• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮರ್ಫಿಯ ನಿಯಮ ಮತ್ತು ಬರ್ಫಿಯ ನಿಯಮ

By Staff
|
(ವಿಚಿತ್ರಾನ್ನದ ಸಮಸ್ತ ಓದುಗಬಳಗಕ್ಕೆ ಭಾರತ ಸ್ವಾತಂತ್ರ್ಯೋತ್ಸವದ ಶುಭಕಾಮನೆಗಳು. ಸ್ವಾಂತಂತ್ರ್ಯದಿನದಂದು ಸ್ವಾತಂತ್ರ್ಯದಿನದ ಬಗ್ಗೆ ಅಲ್ಲದೆ ಬೇರೆ ವಿಷಯದ ಕುರಿತು ಬರೆಯುವ ನನ್ನ ಸ್ವಾತಂತ್ರ್ಯವನ್ನು ಮತ್ತು ಓದುವ ನಿಮ್ಮ ಸ್ವಾತಂತ್ರ್ಯವನ್ನು ಉಪಯೋಗಿಸಿ ಇವತ್ತಿನ ಸ್ವಾತಂತ್ರ್ಯೇತರ ವಿಷಯದ ಸಂಚಿಕೆಯನ್ನು ಸಾದರಪಡಿಸಿದ್ದೇನೆ. -ಜೋಶಿ)

*ಶ್ರೀವತ್ಸ ಜೋಶಿ

Murphyಕೈಮೀರಿದ ಏನೋ ಒಂದು ಅಚಾತುರ್ಯ ಸಂಭವಿಸಿದರೆ ಆಗ ‘ಮರ್ಫಿಯ ನಿಯಮ’ ಎಂದು ಸಬೂಬು ಹೇಳಿ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವವರನ್ನು ನೀವು ಕಂಡಿರಬಹುದು. ಅಥವಾ ನಿಮಗೇ ಆ ಥರದ ಅನುಭವವಾಗಿರಲೂಬಹುದು. ಸ್ಟೇಜ್‌ ಮೇಲೆ ಸುಶ್ರಾವ್ಯ ಸಂಗೀತದ ಮಧ್ಯೆ ಮೈಕ್‌ ಕೈಕೊಡುವುದರಿಂದ ಹಿಡಿದು ಏರ್‌ಪೋರ್ಟ್‌ಗೆ ಹೋಗುವ ರಸ್ತೆಯಲ್ಲಿ ಸಿಕ್ಕಾಪಟ್ಟೆ ಟ್ರಾಫಿಕ್‌ನಿಂದಾಗಿ ಸಮಯಕ್ಕೆ ಸರಿಯಾಗಿ ತಲುಪಲಾಗದೆ ಫ‚ೆ್ಲೖಟ್‌ ತಪ್ಪಿಸಿಕೊಳ್ಳುವವರೆಗೂ ನಮ್ಮ ದೈನಂದಿನ ಜೀವನದಲ್ಲಿ ಎಷ್ಟೋ ಸಲ ಅನಪೇಕ್ಷಿತ ಸಂಗತಿಗಳು ಅನಿರೀಕ್ಷಿತವಾಗಿ ನಡೆಯುತ್ತಲೇ ಇರುತ್ತವೆ. ಆಗೆಲ್ಲ ನೆನಪಾಗುವುದು ಮರ್ಫಿಯ ನಿಯಮ.

"Anything that can go wrong, will go wrong" - ಇದು ಬಹುಮಂದಿಗೆ ಗೊತ್ತಿರುವ Murphys Law. ಬಹುಶಃ ನಾವೆಲ್ಲರೂ ಆ ಬಹುಮಂದಿಯಲ್ಲೇ ಬರುವವರು. ಆದರೆ ಮಜಾ ಏನು ಗೊತ್ತಾ? ಅದು ಮರ್ಫಿಯ ನಿಯಮ ಅಲ್ಲ, ಮರ್ಫಿ ಆ ರೀತಿ ಹೇಳಿದ್ದೂ ಇಲ್ಲ. ಆದರೂ ಅದೇ ಮರ್ಫಿಯ ನಿಯಮ ಎಂದು ಜಗದ್ವಿಖ್ಯಾತವಾಗಿದೆ; ಅಂದರೆ ಮರ್ಫಿಯ ನಿಯಮವೇ gone wrong ಆಗಿದೆ!

