• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀಖಂಡವೂ ಭೈರಪ್ಪನವರ ಖಂಡತುಂಡ ವಿಚಾರಗಳೂ

By Staff
|

ಶ್ರೀಖಂಡವೂ ಭೈರಪ್ಪನವರ ಖಂಡತುಂಡ ವಿಚಾರಗಳೂ
ವಿಚಿತ್ರಾನ್ನ 205ನೇ ಸಂಚಿಕೆಯ ಶೀರ್ಷಿಕೆ ನೋಡಿದರೆ, ಇದು ‘ಭೈರಪ್ಪ ಸ್ಪೆಷಲ್‌’ ಅನ್ನಿಸಬಹುದು! ಹೌದು, ಇಲ್ಲಿ ಭೈರಪ್ಪ, ಅವರಿಗೆ ಇಷ್ಟವಾದ ಶ್ರೀಖಂಡ, ಅವರು ಕಾದಂಬರಿ ಬರೆಯೋ ವಿಧಾನ, ಅವರ ಖಂಡತುಂಡ ವಿಚಾರಗಳ ಬಗ್ಗೆ ಅಪರೂಪದ ಮಾಹಿತಿಗಳಿವೆ. ಜೊತೆಗೆ ಬಾಯಲ್ಲಿ ನೀರೂರಿಸೋ ತಿಂಡಿ ಮಾಡೋ ವಿಧಾನ ಬೋನಸ್‌ ರೂಪದಲ್ಲಿದೆ!

Srivathsa Joshi ಶ್ರೀವತ್ಸ ಜೋಶಿ

ಎಸ್‌.ಎಲ್‌.ಭೈರಪ್ಪನವರ ಹೆಸರಿನಲ್ಲಿನ ಇನಿಷಿಯಲ್‌ಗಳಾದ ‘ಎಸ್‌’ ಮತ್ತು ‘ಎಲ್‌’ ಅಕ್ಷರಗಳ ಪೂರ್ಣರೂಪ ಏನು?

ಕನ್ನಡಿಗರೆಲ್ಲ, ಅಷ್ಟೇ ಏಕೆ ಸಾಹಿತ್ಯಾಸಕ್ತ ಭಾರತೀಯರೆಲ್ಲ ಭೈರಪ್ಪನವರ ಹೆಸರನ್ನು ಕೇಳಿದ್ದೇವೆ; ಅವರ ಸಾಹಿತ್ಯವನ್ನು ಓದಿದ್ದೇವೆ; ಕನ್ನಡ ಕಾದಂಬರಿ ಕ್ಷೇತ್ರದಲ್ಲಿ ಭೈರಪ್ಪನವರಿಗೆ ಸಾಟಿಯಿಲ್ಲ, ಭಾರತದ ಇತರ ಭಾಷೆಗಳಿಗೂ ಅನುವಾದಗೊಂಡು ಅತಿಜನಪ್ರಿಯರಾದ ಸಾಹಿತಿ ಅವರು ಎಂದು ಭರ್ಜರಿಯಾಗಿ ಹೆಮ್ಮೆಪಟ್ಟಿದ್ದೇವೆ. ಆದರೆ ಅವರ ಹೆಸರಿನಲ್ಲಿನ ಇನಿಷಿಯಲ್ಸ್‌ ಏನೆಂಬುದು ನಮ್ಮಲ್ಲಿ ಎಷ್ಟುಮಂದಿಗೆ ತಿಳಿದಿದೆಯಾ ಗೊತ್ತಿಲ್ಲ.

