ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರತಕ್ಷತೆಗೆ ಬನ್ನಿ!

By Staff
|
Google Oneindia Kannada News

ಆರತಕ್ಷತೆಗೆ ಬನ್ನಿ!
ಮದ್ವೆ ಅಂದ್ರೆ ಸುಮ್ನೆ ಆಯ್ತೆ? ಈ ಮಾತೀಗ ಸುಮ್ನೆ ಆಗಿದೆ! ವಾರಗಟ್ಟಲೇ ಮದುವೆ ಸಂಭ್ರಮ ಮನೆಗಳಲ್ಲಿ ಹಿಂದೆ ಕೆನೆಕಟ್ಟುತ್ತಿತ್ತು. ಮದುವೆಯಲ್ಲಿ ಎಷ್ಟೆಲ್ಲಾ ಶಾಸ್ತ್ರಗಳಿದ್ದವು. ಈಗಲೂ ಒಂದಿಷ್ಟು ಶಾಸ್ತ್ರಗಳಿವೆ. ಆದರೆ ಅವುಗಳಲ್ಲಿ ಜೀವಕಳೆಯೇ ಉಳಿದಿಲ್ಲ! ‘ಓ... ವಿಚಿತ್ರಾನ್ನದ 174ನೇ ಸಂಚಿಕೆ, ಮದ್ವೆಮನೆಗೆ ಸಂಬಂಧಿಸಿದ್ದು’ ಅನ್ನೋ ನಿಮ್ಮ ಊಹೆ ಒಂದಿಷ್ಟು ಮಾತ್ರ ಸರಿ! ಅದಿರಲಿ, ಮದುವೆಯಲ್ಲಿ ವಧು-ವರರ ಆಶೀರ್ವದಿಸಲು ಅಕ್ಷತೆ ಕಾಳನ್ನು ಬಳಸೋದು ಯಾಕೆ?

Srivathsa Joshi *ಶ್ರೀವತ್ಸ ಜೋಶಿ

Why do we use rice grains to bless the newly weds? ‘ಆರತಕ್ಷತೆ’ - ಈಗೀಗ ಮದುವೆ ಕರೆಯೋಲೆಗಳಲ್ಲಿ ಈ ಪದ ಕಾಣಿಸಿಕೊಳ್ಳುತ್ತಿಲ್ಲ, ಮದುವೆ ಸಮಾರಂಭದಲ್ಲಿ ಅಂಥದೊಂದು ಸಂಪ್ರದಾಯಕ್ಕೆ ಅಷ್ಟೊಂದು ಪ್ರಾಮುಖ್ಯವೂ ಸಿಗುತ್ತಿಲ್ಲವೇನೊ. ಆರತಕ್ಷತೆಯ ಸ್ಥಾನವನ್ನು ‘ರಿಸೆಪ್ಷನ್‌’ ಆಕ್ರಮಿಸಿಕೊಂಡಿದೆ. ಕನ್ನಡಿಗರ ಲಗ್ನಪತ್ರಿಕೆಗಳೂ ಕಾಸ್ಮೊಪೊಲಿಟನ್‌ ಆಗಿದ್ದು ಸಣ್ಣ ಅಕ್ಷರಗಳಲ್ಲಿ ‘ಮುಹೂರ್ತಮ್‌’, ದೊಡ್ಡ ಅಕ್ಷರಗಳಲ್ಲಿ ‘ರಿಸೆಪ್ಷನ್‌’ಗಳೇ ರಾರಾಜಿಸುತ್ತವೆಯೇ ವಿನಃ ಆರತಕ್ಷತೆಯಂತಹ ಆತ್ಮೀಯ ಪದ ನಾಪತ್ತೆಯಾಗಿ ಹೋಗಿದೆ!