ಹಾಗಿದ್ದರೆ, ಅಸಲಿ ನಿಯಮ ಏನು? ಮರ್ಫಿ ಎಂದರೆ ಯಾರು? ಅವನ್ಯಾಕೆ ಆ ನಿಯಮವನ್ನು ಪ್ರತಿಪಾದಿಸಿದ? ಅವನ ನಿಯಮ ಬೇರೆಯದೇ ಆದರೆ ಈ "Anything that can go wrong, will go wrong" ಯಾರ ನಿಯಮ? - ಇವನ್ನೆಲ್ಲ ತಿಳಿದುಕೊಳ್ಳೋಣ ಈ ವಾರದ ವಿಚಿತ್ರಾನ್ನದಲ್ಲಿ. ಮತ್ತೆ, ಶೀರ್ಷಿಕೆಯ ದ್ವಿತೀಯಾರ್ಧವನ್ನು ಆಮೇಲೆ ವಿವರಿಸುತ್ತೇನೆ, ‘ಬರ್ಫಿ’ ಎಂದು ಈಗ ಬಾಯಲ್ಲಿ ಜೊಲ್ಲುಸುರಿಸಬೇಡಿ :)

*

1949ರಲ್ಲಿ ಅಮೆರಿಕದ ಅಂತರಿಕ್ಷಯಾನ ಉದ್ಯಮವು ಕೆಲವು ಪರೀಕ್ಷಾಪ್ರಯೋಗಗಳನ್ನು ನಡೆಸುತ್ತಿದ್ದಾಗ ಜರುಗಿದ ಒಂದು ರೋಮಾಂಚಕಾರಿ ವಿದ್ಯಮಾನದಲ್ಲಿ ಅಸಲಿ ‘ಮರ್ಫಿಯ ನಿಯಮ’ ಜನ್ಮತಳೆದದ್ದು. ಆ ಪ್ರಯೋಗಪರೀಕ್ಷೆಗಳು ಮನುಷ್ಯನ ದೇಹವು ಎಷ್ಟು ವೇಗೋತ್ಕರ್ಷವನ್ನು (Acceleration ಅಥವಾ G-Force) ತಡೆದುಕೊಳ್ಳಬಲ್ಲದು ಎಂದು ಕಂಡುಕೊಳ್ಳುವುದಕ್ಕಾಗಿ ಆಗಿದ್ದುವು. ಕ್ಯಾಲಿಫೋರ್ನಿಯಾದ ಒಂದು ಏರ್‌ಫೋರ್ಸ್‌ಬೇಸ್‌ನಲ್ಲಿ ಆ ಪ್ರಯೋಗಗಳು ನಡೆಯುತ್ತಿದ್ದುವು.

ರಾಕೆಟ್‌ ಉಡ್ಡಯನದಲ್ಲಿ ಬಳಸುವ ಜಾರುಯಂತ್ರದ ಹಲಗೆ(sled)ಗೆ ಒಬ್ಬ ಜೀವಂತ ಮನುಷ್ಯನನ್ನು ಕಟ್ಟಿಹಾಕಿ ಗಂಟೆಗೆ 1000 ಕಿ.ಮೀ ವೇಗೋತ್ಕರ್ಷದಲ್ಲಿ ಆ ಹಲಗೆಯನ್ನು ಜಾರಿಸಿ ಹಠಾತ್ತಾಗಿ ನಿಲ್ಲಿಸುವುದು, ಮತ್ತು ಆಗ ಆ ವ್ಯಕ್ತಿಯ ಮೇಲಾಗುವ ದೈಹಿಕ/ಮಾನಸಿಕ ಪರಿಣಾಮಗಳನ್ನು ಅಳೆದು ಅಭ್ಯಸಿಸುವುದು - ಎಣಿಸಿಕೊಂಡರೇ ಎದೆನಡುಗುವಂಥ ಪರೀಕ್ಷೆ. ಒಂಚೂರು ಹೆಚ್ಚುಕಮ್ಮಿ ಆದರೂ ಜಾರುಹಲಗೆಯಾಂದಿಗೆ ಜಾರಿದವ ವನ್ಸ್‌ ಫಾರ್‌ ಆಲ್‌ ಜೀವನದಿಂದಲೇ ಜಾರಿಹೋಗಬಹುದು!

