• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆರು ಟೋಪಿಗಳನಿಟ್ಟವರಾರು?

By Staff
|
Srivathsa Joshi *ಶ್ರೀವತ್ಸ ಜೋಶಿ
ಬಿಸ್ಕೇಟ್‌ ಹಾಕೋದು, ನಾಮ ಎಳೆಯೋದು, ಟೋಪಿ ಇಡೋದು... ಇದೇ ಆಯ್ತಲ್ಲ ಎಂದು ನೀವು ಮೂಗಿನಮೇಲೆ ಬೆರಳಿಡುತ್ತಿರುವಾಗಲೇ ನಿಮಗೆ ಆರು ಟೋಪಿಗಳನ್ನು ಹಾಕುವ ಹೊಸದೊಂದು ಸ್ಕೀಮನ್ನು ಹೊತ್ತುತಂದಿದೆ ಈ ವಾರದ ವಿಚಿತ್ರಾನ್ನ!

ಆರು ಟೋಪಿಗಳಾ? ಅಂದ್ರೆ... ನೀವೀಗ ಒಬ್ಬ ಷಣ್ಮುಖನಾ? ಅಥವಾ ಡಬಲ್‌-ಬ್ರಹ್ಮ...?

ಹಾಗೇನಿಲ್ಲ, ನಿಮಗೆ ಆರು ತಲೆಗಳಿವೆ, ಹಾಗಾಗಿ ಆರು ಟೋಪಿ ಅಂತ ಹೇಳಿದ್ದಲ್ಲ. ನಿಮ್ಮ ಒಂದೇ(ಅಷ್ಟಾದರೂ ಇದೆ ತಾನೆ?) ತಲೆಗೆ ಆರು ಟೋಪಿಗಳು!

ಇರಲಿ, ತಲೆ ಇರೋದು ಟೋಪಿ ಹಾಕಲಿಕ್ಕೆ ಅಥವಾ ಹಾಕಿಸಿಕೊಳ್ಳಲಿಕ್ಕೆ ಮಾತ್ರ ಅಲ್ಲ. ಟೋಪಿಆಟ ಬಿಟ್‌ಹಾಕಿ ಒಂಚೂರು ತಲೆ ಉಪಯೋಗಿಸಿ ಸೀರಿಯಸ್‌ ಆಗಿ ಥಿಂಕಿಸುವ ವಿಚಾರಕ್ಕೆ ಬರೋಣ. ತಲೆಯಲ್ಲೇ ಅಲ್ಲವೇ ನಮ್ಮ ಸೂಪರ್‌ಕಂಪ್ಯೂಟರ್‌ ಮೆದುಳು ಇರುವುದು? ತಲೆಯಲ್ಲೇ ಅಲ್ಲವೇ ನಮ್ಮೆಲ್ಲ ಯೋಚನೆ-ಯೋಜನೆಗಳು ರೂಪುಗೊಳ್ಳುವುದು ಮತ್ತು ಅವುಗಳ ಅನುಷ್ಠಾನದ ನಿರ್ವಹಣೆಯಾಗುವುದು? ಆದರೆ, ಎಲ್ಲರ ತಲೆಯಲ್ಲೂ ಯೋಚನೆ-ಆಲೋಚನೆಗಳು ಒಂದೇ ರೀತಿಯಲ್ಲಿ ರೂಪುಗೊಳ್ಳುತ್ತವೆಂದೇನೂ ಇಲ್ಲ, ಅಷ್ಟೇ ಅಲ್ಲ, ಒಬ್ಬ ವ್ಯಕ್ತಿಯಲ್ಲೇ ಎಲ್ಲ ಕಾಲಕ್ಕೂ ಎಲ್ಲ ಸನ್ನಿವೇಶಗಳಿಗೂ ಆಲೋಚನಾ ಪ್ರವಾಹ ಒಂದೇ ರೀತಿಯಲ್ಲಿ ಹರಿಯುತ್ತಿರುತ್ತದೆ ಅಂತನೂ ಇಲ್ಲ.

