• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾಹಿತಿ : ಬೇಡಿಕೆ ಮತ್ತು ಪೂರೈಕೆಗಳ ಇತಿಮಿತಿ

By Staff
|

ಮಾಹಿತಿ : ಬೇಡಿಕೆ ಮತ್ತು ಪೂರೈಕೆಗಳ ಇತಿಮಿತಿ
ಎರಡಂಕಿಗಳ ಸಂಖ್ಯೆಗಳನ್ನು ಕೂಡಿ-ಕಳೆಯಲೂ ಕಾಲ್ಕುಲೇಟರ್‌ ಬೇಕು, ಗೂಗಲ್‌ಬ್ರಹ್ಮ ಗೂಗಲ್‌ವಿಷ್ಣು ಗೂಗಲ್‌ದೇವೊಮಹೇಶ್ವರ ಗೂಗಲ್‌ಸಾಕ್ಷಾತ್‌ ಪರಬ್ರಹ್ಮ ಎಂದು ಗೂಗಲ್‌ಗೆ ನಮಿಸಿಯೇ ಎಲ್ಲವನ್ನೂ ತಿಳಿದುಕೊಳ್ಳಬೇಕು... ಕ್ರಮೇಣ ಮನುಷ್ಯನ ಮೆದುಳೂ ಹೆಚ್ಚುಕಡಿಮೆ ಒಂದು ಯಂತ್ರವೇ ಆಗಿಬಿಡುತ್ತದೆ! ವಿಚಿತ್ರಾನ್ನ-204ರ ಸಂಚಿಕೆಯಲ್ಲೊಂದು ಕಿವಿಮಾತು!

*ಶ್ರೀವತ್ಸ ಜೋಶಿ

‘‘ಅಲ್ಲಿ ಸ್ವಲ್ಪ ಕಾಫಿ‚ ಚೆಲ್ಲಿದೆ, ಕ್ಲೀನ್‌ ಮಾಡ್ಲಿಕ್ಕೆ ಯಾರಿಗೆ ಹೇಳಬೇಕು ಅಂತ ಒಂಚೂರ್‌ ಹೇಳ್ತೀರಾ?’’

ಈ ಪ್ರಶ್ನೆ ನನಗೆದುರಾದದ್ದು ಮೊನ್ನೆ ವಿಶ್ವ ಕನ್ನಡ ಸಮ್ಮೇಳನದಲ್ಲಿ ಒಂದು ದಿನವಿಡೀ ನಾನು ‘ ಸಮ್ಮೇಳನ ಮಾಹಿತಿ ಕೇಂದ್ರ’ದಲ್ಲಿ ಸ್ವಯಂಸೇವಕನಾಗಿ ಕಾರ್ಯನಿರ್ವಹಿಸುತ್ತಿದ್ದಾಗ. ಸಮ್ಮೇಳನದ ಮುಖ್ಯ ಸಭಾಂಗಣದ ಹೊರಗೆ ಲಾಬಿಯಲ್ಲಿ ಒಂದು makeshift Information Centerನಲ್ಲಿ ಸಮ್ಮೇಳನಾರ್ಥಿಗಳಿಗೆ ಮಾಹಿತಿಪೂರೈಕೆ, ಕಾರ್ಯಕ್ರಮ ಮತ್ತು ವ್ಯವಸ್ಥೆಗಳ ಬಗ್ಗೆ ಪ್ರಕಟಣೆಗಳು, ‘ಇಂಥವರು ದಯವಿಟ್ಟು ತಕ್ಷಣವೇ ಗ್ರೀನ್‌ರೂಮ್‌ಗೆ ಬರಬೇಕು’ ಥರದ ಸೂಚನೆಗಳು... ಇತ್ಯಾದಿತ್ಯಾದಿಯನ್ನು ನಿಭಾಯಿಸುತ್ತಿದ್ದಾಗ.