ಕರ್ನಲ್‌ ಸ್ಟಾಪ್‌ ಎನ್ನುವ ಏರ್‌ಫೋರ್ಸ್‌ ನೌಕರ (ಆತ ವೈದ್ಯನೂ ಆಗಿದ್ದ) ಇಂತಹ ಹೆವಿ-ರಿಸ್ಕ್‌ ಪರೀಕ್ಷೆಗೆ ಒಳಗಾಗಲು ಮುಂದಾದ. ಪರೀಕ್ಷೆಯ ವೇಳೆ ಅವನಿಗೆ ತೊಡಲು ಒಂದು ರಕ್ಷಣಾಕವಚವನ್ನು (harness) ತಯಾರಿಸಿದವನು ಏರ್‌ಫೋರ್ಸ್‌ ಕ್ಯಾಪ್ಟನ್‌ ಎಡ್ವರ್ಡ್‌ ಎ ಮರ್ಫಿ. ಪರೀಕ್ಷಾರ್ಥಿ ತೊಡುವ ಆ ವಿಶೇಷ ಉಡುಪಿನಲ್ಲಿ ದೇಹದ ವಿವಿಧ ಭಾಗಗಳಿಂದ ಸಂಜ್ಞೆಗಳನ್ನು ಸಂಗ್ರಹಿಸುವುದಕ್ಕಾಗಿ ಮರ್ಫಿಯು 16 ಬೇರೆಬೇರೆ ಸಂವೇದಕ (Sensor)ಗಳನ್ನು ಅಳವಡಿಸಿದ್ದ. ಆ ಪ್ರಯೋಗಕ್ಕೆಂದೇ ತಯಾರಿಸಿದ್ದ ಸೆನ್ಸರ್‌ಗಳವು.

ಸರಿ, ಪ್ರಯೋಗ ಶುರುವಾಯಿತು. ಜಾರುಹಲಗೆ ರಾಕೆಟ್‌ನಂತೆ ವೇಗವಾಗಿ ಹೊರಟಿತು. 40 ಪಟ್ಟು ಗುರುತ್ವಾಕರ್ಷಣ ಶಕ್ತಿಯನ್ನು ಪ್ರಯೋಗಿಸಲಾಯಿತು. ಅದಾದ ಮೇಲೆ ಜಾರುಹಲಗೆ ಹಠಾತ್ತಾಗಿ ನಿಂತಿತು. ಗುರುತ್ವಶಕ್ತಿಯ ಒಂದು ಮಾನ (ಯುನಿಟ್‌)ದಲ್ಲಿ ಸರಿಸುಮಾರು 70 ಕೆಜಿ ತೂಕದ ವ್ಯಕ್ತಿ, 40 ಪಟ್ಟು ಗುರುತ್ವಕ್ಕೊಳಗಾದಾಗ 2.8 ಟನ್‌ನಷ್ಟು ತೂಕದವನಾಗುತ್ತಾನೆ! ನಿಜಕ್ಕೂ ಅಗಾಧಪ್ರಮಾಣದ ವೇಗೋತ್ಕರ್ಷವದು. ಪರೀಕ್ಷಾರ್ಥಿಯ ಕಿವಿಗಳು ಹರಿದುಹೋಗಬಹುದು, ಕಣ್ಣುಗುಡ್ಡೆಗಳು ಹಾರಿಹೋಗಬಹುದು! Operation success but patient died ಎಂಬಂತಾಯ್ತು ಅಂದ್ಕೊಂಡ್ರಾ? ಹಾಗೇನೂ ಆಗಲಿಲ್ಲ. ಯಾಕೋ ಅದೃಷ್ಟ ಚೆನ್ನಾಗಿತ್ತು. ಕರ್ನಲ್‌ ಸ್ಟಾಪ್‌ನ ಜೀವಕ್ಕೇನೂ ತೊಂದರೆಯಾಗಲಿಲ್ಲ, ಕಣ್ಣು ಕೆಂಪಾಗಿ ಮುಖ-ಮೈಯೆಲ್ಲ ಊದಿಹೋಗಿತ್ತು ಅನ್ನೋದುಬಿಟ್ಟರೆ.

