ನ್ಯೂಜಿ‚ೕಲ್ಯಾಂಡ್‌, ಆಸ್ಟ್ರೇಲಿಯಾ, ದ.ಕೊರಿಯಾ - ಹೀಗೆ ವಿಶ್ವಕನ್ನಡಿಗರಿಂದ ಒಟ್ಟು 105 ಎಂಟ್ರಿಗಳು ಬಂದಿವೆ. ವಿಚಿತ್ರಾನ್ನ ರಸಪ್ರಶ್ನೆ ಸ್ಪರ್ಧೆಯಲ್ಲಿ ಇದೇ ಮೊದಲಬಾರಿಗೆ ಭಾಗವಹಿಸಿದವರೂ ತುಂಬ ಮಂದಿ ಇದ್ದಾರೆ. ಸ್ಪರ್ಧೆಯ ಕಾನ್ಸೆಪ್ಟನ್ನು (ಚಾಂದ್ರಮಾನ ತಿಂಗಳುಗಳ ನಾಮಸ್ಮರಣೆ) ಇಷ್ಟಪಟ್ಟವರಿದ್ದಾರೆ. ಒಂದೆರಡು ಉತ್ತರಗಳು ಕೊನೆಗೂ ಸಿಗಲಿಲ್ಲವೆಂಬ ಕಾರಣಕ್ಕಾಗಿ ಪ್ರವೇಶಪತ್ರವನ್ನು ಕಳಿಸದಿರುವವರೂ ಇದ್ದಾರೆ! ಇರಲಿ, ಈ ರಸಪ್ರಶ್ನೆ ಸ್ಪರ್ಧೆಯನ್ನು ಲವಲವಿಕೆಯ ಚಟುವಟಿಕೆಯಾಗಿಸಿದ ಸ್ಪರ್ಧಿಗಳಿಗೆಲ್ಲ ಧನ್ಯವಾದಗಳು ಮತ್ತು ಅಭಿನಂದನೆಗಳು. ಈಗ ಫಲಿತಾಂಶ ಪ್ರಕಟಣೆ.

ಅ) ಪ್ರಶ್ನೆಗಳು ಮತ್ತು ಸರಿಯುತ್ತರಗಳು:

1. 'ಸಂತಸ ಅರಳುವ ಸಮಯ... ಮರೆಯೋಣ ಚಿಂತೆಯ...' ಏಕೆಂದರೆ, 'ಇದು ರಮ್ಯ _ _ _ _'! (ಉತ್ತರ: ಚೈತ್ರಕಾಲ)

2. 'ಸುತ್ತಮುತ್ತಲೂ ಕಪ್ಪುಕತ್ತಲೆಯು ಮುತ್ತಿರಲು... ವೀರಕಾವಲುಗಾರ ಭೋಜನಕೆ ನಡೆದಿರಲು... ಸಿಹಿನೀರ ತರಲೆಂದು ಅವನ ಸತಿ ಬಂದಿರಲು... ಕಳ್ಳಕಿಂಡಿಯ ಹಿಂದೆ ಪಿಸುಮಾತ ಕೇಳಿದಳು... ಅಲಿಸಿದಳು... ಇಣುಕಿದಳು... _ _ _ _ ಕೋಟೆಯತ್ತ ಬರುವುದನ್ನು ಕಂಡಳು!' (ಉತ್ತರ: ವೈರಿಪಡೆ)

3. 'ನಾವಾಡುವ ನುಡಿಯೆ ಕನ್ನಡ ನುಡಿ...' ಹಾಡನ್ನು ಗಂಧದಗುಡಿ ಚಿತ್ರದಲ್ಲಿ ಡಾ।ರಾಜ್‌ ಅಭಿನಯಕ್ಕೆ ಪಿ.ಬಿ.ಶ್ರೀನಿವಾಸ್‌ ಹಾಡಿದ್ದರೆ, ಗಂಧದಗುಡಿ ಭಾಗ-2 ರಲ್ಲಿ ಡಾ।ರಾಜ್‌ ಅವರೇ ಈ ಹಾಡನ್ನು ಹಾಡಿದರು, ತನ್ನ _ _ _ _ ಶಿವಣ್ಣನ ಅಭಿನಯಕ್ಕೆ. (ಉತ್ತರ: ಜ್ಯೇಷ್ಠಪುತ್ರ)

