ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಮನಬಿಲ್ಲು ಕಮಾನು ಕಟ್ಟಿದೆ!

By ಶ್ರೀವತ್ಸ ಜೋಶಿ
|
Google Oneindia Kannada News

Anomaly of colors in Suvarna Karnataka logo!
ಸುವರ್ಣಕರ್ನಾಟಕ ಲಾಂಛನದಲ್ಲಿ ಚಿತ್ರಿತವಾದದ್ದು ಅತಿ ಅಪರೂಪದ (ಅತ್ಯಮೂಲ್ಯವೂ ಆದ) ದ್ವಿತೀಯ ಕಾಮನಬಿಲ್ಲು ಇರಬಹುದೇ? ವಿಚಿತ್ರಾನ್ನ -213ನೇ ಸಂಚಿಕೆಯಲ್ಲಿ ಒಂದು ಬಣ್ಣದ ಚರ್ಚೆ. ಇದೀಗ ನಾವೆಲ್ಲರೂ ರಾಜ್ಯೋತ್ಸವ-ಸ್ವರ್ಣೋತ್ಸವಗಳ ಜಂಟಿ ಸಂಭ್ರಮದಲ್ಲಿದ್ದೇವಷ್ಟೆ? ರಾಜ್ಯದ ಒಳಗೂ ಹೊರಗೂ ಅಭಿಮಾನಿ ಕನ್ನಡಿಗರಿಂದ ಸಾಂಸ್ಕೃತಿಕ ದಿಬ್ಬಣ ಮೆರವಣಿಗೆಗಳು, ಉತ್ಸವ ಆಚರಣೆಗಳು ಮತ್ತಿತರ ವರ್ಣವೈಭವಗಳಿಂದ ಈ ಸಡಗರಕ್ಕೆ ಅದ್ದೂರಿತನದ ಕಳೆಯೂ ಏರಿದೆ. ‘ಸುವರ್ಣ ಕರ್ನಾಟಕ'ವೆಂಬ ಚಿಕ್ಕ ಚೊಕ್ಕ ಚಿನ್ನದಂಥ ಪದಪುಂಜವೂ ಪ್ರತಿಯಾಬ್ಬ ಕನ್ನಡಿಗನಿಗೂ ಮೈನವಿರೇಳಿಸಿ ಪುಳಕಹುಟ್ಟಿಸುವಂತೆಯೇ ಇದೆ.

‘ಸುವರ್ಣ ಕರ್ನಾಟಕ' ಸಂಭ್ರಮಕ್ಕೆ ಒಂದು ಅಧಿಕೃತ ಲಾಂಛನ(logo)ವೂ ಇದೆ. ಕರ್ನಾಟಕ ಸರಕಾರದ ಆಸ್ಥಾನಕಲಾವಿದರಾರೋ ಚಿತ್ರಿಸಿರುವ ಅಫಿ‚ೕಶಿಯಲ್‌ ಮೊಹರು ಅದು. ಕನ್ನಡ ಅಂಕಿಗಳಲ್ಲಿ ‘50', ಕನ್ನಡದಲ್ಲಿ ಮತ್ತು ಇಂಗ್ಲಿಷ್‌ನಲ್ಲಿ ‘ಕರ್ನಾಟಕ', ಜತೆಯಲ್ಲೇ ಕಾಮನಬಿಲ್ಲಿನ ತುಣುಕಿನಂತೆ ಕಾಣುವ ಏಳುಬಣ್ಣಗಳ ಒಂದು ‘ಜ್ಯಾ' (ವೃತ್ತಪರಿಧಿಯ ಒಂದು ಭಾಗಕ್ಕೆ ಸಂಸ್ಕೃತ/ಕನ್ನಡ ಪದ ‘ಜ್ಯಾ') - ಇವಿಷ್ಟು ಇರುವ ಒಂದು ಸರಳವಾದ ರಚನೆ.

