• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈಸ್ಟರ್‌ - ಸೌರಮಾನವೇ? ಚಾಂದ್ರಮಾನವೇ?

By * ಶ್ರೀವತ್ಸ ಜೋಶಿ
|

ಪ್ರಕೃತಿಯ ನವಚೈತನ್ಯವನ್ನು ಮಾನವಜನಾಂಗ ಹಬ್ಬವನ್ನಾಗಿಸಿ ಸಂಭ್ರಮಿಸುವ ರೀತಿ - ಅದು ನಮ್ಮ ಸಂಕ್ರಾಂತಿಯೇ ಇರಲಿ, ಯುಗಾದಿಯೇ ಇರಲಿ, ಶರನ್ನವರಾತ್ರಿಯೇ ಇರಲಿ ಅಥವಾ ಯೇಸುಕ್ರಿಸ್ತನ ಪುನರುತ್ಥಾನ ಪ್ರತೀಕದ ಈಸ್ಟರ್‌ ಹಬ್ಬವೇ ಇರಲಿ - ಜಾತಿಮತದೇಶಗಳ ಸೀಮೆಗಳಿಗಿಂತ ಮಿಗಿಲಾದುದು ಎಂದನಿಸುವುದಿಲ್ಲವೇ? ವಿಚಿತ್ರಾನ್ನ-183ನೇ ಸಂಚಿಕೆಯಲ್ಲಿ 'ಈಸ್ಟರ್‌" ಸಂಭ್ರಮ.

ನಮ್ಮ ಯುಗಾದಿಹಬ್ಬವಾದರೆ ಚಾಂದ್ರಮಾನ ರೀತ್ಯಾ ಒಂದು ದಿನ, ಸೌರಮಾನ ಪದ್ಧತಿಯನ್ನನುಸರಿಸುವವರಿಗೆ ಇನ್ನೊಂದು ದಿನ ಅಂತ ಗೊತ್ತು, ಮುಸಲ್ಮಾನ ಹಬ್ಬಗಳ ದಿನವೂ ಚಂದ್ರನ ಚಲನವಲನವನ್ನು ಆಧರಿಸಿ ನಿರ್ಧರಿಸುವಂಥದ್ದೆಂದೂ ಗೊತ್ತು; ಆದರೆ ಕ್ರಿಶ್ಚಿಯನ್‌ ಹಬ್ಬಗಳು ಆಚರಣೆಗಳು ಬಹುತೇಕವಾಗಿ ತಾರೀಕಿನ ಆಧಾರದಲ್ಲೇ ಅಂದರೆ ಸೂರ್ಯನ ಚಲನೆಯ ಮೇಲೆ ನಿಗದಿಯಾಗಿರುತ್ತವೆ ಎಂಬುದು ನಮ್ಮೆಲ್ಲರ ಸಾಮಾನ್ಯ ತಿಳಿವಳಿಕೆ ಅಲ್ಲವೇ? ಇದಕ್ಕೆ ಅಪವಾದವಾಗಿ ಮತ್ತು ಸ್ವಾರಸ್ಯಕರವಾಗಿ ಕ್ರೈಸ್ತಧರ್ಮದವರ ಬಹುಮುಖ್ಯ ಹಬ್ಬವಾದ 'ಈಸ್ಟರ್‌" ಯಾವ ದಿನ ಆಚರಿಸಲ್ಪಡುತ್ತದೆಯೆಂಬ ಲೆಕ್ಕಾಚಾರದಲ್ಲಿ ಸೂರ್ಯ-ಚಂದ್ರರಿಬ್ಬರದೂ ಪರಿಗಣನೆಯಿರುವುದು! ಅಂದರೆ, ಈಸ್ಟರ್‌ ಹಬ್ಬವು ಎಷ್ಟು ಸೌರಮಾನವೋ ಅಷ್ಟೇ ಚಾಂದ್ರಮಾನವೂ ಹೌದು!

