• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭೌತ‘ಶಾಸ್ತ್ರೀಯ’ ಬಾತ್‌ರೂಮ್‌ ಸಿಂಗಿಂಗ್‌

By Staff
|

ಭೌತ‘ಶಾಸ್ತ್ರೀಯ’ ಬಾತ್‌ರೂಮ್‌ ಸಿಂಗಿಂಗ್‌

ಜೀವಿತಾವಧಿಯಲ್ಲಿ ಹಾಡದ ವ್ಯಕ್ತಿ , ಕುಣಿಯದ ವ್ಯಕ್ತಿ ಸಿಗಲಿಕ್ಕಿಲ್ಲ! ಹೌದು, ಕನಿಷ್ಠ ಸ್ನಾನಗೃಹದಲ್ಲಾದರೂ ಸಂಗೀತ ಕಚೇರಿಯನ್ನು ಪ್ರತಿಯಾಬ್ಬರು ಕೊಟ್ಟಿರುತ್ತಾರೆ! ತಮ್ಮ ಕಲೆಯನ್ನು ಪ್ರದರ್ಶಿಸಿರುತ್ತಾರೆ! ಬಾತ್‌ರೂಮಲ್ಲಿ ಹಾಡೋದಕ್ಕೆ ಸಿಕ್ಕೋ ಸ್ಫೂರ್ತಿಯಾದರೂ ಏನು? ಪಕ್ಕವಾದ್ಯಗಳಂತೆ ನೆರವಾಗುವ ವೈಜ್ಞಾನಿಕ ಅಂಶಗಳು ಏನಾದರೂ ಇವೆಯೇ ಅನ್ನೋದನ್ನು ವಿಚಿತ್ರಾನ್ನ 175ನೇ ಸಂಚಿಕೆ ಪತ್ತೆಹಚ್ಚಿದೆ. ವಿವರಗಳು ನಿಮಗಾಗಿ...

Srivathsa Joshi *ಶ್ರೀವತ್ಸ ಜೋಶಿ

‘ಗಾಯನ ಸಮಾಜ’ ದವರು ನಮ್ಮಲ್ಲೆಷ್ಟು ಜನರಿದ್ದೇವೊ ಗೊತ್ತಿಲ್ಲ, ಆದರೆ ‘ಸ್ನಾನಗೃಹ ಗಾಯನ ಸಮಾಜ’ದವರು ನಾವು ತುಂಬ ಮಂದಿ ಇದ್ದೇವೆ ಅಲ್ಲವೇ? ನಿಮ್ಮ ವಾಯ್ಸ್‌ ಚೆನ್ನಾಗಿದೆ, ನೀವು ಹಾಡ್ತೀರಾ...? ಅಂತ ಯಾರಾದ್ರೂ ಕೇಳಿದ್ರೆ ಸ್ವಲ್ಪ ನಾಚಿಕೆ-ಮುಜುಗರಗಳಿಂದಲೇ ‘ಓಹ್‌... ಇಲ್ಲ ಬಿಡಿ, ನಾನು ಬರೀ ಬಾತ್‌ರೂಮ್‌ ಸಿಂಗರ್‌!’ ಎನ್ನುವವರೇ ಹೆಚ್ಚು. ನಮ್ಮ-ನಿಮ್ಮ ವಿಷಯ ಬಿಡಿ, ಇವತ್ತು ಪ್ರಖ್ಯಾತಿಯ ಶಿಖರವೇರಿರುವ ಘಟಾನುಘಟಿ ಹಾಡುಗಾರರೂ ಸಹ ತಮ್ಮ ಹಾಡುವ ಹವ್ಯಾಸದ/ಅಭ್ಯಾಸದ ಆರಂಭದ ದಿನಗಳನ್ನು ನೆನೆದುಕೊಳ್ಳುವಾಗ, ತಾವೂ ಬಾತ್‌ರೂಮ್‌ ಸಿಂಗರ್‌ ಆಗಿದ್ದುದರ ಬಗ್ಗೆ ಹೇಳಿಕೊಳ್ಳುವುದುಂಟು.