ವಧು-ವರರನ್ನು ಹಸೆಮಣೆಯ ಮೇಲೆ ಕೂರಿಸಿ ಸುಮಂಗಲಿಯರು ಆರತಿ ಬೆಳಗಿ ಸೋಬಾನೆ ಹಾಡಿ ಅಕ್ಷತೆಕಾಳು ಹಾಕಿ ಶುಭಾಶೀರ್ವಚನಗೈಯುವ ರೀತಿಗಿಂತ, ಸೂಟುಬೂಟು ತೊಟ್ಟ ವರ - ಸಿನಿತಾರೆಯನ್ನು ನಾಚಿಸುವಷ್ಟು ಮೇಕಪ್‌ಗೊಂಡ ವಧು ಸಿಂಹಾಸನದಂತಿರುವ ಎರಡು ಕುರ್ಚಿಗಳ ಮುಂದೆ ನಿಂತು ಇಷ್ಟಮಿತ್ರಬಂಧುಬಾಂಧವರೆಲ್ಲ ಸರತಿಯಸಾಲಿನಲ್ಲಿ ವೇದಿಕೆಯ ಮೇಲೆ ಬಂದು ಅವರ ಕೈಕುಲುಕಿ ಒಂದಿಷ್ಟು ಕೃತಕವೇ ಎನಿಸುವಂಥ ನಗು ಬೀರಿ ಫೊಟೊ ಕ್ಲಿಕ್ಕಿಸಿಕೊಳ್ಳುವ ರುಟೀನ್‌ ನೋಡಿ ನೋಡಿ ನಮಗೆಲ್ಲ ಅಭ್ಯಾಸವಾಗಿ ಹೋಗಿದೆ. ಆರತಕ್ಷತೆಯಲ್ಲಿ ಗಾಢವಾಗಿರುತ್ತಿದ್ದ ಶುಭಾಶಂಸನೆಯ ಅಂಶ ರಿಸೆಪ್ಷನ್‌ನ ಕಣ್ಣುಕುಕ್ಕುವ ‘ಶೋ’ಬಾಜಿಯೆದುರು ಕಳೆಗುಂದುತ್ತಿದೆ.

ಈ ಹಿನ್ನೆಲೆಯಲ್ಲಿ ಇವತ್ತು ವಿಚಿತ್ರಾನ್ನದಲ್ಲಿ ಆರತಕ್ಷತೆ! ಆದರೆ ಸ್ವಲ್ಪ ತಾಳಿ. ಇಲ್ಲಿ ತಾಳಿ ಕಟ್ಟಿದವರು/ಕಟ್ಟಿಸಿಕೊಂಡವರು ಆರತಕ್ಷತೆಗೆ ಕೂತಿರುವುದಲ್ಲ. ತಾಳಿ ಕಟ್ಟುವ ಶುಭ ವೇಳೆಯಲ್ಲಿ ಅಕ್ಷತೆಯದೇನು ಪಾತ್ರ ಮತ್ತು ಮಹತ್ವ ಎಂಬುದರ ಬಗ್ಗೆ ಒಂದಿಷ್ಟು ಮಾಹಿತಿಯಾಡನೆ ಮನರಂಜನೆಯ ಪೋಣಿಸಿಕೊಂಡು ಹರಟಲು ನಾವೆಲ್ಲ ಸೇರಿರುವುದು.

*

ಅಕ್ಷತ ಎಂದರೆ ಸಂಸ್ಕೃತಭಾಷೆಯಲ್ಲಿ ‘ತುಂಡಾಗದ’ (unbroken) ಎಂದರ್ಥ. ಕನ್ನಡಬಳಕೆಯ ಅಪಭ್ರಂಶವಾಗಿ ಅದು ‘ಅಕ್ಷತೆ’ ಆಗಿದೆ. ಅಕ್ಷತೆಯ ಒಂದೊಂದು ಅಕ್ಕಿ ಕಾಳೂ ಇಡಿಯದಾಗಿರಬೇಕು. ನುಚ್ಚಾಗಿರುವ ಅಕ್ಕಿಗೆ ಎಷ್ಟೇ ಅರಸಿನ ಕುಂಕುಮ ಲೇಪಿಸಿದರೂ ಅದು ಅಕ್ಷತೆಯಾಗದು. ಅಕ್ಷತೆಯ ಇನ್ನೊಂದು ವೈಶಿಷ್ಟ್ಯವೆಂದರೆ ಅದು ಪೂಜೆ ಪುನಸ್ಕಾರಗಳಲ್ಲಿ ದೇವರಿಗೆ ಅರ್ಪಣೆಯ ಪೂಜಾದ್ರವ್ಯವಾಗಿಯೂ ಬಳಕೆಯಾಗುತ್ತದೆ, ಹಾಗೆಯೇ ದೇವತಾನುಗ್ರಹಕ್ಕೆ ಅಥವಾ ಗುರುಹಿರಿಯರ ಆಶೀರ್ವಚನಕ್ಕೆ ವಸ್ತುರೂಪವಾಗಿಯೂ ಅದು ಕಾರ್ಯವೆಸಗುತ್ತದೆ. ಅರ್ಪಣೆ-ಅನುಗ್ರಹಗಳ ದ್ವಿಮುಖ ಸಂವಹನ(bidirectional flow)ವನ್ನು ನಿಭಾಯಿಸುವ ಅಕ್ಷತೆಯದು ಏಕಪಾತ್ರಾಭಿನಯವಿದ್ದಂತೆ. ಇನ್ನೂ ಆಧ್ಯಾತ್ಮಿಕವಾಗಿ ಹೇಳಬೇಕಿದ್ದರೆ ಅಕ್ಷತೆ ಫಲಾಪೇಕ್ಷೆಯ ಬೀಜವೂ ಹೌದು; ಬೀಜ ಮೊಳೆತು ಪಕ್ವವಾಗಿ ಲಭಿಸುವ ಫಲವೂ ಹೌದು!

