ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇವತ್ತಿನ ಗ್ರಾಸ - grass!

By * ಶ್ರೀವತ್ಸ ಜೋಶಿ
|
Google Oneindia Kannada News

Grass
ಹುಲ್ಲು ಎಂದೊಡನೆ ಅದು ಬರೀ ದನಕರುಗಳ ಮೇವು ಎಂಬ ತಾತ್ಸಾರ ಬೇಡ. 'ಅಣು-ರೇಣು-ತೃಣ-ಕಾಷ್ಠಗಳಲ್ಲೂ ಭಗವಂತನಿದ್ದಾನೆ" ಎಂದಮೇಲೆ ಹುಲ್ಲು (ತೃಣ) ದೈವಾಂಶಸಂಭೂತ. ಇನ್ನೊಂದು ಪಕ್ಕದಲ್ಲಿ ಹುಲ್ಲಿಗೆ ರಸಮಯ ಚರಿತ್ರೆಯೂ ಇದೆ! ವಿಚಿತ್ರಾನ್ನ-192ನೇ ಸಂಚಿಕೆಯ ತುಂಬ ಹುಲ್ಲು ಹುಲ್ಲು ಹುಲ್ಲು!

ಗಣನಾಥಾ, ನಿನ್ನ ಅಭಯಹಸ್ತದ ಕರಾಮತ್ತಿನಿಂದ ಇದುವರೆಗೂ ನಿರ್ವಿಘ್ನವಾಗಿ ಮುಂದುವರಿದುಕೊಂಡು ಬಂದಿರುವ ಈ ಅಂಕಣದಲ್ಲಿ, ಇವತ್ತು ಮೊದಲಿಗೆ 21ಗರಿಕೆಹುಲ್ಲಿನ ಎಸಳುಗಳನ್ನು ನಿನಗರ್ಪಿಸಿಯೇ ಬರೆಯಲು ತೊಡಗುತ್ತೇನೆ. ಕಾರಣವೇನೆಂದರೆ ಇವತ್ತಿನ ವಿಷಯ 'ಹುಲ್ಲು"! ಎಷ್ಟೆಂದರೂ 'ತೇನ ವಿನಾ ತೃಣಮಪಿ ನ ಚಲತಿ..." ತಾನೆ? ತೃಣವೇ ಚಲಿಸದಿದ್ದ ಮೇಲೆ ತೃಣದ ಬಗ್ಗೆಯ ವಿಚಿತ್ರಾನ್ನ ಲೇಖನ ಅದ್ಹೇಗೆ ಮುಂದುವರಿದೀತು!

ಈ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದ್ದೇಕೆಂದರೆ, ಇವತ್ತಿನ ಶೀರ್ಷಿಕೆಯನ್ನೋದಿದ ಪ್ರಿಯ ಓದುಗರು ಗೊತ್ತಿದ್ದೋ ಗೊತ್ತಿಲ್ಲದೆಯೋ ಎರಡು ತಪ್ಪು ಅಭಿಪ್ರಾಯಗಳಿಗೆ ಬರುವ ಸಾಧ್ಯತೆಗಳು ಉಜ್ವಲವಾಗಿವೆ :

1) ''ಇಷ್ಟರವರೆಗೆ ಒಳ್ಳೊಳ್ಳೆಯ ಮಾತಾಡಿ ರುಚಿರುಚಿಯಾದ ಊಟ ಬಡಿಸಿದ ಈ ಆಸಾಮಿ ಇವತ್ತು ನಮಗೆ ಹುಲ್ಲು ತಿನ್ನಿಸಲು ಹೊರಟಿದ್ದಾರೆ!"" (= ನಮ್ಮನ್ನು ಏನೆಂದು ತಿಳಿದುಕೊಂಡಿದ್ದಾರೆ!?)

2) ''ಬರೆಯಲಿಕ್ಕೆ ತಲೆಯಲ್ಲಿ ತುಂಬಿಟ್ಟುಕೊಂಡ ವಿಷಯಗಳೆಲ್ಲ ಖಾಲಿಯಾಗಿ ಈತನ ತಲೆಯಲ್ಲಿ ಬರೀ ಹುಲ್ಲು ಉಳಿದುಕೊಂಡಿದೆ!""

