ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಪಿ ಬೀಜಗಳಿಂದಾಗಿ (ಬೇ)ಗಲ್ಲು ಶಿಕ್ಷೆ?

By Staff
|
Google Oneindia Kannada News

ಪಾಪಿ ಬೀಜಗಳಿಂದಾಗಿ (ಬೇ)ಗಲ್ಲು ಶಿಕ್ಷೆ?
ನೋಡೋದಕ್ಕೆ ಉದ್ದಿನ ವಡೆಯಂತಿರುವ ಬೇಗಲ್‌, ಅಮೆರಿಕದವರಿಗೆ ಅಚ್ಚುಮೆಚ್ಚು. ಸಾಮಾನ್ಯವಾಗಿ ಇದು, ಬ್ರೇಕ್‌ಫ‚ಾಸ್ಟ್‌/ಸ್ನ್ಯಾಕ್‌ ಐಟಂಗಳಲ್ಲೊಂದು. ಬೇಗಲ್‌ ಒಂದೊಂದು ಸಲ ಸಕ್ಕತ್‌ ದಾರಿ ತಪ್ಪಿಸುತ್ತದೆ! ಅಮಾಯಕರನ್ನು ಅರೋಪಿಗಳ ಸ್ಥಾನದಲ್ಲಿ ಕೂರಿಸುತ್ತದೆ! ಹೀಗಾಗಿಯೇ ಅಮೆರಿಕ ಜೈಲುಗಳಲ್ಲಿ ಬೇಗಲ್‌ಗೆ ನೋ ಎಂಟ್ರಿ. ಏನಿದರ ಕತೆ? ವಿಚಿತ್ರಾನ್ನ-188ನೇ ಸಂಚಿಕೆಯಲ್ಲಿ ಬೇಗಲಾಖ್ಯಾನ. ಒಂದು ರುಚಿಮಯ ಹರಟೆ.

Srivathsa Joshi *ಶ್ರೀವತ್ಸ ಜೋಶಿ

ಬಾಗಿಲನು ತೆರೆದು... bagelಅನು ಕೊಡು hurryಯೇ... ಕೂಗಿದರು ಧ್ವನಿ ಕೇಳಲಿಲ್ಲವೆ...?

‘‘ನಿಮಗೆ ಹರಟೆಗೆ ವಿಷಯವೊಂದನ್ನು ಕೊಡುತ್ತಿದ್ದೇನೆ...’’ ಎನ್ನುತ್ತ ಈಮೇಲಿನ ಸಾಲನ್ನು ಈಮೇಲ್‌ನಲ್ಲಿ ನನಗೆ ಬರೆದವರು ನ್ಯೂಜೆರ್ಸಿಯಲ್ಲಿರುವ ಸ್ನೇಹಿತ ದಿನೇಶ್‌ ನೆಟ್ಟರ್‌. ನನ್ನ ಲೇಖನಪಾಕಕ್ಕೆ ಈ ಹಿಂದೆಯೂ ಒಂದೆರಡು ಸಲ ಅವರು ಕಚ್ಚಾಸಾಮಗ್ರಿಯನ್ನು ಒದಗಿಸಿದ್ದಿದೆ, ಒಗ್ಗರಣೆಗೆ ಕರಿಬೇವುಸೊಪ್ಪು ಅಥವಾ ಗಾರ್ನಿಶಿಂಗ್‌ಗೆ ಕೊತ್ತಂಬರಿಸೊಪ್ಪು ಹೆಚ್ಚಿಕೊಟ್ಟದ್ದೂ ಇದೆ. ಇದೀಗ ಈಮೇಲ್‌ ಬಾಕ್ಸ್‌ನ ಬಾಗಿಲ್‌ ತೆರೆದಾಗ ಅಲ್ಲೊಂದು ಬೇಗಲ್‌ ದಯಪಾಲಿಸಿದ್ದಾರೆಂದಮೇಲೆ ಬೇಗ ಬೇಗನೇ ಅದನ್ನು ಪಕಾಯಿಸುವುದು ಒಳಿತೆಂದು ಇವತ್ತು ಬೇಗಲಾಖ್ಯಾನವನ್ನು ಎತ್ತಿಕೊಂಡಿದ್ದೇನೆ. ಇದನ್ನೋದಿದ ನೀವು ಸಿರಿಗನ್ನಡಂ ಗೆಲ್ಗೆ ಎನ್ನುತ್ತೀರೊ ಸಿರಿಗನ್ನಡಂ ಬಾಳ್ಗೆ ಎನ್ನುತ್ತೀರೊ ಅಥವಾ ಸಿರಿಗನ್ನಡಂ ಬೇಗಲ್‌ಗೆ ಎಂದು ಉದ್ಗರಿಸುತ್ತೀರೊ ಅದು ನಿಮ್ಮಿಷ್ಟ!