ಈ ಲಾಂಛನದಲ್ಲಿ ಒಂದು ಸ್ವಾರಸ್ಯವಿದೆ! ನಿಮ್ಮ ಗಮನಕ್ಕೆ ಬಂದಿದೆಯೇ? ಲಾಂಛನದಲ್ಲಿನ ಕಾಮನಬಿಲ್ಲು ನಿಜವಾದ ಕಾಮನಬಿಲ್ಲೇ? ಅಥವಾ ಕಲಾವಿದ ತನ್ನ ಕುಂಚದಿಂದ ಮೂಡಿಸಿದ ಒಂದು ವರ್ಣವೈವಿಧ್ಯ ಅಷ್ಟೇನಾ? ರಾಜ್ಯೋತ್ಸವದ ಸುವರ್ಣಮಹೋತ್ಸವ ಸಂದರ್ಭಕ್ಕೆಂದೇ ಚಿತ್ರಿತವಾದ ಇದನ್ನು ಕಾಮನಬಿಲ್ಲು ಎಂದೇ ಅರ್ಥೈಸಿಕೊಳ್ಳಬೇಕೇ ಅಥವಾ ಇದಕ್ಕೆ ಬೇರೇನಾದರೂ ಮಹತ್ವದ ಅರ್ಥ ಇದೆಯೇ?

ಕೆಂಪು, ಕಿತ್ತಳೆ, ಹಳದಿ, ಹಸಿರು, ತಿಳಿನೀಲಿ, ಕಡುನೀಲಿ, ನೇರಳೆ - ಎಲ್ಲ ಏಳು ಬಣ್ಣಗಳೂ ಇವೆ, ಅದು ಕಾಮನಬಿಲ್ಲು ಅಲ್ಲದೆ ಇನ್ನೇನು ಅಂತೀರಾ? ಆದರೆ ನಮ್ಮ ಹೈಸ್ಕೂಲ್‌ ದಿನಗಳ ಭೌತಶಾಸ್ತ್ರ ತರಗತಿಯಲ್ಲಿ ಕಲಿತ ‘ಬೆಳಕಿನ ವಕ್ರೀಭವನ' ವಿಷಯವನ್ನೊಮ್ಮೆ ನೆನಪಿಸಿಕೊಳ್ಳೋಣ. ಗಾಜಿನ ಪಟ್ಟಕದ ಮೇಲೆ ಬೆಳಕಿನ ಕಿರಣ ಬಿದ್ದಾಗ ಅದು ವಕ್ರೀಭವನ ಹೊಂದಿ ಬಿಳಿಬಣ್ಣದಲ್ಲಿದ್ದದ್ದು ಏಳುಬಣ್ಣಗಳ ವರ್ಣಪಟ್ಟಿಯಾಗುವ ‘ವರ್ಣ ವಿಭಜನೆ'ಯ ಪ್ರಯೋಗ. ಅದರಲ್ಲಿ ಕೆಂಪುಬಣ್ಣ ಅತಿಕಡಿಮೆ ಮತ್ತು ನೇರಳೆಬಣ್ಣ ಅತಿಹೆಚ್ಚು ಪ್ರಮಾಣದಲ್ಲಿ ವಕ್ರೀಭವನಗೊಳ್ಳುವುದೆಂಬ ವಿಚಾರವನ್ನು ನಾವು ಕಲಿತುಕೊಂಡ ಪ್ರಯೋಗ.

