ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಚ’ ಉವಾಚಿಸಿದ ಚಾಗುಣಿತ!

|
Google Oneindia Kannada News

ಬಾಯಲ್ಲಿ ನೀರು ತರಿಸುವ ವಿಚಿತ್ರಾನ್ನ-178ನೇ ಸಂಚಿಕೆಯ ತುಂಬ ತಿಂಡಿ-ತಿನಿಸುಗಳ 'ಚ"ಮತ್ಕಾರ! 'ಕ"ಗುಣಿತ; ಕಾಗುಣಿತವಾದಂತೆ, 'ಚ"ಗುಣಿತ; ಚಾಗುಣಿತ ಯಾಕಾಗಬಾರದು ಎಂಬ ತರ್ಕದ ಲೆಕ್ಕಾಚಾರ! 'ಚ" ಕಾರದೊಳಗಿನ ರಸಯಾತ್ರೆಯಲ್ಲಿ ನೀವೂ ಜೊತೆಯಾಗಿ...

Srivathsa Joshi *ಶ್ರೀವತ್ಸ ಜೋಶಿ

Dishes and delicacies that start with alphabet cha of Kannadaವರ್ಣಮಾಲೆಯಲ್ಲಿನ ವರ್ಗೀಯ ವ್ಯಂಜನಗಳೊಳಗೆ ಒಮ್ಮೆ ತಮ್ಮಲ್ಲಿ ಯಾರು ಶ್ರೇಷ್ಠರು ಎಂಬ ವಾದ ಶುರುವಾಯಿತು. ಒಂದೊಂದು ಅಕ್ಷರವೂ ತನ್ನ ಹೆಚ್ಚುಗಾರಿಕೆಯ ಬಗ್ಗೆ, ತನ್ನಿಂದ ಶುರುವಾಗುವ ಪದಗಳ ಅರ್ಥಸಂಪತ್ತಿನ ಬಗ್ಗೆ ಕೊಚ್ಚಿಕೊಳ್ಳತೊಡಗಿತು. ಬಾಲ ಇರುವ ಅಕ್ಷರಗಳು (ಛ, ಝ, ಢ, ಫ ಮೊದಲಾದುವು) ತಮ್ಮದು ಮಹಾಪ್ರಾಣ ಎಂದು ಬಾಲ ಅಲ್ಲಾಡಿಸಿದರೆ ಠ, ಥ ಗಳು ತಮ್ಮ ಬಿಂದಿ(ಚುಕ್ಕಿ)ಯ ಬಗ್ಗೆ ಬೀಗಿಕೊಂಡವು. ಅಲ್ಪಪ್ರಾಣಗಳೆಲ್ಲ ಏನೇನೋ ಆರ್ಗ್ಯುಮೆಂಟ್‌ ಮಾಡಿ ತಾವೇನೂ ಕಮ್ಮಿಯವರಲ್ಲ ಎಂದು ವಾದಿಸಿದರೆ ಙ, ಞ, ಣ ಗಳು ಮಾತ್ರ ಯಾವ ಪದವೂ ತಮ್ಮಿಂದ ಶುರುವಾಗುವುದಿಲ್ಲ ಎಂದು ಇತರರಿಂದ ಲೇವಡಿ ಮಾಡಿಸಿಕೊಂಡು ಕೀಳರಿಮೆಗೊಳಗಾದುವು.

ಹೀಗೆ ವರ್ಗೀಯ ವ್ಯಂಜನಗಳ ವರ್ಣಸಂಘರ್ಷ ಸಾಗಿರಲು, ಕೊನೆಯಲ್ಲಿ ಎದ್ದು ನಿಂತ 'ಚ" ವ್ಯಂಜನವು ತನ್ನ ಶ್ರೇಷ್ಠತೆಯ ಬಗ್ಗೆ ವಾದವನ್ನು ಮಂಡಿಸಿತು. ಅದರ ವಾದವು ಎಷ್ಟು ಪರಿಣಾಮಕಾರಿಯಾಗಿತ್ತೆಂದರೆ ನೀವದನ್ನು ಕೇಳಿದ್ದೇ ಆದರೆ ಖಂಡಿತವಾಗಿಯೂ ಭೇಷ್‌ ಎಂದು ತಲೆದೂಗುತ್ತೀರಿ. ಮಾತ್ರವಲ್ಲ, 'ಚ"ದ ಭಾಷಣ ಮುಗಿವ ಹೊತ್ತಿಗೆ ನಿಮ್ಮ ಬಾಯಲ್ಲಿ (ಕಣ್ಣುಗಳಲ್ಲಲ್ಲ) ಲಿಂಗನಮಕ್ಕಿ ಜಲಾಶಯ ತುಂಬುವಷ್ಟು ನೀರೂರಲೂಬಹುದು!