ನನಗಂತೂ ತಿಳಿದಿರಲಿಲ್ಲ, ಆದರೆ ಮೊನ್ನೆ ಭೈರಪ್ಪನವರನ್ನು ವೈಯಕ್ತಿಕವಾಗಿ ಭೇಟಿಮಾಡುವ ಸಂದರ್ಭ ಸಿಕ್ಕಿದಾಗ ಅವರನ್ನೇ ಕೇಳಿ ತಿಳಿದುಕೊಂಡೆ. ನನ್ನ ಸಾಮಾನ್ಯ ಜ್ಞಾನಭಂಡಾರಕ್ಕೆ ಎರಡು ಬೈಟ್‌ಗಳನ್ನು ಸೇರಿಸಿದೆ. ಎಸ್‌ ಎಂದರೆ ‘ ಸಂತೆಶಿವರ’ - ಹಾಸನಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಒಂದು ಹಳ್ಳಿ, ಭೈರಪ್ಪನವರ ಜನ್ಮಸ್ಥಳ; ಎಲ್‌ ಎಂದರೆ ‘ಲಿಂಗಣ್ಣಯ್ಯ’ - ಭೈರಪ್ಪನವರ ತಂದೆಯ ಹೆಸರು.

ಬಾಲ್ಟಿಮೋರ್‌ನಲ್ಲಿ ಜರುಗಿದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಲು ಅಮೆರಿಕೆಗೆ ಬಂದಿರುವ ಎಸ್‌.ಎಲ್‌.ಭೈರಪ್ಪನವರನ್ನು ಸಮ್ಮೇಳನ ಮುಗಿದ ನಂತರ ಒಂದು ಸಂಜೆ ಡಿನ್ನರ್‌ಗೆ ಮೈ.ಶ್ರೀ.ನಟರಾಜ್‌ ಅವರ ಮನೆಗೆ ಆಹ್ವಾನಿಸಿದ್ದರು. ಅವತ್ತೇ ನನಗೂ ಮತ್ತು ನನ್ನೊಂದಿಗಿದ್ದ ದಟ್ಸ್‌ಕನ್ನಡ ಸಂಪಾದಕ ಶಾಮಸುಂದರ್‌ ಅವರಿಗೂ ನಟರಾಜ್‌ ಆಹ್ವಾನವಿತ್ತಿದ್ದರು. ಭೈರಪ್ಪನವರಿಗೆ ಇಲ್ಲಿ ಆತಿಥೇಯರಾಗಿದ್ದ ಮೃದುಮನಸಿನ ಕತೆಗಾರ್ತಿ ಶಶಿಕಲಾ ಚಂದ್ರಶೇಖರ್‌ ಅವರೂ ಬಂದಿದ್ದರು. ನಟರಾಜ್‌ ಮನೆಯ ಡೈನಿಂಗ್‌ಟೇಬಲ್‌ ವೇದಿಕೆಯಲ್ಲೇ ಭೈರಪ್ಪನವರೊಂದಿಗೆ ಒಂದು ಮಿನಿಸಂವಾದ ಕಾರ್ಯಕ್ರಮ. ನಮಗೆಲ್ಲ ಅವರೊಂದಿಗೆ ಕೆಲ ಆತ್ಮೀಯ ಕ್ಷಣಗಳನ್ನು ಕಳೆಯುವ ಅವಕಾಶ ಬಂದದ್ದು ಹಾಗೆ.

ಆ ಭೇಟಿಯ ನಂತರ, ಭೈರಪ್ಪನವರನ್ನು ಹತ್ತಿರದಿಂದ ನೋಡಿ ಮಾತಾಡಿಸಿದ ನಂತರ, ಕಾದಂಬರಿಕಾರನಾಗಿಯಷ್ಟೇ ಗೊತ್ತಿದ್ದ ಭೈರಪ್ಪ ಒಬ್ಬ ವ್ಯಕ್ತಿಯಾಗಿ ಹೇಗೆ ಎಂಬುದನ್ನು ಸ್ವಲ್ಪಮಟ್ಟಿಗೆ ತಿಳಿದುಕೊಂಡ ನಂತರ, ಇದೀಗ ಅವರ ಇನಿಷಿಯಲ್ಸ್‌ಗೆ ನಾನು ಹೊಸ ವ್ಯಾಖ್ಯೆಯಾಂದನ್ನು ಕೊಡುತ್ತಿದ್ದೇನೆ. ಈ ಹೊಸ ಡೆಫಿ‚ನಿಷನ್‌ ಪ್ರಕಾರ ಎಸ್‌.ಎಲ್‌.ಭೈರಪ್ಪ ಎಂದರೆ ‘ಶ್ರೀಖಂಡ-ಲೈಕ್‌’ ಭೈರಪ್ಪ ಅಥವಾ ‘ಶ್ರೀಖಂಡ-ಲೈಕಿಂಗ್‌’ ಭೈರಪ್ಪ!

