ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಲೇ ಭಲೇ ಜೇಡರ ಬಲೆ!

By Staff
|
Google Oneindia Kannada News

ಭಲೇ ಭಲೇ ಜೇಡರ ಬಲೆ!
ತಂತ್ರಜ್ಞಾನದ ನೆರವಿಲ್ಲದೆ ಬಲೆ ಹೆಣೆಯುವ ಕಲೆ, ಇವನಿಗೆ ಗೊತ್ತು! ಈ ಜಾಲನೇಕಾರನ ವಿಶೇಷತೆಗಳು, ಇವನಿಗೆ ಸಂಬಂಧಿಸಿದ ಕತೆಗಳು ಹತ್ತಾರು. ಇವನ ನಯ-ನಾಜೂಕು ವಿವರಿಸುವ ವಿಚಿತ್ರಾನ್ನ-208ರ ತುಂಬ ಈ ವಾರ ಜೇಡರ ಬಲೆ!

Srivathsa Joshi ಶ್ರೀವತ್ಸ ಜೋಶಿ

‘ಜೇಡರ ಬಲೆ’ - ಒಂದು ವಸ್ತುವಿನ ಅಥವಾ ಒಂದು ವಾತಾವರಣದ ಸ್ಥಾವರ (ನಿಶ್ಚಲ) ಸ್ಥಿತಿಯನ್ನು ವರ್ಣಿಸಲು/ಚಿತ್ರಿಸಲು ಬಳಸಬಹುದಾದ ಅಸದೃಶ ಪ್ರತಿಮೆ. ಪಾಳುಬಿದ್ದ ಕಟ್ಟಡ, ಜನವಸತಿಯಿಲ್ಲದೆ ಬಾವಲಿಗಳು ಮಾತ್ರ ಓಡಾಡುವ ‘ಭೂತಬಂಗ್ಲೆ’, ಕಸಬರಿಕೆ ಸುಳಿಯದೆ ಜಮಾನಾ ಕಳೆದಿರುವ ಕೊಠಡಿ - ಹೀಗೆ ಒಂದುರೀತಿಯ ನಿಶ್ಚೇಷ್ಟತೆ ಅಥವಾ ಜಡತ್ವವನ್ನು ಚಿತ್ರಗಳಲ್ಲಿ, ಅಕ್ಷರಗಳಲ್ಲಿ ಸಮರ್ಥವಾಗಿ ಪ್ರತಿಬಿಂಬಿಸಬಲ್ಲದ್ದೆಂದರೆ ಜೇಡರ ಬಲೆ.

ಅದೆಲ್ಲ ಬಿಡಿ, ಭಯಾನಕ ಕಲ್ಪನೆಗಳಲ್ಲಷ್ಟೇ ಅಲ್ಲ, ವ್ಯಂಗ್ಯಚಿತ್ರಗಳಲ್ಲಿ ಟಿವಿ ಮುಂದೆ ಧಾರಾವಾಹಿ ನೋಡುತ್ತ ಕುಳಿತ ಗೃಹಿಣಿಯ ಸೀರೆಸೆರಗಿನ ಕೊನೆಯಿಂದ ಗೋಡೆಯವರೆಗೆ ಒಂದು ಜೇಡರ ಬಲೆ ನೇಯ್ದರೆ ಸಾಕು, ಆ ಗೃಹಿಣಿಯ ಟಿವಿ ಎಡಿಕ್ಷನ್‌ ಗಾಢತೆಯನ್ನು ಮತ್ತು ಅವಳ ಟಿವಿ ವೀಕ್ಷಣೆಯ ವೇಳೆ ಸುತ್ತಲ ಪ್ರಪಂಚ ಸ್ತಬ್ಧವಾಗಿ ಹೋಗುವುದನ್ನು ಏಕಕಾಲದಲ್ಲಿ ತುಂಬ ಸುಲಭವಾಗಿ ಚಿತ್ರಿಸಬಹುದು. ಜೇಡರ ಬಲೆಗಿರುವ ಸಾಂಕೇತಿಕ ಶಕ್ತಿ ಅದು.