ವಿವಾಹಮಹೋತ್ಸವದಲ್ಲಿ ವಧುವರರನ್ನು ಆಶೀರ್ವದಿಸಿ ಅನುಗ್ರಹಿಸಲಿಕ್ಕೆ ಅಕ್ಷತೆಯನ್ನು ಉಪಯೋಗಿಸುವುದು. ಆರತಿ ಬೆಳಗಿ ಅಕ್ಷತೆ ಹಾಕುವುದರಿಂದ ‘ಆರತಕ್ಷತೆ’ ಎಂಬ ರಿವಾಜು ಬಂದದ್ದಿರಬಹುದು. ಆರತಕ್ಷತೆಯೆಂಬ ಪ್ರತ್ಯೇಕ ಕಾರ್ಯಕ್ರಮವಿಟ್ಟುಕೊಂಡಿರದಿದ್ದರೂ ಮುಹೂರ್ತದ ವೇಳೆ ವಧು-ವರರು ಪರಸ್ಪರ ಹಾರ ಹಾಕಿಕೊಂಡ ಮೇಲೆ ಗಟ್ಟಿಮೇಳ ಮೊಳಗುತ್ತಲೇ ಅತಿಥಿಗಳೆಲ್ಲ ಅಕ್ಷತೆಯ ಮೂಲಕ ಆಶೀರ್ವಾದದ ಮಳೆಗರೆಯುತ್ತಾರೆ.

ಅಕ್ಷತೆಯ ರೂಪದಲ್ಲಷ್ಟೆ ಅಲ್ಲದೆ ಮದುವೆಯ ಇನ್ನಿತರ ವಿಧಿವಿಧಾನಗಳಲ್ಲೂ ಅಕ್ಕಿಯ ಪಾತ್ರ ಮಹತ್ತರವಾದದ್ದು. ಅಂತಃಪಟ ಸರಿಯುವ ಮುನ್ನ ವಧುವರರು ಎದುರುಬದುರಾಗಿ ನಿಲ್ಲುವುದು ಅಕ್ಕಿರಾಶಿಯ ಮೇಲೆ. ಸಪ್ತಪದಿ ತುಳಿಯುವುದೂ ಅಕ್ಕಿಯಿಂದ ಮಾಡಿದ ಏಳು ರಾಶಿಗಳ ಮೇಲೆ ಹೆಜ್ಜೆಯಿಟ್ಟು (ಕೆಲವು ಕಡೆ ಬೇರೆ ರೀತಿಯೂ ಇರಬಹುದು). ಇನ್ನು, ಹೊಸದಾಗಿ ಗಂಡನ ಮನೆಯನ್ನು ಪ್ರವೇಶಿಸುವ ವಧು ಮನೆಯ ಹೊಸ್ತಿಲಲ್ಲಿಟ್ಟ ಅಕ್ಕಿಪಾತ್ರೆಯನ್ನು ಕಾಲಿಂದ ಚೆಲ್ಲಿ ಒಳಬರುವುದು - ಅಕ್ಷರಶಃ ಧಾನ್ಯಲಕ್ಷ್ಮಿ ಮನೆಯಾಳಗೆ ಅಡಿಯಿಟ್ಟಳು ಎಂಬ ಸಂಕೇತವಾಗಿ.