ಈ ವೈಜ್ಞಾನಿಕ ಸತ್ಯವೇ ಅಲ್ಲವೇ ಪ್ರಕೃತಿಯ ಸುಂದರ ಸೋಜಿಗಗಳಲ್ಲೊಂದಾದ ಕಾಮನಬಿಲ್ಲಿನಲ್ಲಿರುವುದು? ಸೂರ್ಯನ ಬೆಳಕು ಮಳೆಹನಿಗಳೊಳಗೆ ವಕ್ರೀಭವನಗೊಂಡು ತತ್ಪರಿಣಾಮವಾಗಿ ವಿಭಜನೆಯಾದ ಬೆಳಕಿನ ಸಪ್ತವರ್ಣಗಳ ಬಿಲ್ಲಿನಾಕಾರದ ಪಟ್ಟಿ. ಮೇಲ್ಭಾಗದಲ್ಲಿ ಕೆಂಪು, ಆಮೇಲೆ ಅನುಕ್ರಮವಾಗಿ ಕಿತ್ತಳೆ, ಹಳದಿ,... ಕೊನೆಯಲ್ಲಿ ನೇರಳೆ ಬಣ್ಣ. ಮುಸ್ಸಂಜೆ ಬಿಸಿಲು-ಮಳೆಯ ಕಣ್ಣುಮುಚ್ಚಾಲೆಯಾದಾಗ ಭೂಮಿಗೂ ಬಾನಿಗೂ ಬಣ್ಣಬಣ್ಣದ ಸೇತುವಾಗುವ ಕಾಮನಬಿಲ್ಲಿನ ಸ್ವರೂಪ ನಮಗೆಲ್ಲ ಗೊತ್ತಿರುವುದು ಹೀಗೆ.

ಅಂದಮೇಲೆ ಸುವರ್ಣಕರ್ನಾಟಕ ಲಾಂಛನದಲ್ಲಿರುವ ಸಪ್ತವರ್ಣ-ಜ್ಯಾ ನಮಗೆ ಚಿರಪರಿಚಿತವಿರುವ ಕಾಮನಬಿಲ್ಲು ಅಲ್ಲ! ಏಕೆಂದರೆ ಇದರಲ್ಲಿ ನೇರಳೆಬಣ್ಣ ಮೇಲೆ ಮತ್ತು ಕೆಂಪುಬಣ್ಣ ಕೆಳಗೆ (ಕಾಮನಬಿಲ್ಲಿನಲ್ಲಿರುವುದಕ್ಕೆ ತದ್ವಿರುದ್ಧವಾಗಿ) ಇವೆ! ಇದು ‘ಕನ್ನಡಿ'ಗರಿಗೆ ಕನ್ನಡಿಯಲ್ಲಿ ಕಾಣುವ ಕಾಮನಬಿಲ್ಲು ಎಂದು ಅರ್ಥೈಸೋಣವೆಂದರೆ, ಕನ್ನಡಿಯಲ್ಲಿ ವಸ್ತುವಿನ ಪ್ರತಿಬಿಂಬ ಮೂಡುವಾಗ ಎಡ-ಬಲಗಳು ಬದಲಾಗುವುದೇ ವಿನಹ ಈ ರೀತಿ ಮೇಲು-ಕೆಳಗೆ ಅಲ್ಲ! ಬಹುಶಃ ಕನ್ನಡಧ್ವಜದಲ್ಲಿರುವ ಹಳದಿ-ಕೆಂಪು ಬಣ್ಣಗಳ ಸ್ಥಾನ (ಹಳದಿ ಮೇಲೆ, ಕೆಂಪು ಕೆಳಗೆ) ಹಾಗೆಯೇ ಉಳಿಯುವಂತೆ ಚಾಕಚಕ್ಯತೆ ವಹಿಸಿ ಉಳಿದ ಬಣ್ಣಗಳನ್ನೂ ಸೇರಿಸಿ ಇದನ್ನು ರಚಿಸಿದ್ದಿರಬಹುದೇ?

ಒಟ್ಟಿನಲ್ಲಿ ಇದೊಂದು ವಿಮರ್ಶೆಯ ಒರೆಗಲ್ಲಿಗೆ ಹಚ್ಚಬಹುದಾದ ಸಂಗತಿಯಾಗಿದೆ.