ಈ ಮೇಲಿನ ವಿದ್ಯಮಾನವು ಯಾವುದೇ ಕಾರಣಕ್ಕೂ ಸಂಭವಿಸದಿರಲಿ ಎನ್ನುವುದಕ್ಕೋಸ್ಕರ ಗಣಪನಿಗೆ ಗರಿಕೆಹುಲ್ಲು ಏರಿಸಿದ ನಂತರ, ಈಗ ವೇದಿಕೆಯನ್ನಲಂಕರಿಸುತ್ತಿದೆ - 'ಹುಲ್ಲು"!

ದಯವಿಟ್ಟು ಮಾಡಬೇಡಿ ಗುಲ್ಲು, ಬಿಸಾಡಬೇಡಿ ಕಲ್ಲು, ಉದುರಿಸಬೇಡಿ ನನ್‌ ಹಲ್ಲು :-)

*

ಹುಲ್ಲು ಎಂದೊಡನೆ ಅದು ಬರೀ ದನಕರುಗಳ ಮೇವು ಎಂಬ ತಾತ್ಸಾರ ಬೇಡ. 'ಅಣು-ರೇಣು-ತೃಣ-ಕಾಷ್ಠಗಳಲ್ಲೂ ಭಗವಂತನಿದ್ದಾನೆ" ಎಂದಮೇಲೆ ಹುಲ್ಲು (ತೃಣ) ದೈವಾಂಶಸಂಭೂತ. ಅಷ್ಟೇ ಅಲ್ಲ, ಭಗವಂತ ಎಷ್ಟು ಜವಾಬ್ದಾರಿಯವನೆಂದರೆ 'ಹುಟ್ಟಿಸಿದ ಮೇಲೆ ಹುಲ್ಲು ಮೇಯಿಸದೆ" ಇರುವುದಿಲ್ಲ. ನಿಗರ್ವಿ, ನಿಷ್ಪಕ್ಷಪಾತಿಯಾದ ಅವನು 'ಹೂವ ತರುವರ ಮನೆಗೆ ಹುಲ್ಲನ್ನೂ ತರುತ್ತಾನೆ"! ಸುಖವನ್ನು 'ಹುಲ್ಲಿನ ಬಣವೆಯಲ್ಲಿ ಸೂಜಿ ಹುಡುಕಿದಂತೆ" ಅರಸುತ್ತ ಇಹಲೋಕದ ಜಂಜಾಟಗಳಲ್ಲಿ 'ಮುಳುಗುತ್ತಿರುವವನಿಗೆ ಹುಲ್ಲುಕಡ್ಡಿಯ ಆಸರೆ" ತೋರುವವನೂ ದಯಾಪರನಾದ ಅವನೇ ಅಲ್ಲವೇ?

'ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು ಕಲ್ಲಾಗು ಕಷ್ಟಗಳ ಮಳೆಯ ವಿ-ಧಿ ಸುರಿಯೆ" - ಮಂಕುತಿಮ್ಮನ ಕಗ್ಗದಲ್ಲಿ ಡಿವಿಜಿ ಹೇಳುತ್ತಾರೆ. ದೂರದ ಬೆಟ್ಟ ನುಣ್ಣಗೆ ಇದೆಯೆಂತನಿಸುವುದು ಅಲ್ಲಿನ more greener grassನಿಂದ ಅಂತ ಮಂಕುತಿಮ್ಮನಿಗೂ ಗೊತ್ತು; ಬೆಟ್ಟದ ತಪ್ಪಲಲ್ಲಿ ಮತ್ತು ಮೇಲ್ಮೈಗೆ ಮುಳ್ಳುಕಂಟಿಗಳಿರುವುದಕ್ಕಿಂತ ಹುಲುಸಾದ ಹುಲ್ಲು ಬೆಳೆದಿದ್ದರೆ ಬೆಟ್ಟವನ್ನೇರುವವರಿಗೆ ಪ್ರಯಾಸ ಕಡಿಮೆ. ಕಠಿಣಹಾದಿಯನ್ನು ಕ್ರಮಿಸುವವರ ಶ್ರಮವಿಳಿಸಲು ಹುಲ್ಲಿನ ಉಪಕಾರವದು. ಆ ರೀತಿ ಹುಲ್ಲಿನಂತಿದ್ದು ಪರೋಪಕಾರಿಯಾಗಿರಬೇಕು ಎಂಬುದು ಮಂಕುತಿಮ್ಮನ ಮಾತಿನ ಇಂಗಿತ.