4. '_ _ _ _ ಒಳಿತೇ ಆಯಿತು... ಶ್ರೀಧರ ಸೇವೆ ಮಾಡಲು ಸಾಧನ ಸಂಪತ್ತಾಯಿತು...' ಎಂದಿದ್ದಾರೆ ಪುರಂದರದಾಸರು. (ಉತ್ತರ: ಆದದ್ದೆಲ್ಲ)

5. '_ _ _ _ ತಪ್ಪಿತ ಗ್ಯಾನಾ... ಎಲ್ಲಿದೋ ಧ್ಯಾನಾ... ಹುಚ್ಚ ಆಗ್ಯಾನಾ... ಮದೋನ್ಮತ್ತ ಅಂಬಿಕಾತನಯದತ್ತ!' - ಬೇಂದ್ರೆಯವರಿಗೆ ನಲಿದಾಡಿ ನಲಿದಾಡಿ ಜ್ಞಾನತಪ್ಪುವಷ್ಟೂ ಮರುಳು ಮಾಡಿತೇ ಆ ಸೀಸನ್‌? (ಉತ್ತರ: ಶ್ರಾವಣಕ)

6. ಸಂಗೀತದ ಉಪಾಸನೆಯಲ್ಲಿ ' _ _ _ _ ಹೂವು ಅರಳಿ... ಗಾನವೆಂಬ ಗಂಧ ಚೆಲ್ಲಿ... ರಾಗವೆಂಬ ಜೇನ ಹೊನಲು ತುಂಬಿ ಹರಿಯಲಿ... ಜಗವ ಕುಣಿಸಿ ತಣಿಸಲಿ...' (ಉತ್ತರ: ಭಾವವೆಂಬ)

7. 'ಬಾಲ ಇದ್ರೂನೂ ಕೋತಿಯಲ್ಲ... ಪಟ ಪಟ... ಹಾರೋ ಗಾಳಿಪಟ...' - ಯಾವ ಚಿತ್ರದ ಹಾಡಿದು? (ಉತ್ತರ: ಆಪ್ತಮಿತ್ರ)

8. ಬಂಧನ ಚಿತ್ರದಲ್ಲಿ ಕಣ್ಣೀರಿನಿಂದ ಬರೆದದ್ದು ಪ್ರೇಮದ _ _ _ _ . (ಉತ್ತರ: ಕಾದಂಬರಿ)

9. ಕುರಿ ಮ್ಯಾಗೆ ಖಡ್ಗದ ಕಣ್ಣಾದರೆ ಹೋರಿ ಮ್ಯಾಗೆ ಏನು? ಉಪ್ಪಿಯನ್ನು ಕೇಳಿ ನೋಡಿ, ಗೊತ್ತಾಗಬಹುದು! (ಉತ್ತರ: ಮಾರಿಕಣ್ಣು)

10. 'ತಬ್ಬಲಿಯು ನೀನಾದೆ ಮಗನೆ...' ಎಂದು ಮುದ್ದುಕರುವನ್ನು ಬೀಳ್ಕೊಟ್ಟು ಬಂದು 'ಖಂಡವಿದೆಕೋ ಮಾಂಸವಿದೆಕೋ ಗುಂಡಿಗೆಯ ಬಿಸಿರಕ್ತವಿದೆಕೋ...' ಎಂದು ಚಂಡವ್ಯಾಘ್ರನಿಗೆ ತನ್ನನ್ನು ಅರ್ಪಿಸಲು ಅಣಿಯಾದ ಗೋಮಾತೆಯ ಹೆಸರು. (ಉತ್ತರ: ಪುಣ್ಯಕೋಟಿ)