*

ನಿಮಗೆಲ್ಲ ತಿಳಿದಿರುವಂತೆ (ಈಗಾಗಲೆ ತಿಳಿದಿರದಿದ್ದರೆ ಈ ಹರಟೆಯಿಂದಾದರೂ ತಿಳಿಯುವಂತೆ) ‘ಬೇಗಲ್‌’ ಇಲ್ಲಿ ಅಮೆರಿಕದಲ್ಲಿ ಸಾಮಾನ್ಯವಾಗಿ ಬ್ರೇಕ್‌ಫ‚ಾಸ್ಟ್‌/ಸ್ನ್ಯಾಕ್‌ ಐಟಂಗಳಲ್ಲೊಂದು. ನಮ್ಮ ದೇಶದಲ್ಲಿ ಇಡ್ಲಿ ಇದ್ದಂತೆ ಎಂದು ಹೇಳಬಹುದಾದರೂ ಇಡ್ಲಿಗಿಂತಲೂ ‘ವಡೆ’ ಇದ್ದಂತೆ ಎಂದರೆ ಮತ್ತೂ ಸಮಂಜಸ. ಬೆಳ್ಳಂಬೆಳಿಗ್ಗೆ ಐದೂವರೆ-ಆರಕ್ಕೆಲ್ಲ ಮನೆಯಿಂದ ಹೊರಟು ಟ್ರಾಫಿ‚ಕ್‌ ಹೆಚ್ಚಾಗುವುದರೊಳಗೆ ಆಫಿ‚ೕಸ್‌ ಸೇರಿಕೊಳ್ಳುವ ನೌಕರವರ್ಗ ಆಫಿ‚ೕಸಲ್ಲಿ ಮಾಡುವ ಮೊದಲ (ಮತ್ತು ಪ್ರಮುಖ) ಕೆಲಸವೆಂದರೆ ಕೆಫ‚ೆಟೆರಿಯಾಕ್ಕೆ ಭೇಟಿ. ಒಂದು ಬೇಗಲ್‌, ಅದನ್ನು ಎರಡು ಹೋಳಾಗಿಸಿ ನಡುವೆ ಬೆಣ್ಣೆ ಹಚ್ಚಿಕೊಂಡು ಜತೆಯಲ್ಲೇ ಲಾರ್ಜ್‌ಸೈಜ್‌ ಕಪ್‌ನಲ್ಲಿ ಕರಿಕಾಫಿ‚ ತುಂಬಿಸಿಕೊಂಡು ಕ್ಯೂಬಿಕಲ್‌ಗೆ ಬಂದರೆ ಅವತ್ತಿನ ಈಮೈಲ್‌, ಚಾಟಿಂಗ್‌, ಬ್ರೌಸಿಂಗ್‌, ಬ್ಲಾಗಿಂಗ್‌ಗಳಿಗೆ ರೆಡಿಯಾದಂತೆಯೇ.