ಬೆಟ್ಟಗುಡ್ಡಗಳನ್ನೇರುವ ಚಾರಣಿಗರಿಗೆ ನಡುವೆ ಹುಲ್ಲುಗಾವಲು ಸಿಕ್ಕಿದರೆ ಒಮ್ಮೆಯ ಆಯಾಸಪರಿಹಾರಕ್ಕಾಗಿ ಕೈಕಾಲುಚಾಚಿ ಮೈಚೆಲ್ಲಿ ಮಲಗಿಬಿಡಲು ಬೇರೆ ಪ್ರಶಸ್ತ ಜಾಗ ಬೇಕೆ? ಕಲ್ಲುಮುಳ್ಳುಗಳಲ್ಲಿ ಪಾದರಕ್ಷೆಗಳನ್ನು ಧರಿಸಿ ನಡೆದ ಮೇಲೆ, ಹುಲ್ಲಿನ ಮೇಲೆ ಬರಿಗಾಲಲ್ಲಿ ಒಮ್ಮೆ ನಡೆದುನೋಡಿ; ಗಲ್ಲಕ್ಕೆ ನವಿಲುಗರಿ ಸೋಕಿಸಿದಂಥ ಕಚಗುಳಿ ಹಿತಾನುಭವ, ತನ್ಮೂಲಕ ಆಯಾಸಪರಿಹಾರ ನಿಮ್ಮ ಪಾದಗಳಿಗಾಗದಿದ್ದರೆ ಆಗ ಹೇಳಿ. ಪಶ್ಚಿಮಘಟ್ಟದ ಕುದುರೆಮುಖ ಪರ್ವತಪ್ರದೇಶದಲ್ಲಿ 'ಹುಲ್ಲುಗುಡ್ಡೆ" ಎಂಬ ಹೆಸರಿನದೇ ಒಂದು ಜಾಗವಿದೆ. ಅಲ್ಲಿಗೆ ತಲುಪಿದಾಗ ಚಾರಣದ ಒಂದು ಹಂತ ಮುಗಿದು ಅಲ್ಲೊಂದಿಷ್ಟು ಹೊತ್ತು ವಿಶ್ರಾಂತಿ ಪಡೆಯುವ ಅವಕಾಶ. ಹೊತ್ತೇರಿದರೂ ಹುಲ್ಲಿನ ಮೇಲಿನ ಇಬ್ಬನಿ ಸಹ ಇನ್ನೂ ಫಳಫಳ ಹೊಳೆಯುತ್ತಿದ್ದರಂತೂ ಮೈದಣಿವಷ್ಟೇ ಅಲ್ಲ ಮನಸ್ಸಿನ ದಣಿವೂ ಹೇಳಹೆಸರಿಲ್ಲದಂತಾಗಬೇಕು.

ನಮ್ಮಲ್ಲಿ ಹಿಂದೆಲ್ಲ ಬಡಜನರ ಗುಡಿಸಲುಗಳಿಗೆ, ಅಷ್ಟೇ ಏಕೆ ಮಧ್ಯಮವರ್ಗದ ಮನೆಗಳಿಗೂ ಮುಳಿಹುಲ್ಲಿನ ಛಾವಣಿ ಇರುತ್ತಿದ್ದದ್ದು. ಅದರ ಮೇಲೆ ಮುಂಜಾವಿನ ಬಿಸಿಲಿನ ಹೊಂಗಿರಣಗಳು ಬೀಳುವಾಗಿನ ಅಂದವನ್ನು ವರ್ಣಿಸುವಾಗಲೇ ಪಂಜೆ ಮಂಗೇಶರಾಯರು 'ಮಾಡಿನ ಹುಲ್ಲಲಿ ಚಿನ್ನದ ಗೆರೆಯನು ಎಳೆಯುವನು ರವಿ ಹೊಳೆಯುವನು..." ಎಂದಿದ್ದು. ಈಗ ಹಂಚುಹೊದಿಕೆಯ ಅಥವಾ ಟೆರೇಸ್‌ ಮನೆಗಳ ಮೇಲೆ ಬೀಳುವ ಬೆಳಗಿನಬಿಸಿಲು ಪಂಜೆಯವರಿಗೆ ಕವನರಚನೆಯ ಸ್ಫೂರ್ತಿ ಕೊಡುತ್ತಿತ್ತೆಂದು ಹೇಳಲಿಕ್ಕಾಗದು. ಮುಂಜಾವಿನ ಬಿಸಿಲು ಒಣಗಿದ ಮುಳಿಹುಲ್ಲಿನ ಮೇಲೆ ಬಿದ್ದಾಗ ನಿಜಕ್ಕೂ ಅದು ಬಂಗಾರದ ಸರಿಗೆಗಳಂತೆ ಕಂಡುಬರುತ್ತದೆ. ಬಡ ಜನರ ಬದುಕನ್ನು ಭ್ರಮೆಗಾದರೂ ಸ್ವರ್ಣಮಯವಾಗಿಸುವ ರವಿಯ ಪರಿ ಅದು. ಕವಿಗೆ ವರ್ಣನೆಗೆ ಅಷ್ಟು ಸಾಕಲ್ಲ!