ಹೀಗೆ ಅಕ್ಷತೆ-ಅಕ್ಕಿಕಾಳಿನ ಮಹತ್ವ ಮತ್ತು ನಮ್ಮ ಭಾರತೀಯ ವಿವಾಹಪದ್ಧತಿಯಲ್ಲಿ (ಪ್ರಾದೇಶಿಕ ವಿಭಿನ್ನತೆಗಳನ್ನು ಹೊರತುಪಡಿಸಿಯೂ) ಅದರ ವೈಶಿಷ್ಟ್ಯ ನಮಗೆಲ್ಲ ಗೊತ್ತಿರುವಂಥದ್ದೇ. ಅಚ್ಚರಿಯ ಅಂಶವೇನೆಂದರೆ, ವಧುವರರ ಮೇಲೆ ಅಕ್ಕಿಕಾಳು ಚೆಲ್ಲಿ ಆಶೀರ್ವದಿಸುವ ಕ್ರಮ ಪಾಶ್ಚಾತ್ಯ ಸಂಸ್ಕೃತಿಯಲ್ಲೂ ಇದೆ; ಮಾತ್ರವಲ್ಲ, ಅದರ ಹಿಂದೆ ಸಾಕಷ್ಟು ಚರಿತ್ರೆಯೂ ಇದೆ!

ಪ್ರಾಚೀನ ರೋಮನ್‌ ಕಾಲದದಿಂದಲೂ ಯಾವುದಾದರೂ ಧಾನ್ಯವನ್ನು ಚೆಲ್ಲಿ ವಧುವರರನ್ನು ಆಶೀರ್ವದಿಸುವ ಪದ್ಧತಿ ಚಾಲ್ತಿಯಲ್ಲಿದ್ದಂತಿದೆ. ಮೊದಲೆಲ್ಲ ಬಹುತೇಕವಾಗಿ ಗೋಧಿಯ ಬಳಕೆಯಿತ್ತಂತೆ. ಗೋಧಿ ಅಥವಾ ಅಕ್ಕಿ ಅಥವಾ ಇತರ ಯಾವುದೇ ಧಾನ್ಯವನ್ನು ಬಳಸಿದ್ದರೂ ಅದರ ಹಿಂದಿನ ಉದ್ದೇಶ ಫಲವತ್ತತೆ (fertility) ಮತ್ತು ಸಂಪನ್ನತೆ (prosperity)ಗಳನ್ನು ಸಂಕೇತಿಸುವುದೇ ಆಗಿತ್ತು. ಸಮೃದ್ಧಿ, ಸೌಭಾಗ್ಯಗಳ ಶ್ರೀಮಂತಿಕೆಯ ಪ್ರತೀಕವಾಗಿ ಧಾನ್ಯಕ್ಕಿಂತ ಸಮರ್ಥವಾದದ್ದು ಇನ್ನೇನು ತಾನೆ ಇದೆ? ಹಾಗಾಗಿಯೇ ಸಂಪದ್ಭರಿತರಾಗಿ, ಸಂತಾನಪ್ರಾಪ್ತಿವಂತರಾಗಿ, ಸುಖಿಗಳಾಗಿ ಎಂಬ ಶುಭಾಶಯ ರೂಪದಲ್ಲಿ ಗೋಧಿಕಾಳು ಅಕ್ಕಿಕಾಳು ಅಥವಾ ಇನ್ನಿತರ ಧಾನ್ಯವನ್ನು ಉದುರಿಸುವ ಸಂಪ್ರದಾಯ ಬಂತು.