*

Sweet dish Srikhandಈ ವ್ಯಾಖ್ಯೆಯನ್ನು ವಿವರಿಸುವ ಮೊದಲು ‘ಶ್ರೀಖಂಡ’ ಎಂದರೇನೆಂದು ನಿಮಗೆ ಹೇಳಬೇಕು. ಮಹಾರಾಷ್ಟ್ರದಲ್ಲಿ ತುಂಬ ಪ್ರಸಿದ್ಧವಾದ ಸಿಹಿತಿಂಡಿ ಶ್ರೀಖಂಡ, ಕರ್ನಾಟಕದಲ್ಲಿ ಕನ್ನಡಿಗರಿಗೆ ಅಷ್ಟೇನೂ ಪರಿಚಯವಿದ್ದಂತಿಲ್ಲ. ಮುಂಬಯಿ, ಪುಣೆ ಮತ್ತಿತರ ಮಹಾರಾಷ್ಟ್ರ ನಗರಗಳ ರೆಸ್ಟೊರೆಂಟ್‌ಗಳಲ್ಲಿ ಪೂರಿ-ಶ್ರೀಖಂಡ ಕಾಂಬಿನೇಷನ್‌ ಒಂದು ಸಕ್ಕತ್‌ ಜನಪ್ರಿಯ ತಿಂಡಿ. ಅಮುಲ್‌ ಬ್ರಾಂಡ್‌ನ ಕೇಸರಿ ಫ‚ೆ್ಲೕವರ್‌ ಶ್ರೀಖಂಡ ಮಹಾರಾಷ್ಟ್ರದ ಪಟ್ಟಣಗಳಲ್ಲೆಲ್ಲ ಬಿಕರಿಯಾಗುತ್ತದೆ. ಸಾಂಪ್ರದಾಯಿಕವಾಗಿ ಶ್ರೀಖಂಡ ಮಾಡುವುದು ಹೇಗೆಂದರೆ - ದಪ್ಪಹಾಲಿಗೆ ಹೆಪ್ಪುಹಾಕಿ ಮೊಸರಾದದ್ದನ್ನು ಒಂದು ಬಟ್ಟೆಯಲ್ಲಿ ಕಟ್ಟಿ ಅದರಲ್ಲಿನ ನೀರಿನಂಶವೆಲ್ಲ ಇಳಿದುಹೋಗುವಂತೆ ಆರೇಳು ಗಂಟೆಗಳ ಕಾಲ ಬಿಟ್ಟು, ಗಟ್ಟಿಯಾಗುಳಿದ ಮೊಸರನ್ನು ಚೆನ್ನಾಗಿ ಅರೆದು, ಸಕ್ಕರೆ-ಕೇಸರಿಬಣ್ಣ ಹಾಗೂ ಏಲಕ್ಕಿ-ಜಾಯಿಕಾಯಿ ಮೊದಲಾದ ಪರಿಮಳದ್ರವ್ಯಗಳನ್ನು ಸೇರಿಸಬೇಕು. ಇದನ್ನು ಹಾಗೆಯೇ ತಿನ್ನಬಹುದು ಅಥವಾ ಪೂರಿ/ಚಪಾತಿ/ದೋಸೆಗೆ ಹಚ್ಚಿಕೊಂಡೂ ಚಪ್ಪರಿಸಬಹುದು!