ಸತ್ಯಹರಿಶ್ಚಂದ್ರನ ಕಥೆಯಲ್ಲಿ, ಅವನ ಕಷ್ಟಕಾರ್ಪಣ್ಯಗಳು ಪರಮಾವ-ಧಿ ಹಂತವನ್ನು ತಲುಪುವುದಕ್ಕೆ ಹುಲ್ಲೂ ಒಂದು ನೆಪವಾಗುತ್ತದೆ! ಹೇಗೆ? ಹೆಂಡತಿ ಚಂದ್ರಮತಿ ಮತ್ತು ಮಗ ಲೋಹಿತಾಶ್ವನನ್ನು ಬ್ರಾಹ್ಮಣನೊಬ್ಬನಿಗೆ ಮಾರಿದ ಹರಿಶ್ಚಂದ್ರ ಮಹಾರಾಜ ಕೊನೆಗೆ ತನ್ನನ್ನೇ ಮಾರಿಕೊಂಡು ಮಸಣದ ಕಾವಲುಗಾರನಾಗುವ ದುರ್ಭರ ಪ್ರಸಂಗ. ಚಂದ್ರಮತಿ ಮತ್ತು ಲೋಹಿತಾಶ್ವ ಬ್ರಾಹ್ಮಣನ ಮನೆಯ ಸೇವಕರಾಗಿ ದಿನಗಳೆಯುತ್ತಾರೆ. ಅಲ್ಲಿನ ದನಕರುಗಳಿಗೆ ಉಣಿಸಲು ಹುಲ್ಲು ಕತ್ತರಿಸಿ ತರುವುದು ಲೋಹಿತಾಶ್ವನ ಕೆಲಸ.

ಒಂದುದಿನ ಹೀಗೆ ಹುಲ್ಲು ತೆಗೆಯುತ್ತಿರುವಾಗಲೇ ಹಾವು ಕಚ್ಚಿ ಆತ ಅಸುನೀಗುತ್ತಾನೆ. "ತನಯನೆಂದುಂಬಪ್ಪ ಹೊತ್ತಿಂಗೆ ಬಾರದಿರೆ ಮನನೊಂದಿದೇಕೆತಳುವಿದನೆನ್ನ ಕಂದನೆನುತ ಸುಯ್ಯುತ್ತ ಮರುಗುತ್ತ ಬಸಿರಂ ಹೊಸೆದು ಕೊನೆಬೆರಳ ಮುರಿಯುತ್ತ..." ಮರುಗುವ ಚಂದ್ರಮತಿಗೆ, ಮಗ ಸಾಯಲು ಕಾರಣವೇನು ಎಂಬುದೂ ಗೊತ್ತಾಗಿಬಿಡುತ್ತದೆ. 'ದೂರದ ಹುತ್ತಿನ ಹುಲ್ಲ ಕೊಯ್ಯೆ ಕೈಯ ನೂಕಿ ಫಣಿಯಗಿಯೆ..." - ಆಕೆಯ ಪ್ರಲಾಪ ಕರುಳು ಕಿತ್ತುಬರುವಂಥದು.