ಬೇಗಲ್‌ ನಮ್ಮ ಉದ್ದಿನವಡೆಯಿದ್ದಂತೆ ಎಂದೆನಲ್ಲಾ, ಆ ಹೋಲಿಕೆ ಆಕಾರ(ಸ್ವರೂಪ)ದ ದೃಷ್ಟಿಯಿಂದ ಮಾತ್ರ. ವಡೆಯನ್ನು ಎಣ್ಣೆಯಲ್ಲಿ ಕರಿದು ಮಾಡುವುದಾದರೆ ಬೇಗಲ್‌ಅನ್ನು ಕೊತಕೊತ ಕುದಿಯುವ ನೀರಿನಲ್ಲಿ ಕರಿದು ಮಾಡುವುದು! ಬೇಗಲ್‌ನ ಆಕಾರದ್ದೇ ಆದರೆ ರುಚಿಯಲ್ಲಿ ಸಿಹಿಯಾಗಿರುವುದು ಇನ್ನೊಂದಿದೆ - ಡೊನಟ್‌. ಸಿಹಿ ಇಷ್ಟಪಡುವವರು ಬೆಳಿಗ್ಗೆಬೆಳಿಗ್ಗೆ ಡೊನಟ್‌ ಫಳ್ಹಾರ ಮಾಡುತ್ತಾರೆ. ಬೇಗಲ್ಲು ಡೊನಟ್ಟುಗಳೆಲ್ಲ ಸಿಕ್ಕಾಪಟ್ಟೆ ಫ‚ಾ್ಯಟ್‌ ಕಂಟೆಂಟ್‌ ಎಂದು ತೀರಾ ಆರೋಗ್ಯಕಾಳಜಿಯಿರುವವರು ಮಾತ್ರ ಸಿರಿಯಲ್‌ (cornflakes) ತಿಂತಾರೆ. ಆಫ‚್‌ಕೋರ್ಸ್‌, ದಿನಾ ಅದನ್ನೇ ತಿಂದುತಿಂದು ಬೇಜಾರಾಗಿ ಬಹುಶಃ ‘ಬಾಗಿಲನು ತೆರೆದು ಬೇಗಲನು ಕೊಡು...’ ಎಂದು ಬೇಗಲ್‌ನ ಮೊರೆಹೋಗುತ್ತಾರೆ.

‘ಹೊರ ಆಡಂಬರಗಳ ನಡುವೆ ಅಜ್ಞಾನದ ಶೂನ್ಯ’ ಎಂಬ ತತ್ವಸಿದ್ಧಾಂತವನ್ನು ಪ್ರತಿಬಿಂಬಿಸಲಿಕ್ಕೆಂಬಂತೆ ಇರುವ ಬೇಗಲ್‌, ಡೊನಟ್‌, ಉದ್ದಿನವಡೆಗಳ ಆಕಾರವು ವಿಭಿನ್ನವೂ ವಿಶಿಷ್ಟವೂ ಎಂದು ನಿಮಗೆ ಅನಿಸಿದ್ದಿದೆಯೆ? ಗಣಿತಶಾಸ್ತ್ರ ರೀತ್ಯಾ ರವೆಲಾಡು sphere ಆದರೆ, ಶಂಕರಪೋಳೆ rhombus ಆದರೆ, ಬೇಗಲ್‌ ಡೊನಟ್‌ ಉದ್ದಿನವಡೆಗಳ ಆಕಾರಕ್ಕೆ torus ಎನ್ನುವುದು. ಟೆನ್ನಿಕಾಯ್ಟ್‌ ಆಟದ ರಿಂಗ್‌, ಈಜು ಕಲಿಯುವಾಗಿನ ಸ್ವಿಮ್ಮಿಂಗ್‌ ರಿಂಗ್‌ ಅಥವಾ ಗಾಳಿತುಂಬಿಸಿಟ್ಟ ಟೈರ್‌ ಟ್ಯೂಬ್‌ - ಇವೆಲ್ಲ torus ಆಕಾರಕ್ಕೆ ಉದಾಹರಣೆಗಳು. ನೋಡಲು ತೀರಾ ಸಾಮಾನ್ಯವಾದ ಈ ಆಕಾರವು ರೇಖಾಗಣಿತದ ದೃಷ್ಟಿಯಿಂದ ಮಾತ್ರ ಸಾಕಷ್ಟು ಸಂಕೀರ್ಣ ಆಕಾರಗಳಲ್ಲೊಂದು ಎಂಬುದು ಗಮನಾರ್ಹ. ಯಾಕೆ ಸಂಕೀರ್ಣ ಎನ್ನುವುದೇ ಒಂದು ಪ್ರತ್ಯೇಕ ಲೇಖನಕ್ಕೆ ಸಾಮಗ್ರಿಯಾಗಬಹುದಾದರೂ ಇವತ್ತಿನ ವಿಷಯ ಬೇಗಲ್‌ ಆದ್ದರಿಂದ ಗಣಿತಸೂತ್ರಗಳಿಂದ ನಿಮ್ಮನ್ನು ಕಟ್ಟಿಹಾಕುವುದಿಲ್ಲ, ಚಿಂತಿಸದಿರಿ.