ವ್ಯಕ್ತಿಯ ಯೋಚನಾಸರಣಿ ಹೇಗಿರಬೇಕು ಮತ್ತು ಅದರಿಂದ ಆಗುವ ಲಾಭಗಳೇನು ಎನ್ನುವುದಕ್ಕೆ ಒಂದು ಸಿದ್ಧಾಂತವನ್ನು - ಸ್ವಾರಸ್ಯಕರವಾಗಿ ಟೋಪಿಆಟದ ಮೂಲಕವೇ - ಮಂಡಿಸಿದ್ದಾರೆ ಡಾ।ಎಡ್ವರ್ಡ್‌ ಡೆ ಬೊನೊ ಎನ್ನುವ ಚಿಂತನಾಶಕ್ತಿ ತಜ್ಞರೊಬ್ಬರು. Dr. Edward de Bono’s Six-Hat-Thinking ಎಂದೇ ಪ್ರಸಿದ್ಧವಾದ ಈ ವಿಧಾನವು ಕಳೆದ ಒಂದೆರಡು ದಶಕಗಳಿಂದ ಕಾರ್ಪೊರೇಟ್‌ ವರ್ಕ್‌ಶಾಪ್‌ಗಳಲ್ಲಿ, ವ್ಯಕ್ತಿತ್ವವಿಕಸನ ಶಿಬಿರಗಳಲ್ಲಿ ಹೆಚ್ಚುಹೆಚ್ಚು ಪ್ರಚಾರ ಪ್ರಾಶಸ್ತ್ಯಗಳನ್ನು ಗಳಿಸಿಕೊಂಡಿದ್ದು ಬಹುರಾಷ್ಟ್ರೀಯ ಕಂಪೆನಿಗಳು ತಮ್ಮ ಉದ್ಯೋಗಿಗಳ ಯೋಚನಾಸಾಮರ್ಥ್ಯವನ್ನು ಹೆಚ್ಚಿಸುವುದಕ್ಕಾಗಿ ಅಳವಡಿಸಿಕೊಂಡಿವೆ.

ಬನ್ನಿ, ನಮ್ಮ ತಲೆಯಾಳಗೂ ಈ ‘ಆರು ಟೋಪಿ ಚಿಂತನೆಯ ವಿಧಾನ’ದ ಬಗ್ಗೆ ಸ್ಥೂಲವಾಗಿ ಒಂದಿಷ್ಟು ಮಾಹಿತಿಯನ್ನು ತೂರಿಸಿಕೊಳ್ಳೋಣ.

*

ಆರು ಟೋಪಿ ವಿಧಾನದ ಮೂಲ ಉದ್ದೇಶ, ಒಂದು ಸಮಸ್ಯೆ ಅಥವಾ ಸವಾಲನ್ನು ಕೇವಲ ಒಂದೇ ದೃಷ್ಟಿಕೋನದಿಂದ ನೋಡಿ ಬಗೆಹರಿಸುವುದಕ್ಕೆ ಪ್ರಯತ್ನಿಸುವ ಬದಲು, ವಿಭಿನ್ನ ದೃಷ್ಟಿಕೋನಗಳಿಂದ ಆ ಸಮಸ್ಯೆ/ಸವಾಲು ಹೇಗೆ ಪ್ರಸ್ತುತಗೊಳ್ಳುತ್ತಿದೆಯೆಂಬುದನ್ನು ಅರಿಯುವುದು. ಆ ವಿಭಿನ್ನ ದೃಷ್ಟಿಕೋನಗಳು ನಿಜವಾಗಿಯೂ ಒಂದಕ್ಕೊಂದು ವಿರುದ್ಧ ದಿಕ್ಕಿನವೇ ಆಗಿರಬಹುದು, ಆದರೆ ಇದರಿಂದಾಗುವ ಪ್ರಯೋಜನವೆಂದರೆ ಸಮಸ್ಯೆಯನ್ನು ಸಮಗ್ರವಾಗಿ ಅರ್ಥೈಸಿಕೊಳ್ಳುವ ಒಂದು ಅವಕಾಶ; ಅದರ ಹರವು ಎಷ್ಟು, ಪರಿಧಿಗಳೇನು ಎಂದು ಆದಷ್ಟು ಕರಾರುವಾಕ್ಕಾಗಿ ತಿಳಿದುಕೊಂಡು ಆಮೇಲಷ್ಟೇ ಪರಿಹಾರದತ್ತ ಸಂಪನ್ಮೂಲಗಳ ವಿನಿಯೋಗ.