Grassroots politics (ಅಥವಾ ಅದರ ಮಮತಾಬ್ಯಾನರ್ಜಿ ಭಾಷಾಂತರದ "ತೃಣಮೂಲ ರಾಜಕೀಯ") ಎಂಬ ಪದಗುಚ್ಛವಿದೆಯಲ್ಲ? Grassroots ಮೂಲತಃ ಅಮೆರಿಕದಲ್ಲಿ 19ನೆ ಶತಮಾನದ ಆದಿಯಲ್ಲಿನ ಗಣಿಗಾರಿಕೆ, ಚಿನ್ನದ ನಿಕ್ಷೇಪಗಳ ಪತ್ತೆಯ ವೇಳೆ ಚಾಲ್ತಿಗೆ ಬಂದ ಪದ. ಆಗ ಚಿನ್ನ ಎಷ್ಟು ಹೇರಳವಾಗಿತ್ತೆಂದರೆ ಹುಲ್ಲಿನಡಿಯ ಮಣ್ಣನ್ನಗೆದರೆ ಅಲ್ಲೂ ಚಿನ್ನ ಎಂಬಂತಿತ್ತು. ಆಮೇಲೆ ಹುಲ್ಲಿನ ಬೇರುಗಳ ಅರ್ಥವ್ಯಾಪ್ತಿ ಇನ್ನೂ ವಿಸ್ತಾರವಾಯ್ತು. ಹುಲ್ಲನ್ನು ಅದರ ಬೇರುಗಳೇ ತಾನೆ ಜೀವಂತವಾಗಿ ಮತ್ತು ಬೆಳವಣಿಗೆಯ ಕ್ರಮದಲ್ಲಿ ಇಡುವುದು? ಅದೇ ಪ್ರಕಾರ ಯಾವುದೇ ವಿಷಯದ ಅಥವಾ ವಸ್ತುವಿನ ಆಮೂಲಾಗ್ರ ಅರಿವಾಗಬೇಕಾದರೆ ಅದರ ತಳಮಟ್ಟದ ಮಾಹಿತಿಯಿಂದಲೇ ಶುರುವಾಗಬೇಕಲ್ಲ? ರಾಜಕಾರಣಿಗಳು ಈ ಪದಗುಚ್ಛವನ್ನುಪಯೋಗಿಸಿ ಸಮಾಜದ ಕೆಳಸ್ತರದ ಜನಸಾಮಾನ್ಯರನ್ನೇ grassroots ಎಂದು ಕರೆದರು; ಭಾಷಣಗಳನ್ನು ಕೊರೆದರು. ಸಂಪತ್ತಿನ ಕೊಳ್ಳೆ ಹೊಡೆದರು; ಸಾಮಾನ್ಯ ಜನ ಹುಲ್ಲು ತಿನ್ನುವ ಪ್ರಾಣಿಗಳಂತಾದರು.

ವಿಂಬಲ್ಡನ್‌ ಅಥವಾ ಯು.ಎಸ್‌ ಓಪನ್‌ ಟೆನಿಸ್‌ ಟೂರ್ನಮೆಂಟಿಗೂ ಫ‚ೆ್ರಂಚ್‌ ಓಪನ್‌ಗೂ ಇರುವ ವ್ಯತ್ಯಾಸವೇನು ಎಂದು ಯಾರಾದರೂ ನಿಮಗೆ ಸಾಮಾನ್ಯಜ್ಞಾನ ಪ್ರಶ್ನೆಯನ್ನು ಕೇಳಿದರೆ ನೆನಪಿಡಬೇಕಾದ್ದು 'ಹುಲ್ಲು". ಹೌದು, ವಿಂಬಲ್ಡನ್‌ ಮತ್ತು ಯು.ಎಸ್‌.ಓಪನ್‌ ಹುಲ್ಲುಮೈದಾನದಲ್ಲಿ ನಡೆಯುವ ಟೂರ್ನಮೆಂಟ್‌ಗಳಾದರೆ ಫ‚ೆ್ರಂಚ್‌ ಓಪನ್‌ನದು ಕೆಂಪುಮಣ್ಣಿನ ಮೈದಾನ. ಕ್ರೀಡಾಂಗಣದಲ್ಲಿ ಹುಲ್ಲಿನ ಪ್ರಮಾಣ ಆಟದ ಮೇಲೆ ಎಷ್ಟು ಪರಿಣಾಮ ಬೀರುತ್ತದೆಯೆಂಬುದನ್ನು ಕ್ರಿಕೆಟ್‌ ಆಟದ ವಿಶ್ಲೇಷಣೆಯಲ್ಲಿ ನೋಡಬೇಕು. ಸಿಂಗಲ್ಸ್‌, ಡಬಲ್ಸ್‌ ರನ್ನುಗಳನ್ನು ಪಡೆಯಲು ಹುಲ್ಲು ಅಡ್ಡಿಮಾಡುತ್ತಿತ್ತು ಎಂದು ಹುಲ್ಲಿನ ಮೇಲೆ ಆಪಾದನೆ ಹಾಕುವ ಆಟಗಾರರಿದ್ದಾರೆ.

