ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದೊಂದು ಬೆವರಹನಿ ಮುತ್ತಾಯ್ತದೋ...

By Staff
|
Google Oneindia Kannada News


ಜೀವನದಲ್ಲಿ ಬೆವರು ಸುರಿಸದೇ ಫಲ ಸಿಗದು. ಆ ಬೆವರು ನಿಮ್ಮದಾದ್ರೂ ಆಗಿರಬಹುದು. ಬೇರೆಯವರದಾದ್ರೂ ಆಗಿರಬಹುದು! ಒಟ್ಟಾರೆ ಫಲ ಸಿಗಲು, ಬೆವರು ಮಾತ್ರ ಸುರಿಯಲೇ ಬೇಕು! ಅದು ಸರಿ ; ಬೆವರು ಸುರಿಯೋದಾದ್ರೂ ಯಾಕೆ? ವಿಚಿತ್ರಾನ್ನದ 217ನೇ ಸಂಚಿಕೆಯಲ್ಲಿ ಬೆವರಹನಿಗಳು.

  • ಶ್ರೀವತ್ಸ ಜೋಶಿ
Sweat - a special gift of summer!ನಾವೆಲ್ಲರೂ ಬೆವರುತ್ತೇವೆ, ಆದರೆ ಹಾಗೆ ಹೇಳಿಕೊಳ್ಳಲು ಇಷ್ಟಪಡುವುದಿಲ್ಲ ಅಷ್ಟೇ. ಇಂಗ್ಲಿಷ್‌ನಲ್ಲೊಂದು ನಾಣ್ಣುಡಿಯಿದೆ, "horses sweat, men perspire, and women glow!" ಎಂದು. ಬೆವರುವುದೇನಿದ್ದರೂ ಕುದುರೆ ಮತ್ತು ಇತರ ಪ್ರಾಣಿಗಳು ಮಾತ್ರವಂತೆ. ಗಂಡಸರು ಬೆವರುವುದಲ್ಲ ಅದು ಅವರ ಶ್ರಮಧಾರೆ. ಹೆಂಗಸರಿಗಂತೂ ಬೆವರೆಂದರೇನೆಂದೇ ಗೊತ್ತಿಲ್ಲ, ಅವರಿಗೆ ಬೆವರುಬಂದರೂ ಅದು ಮೈಕಾಂತಿ (ಅಥವಾ ಹಾಗೊಂದು ಭ್ರಾಂತಿ)!

ಬೆವರು ಸುರಿಸಿ ಕಷ್ಟ ಸಹಿಸಿ ಒಂದೇ ಸಮನೆ ದುಡಿಯುವ ಅನ್ನದಾತ ರೈತನ ಶ್ರಮವನ್ನು ನಾವು ಗುರುತಿಸುತ್ತೇವೆ; ಅಥವಾ ‘ನಾನಿವತ್ತು ಈ ಸುಸ್ಥಿತಿಯಲ್ಲಿದ್ದೇನಾದ್ರೆ ಅದು ನಮ್ಮಪ್ಪ ಸುರಿಸಿದ ಬೆವರಿನ ಫಲ, ನನ್ನನ್ನು ಹೊತ್ತು ಹೆತ್ತು ಸಾಕಿ ಸಲಹಿದ ಅಮ್ಮನ ಒಂದೊಂದು ಬೆವರಹನಿಯೇ ಇವತ್ತು ನಾನು ನಾನಾಗಿರುವುದರ ಕಾರಣ...’ ಎಂದು ಪುಳಕಗೊಳ್ಳುತ್ತೇವೆ. ಭಾವನಾತ್ಮಕವಾಗಿ ಆಪ್ಯಾಯಮಾನವಾಗುವ ಬೆವರು ಭೌತಿಕವಾಗಿ ನಮಗೆ ಕೊಂಚ ಮುಜುಗರ ತರಿಸುತ್ತದೆ. ಬೆವರುತ್ತೇವೆ ಎಂಬ ಕಲ್ಪನೆಗೆ ನಾವು ಹಿಂಜರಿಯುತ್ತೇವೆ.