ಚಿಂತನೆಗೂ ಟೋಪಿಗೂ ಹೇಗಿದ್ದರೂ ಅನಾದಿಕಾಲದಿಂದಲೇ ಸಂಬಂಧವಿದೆ. ಯಾಕೆಂದರೆ ಆಂಗ್ಲಭಾಷೆಯಲ್ಲಿ thinking cap (ಆಲೋಚನಾ ಟೋಪಿ?) ಅನ್ನೋದು ಸಾಮಾನ್ಯವಾದ ಪದಪ್ರಯೋಗ ತಾನೆ? ಡಾ.ಎಡ್ವರ್ಡ್‌ ಡೆಬೊನೊ ವಿಧಾನದ ವೈಶಿಷ್ಟ್ಯವೆಂದರೆ ಅಲ್ಲಿ ಬರೀ ಥಿಂಕಿಂಗ್‌ ಕ್ಯಾಪ್ಸ್‌ ಅಷ್ಟೇ ಅಲ್ಲ, ಅವುಗಳಿಗೆ ಆರು ವಿವಿಧ ಬಣ್ಣಗಳೂ ಇವೆ! ಬೇರೆಬೇರೆ ದೃಷ್ಟಿಕೋನಗಳಿಗೆ ಸಾಂಕೇತಿಕವಾಗಿ ಬೇರೆಬೇರೆ ಬಣ್ಣಗಳ ಟೋಪಿ ಧರಿಸಿ ಅದಕ್ಕನುಗುಣವಾಗಿ ಚಿಂತನೆಯ ಪ್ರಯೋಗ. ಟೋಪಿಯನ್ನೇ ಸಂಕೇತವಾಗಿ ಬಳಸಿದ್ದೇಕೆಂದರೆ ಒಂದನ್ನು ತೆಗೆದು ಇನ್ನೊಂದು ಹಾಕಿಕೊಳ್ಳುವುದು ಸುಲಭ, ಮತ್ತು ಹಾಗೆ ಟೋಪಿ ಬದಲಾಯಿಸುವುದೆಂದರೆ ದೃಷ್ಟಿಕೋನ (viewpoint) ಬದಲಾಯಿಸಿದಂತೆ ಎಂದು ಭಾವಿಸುವುದೂ ಸುಲಭ.

ಯಾವುವು ಆ ಆರು ಟೋಪಿಗಳು?

ಬಿಳಿ ಟೋಪಿ : ಇದನ್ನು ಧರಿಸಿದಾಗ ಸಮಸ್ಯೆ/ಸವಾಲಿನ ಕುರಿತಾದ ದತ್ತಾಂಶ ಸಂಗ್ರಹಣೆಯತ್ತ ಮಾತ್ರ ಚಿಂತನೆಯ ಕೇಂದ್ರೀಕರಣ. ಸಮಸ್ಯೆಗೆ ಸಂಬಂಧಿಸಿದಂತೆ ಯಾವ ಮಾಹಿತಿ ಲಭ್ಯವಿದೆ, ಯಾವುದನ್ನು ಲಭ್ಯವಾಗಿಸಿಕೊಳ್ಳಬೇಕು ಇತ್ಯಾದಿಯ ಕೂಲಂಕಷ ಅವಗಾಹನೆ. ಪರಿಹಾರದ ಕುರಿತು ಈ ಟೋಪಿಯದು ತಟಸ್ಥ ಧೋರಣೆಯೆಂದೇ ಹೇಳಬಹುದು. ಇದೇನಿದ್ದರೂ ಸಾಧ್ಯವಿದ್ದಷ್ಟೂ ಅಂಕಿಅಂಶ-ಮಾಹಿತಿಗಳನ್ನು ಸಂಗ್ರಹಿಸುವುದರಲ್ಲಿ ಮಾತ್ರ ತಲ್ಲೀನ.