ಸ್ನಾನಗೃಹಗಾಯನ ಒಂದು universal phenomenon ಅಂತ ನಿಮಗನಿಸುವುದಿಲ್ಲವೇ? ‘ಠಂಡೆ ಠಂಡೆ ಪಾನಿ ಸೆ ನಹಾನಾ ಚಾಹಿಯೆ... ಗಾನಾ ಆಯೆ ಯಾ ನ ಆಯೆ ಗಾನಾ ಚಾಹಿಯೆ...!’ ಅಂತ ತುಂಬಾ ಜನಪ್ರಿಯವಾದ ಹಿಂದಿಚಿತ್ರಗೀತೆಯನ್ನು ನೀವು ಕೇಳಿರಬಹುದು. ಬಾತ್‌ರೂಮ್‌ಸಿಂಗಿಂಗ್‌ ಧರ್ಮಾನುಯಾಯಿಗಳ ನಿತ್ಯಪ್ರಾರ್ಥನೆಯ ಗೀತೆಯದು. ತಣ್ಣೀರಿನ ಬದಲು ಹಂಡೆಗಟ್ಟಲೆ ಬಿಸಿನೀರಿನ ಸ್ನಾನ ಮಾಡುವವರು ಇದೇ ಹಾಡನ್ನು ‘ಹಂಡೆ ಹಂಡೆ ಪಾನಿ ಸೆ ನಹಾನಾ ಚಾಹಿಯೆ...’ ಎಂದು ಬದಲಾಯಿಸಬಹುದು. ಯಾಕೆಂದರೆ ಠಂಡಾ ಪಾನಿಗಿಂತಲೂ ಒಳ್ಳೆ ಹಬೆಯಾಡುವ ಬಿಸಿನೀರಿನ ಸ್ನಾನದ ವೇಳೆಯಲ್ಲೇ ಹಾಡುವ ಖಯಾಲಿ ಹೆಡೆಯೆತ್ತುವುದು. ಅದೂ ಅತ್ಯಾಧುನಿಕ ಬಚ್ಚಲುಮನೆಗಳಲ್ಲಿನ ಬಿಸಿನೀರಿನ ಶವರ್‌ ಆಗಿದ್ದರಂತೂ

ಸುರಿಯುವ showerಅ ಕೆಳಗಡೆ ನಿಂತೆ ಬಿಸಿನೀರ್‌ ಬೀಳ್ತಿತ್ತು...

ಹನಿ ಹನಿ ಹನಿ ಹನಿ ನೀರಿನ ರಭಸವು ಕಿವಿಗಳ ತುಂಬಿತ್ತು...

ಅದಕೇಳಿ ನಾ ಮೈ ತೊಳೆದೆ... ಸ್ವರವೊಂದ ಆಗಲೆ ಕಲಿತೆ...

ಹಾಡಿದೆ ಈ ಕವಿತೆ... ನಾ ಹಾಡಿದೆ ಈ ಕವಿತೆ...

ಎಂದು ಬಾತ್‌ರೂಮ್‌ಸಿಂಗಿಂಗ್‌ ಧರ್ಮದ ಪ್ರಾರ್ಥನೆಯನ್ನಷ್ಟೇ ಅಲ್ಲ, ‘ಉಪಾಸನೆ’ಯನ್ನೇ ಮಾಡುತ್ತಾರೆ!