ರೋಮನ್ನರ ಪ್ರಾಶಸ್ತ್ಯ ಅಕ್ಕಿಗಿಂತಲೂ ಗೋಧಿಯೇ ಆಗಿತ್ತು. ಸಂತಾನೋತ್ಪತ್ತಿಗೂ ಗೋಧಿಗೂ ಸಂಬಂಧವಿದೆಯೆಂದು ನಂಬಿದ್ದ ರೋಮನ್ನರಲ್ಲಿ ಮದುವೆಯಾಗುವ ಕನ್ಯೆ ವಿವಾಹಸಮಾರಂಭದುದ್ದಕ್ಕೂ ಒಂದು ಪಾತ್ರೆಯಲ್ಲಿ ಗೋಧಿಯನ್ನು ಹಿಡಿದುಕೊಂಡಿರುವ, ಗೋಧಿಕಾಳುಗಳ ಮಾಲೆಯನ್ನು ತಲೆಯಲ್ಲಿ ಧರಿಸುವ ಕ್ರಮವಿತ್ತು. ಮದುವೆಗೆ ಆಗಮಿಸಿದ ಅತಿಥಿಗಳೂ ವಧುವಿನ ಮೆಲೆ ಗೋಧಿಕಾಳನ್ನು ಚೆಲ್ಲಿ ಆಶೀರ್ವಾದ ಮಾಡುತ್ತಿದ್ದರು. ಗುರುಹಿರಿಯರ ಆ ಆಶೀರ್ವಾದದ ಗೋಧಿಕಾಳುಗಳು ವಧುವಿನ ತಲೆಯ ಮೇಲೆ ಬಿದ್ದು ಅಲ್ಲಿಂದ ನೆಲಕ್ಕುದುರಿದರೆ ಇನ್ನೂ ಮದುವೆಯಾಗಿರದ ಹೆಣ್ಮಕ್ಕಳು ಅವನ್ನು ಹೆಕ್ಕಿಕೊಳ್ಳಲು ದುಂಬಾಲುಬೀಳುವುದಿತ್ತು, ತಮಗೂ ಆ ರೀತಿಯ ಆಶೀರ್ವಾದ ಯೋಗ ಶೀಘ್ರದಲ್ಲೇ ಪ್ರಾಪ್ತಿಯಾಗಲೆಂದು!

ಇಂಗ್ಲೆಂಡಿನ ರಾಣಿ ಒಂದನೆ ಎಲಿಜಬೆತ್‌ಳ ಆಡಳಿತಕಾಲಕ್ಕೆ, ವಧುವಿನ ಮೇಲೆ ಗೋಧಿಕಾಳು ಚೆಲ್ಲುವ ರಿವಾಜಿಗೆ ಒಂದು ಮಾರ್ಪಾಡು ಬಂತು. ಗೋಧಿಕಾಳನ್ನೇ ಚೆಲ್ಲುವ ಬದಲಿಗೆ ಅದರ ಕೇಕ್‌ ಮಾಡಿ ಕೇಕಿನ ಸಣ್ಣಸಣ್ಣ ತುಂಡುಗಳನ್ನು ವಧುವಿನ ಮೇಲೆ ಮಳೆಗರೆಯುವ ಕ್ರಮ ಆರಂಭವಾಯ್ತು. ಆದರೆ ರುಚಿಕರವಾದ ಕೇಕ್‌ಅನ್ನು ತುಂಡರಿಸಿ ಚೆಲ್ಲುವ ಬದಲು ಕಾಲಕ್ರಮೇಣ ಅದು ಮದುವೆಸಮಾರಂಭದ ಒಂದು ಭಕ್ಷ್ಯವಾಯಿತು. ತಿಂದು ತೇಗುವ ಮೋಜಿಗೇನೊ ಕೇಕ್‌ ಸಿಕ್ಕಿತು, ಆದರೆ ನಿಜವಾಗಿಯೂ ವಧುವರರನ್ನು ಹರಸಲೆಂದೇ ಬರುವ ಹಿರಿಯ ಹಿತೈಷಿಗಳಿಗೆ ಆಶೀರ್ವಾದಕ್ಕೊಂದು ರೂಪವನ್ನು ಕೊಡಲಿಕ್ಕೆ ಏನೂ ಇಲ್ಲವಾಯ್ತು. ಆಗ ಶುರುವಾದದ್ದು ಆಶೀರ್ವಚನಕ್ಕಾಗಿ ಅಕ್ಕಿಕಾಳಿನ ಉಪಯೋಗ. ಗೋಧಿಗಿಂತ ಸುಲಭವಾಗಿ, ಅಗ್ಗದಲ್ಲಿ ಲಭಿಸುತ್ತಿದ್ದ ಅಕ್ಕಿ ಸಹಜವಾಗಿಯೇ ಈ ಉಪಯೋಗಕ್ಕೆ ಯೋಗ್ಯವಾದ ಧಾನ್ಯವೆನಿಸಿಕೊಂಡಿತು. ಅವತ್ತಿಂದಲೂ ರೋಮನ್‌ ಕ್ಯಾಥೊಲಿಕ್‌ ಮದುವೆಗಳಲ್ಲಿ ವಧುವರರ ಮೇಲೆ ಅಕ್ಕಿಕಾಳು ಚೆಲ್ಲುವ ಪರಿಪಾಠ ಮುಂದುವರೆಯಿತು.