ಆದರೆ ಮರ್ಫಿ ಅಳವಡಿಸಿದ್ದ 16 ಸಂವೇದಕಗಳ ಸಂಗತಿ ಏನಾಯ್ತು? ಅವೆಲ್ಲದರಲ್ಲೂ ಯಾವುದೇ ರೀಡಿಂಗ್‌ ದಾಖಲಾಗಿರಲಿಲ್ಲ, ಎಲ್ಲ ಶೂನ್ಯದಲ್ಲೇ ಇದ್ದುವು! ಯಾಕೆ ಹಾಗಾಯ್ತೆಂದರೆ ಅವನ್ನೆಲ್ಲ ಪರೀಕ್ಷಾರ್ಥಿಯ ಉಡುಪಿನೊಳಗೆ ತಪ್ಪಾಗಿ ಜೋಡಿಸಲಾಗಿತ್ತು. ಕರ್ನಲ್‌ ಸ್ಟಾಪ್‌ ಸುಖಾಸುಮ್ಮನೆ ಅಷ್ಟೊಂದು ವೇಗೋತ್ಕರ್ಷಕ್ಕೊಳಗಾಗಿ ರಕ್ತ ಕಾರಿದ್ದು ನಿರರ್ಥಕವಾಯಿತು. ಆ ಸಂದರ್ಭದಲ್ಲಿ ಕ್ಯಾಪ್ಟನ್‌ ಮರ್ಫಿಯ ಬಾಯಿಂದ ಗುಡುಗಿನಂತೆ ಬಂದ "If there are two or more ways to do something and one of those results in a catastrophe, then someone will do it that way!" ಮಾತುಗಳೇ ಮರ್ಫಿಯ ನಿಯಮದ ಮೂಲರೂಪ.

ಅಲ್ಲೊಂದು if (ಅಥವಾ ‘ರೆ’) ಅನ್ನು ಗಮನಿಸಬೇಕು. ಯಾವುದನ್ನೇ ಆದರೂ ಎರಡು ರೀತಿಯಲ್ಲಿ ಮಾಡಬಹುದಾದ‘ರೆ’ ಮತ್ತು ಅದರಲ್ಲಿ ಒಂದು ತಪ್ಪು/ಅಪಾಯಕಾರಿ/ಅನಪೇಕ್ಷಿತ ಆಗಿದ್ದರೆ ಆಗ ಯಾರಾದರೂ ಒಬ್ಬರು ಆ ತಪ್ಪನ್ನು ಮಾಡಿಯೇಮಾಡುತ್ತಾರೆ. ಎರಡು ವಿಧಗಳಿಗೆ ಬದಲಾಗಿ ಒಂದೇ ವಿಧ ಇದ್ದರೆ ಆಗ ಸರಿ-ತಪ್ಪಿನ ಪ್ರಶ್ನೆಯೇ ಬರುವುದಿಲ್ಲ, ಮರ್ಫಿಯ ನಿಯಮ ಜಾರಿಯಾಗುವುದೂ ಇಲ್ಲ.

ಆಮೇಲೆ ಮರ್ಫಿ ಸ್ವತಃ ಆ ಸಂವೇದಕಗಳನ್ನು ಮರುವಿನ್ಯಾಸ ಮಾಡಿದ. ನಿರ್ದಿಷ್ಟವಾದ ಒಂದೇಒಂದು ವಿಧದಲ್ಲಿ ಮಾತ್ರ ಅವನ್ನು ಜೋಡಿಸಲಿಕ್ಕಾಗುವಂತೆ ನೋಡಿಕೊಂಡ. ಮುಂದಿನ ಪ್ರಯೋಗ ಯಶಸ್ವಿಯೂ ಆಯಿತು. ಆದರೂ ವಿಫಲವಾದ ಮೊದಲ ಪ್ರಯೋಗವೇ ಮತ್ತು ಅದರಲ್ಲಿನ ಮರ್ಫಿಯ ಎಡವಟ್ಟೇ ‘ಪ್ರಸಿದ್ಧ’ವಾಯಿತು! ವಾಯುಯಾನ ಮತ್ತು ಅಂತರಿಕ್ಷ ನೌಕೆಗಳ ಉಪಕರಣಗಳ ಉತ್ಪಾದಕರೂ ಅದನ್ನು ಉಲ್ಲೇಖಿಸತೊಡಗಿದರು. ವಿಮಾನ ಸುರಕ್ಷಾ ಫ‚ೌಂಡೇಶನ್‌ ಸಹ ಮರ್ಫಿ ನಿಯಮವನ್ನು ಹೆಚ್ಚುವರಿ ಎಚ್ಚರಿಕೆ ಪಟ್ಟಿಯಲ್ಲಿ ಸೇರಿಸಿತು.