11. ಮಾಸ್ತಿಯವರ ಕೃತಿಯನ್ನಾಧರಿಸಿ ನಿರ್ಮಿಸಿದ ಕಾಕನಕೋಟೆಯಲ್ಲಿ, ಕರಿಹೈದನೆಂಬೋನು _ _ _ _ . (ಉತ್ತರ: ಮಾದೇಶ್ವರ)

12. ನಮೋ ಭೂತನಾಥಾ ನಮೋ ದೇವದೇವಾ ನಮೋ ಭಕ್ತಪಾಲಾ ನವೋ ದಿವ್ಯತೇಜ... ಎಂದು ಪೂಜಿಸಲ್ಪಡುವ ಪರಮೇಶ್ವರನಿಗೆ ಎರಡು ಹುಬ್ಬುಗಳ ಮೇಲೊಂದು ಮೂರನೆ ಕಣ್ಣು ಇರುವುದರಿಂದ _ _ _ _ ಎಂಬ ಹೆಸರೂ ಇದೆ. ಅಂತಹ ಮುಕ್ಕಣ್ಣ ನಮ್ಮೆಲ್ಲರನ್ನು ಸದಾ ಕಾಪಾಡಲಿ. (ಉತ್ತರ: ಫಾಲನೇತ್ರ)

ಆ) ಸ್ಪರ್ಧೆಗೆ ಸಂಬಂಧಿಸಿದಂತೆ ಕೆಲ ಸ್ವಾರಸ್ಯಕರ ತುಣುಕುಗಳು :

*ಎರಡನೇ ಪ್ರಶ್ನೆಗೆ 'ವೈರಿಪಡೆ' ಸರಿಯಾದ ಉತ್ತರ. ಬಹಳಷ್ಟು ಜನ 'ವೈರಿಗಳು', 'ವೈರಿಸೇನೆ', 'ವೈರಿಸೈನ್ಯ' ಇತ್ಯಾದಿ ಬರೆದು ಅದೂ ನಾಲ್ಕಕ್ಷರ ಕಂಡೀಷನನ್ನು ಸಾಟಿಸ್‌ಫ‚ೈಯಿಸುತ್ತದೆ ಎಂದುಕೊಂಡಿರಬಹುದು. ವಾಲ್ಯುವೇಶನ್‌ ವೆರಿ ಸ್ಟ್ರಿಕ್ಟ್‌ ಇದ್ದುದರಿಂದ ಈ ಉತ್ತರಗಳನ್ನು ಸರಿಯೆಂದು ಪರಿಗಣಿಸಲಾಗಿಲ್ಲ :-)

* ಐದನೇ ಪ್ರಶ್ನೆ ಸಾಕಷ್ಟು ಸ್ಪರ್ಧಿಗಳನ್ನು ಕೆಣಕಿಸಿ ತಿಣುಕಿದೆ. 'ಶ್ರಾವಣ...' ಅಂತೇನೊ ಉತ್ತರ ಶುರುವಾಗುತ್ತದಾದರೂ ನಾಲ್ಕಕ್ಷರದ ಪದ ಏನಿದ್ದೀತು ಎಂದು 'ಶ್ರಾವಣದಿ', 'ಶ್ರಾವಣ್ದಾಗ' ಅಂತೆಲ್ಲ ಊಹಿಸಿ ಬರೆದವರು ಇದ್ದಾರೆ. ಅದೆಷ್ಟೋ ಜನ ಈ ಒಂದು ಪ್ರಶ್ನೆಯಿಂದಾಗಿಯೇ ಸ್ಪರ್ಧೆಯಲ್ಲಿ ಭಾಗವಹಿಸದೆಯೇ ಇರುವ ನಿರ್ಧಾರವನ್ನು ಕೈಗೊಂಡದ್ದು. ಬೇಂದ್ರೆಯವರ ಶ್ರಾವಣಮೋಹದ ಬಗ್ಗೆ ಇದೇ ದಟ್ಸ್‌ಕನ್ನಡ ಪತ್ರಿಕೆಯಲ್ಲಿ 'ಬೇಂದ್ರೆ ಕಂಡ ಶ್ರಾವಣ' ಲೇಖನ ಪ್ರಕಟವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