ಒಂದೊಮ್ಮೆ ಆ ಪ್ರಶ್ನೆ ನನ್ನನ್ನು ತಬ್ಬಿಬ್ಬುಗೊಳಿಸಿತು. ಫ‚ೈನಲ್‌ ಎಕ್ಸಾಂನಲ್ಲಿ ಔಟ್‌-ಆಫ‚್‌-ಸಿಲೆಬಸ್‌ ಪ್ರಶ್ನೆ ಎದುರಾದಾಗ ವಿದ್ಯಾರ್ಥಿಗೆ ತಬ್ಬಿಬ್ಬಾಗುವಂತೆಯೇ. ಅಷ್ಟು ಬೃಹತ್‌ ಸಮ್ಮೇಳನದ ನಿರ್ವಹಣೆಗಾಗಿ ಯಾವ್ಯಾವ ಸಮಿತಿಗಳನ್ನು ಮಾಡಲಾಗಿದೆ, ಅವುಗಳಲ್ಲಿ ಯಾರ್ಯಾರು ಇದ್ದಾರೆ, ಪ್ರತಿಯಾಂದು ಸಮಿತಿಯ rules and responsibilities ಏನು ಎಂಬುದೆಲ್ಲ ನನಗೆ ಬಹುಮಟ್ಟಿಗೆ ಗೊತ್ತಿತ್ತು ನಿಜ. ಆದರೆ ‘ಕಾಫಿ‚ ಚೆಲ್ಲಿದ್ದನ್ನು ಒರೆಸುವ ಸಮಿತಿ’ ಎಂದೇನೂ ನಾವು ಮಾಡಿಕೊಂಡಿರಲಿಲ್ಲವಾದ್ದರಿಂದ ಮತ್ತು ಚೆಲ್ಲಿದ ಕಾಫಿ‚ಯನ್ನು ಒರೆಸುವುದು ಯಾವ ಸಮಿತಿಯ ಜವಾಬ್ದಾರಿಯೆಂಬುದು ನನಗೆ ಆಕ್ಷಣಕ್ಕೆ ಹೊಳೆಯದಿದ್ದುದರಿಂದ ನಾನು ನಿರುತ್ತರನಾಗಬೇಕಾಯಿತು. ನಾನೇ ಹೋಗಿ ಒರೆಸಿಬರಬಹುದಿತ್ತು, ಆದರೂ ಅಂಥ ಪ್ರಶ್ನೆಯನ್ನೂ ಮಾಹಿತಿಕೇಂದ್ರಕ್ಕೆ ತರುವವರಿಗೆ ಸ್ಪೆಷಲ್‌ ಟ್ರೀಟ್‌ಮೆಂಟ್‌ ಇರಲಿ ಎನಿಸಿ ‘‘ತಗೊಳ್ಳಿ ಈ ಟಿಷ್ಯೂಪೇಪರ್ಸ್‌, ನೀವೇ ಸ್ವಲ್ಪ ಒರೆಸಿಬಿಡ್ತೀರಾ ದಯವಿಟ್ಟು?’’ ಎಂದು ವಿನಯವಾಗಿಯೇ ಹೇಳಿದೆ; ಆ ಸನ್ನಿವೇಶವನ್ನು ನಿಭಾಯಿಸಿದೆ.

ಇನ್ನೊಂದು ಪ್ರಶ್ನೆ ಬಂದದ್ದು ಈರೀತಿ: ‘‘ಹಸೀನಾ ಪಿಕ್ಚರ್‌ ತೋರಿಸ್ತಾರಂತಲ್ಲ, ಅದು ಎಷ್ಟು ಡ್ಯೂರೇಶನ್‌ ಗೊತ್ತಾ?’’

ಈ ಪ್ರಶ್ನೆಯೂ ಹಾಗೆಯೇ. ಹಸೀನಾ ಚಲನಚಿತ್ರಪ್ರದರ್ಶನ ಯಾವ ಹಾಲ್‌ನಲ್ಲಿ ಮತ್ತು ಎಷ್ಟು ಗಂಟೆಗೆ ಅಂತ ನನ್ನ ಬಳಿ ಮಾಹಿತಿ ಇತ್ತೇ ವಿನಾ ಆ ಫಿ‚ಲಂ ಎಷ್ಟು ಅವಧಿ-ಯದು ಎಂದು ಕರಾರುವಾಕ್ಕಾಗಿ ನನಗೆ ಗೊತ್ತಿರಲಿಲ್ಲ. ಅಂದರೆ, ಹಸೀನಾ ಚಲನಚಿತ್ರಪ್ರದರ್ಶನದ ಬಗ್ಗೆ ಎಷ್ಟು ಮಾಹಿತಿಯನ್ನು ಪೂರೈಸಬಲ್ಲೆ ಎಂದು ನಾನಂದುಕೊಂಡಿದ್ದೆನೋ ಅದಕ್ಕಿಂತ ವ್ಯತಿರಿಕ್ತವಾದ ಮಾಹಿತಿಗಾಗಿ ಬೇಡಿಕೆ ಇತ್ತು!