ಬನ್ನಿ, 'ಚ"ಕಾರ ಲೋಕದೊಳಗೊಂದು ರಸಯಾತ್ರೆಯನ್ನು ಮಾಡಿಬರೋಣ. Over to 'ಚ"...

*

'ಚ" ಉವಾಚ -

ಕಾಗುಣಿತ ಗೊತ್ತು, ಆದರೆ ಚಾಗುಣಿತ ಅಂತ ಎಲ್ಲೂ ಕೇಳಿದ ಹಾಗಿಲ್ಲವಲ್ಲ... ಎನಪ್ಪಾ ಇದು... ಅಂದ್ಕೊಂಡ್ರಾ? ಅದೇ ಸ್ವಾಮಿ, ಕ ಕಾ ಕಿ ಕೀ ಅಕ್ಷರಬಳ್ಳಿಯನ್ನೇ ತಾನೆ ಕಾಗುಣಿತ ಅನ್ನೋದು? ಕ ಅಕ್ಷರದ್ದಾದರೆ ಮಾತ್ರ ಕಾಗುಣಿತವೇ? ಮಿಕ್ಕ ವ್ಯಂಜನಗಳ ಬಳ್ಳಿಗೂ ಕಾಗುಣಿತವೆಂದೇ ಹೇಳಬೇಕೇ? ಆಯಾ ವ್ಯಂಜನವನ್ನಾಧರಿಸಿ ಹೇಳಬಹುದಾದರೆ ಚ ಚಾ ಚಿ ಚೀ ಬಳ್ಳಿ 'ಚಾಗುಣಿತ" ಆಗಬೇಕಲ್ಲವೇ? ಕನ್ನಡ ಪಂಡಿತರು, ಭಾಷಾತಜ್ಞರು, ಸರಕಾರದವರು, ಸಾಹಿತಿಗಳು, ಜ್ಞಾನಪೀಠಿಗಳು, ಅವರು ಇವರು ಒಪ್ಪಲಿ ಬಿಡಲಿ - ನನ್ನ ವಾದದ ಮಟ್ಟಿಗೆ 'ಚ" ವ್ಯಂಜನದ ಬಳ್ಳಿಯನ್ನು ನಾನು ಚಾಗುಣಿತ ಎಂದೇ ಹೇಳಲಿಚ್ಛಿಸುತ್ತೇನೆ.

ಈ ಮನುಷ್ಯಜಾತಿಯಿದೆಯಲ್ಲ, ನಮ್ಮಂಥ ಅಕ್ಷರಗಳನ್ನು ಅವರು ಯಾಕೆ ಬಳಸ್ತಾರೆ ಅಂತೀರಿ? ಇನ್ನೇನಿಲ್ಲ, ಹೊಟ್ಟೆಪಾಡಿಗೆ! ಉದರನಿಮಿತ್ತಂ ಬಹುಕೃತ ವೇಷಂ. ಆದರೆ ನೀವೆಲ್ಲ ಗಮನಿಸಿದ್ದೀರೋ ಇಲ್ಲವೋ, ಇತರ ಯಾವುದೇ ಅಕ್ಷರಕ್ಕಿಂತಲೂ ಹೆಚ್ಚಿಗೆ ನಾನೇ ಈ ಮಾನವಜನಾಂಗದ ಹೊಟ್ಟೆ ತುಂಬಿಸುವುದೆಂದರೆ ನಂಬುತ್ತೀರಾ? ನನ್ನಿಂದ ಅಥವಾ ನನ್ನ ಚಾಗುಣಿತದಿಂದ ಶುರುವಾಗುವ ತಿಂಡಿತಿನಿಸುಗಳನ್ನೊಮ್ಮೆ ನೆನಪಿಸಿಕೊಳ್ಳಿ. ಚಕಾರವೆತ್ತದೆ ನನ್ನ ಮಾತನ್ನು ಒಪ್ಪಿಬಿಡುತ್ತೀರಿ!