ಇಂತಿರ್ಪ ಶ್ರೀಖಂಡವನ್ನು ಭೈರಪ್ಪ ಬರುತ್ತಾರೆಂದೇ, ಅವರಿಗೆ ತುಂಬ ಇಷ್ಟವಾಗುತ್ತದೆಂದೇ ನಟರಾಜ್‌ ಅವರ ಮನೆಯಲ್ಲಿ ವಿಶೇಷವಾಗಿ ಮಾಡಿದ್ದರು. ನಟರಾಜ್‌ ಅವರ ಪತ್ನಿ ಗೀತಾ ಮೂಲತಃ ಮಹಾರಾಷ್ಟ್ರ, ಮಧ್ಯಪ್ರದೇಶ ಮುಂತಾದ ಉತ್ತರಭಾರತದ ಪರಿಸರದಲ್ಲಿ ಬೆಳೆದವರು, ಅಲ್ಲಿನ ಅಡುಗೆಸ್ಪೆಷಾಲಿಟಿಗಳನ್ನು ಬಲ್ಲವರು. ಕಳೆದಸಲ ಅವರಮನೆಗೆ ಭೈರಪ್ಪ ಬಂದಿದ್ದಾಗ ಪೂರಿ-ಶ್ರೀಖಂಡ ಮಾಡಬೇಕೆಂದಿದ್ದವರು ಅದು ಭೈರಪ್ಪನವರಿಗೆ ಇಷ್ಟ ಆಗುತ್ತೋ ಇಲ್ಲವೊ ಎಂದು ಹಿಂಜರಿದು ಕೊನೆಗೆ ಅನ್ನ-ಸಾರು-ಪಲ್ಯವಷ್ಟೇ ಮಾಡಿದ್ದರಂತೆ, ಆದರೆ ಭೈರಪ್ಪನವರು ‘‘ನನಗೆ ಶ್ರೀಖಂಡ ಗೊತ್ತು, ತುಂಬಾ ಇಷ್ಟ. ಪುಣೆಗೆ ಹೋಗಿಬಂದಾಗೆಲ್ಲ ನಾನು ಅಲ್ಲಿಂದ ಒಂದು ಡಬ್ಬಿ ಶ್ರೀಖಂಡ ಖರೀದಿಸಿ ತರುತ್ತೇನೆ...’’ ಎಂದಿದ್ದರಂತೆ. ಅದನ್ನು ನೆನಪಲ್ಲಿಟ್ಟುಕೊಂಡಿದ್ದ ಗೀತಾ ಈಸಲ ಭೈರಪ್ಪನವರನ್ನು ಡಿನ್ನರ್‌ಗೆ ಕರೆದ ಸಂದರ್ಭದಲ್ಲಿ ಶ್ರೀಖಂಡ ತಯಾರಿಸಿದ್ದರು; ಕೊಬ್ಬು-ಕೊಲೆಸ್ಟ್ರಾಲ್‌ಗಳ ಬಗ್ಗೆ ಭೈರಪ್ಪನವರೂ extra-conscious ಆದ್ದರಿಂದ ಫ‚ಾ್ಯಟ್‌-ಫಿ‚್ರೕ ಯೋಗರ್ಟ್‌ನಿಂದಲೇ ತಯಾರಿಸಿದ್ದರು.

ಅಂದು ನಮ್ಮೊಂದಿಗಿದ್ದ ಶಶಿಕಲಾ ಅವರಿಗಾಗಲೀ ಶಾಮಸುಂದರ್‌ ಅವರಿಗಾಗಲೀ ಶ್ರೀಖಂಡ ಇದೇ ಹೊಸತು. ಆದರೆ ಮಹಾರಾಷ್ಟ್ರದಲ್ಲಿ ತಲೆಮಾರುಗಳ ಹಿಂದಿನ ಬೇರುಗಳಿರುವ ನನಗೆ ಶ್ರೀಖಂಡ ಚೆನ್ನಾಗಿ ಗೊತ್ತು. ಭೈರಪ್ಪನವರಿಗಂತೂ ಇಷ್ಟು ದೂರದ ದೇಶದಲ್ಲಿ, ಪ್ರೀತಿಯಿಂದ ಬಡಿಸಿದ ಶ್ರೀಖಂಡ ತುಂಬ ಖುಷಿಕೊಟ್ಟಿತ್ತು.