ಈಸ್ಟರ್‌ ಸಂಡೇ ಅಂದರೆ ನಮಗೆಲ್ಲ ತಿಳಿದಿರುವಂತೆ ಏಸುಕ್ರಿಸ್ತನ ಪುನರುತ್ಥಾನ (resurrection) ಆದ ದಿನ. ಅದಕ್ಕೆ ಮೂರು ದಿನಗಳ ಹಿಂದೆ 'ಗುಡ್‌ ಫ್ರೈಡೇ"ಯಂದು ಕ್ರಿಸ್ತನನ್ನು ಶಿಲುಬೆಗೇರಿಸಿದ್ದು. ಪ್ರತಿವರ್ಷ ಈಸ್ಟರ್‌ ಸಂಡೇ (ಮತ್ತು ಅದರ ಹಿಂದಿನ ಗುಡ್‌ ಫ್ರೈಡೇ) ಯಾವ ದಿನಾಂಕದಂದು ಬರುತ್ತದೆಯೆಂಬುದು, ಮೇಲ್ನೋಟಕ್ಕೆ ಸುಲಭವಾಗಿ ಕಾಣುವ ಆದರೆ ನಿಜವಾಗಿಯೂ ಸಂಕೀರ್ಣವಾದ ಲೆಕ್ಕಾಚಾರ.

ಸುಲಭವಾದ ಲೆಕ್ಕಾಚಾರದಂತೆ ''ಪ್ರತಿವರ್ಷ ಮಾರ್ಚ್‌ 21ರಂದು ಸಂಭವಿಸುವ ಸಮನಿಶಿ (Equinox) ನಂತರದ ಹುಣ್ಣಿಮೆಯ ತರುವಾಯ ಬರುವ ಮೊದಲ ಭಾನುವಾರ""ವೇ ಈಸ್ಟರ್‌ ಸಂಡೇ. ಅದರ ಹಿಂದಿನ ಶುಕ್ರವಾರವೇ ಗುಡ್‌ ಫ್ರೈಡೇ. ಈ ವ್ಯಾಖ್ಯೆಯ ಪ್ರಕಾರ ಈಸ್ಟರ್‌ ಸಂಡೇ ಯಾವುದೇ ವರ್ಷದಲ್ಲಿ ಮಾರ್ಚ್‌ 22ರಿಂದ ಏಪ್ರಿಲ್‌ 25ರವರೆಗಿನ ಅವಧಿಯಲ್ಲೇ ಬರುತ್ತದೆ. ಈವರ್ಷ (2006) ಮಾರ್ಚ್‌ 21ರ Equinox ನಂತರ ಮೊದಲ ಹುಣ್ಣಿಮೆ ಬರುವುದು ಏಪ್ರಿಲ್‌ 13ರಂದು. ಹಾಗಾಗಿ ಅದರ ನಂತರದ ಭಾನುವಾರ ಏಪ್ರಿಲ್‌ 16ಕ್ಕೆ ಈಸ್ಟರ್‌ ಸಂಡೇ ಆಚರಣೆ. ಈಸ್ಟರ್‌ ಸಂಡೇಯ ಹಿಂದಿನ ಶುಕ್ರವಾರವು ಈವರ್ಷ ಏಪ್ರಿಲ್‌ 14 ತಾರೀಕಿನಂದು, ಆದ್ದರಿಂದ ಅವತ್ತು ಗುಡ್‌ ಫ್ರೈಡೇ. (ಲೇಖನ ಪ್ರಕಟವಾಗಿದ್ದು 2006ರಲ್ಲಿ)