ಆದರೆ ವಾಸ್ತವ ಹಾಗಿಲ್ಲ. ಕೆಲವರು ಹೆಚ್ಚು ಇನ್ನು ಕೆಲವರು ಕಡಿಮೆ ಬೆವರುತ್ತಾರೆ ಎಂಬುದನ್ನು ಬಿಟ್ಟರೆ ಎಲ್ಲರೂ ಬೆವರುತ್ತಾರೆ, ಬೆವರಲೇಬೇಕು. ಶ್ವಾಸೋಚ್ಛ್ವಾಸ ಹೃದಯಬಡಿತಗಳಷ್ಟೇ ನೈಸರ್ಗಿಕವೂ ಅತ್ಯವಶ್ಯಕವೂ ಆದುದು ನಮ್ಮ ಶರೀರವು ಬೆವರುವ ಪ್ರಕ್ರಿಯೆ. ಗಂಡಸರಲ್ಲೂ ಹೆಂಗಸರಲ್ಲೂ ಸಮಾನವಾಗಿ, ಶರೀರದ ಒಂದೊಂದು ಚದರಸೆಂಟಿಮೀಟರ್‌ನಲ್ಲೂ ಸುಮಾರು 150ರಿಂದ 300ರವರೆಗೆ ಸ್ವೇದಗ್ರಂಥಿಗಳು (ಬೆವರು ಸಂಸ್ಕೃತದಲ್ಲಿ ‘ಸ್ವೇದ’ ಮತ್ತು ಇಂಗ್ಲಿಷ್‌ನಲ್ಲಿ sweat ಎಂಬ ವಿಷಯ ಭಾಷಾಬಫ‚್‌ಗಳ ಕುತೂಹಲಾಗ್ನಿಗೊಂದಿಷ್ಟು ತುಪ್ಪ!) ಇರುತ್ತವೆ. ನಮ್ಮ ಶರೀರದ ತಾಪಮಾನನಿಯಂತ್ರಣ ವ್ಯವಸ್ಥೆಯ ಮೂಲಾಧಾರವೇ ಬೆವರು. ನಾವು ಸೇವಿಸುವ ದೈನಂದಿನ ಆಹಾರದಲ್ಲಿನ ಸುಮಾರು 2500 ಕ್ಯಾಲೋರಿಗಳು ಬರ್ನ್‌ ಆದಾಗಿನ ಶಾಖ ಹದ್ದುಬಸ್ತಿಗೆ ಬರುವುದು ಬೆವರಿನಿಂದಲೇ.

ಮನುಷ್ಯರಷ್ಟೇ ಬೆವರುವುದಲ್ಲ. ದೇವಾ-ಧಿ-ದೇವತೆಗಳ, ಪುರಾಣಪುರುಷರ ಬೆವರಿನ ಕಥೆಗಳು ರೋಚಕವಾಗಿವೆ. ನಮಗೆಲ್ಲರಿಗೂ ಗೊತ್ತಿರುವಂತೆ ಆದಿಪೂಜಿತ ಗಣೇಶ ಜನ್ಮತಾಳಿದ್ದೇ ಮಾತೆ ಪಾರ್ವತಿಯ ಮೈಯ ಬೆವರು ಮತ್ತು ಗಂಧಗಳಿಂದ. ಹಾಗೆಯೇ ದೇವಗಂಗೆ (ಭಗೀರಥ ಬೆವರು ಹರಿಸಿ ಭೂಮಿಗೆ ತಂದ ಗಂಗಾನದಿ)ಯ ಮೂಲ ವಿಷ್ಣುವಿನ ಕಾಲ್ಗಳ ಬೆವರಂತೆ; ಅದನ್ನು ಬ್ರಹ್ಮ ತನ್ನ ಕಮಂಡಲುವಿನಲ್ಲಿ ಹಿಡಿದಿಟ್ಟಿದ್ದನಂತೆ! ಮತ್ತೊಂದು ಸ್ವಾರಸ್ಯಕರ ಕಥೆಯಲ್ಲಿ, ಸುಡುತ್ತಿರುವ ಬಾಲವನ್ನು ಸಮುದ್ರದಲ್ಲಿ ಅದ್ದಿ ಆರಿಸುತ್ತಿದ್ದ ವೇಳೆ ಆಂಜನೇಯನ ಬೆವರಹನಿಯಾಂದು ಅಚಾನಕ್ಕಾಗಿ ಸಮುದ್ರಕ್ಕೆ ಬಿದ್ದು ಅದರಿಂದ ಒಂದು ಮೀನು ಗರ್ಭಧರಿಸಿ ಮಕರಧ್ವಜ (ಮಹಿರಾವಣನ ಪಾತಾಳಪುರಿಯ ದ್ವಾರಪಾಲಕ)ನ ಜನನವಾಯಿತು ಎಂಬ ಉಲ್ಲೇಖವಿದೆ!