ಸ್ನಾನಗೃಹ ಗಾಯಕರೆಲ್ಲ (ಗಾಯಕಿಯರೂ?) ಸಾಮಾನ್ಯವಾಗಿ ಏನನ್ನು ಹಾಡುತ್ತಾರೆ? ಚಿತ್ರಗೀತೆ, ಭಾವಗೀತೆ, ದೇವರನಾಮ...ದಿಂದ ಹಿಡಿದು ಇಂಗ್ಲಿಷ್‌ ರ್ಯಾಪ್‌-ಪೊಪ್‌ ಸಂಗೀತದವರೆಗೆ ಅದರ ವ್ಯಾಪ್ತಿ ಹರಡುತ್ತದೆ. ರ್ಯಾಪ್‌-ಪೊಪ್‌ ಮಾತ್ರವೇನು, ಬಾಲ್ದಿ-ತಂಬಿಗೆಗಳ ತಾಳವೂ ಸೇರಿದರೆ ‘ಹೆವಿ ಮೆಟಲ್‌’ ಮ್ಯೂಸಿಕ್ಕೂ ಮೇಳೈಸುತ್ತದೆ. ಕೈಯಲ್ಲಿ ಸೋಪು ಯಾವುದೇ ಇದ್ದರೂ ‘ಚಿನ್ನದ ಸಿರಿ ರೆಕ್ಸೊನಾ... ಅಂಗಾಂಗಕ್ಕೆ ಕಾಂತಿ ನೀಡುವ ಬಂಗಾರದ ನವ ರೆಕ್ಸೊನಾ...’ ಅಂತಲೊ, ‘ಲೈಫ್‌ಬಾಯ್‌ ಎಲ್ಲಿದೆಯಾ ಅಲ್ಲಿದೇ ಆರೋಗ್ಯ...’ ಎಂದು ಸೋಪಿನ ಜಾಹೀರಾತನ್ನು ಅರಚುವುದೂ ಮಸ್ತ್‌ ಎನಿಸುತ್ತದೆ, ಅಷ್ಟೆ ಅಲ್ಲ ತಾನೊಬ್ಬ ಉದಯೋನ್ಮುಖ ಗಾಯಕನಷ್ಟೆ ಅಲ್ಲ, ರೂಪದರ್ಶಿ ಸಹ ಎಂಬ ಭ್ರಮೆ ಬೇರೆ! ಒಟ್ಟಿನಲ್ಲಿ ಸ್ನಾನಗೃಹಗಾಯನದ ಹರವು ಆ ನಾಲ್ಕು ಗೋಡೆಗಳೊಳಗಿನ ಅವಕಾಶಕ್ಕಿಂತ ವಿಸ್ತಾರವಾದುದು.

ಒಂದು ವಿಷಯವನ್ನಿಲ್ಲಿ ಗಮನಿಸಬೇಕು. ಬಾತ್‌ರೂಮ್‌ ಸಿಂಗಿಂಗ್‌ನ ಗೀಳು ಎಷ್ಟೇ ಇದ್ದರೂ ಸಹ, ಸ್ನಾನ ಮಾಡುತ್ತಿದ್ದ ಮಾತ್ರಕ್ಕೆ ಅವರ ಆಲಾಪನೆ ಶುರುವಾಗಿಬಿಡುತ್ತದೆ ಎಂದು ಹೇಳುವಂತಿಲ್ಲ. ಯಾಕೆಂದರೆ ಹೊರಾಂಗಣಪ್ರದೇಶದಲ್ಲಿ (ಉದಾ: ಬಾವಿಕಟ್ಟೆ, ಕೆರೆ ಅಥವಾ ನದಿಯಲ್ಲಿ) ಸ್ನಾನ ಮಾಡುವ ಸಂದರ್ಭ ಬಂದರೆ ಆಗ ಹಾಡು ಹೊರಬರುವ ಸಾಧ್ಯತೆಗಳು ಕಡಿಮೆ. ಬಾತ್‌ರೂಮ್‌ ಕಲ್ಪಿಸಿಕೊಡುವ ‘ಪ್ರೈವೆಸಿ’ಯು ಸ್ನಾನದವೇಳೆಯ ಹಾಡುಗಾರಿಕೆಗೆ ಒಂದು ಮೂಲಭೂತ ಅಗತ್ಯ. ತುಂಬ ಹಿಂದಿನ ಕಾಲದಲ್ಲಿ ಹಳ್ಳಿಗಳಲ್ಲೆಲ್ಲ ಬಚ್ಚಲುಮನೆಯೆಂಬುದೇನೂ ಇರದೆ ಮನೆ ಹತ್ತಿರದ ನದಿ-ತೊರೆಗಳಲ್ಲಿ ಸ್ನಾನ ಮಾಡುತ್ತಿದ್ದವರು ಸ್ನಾನ ಮಾಡುವಾಗ ಹಾಡುತ್ತಿದ್ದರೆ? ಬಹುಷಃ ಇಲ್ಲ! ಒಂದು ನಿದರ್ಶನವನ್ನು ನೋಡಿ:

ಉದಯಕಾಲದೊಳೆದ್ದು ಗೊಲ್ಲನು ನದಿಯ ಸ್ನಾನವ ಮಾಡಿಕೊಂಡು ಮುದದಿ ತಿಲಕವ ಹಣೆಯಾಳಿಟ್ಟು ಚದುರ ಶಿಖೆಯನು ಹಾಕಿದ... ಎನ್ನುವಲ್ಲಿ ಆತ ಸ್ನಾನಮಾಡುವಾಗ ಹಾಡುತ್ತಿದ್ದ ಎಂದೇನೂ ಇಲ್ಲ. ಸ್ನಾನಾದಿ ನಿತ್ಯವಿಧಿಗಳನ್ನೆಲ್ಲ ಮುಗಿಸಿದ ಮೇಲಷ್ಟೆ ಅವನು ಎಳೆಯಮಾವಿನ ಮರದ ಕೆಳಗೆ ಕುಳಿತು ಕೊಳಲನೂದುತ ಬಳಸಿನಿಂದ ತುರುಗಳನ್ನು ಬಳಿಗೆ ಕರೆಯಲು ಹಾಡಿದ್ದು! ಆದ್ದರಿಂದ, ಪುಣ್ಯಕೋಟಿ ಕಥೆಯ ಕಾಳಿಂಗ ಗೊಲ್ಲ, ಬಾತ್‌ರೂಮ್‌ ಸಿಂಗರ್‌ ಅಲ್ಲವೇ ಅಲ್ಲ! ಗೊಲ್ಲನ ವಿಷಯ ಬಿಡಿ, ಹಿಂದಿನ ಕಾಲದವರು ಸಂಪ್ರದಾಯಸ್ಥರು ಸ್ನಾನಮಾಡುವಾಗ ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ ನರ್ಮದೆ ಸಿಂಧು ಕಾವೇರಿ ಜಲೆಸ್ಮಿನ್‌ ಸನ್ನಿಧಿಂ ಕುರು... ಎಂದು ಭಕ್ತಿಪೂರ್ವಕವಾಗಿ ಮಂತ್ರಗಳನ್ನು ಪಠಿಸುತ್ತಿದ್ದರೇ ವಿನಃ ಚಿತ್ರಗೀತೆಗಳನ್ನಾಗಲೀ ಜಾಹೀರಾತುಗಳ ಜಿಂಗಲ್‌ಗಳನ್ನಾಗಲೀ ಖಂಡಿತವಾಗಿಯೂ ಗುನುಗುನಿಸುತ್ತಿರಲಿಲ್ಲ.