ಸರಿಸುಮಾರಾಗಿ ಸರಳವೇ ಆಗಿರುವ ಈ ಲೆಕ್ಕಾಚಾರವು ಸಂಕೀರ್ಣವಾಗುವುದು ಯಾವ ಕ್ಯಾಲೆಂಡರ್‌ (ಗ್ರೆಗೊರಿಯನ್‌ ಅಥವಾ ಜುಲಿಯನ್‌) ದಿನಾಂಕಗಳನ್ನು ಪರಿಗಣಿಸಬೇಕು, ಉತ್ತರಾಯಣದಲ್ಲಿ ಸೂರ್ಯನು ಭೂಮಧ್ಯರೇಖೆಯನ್ನು ದಾಟುವ ದಿನವಾದ ಇಕ್ವಿನೊಕ್ಸ್‌ (ಹಗಲು ಮತ್ತು ರಾತ್ರೆಗಳೆರಡೂ ಒಂದೇ ಅವಧಿಯದಾಗಿರುವ ವಿದ್ಯಮಾನ) ಮಾರ್ಚ್‌ 21ಕ್ಕೆ ಸರಿಯಾಗಿ ಬರುವುದೇ ಅಥವಾ ಒಂಚೂರು ಆಚೀಚೆ ಇರುವುದೇ, ಇಕ್ವಿನೊಕ್ಸ್‌ ನಂತರದ ಹುಣ್ಣಿಮೆಯ ದಿನವು ಭೂಮಿಯ ಯಾವ ಭಾಗದಲ್ಲಿ ಪೂರ್ಣಚಂದ್ರದರ್ಶನವನ್ನಾಧರಿಸಿ ಪರಿಗಣಿತವಾಗಬೇಕು, ಅಂತಾರಾಷ್ಟ್ರೀಯ ದಿನರೇಖೆಯ (International date line) ಎರಡೂ ಮಗ್ಗುಲುಗಳಲ್ಲಿರುವ ಪ್ರದೇಶಗಳವರು ಯಾವ ದಿನವನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು... ಇತ್ಯಾದಿ ಹೆಚ್ಚುವರಿ ಮತ್ತು ಮುಖ್ಯವೆನಿಸುವ ಅಂಶಗಳನ್ನು ಪರಿಗಣಿಸಿದಾಗ.

ಈಸ್ಟರ್‌ ದಿನನಿರ್ಧಾರದ ಈ ವಿಷಯದಲ್ಲೇ ಕ್ರಿಶ್ಚಿಯನ್‌ ಸಮುದಾಯದಲ್ಲಿ ಮುಖ್ಯವಾಗಿ ಎರಡು ಬಣಗಳಾಗಿರುವುದು. ಪೌರ್ವಾತ್ಯ ಸಾಂಪ್ರದಾಯಿಕ ಚರ್ಚ್‌ ಎಂದು ಕರೆಯಲ್ಪಡುವ ಪಂಗಡವು ಇಕ್ವಿನೊಕ್ಸ್‌ ಮತ್ತು ನಂತರದ ಹುಣ್ಣಿಮೆಯು ಜೆರುಸಲೆಮ್‌ನ (ಕ್ರಿಸ್ತನನ್ನು ಶಿಲುಬೆಗೆ ಆರೋಹಿಸಿದ ಮತ್ತು ಅವನ ಪುನರುತ್ಥಾನವಾದ ಸ್ಥಳ) ಅಕ್ಷಾಂಶ-ರೇಖಾಂಶಗಳಿಗೆ ಅನ್ವಯವಾಗುವಂತೆ ಯಾವಾಗ ಬರುತ್ತದೆಯೆಂದು ಲೆಕ್ಕಮಾಡಿ ಅದರಂತೆ ಈಸ್ಟರ್‌ ದಿನವನ್ನು ನಿರ್ಧರಿಸುತ್ತದೆ. ಉದಾಹರಣೆಗೆ ಈ ವರ್ಷ (2006ರಲ್ಲಿ) ಇಕ್ವಿನೊಕ್ಸ್‌ ಮಾರ್ಚ್‌ 20ರ ಸಂಜೆಯೇ ಆಯ್ತು. ಪಾಶ್ಚಾತ್ಯ ಚರ್ಚ್‌, ಇಕ್ವಿನೊಕ್ಸ್‌ ಪ್ರತಿವರ್ಷವೂ ಮಾರ್ಚ್‌ 21ಕ್ಕೇ ಬರುತ್ತದೆಯೆಂದು ಪರಿಗಣಿಸಿ ಇಕ್ವಿನೊಕ್ಸ್‌ ನಂತರದ ಹುಣ್ಣಿಮೆಯ ದಿನವನ್ನೂ ಈಗಾಗಲೇ ಸಿದ್ಧಪಡಿಸಿಟ್ಟಿರುವ ಕೋಷ್ಟಕದ ರೀತ್ಯಾ ಗೊತ್ತುಪಡಿಸಿ ಈಸ್ಟರ್‌ ದಿನವನ್ನು ನಿರ್ಧರಿಸುತ್ತದೆ.