ಕೆಂಪು ಟೋಪಿ : ಸಮಸ್ಯೆಯ ಸುತ್ತಮುತ್ತಲಿನ ವ್ಯಕ್ತಿಗಳ (ಅವರು ಸಮಸ್ಯೆಗೆ ಕಾರಣವಾದವರೂ ಇರಬಹುದು, ಸಮಸ್ಯೆಯ ಒಂದು ಭಾಗವಾಗಿರುವವರೂ ಇರಬಹುದು ಅಥವಾ ಸಮಸ್ಯೆಯ ಪರಿಹಾರದಲ್ಲಿ ನೆರವಾಗಬಲ್ಲವರೂ ಆಗಿರಬಹುದು) ಭಾವನೆಗಳ ತೌಲನಿಕ ಪರಿಶೀಲನೆ ಕೆಂಪು ಟೋಪಿಯ ಜವಾಬ್ದಾರಿ. ಇಲ್ಲಿ ಒಣ ಅಂಕಿಅಂಶಗಳಿಗೆ, ತರ್ಕಗಳಿಗೆ ಆಸ್ಪದವಿಲ್ಲ. ‘ನನ್ನ ಗಟ್‌ ಫೀಲಿಂಗ್‌ ಪ್ರಕಾರ....’ ಎಂದು ನಾವು ಹೇಳಿಕೊಳ್ಳುವುದಿದೆಯಲ್ಲ? ಮನಸ್ಸು-ಹೃದಯಗಳ ವ್ಯವಹಾರ ಏನು ನಡೆದಿದೆಯೆಂಬುದಕ್ಕೆ ಕೆಂಪುಟೋಪಿಯದು ಹೆಚ್ಚಿನ ಒತ್ತು. ಅದಕ್ಕೇ ನೆನಪಿಟ್ಟುಕೊಳ್ಳಲಿಕ್ಕೆ ಸುಲಭವಾಗಿ ಹೃದಯದ ಬಣ್ಣ - ಕೆಂಪು - ಈ ಟೋಪಿಗೆ.

ಕಪ್ಪು ಟೋಪಿ : ಸೈತಾನನ ವಕೀಲ (Devil’s advocate) ಎಂಬುದನ್ನು ನೆನಪಿಟ್ಟುಕೊಂಡರೆ ಸಾಕು, ಕಪ್ಪು ಟೋಪಿ ಏನೇನು ಕಿತಾಪತಿ ಮಾಡುತ್ತದೆಯೆಂಬುದನ್ನು ಅರ್ಥೈಸಿಕೊಳ್ಳಲು. ನಿಜವಾಗಿಯೂ ಅದಕ್ಕೆ ವಕೀಲನಂತೆಯೇ ಪ್ರಶ್ನಿಸುತ್ತ ಹೋಗುವ ಬುದ್ಧಿ. ಯಾರಾದರೊಬ್ಬರು ಪರಿಹಾರವನ್ನು ಸೂಚಿಸಿದರೂ ಸುಲಭದಲ್ಲಿ ಒಪ್ಪಿಕೊಳ್ಳದೆ, ಆ ಪರಿಹಾರದ ಕೆಡುಕುಗಳೇನು, ಅದನ್ನು ಅನುಸರಿಸಿದ್ದೇ ಆದರೆ ದುಷ್ಪರಿಣಾಮಗಳೇನು, ಅದ್ಯಾಕೆ ಹಾಗೆ, ಇದ್ಯಾಕೆ ಹೀಗೆ ಎನ್ನುತ್ತ ಪ್ರಶ್ನೆ ಮೇಲೆ ಪ್ರಶ್ನೆ ಎತ್ತುವ ಡ್ರಿಲ್‌ ಮಾಸ್ಟರ್‌ ಈ ಕಪ್ಪು ಟೋಪಿ. ನಿರಾಶಾವಾದಿ ಎಂದು ಸುಲಭದಲ್ಲಿ ಕರೆಯಬಹುದಾದ ಇದು worst case scenareoವನ್ನಷ್ಟೇ ಯೋಚಿಸುವುದು.