ಕಲಾವಿದ ಅದನ್ನು ಕಾಮನಬಿಲ್ಲು ಎಂಬ ಅರ್ಥದಲ್ಲೇ ಚಿತ್ರಿಸಿರಬಹುದು. ಬಣ್ಣಗಳ ಅನುಕ್ರಮಣಿಕೆ ವೈಜ್ಞಾನಿಕವಾಗಿ ಸರಿಯಿಲ್ಲ ಎಂದಮಾತ್ರಕ್ಕೆ ಅದು ಕಾಮನಬಿಲ್ಲು ಅಲ್ಲ ಎಂದುಕೊಳ್ಳಬೇಕಾಗಿಲ್ಲ. ಏಕೆಂದರೆ ಕಲೆ ಮತ್ತು ವಿಜ್ಞಾನ ಪರಸ್ಪರ ಒಪ್ಪಿಕೊಳ್ಳಬೇಕೆಂಬ ನಿಯಮವೇನೂ ಇಲ್ಲ. ಉದಾಹರಣೆಗೆ ಮನುಷ್ಯನ ಹೃದಯದ ಚಿತ್ರವನ್ನೇ ತೆಗೆದುಕೊಳ್ಳಿ - ಆರ್ಟ್‌ ಮತ್ತು ಸೈನ್ಸ್‌ನಲ್ಲಿ ನಮ್ಮ ಹಾರ್ಟು ವಿಭಿನ್ನವಾಗಿ ಕಾಣಿಸಿಕೊಳ್ಳುತ್ತದಲ್ಲ!? ಆದರೂ ನಾವು ಆರ್ಟ್‌ನ ಹಾರ್ಟನ್ನೂ ಸೈನ್ಸ್‌ನ ಹಾರ್ಟನ್ನೂ ಹಾರ್ಟ್‌ ಎಂದೇ ಒಪ್ಪಿಕೊಳ್ಳುತ್ತೇವಷ್ಟೆ?

ಅಷ್ಟಕ್ಕೂ ಸುವರ್ಣ ಕರ್ನಾಟಕ ಸಂದರ್ಭದಲ್ಲಿ ಲಾಂಛನ ರಚಿಸಿದ ಕಲಾವಿದನಿಗೆ ಅದರಲ್ಲಿ ಕಾಮನಬಿಲ್ಲಿನ ಔಚಿತ್ಯ ಹೇಗೆ ಮತ್ತು ಏಕೆ ಹೊಳೆದಿರಬಹುದು?

ಒಂದು ಕ್ಲೀಷೆಯಿದೆ - Pot of gold at the end of the rainbow ಎಂದು. ಇಂಗ್ಲಿಷ್‌ನಲ್ಲಿ ವ್ಯಾಪಕವಾಗಿ ಬಳಕೆಯಾಗುವ ಈ ಕ್ಲೀಷೆಯ ಪ್ರಕಾರ, ನಿಸರ್ಗದ ರಮಣೀಯ ದೃಶ್ಯ ಕಾಮನಬಿಲ್ಲು ಸಂಭವಿಸುವಾಗ ಆ ಕಾಮನಬಿಲ್ಲು ಭೂಮಿಗೆ ತಾಕುವಲ್ಲಿ ಚಿನ್ನದ ನಾಣ್ಯಗಳಿರುವ ಗಡಿಗೆಯಿರುತ್ತದಂತೆ! ಹಾಗೆಂದು ಐರೋಪ್ಯ ಸಂಸ್ಕೃತಿಯ ಒಂದು ಪುರಾತನ ನಂಬಿಕೆ. ಐರಿಶ್‌ ಜನಪದಕಥೆಯಾಂದರ ಪ್ರಕಾರ ಲೆಪ್ರೆಕೌನ್‌ ಎಂಬ ಯಕ್ಷ, ಅದೃಷ್ಟದ ಗಂಟನ್ನು ದಯಪಾಲಿಸುವವನು. ಪರಮಲೋಭಿಗಳಾಗಿದ್ದ ಮುದಿದಂಪತಿಗಳೊಮ್ಮೆ ಅವನಲ್ಲಿ ಚಿನ್ನದನಾಣ್ಯಗಳ ಗಡಿಗೆಯನ್ನು ಬೇಡಿದರಂತೆ. ಅವರ ಅತ್ಯಾಸೆಯನ್ನು ಗಮನಿಸಿದ ಯಕ್ಷ, ‘‘ಕಾಮನಬಿಲ್ಲಿನ ಬುಡದಲ್ಲಿ ನಿಮ್ಮ ಗಡಿಗೆಯನ್ನಿಟ್ಟಿದ್ದೇನೆ, ಹೋಗಿ ತೆಗೆದುಕೊಳ್ಳಿ'' ಎಂದನಂತೆ. ಅವತ್ತಿನಿಂದ ಕಾಮನಬಿಲ್ಲು ಮೂಡಿದಾಗೆಲ್ಲ ಅದರ ಕೊನೆಗಳಲ್ಲಿ ಚಿನ್ನದಗಡಿಗೆ ಇರಬಹುದೇ ಎಂದು ಆಸೆಪಟ್ಟಿದೆ ಚಿನ್ನವ್ಯಾಮೋಹದ ಮಾನವಜನಾಂಗ.