ಬೇಗಲಾಖ್ಯಾನವನ್ನು ಮುಂದುವರಿಸುವ ಮುನ್ನ ಈಗ ಉಪಕಥೆಯಾಗಿ ಒಂದೆರಡು ಪ್ಯಾರಾಗಳಷ್ಟು ಗಸಗಸೆಯನ್ನುದುರಿಸುತ್ತೇನೆ. ಬೇಗಲ್‌ ಎಂದರೇನೆಂದು ಗೊತ್ತಿಲ್ಲದವರಿಗೂ ಗಸಗಸೆ ಖಂಡಿತ ಗೊತ್ತಿದೆಯೆಂದುಕೊಂಡಿದ್ದೇನೆ. ಅಕ್ಕಿಹಿಟ್ಟು + ಬೆಲ್ಲದಪಾಕ ಸೇರಿಸಿ ಚಪ್ಪಟೆಯಾಗಿ ತಟ್ಟಿ ತುಪ್ಪದಲ್ಲಿ ಕರಿದ ‘ಅತಿರಸ’ದ ಮೇಲೆ ನಮ್ಮಮ್ಮ ಒಂದಿಷ್ಟು ಗಸಗಸೆ ಉದುರಿಸುತ್ತಾರೆ. ಅದು ಅತಿರಸದ ರುಚಿಯನ್ನೂ, ಮೆರುಗನ್ನೂ ಹೆಚ್ಚಿಸುತ್ತದೆಯಂತೆ. ಗಸಗಸೆಯದ್ದೇ ಕಡುಬು ಸಹ ಮಾಡುತ್ತಾರೆ, ಗಸಗಸೆ ಪಾಯಸವಂತೂ ನಿಮಗೆ ಗೊತ್ತೇ ಇದೆ! ಮಾವನಮನೆಗೆ ಬಂದ ರಾಯರಿಗೆ ಆ ಹುಣ್ಣಿಮೆರಾತ್ರಿಯಂದು ಊಟದ ಮೆನುನಲ್ಲಿ ಬೆಳ್ಳಿಯಬಟ್ಟಲ ಗಸಗಸೆಪಾಯಸ ಸಹ ಇತ್ತೆಂಬುದನ್ನು ಬೇಕಿದ್ದರೆ ಇನ್ನೊಮ್ಮೆ ‘ರಾಯರು ಬಂದರು ಮಾವನ ಮನೆಗೆ...’ ಹಾಡನ್ನು ಕೇಳಿ ಖಚಿತಪಡಿಸಿಕೊಳ್ಳಿ.