ಇರಲಿ, ಈಸ್ಟರ್‌ ದಿನನಿರ್ಧಾರದ ಆ ಗೊಂದಲವನ್ನು ಕ್ರೈಸ್ತಧರ್ಮಗುರುಗಳಿಗೆ, ಖಗೋಳ ಶಾಸ್ತ್ರಜ್ಞರಿಗೆ, ಗಣಿತಜ್ಞರಿಗೆ ಬಿಟ್ಟು ಈಸ್ಟರ್‌ ಬಗ್ಗೆ ಬೇರೆ ಕೆಲವು ಸ್ವಾರಸ್ಯಕರ ಸಂಗತಿಗಳೊಂದಿಷ್ಟನ್ನು ಅವಲೋಕಿಸೋಣ.

ಈಸ್ಟರ್‌ ಹಬ್ಬದ ಹೆಸರಿನ ಮೂಲ ಬ್ಯಾಬಿಲೋನಿಯನ್‌ ಸಂಸ್ಕೃತಿಯಲ್ಲಿ ಪ್ರೀತಿ ಮತ್ತು ಸಂತಾನೋತ್ಪತ್ತಿಯ ದೇವತೆಯಾದ Ishtar. ಜೀವನಚೈತನ್ಯವನ್ನು ಉಡುಗಿಸುವ ಚಳಿ ಹಿಮಪಾತಗಳ ನಂತರ ಪ್ರಕೃತಿಯಲ್ಲಿ ನಳನಳಿಸುವ ಕಾಂತಿಯನ್ನು, ಉಲ್ಲಾಸವನ್ನು ತರುವ ವಸಂತಋತುವಿಗೆ ಉತ್ಸಾಹ ಸಡಗರ ತುಂಬಿದ ಸ್ವಾಗತ ಕೋರುವ ಕ್ರಮ ಪ್ರಾಚೀನ ಸಂಸ್ಕೃತಿಗಳೆಲ್ಲದರಲ್ಲೂ ಇತ್ತು. ಪ್ರಕೃತಿಯನ್ನು ಚಿಗುರಿಸುವ ಆ ದೇವತೆಯನ್ನು ಸ್ಕಾಂಡಿನೇವಿಯನ್ನರು Ostra ಎಂದೂ ಆಂಗ್ಲೊಸಾಕ್ಸನ್ನರು Eostre ಎಂದೂ, ಜರ್ಮನ್ನರು Eastre ಎಂದೂ ಕರೆದು ಗೌರವಿಸುತ್ತಿದ್ದರು. ಐರೋಪ್ಯ ಭಾಷೆಗಳಲ್ಲಿನ ಈ ಪದಗಳೇ ಆಂಗ್ಲಭಾಷೆಯಲ್ಲಿ Easter ಎಂದಾಗಿದ್ದು ಅತಿಸಂಭ್ರಮದ ಕ್ರಿಶ್ಚಿಯನ್‌ ಹಬ್ಬಗಳ ಪೈಕಿ ಒಂದಾಗಿದೆ.