ಅಷ್ಟಕ್ಕೂ, ಬಾತ್‌ರೂಮ್‌ ಸಿಂಗಿಂಗ್‌ನ ಹಿಂದೆ, ಅಂದರೆ ಸ್ನಾನಗೃಹದ ಏಕಾಂತದಲ್ಲಿ ಹಾಡೋಣವೆನ್ನಿಸುವ ಇಚ್ಛೆಯ ಹಿಂದೆ ವೈಜ್ಞಾನಿಕ ವಿಶ್ಲೇಷಣೆಯೇನಾದರೂ ಇದೆಯೇ? ಅದೊಂದು ಜಾಗತಿಕ ಜಾಯಮಾನವಾಗಿಬಿಟ್ಟಿರುವುದಕ್ಕೆ ಕಾರಣಗಳೇನಾದರೂ ಇವೆಯೇ? ಪ್ರಾಯಶಃ ಈ ವಿಷಯದ ಮೇಲೆ ಅಷ್ಟೇನೂ ಸಂಶೋಧನೆಗಳು ನಡೆದಂತಿಲ್ಲ. ಈ ಬಗ್ಗೆ ಅಂತರ್ಜಾಲವನ್ನು ಮಂಥಿಸಿದಾಗ ನನಗೆ ಎರಡು ಥಿಯರಿಗಳು ಸಿಕ್ಕಿವೆ. ಒಂದು ಭೌತಶಾಸ್ತ್ರವನ್ನಾಧರಿಸಿದ್ದಾದರೆ ಇನ್ನೊಂದು ಮನಃಶಾಸ್ತ್ರದ ದೃಷ್ಟಿಯದು. ನನಗ್ಯಾಕೊ ಭೌತಶಾಸ್ತ್ರದ ಥಿಯರಿ ಕನ್ವಿನ್ಸಿಂಗ್‌ ಆಗಿದೆ ಅನ್ನಿಸ್ತು, ಅದನ್ನು ನಿಮ್ಮೊಂದಿಗೂ ಹಂಚಿಕೊಳ್ಳೋಣವೆಂದು ಭೌತ‘ಶಾಸ್ತ್ರೀಯ’ ಬಾತ್‌ರೂಮ್‌ ಸಿಂಗಿಂಗ್‌ ಎಂಬ ಶೀರ್ಷಿಕೆಯಾಂದಿಗೆ ಇವತ್ತಿನ ವಿಚಿತ್ರಾನ್ನವನ್ನು ಪ್ರಸ್ತುತಪಡಿಸುತ್ತಿದ್ದೇನೆ.

*

ಬಯಲಿನಲ್ಲಿ (open area) ನಿಂತು ಹಾಡುವುದಕ್ಕೂ ಬಚ್ಚಲಿನಲ್ಲಿ ನಿಂತು ಹಾಡುವುದಕ್ಕೂ ಮೂಲಭೂತ ವ್ಯತ್ಯಾಸವಿದೆ - ಮುಖ್ಯವಾಗಿ ಗಂಟಲಿಂದ ಹೊರಟ ನಮ್ಮ ಧ್ವನಿಯ ಅಲೆಗಳಿಗೆ ಆಮೇಲೇನಾಗುತ್ತದೆ ಎಂಬ ವಿಷಯದಲ್ಲಿ. ಹೊರಗಡೆ ಅಥವಾ ಮನೆಯಲ್ಲೇ ಬೇರಾವ ಕೋಣೆಯಲ್ಲಿ ನಾವು ಮಾತನಾಡಿದ, ಹಾಡಿದ, ಕಿರುಚಿದ ಧ್ವನಿ ನಮಗೆ ಕೇಳಿಬರುವುದು ಅದರ ಮೂಲಸ್ವರೂಪ/ಪ್ರಮಾಣ ಎಷ್ಟಿತ್ತೊ ಅಷ್ಟೆ. ಬಚ್ಚಲುಮನೆಯಲ್ಲಾದರೆ ಅಲ್ಲಿನ ಕೆಲವು ಭೌತಿಕ ಅಂಶಗಳಿಂದಾಗಿ ಅದೊಂದು ಶಬ್ದಮಿಶ್ರಕ (sound mixing) ಸ್ಟುಡಿಯಾದಂತೆ ಕೆಲಸಮಾಡಿ ನಮ್ಮ ಧ್ವನಿಯ ವರ್ಧನೆ (enhancement)ಗೆ ನೆರವಾಗುತ್ತದೆ. ಮುಖ್ಯವಾಗಿ ಧ್ವನಿಯ ಪರಿಮಾಣ (volume), ಮೊರೆತ (reverberation) ಮತ್ತು ಮಂದ್ರಸ್ವರ (bass notes) - ಈ ಮೂರು ಆಯಾಮಗಳು ಯೋಗ್ಯಪ್ರಮಾಣದಲ್ಲಿ ವೃದ್ಧಿಗೊಂಡು ನಮ್ಮ ಧ್ವನಿಯನ್ನು ಶ್ರೀಮಂತವಾಗಿಸುತ್ತವೆ.