ಹಳದಿ ಟೋಪಿ : ಮೇಲಿನ ಕಪ್ಪು ಟೋಪಿ ಎಷ್ಟು ನಿರಾಶಾವಾದಿಯೋ ಅದಕ್ಕೆ ತದ್ವಿರುದ್ಧವಾಗಿ ಅಷ್ಟೇ ಪ್ರಮಾಣದಲ್ಲಿ ಆಶಾವಾದಿ ಈ ಹಳದಿ ಟೋಪಿ. ಸೂರ್ಯಕಾಂತಿ ಹೂವಿನ ಹಳದಿಬಣ್ಣವನ್ನು ನೆನಪಿಟ್ಟುಕೊಳ್ಳಲಿಕ್ಕೆ ಉಪಯೋಗಿಸಬಹುದು, ಯಾಕೆಂದರೆ ಸೂರ್ಯಕಾಂತಿ ಹೂವು ಸದಾ ಸೂರ್ಯಾಭಿಮುಖಿಯಾಗಿರುವಂತೆ ಹಳದಿ ಟೋಪಿಯ ಚಿಂತನೆಯೂ ಸದಾ ಒಳ್ಳೆಯ ಅಂಶಗಳ ಮೇಲೆಯೇ. ಸಮಸ್ಯೆಯ ಪರಿಹಾರದಲ್ಲಿ ಪ್ರಯೋಜನಗಳೆಷ್ಟು, ಸುಧಾರಣೆಗೆ ಇನ್ನೂ ಹೆಚ್ಚಿನ ಅವಕಾಶಗಳೆಷ್ಟು, ಒಟ್ಟಾರೆಯಾಗಿ Best possible outcome ಏನು ಮುಂತಾಗಿ ಹಳದಿ ಟೋಪಿಗೆ ಎಲ್ಲವೂ ‘ಒಳ್ಳೆಯದೇ’ ದೃಷ್ಟಿಗೆ ಬೀಳುವುದು.

ಹಸಿರು ಟೋಪಿ : ಬೀಜದ ಮೊಳಕೆಯಾಡೆದು ಹೊರಬರುವ ಸಸಿಯನ್ನು ಹೋಲಿಸಿ ಹಸಿರುಬಣ್ಣವನ್ನು ನೆನಪಿಟ್ಟುಕೊಳ್ಳಬೇಕು. ಯಾಕೆಂದರೆ ಹಸಿರು ಟೋಪಿಯದು ಯಾವಾಗಲೂ ಸೃಜನಶೀಲತೆ, ಹೊಸವಿಧಾನಗಳು, ಹೊಸ ಆವಿಷ್ಕಾರಗಳು... ಇತ್ಯಾದಿ ಹೊಸತು ಹೊಸತುಗಳ ಹರಿವಿನತ್ತ ಕೇಂದ್ರೀಕರಣ. ನಿಂತನೀರಿನಂತೆ ಸಮಸ್ಯೆಯ ಕೊಚ್ಚೆಯಲ್ಲೇ ಬಿದ್ದಿರುವುದು ಇದಕ್ಕೆ ಸುತಾರಾಂ ಇಷ್ಟವಿಲ್ಲ.