ಈಸ್ಟರ್‌ಗೂ ಮೊಟ್ಟೆಗಳಿಗೂ ನಂಟಿರುವುದು, ಮೊಟ್ಟೆಯು ಸಂತಾನವೃದ್ಧಿಯ ಅರ್ಥಪೂರ್ಣ ಸಂಕೇತವಾಗಿರುವುದರಿಂದ. ಬಣ್ಣ ಬಳಿದ ಮೊಟ್ಟೆಗಳು ಅಥವಾ ಮೊಟ್ಟೆಯಾಕಾರದ ವಸ್ತುಗಳು ಈಸ್ಟರ್‌ ಹಬ್ಬದ ಉಡುಗೊರೆಗಳಲ್ಲಿ ಅತಿ ಮುಖ್ಯವಾದುವು. ತಿಂಗಳುಗಟ್ಟಲೆ ಚಳಿಗಾಲದ ಕಪ್ಪುಕತ್ತಲೆಯ ನಂತರ ಸೂರ್ಯರಶ್ಮಿಯ ಪುನರ್ದರ್ಶನವಾಗುವುದು ಒಂದು ಪವಾಡವೇ ಎಂದು ನಂಬಿದ್ದ ಜನರು ಮೊಟ್ಟೆಗಳನ್ನು ಪ್ರಕೃತಿಯ ನವೀಕರಣದ ಸಂಕೇತವಾಗಿಸಿಕೊಂಡಿದ್ದು ಆಶ್ಚರ್ಯವೇನೂ ಇಲ್ಲ. ಮೊಟ್ಟೆಯ ಕವಚದಿಂದ ಹೊರಬರುವ ಮರಿ ಮತ್ತು ಸಮಾಧಿಯಿಂದ ಪುನರುತ್ಥಾನಗೊಂಡು ಬರುವ ಪ್ರಭು ಏಸು - ಪ್ರಕೃತಿಯಲ್ಲಿ ಧರ್ಮತತ್ವವನ್ನು ಕಾಣುವ ಮಾನವನ ಸ್ವಭಾವಕ್ಕೆ ಅತಿ ಸಮಂಜಸವಾದ ನಿದರ್ಶನ.

ಈಸ್ಟರ್‌ ಹಬ್ಬದ ವಾತಾವರಣದ ಇನ್ನೊಂದು ಅವಿನಾಭಾವ ಸಂಕೇತವಾದ ಮೊಲ ಸಹ ಸಂತಾನಾಭಿವೃದ್ಧಿಯ ಪ್ರತೀಕ. ರಾತ್ರಿಯ ಹೊತ್ತಿನಲ್ಲಿ ಆಹಾರವನ್ನು ಹುಡುಕುತ್ತ ಹೊರಡುವ ಮೊಲವು ಚಂದ್ರನ ಪ್ರತಿನಿಧಿಯಾಗಿಯೂ ಈಸ್ಟರ್‌ ಹಬ್ಬಕ್ಕೆ ಕಳೆಯೇರಿಸುತ್ತದೆಯೆಂದು ಪ್ರಾಚೀನ ಈಜಿಪ್ಟ್‌ ಮತ್ತು ಪರ್ಸಿಯನ್‌ ಸಂಸ್ಕೃತಿಗಳ ಜನರ ನಂಬಿಕೆಯಿದೆ.