ರೋಮನ್‌ ಯುಗಕ್ಕಿಂತಲೂ ಹಿಂದೆ, ಆದಿವಾಸಿಗಳ ಜೀವನಶೈಲಿಯಲ್ಲೂ ಅಕ್ಕಿಗೂ ಗಂಡು-ಹೆಣ್ಣಿನ ಸಹಬಾಳ್ವೆಗೂ ಸಂಬಂಧವಿತ್ತೆಂದು ತಿಳಿದುಬರುತ್ತದೆ. ಗಂಡು-ಹೆಣ್ಣು ಒಟ್ಟಾಗಿ ಅಕ್ಕಿ (ಅನ್ನ) ತಿಂದರೆ ಅವರ ಜೋಡಿಯಾದಂತೆ ಎಂಬ ನಂಬಿಕೆಯಿತ್ತು. ಅವರಿಗೆ ತಿನ್ನುವುದಕ್ಕಾಗಿ ಅಕ್ಕಿಯನ್ನೇ ಅವರಿಬ್ಬರ ಮೇಲೆ ಸುರಿಸುವ ಕ್ರಮವೂ ಇತ್ತು. ಇನ್ನು ಕೆಲವು ಪಂಗಡಗಳಲ್ಲಿ, ಬುಡಕಟ್ಟು ಜನಾಂಗಗಳಲ್ಲಿ ವಧು-ವರರ ಮೇಲೆ ಕೆಟ್ಟದೃಷ್ಟಿಯಿಟ್ಟು ಬರುವ ಕ್ಷುದ್ರಶಕ್ತಿಗಳಿಗೆ ಬಲಿಯ ರೂಪದಲ್ಲಿ ಅಕ್ಕಿಕಾಳನ್ನು ಸಿಂಪಡಿಸುವ ಕ್ರಮವೂ ಇದ್ದಿರಬಹುದು. ಅಂತೂ ಮದುವೆಗೂ ಅಕ್ಕಿಕಾಳಿಗೂ ಅವಿನಾಭಾವ ಸಂಬಂಧ ಒಂದಲ್ಲ ಒಂದು ನಮೂನೆಯಲ್ಲಿ ಇದ್ದೇ ಇದೆ.

ಪಾಶ್ಚಾತ್ಯದೇಶಗಳಲ್ಲಿ ಮದುವೆಯ ‘ಧಾರ್ಮಿಕ ಭಾಗ’ ಈಗಲೂ ಚರ್ಚ್‌ಗಳಲ್ಲೇ ನಡೆಯುವುದು. ಧರ್ಮಗುರುಗಳ ಸಮಕ್ಷಮದಲ್ಲಿ ಗಂಡು-ಹೆಣ್ಣು ಪ್ರಮಾಣಪೂರ್ವಕ ಸತಿಪತಿಗಳಾಗುವುದು, ಗುರುಹಿರಿಯರು ಆಶೀರ್ವದಿಸುವುದಕ್ಕಾಗಿ ಅಕ್ಕಿಕಾಳನ್ನು ಚೆಲ್ಲುವುದು - ಇವೆಲ್ಲ ಕ್ರಮಗಳು ಚಾಚೂತಪ್ಪದೆ ನಡೆಯುತ್ತವೆ (ಆಮೇಲೆ ಆ ಮದುವೆಯ ಪವಿತ್ರಬಂಧ ಎಷ್ಟು ದಿನ/ತಿಂಗಳು/ವರ್ಷ ಉಳಿಯುತ್ತದೆಯೆನ್ನುವ ಮಾತು ಬೇರೆ). ಚರ್ಚ್‌ ಪ್ರಾಂಗಣದಲ್ಲಿ ಈ ರೀತಿ ಅಕ್ಕಿಕಾಳು ಚೆಲ್ಲುವುದು ಸಲ್ಲದು, ಹಕ್ಕಿಗಳು ತಿಂದರೆ ಅವುಗಳಿಗದು ಹಾನಿಕರ ಎಂಬ ಕೂಗು ಈಚೀಚೆಗೆ ಕೇಳಿಬಂದದ್ದಿದೆ. ಗೊಡ್ಡು ಸಂಪ್ರದಾಯಗಳ ಬಗ್ಗೆ ಅಗೌರವವಿರುವವರಿಂದಲೋ, ತಥಾಕಥಿತ ಪಕ್ಷಿಪ್ರೇಮಿಗಳಿಂದಲೋ ಅಥವಾ ಚರ್ಚ್‌ ನೈರ್ಮಲ್ಯ ಉಸ್ತುವಾರಿಯವರಿಂದಲೋ ಅಂತೂ ಪಾಶ್ಚಾತ್ಯ ಜಗತ್ತಲ್ಲೂ ಮದುವೆಯಲ್ಲಿನ ಆಶೀರ್ವಚನದ ಅಕ್ಕಿಕಾಳಿಗೂ ಸಂಚಕಾರ ಬಂದಿದೆ!