ಮಹಾಭಾರತ ಯುದ್ಧದ ಕೊನೆಯಲ್ಲಿ ದ್ವೈಪಾಯನ (ವೈಶಂಪಾಯನ?) ಸರೋವರದಲ್ಲಿ ಅಡಗಿ ಕುಳಿತ ದುರ್ಯೋಧನ ಅಲ್ಲಿಗೆ ಬಂದ ಭೀಮನ ಅಟ್ಟಹಾಸದಿಂದ ‘ನೀರೊಳಗಿದ್ದೂ ಬೆಮರ್ದಂ...’ ಆದ ದಯನೀಯ ಸ್ಥಿತಿಯ ಬಗ್ಗೆ ರನ್ನ ಬರೆಯುತ್ತಾನೆ, ಗದಾಯುದ್ಧದಲ್ಲಿ. ಈ ನುಡಿಗಟ್ಟು ಇಂದಿಗೂ ಒಂದು ಪ್ರತಿಮೆಯಾಗಿ ಸಾಹಿತ್ಯಿಕ ಅಲಂಕಾರವಾಗಿ ಜನಜನಿತವಾಗಿದೆ. ಕುಮಾರವ್ಯಾಸನ ಭಾರತದಲ್ಲಿ, ಜಂಭಕೊಚ್ಚಿಕೊಳ್ಳುವುದಷ್ಟೇ ಗೊತ್ತಿರುವ ಉತ್ತರಕುಮಾರ ‘ಬವರವಾದರೆ ಹರನ ವದನಕೆ ಬೆವರ ತಹೆನವಗಡಿಸಿದರೆ ವಾಸವನ ಸದೆವೆನು...’ ಎನ್ನುತ್ತಾನೆ - ಯುದ್ಧಕ್ಕಿಳಿದರೆ ಪರಮೇಶ್ವರನಿಗೂ ಸಹಿತ ಮುಖದಮೇಲೆ ಬೆವರಿಳಿಸಬಲ್ಲೆ ಎಂದು ತನ್ನ ಪೌರುಷವನ್ನು ಬಣ್ಣಿಸುತ್ತಾನೆ.