ಅಮೆರಿಕದ ಅಂತರಿಕ್ಷಯಾನ ಪ್ರಯೋಗಶಾಲೆಯಲ್ಲಿ ಹುಟ್ಟಿದ ’ಮರ್ಫಿಯ ನಿಯಮ’ ಪ್ರಪಂಚದೆಲ್ಲೆಡೆಗೆ ಪಸರಿಸಿತು. ಮರ್ಫಿ ಎಂಬ ವ್ಯಕ್ತಿಯಾಬ್ಬನಿದ್ದ ಎಂದು ಗೊತ್ತಿಲ್ಲದವರಿಗೂ ಮರ್ಫಿಯ ನಿಯಮ ಗೊತ್ತಾಗುವಂತಾಯಿತು. 1958ರಲ್ಲಿ Murphys Law ಗೆ ಇಂಗ್ಲಿಷ್‌ ಡಿಕ್ಷನರಿಯಲ್ಲೂ ಜಾಗ ಸಿಕ್ಕಿತು! ಬಾಯಿಂದ ಬಾಯಿಗೆ ಹೋದದ್ದರಿಂದ ಅದರ ವಿವಿಧ ಆವೃತ್ತಿಗಳು ಹುಟ್ಟಿದುವು. "Anything that can go wrong, will go wrong" ಎಂಬ ಆವೃತ್ತಿಯೇ ಜನಪ್ರಿಯವಾಯಿತು. ಅಂದರೆ ಒಂದರ್ಥದಲ್ಲಿ, ಮರ್ಫಿಯ ನಿಯಮಕ್ಕೇ ಮರ್ಫಿಯ ನಿಯಮ ಲಗಾವಾದಂತಾಯಿತು!

*

ಅಂತರಿಕ್ಷಯಾನದಂಥ ಹೈ-ಟೆಕ್‌ ವಿಷಯಗಳಲ್ಲೇ ಮರ್ಫಿಯ ನಿಯಮ ಸಂಭವಿಸುತ್ತದೆಯೆಂದ ಮೇಲೆ ನಮ್ಮಂಥ ಬಡಪಾಯಿಗಳ ದೈನಂದಿನ ಆಗುಹೋಗುಗಳಲ್ಲಿ ಮರ್ಫಿಯ ನಿಯಮ ಬಹುರೂಪಗಳಲ್ಲಿ ಕಾಣಿಸಿಕೊಳ್ಳುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಅಲ್ಲದೇ "Anything that can go wrong, will go wrong" ಅನ್ನೇ ಮರ್ಫಿಯ ನಿಯಮ ಅಂದುಕೊಂಡರೆ ಮತ್ತು ಸಂಭವನೀಯತೆ(probability)ಯ ಅಂಶವನ್ನೂ ಸೇರಿಸಿದರೆ ಅಂಥ ಸನ್ನಿವೇಶಗಳು ಬೇಕಾದಷ್ಟು ಅನುಭವಕ್ಕೆ ಬರುತ್ತವೆ.