ಹಾಗೆ ನೋಡಿದರೆ ಈಸ್ಟರ್‌ಗೆ ಸಂಬಂಧಪಟ್ಟಂತೆ ಪ್ರಪಂಚದ ಬೇರೆಬೇರೆ ಭಾಗಗಳಲ್ಲಿ ಸ್ವಾರಸ್ಯಕರ ನಂಬಿಕೆಗಳು, ಆಚರಣೆಗಳ ವೈವಿಧ್ಯಗಳು ಯಥೇಷ್ಟವಾಗಿ ಕಾಣಸಿಗುತ್ತವೆ. ಈಸ್ಟರ್‌ ಹಬ್ಬದ ದಿನ ಹೊಸಬಟ್ಟೆ ಧರಿಸುವ ರಿವಾಜಿನ ಬಗ್ಗೆ ಕೂಡ ದಂತಕಥೆಗಳಿವೆ. ಈಸ್ಟರ್‌ ಆಚರಣೆಗಿಂತ ಮುಂಚಿನ ದಿನಗಳು ಒಂದು ರೀತಿಯಲ್ಲಿ ಸೂತಕದ ದಿನಗಳಿದ್ದಂತೆ. ಆಗ ಹಳೆಬಟ್ಟೆಗಳನ್ನೇ ಧರಿಸಿರಬೇಕಾಗುತ್ತಿತ್ತು. ಈಸ್ಟರ್‌ ಸಂಭ್ರಮವನ್ನು ಸಾರುವುದಕ್ಕಾಗಿಯೇ ಹಳೆಬಟ್ಟೆಗಳನ್ನು ಬಿಸಾಕಿ ಹೊಸದನ್ನು ಧರಿಸಬೇಕು. ಒಂದುವೇಳೆ ಯಾರಾದರೂ ಹೊಸಬಟ್ಟೆ ಧರಿಸದಿದ್ದರೆ ಪ್ರಾಣಿಪಕ್ಷಿಗಳು ಅವರನ್ನು ಭ್ರಷ್ಟರನ್ನಾಗಿಸಬಹುದು, ಕಾಗೆ-ಗೂಬೆಗಳು ಬಂದು ಕಣ್ಣುಕುಕ್ಕಬಹುದು ಎಂದೆಲ್ಲ ನಂಬಿಕೆಗಳಿವೆಯಂತೆ.

ನಾರ್ವೆಯಲ್ಲಿ ಈಸ್ಟರ್‌ ಸಂದರ್ಭದಲ್ಲಿ ಪತ್ತೆದಾರಿ ಕಾದಂಬರಿಗಳು ಮತ್ತು ಕ್ರೈಮ್‌ಥ್ರಿಲ್ಲರ್‌ಗಳನ್ನೋದುವುದು ಒಂದು ಕಾಲಕ್ಷೇಪ ವಿಧಾನವಾಗಿದೆ. ಕೊಲೆಸುಲಿಗೆಗಳ ಕಥಾನಕಗಳನ್ನೋದುವುದು ಕ್ರಿಸ್ತನ ಮರಣವನ್ನು ಪ್ರತಿಬಿಂಬಿಸುವ ಒಂದು ನಮೂನೆಯಿರಬಹುದು ಎಂದು ನಂಬಲಾಗುತ್ತದೆ. ಈಸ್ಟರ್‌ಗೆ ಸುತ್ತಮುತ್ತ ನಾಲ್ಕೈದು ದಿನಗಳ ರಜೆ ಇದ್ದು ಜನರು ಬೆಟ್ಟಪ್ರದೇಶಗಳಿಗೆ ಪ್ರವಾಸ ಹೋಗುತ್ತಾರೆ.

ಲಾಟ್ವಿಯಾ ದೇಶದಲ್ಲಿ ಈಸ್ಟರ್‌ ವಿಶೇಷವಾಗಿ ಮೊಟ್ಟೆಗಳನ್ನೊಡೆಯುವ ಸ್ಪರ್ಧೆಯಿರುತ್ತದೆ (ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ತೆಂಗಿನಕಾಯಿಗಳನ್ನು ಒಂದಕ್ಕೊಂದು ಕುಟ್ಟಿ ಒಡೆಯುವ ಸ್ಪರ್ಧೆಯಿದ್ದಂತೆ ಇರಬಹುದು). ವಿಧವಿಧದ ಮೊಟ್ಟೆಗಳ ಜತೆ ಸೆಣಸಾಡಿಯೂ ಒಡೆಯದೇ ಇರುವ ಮೊಟ್ಟೆಯುಳ್ಳವ ಸ್ಪರ್ಧೆಯಲ್ಲಿ ವಿಜೇತನಾಗುತ್ತಾನೆ.