*

Bhairappa in conversation with Shama Sundara and M.S. Natarajಭೈರಪ್ಪ ಮತ್ತು ಶ್ರೀಖಂಡ - ಇವೆರಡನ್ನು ನಾನು ತಾಳೆಹಾಕುವುದಕ್ಕೆ ಬೇರೆ ಕಾರಣಗಳೂ ಇವೆ. ಭೈರಪ್ಪನವರ ಕಾದಂಬರಿಗಳ ಪೈಕಿ ವಂಶವೃಕ್ಷ, ಗೃಹಭಂಗ, ದಾಟು, ಅನ್ವೇಷಣ, ಪರ್ವ, ಅಂಚು, ತಂತು, ಭಿತ್ತಿ - ಇವಿಷ್ಟೂ ಮರಾಠಿಗೆ ಅನುವಾದಗೊಂಡಿವೆ. ಎಲ್ಲದರ ಅನುವಾದಕಿ ಉಮಾ ಕುಲಕರ್ಣಿ ಎಂಬುವವರು. ಮಹಾರಾಷ್ಟ್ರದ ಓದುಗರು ಭೈರಪ್ಪನವರನ್ನು ಅಪಾರವಾಗಿ ಮೆಚ್ಚಿಕೊಂಡಿದ್ದಾರೆ. ಭೈರಪ್ಪ ಮರಾಠಿಗರಿಗೆ ಹತ್ತಿರವಾಗಿದ್ದಾರೆ; ಮರಾಠಿಗರ ಸಿಹಿತಿಂಡಿ ಶ್ರೀಖಂಡ ಭೈರಪ್ಪನವರಿಗೆ ಇಷ್ಟವಾಗಿದೆ.

ಇನ್ನೊಂದು ಹೋಲಿಕೆಯನ್ನು ಕೊಡುವುದಾದರೆ ಭೈರಪ್ಪ ಶ್ರೀಖಂಡದಂತೆಯೇ ತಣ್ಣಗಿನ ಸ್ವಭಾವದವರು. ತಣ್ಣಗಿದ್ದೂ ಸತ್ವಯುತರಾಗಿರುವವರು. ವಿವಾದಗಳನ್ನು ಸೃಷ್ಟಿಸುವುದಾಗಲೀ, ಅಸಂಬದ್ಧ ಹೇಳಿಕೆಗಳನ್ನು ಕೊಡುವುದಾಗಲೀ, ಕಣ್ಣುಕಟ್ಟಿನ ಚಳುವಳಿಗಳನ್ನು ಹೂಡಿ ಪಬ್ಲಿಕ್‌ ಅಟೆನ್ಷನ್‌ ಗಳಿಸುವುದಾಗಲೀ ಅವರ ಜಾಯಮಾನವಲ್ಲ. ಅಂದಮಾತ್ರಕ್ಕೆ ಸಾಮಾಜಿಕ ವಿದ್ಯಮಾನಗಳು, ಪ್ರಾಪಂಚಿಕ ವಿಷಯಗಳು, ಭಾಷೆ-ಜಾತಿ-ಧರ್ಮಗಳ ಹೆಸರಲ್ಲಿ ರಾಜಕೀಯ ಡೊಂಬರಾಟಗಳು ಮುಂತಾದುವುಗಳ ಬಗ್ಗೆ ಅವರು ನಿರ್ಲಿಪ್ತರೆಂದೇನೂ ಅಲ್ಲ.