ನೀಲಿ ಟೋಪಿ : ಮೇಲಿನ ಐದೂ ಟೋಪಿಗಳಿಗೆ ಒಂಥರಾ ‘ನಿಯಂತ್ರಕ/ ನಿರ್ದೇಶಕ’ನ ಪಾತ್ರ ವಹಿಸುವ ಜವಾಬ್ದಾರಿ ನೀಲಿ ಟೋಪಿಯದು. ನೀಲಾಕಾಶವನ್ನು ಅಥವಾ ನೀಲಿಬಣ್ಣದಲ್ಲಿ ಕಾಣುವ ಅಗಾಧ ಜಲರಾಶಿಯನ್ನು ಹೋಲಿಸಿ ಈ ಟೋಪಿಯ ಓವರ್‌ಆಲ್‌ ಕಮಾಂಡಿಂಗ್‌ ಗುಣವನ್ನು ನೆನಪಿಟ್ಟುಕೊಳ್ಳಬಹುದು. ಟೋಪಿಗಳ ಸಭೆ ನಡೆದದ್ದೇ ಆದರೆ ಅದಕ್ಕೆ ಅಧ್ಯಕ್ಷತೆ ನಿರ್ವಿವಾದವಾಗಿ ನೀಲಿ ಟೋಪಿಯದು.

ಟೋಪಿಗಳ ಬಣ್ಣಗಳು ಮತ್ತು ಅವುಗಳ ಪಾತ್ರಗಳ ಪರಿಚಯ ಮಾಡಿಕೊಂಡ ಮೇಲೆ ಈಗ ಒಂದು ಸಮಸ್ಯೆಯ ಪರಿಹಾರದಲ್ಲಿ ಅಥವಾ ಯೋಜನೆಯ ಅನುಷ್ಠಾನದಲ್ಲಿ ಯಾವ ರೀತಿ ಈ ಎಲ್ಲ ಟೋಪಿಗಳನ್ನೂ ಪರಿಣಾಮಕಾರಿಯಾಗಿ ಉಪಯೋಗಿಸಿ ಗರಿಷ್ಠ ಫಲಿತಾಂಶವನ್ನು ಪಡೆಯಬಹುದು ಎಂಬುದನ್ನು ನೋಡೋಣ.

ನಿಮ್ಮ ಕಾರ್ಯಾಲಯದ ಅಥವಾ ಸಂಘಸಂಸ್ಥೆಯ ಅಥವಾ ನಿಮ್ಮದೇ ಕುಟುಂಬದೊಳಗಿನ ಒಂದು ಔಪಚಾರಿಕ ಅಥವಾ ಅನೌಪಚಾರಿಕ ಸಭೆಯನ್ನು (ಮೀಟಿಂಗ್‌) ಪರಿಗಣಿಸಿ. ಸಭಾಧ್ಯಕ್ಷ(ಕ್ಷೆ) ಆಗಿರುವವರು ನೀಲಿ ಟೋಪಿ ಧರಿಸಿದಂತೆ. ಸಭೆಯ ಯಾವತ್ತೂ ಕಲಾಪಗಳ ಸಂಪೂರ್ಣ ನಿಯಂತ್ರಣ ಅವರ ಕೈಯಲ್ಲಿ. ಮಾತ್ರವಲ್ಲ, ಸಭೆಯ ಸದಸ್ಯರೆಲ್ಲ ಬೇರೆಬೇರೆ ಬಣ್ಣಗಳ ಟೋಪಿಗಳನ್ನು ಪ್ರತಿನಿಧಿಸುವಂತೆ, ಒಬ್ಬೊಬ್ಬರೂ ಟೋಪಿಗಳನ್ನು ಬದಲಾಯಿಸುತ್ತ ಇರುವಂತೆ ನೋಡಿಕೊಳ್ಳುವುದು ನೀಲಿ ಟೋಪಿಯ ಜವಾಬ್ದಾರಿ.

