ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂದ್‌ ಬಗ್ಗೆ ಒಂದಿಷ್ಟು ಓpun ಹರಟೆ...

By Staff
|
Google Oneindia Kannada News
  • ಶ್ರೀವತ್ಸ ಜೋಶಿ
ಬೆಂಗಳೂರುಕನ್ನಡದಲ್ಲಿ (ಬೆಂಗಳೂರಿನಲ್ಲಿ ಕನ್ನಡ ಇನ್ನೂ ಇದೆಯಾ ಅಂತೆಲ್ಲ ಕೊಂಕುನುಡಿ ಆಮೇಲೆ) ‘ಬಂದು’ ಎಂಬ ಪದವು ಬೇರೆಯೇ ಒಂದು ರೀತಿಯಲ್ಲೂ ಉಪಯೋಗಿಸಲ್ಪಡುತ್ತದೆ. ನೀವು ಬೆಂಗಳೂರಿಗರಾದರೆ ನಿಮಗದು ಗೊತ್ತೇ ಇರುತ್ತದೆ. ‘‘ಈ ಸೀರೆ ಬೆಲೆ ಎಷ್ಟಪ್ಪಾ?’’ ಎಂದು ಕೇಳಿದರೆ ‘‘ಇದು ಬಂದು ನಿಮಗೆ ಮೂರು ಸಾವಿರದ ಐನೂರು ಆಗುತ್ತೆ...’’ ಎಂದು ಉತ್ತರಿಸುತ್ತಾನಲ್ಲ ಸೇಲ್ಸ್‌ಮನ್‌ - ಅವನ ಉತ್ತರದಲ್ಲಿನ ‘ಬಂದು’ ಪದ ಬೆಂಗಳೂರುಕನ್ನಡದಲ್ಲಿ ಮಾತ್ರ ಉಪಯೋಗವಾಗೋದು ಅಂತ ನನ್ನ ಅಭಿಪ್ರಾಯ.

ಸ್ವಾರಸ್ಯವೆಂದರೆ ತಮಿಳಿನಲ್ಲಿ ‘ವಂದ್‌’ ಮತ್ತು ತೆಲುಗಿನಲ್ಲಿ ‘ವಚ್ಚಿ’ ಪದಗಳೂ ಆಯಾಭಾಷೆಗಳಲ್ಲಿ ಬೆಂಗಳೂರುಕನ್ನಡದ ‘ಬಂದು’ ನಂತೆಯೇ ಉಪಯೋಗವಾಗುತ್ತವೆ. ಆದರೆ ಕರ್ನಾಟಕದ ಇತರ ಭಾಗಗಳ ಕನ್ನಡದಲ್ಲಿ ಈ ಅರ್ಥದಲ್ಲಿ ‘ಬಂದು’ ಪದ ಎಕ್ಸ್ಟ್ರಾ ಆಗಿ ಬಂದುಬಿಡುವುದಿಲ್ಲ! ‘‘ಇಳಿಯಾಕ ಹತ್ಯಾನ...’’ ಎಂದು ಗೇಲಿಮಾಡಿಸಿಕೊಳ್ಳುವ ಧಾರವಾಡಿಗರು ‘‘ಈ ರೂಟ್‌ 12 ಬಸ್ಸು ಎಲ್ಲಿಗೆ ಹೋಗುತ್ತೇರೀ?’’ ಎಂದು ಕೇಳಿದಾಗ ರೂಟ್‌ 12 ಬಸ್ಸು ಅಲ್ಲೇ ನಿಂತಿದ್ದರೂ ‘‘ರೂಟ್‌ 12 ಬಂದು ಬನಶಂಕರಿಗೆ ಹೋಗುತ್ತೆ...’’ ಎನ್ನುವ ಬೆಂಗಳೂರಿಗರ ಕಾಲೆಳೆಯಬಹುದು.

*

ಒಂದು ಪದವನ್ನು ಶ್ಲೇಷೆಯಾಗಿ ದ್ವಂದ್ವಾರ್ಥದಲ್ಲಿ (ಅಶ್ಲೀಲತೆಯ ಲವಲೇಶವೂ ಇಲ್ಲದೆ) ಬಳಸಿ ಸ್ವಾರಸ್ಯಕರ ಪದ್ಯಗಳನ್ನಾಗಿಸಬಹುದು. ಪುರಂದರದಾಸರು ‘‘ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ...’’ ಕೀರ್ತನೆಯಲ್ಲಿ ‘ರಾಗಿ’ ಪದವನ್ನು ಯೋಗ್ಯರಾಗಿ, ಭೋಗ್ಯರಾಗಿ, ಭಾಗ್ಯವಂತರಾಗಿ ಎಂಬ ಆಜ್ಞಾರ್ಥಕ ಪ್ರತ್ಯಯವಾಗಿಯೂ ಎಷ್ಟು ಸುಂದರವಾಗಿ ಉಪಯೋಗಿಸಿದ್ದಾರೆ! ಅದೇ ರೀತಿ ಬೇಂದ್ರೆಯವರ ‘‘ತುಂ ತುಂ ತುಂ ತುಂ ತುಂಬಿ ಬಂದಿತ್ತ...’’ದಲ್ಲಿ ‘ತುಂಬಿ’ ದುಂಬಿಯೂ ಆಗುತ್ತದೆ, ‘ತುಂಬು’ ಕ್ರಿಯಾಧಾತುವಿನ ಭೂತಕಾಲಸೂಚಕ ರೂಪವೂ ಆಗುತ್ತದೆ!