ಮೊನ್ನೆಯ ನಮ್ಮ ಅನೌಪಚಾರಿಕ ಹರಟೆಯಲ್ಲೂ ಭೈರಪ್ಪನವರು ತನ್ನ ತಣ್ಣಗಿನ ವ್ಯಕ್ತಿತ್ವದ ಒಳನೋಟಗಳ ಒಂದೆರಡು ಝಲಕ್‌ ಕೊಟ್ಟರು. ಜಾಗತಿಕ ನೆಲೆಯಲ್ಲಿ ದೇಶಕ್ಕಿಂತ ಧರ್ಮ ಹೆಚ್ಚಿನದೆಂಬ ನಿಲುವಿನ ಇಸ್ಲಾಂ ಮತಾಂಧರಿಂದಾಗುತ್ತಿರುವ ತೊಂದರೆಗಳ ಬಗ್ಗೆ ತಮ್ಮ ಆಕ್ರೋಶವನ್ನು ಖಡಾಖಂಡಿತವಾಗಿ ವ್ಯಕ್ತಪಡಿಸಿದರು. ‘‘ಗಾಂ-ಧಿ-ೕಜಿಯವರು ಒಬ್ಬ ಮಹಾತ್ಮನಾಗಿರಬಹುದು ಆದರೆ ಅವರೊಬ್ಬ ಪ್ರಬುದ್ಧ ರಾಜಕಾರಣಿ ಅಲ್ಲವೇ ಅಲ್ಲ. ದೇಶ ವಿಭಜನೆಯಾಗುವುದಾದರೆ ಅದು ತನ್ನ ಗೋರಿಯ ಮೇಲೆ ಎಂದು ಗಾಂಧಿ--ೕಜಿ ಹೇಳಿದ್ದರು, ಆದರೆ ಅಖಂಡ ಹಿಂದುಸ್ಥಾನವು ಇಬ್ಭಾಗವಾಗಿ ಪಾಕಿಸ್ತಾನ ಪ್ರದೇಶದಿಂದ ಹೇಗೆ ಹಿಂದುಗಳು ಗುಳೇ ಎದ್ದು ಬರಬೇಕಾಯಿತು, ಭಾರತ ಹೇಗೆ ಮುಸ್ಲಿಮರಿಗೆ ವಿಶೇಷ ಸೌಲಭ್ಯಗಳ ಆಶ್ರಯವಿತ್ತು ಪೋಷಿಸುವುದನ್ನು ಈಗಲೂ ಮುಂದುವರೆಸಿದೆ...’’ ಎಂದೆಲ್ಲ ವಿಚಾರಗಳನ್ನು ಮಂಡಿಸುವಾಗ ಭೈರಪ್ಪನವರ ಕೆಚ್ಚು ಜಾಗೃತವಾಗುತ್ತಿತ್ತು.