ಮತ್ತೊಬ್ಬರು ಬಂದರು, ಇನ್ನೂ ಒಂದು ಹೊಸ ರೀತಿಯ ಪ್ರಶ್ನೆಯಾಂದಿಗೆ. ‘ಮೈನ್‌ಸ್ಟೇಜಲ್ಲಿ ಈಗ ಏನು ಪ್ರೊಗ್ರಾಂ ನಡೀತಿದೆ?’ ಅಂತ ಕೇಳಿದ್ರು. ಅವರ ಕೈಯಲ್ಲೇ ಇದ್ದ ಕಾರ್ಯಕ್ರಮವೇಳಾಪಟ್ಟಿಯಲ್ಲಿ ತೋರಿಸಿ ‘ಈಗ ಪ್ರವೀಣ್‌ ಗೋಡ್‌ಖಿಂಡಿ ಅವರ ಕೊಳಲುಕಚೇರಿ ನಡೀತಾ ಇದೆ...’ ಅಂದೆ. ‘ಹಾಗಿದ್ರೆ ನೆಕ್ಸ್ಟ್‌ ಪ್ರೊಗ್ರಾಂ ಮೃದಂಗವಾದನವಾ?’ ಅಂತ ಅವರ ಮುಗ್ಧ ಪ್ರಶ್ನೆ. ವೇಳಾಪಟ್ಟಿಯಲ್ಲಿ ‘ಅಪರಾಹ್ನ 2:00 ಕೊಳಲುವಾದನ - ಪ್ರವೀಣ್‌ ಗೋಡ್‌ಖಿಂಡಿ. ಮೃದಂಗ - ಆನೂರ್‌ ಶಿವು, ಖಂಜಿರ- ಕಾಶಿನಾಥ್‌’’ ಎಂಬ ಎಂಟ್ರಿ ಇದ್ದುದರಿಂದ ಆ ಪ್ರಶ್ನೆ. ಕೊಳಲುಕಚೇರಿಯಲ್ಲೇ ಪಕ್ಕವಾದ್ಯವಾಗಿ ಮೃದಂಗ ಮತ್ತು ಖಂಜಿರ ಎಂಬುದನ್ನು ಅವರು ಅರ್ಥೈಸದಿದ್ದುದರಿಂದ ಆ ಪ್ರಶ್ನೆ!

ಸಮ್ಮೇಳನದಲ್ಲಿ ರಿಜಿಸ್ಟ್ರೇಷನ್‌ ಡೆಸ್ಕ್‌ನಲ್ಲಿ ಕೆಲಸಮಾಡಿದವರದೂ ಇದೇ ಅಭಿಪ್ರಾಯ. ಮಹಾಜನತೆ ಎಂತೆಂತಹ ಪ್ರಶ್ನೆಗಳನ್ನು, ಸಂದೇಹಗಳನ್ನು, ಸ್ಪಷ್ಟೀಕರಣಗಳನ್ನು ಕೇಳುತ್ತದೆ, ಮಾಹಿತಿಯನ್ನು ಕೋರುತ್ತದೆ ಎಂಬುದು ಊಹೆಗೆ ಮೀರಿದ್ದಾಗಿರುತ್ತದೆ.