*ಒಂಬತ್ತನೇ ಪ್ರಶ್ನೆಯಲ್ಲಿ ಒಂದು ಸಣ್ಣ ತಪ್ಪಿತ್ತು. ಅದು, 'ಕುರಿ ಮ್ಯಾಗೆ ಖಡ್ಗದ ಕಣ್ಣು' ಅಲ್ಲ, ಬದಲಿಗೆ 'ಕುರಿ ಮ್ಯಾಗೆ ಕಟ್ಕನ್‌ (= ಕಟುಕನ) ಕಣ್ಣು...' ಎಂದು ಬರೆದು ತಿಳಿಸಿದವರು ಬೆಂಗಳೂರಿನ ಚೈತನ್ಯ ರಾಮ್‌. ತಿದ್ದುಪಡಿಗಾಗಿ ಅವರಿಗೆ ವಿಶೇಷ ಧನ್ಯವಾದಗಳು.

* ಸ್ಪರ್ಧಿಗಳನ್ನು ಸುಮಾರಾಗಿ ಸತಾಯಿಸಿದ ಇನ್ನೊಂದು ಪ್ರಶ್ನೆಯೆಂದರೆ ಹನ್ನೊಂದನೆಯದು, ಕರಿಹೈದನೆಂಬೋನು 'ಮಾದೇಶ್ವರ' ಉತ್ತರದ್ದು. 80ರ ದಶಕದಲ್ಲಿ ತುಂಬ ಜನಪ್ರಿಯವಾಗಿದ್ದ ಚಿತ್ರಗೀತೆಯದು. ಸ್ವತಃ ಮಾಸ್ತಿಯವರೇ ಅದನ್ನು ಬರೆದಿರುವುದು ಎಂಬ ಮಾಹಿತಿಯನ್ನು ನನಗೆ ತಿಳಿಸಿದವರು ಸ್ಪರ್ಧಿಗಳಲ್ಲೊಬ್ಬರಾದ ಚೆನ್ನೈನ ಸುಬ್ಬರಾವ್‌ ಸಮುದ್ರಂ.

* ಶಿವನ ಎಲ್ಲ ಹೆಸರುಗಳನ್ನೂ ಹೆಚ್ಚುಕಡಿಮೆ ಬಲ್ಲೆ ಎಂದುಕೊಂಡಿದ್ದ ಮಲ್ಲಿಕಾ (ನಾರ್ತ್‌ ಕೆರೊಲಿನಾ) ಅವರು 'ಫಾಲನೇತ್ರ' ಮಾತ್ರ ನೆನಪೇ ಆಗಲಿಲ್ಲ ಎಂದು ಪರಿತಪಿಸಿದ್ದಾರೆ.

* ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ನಾಗೇಂದ್ರ ರಾವ್‌ ಅವರು ಈ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ಅಂತರ್ಜಾಲದಲ್ಲಿ ಇಂಥದೊಂದು ಕನ್ನಡಪ್ರೇಮದ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ದಟ್ಸ್‌ಕನ್ನಡ ಓದುಗರಿಗೆ ಪರಿಚಿತರಾದ ಹಿರಿಯ ಬರಹಗಾರ ಪಾಂಡಿಚೇರಿಯ ಪ್ರೇಮ್‌ ಶೇಖರ್‌ ಅವರೂ ಈ ಸ್ಪರ್ಧೆಯಲ್ಲಿ ಭಾಗವಹಿಸುವುದು ಸಂತೋಷವಾಯಿತು ಎಂದಿದ್ದಾರೆ.