ಆದರೆ ಈ ಲೇಖನದಲ್ಲಿ ವಿವರಿಸಹೊರಟಿರುವುದು ಜೇಡರ ಬಲೆ ಪ್ರತಿಬಿಂಬಿಸುವ ‘ ಸ್ಥಾವರ ’ ಸ್ಥಿತಿಯನ್ನಲ್ಲ. ಬದಲಿಗೆ, ಜೇಡರ ಬಲೆಯಾಳಗಿನ ಅಸಾಮಾನ್ಯ ಏರೊಡೈನಾಮಿಕ್ಸ್‌ನ ಅದ್ಭುತವಾದ ‘ಜಂಗಮ’ (ಚಲನಶೀಲ) ಗುಣವನ್ನು.

ಅದಕ್ಕೆ ಮೊದಲು, ಜೇಡನಿಗೆ ಸಂಬಂ-ಧಿಸಿದಂತೆ ಒಂದು ಸ್ವಾರಸ್ಯಕರ ಸಂಗತಿಯನ್ನು ತಿಳಿದುಕೊಳ್ಳೋಣ.

ಜೀವಶಾಸ್ತ್ರೀಯವಾಗಿ ಜೇಡ Arachnid ಕುಟುಂಬದ ಸದಸ್ಯ. ಈ ಜೀವಪ್ರವರ್ಗಕ್ಕೆ Arachnid ಎಂಬ ಹೆಸರು ಹೇಗೆ ಬಂತೆನ್ನುವುದಕ್ಕೆ ಒಂದು ಗ್ರೀಕ್‌ ಪುರಾಣ ಇದೆ. Arachne ಎನ್ನುವವಳೊಬ್ಬಳಿದ್ದಂತೆ, ನೇಯ್ಗೆವೃತ್ತಿಯವಳು. ಅವಳು ಬಟ್ಟೆನೇಯುವ ಕಲೆಯಲ್ಲಿ ನಿಷ್ಣಾತಳಾದರೂ ವ್ಯವಹಾರಜ್ಞಾನದಲ್ಲಿ ಅಥವಾ ಬೌದ್ಧಿಕಮಟ್ಟದಲ್ಲಿ ಅಂತಹ ಪರಿಪೂರ್ಣಳೇನೂ ಆಗಿರಲಿಲ್ಲ; ಸ್ವಲ್ಪ arrogant ಸ್ವಭಾವ. ಅವಳೊಮ್ಮೆ ಗ್ರೀಕ್‌ ದೇವತೆ ಅಥೆನಾಳನ್ನು (ಕಸೂತಿ ಮತ್ತಿತರ ಕರಕೌಶಲ್ಯಗಳ ಅ-ಧಿದೇವತೆಯೆಂದು ಪ್ರತೀತಿ) ಕೆಣಕಿದಳಂತೆ. ಅವರಿಬ್ಬರಲ್ಲಿ ವಾಗ್ವಾದ ಶುರುವಾಗಿ ಕೊನೆಗೆ ಯಾರು ಚೆನ್ನಾಗಿ ನೇಯಬಲ್ಲರು ಎಂದು ಸ್ಪರ್ಧೆ ಏರ್ಪಟ್ಟಿತು.