ಬರ್ಮುಡಾದ ಬಿಳಿ ಲಿಲ್ಲಿ ಹೂಗಳು ಈಸ್ಟರ್‌ ಅಲಂಕಾರಕ್ಕೆಂದು ಬಳಕೆಯಾಗುವ ಹೂಗಳು. ಅಮೆರಿಕದಲ್ಲಿ ಇವು ಈಸ್ಟರ್‌ ಲಿಲ್ಲಿಗಳೆಂದೇ ಪ್ರಖ್ಯಾತ. ಏಸುವಿನ ಪುನರುತ್ಥಾನದ ವೇಳೆ ಗೇಬ್ರಿಯಲ್‌ ನುಡಿಸಿದ ಟ್ರಂಪೆಟ್‌ ಆಕಾರ ಈ ಲಿಲ್ಲಿ ಹೂಗಳಿಗಿರುವುದರಿಂದ ಮತ್ತು ಅವು ಪರಿಶುದ್ಧತೆಯ ಅಚ್ಚಬಿಳಿ ಬಣ್ಣದಲ್ಲಿರುವುದರಿಂದ ಈಸ್ಟರ್‌ ಹಬ್ಬದ ವಿಶೇಷವಾಗಿ ಬಳಕೆಯಾಗುತ್ತವೆ.

ಮೆಕ್ಸಿಕೊ ದೇಶದಲ್ಲಿ ಈಸ್ಟರ್‌ ಆಚರಣೆಯಾಗಿ ನೃತ್ಯ-ನಾಟಕಗಳ ವಿಶೇಷವಿರುತ್ತದೆ. ಇದರಲ್ಲಿ ಊರವರೆಲ್ಲ ಭಾಗವಹಿಸುತ್ತಾರೆ, 1833ರಲ್ಲಿ ಅಲ್ಲಿ ಕಾಣಿಸಿಕೊಂಡ ಕಾಲರಾ ಹೆಮ್ಮಾರಿಯ ನಂತರ ಬದುಕುಳಿದವರು ಕೃತಜ್ಞತಾರೂಪದಲ್ಲಿ ಈರೀತಿ ರೂಪಕಗಳನ್ನು ಅಭಿನಯಿಸುತ್ತಾರಂತೆ. ಸ್ವೀಡನ್‌ನಲ್ಲಿ ಈಸ್ಟರ್‌ ಆಚರಣೆಯು ಅಮೆರಿಕದ ಹ್ಯಾಲೊವಿನ್‌ ಆಚರಣೆಯನ್ನು ಹೋಲುತ್ತದೆ. ಸ್ವೀಡನ್‌ನಲ್ಲಿ ಈಸ್ಟರ್‌ನ ಹಿಂದಿನ ದಿನ ದೆವ್ವಗಳು ಕಸಬರಿಕೆ ಹಿಡಿದುಕೊಂಡು ಚರ್ಚ್‌ ಗಂಟೆಗಳನ್ನು ಸ್ವಚ್ಛಗೊಳಿಸಲು ಬರುತ್ತಾರೆಂಬ ಪ್ರತೀತಿಯಿದೆ.