ಅದೆಲ್ಲ ಸರಿ, ಆದರೆ ಪೌರ್ವಾತ್ಯ ದೇಶಗಳಲ್ಲಿ, ಮುಖ್ಯವಾಗಿ ಭಾರತೀಯ ಹಿಂದು ಪದ್ಧತಿಯಲ್ಲಿ ಮದುವೆಯಲ್ಲಿ ಅಕ್ಷತೆ-ಅಕ್ಕಿಕಾಳಿಗಿರುವ ಮಹತ್ವದ ಬಗ್ಗೆ ಗೊತ್ತಿಲ್ಲದೆ ಅಮೆರಿಕನ್ನರು ಮಾಡುವ ಜೋಕ್‌ ಒಂದಿದೆ - ‘‘ಪಾಶ್ಚಾತ್ಯರಾದ ನಾವು ಮದುವೆಗಳಲ್ಲಿ ವಧುವರರ ಮೇಲೆ ಅಕ್ಕಿಕಾಳು ಚೆಲ್ಲುವುದಾದರೆ ಪೌರ್ವಾತ್ಯರು ಹ್ಯಾಮ್‌ಬರ್ಗರ್‌ ಚೆಲ್ಲಬೇಕೊ ಹೇಗೆ?’’ ಎಂಬ ಹಾಸ್ಯದ ಕುತರ್ಕವಿದೆ. ಹ್ಯಾಮ್‌ಬರ್ಗರ್‌ ವಿಷಯ ಹಾಗಿರಲಿ, ಆಧುನಿಕತೆಯ ಧಾವಂತದಲ್ಲಿ ‘ಆರತಕ್ಷತೆ’ಯಂಥ ಆತ್ಮೀಯ ಸಂದರ್ಭಗಳಿಗೂ ಅನಾದರ ತೋರುತ್ತೇವಲ್ಲ ನಾವು? ಇದಕ್ಕೇನನ್ನೋಣ?

*

ಈವಾರ ಒಂದು ರಸಪ್ರಶ್ನೆಯೂ ಇದೆ. ‘ಆರತಕ್ಷತೆ’ ಎಂಬ ಹೆಸರಿನ ಕನ್ನಡ ಪುಸ್ತಕ (ಲಲಿತಪ್ರಬಂಧ ಸಂಕಲನ)ವನ್ನು ಬರೆದ ಲೇಖಕರಾರು? ಲಲಿತಪ್ರಬಂಧಗಳೆಂದ ಮೇಲೆ ಅವರೊಬ್ಬ ಹಾಸ್ಯಸಾಹಿತಿಯೆಂಬುದರಲ್ಲಿ ಅನುಮಾನವೇ ಇಲ್ಲ. ಸ್ವಾರಸ್ಯಕರವಾದ ಇನ್ನೊಂದು ಸುಳಿವನ್ನೂ ನಿಮಗೆ ಹೇಳಬೇಕೆಂದರೆ, ಅವರ ಪೂರ್ಣ ಹೆಸರು (ಅಂದರೆ ಇನಿಶಿಯಲ್ಸ್‌ ಸಹ ವಿಸ್ತರಿಸಿ ಹೇಳಿದರೆ) ಶುರುವಾಗುವುದೇ ‘ಅಕ್ಕಿ’ಯಿಂದ! ಅಷ್ಟೇ ಅಲ್ಲ, ಅಕ್ಷರಗಳೆಂಬ ಅಕ್ಕಿಯ ವಿಚಿತ್ರಾನ್ನಕ್ಕೆ ಅಕ್ಷತೆಹಾಕಿ ಆಶೀರ್ವದಿಸಿದವರೂ ಈ ಹಿರಿಯ ‘ಸ್ನೇಹಿತ’ರೇ. ಯಾರವರೆಂದು ಯೋಚಿಸಿ ಉತ್ತರವನ್ನು ಬರೆದು ತಿಳಿಸಿ. ವಿಳಾಸ -[email protected]


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X