ಹೇಗೆ? ಈ ಕುರಿತು ಸಾನ್‌ಫ್ರಾನ್ಸಿಸ್ಕೊದಲ್ಲಿರುವ ಎಕ್ಸ್‌ಪ್ಲೊರೇಟೊರಿಯಂ (ವಿಜ್ಞಾನ/ತಂತ್ರಜ್ಞಾನ ಸಂಶೋಧನಾಲಯ) ಕೊಡುವ ವಿವರಣೆಯನ್ನು ನೋಡೋಣ.

ಸ್ನಾನಗೃಹದಲ್ಲಿ ಬಳಕೆಯಾಗುವ ಟೈಲ್ಸ್‌, ಅಥವಾ ಹಳೆಕಾಲದಲ್ಲಾದರೆ ಚಪ್ಪಡಿಕಲ್ಲು, ಮೊದಲಾದ ಗಟ್ಟಿಯಾದ ಮತ್ತು ನುಣುಪಾದ ಮೇಲ್ಮೈ ಇರುವ ವಸ್ತುಗಳು ಶಬ್ದವನ್ನು ಹೀರಿಕೊಳ್ಳುವುದಿಲ್ಲ; ಪ್ರತಿಫಲಿಸುತ್ತವೆ. ಶಬ್ದದ ಅಲೆಗಳು ಬಾತ್‌ರೂಮ್‌ ಗೋಡೆಗಳ ಮಧ್ಯೆಯೇ ಅತ್ತಿಂದಿತ್ತ ಚಲಿಸುವುದರಿಂದ ಶಬ್ದದ ಪರಿಮಾಣ ಕ್ಷೀಣಿಸದೆ ಇನ್ನೂ ಹೆಚ್ಚೇ ಆಗುತ್ತದೆ; ನಮ್ಮ ಧ್ವನಿಯೇ ನಮಗೆ ಇನ್ನಷ್ಟು ಉತ್ತಮವಾಗಿ ಕೇಳಿಬರುತ್ತದೆ!

ಎರಡನೆಯ ಅಂಶ - ರಿವರ್ಬರೇಷನ್‌. ಬಾತ್‌ರೂಮಲ್ಲಿ ಪ್ರತಿಫಲಿತ ಶಬ್ದದ ಅಲೆಗಳ ಪೈಕಿ ಎಲ್ಲವೂ ಒಂದೇ ಪ್ರಮಾಣದಲ್ಲಿ ಚಲನೆಯಾಗದಿರುವುದರಿಂದ ನಮ್ಮ ಧ್ವನಿಯ ಕೆಲವು ಅಂಶವು ದೀರ್ಘಾವಧಿಯವರೆಗೂ ಇನ್ನು ಕೆಲವು ಕಡಿಮೆ ಅವಧಿಯವರೆಗೂ ಕೇಳಿಬಂದು ಒಂಥರಾ ಶಬ್ದ ಮೊರೆತಂತೆ ಭಾಸವಾಗುತ್ತದೆ. ಇದನ್ನೇ ರಿವರ್ಬರೇಷನ್‌ ಅನ್ನೋದು. ನಮ್ಮ ಧ್ವನಿಗೆ ಅದು ಸಂತುಷ್ಟಿ ಮತ್ತು ಸಂಪೂರ್ಣತೆಯನ್ನು ಕೊಡುತ್ತದೆ, ಏರಿಳಿತಗಳಿದ್ದುದನ್ನು ಸಮಗೊಳಿಸುತ್ತದೆ; ಪರಿಣಾಮ ನಮ್ಮ ಗಾರ್ದಭಗಾಯನವೂ ಸುಶ್ರಾವ್ಯವಾಗುತ್ತದೆ!