* * *

Information : Limitations of Supply and Demand!ಮೇಲಿನ ಪ್ರಸಂಗಗಳನ್ನು ನಾನು ಈಗಷ್ಟೇ ಮುಗಿದ ವಿಶ್ವ ಕನ್ನಡ ಸಮ್ಮೇಳನದಿಂದ ಇನ್ನೂ ತಾಜಾ ಆಗಿರುವ real life examples ಎಂದು ಉಲ್ಲೇಖಿಸಿದ್ದು. ಅವು ತೀರಾ ನಗಣ್ಯವೆನ್ನಬಹುದಾದ ಪ್ರಸಂಗಗಳು. ನಾಲ್ಕೈದು ಸಾವಿರ ಜನ ಸೇರುವ, ಮೂರುದಿನಗಳಲ್ಲಿ ನೂರೆಂಟು ಕಾರ್ಯಕ್ರಮಗಳಿರುವ ಸಮ್ಮೇಳನಗಳಲ್ಲಿ ಸರ್ವೇಸಾಮಾನ್ಯವಾಗಿ ನಡೆಯುವಂಥವು. ನಾನಿದನ್ನು ಉಲ್ಲೇಖಿಸಿದ್ದು ಸಮ್ಮೇಳನಸಮಾಚಾರಕ್ಕಲ್ಲ. ಬದಲಿಗೆ, ಮಾಹಿತಿ ಎಂಬ ಸರಕನ್ನು ಎಷ್ಟೇ ಪ್ರಮಾಣದಲ್ಲಿ ಪೂರೈಸಿದರೂ ಆ ಪೂರೈಕೆಗಿಂತ ಬಲುಹೆಚ್ಚು ಬೇಡಿಕೆ ಇರುತ್ತದೆ; ಮಾಹಿತಿಯ ವಿಚಾರದಲ್ಲಿ ಪೂರೈಕೆ-ಬೇಡಿಕೆಗಳ ಕಂದಕವು (Supply and Demand gap) ಯಾವಾಗಲೂ ದೊಡ್ಡದಾಗಿಯೇ ಇರುತ್ತದೆ - ಎನ್ನುವ ಅಂಶವನ್ನು ಪ್ರತಿಪಾದಿಸಲು.

ನಮ್ಮ ನಿತ್ಯಜೀವನದಲ್ಲಿ ಇಂತಹ ಅನುಭವಗಳು ಎಷ್ಟೋ ಆಗುತ್ತಿರುತ್ತವೆ. ನಾವು ಮಾಹಿತಿಯನ್ನು ಒದಗಿಸುವವರಾಗಿದ್ದಾಗಲೂ, ಪಡೆಯುವವರಾಗಿದ್ದಾಗಲೂ. ಒಂದು ಯೋಜನೆಯ ಬಗ್ಗೆಯಾಗಲೀ ಒಂದು ಉತ್ಪನ್ನದ ಬಗ್ಗೆಯಾಗಲೀ, ಒಂದು ಉಪಕರಣ ಮತ್ತು ಅದನ್ನು ಉಪಯೋಗಿಸುವುದರ ಬಗ್ಗೆಯಾಗಲೀ FAQ(Frequently asked questions) ಎಂಬ ಪ್ರಶ್ನೋತ್ತರಪಟ್ಟಿ ಇರುತ್ತದೆ ತಾನೆ? ಬೇಕಿದ್ರೆ ನೋಡಿ ಎಷ್ಟೇ ದೊಡ್ಡ ಪಟ್ಟಿಯಿದ್ದರೂ ಅದರಲ್ಲಿಲ್ಲದ ಪ್ರಶ್ನೆಯಾಂದು ಉದ್ಭವಿಸಿಯೇ ತೀರುತ್ತದೆ. ಮಾಹಿತಿ ಎಷ್ಟೇ ಇದ್ದರೂ ಅದಕ್ಕಿಂತ ಹೆಚ್ಚಿನದು ನಮಗೆ ಬೇಕಿರುತ್ತದೆ.

ಇದಕ್ಕೆ ಕಾರಣವೇನಿರಬಹುದು?

ಮಾಹಿತಿಯ ಹಸಿವು ಮತ್ತು ಮಾಹಿತಿಯ ಅವಲಂಬನೆ ಇಂದು ಸಿಕ್ಕಾಪಟ್ಟೆ ಆಗಿದೆ. ನಮಗೆಲ್ಲ ಗೊತ್ತಿರುವಂತೆ ಆಧುನಿಕ ಯುಗದಲ್ಲಿ (ಅದರಲ್ಲೂ ಅಮೆರಿಕದಂಥ ‘ಮುಂದುವರೆದ’ ದೇಶಗಳಲ್ಲಿ) ಜನಜೀವನವು ಬಹಳವಾಗಿ Information/Instruction driven ಆಗಿರುವುದು. ಅಮೆರಿಕದಲ್ಲೆಲ್ಲ ‘ಚಮಚೆಯಲ್ಲಿ ಮಾಹಿತಿಯನ್ನು ಉಣ್ಣಿಸುವುದು’ (spoonfeeding of information) ಅದೆಷ್ಟು ನಡೆಯುತ್ತದೆಯೆಂದರೆ ಕ್ರಮೇಣ ವ್ಯಕ್ತಿಗೆ ಸ್ವಂತ ಆಲೋಚನೆ, ತಾರ್ಕಿಕ ವಿಶ್ಲೇಷಣೆ, ಚಿಂತಿಸಿ-ಮಂಥಿಸಿ ತೆಗೆದುಕೊಂಡ ನಿರ್ಧಾರದ ಅನುಸರಣೆಗಳೆಲ್ಲ ಕಮರಿಹೋಗುತ್ತವೆ. Information addiction ಇಲ್ಲಿ ಎಲ್ಲರಿಗೂ ಒಂದು ವ್ಯಾ-ಧಿಯೇ ಆಗಿ ಬಿಡುತ್ತದೆ.