'ಶ್ವೇತಭವನದ ಹುಲ್ಲುಹಾಸಿನಲ್ಲಿ ಈಸ್ಟರ್‌ ಮೊಟ್ಟೆ ಹುಡುಕುವ ಆಟ" ಅಮೆರಿಕ ರಾಜಧಾನಿಯಲ್ಲಿ ರಾಷ್ಟ್ರಾಧ್ಯಕ್ಷರ ಅಧಿಕೃತ ನಿವಾಸದಲ್ಲಿ ಈಸ್ಟರ್‌ ಆಚರಣೆಯ ವಿಶೇಷ. ಈಸ್ಟರ್‌ನ ಮಾರನೆದಿನ ಸೋಮವಾರದಂದು ಶ್ವೇತಭವನದ ಸುತ್ತಲ ಹುಲ್ಲುಹಾಸಿನ ಪ್ರದೇಶದಲ್ಲಿ ಬಣ್ಣಬಣ್ಣದ ಮೊಟ್ಟೆಗಳನ್ನು ಅಡಗಿಸಿಡಲಾಗುತ್ತದೆ. ಆ ಮೊಟ್ಟೆಗಳ ಮೇಲೆ ಗಣ್ಯವ್ಯಕ್ತಿಗಳು ಸಹಿ ಮಾಡಿದ್ದಿರುತ್ತದೆ. ಗಣ್ಯರೆಂದರೆ ಕ್ರೀಡೆ, ವಿಜ್ಞಾನ, ಚಲನಚಿತ್ರ, ಸಂಗೀತ ಇತ್ಯಾದಿ ವಿವಿಧ ಕ್ಷೇತ್ರಗಳವರು. ಕೆಲವೇ ಕೆಲವು ಮೊಟ್ಟೆಗಳ ಮೇಲೆ ಸ್ವತಃ ಪ್ರೆಸಿಡೆಂಟ್‌ ಮತ್ತು ಫ‚ಸ್ಟ್‌ ಲೇಡಿ ಸಹಿಮಾಡಿರುತ್ತಾರೆ. ಪುಟ್ಟಪುಟ್ಟ ಮಕ್ಕಳು ಈ ಮೊಟ್ಟೆಗಳನ್ನು ಹುಡುಕಿ ತೆಗೆದು ನಿಧಿ ಸಿಕ್ಕವರಂತೆ ಸಂಭ್ರಮಪಟ್ಟುಕೊಳ್ಳುತ್ತಾರೆ.

ಅಂತೂ ಮಾನವಜನಾಂಗ ಪ್ರಕೃತಿಯ ನವಚೈತನ್ಯವನ್ನು ಹಬ್ಬವನ್ನಾಗಿಸಿ ಸಂಭ್ರಮಿಸುವ ರೀತಿ - ಅದು ನಮ್ಮ ಸಂಕ್ರಾಂತಿಯೇ ಇರಲಿ, ಯುಗಾದಿಯೇ ಇರಲಿ, ಶರನ್ನವರಾತ್ರಿಯೇ ಇರಲಿ ಅಥವಾ ಪುನರುತ್ಥಾನ ಪ್ರತೀಕದ ಈಸ್ಟರ್‌ ಹಬ್ಬವೇ ಇರಲಿ - ಜಾತಿಮತದೇಶಗಳ ಸೀಮೆಗಳಿಗಿಂತ ಮಿಗಿಲಾದುದು ಎಂದನಿಸುವುದಿಲ್ಲವೇ?

*

ಈಸ್ಟರ್‌ ಕುರಿತ ಸಾಮಾನ್ಯಜ್ಞಾನ ಸಂಚಯದ ಈ ಸಂಚಿಕೆಯಂಥವು ವಿಚಿತ್ರಾನ್ನದಲ್ಲಿ ಆಗೊಮ್ಮೆ ಈಗೊಮ್ಮೆ ಸ್ವಾಗತಾರ್ಹವೆ? ಈ ಬಗ್ಗೆ ತಿಳಿಸುತ್ತ ನಿಮ್ಮ ಅನಿಸಿಕೆ, ಅಭಿಪ್ರಾಯ, ಸಲಹೆ ಸೂಚನೆಗಳನ್ನು ಎಂದಿನಂತೆಯೇ ಪತ್ರ ಬರೆದು ತಿಳಿಸುತ್ತೀರಲ್ಲವೆ? ವಿಳಾಸ - srivathsajoshi@yahoo.com

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Vichitranna Columnist Srivathsa Joshi writes about Easter Sunday. Easter is based on Sun and moon movement like our Chandramana Ugadi and Souramana Ugadi and also like Muslim festivals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more