ಮೂರನೆಯದಾಗಿ ಷವರ್‌ನ ಆವರಣ ಒಂದು ಪೆಟ್ಟಿಗೆಯಂತಿದ್ದರೆ ಅದೊಂದು ಅನುನಾದ (resonance)ದ ಗುಹೆಯಾಗುತ್ತದೆ. ಇದರಿಂದೇನಾಗುತ್ತದೆಂದರೆ ನಮ್ಮ ಧ್ವನಿಯಲ್ಲಿನ ಅನುನಾದ ಆವರ್ತಗಳು (resonant frequencies) ವಿಸ್ತಾರಗೊಳ್ಳುತ್ತವೆ. ಸಾಮಾನ್ಯ ಅಳತೆಯ ಒಂದು ಷವರ್‌ ಚೇಂಬರ್‌ನಲ್ಲಿ ಅನುನಾದ ಆವರ್ತಗಳು ಸುಮಾರಾಗಿ 200 ಅಥವಾ 300 ಹರ್ಟ್ಜ್‌ನಷ್ಟಿರುತ್ತವೆ. ಮಾನವ ಧ್ವನಿಯ ಆವರ್ತಗಳು 80ರಿಂದ 1000 ಹರ್ಟ್ಜ್‌ ವ್ಯಾಪ್ತಿಯಲ್ಲಿರುವುದರಿಂದ ಅದರಲ್ಲಿನ 200-300 ಹರ್ಟ್ಜ್‌ ಆವರ್ತದ ಶಬ್ದಗಳು (bass notes ಅಥವಾ ಮಂದ್ರಸ್ವರಗಳು) ಷವರ್‌ನಲ್ಲಿ ಅಧಿಕವಾಗಿ ಪ್ರತಿಧ್ವನಿಸಲ್ಪಟ್ಟು ಧ್ವನಿಯ ಒಟ್ಟಾರೆ ಗುಣಮಟ್ಟದಲ್ಲಿ ಒಳ್ಳೆಯ ಫಲಿತಾಂಶ ಬರುತ್ತದೆ. ನಮ್ಮ ಧ್ವನಿಯು ನಮಗೇ ತುಂಬ ಅಪ್ಯಾಯಮಾನವೆನಿಸಿ ಇನ್ನೂ ಇನ್ನೂ ಹಾಡೋಣವೆನಿಸುತ್ತದೆ.

ಇದಿಷ್ಟು ಭೌತಶಾಸ್ತ್ರದ ವಿವರಣೆ. ಇನ್ನು ಮನಃಶಾಸ್ತ್ರ ಏನನ್ನುತ್ತದೆ ನೋಡೋಣವೇ?

ಭಾವನಾತ್ಮಕವಾಗಿ ವಿಶ್ಲೇಷಿಸಿದರೂ ಬಚ್ಚಲುಮನೆ ನಮ್ಮ ಹಾಡುವ ಹವ್ಯಾಸಕ್ಕೆ ವೇದಿಕೆಯಾಗುವುದಕ್ಕೆ ಸಮಂಜಸ ಕಾರಣಗಳಿವೆ. ಸ್ನಾನಮಾಡುವಾಗ ನಮ್ಮ ದೇಹ-ಮನಸ್ಸುಗಳ ‘ಬಿಗಿ’ ಹೊರಟು ಒಳ್ಳೆಯ ರಿಲಾಕ್ಸಿಂಗ್‌ ಮೂಡ್‌ ಕಳೆಗಟ್ಟುತ್ತದೆ; ಅದೂ ಅಲ್ಲದೆ ಬಾತ್‌ರೂಮಾದರೆ ಅಲ್ಲಿ ಕೇಳಲು, ನೋಡಲು, ಲೇವಡಿಮಾಡಲು ಬೇರಾರೂ ಇಲ್ಲ, ಸುರಕ್ಷಿತವಾದ ತಾಣವದು ಎಂಬುದು ಮನಸ್ಸಿಗೆ ಅದಾಗಲೇ ಹೊಳೆದಿರುತ್ತದೆ. ಇಂದಿನ ಧಾವಂತದ ಜೀವನಶೈಲಿಯಲ್ಲಿ ಒಂಚೂರು ಶಾಂತಿ-ಸಮಾಧಾನದ ಗಳಿಗೆಯಿದ್ದರೆ ಅದು ಸ್ನಾನದ ವೇಳೆ ಮಾತ್ರ. ಕ್ಷಣಕಾಲಕ್ಕಾದರೂ ಬೌದ್ಧಿಕವಾಗಿ, ಭೌತಿಕವಾಗಿ ಜವಾಬ್ದಾರಿ ಜಂಜಡಗಳಿಂದ ಮುಕ್ತರಾಗಿರುವ ಈ ಸನ್ನಿವೇಶದ ಫಾಯಿದಾ ತೆಗೆದುಕೊಂಡು ಮನಸ್ಸು ವಿಹಾರಕ್ಕೆ ತೊಡಗುತ್ತದೆ, Relax and let loose ಆದಾಗಿನ ಮೊದಲ ಪ್ರತಿಕ್ರಿಯೆಯೇ ಇಷ್ಟವಾದ ಹಾಡಿನ ಸಾಲುಗಳ ಗುನುಗುವಿಕೆ! ಹಾಗಾಗಿಯೇ, ಗಾನಾ ಆಯೆ ಯಾ ನ ಆಯೆ ಗಾನಾ ಚಾಹಿಯೆ!