ಕಟ್ಟುಕಥೆ, ನಂಬಿಕೆಗಳ ಹೊರತಾಗಿಯೂ Pot of gold at the end of the rainbow ಇಂಗ್ಲಿಷ್‌ ಭಾಷೆಯ ಒಂದು ಒಳ್ಳೆಯ ರೂಪಕಾಲಂಕಾರ. ನಿಸರ್ಗದಲ್ಲಷ್ಟೇ ಅಲ್ಲ, ನಮ್ಮೆಲ್ಲರ ಬದುಕಿನಲ್ಲೂ ಆಗಾಗ ಗಾಢಾಂಧಕಾರದ ಕಾರ್ಮುಗಿಲು ಕವಿದು ಮಳೆ ಸುರಿಯುತ್ತದೆ, ಅದು ಮುಗಿದಾಗ ಮತ್ತೆ ಸೂರ್ಯರಶ್ಮಿ ಹೊಳೆಯುತ್ತದೆ, ಜತೆಯಲ್ಲೇ ಸುಂದರವಾದ ಕಾಮನಬಿಲ್ಲೂ ಮೂಡುತ್ತದೆ! ಮಳೆಹನಿಗಳಿರದಿದ್ದರೆ ಬರೀ ಸೂರ್ಯಪ್ರಕಾಶದಿಂದ ಇದು ಸಾಧ್ಯವಾಗುತ್ತಿತ್ತೇ? ಇದೊಂದು ಸಾರ್ವಕಾಲಿಕ ಸತ್ಯ. ಕಾಮನಬಿಲ್ಲಿನ ಕೊನೆಯಲ್ಲಿ ಸುವರ್ಣ ಸಂಭ್ರಮ; ಕಾಮನಬಿಲ್ಲು ಹೊಸ ಹುರುಪಿನ, ನವಚೈತನ್ಯದ ದ್ಯೋತಕ.

ನಮ್ಮ ಹೆಮ್ಮೆಯ ಕರ್ನಾಟಕಕ್ಕೆ 50 ವರ್ಷಗಳು ತುಂಬಿದ್ದಕ್ಕಷ್ಟೇ ಚಿನ್ನದ ಮೆರುಗಲ್ಲ, ಗಂಧದಬೀಡು ಚಿನ್ನದನಾಡು ಎಂದೇ ಪ್ರಖ್ಯಾತವಾಗಿರುವ ನಮ್ಮ ರಾಜ್ಯವನ್ನು ಅನುದಿನವೂ ಅನುಗಾಲವೂ ಸ್ವರ್ಣಸಮೃದ್ಧ ಎಂದು ಹೇಳಿಕೊಳ್ಳಲು ನಾವು ಹಿಂಜರಿಯಬೇಕಾದ್ದಿಲ್ಲ. ರಸ್ತೆಬದಿಯಲ್ಲಿ ತರಕಾರಿ-ಹಣ್ಣುಗಳಂತೆ ಚಿನ್ನ ವಿಕ್ರಯವಾಗುತ್ತಿತ್ತೆಂದು ಹೇಳಲಾದ ವಿಜಯನಗರ ಸಾಮ್ರಾಜ್ಯ ಇದ್ದದ್ದು ನಮ್ಮ ಕರುನಾಡಿನಲ್ಲೇ ತಾನೆ? ಆದ್ದರಿಂದ ಸುವರ್ಣಕರ್ನಾಟಕ ಲಾಂಛನದಲ್ಲಿ ಕಾಮನಬಿಲ್ಲು ಅತಿ ಅರ್ಥಪೂರ್ಣವಾಗಿಯೇ ಇದೆ.