ಅದೇ ಹೇಳಿದ್ನಲ್ಲಾ, ರೋಟಿ ಕಪ್ಡಾ ಔರ್‌ ಮಕಾನ್‌ - ಇವಿಷ್ಟೇ ಬೇಕಾದ್ದು ಎಲ್ಲರಿಗೂ ಅಂತ. ಆ ರೋಟಿ ಬೇರೇನೂ ಅಲ್ಲ, 'ಚಪಾತಿ"! ಬರೀ ಚಪಾತಿ ಇದ್ರೆ ಆಯ್ತೇ, ನಂಚಿಕೊಳ್ಳಲಿಕ್ಕೆ 'ಚನಾಮಸಾಲಾ"! ಹೋಗಲಿ, ಉತ್ತರಭಾರತದವರಿಗೆ ಮಾತ್ರ ಚಪಾತಿ ಹುಚ್ಚು, ದಕ್ಷಿಣದವರದ್ದೇನಿದ್ದರೂ ಇಡ್ಲಿ, ವಡಾ, ದೋಸೆ ಅಂದ್ರೂನೂವೇ ಅದಕ್ಕೂ ಬೇಕಲ್ಲ ಜತೆಯಲ್ಲಿ 'ಚಟ್ನಿ"? ಇನ್ನು ಹಬ್ಬಹರಿದಿನಕ್ಕಂತೂ 'ಚಕ್ಕುಲಿ", 'ಚಕ್ಕರಪೊಂಗಲ್‌", 'ಚಟ್ಟಾಂಬೊಡೆ" ಇತ್ಯಾದಿ ಭಕ್ಷ್ಯಭೋಜ್ಯಗಳು! ಮತ್ತೆ ಪ್ರಾದೇಶಿಕವಾಗಿ ಕೆಲವು ಇವೆ - ಉದಾಹರಣೆಗೆ ಕೇರಳದವರ 'ಚಕ್ಕರವರ್ಟಿ" (ಮಾವಿನರಸ ಅಥವಾ ಹಲಸಿನಹಣ್ಣಿನ ರಸವನ್ನು ಚಾಪೆಯ ಮೇಲೆ ಒಣಗಿಸಿ ಹಾಳೆಗಳಾಗಿ ಕತ್ತರಿಸಿದ್ದು), ಹಾಗೆಯೇ ಚಿತ್ಪಾವನಿ ಮರಾಠಿಗರು ಮಾಡುವ ಮೆಣಸ್ಕಾಯಿ ಅಥವಾ ಕಾಯಿರಸ 'ಚಟ್ಟುಹುಳಿ"... ಇತ್ಯಾದಿ.

ಬರೀ ಭಾರತೀಯ ಅಡುಗೆಯ ಪೈಕಿ ಚಕಾರದ್ದನ್ನು ಉಲ್ಲೇಖಿಸುತ್ತಿದ್ದೇನೆ ಅಂದ್ಕೋಬೇಡಿ. ದೂರದ ಮೆಕ್ಸಿಕೊ ದೇಶದಲ್ಲೂ 'ಚಲುಪ" ಎಂಬ ಹೆಸರಿನ ತಿಂಡಿಯಿದೆ. ಸ್ಪಾನಿಷ್‌ ಭಾಷೆಯಲ್ಲಿ ಚಲುಪ ಎಂದರೆ ದೋಣಿ ಎಂದರ್ಥ. ಮೆಕ್ಕೆಜೋಳದ ರೊಟ್ಟಿಯನ್ನು ದೋಣಿಯಾಕಾರಕ್ಕೆ ಮಡಚಿ ಒಂಚೂರು ರೋಸ್ಟ್‌ ಮಾಡಿ ಅದರೊಳಗೆ ತರಕಾರಿಯನ್ನೋ ಮಾಂಸವನ್ನೋ ತುಂಬಿಸಿದರೆ ಅದೇ ಚಲುಪ. ಚಪಲವುಳ್ಳವರಿಗೆ ಹೇಳಿಮಾಡಿಸಿದ ಖಾದ್ಯ!