ಗಸಗಸೆಯ ಸುದ್ದಿ ಬರುವಾಗಲೇ ‘ವಸಂತಸೇನೆ’ಯ ಶಕಾರನ ಉಲ್ಲೇಖ ಬರುವುದೊಂದು ರೂಢಿ. ಸಕಾರವನ್ನು ಶಕಾರವಾಗಿ ಉಚ್ಚರಿಸುವ ಆತ, ‘‘ಬಿಶಿಬಿಶಿ ಗಶಗಶೆ ಪಾಯಶ ತಿಂದ್ರೆ ಶೊಗಶಾಗಿ ನಿದ್ರೆ ಬರುತ್ತೆ...’’ ಎನ್ನುವನಂತೆ!

ಗಸಗಸೆಯ ಸಸ್ಯಶಾಸ್ತ್ರೀಯ ಹೆಸರು Papevera Somniferum ಎಂದಾದರೂ ಇಂಗ್ಲಿಷಲ್ಲಿ ಅದನ್ನು Poppy seeds ಅಂತಾರೆ. ಅದನ್ನೇ ನಾನು ಇವತ್ತಿನ ಶೀರ್ಷಿಕೆಯಲ್ಲಿ ಶ್ಲೇಷೆಗಾಗಿ ‘ಪಾಪಿ ಬೀಜಗಳು’ ಎಂದಿದ್ದು. ಏನು ಪಾಪ ಮಾಡಿದವವು? ಬೇಗಲ್ಲು ಶಿಕ್ಷೆ ಯಾಕೆ, ಯಾರಿಗೆ? ಇನ್ನೂ ಒಗಟಾಗಿದೆಯಲ್ಲವೆ, ಅದನ್ನೀಗ ಬಿಡಿಸಿಹೇಳುತ್ತೇನೆ.

*

ಇತ್ತೀಚಿನ ದಿನಗಳಲ್ಲಿ ‘ಡ್ರಗ್‌ ಟೆಸ್ಟ್‌’ ತುಂಬ ಪ್ರಾಮುಖ್ಯವಾಗಿರುವ ಸಂಗತಿ. ಕ್ರಿಮಿನಲ್‌ಗಳು, ವ್ಯಭಿಚಾರಿಗಳು ಇತ್ಯಾದಿಗಳನ್ನಷ್ಟೇ ಅಲ್ಲದೆ ಕ್ರೀಡಾಳುಗಳನ್ನೂ ಸಹ ಉದ್ದೀಪನ ಪರೀಕ್ಷೆಗೆ ಒಳಪಡಿಸಲಾಗುತ್ತದೆ (ಮತ್ತು ಎಷ್ಟೋ ಸಂದರ್ಭಗಳಲ್ಲಿ ಅವರು ಉದ್ದೀಪನ ದ್ರವ್ಯ ಸೇವಿಸಿರುವುದು ಪತ್ತೆಯಾದದ್ದೂ ಇದೆ)! ಅಷ್ಟೆಲ್ಲ ಯಾಕೆ, ಈಗೀಗ ದೊಡ್ಡ ಕಂಪೆನಿಗಳಲ್ಲಿ ಉದ್ಯೋಗಕ್ಕೆ ಸೇರುವ ಮುನ್ನ, ಉದ್ಯೋಗಿಗಳಾದವರಿಗೆ ಅನಂತರವೂ ಕಾಲಾನುಕಾಲಕ್ಕೆ ಡ್ರಗ್‌ ಟೆಸ್ಟಿಂಗ್‌ ನಡೆಯುತ್ತದೆ. ವಿಶ್ವಾಸ, ನಿಷ್ಠೆ, ನಂಬಿಕೆಗಳೆಲ್ಲ ನಲುಗಿಹೋಗಿರುವ ಇವತ್ತಿನ ಕಮರ್ಷಿಯಲ್‌ ಜಗತ್ತಿನಲ್ಲಿ ಯಾರು ಯಾವ ಮುಖವಾಡ ಹಾಕಿ ಸುಭಗತನ ತೋರಿಸುತ್ತ ಒಳಗೆ ಎಷ್ಟು ಕೆಟ್ಟವರಾಗಿರುತ್ತಾರೆಂದು ಬಲ್ಲವರಾರು, ಅದಕ್ಕಾಗಿ ಸರ್ವವಿಧದ ಪರೀಕ್ಷೆಗಳು, ತಪಾಸಣೆಗಳು. ಏನು ಮಾಡುವುದು, ನಮ್ಮನ್ನು ನಾವೇ ಹಳಿದುಕೊಳ್ಳಬೇಕಷ್ಟೆ.