ಇದೇ ತತ್ವವನ್ನಾಧರಿಸಿ ಕನ್ನಡದಲ್ಲಿ ‘ಬಾ’ ಕ್ರಿಯಾಧಾತುವಿನ ಭೂತಕಾಲಸೂಚಕ ರೂಪಗಳಾದ ‘ಬಂದ’ ಅಥವಾ ‘ಬಂದು’ ಇತ್ಯಾದಿಗಳನ್ನು ‘ಬಂದ್‌’ ಜತೆಗೆ ತಳುಕುಹಾಕಿ ಬಹಳ ಮೋಜಿನ ಶಬ್ದಸರಸ ಮಾಡಬಹುದು! ವಿವರಗಳಿಗೆ ‘ಓಪನ್‌ ಕಿವಿಗಳಿಗೆ ಇಂಪಾದ ಬಂದ್‌’ ಎಂಬ ಈ ಉಪಹರಟೆಯನ್ನು ಓದಿ.

*

ಓಪನ್‌ ಕಿವಿಗಳಿಗೆ ಇಂಪಾದ ಬಂದ್‌

ಬಂದ್‌ನಂಥ ಕಿರಿಕಿರಿಯ ವಿಷಯವೂ ಕಿವಿಗಳಿಗಿಂಪು ಆಗುವುದೆಂದರೆ ಏನಾಶ್ಚರ್ಯ! ಬಂದ್‌ ಬಗ್ಗೆಯೇ ಪಿಎಚ್‌ಡಿ ಮಾಡಿರುವ ಬಂದೋಪಾಧ್ಯಾಯರೊಬ್ಬರು, ಈ ಸಲದ ಕರ್ನಾಟಕ ಬಂದ್‌ ಇಷ್ಟೊಂದು ಸ‘ರಾಗ’ವಾಗಿ ನಡೆದದ್ದೇಕೆ ಎಂದು ಕಂಡುಹಿಡಿದೇಬಿಡುತ್ತೇನೆ ಎಂದು ಹೊರಟಾಗ ತಿಳಿದು‘ಬಂದ್‌’ಅದ್ದೇನು ಗೊತ್ತೇ? ಕೆಲವು ಹಿರಿಕಿರಿಯ ಗಾಯಕಗಾಯಕಿಯರು (ಕನ್ನಡದಲ್ಲಿ ಚಿತ್ರಗೀತೆ ಭಕ್ತಿಗೀತೆ ಭಾವಗೀತೆ ಹಾಡಿದವರು) ಬಂದ್‌ನ ಗುಣಗಾನ ಮಾಡುತ್ತ (ಅಂದರೆ ಮನ ಬಂದ್‌ಅಂತೆ ಹಾಡುತ್ತ) ಬಂದ್‌ ಇಷ್ಟೊಂದು ಸುಶ್ರಾವ್ಯವಾಗುವುದಕ್ಕೆ ಕಾರಣೀಭೂತರಾಗಿದ್ದರು!

ಮೊಟ್ಟಮೊದಲು ಸಿಕ್ಕಿದವರು, ಕನ್ನಡದಲ್ಲಿ ಒಂದೆರಡು ಹಾಡುಗಳನ್ನಷ್ಟೇ ಹಾಡಿರುವ ತೆಲುಗಿನ ಪೀಠಾಪುರಂ ನಾಗೇಶ್ವರ ರಾವ್‌. ಬಂದ್‌ ಯಶಸ್ವಿಯಾಗಲು ಅಂಗಡಿಮುಂಗಟ್ಟುಗಳ ಬಾಗಿಲುಗಳನ್ನು ಒತ್ತಾಯಪೂರ್ವಕ ಮುಚ್ಚಿಸುವವರ ಬಗ್ಗೆ ಅವರೆನ್ನುತ್ತಾರೆ: ‘‘ನಾವು ಬಂದ್‌ಏವಾ ನಾವು ಬಂದ್‌ಏವಾ... ನಾವು ಬಂದ್‌ಏವಾ ಅಂಗ್ಡಿಬಾಗ್ಲು ಮುಚ್ಚೋದಕ್ಕ... ಮುಚ್ಚಿ ಮನೇಲಿ ಮಜಾ ಮಾಡೋದಕ್ಕ...’’ ಇನ್ನೋರ್ವ ಅಪರೂಪದ ಗಾಯಕ ಆರ್‌.ಎನ್‌.ಸುದರ್ಶನ್‌ ಸಹ ಬಹಳ ಆಪ್ಯಾಯಮಾನವಾಗಿ, ‘‘ಹೂವೊಂದು ಬಳಿ ಬಂದ್‌ಉ ತಾಕಿತು ಎನ್ನೆದೆಯ... ಏನೆಂದು ಕೇಳಲು ಹೇಳಿತು ಜೇನಂಥ ಸಿಹಿನುಡಿಯ...’’ ಎಂದು ಹಾಡುತ್ತಾರೆ, ಬಂದ್‌ನಿಂದಾದ ಸಿಹಿ ಸಿಹಿ ಸಂತೋಷದಿಂದ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X