ಬ್ರೆಡ್‌ ಸ್ಲೈಸ್‌ ತಕ್ಕೊಂಡು ಅದರ ಒಂದು ಬದಿಗೆ ಕ್ರೀಮ್‌ ಹಚ್ಚುತ್ತಾ ಇದ್ದೀರಿ. ಅಕಸ್ಮಾತ್‌ ಕೈತಪ್ಪಿ ಬ್ರೆಡ್‌ ಸ್ಲೈಸ್‌ ಕೆಳಕ್ಕೆ ಬಿತ್ತು. ಬಿದ್ರೆ ಬಿತ್ತಾ, ಕ್ರೀಮ್‌ ಹಚ್ಚಿದ ಬದಿಯೇ ಕೆಳಗಾಗಿ ಬಿದ್ದಿರ್ತದೆ ನೋಡಿ! ಏನಾಗ್ಬಾರ್ದು ಅಂತ ಬಯಸ್ತೇವೋ ಅದೇ ಆಗೋದು. ಕೊಡೆ ತರಲು ಮರೆತ ದಿನವೇ ಮಳೆ ಬರೋದು. ಅಥವಾ, ಕಾರ್‌ ವಾಷ್‌ ಮಾಡಿದ ದಿನವೇ ಸಂಜೆ ಮಳೆ ಬರೋದು. ಸೂಪರ್‌ಮಾರ್ಕೆಟಲ್ಲಿ ಚೆಕೌಟ್‌ ಮಾಡುವಾಗ, ರೈಲ್ವೆ ನಿಲ್ದಾಣದಲ್ಲಿ ಟಿಕೆಟ್‌ ಬುಕ್‌ ಮಾಡುವಾಗ, ವಿಮಾನಯಾತ್ರೆ ಮುಗಿಸಿ ಬೆಂಗಳೂರಲ್ಲಿಳಿದು ಕಸ್ಟಮ್ಸ್‌ ಫ‚ಾರ್ಮಾಲಿಟಿ ಮುಗಿಸುವಾಗ - ಹೀಗೆ ಬಹುಸರತಿ (multiple queues) ಇರುವಲ್ಲೆಲ್ಲ ನಾವು ನಿಂತ ಕ್ಯೂ ಮಾತ್ರ ನಿಧಾನವಾಗಿ ಮುಂದುವರಿಯುತ್ತಿದೆ; ಮಿಕ್ಕವೆಲ್ಲ ಫ‚ಾಸ್ಟ್‌ ಆಗಿ ಮೂವ್‌ ಆಗ್ತಿವೆ ಅನಿಸೋದು, ಸಿನೆಮಾ ಟಿಕೆಟ್‌ ಖರೀದಿಸಲು ಕ್ಯೂ ನಿಂತರೆ ನಮ್ಮ ಮುಂದಿರುವವರಿಗೆ ಟಿಕೆಟ್‌ ಕೊಟ್ಟಾದ ಕೂಡಲೆ ‘ಹೌಸ್‌ ಫ‚ುಲ್‌’ ಬೋರ್ಡ್‌ ಹಾಕೋದು, ಆಮೇಲೆ ಬೇಕಿದ್ದರೆ ನಾವು ಬ್ಲಾಕಲ್ಲಿ ಟಿಕೆಟ್‌ ತಗೋಬೇಕು. ಹಾಳಾಗಿ ಹೋಗಲಿ ಮನೆಗೆ ವಾಪಸಾಗೋಣ ಅಂದ್ರೆ ನಾವು ಕಾಯುತ್ತಿರುವ ರೂಟ್‌ನ ಸಿಟಿಬಸ್‌ ಬಿಟ್ಟು ಬೇರೆಲ್ಲ ರೂಟ್‌ಗಳ ಬಸ್ಸುಗಳೂ ಪ್ರವಾಹೋಪಾದಿಯಲ್ಲಿ ಬರ್ತಾನೇ ಇರುತ್ವೆ ಅನಿಸೋದು... ಎಷ್ಟು ಬೇಕಿದ್ರೂ ಪಟ್ಟಿ ಮಾಡುತ್ತಾ ಹೋಗಬಹುದು. ನಮ್ಮೇಲೆ ಮರ್ಸಿ ಇಲ್ದೇನೇ ಮರ್ಫಿ ನಿಯಮವನ್ನು ಪ್ರತಿಪಾದಿಸಿದನಾ ಎಂದು ಅನಿಸುವಷ್ಟು!