ಹೆಚ್ಚಾಗಿ ಮೂತ್ರಪರೀಕ್ಷೆ ಅಥವಾ ರಕ್ತಪರೀಕ್ಷೆಯ ಮೂಲಕ ವ್ಯಕ್ತಿ ಮಾದಕದ್ರವ್ಯ ಸೇವಿಸಿದ್ದಾನೆಯೆ ಇಲ್ಲವೆ ಎಂದು ತಪಾಸಣೆ ನಡೆಸುವುದು ರಿವಾಜು. ಈ ಪರೀಕ್ಷೆಗಳು ಬಹುತೇಕವಾಗಿ ನಿಖರ ಮಾಹಿತಿಯನ್ನೊದಗಿಸುತ್ತವೆಯಾದರೂ ಕೆಲವೊಮ್ಮೆ ಮುಜುಗರ ತರುವಂಥ ಫಲಿತಾಂಶಗಳು, ಎಡವಟ್ಟುಗಳು ನಡೆಯುವುದಿದೆ. ಗಸಗಸೆ ಬೀಜಗಳನ್ನುದುರಿಸಿದ ಬೇಗಲ್‌, ಮಫಿ‚ನ್‌ ಅಥವಾ ಕೇಕ್‌ ತಿಂದ ಒಂದೆರಡು ದಿನಗಳೊಳಗೆ ರಕ್ತಪರೀಕ್ಷೆ/ಮೂತ್ರಪರೀಕ್ಷೆ ಮಾಡಿಸಿದ್ದರೆ ಅಫಿ‚ೕಮು ಅಂಶ ಕಂಡುಬಂದು ಟೆಸ್ಟ್‌ ಪಾಸಿಟಿವ್‌ ಎನಿಸಿಕೊಳ್ಳುವುದು ಅಂಥ ಎಡವಟ್ಟುಗಳಲ್ಲೊಂದು!

ಅತಿಯಾಗಿ ಸೇವಿಸಿದರೆ ಗಸಗಸೆ ನಿಜವಾಗಿಯೂ ಒಂದು ಮಾದಕಪದಾರ್ಥ. ಗಸಗಸೆ ಬೀಜದಲ್ಲಿರುವ ಮೊಫಿ‚ರ್ನ್‌ ಮತ್ತು ಕೊಡೈನ್‌ ಅಂಶಗಳು (ಇವನ್ನು Opiates ಎನ್ನುತ್ತಾರೆ) ಮೂತ್ರದಲ್ಲಿ ಕರಗಿರುತ್ತವೆ. ಗಸಗಸೆ ಹಾಕಿರುವ ಒಂದು ಬೇಗಲ್‌ ತಿಂದರೂ ಸಾಕು, 48 ಗಂಟೆಗಳೊಳಗೆ ಮೂತ್ರಪರೀಕ್ಷೆಗೊಳಗಾದರೆ ವ್ಯತಿರಿಕ್ತ ಫಲಿತಾಂಶವನ್ನು ತೋರಿಸುತ್ತದೆ.