ಅಂತೂ ವಿಶ್ಲೇಷಣೆ ಯಾವುದೇ ರೀತಿಯದಿರಲಿ, ಸಂಗೀತ ಕಲಿಯಲು ಇಷ್ಟೆಲ್ಲ ಅನುಕೂಲಗಳನ್ನು ಪರೋಕ್ಷವಾಗಿ ಮಾಡಿಕೊಡುವ ಬಾತ್‌ರೂಮ್‌ ಸಹಜವಾಗಿಯೇ ಹವ್ಯಾಸಿ/ಅಭ್ಯಾಸಿ ಸಂಗೀತಗಾರರೆಲ್ಲರ ರಿಹರ್ಸಲ್‌ ರೂಮ್‌ ಸಹ ಆಗಿರುವುದರಲ್ಲಿ ಆಶ್ಚರ್ಯವಿಲ್ಲ, ಅಲ್ಲವೇ? ಅಂದಹಾಗೆ ಕೇಳೋದನ್ನೇ ಮರೆತೆ, ನೀವು ಬಾತ್‌ರೂಮಲ್ಲಿ ಸಿಂಗುತ್ತೀರಾ? ಹೌದಾದರೂ ಅಲ್ಲವಾದರೂ ಬಾತ್‌ರೂಮ್‌ ಸಿಂಗಿಂಗ್‌ ಬಗ್ಗೆ ಮೇಲಿನೆರಡು ವಿಶ್ಲೇಷಣೆಗಳಲ್ಲಿ ನಿಮಗೆ ಯಾವುದರಲ್ಲಿ ಹುರುಳಿದೆ ಎನಿಸುತ್ತದೆ? ಅಥವಾ, ಅವೆಲ್ಲ ಬಂಡಲ್‌ ಥಿಯರಿಗಳು. ಹಾಡುವವರು ಹೇಗಿದ್ದರೂ ಹಾಡುತ್ತಲೇ ಇರುತ್ತಾರೆ, ‘ಎಲ್ಲ ಕೇಳಲಿ ಎಂದು ನಾನು ಹಾಡುವುದಲ್ಲ... ಹಾಡುವುದು ಅನಿವಾರ್ಯ...’ ಎಂಬ ಶಿವರುದ್ರಪ್ಪ ಥಿಯರಿಯೇ ಸರಿಯೇ? ಬರೆದು ತಿಳಿಸಿ. ವಿಳಾಸ -srivathsajoshi@yahoo.com

ಸುಮ್ನೆ ತಮಾಷೆಗೆ

ಮದ್ವೆ ಮನೆಯ ಬಾತ್‌ರೂಂನಲ್ಲಿ ಏನಾಯ್ದು ಅಂದ್ರೆ?!

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more