ಹುಲುಮಾನವರ ಸಂಗತಿ ಬಿಡಿ, ದೇವಾಧಿದೇವತೆಗಳ ಸ್ಟೇಪಲ್‌ ಫ‚ುಡ್‌ ಸಹ ಏನಂತ ತಿಳಿದಿದ್ದೀರಿ? ದೇವತೆಗಳನ್ನು ಸಂಪ್ರೀತಗೊಳಿಸಲು ಮನುಷ್ಯರು ಯಜ್ಞಯಾಗಗಳಲ್ಲಿ ಅರ್ಪಿಸುವ ಹವಿಸ್ಸನ್ನು 'ಚರು" ಎನ್ನುತ್ತಾರೆ. ಅನ್ನ, ತುಪ್ಪ, ಜೇನು, ಸಕ್ಕರೆ, ಎಳ್ಳು, ಬಿಲ್ವಪತ್ರೆ, ಜಾಯಿಕಾಯಿ ಇವನ್ನೆಲ್ಲ ಮಿಶ್ರಣ ಮಾಡಿ ತಯಾರಿಸಿದ ಚರುವನ್ನು ಅರ್ಪಿಸಿದರೇನೇ ಯಜ್ಞ ಸಂಪೂರ್ಣವಾಗುವುದು.

ಚರುವಿನ ಸಂಗತಿ ಹಾಗಾದರೆ 'ಚಾರು" ಬಗ್ಗೆ ಸಹ ಒಂದೆರಡು ಮಾತು ಹೇಳಬೇಕು. ಇವತ್ತು ಆಸೇತುಹಿಮಾಚಲವಾಗಿ ರಸಂ ಎಂದು ಖ್ಯಾತಿಯಾಗಿರುವುದರ ಮೂಲ ತೆಲುಗು/ತಮಿಳಿನ ಚಾರು. ಅದೇ ಕನ್ನಡಕ್ಕೆ ಬಂದಾಗ ಸಾರು ಆಗಿರುವುದು. ಚಾರು ಶಬ್ದದ ಅರ್ಥ essence ಅಥವಾ juice ಎಂದು. ಹುಣಸೇಹಣ್ಣು, ಕಾಳುಮೆಣಸುಗಳ ಮಿಶ್ರಣದ ಎಸ್ಸೆನ್ಸ್‌ ಅಥವಾ ಸಾರವೇ ಚಾರು. ಪುಳಿಚಾರು ಬ್ರಾಹ್ಮಣ ಅಂತ ವ್ಯಂಗ್ಯಮಾಡುವ ರೂಢಿ ಬರುವುದಕ್ಕೆ ಚಾರೇ ಕಾರಣ.

ಇನ್ನು, 'ಚಿತ್ರಾನ್ನ"ದ ಬಗ್ಗೆಯಂತೂ ನಿಮಗೆ ನಾನೇನು ಹೇಳುವುದಿದೆ? ಎಲ್ಲಿಯವರೆಗೆ ನಿಮ್ಮ ಮನೆಗಳಲ್ಲಿ ಅನ್ನ ಇರುತ್ತದೋ ಅಲ್ಲಿಯವರೆಗೆ ಚಿತ್ರಾನ್ನ ಇರುತ್ತದೆ! (ಎಲ್ಲಿಯವರೆಗೆ ಚಿತ್ರಾನ್ನ ಇರುತ್ತದೋ ಅಲ್ಲಿಯವರೆಗೆ ವಿಚಿತ್ರಾನ್ನ ಇರುತ್ತದೆ?) ಚಿತ್ರಾನ್ನ ತೀರಾ ಸಾಮಾನ್ಯದ್ದಾಯ್ತೇ - ಹೌ ಎಬೌಟ್‌ 'ಚಿರೋಟಿ"? ಬೇಕಿದ್ದರೆ ಮೇಲೆ ಸ್ವಲ್ಪ ಬಿಸಿಬಿಸಿ ಹಾಲು! ಇಲ್ಲಾ, ನಾವು ಚಿತ್ರಾನ್ನ, ಚಿರೋಟಿ ಎಲ್ಲ ಮುಟ್ಟೋದಿಲ್ಲ ಎನ್ನುವ ಜಂಕಿ (ಜಂಕ್‌ ಫ‚ುಡ್‌ ಭಕ್ಷಕರು)ಗಳಿಗೆ 'ಚಿಪ್ಸ್‌", ಸಿಹಿ ಇಷ್ಟದವರಿಗೆ 'ಚಿಕ್ಕಿ"! ಅವೆಲ್ಲ ಶುದ್ಧ ಸಸ್ಯಾಹಾರಿಗಳಿಗಾಯ್ತು, ಮಿಲ್ಟ್ರಿ ಖಾನಾವಳಿಯಲ್ಲಿ ಮೊಟ್ಟೆಯಷ್ಟೇ ಏಕೆ ಮೊಟ್ಟೆಯ ಅಮ್ಮನನ್ನೂ ಜೀರ್ಣಿಸಿಕೊಳ್ಳುತ್ತೇವೆ ಎನ್ನುವವರಿಗೆ ಬೇಕಷ್ಟು ಇದೆ 'ಚಿಕನ್‌" ವೆರೈಟಿ.