ವಿಶ್ವ ಕನ್ನಡ ಸಮ್ಮೇಳನದಲ್ಲಿ ಭೈರಪ್ಪನವರೊಂದಿಗೆ ಸಂವಾದ ಎಂಬ ಒಂದು ಕಾರ್ಯಕ್ರಮ ಆಗತಾನೆ ಅಚ್ಚುಕಟ್ಟಾಗಿ ನಡೆದಿತ್ತಾದ್ದರಿಂದ ನಮ್ಮ ಹರಟೆಯಲ್ಲಿ ಭೈರಪ್ಪನವರ ಸಾಹಿತ್ಯಕೃಷಿಯ ಬಗ್ಗೆ ಅಷ್ಟೇನೂ ಪ್ರಶ್ನೆಗಳಿರಲಿಲ್ಲ. ಆದರೆ ಅವರ ‘ಬರೆಯುವ ಕ್ರಮ’ದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ನಮ್ಮೆಲ್ಲರಲ್ಲೂ ಇತ್ತು. ದಿನಕ್ಕೆ 10-12 ಗಂಟೆಗಳನ್ನು ಅವರು ಬರವಣಿಗೆಗೆ ಮೀಸಲಿಡುತ್ತಾರಂತೆ, ಅದರಲ್ಲಿ ಮೂರ್ನಾಲ್ಕು ಗಂಟೆ ‘ಬರೆಯುವುದಕ್ಕೆ’, ಉಳಿದಂತೆ ಬರವಣಿಗೆಗೆ ಸಂಬಂ-ಧಿ-ಸಿದ ಚಿಂತನ-ಮಂಥನಗಳಿಗೆ. ಕೆಲವೊಮ್ಮೆ ಒಂದೆರಡು ಗಂಟೆ ಏನೇನೂ ಮಾಡದೆ ಹಾಗೇ ಕುಳಿತು ‘ಧ್ಯಾನಸ್ಥ’ರಾಗುವುದೂ ಇದೆಯಂತೆ! ಒಂದು ಕಾದಂಬರಿ ರಚನೆಯಾಗಬೇಕಾದರೆ ಸುಮಾರು ನಾಲ್ಕೈದು ವರ್ಷಗಳ ತಯಾರಿ, ಅದಾದ ಮೇಲೆ ಆರೇಳು ತಿಂಗಳು ಹಸ್ತಪ್ರತಿ ಸಿದ್ಧಪಡಿಸಲು. ಇತ್ತೀಚಿನ ಸಾರ್ಥ, ಮಂದ್ರಗಳೆರಡರ ಸಿದ್ಧತೆಗೂ ತಲಾ ಐದು ವರ್ಷಗಳು ತಗುಲಿದವಂತೆ.

ಒಮ್ಮೆ ನೋಡಿದ್ದನ್ನು, ಕೇಳಿದ್ದನ್ನು ಮನಸ್ಸಿನಲ್ಲಿ ಅಚ್ಚೊತ್ತಿದಂತೆ ನೆನಪಿಟ್ಟುಕೊಳ್ಳುವ ಶಕ್ತಿ ಭೈರಪ್ಪನವರಿಗೆ ಈ ವಯಸ್ಸಲ್ಲೂ ಅದ್ಭುತಪ್ರಮಾಣದಲ್ಲಿದೆ. ಇಲ್ಲಾಂದರೆ ಬದುಕಿನ ಸೂಕ್ಷ್ಮಗಳನ್ನು ಪ್ರತಿಬಿಂಬಿಸುವ ಇಷ್ಟೊಂದು ವೈವಿಧ್ಯಮಯ ಪಾತ್ರಚಿತ್ರಣಗಳನ್ನು ಅದ್ಹೇಗೆ ತಾನೆ ಕೆತ್ತಬಲ್ಲವರಾಗುತ್ತಿದ್ದರು! ಅವರ ‘ಏಕಪಾಠಿ’ತನಕ್ಕೆ ಒಂದು ಚಿಕ್ಕ ನಿದರ್ಶನ ನನ್ನ ಅನುಭವಕ್ಕೆ ಬಂತು. ಸಮ್ಮೇಳನದಲ್ಲಿ ಭೈರಪ್ಪನವರು ಭೇಟಿಯಾದಾಗ ಅವರಿಗೆ ನಮಸ್ಕರಿಸಿ ಪರಿಚಯಮಾಡಿಕೊಳ್ಳುತ್ತ ನಾನು ಮೂಲತಃ ಕಾರ್ಕಳದವನು ಎಂದಿದ್ದೆ. ಆಮೇಲೆ ನಟರಾಜ್‌ ಮನೆಯಲ್ಲಿ ಭೇಟಿಯ ಸಂದರ್ಭದಲ್ಲಿ, ‘‘ವಿಶ್ವ ಕನ್ನಡ ಸಮ್ಮೇಳನದಲ್ಲಿ ನಡೆದ ‘ಸಂವಾದ’ದಂಥ ಕಾರ್ಯಕ್ರಮಗಳು ಕರ್ನಾಟಕದಲ್ಲೂ ನಡಿದಿವೆಯಾ?’’ ಎಂಬ ಪ್ರಶ್ನೆಗೆ ಭೈರಪ್ಪನವರು, ‘‘ಹೌದು, ಬೆಂಗಳೂರಲ್ಲಿ ಇಂಥ ಸಂವಾದಗಳು ನಡೆದಿವೆ. ಧಾರವಾಡದಲ್ಲಿ ಒಂದೆರಡು ಸಂವಾದಗಳು ಆಗಿವೆ. ಒಂದು ಸಂವಾದ ನಿಮ್ಮ ಕಾರ್ಕಳದಲ್ಲೂ ನಡೆದಿದೆ...’’ ಎಂದು ನನ್ನತ್ತ ನೋಡಿಹೇಳಿದಾಗ ಅವರ ಜ್ಞಾಪಕಶಕ್ತಿಗೆ ನಿಜಕ್ಕೂ ದಂಗಾದೆ!