ಮೀಟಿಂಗ್‌ನ ಆರಂಭಕ್ಕೆ ಎಲ್ಲರೂ ಬಿಳಿ ಟೋಪಿಗಳಾಗಿರಬೇಕು. ಸಮಸ್ಯೆಯ ಬಗ್ಗೆ ಸಮಗ್ರವಾಗಿ ಮಾಹಿತಿ ಸಂಗ್ರಹಣೆ ಆಗ ಪ್ರಾಥಮಿಕ ಅಗತ್ಯ. ಅದಾದ ಬಳಿಕ ಎಲ್ಲರೂ ಕೆಂಪು ಟೋಪಿಗಳಾಗಬಹುದು. ಸಮಸ್ಯೆ ಭಾವನಾತ್ಮಕವಾಗಿ ಎಷ್ಟು ಗಂಭೀರವಾಗಿದೆ, ಪರಿಹಾರವು ಹೃದಯ-ಮನಸ್ಸುಗಳನ್ನೆಷ್ಟು ಪ್ರಪುಲ್ಲಗೊಳಿಸಬಹುದು ಇತ್ಯಾದಿ ಇಮೋಷನಲ್‌/ಸೆಂಟಿಮೆಂಟಲ್‌ ವಾಗ್ವಾದಗಳು ನಡೆಯುವುದು/ನಡೆಯಬೇಕಾದ್ದು ಆ ಹಂತದಲ್ಲಿ. ಆಮೇಲೆ ಕಪ್ಪು ಟೋಪಿ. ಪರಿಹಾರ ಇದೆಯೇನೋ ಹೌದು, ಆದರೆ ಅದನ್ನು ಊರ್ಜಿತಗೊಳಿಸುವುದು ಸಾಧ್ಯವೇ? ಅಡ್ಡಪರಿಣಾಮಗಳೇನಾಗಬಹುದು? ಇದ್ದ ಸಮಸ್ಯೆಯೇ ಉಲ್ಬಣವಾಗಬಹುದೇ? ಇವೇ ಮುಂತಾದ ಪ್ರಶ್ನೆಗಳು ಆಗ ಎಲ್ಲರ ಮುಖದಲ್ಲೂ. ಅದಾದಮೇಲೆ ಹಳದಿ ಟೋಪಿ. ಎಲ್ಲ ಸುಸೂತ್ರವಾಗಿಯೇ, ಕ್ರಮಬದ್ಧವಾಗಿಯೇ ಇದೆ... ಸುರಂಗದ ಕೊನೆಯಲ್ಲಿ ಬೆಳಕು ಗೋಚರಿಸುತ್ತಿದೆ... ಎಂಬ ಆಶಾವಾದಿ ಲಹರಿಗಳು. ಜತೆಜತೆಗೇ ಹಸಿರು ಟೋಪಿಯ ರಂಗಪ್ರವೇಶ; ಹೊಸದೇನನ್ನು ಅಳವಡಿಸಿಕೊಳ್ಳಬಹುದು, ಪರ್ಯಾಯ ಉಪಾಯಗಳೇನು, ಈ ಪರಿಹಾರವನ್ನಷ್ಟೇ ಅಲ್ಲದೆ ಇನ್ನೂ ಏನನ್ನು ಕಾರ್ಯಗತಗೊಳಿಸಬಹುದು ಎಂಬ ನವಪಲ್ಲವದ ಚಿಂತನೆ!