ಭೂಗೋಲದ ಪಶ್ಚಿಮಾರ್ಧದ ಜನ ಯಾಕೆ ಲೆಕ್ಕಕ್ಕಿಂತ ಹೆಚ್ಚೇ ಸ್ಥೂಲಶರೀರಿಗಳಾಗಿರ್ತಾರೆ ಗೊತ್ತೇ? ಪ್ರತಿಯೊಂದಕ್ಕೂ 'ಚೀಸ್‌" ಸೇರಿಸಿ ತೂ ಚೀಸ್‌ ಬಡೀ ಹೈ ಮಸ್ತ್‌ ಮಸ್ತ್‌ ಎನ್ನುತ್ತ ತಿಂದರೆ ಇನ್ನೇನು ತಾನೆ ಆಗ್ತಾರೆ? ಆದರೆ ಕರ್ನಾಟಕದ ಮಲೆನಾಡಿನ ಶ್ರಮಜೀವಿಗಳು ಹಾಗಲ್ಲ. ಅವರು ಸ್ವತಃ ಕೊಬ್ಬಿ ಕುಂಬಳಕಾಯಾಗುವುದಿಲ್ಲ, ಬದಲಿಗೆ 'ಚೀನಿಕಾಯಿಕಡಬು", 'ಚೀನಿಕಾಯಿಆಂಬೊಡೆ" ಇತ್ಯಾದಿ ಮಾಡಿ ಮೆಲ್ಲುತ್ತಾರೆ!

ಮಲೆನಾಡಾಗಲೀ ಕರಾವಳಿ-ಬಯಲುಸೀಮೆಗಳಾಗಲೀ ಕರ್ನಾಟಕದಾದ್ಯಂತ ಜನಪ್ರಿಯವಾದ 'ಚುರುಮುರಿ" ರುಚಿ ನೋಡದಿದ್ದರೆ ಹೇಗೆ? ಹಾಗೆಯೇ ಟೀ ಅಥವಾ ಕಾಫಿ‚ ಕುಡಿದರೆ ಅದರ ಜೋಡಿ 'ಚೂಡಾ" ಸಹ. ಐಸ್‌ಕ್ರೀಮೇ ಬೇಕೆನ್ನುವವರಿಗೆ ಅದರ ಮೇಲೊಂದು 'ಚೆರ್ರಿ" ಹಣ್ಣು.