Burfiಬರ್ಫಿಯ ನಿಯಮ

ಮರ್ಫಿಯ ನಿಯಮವನ್ನಾದರೂ ನೀವು ಕೇಳಿದ್ದಿರಬಹುದು ಅಥವಾ ಅದೇನೆಂದು ಇವತ್ತಿನ ವಿಚಿತ್ರಾನ್ನದಲ್ಲಿ ನಿಮಗೆ ತಿಳಿಯಿತು. ಆದರೆ ‘ಬರ್ಫಿಯ ನಿಯಮ’ ಅಂತ ಮಾತ್ರ ನೀವು ಇದುವರೆಗೂ ಖಂಡಿತಾ ಕೇಳಿರೋದಿಲ್ಲ! ಪರಂತು ನಿಮ್ಮ ಅನುಭವಕ್ಕೆ ಇದು ಬಂದಿರುತ್ತದೆ. ಹೌದೋ ಅಲ್ಲವೋ ಹೇಳಿ. ಬರ್ಫಿಯ ನಿಯಮ ಮರ್ಫಿಯ ನಿಯಮಕ್ಕೆ ವೆರಿ ವೆರಿ ಕ್ಲೋಸ್‌. ನಮಗೆ ಏನು ಆಗಬಾರದಂತಿರ್ತದೋ ಅದೇ ಆಗೋದು. ಇಲ್ಲಿ ಬರ್ಫಿ ಯಾವುದೂ ಆಗಿರಬಹುದು - ಕಾಜೂಬಫಿ‚ರ್, ಚಾಕೊಲೇಟ್‌ಬರ್ಫಿ, ಕೊಕೊನಟ್‌ಬಫಿ‚ರ್ or for that matter any sweet.

ಬರ್ಫಿಯ ನಿಯಮ ಏನು ಅಂತ ವಿವರಿಸೋದಕ್ಕೆ ನಮ್ಮೆಲ್ಲರ ಬಾಲ್ಯದ ದಿನಗಳತ್ತ - innocence ಮತ್ತು mischief ಸಮಪ್ರಮಾಣದಲ್ಲಿ ಮೇಳೈಸಿದ್ದ ದಿನಗಳತ್ತ - ಒಮ್ಮೆ ಹಿನ್ನಡೆಯೋಣ:

‘‘ಅಮ್ಮ ನನಗೆ ನನ್ನ ತಮ್ಮನಿಗೆ ಮತ್ತು ನನ್ನ ಅಕ್ಕನಿಗೆ - ಮೂವರಿಗೂ ಒಂದೊಂದು ತುಂಡು ಬರ್ಫಿ ಹಂಚುತ್ತಾಳೆ. ನನಗೆ ಸಿಕ್ಕ ತುಂಡು ನನ್ನ ತಮ್ಮ ಮತ್ತು ಅಕ್ಕನಿಗೆ ಸಿಕ್ಕ ತುಂಡುಗಳಿಗಿಂತ ಚಿಕ್ಕದಾಗಿರುತ್ತದೆ! ಅಟ್‌ಲೀಸ್ಟ್‌ ಹಾಗಂತ ನಾನಂದುಕೊಳ್ಳುತ್ತೇನೆ. ಆಶ್ಚರ್ಯವೆಂದರೆ ಎಲ್ಲ ಬರ್ಫಿ ತುಂಡುಗಳೂ ಒಂದೇ ಸೈಜಿನವು, ಅಮ್ಮ ಏನೂ ಪಾರ್ಶಿಯಾಲಿಟಿ ಮಾಡೋದಿಲ್ಲ; ಅದಕ್ಕಿಂತಲೂ ಆಶ್ಚರ್ಯವೆಂದರೆ ನನ್ನ ತಮ್ಮನೂ ಅಕ್ಕನೂ ತಂತಮ್ಮ ಬರ್ಫಿಯ ಬಗ್ಗೆ ಹಾಗೆಯೇ ಅಂದುಕೊಂಡಿರುತ್ತಾರೆ. ನಾವು ಮೂವರೂ ನಮ್‌ನಮ್ಮ ಬರ್ಫಿ ತುಂಡನ್ನು ಇತರ ಇಬ್ಬರದೊಂದಿಗೆ ವಾರೆನೋಟದಲ್ಲೇ ಹೋಲಿಸಿನೋಡಿರುತ್ತೇವೆ!’’

ಹಾಗೆ ಬರ್ಫಿ ತುಂಡನ್ನು ನೀವು ಹೋಲಿಸಿದ್ದಿ ದೆಯಾ? ಈಗ ನಿಮಗೆ ಮಕ್ಕಳಿದ್ದರೆ ಅವರೂ ಹಾಗೆ ಹೋಲಿಸ್ತಾರಾ? ಮರ್ಫಿಯ ನಿಯಮ ಅಥವಾ ಬರ್ಫಿಯ ನಿಯಮ - ನಿಮ್ಮ ಅನುಭವದ ತಿಜೋರಿಯಲ್ಲಿರುವುವನ್ನು ಹೊರತೆಗೆದು ಬರೆದು ತಿಳಿಸಿ. ವಿಳಾಸ - srivathsajoshi@yahoo.com

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more