* ಮೈಸೂರಿನ ಶಾರದಾ ಸೀತಾರಾಮರಾವ್‌ ಅವರು ಕಳೆದವರ್ಷ (2005) ಯುಗಾದಿ ರಸಪ್ರಶ್ನೆಸ್ಪರ್ಧೆಯ ವೇಳೆ ಅಮೆರಿಕದಲ್ಲಿ ಫಿ‚ೕನಿಕ್ಸ್‌ನಲ್ಲಿ ಮಗಳ ಮನೆಗೆ ಬಂದಿದ್ದವರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈವರ್ಷ ಯುಗಾದಿಗಿನ್ನು ಒಂದೆರಡು ತಿಂಗಳಿರುವಾಗಲೇ ಮೊಮ್ಮಗಳಿಂದ ಈಮೈಲ್‌ ಬರೆಯಿಸಿ ವಿಚಿತ್ರಾನ್ನದಲ್ಲಿ ಯುಗಾದಿ ರಸಪ್ರಶ್ನೆ ಈಬಾರಿಯೂ ಇದೆಯಾ, ಇದ್ದರೆ ತಿಳಿಸಿ ಎಂದು ಕೇಳಿಕೊಂಡಿದ್ದರು; ಹಾಗೆಯೇ ಆಸಕ್ತಿಯಿಂದ ಭಾಗವಹಿಸಿದ್ದಾರೆ ಕೂಡ.

* ವಿಧಾನಸೌಧದಲ್ಲಿ ಉದ್ಯೋಗಿಯಾಗಿರುವ ನೇತ್ರಾ ಕಿರಗಾವಲು ಮತ್ತು ಅವರ ಸ್ನೇಹಿತೆಯರ ಬಳಗ ಸೇರಿ 'ಕಂಬೈನ್ಡ್‌ ಎಫ‚ರ್ಟ್‌'ನಲ್ಲಿ ಉತ್ತರಗಳನ್ನು ಸಿದ್ಧಪಡಿಸಿ ಕಳಿಸಿದ್ದಾರೆ.

* ಸರಿಯುತ್ತರಗಳು, ಬಹುಮಾನಗಳಿಗೆಲ್ಲ ಮಾರೋಗೋಲಿ... ಇಂತಹ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸುವುದೇ ಒಂದು ದೊಡ್ಡ ಖುಷಿ! - ಎಂದವರು ಫಿಲಡೆಲ್‌ಫಿಯಾದಿಂದ ಪ್ರತಿಭಾ. ಹಬ್ಬಕ್ಕೆ ಸಿಹಿಊಟ ಕೊಡೋದು ಬಿಟ್ಟು ಕ್ವಿಜ್‌ನಂಥ ಹೋಮ್‌ವರ್ಕ್‌ ಮಾಡಿಸೋದು ಸರಿನಾ ಎಂದು ನಸುನಗುತ್ತಲೇ true-to-her-name ಪ್ರಶ್ನಿಸಿದವರು ಬೆಂಗಳೂರಿನ ಸ್ಮಿತಾ.

ಇ) ಎಲ್ಲ ಉತ್ತರಗಳನ್ನೂ ಕರಾರುವಾಕ್ಕಾಗಿ ಉತ್ತರಿಸಿ ಬಹುಮಾನ (ಡಾಲರ್‌ 25 ಗಿಫ‚್‌್ಟ ಹ್ಯಾಂಪರ್‌) ವಿಜೇತರಾದವರು :