*

Joshi presenting Vichitranna book to Bhairappaನಾನು ‘ವಿಚಿತ್ರಾನ್ನ’ ಪುಸ್ತಕದ ಪ್ರತಿಯನ್ನು ಕೊಟ್ಟು ಭೈರಪ್ಪನವರಿಗೆ ಗೌರವ ಸಲ್ಲಿಸಿದೆ; ಕನ್ನಡದ ಮಹಾನ್‌ಕಾದಂಬರಿಕಾರನೊಂದಿಗೆ ಕಳೆದ ಕ್ಷಣಗಳನ್ನು ನೆನಪಿನ ದಾಸ್ತಾನಿಗೆ ಸೇರಿಸುತ್ತ, ಅದರ ಬಗ್ಗೆಯೇ ಒಂದು ಕಂತು ವಿಚಿತ್ರಾನ್ನವನ್ನೂ ಬರೆದೇಬಿಟ್ಟೆ; ಅದರಲ್ಲೂ ಟಿಪಿಕಲ್‌-ವಿಚಿತ್ರಾನ್ನದ ಛಾಪು ಇರಲಿ ಎಂದು, ಭೈರಪ್ಪನವರ ಕಾದಂಬರಿಕೃಷಿ ಕುರಿತು ಇದೊಂದು ಆಶು‘ಪ್ಯಾರಾಗ್ರಾಫ್‌’ ಸೇರಿಸಿ ಒಗ್ಗರಣೆಯನ್ನೂ ಹಾಕಿದೆ!

ಸ್ಮರಣ ‘ತಂತು’ಗಳು ಚಿತ್ತ‘ಭಿತ್ತಿ’ಯ ‘ಅಂಚು’ಗಳನ್ನು ‘ದಾಟು’ತ್ತವೆ, ಅಲ್ಲಿ ‘ನೆಲೆ’ಗೊಳ್ಳುತ್ತವೆ, ಸಾಹಿತ್ಯರಚನೆಯ ‘ಪರ್ವ’ಕಾಲ ಬಂದಾಗ ‘ಸಾರ್ಥ’ವಾಗಿ ‘ಮಂದ್ರ’ಸ್ಥಾಯಿಯಲ್ಲಿ ಹರಳುಗಟ್ಟಿ ಅನನ್ಯ ಕೃತಿಯಾಂದರ ರಚನೆಗೆ ‘ಸಾಕ್ಷಿ’ಯಾಗುತ್ತವೆ. ಅಖಂಡ ಸಾಹಿತ್ಯಲೋಕವು ಕಾದಂಬರಿಯನ್ನು ಆದರದಿಂದ ಸ್ವಾಗತಿಸುತ್ತದೆ; ವಿಮರ್ಶೆ-ಚರ್ಚೆಗಳು ನಡೆಯುತ್ತವೆ. ಭೈರಪ್ಪನವರು cool ಆಗಿಯೇ ಇರುತ್ತಾರೆ, ಶ್ರೀಖಂಡದಂತೆ!

- srivathsajoshi@yahoo.com

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more