ಒಂದು ಮಾತನ್ನು ನಾವೆಲ್ಲ ಒಪ್ಪಿಕೊಳ್ಳುತ್ತೇವೆ, ಏನೆಂದರೆ ಕಲೆಗೆ ಬಹುತೇಕವಾಗಿ ಅಂತಃಸ್ಫೂರ್ತಿಯೇ (instinct) ತಳಹದಿ; ವಿಜ್ಞಾನಕ್ಕಾದರೋ ತರ್ಕವೇ (logic) ಆಧಾರ. ಸುವರ್ಣಕರ್ನಾಟಕದ ಲಾಂಛನವನ್ನು ಚಿತ್ರಿಸಿದ ಕಲಾವಿದ ಅದನ್ನು ತನ್ನ ಅಂತಃಸ್ಫೂರ್ತಿ ಯಿಂದ ನೂರು ಪ್ರತಿಶತ ಕಲಾಬದ್ಧವಾಗಿಯೇ ಮಾಡಿದ್ದಿರಬಹುದು; ಆದರೂ ವೈಜ್ಞಾನಿಕವಾಗಿಯೂ ಅದು ಪರಿಪೂರ್ಣವಾಗಿಯೇ ಇದೆ ಎಂದು ಈಗ ತರ್ಕಬದ್ಧವಾಗಿ ಸಾಬೀತುಪಡಿಸೋಣವೇ?

ಬಹಳದಲ್ಲಿ ಬಹಳ ಅಪರೂಪವಾಗಿ ಕೆಲವೊಮ್ಮೆ ಏಕಕಾಲಕ್ಕೆ ಎರಡು ಕಾಮನಬಿಲ್ಲುಗಳು ಆಗಸದಲ್ಲಿ ಮೂಡುವುದಿದೆ. ಪ್ರಕಾಶಮಾನವಾಗಿ ಕಾಣುವ ಮೊದಲ ಕಾಮನಬಿಲ್ಲಿನ (primary rainbow) ಹೊರವಲಯದಲ್ಲಿ ತುಸು ಮಬ್ಬಾಗಿ ಆದರೆ ಇನ್ನಷ್ಟು ವಿಸ್ತಾರವಾಗಿ ಎರಡನೆಯ ಕಾಮನಬಿಲ್ಲು (secondary rainbow) ಗೋಚರಿಸುತ್ತದೆ. ಕಾಮನಬಿಲ್ಲುಗಳ ಪ್ರಚಂಡಜೋಡಾಟದ ಈ ದೃಶ್ಯವನ್ನು ನೀವು ಯಾವಾಗಾದರೂ ನೋಡಿರುವ ನೆನಪಿರಬಹುದು.