ಈಗ್ಗೆ ಹತ್ತಿಪ್ಪತ್ತು ವರ್ಷಗಳ ಹಿಂದೆ ಅಮೆರಿಕದ ಸೈಂಟ್‌ ಲೂಯಿಸ್‌ನಲ್ಲಿ ಒಬ್ಬ ಪೊಲಿಸ್‌ ಆಫಿ‚ೕಸರ್‌ಗೆ ಹಾಗೇ ಆಯ್ತಂತೆ. ಯಾವೊಂದು ದುರ್ವ್ಯಸನಗಳಿಲ್ಲದೆ ಸೀದಾಸಾದಾ ಮನುಷ್ಯನಾಗಿದ್ದ ಆತ ಇಲಾಖೆಯ ಸರ್ಪ್ರೈಸ್‌ ಡ್ರಗ್‌ಟೆಸ್ಟ್‌ಗೊಳಗಾದ. ಅವನ ದುರದೃಷ್ಟವೊ ಎಂಬಂತೆ ಟೆಸ್ಟ್‌ಗೆ ಹಿಂದಿನದಿನವಷ್ಟೇ ಆತ ನಾಲ್ಕು ಬೇಗಲ್‌ಗಳನ್ನು (poppy seed bagels) ಚಪ್ಪರಿಸಿದ್ದನಂತೆ. ಮೂತ್ರಪರೀಕ್ಷೆಯಾದಾಗ ಮೊಫಿ‚ರ್ನ್‌ ಅಂಶ ಕಂಡುಬಂದುದರಿಂದ ಮಿಸ್ಟರ್‌ ಕ್ಲೀನ್‌ ಇಮೇಜ್‌ನ ಆ ಆಫಿ‚ೕಸರನನ್ನು ಕೆಲಸದಿಂದ ತೆಗೆದುಹಾಕಲಾಯಿತು! ಸರಕಾರದ ಕ್ರಮದ ವಿರುದ್ಧ ವ್ಯಾಜ್ಯ ಹೂಡಿದ ಆತ, ಮೂತ್ರದಲ್ಲಿನ ಮೊಫಿ‚ರ್ನ್‌ ಅಂಶಕ್ಕೆ ಬೇಗಲ್‌ನಲ್ಲಿದ್ದ ಗಸಗಸೆಯೇ ಕಾರಣ ಹೊರತು ಬೇರೆ ಮಾದಕದ್ರವ್ಯ ತಾನು ಸೇವಿಸಿರಲಿಲ್ಲವೆಂದು ಸಾಬೀತುಪಡಿಸಿ ಕೊನೆಗೂ ಆ ಕೇಸನ್ನು ಗೆದ್ದುಬಿಟ್ಟ! ಕೆಲಸದಿಂದ ತೆಗೆದುಹಾಕಿದ್ದ ಅವಧಿಯ ಸಂಬಳವನ್ನೂ ಕೊಟ್ಟು ಮತ್ತೆ ಅವ-ನನ್ನು ಕೆಲಸಕ್ಕೆ ಸೇರಿಸಿಕೊಳ್ಳಲಾಯಿತು.

ಗಸಗಸೆಯಿದ್ದ ಬೇಗಲ್ಲೇ ಈ ಎಡವಟ್ಟಿಗೆ ಕಾರಣ ಎಂದು ರುಜುಪಡಿಸಿದ್ದು ಇನ್ನೊಬ್ಬ ಆರೋಗ್ಯವಂತ ಆಫಿ‚ೕಸರನಿಗೆ ಅಂತಹದೇ ಬೇಗಲ್‌ ತಿನ್ನಿಸಿ ಮಾರನೆದಿನ ಅವನ ಮೂತ್ರಪರೀಕ್ಷೆ ಮಾಡಿ ಮೊಫಿ‚ರ್ನ್‌ ಅಂಶ ಕಂಡುಕೊಳ್ಳುವುದರ ಮೂಲಕ. ಆಮೇಲೆ ನ್ಯೂಜೆರ್ಸಿ, ಫ‚ೊ್ಲರಿಡಾ ಇತ್ಯಾದಿ ಬೇರೆಡೆಗಳಲ್ಲೂ ಇದೇ ರೀತಿಯ ಎಡವಟ್ಟು ಸಂಭವಿಸಿದ್ದು ಲಕ್ಷಗಟ್ಟಲೆ ಡಾಲರ್‌ಗಳ ಕೇಸುಗಳನ್ನು ಜಯಿಸಿಕೊಂಡಿದ್ದಾರೆ ಬೇಗಲ್‌ ಭಕ್ಷಕರು!