- ಸುಕುಮಾರ್‌ ರಘುರಾಮ್‌; ಕ್ಯಾಲಿಫ‚ೊರ್ನಿಯಾ
- ಶಾರದಾ ರಾಮಚಂದ್ರ; ಬೆಂಗಳೂರು

ಈ ಕೆಳಕಂಡ ನಾಲ್ಕು ಸ್ಪರ್ಧಿಗಳು 'ಶ್ರಾವಣಕೆ' ಅಥವಾ 'ಶ್ರಾವಣಕ್ಕ' ಎಂಬ ಉತ್ತರವನ್ನು ಕಳಿಸಿ ಬಹುಮಟ್ಟಿಗೆ ಎಲ್ಲವೂ ಸರಿ ಎನ್ನುವಂಥ ಉತ್ತರಗಳನ್ನು ಕಳಿಸಿದ್ದರಿಂದ ಸಮಾಧಾನಕರ ಬಹುಮಾನವನ್ನು ಪಡೆಯುತ್ತಾರೆ.

- ಸುಚಿತ್ರಾ ಪಾಟೀಲ್‌; ಬೆಂಗಳೂರು
- ಕೃಷ್ಣಚಂದ್ರನ್‌ ಆರ್‌; ಬೆಂಗಳೂರು
- ಸುದತ್ತ ಗೌತಮ್‌; ಕ್ಯಾಲಿಫ‚ೊರ್ನಿಯಾ
- ಚಂದ್ರಶೇಖರ್‌ ಬಿ ಎಚ್‌; ಬೆಂಗಳೂರು

ಬಹುಮಾನವಿಜೇತರಾದವರಿಗೆ ಹಾರ್ದಿಕ ಅಭಿನಂದನೆಗಳು. ವಿಜೇತರ ಸಂಪರ್ಕವಿವರವನ್ನು ಪಡೆದು ಬಹುಮಾನಗಳನ್ನು ತಲುಪಿಸುವ ವ್ಯವಸ್ಥೆಮಾಡಲಾಗುವುದು. ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದ ಮತ್ತು ಪ್ರವೇಶಪತ್ರವನ್ನು ಕಳಿಸದಿದ್ದರೂ ಸ್ಪರ್ಧೆಯನ್ನು ಆನಂದಿಸಿದ ಓದುಗಮಿತ್ರರಿಗೆಲ್ಲ ಧನ್ಯವಾದಗಳು. ಬಹುಮಾನಗಳನ್ನು ಪ್ರಾಯೋಜಿಸಿದ ಬೆಂಗಳೂರಿನ ಸ್ವರೂಪರಾಣಿ ಮತ್ತು ಮಿನೆಸೊಟಾದ ವಿಜಯ್‌ ಕುಲಕರ್ಣಿ ಅವರಿಗೆ ವಿಶೇಷ ಧನ್ಯವಾದಗಳು. ಮುಂಬರುವ ಕ್ವಿಜ್‌ ಸ್ಪರ್ಧೆಗೆ ಬಹುಮಾನಗಳನ್ನು ಪ್ರಾಯೋಜಿಸಲು ಸ್ವಯಂಪ್ರೇರಣೆಯಿಂದ ಉಧ್ಯುಕ್ತರಾಗಿರುವ ಮುಂಬಯಿಯ ತ.ವಿ.ಶ್ರೀನಿವಾಸ್‌ ಅವರಿಗೆ ಇನ್‌-ಎಡ್ವಾನ್ಸ್‌ ಧನ್ಯವಾದಗಳು.

ಮತ್ತೊಮ್ಮೆ ಎಲ್ಲರಿಗೂ ಶುಭಾಶಯಗಳು. ಮತ್ತೆ ಭೇಟಿ ಮುಂದಿನ ಮಂಗಳವಾರ ವಿಚಿತ್ರಾನ್ನದ 185ನೇ ಸಂಚಿಕೆಯಲ್ಲಿ. ಅಲ್ಲಿಯವರೆಗೆ ನಮಸ್ಕಾರ.

English summary
Rajkumar has become part of everybodies life. His roles, character has created such an impact. Srivathsa Joshi remembers his movies and songs. Alongwith that Ugadi Results.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X