*

ಐಬಿಎಂ, ಬ್ರಿಟಿಷ್‌ ಏರ್‌ವೇಸ್‌, ಮೊಟೊರೊಲಾ, ಸೀಮನ್ಸ್‌, ಪೆಪ್ಸಿ, ಮೈಕ್ರೊಸೊಫ್ಟ್‌ ಮೊದಲಾದ ಬಹುರಾಷ್ಟ್ರೀಯ ಕಂಪೆನಿಗಳೆಲ್ಲ ತಮ್ಮ ಆಡಳಿತ ಕಾರ್ಯವೈಖರಿಯಲ್ಲಿ ‘ಆರು ಟೋಪಿ ಚಿಂತನೆ’ಯನ್ನು ಅಳವಡಿಸಿಕೊಂಡು ಅದರ ಪ್ರಯೋಜನವನ್ನು ಮನಗಂಡಿವೆ; ಸಂಸ್ಥೆಯ ಮುನ್ನಡೆಗೆ ಮಾನವಸಂಪನ್ಮೂಲಗಳ ಪರಿಣಾಮಕಾರಿ ಬಳಕೆಯಲ್ಲಿ ಇದೂ ಒಂದು ಎಂಬುದು ಸಾಬೀತಾಗಿದೆ. ಡಾ। ಎಡ್ವರ್ಡ್‌ ಡೆಬೊನೊ ರೂಪಿಸಿಕೊಟ್ಟಿರುವ ಸರಳಸೂತ್ರವು ವಿಶ್ವಾದ್ಯಂತ ಹೆಸರುಗಳಿಸುತ್ತಿದೆ. ಅಮೆರಿಕದಲ್ಲಂತೂ ಶಾಲೆ-ಕಾಲೇಜುಗಳಲ್ಲೇ ಪಠ್ಯವಿಷಯವಾಗಿ ಕಲಿಸಲ್ಪಡುತ್ತಿದೆ!

ಹಾಗೆ ನೋಡಿದರೆ, ವಿಭಿನ್ನ ದೃಷ್ಟಿಕೋನಗಳಿಂದ ಸಮಸ್ಯೆಯ, ಯೋಜನೆಯ ಬಗ್ಗೆ ಚಿಂತನೆನಡೆಸುವುದು ಹೊಸ ವಿಚಾರವೇನೂ ಅಲ್ಲ. ಮದುವೆಯಾಗಲು ಹೆಣ್ಣುನೋಡುವುದೇ ಮೊದಲಾದ ವೈಯಕ್ತಿಕ ನಿರ್ಧಾರಗಳಿಂದ ಹಿಡಿದು, ಆಸ್ತಿ ಖರೀದಿ, ಬಂಡವಾಳ ತೊಡಗಿಸುವಿಕೆ ಮೊದಲಾದ ವಾಣಿಜ್ಯ ವ್ಯವವಾರಗಳಲ್ಲಿ ಸಹ ಸಾಕಷ್ಟು ಮಟ್ಟದಲ್ಲಿ ಚಿಂತನೆ ನಡೆಸಿಯೇ (ಬೇಕಿದ್ದರೆ ಅಗತ್ಯಕ್ಕಿಂತ ಹೆಚ್ಚೇ ಮೀನಮೇಷ ಎಣಿಸಿ) ನಾವೆಲ್ಲ ಅಂತಿಮ ನಿರ್ಧಾರಕ್ಕೆ ಬರುವುದು. ಆದರೆ ಹುಲುಮಾನವರಾದ ನಮಗೆ ‘ಆಲೋಚನೆಗಳಲ್ಲಿ ಗೊಂದಲ’ಗಳಿರುವ ಸಂಭವಗಳೇ ಹೆಚ್ಚು. ಆ ನಿಟ್ಟಿನಲ್ಲಿ, ಕ್ರಮಬದ್ಧವಾದ ಯೋಚನಾಸರಣಿಯನ್ನು ರೂಪಿಸುವ ಈ ‘ಆರು ಟೋಪಿ ವಿಧಾನ’ ಕೇವಲ ಕಾರ್ಪೊರೇಟ್‌ ಪ್ರಪಂಚಕ್ಕೆ ಮಾತ್ರವಲ್ಲ, ನಮ್ಮ-ನಿಮ್ಮ ವೈಯಕ್ತಿಕ ಬದುಕಿನ ಬಂಡಿ ಮುನ್ನಡೆಯಲಿಕ್ಕೂ ಒಂದು ಒಳ್ಳೆಯ ಕೀಲೆಣ್ಣೆಯಾದೀತು!

ಒಮ್ಮೆ ಯಾವುದಾದರೂ ಸೂಕ್ತ ಸಂದರ್ಭದಲ್ಲಿ ಆರು ಟೋಪಿ ಧರಿಸಿನೋಡಿ!

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more