ಬೇಗಲ್‌-ಗಸಗಸೆಯ ಈ ಚೋದ್ಯದ ನಂತರ ಈಗ ಅಮೆರಿಕ ಸರಕಾರವು ಜೈಲುನಿಯಮಗಳಿಗೆ ಹೊಸ ಸೇರ್ಪಡೆಯನ್ನು ತಂದಿದೆ. ಅದರ ಪ್ರಕಾರ ಜೈಲಿನಲ್ಲಿರುವ ಯಾವುದೇ ಕೈದಿಯು ಗಸಗಸೆಯಿರುವ ಆಹಾರಪದಾರ್ಥವನ್ನು ಸೇವಿಸುವಂತಿಲ್ಲ. ಆ ನಿಯಮವಿಲ್ಲದಿದ್ದರೆ, ನಿಜವಾಗಿ ಅಫಿ‚ೕಮು ಸೇವಿಸಿ ಮಜಾ ಉಡಾಯಿಸಿದವರೂ ಮೂತ್ರಪರೀಕ್ಷೆಯಲ್ಲಿ ಸಿಕ್ಕಿಬಿದ್ದಾಗ, ‘‘ಇಲ್ಲಪ್ಪ ನಾನು ನಿನ್ನೆ ಒಂದೆರಡು ಬೇಗಲ್ಸ್‌ ತಿಂದಿದ್ದೆ, ಹಾಗಾಗಿ ಟೆಸ್ಟ್‌ ಪಾಸಿಟಿವ್‌ ಆಗಿರಬಹುದು’’ ಎನ್ನುವ ಸಂಭವವಿರುತ್ತದೆಯಲ್ಲ! ಜೈಲಿನ ಆವರಣದಲ್ಲಿ poppy seeds prohibited ಎಂದಮೇಲೆ ಮುಗಿಯಿತು.

ಹಾಗಾಗಿ, ಅಮೆರಿಕದಲ್ಲಿ ‘ಮಾವನ ಮನೆ’ಗೆ ರಾಯರು ಬಂದರೆ ಅವರಿಗೆ ಬೆಳ್ಳಿಯಬಟ್ಟಲ ಗಸಗಸೆಪಾಯಸದ ಆತಿಥ್ಯ ಸಿಗುವುದಿಲ್ಲ; ಬಾಗಿಲನು ತೆರೆದು ಬೇಗಲನು ಕೊಡು ಎಂದು ಜೈಲರನಲ್ಲಿ ಮೊರೆಯಿಟ್ಟರೆ ಅದೂ ಸಿಗುವುದಿಲ್ಲ!

*

ಈವಾರ ಒಂದು ರಸಪ್ರಶ್ನೆ ಇದೆ. ಅಕ್ಷರಶಃ ಬಾಯಲ್ಲಿ ರಸ ತರಿಸುವ ಪ್ರಶ್ನೆ. ಬೇಗಲ್‌ ಆಕಾರದ, ಅಂದರೆ ಗಣಿತರೀತ್ಯಾ ಠಿಟ್ಟ್ಠಠ ಆಕಾರದ, ಪುಟ್ಟದಾದ ಆದರೆ ಅತಿಜನಪ್ರಿಯ ಮಿಂಟ್‌ ಯಾವುದು? (ಮಿಂಟ್‌ ಅಂದಿದ್ದೇನಾದ್ದರಿಂದ ಹಿಂಟ್‌ ಬೇಡ ತಾನೆ?)

ಉತ್ತರ ಕಳಿಸಲು ವಿಳಾಸ - [email protected]


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X