Weeping or sweating...?ಬೆವರು‘ಪುರಾಣ’ದಿಂದ ಮತ್ತೆ ಬೆವರಿನ ವಿಜ್ಞಾನದತ್ತ ಹೊರಳಿದರೆ, ಆಗಲೇ ಹೇಳಿದಂತೆ ಶರೀರದಲ್ಲಿರುವ ಮಿಲಿಯಗಟ್ಟಲೆ ಸ್ವೇದಗ್ರಂಥಿಗಳು ಅಹರ್ನಿಶಿ ಬೆವರುಸುರಿಸುತ್ತಿರುತ್ತವೆ; ಅಂಗೈಗಳ ಮೇಲೆ, ಅಂಗಾಲುಗಳ ಮೇಲೆ, ಹಣೆ ಕುತ್ತಿಗೆಗಳ ಮೇಲೆ ಈ ಗ್ರಂಥಿಗಳ ಸಾಂದ್ರತೆ ಹೆಚ್ಚಿರುವುದರಿಂದ ಆ ಭಾಗಗಳಲ್ಲಿ ಬೆವರು ಹೆಚ್ಚು ಗಮನೀಯವಾಗುತ್ತದೆ.

ಬಹುತೇಕವಾಗಿ ಬೆವರು ಬರುವುದು ಶರೀರದ ತಾಪಮಾನ ನಿಯಂತ್ರಣದ ಉದ್ದೇಶದಿಂದ. ಎರಡು ಮೈಲುಗಳಷ್ಟು ದೂರ ಜಾಗಿಂಗ್‌ ಮಾಡಿಬಂದಾಗ ಬೆವರು ಸುರಿಯುವುದು ಬಿಸಿಯಾದ ಇಂಜಿನನ್ನು ತಂಪಾಗಿಸಬೇಕಾಗುವುದರಿಂದ. ನೂರಮೂರು, ನೂರನಾಲ್ಕು ಡಿಗ್ರಿಗಳಷ್ಟು ಸುಡುಜ್ವರ ಬಂದ ರೋಗಿ ಮೈಮೇಲೆ ನಾಲ್ಕು ಹೊದಿಕೆಗಳನ್ನು ಪೇರಿಸಿದಾಗ ಬೆವರುವುದೂ ಮೆದುಳಿನಲ್ಲಿರುವ ಹೈಪೊಥಲಮಸ್‌ ಎಂಬ ಥರ್ಮೋಸ್ಟಾಟ್‌ ಕಳಿಸುವ ಆಜ್ಞೆಯನ್ನು ಶಿರಸಾವಹಿಸುವ ಸ್ವೇದಗ್ರಂಥಿಗಳಿಂದ.

ಆದರೆ ಇನ್ನು ಕೆಲವು ಸ್ವೇದಗ್ರಂಥಿಗಳ ಕಾರ್ಯಾಚರಣೆಯಾಗುವುದು ಮಾನಸಿಕ ಪ್ರಚೋದನೆಯಿಂದ ಮಾತ್ರ. ವಿದ್ಯಾರ್ಥಿಗೆ ಪರೀಕ್ಷೆಯ ‘ಜ್ವರ’ದಲ್ಲಿ, ಪ್ರಾಕ್ಟಿಕಲ್‌ ಎಕ್ಸಾಂನಲ್ಲಿ ಯಾವ ಎಕ್ಸ್‌ಪರಿಮೆಂಟ್‌ ಬರಬಹುದು, ವೈವಾವೋಸ್‌ನಲ್ಲಿ ಎಕ್ಸಾಮಿನರ್‌ ಯಾವ್ಯಾವ ಪ್ರಶ್ನೆಗಳನ್ನು ಕೇಳಬಹುದು ಎಂಬ ತಳಮಳದ ಬೆವರು ಸುರಿಸುವುದು ಈ ಗ್ರಂಥಿಗಳು. ಪ್ರೇಮ‘ಜ್ವರ’ದಲ್ಲಿ ಮನಸೆಳೆದ ನಲ್ಲ ಕಿವಿಯಲಿಂಚರ ನುಡಿಯೆ ನಲ್ಲೆಯ ಹಣೆಯ ಮೇಲೆ ಬೆವರಿನುಂಗುರ ಮೂಡಿಸುವವೂ ಅವೇ ಗ್ರಂಥಿಗಳು. ಅದೊಂದು ರೀತಿ ತನ್ಮಯತೆಯ, ತೀವ್ರಾಪೇಕ್ಷೆಯ ಬೆವರು!