ಯಾಂತ್ರೀಕೃತ ಬದುಕು, ಎರಡಂಕಿಗಳ ಸಂಖ್ಯೆಗಳನ್ನು ಕೂಡಿ-ಕಳೆಯಲೂ ಕಾಲ್ಕುಲೇಟರ್‌ ಬೇಕು, ಗೂಗಲ್‌ಬ್ರಹ್ಮ ಗೂಗಲ್‌ವಿಷ್ಣು ಗೂಗಲ್‌ದೇವೊಮಹೇಶ್ವರ ಗೂಗಲ್‌ಸಾಕ್ಷಾತ್‌ ಪರಬ್ರಹ್ಮ ಎಂದು ಗೂಗಲ್‌ಗೆ ನಮಿಸಿಯೇ ಎಲ್ಲವನ್ನೂ ತಿಳಿದುಕೊಳ್ಳಬೇಕು... ಕ್ರಮೇಣ ಮನುಷ್ಯನ ಮೆದುಳೂ ಹೆಚ್ಚುಕಡಿಮೆ ಒಂದು ಯಂತ್ರವೇ ಆಗಿಬಿಡುತ್ತದೆ.

ಒಂದು ಚಿಕ್ಕ ಉದಾಹರಣೆ. ಮೆಕ್‌ಡೊನಾಲ್ಡ್ಸ್‌ ಅಥವಾ ಬರ್ಗರ್‌ಕಿಂಗ್‌ ಅಥವಾ ಇನ್ನಾವುದೇ ಫ‚ಾಸ್ಟ್‌ಫ‚ುಡ್‌ ರೆಸ್ಟೋರೆಂಟಿಗೆ ಹೋದಿರೆಂದಿಟ್ಟುಕೊಳ್ಳಿ. ಅಲ್ಲಿಯ ಸರ್ವಿಸುವವರಿಗೆಲ್ಲ ಇಂಗ್ಲಿಷ್‌ ಗೊತ್ತಿದ್ದರೂ I want two burgers, Could you make it a parcel? ಅಂತ ಹೇಳಿದರೆ ಅರ್ಥ ಆಗೋದಿಲ್ಲ. ಬರ್ಗರನ್ನು ರೆಸ್ಟೋರೆಂಟಲ್ಲೇ ತಿನ್ನೋದಾದ್ರೆ ನೀವು For here ಎನ್ನಬೇಕು, ಕಟ್ಟಿಕೊಂಡುಹೋಗಲಿಕ್ಕಾದರೆ To go ಎನ್ನಬೇಕು. ಈ For here ಮತ್ತು To-go ಗಳಾಚೆಗೆ ಅರ್ಥೈಸಿ ಆಲೋಚಿಸಿ ಆಚರಿಸುವಷ್ಟು ಸಮಯ-ಸಂಯಮ ಇಲ್ಲ.

ಈಪರಿಯಲ್ಲಿ Info-driven ಸಮಾಜದಲ್ಲಿ ವಾಸಿಸುವವರೆಲ್ಲರೂ ಸಹಜವಾಗಿಯೇ ಮಾಹಿತಿ ಮಾರ್ಗದರ್ಶನಗಳಿಗಾಗಿ ಪರಿತಪಿಸುತ್ತಿರುತ್ತಾರೆ, ಮಾಹಿತಿಯ ಪೂರ್ಣಾವಲಂಬಿಗಳಾಗಿ ಬದುಕುತ್ತಿರುತ್ತಾರೆ. ಎಷ್ಟೇ ಮಾಹಿತಿ ಪೂರೈಸಿದರೂ ಅದಕ್ಕೆ ಎರಡುಪಟ್ಟು ಬೇಡಿಕೆಯನ್ನು ಉಂಟುಮಾಡುತ್ತಾರೆ.

- srivathsajoshi@yahoo.com

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more