ಈಗ ಮಾಂಸಾಹಾರಿಗಳತ್ತ ಗಮನಹರಿಸಿದರೂ ತಮಿಳ್ನಾಡಿನ ಪ್ರಖ್ಯಾತ 'ಚೆಟ್ಟಿನಾಡ್‌" ಪದ್ಧತಿಯ ಡೆಲಿಕೆಸಿಗಳಾಗಲೀ ಆಂಧ್ರಪ್ರದೇಶದಲ್ಲಿ ಜನಪ್ರಿಯವಾದ 'ಚೇಪ ವೇಪುಡು" (ಫಿ‚ಷ್‌ ಫ‚ೆ್ರೃ) ಅಥವಾ 'ಚೇಪ ಪುಲುಸು" (ಮೀನಿನ ಘಸಿ) ಆಗಲೀ ಚಕಾರದವೇ ಆಗಿವೆ. ಮತ್ತೆ, ಭಾಷೆಯಿಡೀ ಚಿಂಗ್‌ ಚಾಂಗ್‌ ಚುಂಗ್‌ ಎಂದೇ ಕೇಳಿಸುವ ಶಬ್ದಗಳಿರುವ ದೇಶದವರ 'ಚೈನಿಸ್‌ ನೂಡಲ್ಸ್‌", 'ಚೈನಿಸ್‌ ಫ‚ೆ್ರೃಡ್‌ರೈಸ್‌" ಇತ್ಯಾದಿಯೆಲ್ಲವೂ ಇವೆ. ಚೊಪ್‌ಸ್ಟಿಕ್ಸ್‌ ಹಿಡಿದು ತಿನ್ನುವುದನ್ನು ಅಭ್ಯಾಸ ಮಾಡಿಕೊಂಡಿದ್ದೀರಿ ತಾನೆ? ಊಟದ ನಂತರ ಡೆಸರ್ಟ್‌ ಆಗಿ 'ಚೊಕಲೇಟ್‌ ಪುಡ್ಡಿಂಗ್‌" ಅಥವಾ 'ಚೊಕಲೇಟ್‌ ಐಸ್‌ಕ್ರೀಮ್‌" ಸವಿಯಲು ಮಾತ್ರ ಮರೆಯಬೇಡಿ.

ದೇವತೆಗಳ ಆಹಾರವಾದ ಚರು ಬಗ್ಗೆ ಆಗಲೇ ಹೇಳಿದೆನಷ್ಟೆ? ದೇವರ ಸ್ವಂತ ದೇಶ (Gods own country) ಆದ ಕೇರಳದ ಪ್ರಜೆಗಳು ತಾವು ತಿನ್ನುವ ಅನ್ನಕ್ಕೆ ಏನನ್ನೋದು ಗೊತ್ತೇ? 'ಚೋರ್‌"! ಮೂರ್ಹೊತ್ತೂ ಚೋರ್‌ ತಿನ್ನುವ ಅವರಿಗೆ ಬೆಂಗಳೂರಿನ 'ಚೌಚೌ ಭಾತ್‌" ಸಹ ಬೇಡ, ನಾರ್ತ್‌ ಇಂಡಿಯನ್‌ ರೆಸ್ಟೊರೆಂಟಿನ 'ಚೌಮೀನ್‌" ಸಹ ಬೇಡ!

ಅಂತೂ ನನ್ನ ಚಾಗುಣಿತದಲ್ಲಿ ಪ್ರತಿಯೊಂದು ಅಕ್ಷರವೂ ಎಷ್ಟೊಂದು ರಸಾಳವಾಗಿದೆ ಅನಿಸುವುದಿಲ್ಲವೇ? ಅನುಸ್ವಾರ ವಿಸರ್ಗಗಳನ್ನೂ ಬಿಟ್ಟಿಲ್ಲ ನೋಡಿ. ಮೂರು ಸಿಹಿತಿಂಡಿಗಳ ಹೆಸರುಗಳು - 'ಚಂ ಚಂ", 'ಚಂಪಾಕಲಿ" ಮತ್ತು 'ಚಂದ್ರಹಾರ" ಕೇಳಿದ್ದೀರಾ? ಇದರಲ್ಲಿ ಮೊದಲಿನೆರಡು ಬಂಗಾಲಿ ಮೂಲದವಾದರೆ ಮೂರನೆಯದು ಕರ್ನಾಟಕದ್ದೇ ಕೊಡುಗೆ. ಹಾಲಿನ ಖೋವಾದಿಂದ ಮಾಡಿದ ಚಂದ್ರಹಾರ MTRನ ಮಯ್ಯ ಕುಟುಂಬದವರ ಸಂಶೋಧನೆ! (1948ರ ಸೂಪರ್‌ಹಿಟ್‌ ಕನ್ನಡ ಸಿನೆಮಾ ಚಂದ್ರಹಾರದ ನೆನಪಲ್ಲಿ ಆ ಹೆಸರು). MTR ರೆಸ್ಟೊರೆಂಟ್‌ಗೆ ರಾತ್ರೆಯೂಟಕ್ಕೆ ಹೋದರೆ ನಿಮಗೆ ಚಂದ್ರಹಾರದ ರುಚಿ ಸಿಗಬಹುದು!