ಬೆವರಿನ ಹನಿಯಲ್ಲಿ 99% ನೀರಿನಂಶವಾದರೆ 1%ದಷ್ಟೇ ಲವಣ ಹಾಗೂ ಅಮಿನೊಆಮ್ಲಗಳ ಅಂಶವಿರುವುದು. ಆರೋಗ್ಯವಂತ ಮನುಷ್ಯನ ಬೆವರಿಗೆ ಯಾವುದೇ ‘ವಾಸನೆ’ ಇರುವುದಿಲ್ಲ. ಬೆವರು ಎಂದರೆ ದುರ್ವಾಸನೆ ಎಂಬ ಮಿಥ್ಯಾಕಲ್ಪನೆ ಅಸಂಗತವಾದುದು. ವಾಸನೆ ಬರುವುದು ಕಂಕುಳಲ್ಲಿರುವ ‘ಅಪೊಕ್ರಿನ್‌’ ಗ್ರಂಥಿಗಳಿಂದಲೇ ವಿನಹ ಬೆವರಿನಿಂದಲ್ಲ. ಯಾರೋ ಮಾಡಿದ ತಪ್ಪಿಗೆ ಯಾರಿಗೋ ಶಿಕ್ಷೆ ಎಂಬಂತೆಯೇ ತಥಾಕಥಿತ ಬೆವರಿನ ವಾಸನೆಯ ಸಂಗತಿ ಕೂಡ.

ನಿಜಾಂಶವೆಂದರೆ ಶರೀರದ ತಾಪಮಾನ ನಿಯಂತ್ರಣದ ಹೊರತಾಗಿಯೂ ಬೆವರಿನಿಂದ ನಮಗೆ ಆಗುವುದು ಉಪಕಾರವೇ. ನಮ್ಮ ಅಂಗೈಗಳಿಗೆ, ಪಾದತಳಕ್ಕೆ ಒಂಥರ ‘ಗ್ರಿಪ್‌’ ಬರುವುದು ಅಲ್ಲಿನ ಬೆವರಿನ ಹದವಾದ ತೇವಾಂಶದಿಂದಾಗಿಯೇ. ಚರ್ಮವನ್ನು ಆದಷ್ಟು ಮೃದುವಾಗಿಸಿ ಸ್ಪರ್ಶಜ್ಞಾನವನ್ನು ಸಾಧ್ಯವಾದಷ್ಟು ಹೆಚ್ಚಿಸುವ ಒಳ್ಳೆಯ ಕೆಲಸವಾಗುವುದೂ ಸ್ವತಃ ಬೆವರು ‘ಬೆವರು ಸುರಿಸಿ ದುಡಿಯು’ವುದರಿಂದಲೇ!

ಇವೆಲ್ಲಕ್ಕಿಂತ ಹೆಚ್ಚಾಗಿ ಬೆವರು ಮಾಡುವ ಮಹದುಪಕಾರವೊಂದಿದೆ. ಬೆವರಿನಲ್ಲಿರುವ ನೈಸರ್ಗಿಕ ಪ್ರತಿಜೀವಿಕ (natural antibiotic) ಅಂಶವು ನಮ್ಮ ಚರ್ಮದ ಮೇಲಿರುವ ಸಹಸ್ರಾರು ಸೂಕ್ಷ್ಮಜೀವಿಗಳನ್ನು ನಿಯಂತ್ರಣದಲ್ಲಿಡುತ್ತದೆ. ಶರೀರಕ್ಕೆ ಹೊರಜಗತ್ತಿನ ಸಂಪರ್ಕ ಮೊದಲು ಆಗುವುದೇ ಚರ್ಮದ ಮೂಲಕ, ಅಂದಮೇಲೆ ಅಲ್ಲೊಂದು ಪ್ರತಿಜೀವಿಕ ರಕ್ಷಣಾಕವಚ ಇರುವುದು ಎಷ್ಟು ಒಳ್ಳೆಯ ಉಪಾಯ! ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿರುವ ಇ-ಕೊಲಿ ಬ್ಯಾಕ್ಟೀರಿಯಾದ ಬದ್ಧವೈರಿ (ತನ್ಮೂಲಕ ನಮ್ಮ ಶರೀರಕ್ಕೆ ಬಲು ಉಪಕಾರಿ) ಈ ಪ್ರತಿಜೀವಿಕ.