ಅಂತೂ ಹುಲ್ಲು ನಾವಂದುಕೊಂಡಷ್ಟು 'ತೃಣ ಮಾತ್ರ" ವಿಷಯವಲ್ಲ. ಹುಲ್ಲಿನ ಬಗ್ಗೆ ನಮಗೆಲ್ಲ ಗೊತ್ತೇ ಇರುವ ಇನ್ನೆರಡು ಸಂಗತಿಗಳನ್ನೂ ಉಲ್ಲೇಖಿಸಿ ಇವತ್ತಿನ ಲೇಖನವನ್ನು ಮುಗಿಸುತ್ತೇನೆ. ಒಂದನೆಯದಾಗಿ ಬೆಕ್ಕು, ನಾಯಿ ಮೊದಲಾದ ಸಾಕುಪ್ರಾಣಿಗಳು ತಮ್ಮ ದೇಹಕ್ಕೆ ಒಗ್ಗದ ಆಹಾರವನ್ನು ಅಕಾಸ್ಮಾತ್ತಾಗಿ ಸೇವಿಸಿದರೆ ಅವುಗಳಿಗೇ ಗೊತ್ತಿರುವ ಒಂದು ಜಾತಿಯ ಹುಲ್ಲನ್ನು ಸೇವಿಸಿ ಸ್ವಯಂವೈದ್ಯ ಮಾಡಿ ಆ ವಿಷಾಹಾರವನ್ನು ಕಕ್ಕಿಬಿಡುತ್ತವೆ. ಎರಡನೆಯ ಸ್ವಾರಸ್ಯ ಹುಲ್ಲಿನ ಬಗ್ಗೆಯದೆಂದರೆ ನಮಗೆ ಸಕ್ಕರೆ-ಬೆಲ್ಲವನ್ನು ಕೊಡುವ ಕಬ್ಬು ಸಸ್ಯಶಾಸ್ತ್ರೀಯವಾಗಿ ಹುಲ್ಲು ಪ್ರವರ್ಗಕ್ಕೆ ಸೇರಿರುವುದು!

ಈಗಲಾದರೂ ಒಪ್ಪುತ್ತೀರಲ್ಲ, ಹುಲ್ಲು ಸಹ 'ರಸಮಯ"ವೇ ಎಂಬುದನ್ನ? ಇತಿ ಹುಲ್ಲು ಸ್ಪೆಷಲ್‌ ವಿಚಿತ್ರಾನ್ನ.

*

ಈ ವಾರದ ರಸಪ್ರಶ್ನೆ (ಜಾಣ್ಮೆಲೆಕ್ಕ). ಒಂದು ಹೊರೆ ಹುಲ್ಲು ಮತ್ತು ಎರಡು ಕುದುರೆಗಳಿವೆ. ಒಂದು ಬಿಳಿಕುದುರೆ, ಇನ್ನೊಂದು ಕಪ್ಪಗಿನದು. ಬೆಳ್ಳಗಿನ ಕುದುರೆ ಪೂರ್ವದಿಕ್ಕಿಗೆ ತಿರುಗಿ ನಿಂತಿದ್ದರೆ ಕಪ್ಪು ಕುದುರೆ ನೂರೆಂಬತ್ತು ಡಿಗ್ರಿ ವಿರುದ್ಧವಾಗಿ ಪಶ್ಚಿಮಕ್ಕೆ ತಿರುಗಿ ನಿಂತಿದೆ. ಹೀಗಿದ್ದರೂ ಆ ಎರಡೂ ಕುದುರೆಗಳು ಒಂದೇ ರಾಶಿಯಿಂದ ಹುಲ್ಲು ತಿನ್ನುತ್ತಿವೆ! ಇದು ಹೇಗೆ ಸಾಧ್ಯ?

ಉತ್ತರವನ್ನು ಮತ್ತು ಇವತ್ತಿನ ಸಂಚಿಕೆಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಬರೆದು ಕಳಿಸಲು ವಿಳಾಸ - [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X