ಇಷ್ಟೆಲ್ಲವನ್ನೂ ಕೇಳಿದ ನಿಮಗೆ ಚಾ ಎಲ್ಲಿ ಅನಿಸಿರಬಹುದಲ್ಲವೇ? ಚಾ ಮೂಲತಃ ಜಪಾನೀಯರ ಪೇಯ. ಚಾ ಪದವೂ ಜಪಾನ್‌ ಭಾಷೆಯದೇ. ಆದರೆ ನನಗನಿಸುತ್ತದೆ, ಭಾರತದೇಶದಲ್ಲಿ ಸಂಸ್ಕೃತ/ಕನ್ನಡದಲ್ಲಿ ಅದನ್ನು ಹಾಗೆಯೇ ಬಳಸಿದರೆ ಆ ಕಾರಾಂತ ಸ್ತ್ರೀಲಿಂಗವಾಗಬಹುದಾದ್ದರಿಂದ ಇನ್ನು ಮುಂದೆ 'ಚಃ" ಎಂದು (ಅಕಾರಾಂತ ಪುಲ್ಲಿಂಗ) ಬರೆಯಿಸೋಣವೇ?

ನನ್ನ ವಾದಕ್ಕೆ ನಿಮ್ಮ ಅನುಮೋದನೆ ಇದ್ದರೆ ನಿಮಗೆ ಬೈ ಟು ಚಃ ಕೊಡಿಸುವೆ!

ಇತಿ 'ಚ"ರ್ವಿತ 'ಚ"ರ್ವಣಂ ಸಮಾಪ್ತಂ.

*

ಈಗ ನಿಮ್ಮ ಅಭಿಪ್ರಾಯವೇನು? ಉದರಂಭರಣದ ಮಟ್ಟಿಗೆ 'ಚ"ಕ್ಕೆ ಸಾಟಿಯಾದ ವ್ಯಂಜನ ಬೇರಾವುದೂ ಇಲ್ಲ ಅಲ್ಲವೇ? ಅಷ್ಟಾಗಿ ಇವತ್ತಿನ ವಿಚಿತ್ರಾನ್ನದಲ್ಲಿ ಈ ಪರಿಯಲ್ಲಿ ತಿಂಡಿ ತಿನಸಿನ ಉಲ್ಲೇಖದಿಂದ ನಿಮ್ಮ ಹೊಟ್ಟೆ ಚುರುಗುಟ್ಟತೊಡಗಿತೇ ಅಥವಾ ಸಂತೃಪ್ತಿಯ ತೇಗು ಬಂತೇ? ಯಾವುದಕ್ಕೂ ಒಂದು ಚಮಚದಷ್ಟು 'ಚವನಪ್ರಾಶ"ವನ್ನು ಚಪ್ಪರಿಸಿ!

ಚಾಗುಣಿತದಲ್ಲಿ ಸರ್ವಿಸಲ್ಪಟ್ಟ ತಿಂಡಿಗಳ ಪೈಕಿ ಯಾವುದು ನಿಮ್ಮ ಇಷ್ಟದ್ದು, ಯಾವುದು ನೋಡಿ/ಕೇಳಿಯೂ ಗೊತ್ತಿಲ್ಲ, ಅಥವಾ ಇನ್ನಾವುದು ಈ ಪಟ್ಟಿಗೆ ಸೇರಲು ಅರ್ಹವಾಗಿದೆ ಎಂದು ತಿಳಿಸುತ್ತ ಪತ್ರಿಸಿ. ವಿಳಾಸ - [email protected]

ನಮ್ಮ ತಿಂಡಿ-ತಿನಿಸುಗಳ ಲೋಕಕ್ಕೆ ಇದೋ ಸ್ವಾಗತ!


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X