ಜರ್ಮನಿಯ ಟುಬಿಂಜೆನ್‌ ವಿಶ್ವವಿದ್ಯಾಲಯದ ಸಂಶೋಧನಾ ವಿಜ್ಞಾನಿಗಳು ಕಂಡುಹಿಡಿದು ‘ಡರ್ಮಿಸಿಡಿನ್‌’ ಎಂದು ಹೆಸರಿಸಿದ್ದಾರೆ ಈ ಪ್ರತಿಜೀವಿಕಗಳನ್ನು. ಇವು ಬೆವರಿನಲ್ಲಿ ಮಾತ್ರ ಉತ್ಪಾದನೆಯಾಗುವುದಾಗಿದ್ದು, ಇ-ಕೊಲಿ ಮಾತ್ರವಲ್ಲದೆ ಇನ್ನೂ ಹಲವಾರು ಹಾನಿಕಾರಕ ಬ್ಯಾಕ್ಟೀರಿಯಾದ ನಾಶ ಅಥವಾ ಹತೋಟಿಗೆ ನೆರವಾಗುತ್ತವೆ. ಅದೂ ಹೇಗೆಂದರೆ ‘ಬೆಂಕಿಬಿದ್ದಾಗ ಬಾವಿತೋಡುವ’ ಧಾವಂತದಂತೆ ಅಲ್ಲ ನಿರಂತರವಾಗಿ ಅಹರ್ನಿಶಿ ಅನೂಚಾನವಾಗಿ ಉತ್ಪಾದನೆಯಾಗುತ್ತಲೇ ಇರುವುದರಿಂದ, ಒಂದೊಂದು ಬೆವರಹನಿ ಮುತ್ತಾಯ್ತದೋ... ಬೆವರಹನಿಯ ಗುಟ್ಟು ನಮಗೆ ಗೊತ್ತಾಯ್ತದೋ... ಈವಾರದ ವಿಚಿತ್ರಾನ್ನ ತುತ್ತಾಯ್ತದೋ...!

ಇಷ್ಟೆಲ್ಲ ಬೆವರು ಹರಿಸಿದ ಮೇಲೂ ಒಂದು ‘ಕೋಟ್‌’ಉ: "The more we sweat in peace the less we bleed in war." ಎಷ್ಟೊಂದು ಸುಂದರವಾದ ಮಾತು! ಇದನ್ನು ವಿಜಯಲಕ್ಷ್ಮಿ ಪಂಡಿತ್‌ (ಜವಹರಲಾಲ್‌ ನೆಹರು ಅವರ ಸೋದರಿ) ಹೇಳಿರುವುದು. ಈಗಿನ್ನು ಈವಾರದ ಪ್ರಶ್ನೆ. ‘‘ಬೆವರು ಬಂದಾಗ ಬೆವರೇಜ್‌; ಬಿಸಿಲು ಏರಿದಾಗ ಬಿಸ್ಲೇರಿ’’ - ಎಂದ ವಂಡರ್‌ ಗುಂಡು ಪನ್‌ಡಿತ ಯಾರಿರಬಹುದು?

ಉತ್ತರ ಹುಡುಕಲು ನೀವು ಬೆವರಿಳಿಸಬೇಕಾಗಿಲ್ಲ, ಸುಲಭವಾಗಿಯೇ ಇದೆ. ಬರೆದು ತಿಳಿಸಲು ವಿಳಾಸ - [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X