ಜೋಡಿ ಬಿಲ್ಲುಗಳ ವೈಜ್ಞಾನಿಕ ವಿಶ್ಲೇಷಣೆಯೇನೆಂದರೆ, ಮಳೆಹನಿಯನ್ನು ಪ್ರವೇಶಿಸಿದ ಸೂರ್ಯಕಿರಣದ ಶಕ್ತಿಯಂಶವು ಹನಿಯ ಒಳಮೈಗೆ ತಾಗಿ ಪ್ರತಿಫಲನವಾಗಿ ವರ್ಣವಿಭಜನೆಯಾಗುತ್ತದೆ; ಇದು ಮೊದಲನೇ ಕಾಮನಬಿಲ್ಲು. ಇದರಲ್ಲಿ ಕೆಂಪುಬಣ್ಣ ಮೇಲೆ, ನೇರಳೆ ಬಣ್ಣ ಕೆಳಕ್ಕೆ. ವೀಕ್ಷಕನ ದೃಷ್ಟಿಬಿಂದುವಿಗೆ ಸುಮಾರು 42 ಡಿಗ್ರಿ ಕೋನದಲ್ಲಿ ಆಗುವ ಪ್ರತಿಫಲನವಿದು. ಹೀಗೆ ಪ್ರತಿಫಲಿತವಾದ ಕಿರಣವು ಶಕ್ತಿಯುತವಾಗಿದ್ದರೆ ಮತ್ತೆ ಅದೇ ಮಳೆಹನಿಯಾಳಗೆ ಸಂಚರಿಸಿ ಇನ್ನೊಮ್ಮೆ ಪ್ರತಿಫಲನಗೊಳ್ಳಬಹುದು. ವೀಕ್ಷಕನ ದೃಷ್ಟಿಬಿಂದುವಿನಿಂದ ಸುಮಾರು 53 ಡಿಗ್ರಿ ಕೋನದಲ್ಲಿ ಈ ಪ್ರಕ್ರಿಯೆ ನಡೆಯುತ್ತದೆ. ಹೀಗೆ ದ್ವಿತೀಯ ಪ್ರತಿಫಲನದಿಂದ ಹೊರಬಿದ್ದ ಕಿರಣದ ವರ್ಣವಿಭಜನೆಯಲ್ಲಿ ನೇರಳೆ ಬಣ್ಣ ಮೇಲೆ ಮತ್ತು ಕೆಂಪುಬಣ್ಣ ಕೆಳಕ್ಕೆ (ಅಂದರೆ ಮೊದಲ ಕಾಮನಬಿಲ್ಲಿಗೆ ತದ್ವಿರುದ್ಧವಾಗಿ) ಇರುತ್ತವೆ!

ಹಾಗಾದರೆ, ಸುವರ್ಣಕರ್ನಾಟಕ ಲಾಂಛನದಲ್ಲಿ ಚಿತ್ರಿತವಾದದ್ದು ಅತಿ ಅಪರೂಪದ (ಆದ್ದರಿಂದ ಅತ್ಯಮೂಲ್ಯವೂ ಆದ) ದ್ವಿತೀಯ ಕಾಮನಬಿಲ್ಲು ಇರಬಹುದೇ? ಮತ್ತೆ, ದಂತಕಥೆಯ ಪ್ರಕಾರ ಮಾಮೂಲಿ ಕಾಮನಬಿಲ್ಲಿನ ಕೊನೆಯಲ್ಲಿ ಚಿನ್ನದ ಗಡಿಗೆ ಇರುವುದಾದರೆ ಈ ಸ್ಪೆಷಲ್‌ ಕಾಮನಬಿಲ್ಲಿನ ಕೆಳಗೆ ಚಿನ್ನದ ನಾಡೇ ಇದೆ. ಅದೇ ನಮ್ಮ ಸುಂದರ ಕರ್ನಾಟಕ, ಅದೇ ನಮ್ಮ ಸುವರ್ಣ ಕರ್ನಾಟಕ! ಆದ್ದರಿಂದ ‘ಕಾಮನಬಿಲ್ಲು ಕಮಾನು ಕಟ್ಟಿದೆ...'ಯಷ್ಟೇ ಅಲ್ಲ, ಕಾಮನಬಿಲ್ಲಿನಂತೆ ಸುವರ್ಣಕರ್ನಾಟಕದ ಮಾನಸಮ್ಮಾನವೂ ಕಳೆಗಟ್ಟಿದೆ. ನೀವೇನಂತೀರಿ?

English summary
Vichitranna Columnist Srivathsa Joshi discusses about Suvarna Karnataka logo and Rainbow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X