ಎರಡು ಸ್ತ್ರೀಶಕ್ತಿಗಳ ಬಲಾಬಲ ಪ್ರದರ್ಶನದಂತಿದ್ದ ಸ್ಪರ್ಧೆ ಶುರುವಾಯಿತು. ಅಥೆನಾ ಒಂದು ನೇಯ್ಗೆಯನ್ನು ಮಾಡಿದಳು. ಅದು, ದರ್ಪದಿಂದ ಮೆರೆಯುವ ಮಾನವರನ್ನು ಶಕ್ತಿಶಾಲಿ ದೇವತೆಗಳು ಶಿಕ್ಷಿಸುತ್ತಿರುವ ಚಿತ್ರಣ. ಅರೆಕ್ನಾ ಸಹ ತನ್ನೆಲ್ಲ ಕೌಶಲ್ಯವನ್ನುಪಯೋಗಿಸಿಕೊಂಡು ಒಂದು ಸುಂದರ ಚಿತ್ರಣವನ್ನು ಹೆಣೆದಳು. ಅದರಲ್ಲಿ ಗ್ರೀಕ್‌ ದೇವತೆಗಳೊಳಗಿನ ಸ್ವೇಚ್ಛಾಚಾರ ಪ್ರವೃತ್ತಿಯನ್ನೆಲ್ಲ ಅದ್ಭುತವಾಗಿ ಚಿತ್ರಿಸಿದಳು.

ಸಹಜವಾಗಿಯೇ ಅರೆಕ್ನಾಳ ನೇಯ್ಗೆಯೇ ಶ್ರೇಷ್ಠಮಟ್ಟದ್ದಾಗಿತ್ತು. ಆದರೆ ಅಥೆನಾ ಅದನ್ನು ಸಹಿಸಿಕೊಳ್ಳಲಿಲ್ಲ; ಕುಪಿತಳಾದ ಅವಳು ಅರೆಕ್ನಾ ರಚಿಸಿದ್ದ ಕೃತಿಯನ್ನು ಧ್ವಂಸಗೊಳಿಸಿದಳು. ಇದರಿಂದ ದುಃಖತಪ್ತಳಾದ ಅರೆಕ್ನಾ ಅವಮಾನಗೊಂಡು ನೇಣುತೆಗೆದುಕೊಳ್ಳಲು ಹೊರಟಿದ್ದಳು, ಆದರೆ ಅಥೆನಾ ಆಕ್ಷಣವೇ ಆಕೆಯನ್ನೊಂದು ಜೇಡನನ್ನಾಗಿ ಮಾಡಿದಳು!

ಹಾಗೆ ಹುಟ್ಟಿಕೊಂಡ Arachnid ಜೇಡ ಮತ್ತದರ ವಂಶವು ಇವತ್ತಿನ ದಿನಕ್ಕೂ ಚಿತ್ರವಿಚಿತ್ರವಿನ್ಯಾಸದ ಬಲೆನೇಯುತ್ತಿದ್ದು ಒಂದಲ್ಲ ಒಂದು ದಿನ ಗ್ರೀಕ್‌ದೇವತೆ ಅಥೆನಾ ಸೋಲೊಪ್ಪುವಂತೆ ಮಾಡುತ್ತೇವೆಂಬ ಶಪಥ ತೊಟ್ಟಂತಿದೆ!

ಜೇಡರಬಲೆಯಾಳಗಿನ ಜಾದೂ

‘ಬಾ ನೊಣವೆ ಬಾ ನೊಣವೆ ಬಾ ನನ್ನ ಬಲೆಗೆ...’ ಎಂದು ಹೊಂಚುಹಾಕುವ ಜೇಡ ಯಾಕೆ ತನ್ನ ಬಲೆಯಲ್ಲಿ ತಾನೇ ಸಿಕ್ಕಿಹಾಕಿಕೊಳ್ಳುವುದಿಲ್ಲ? ಒಂದು ನೊಣವಾಗಲೀ ಅಥವಾ ಕೀಟವಾಗಲೀ ಬಂದು ಬಲೆಯಾಳಗೆ ಬಿದ್ದಾಗ ಅದರ ಹಾರಾಟದ ರಭಸಕ್ಕೆ ಬಲೆಯೇಕೆ ತುಂಡಾಗುವುದಿಲ್ಲ? ಬಲೆಗೆ ‘ಮಿಕ’ ಬಿದ್ದದ್ದು ಜೇಡಕ್ಕೆ ಕೂಡಲೇ ಗೊತ್ತಾಗುವುದಾದರೂ ಹೇಗೆ? - ಹೀಗೆ ಕುತೂಹಲದ ಪ್ರಶ್ನೆಗಳನ್ನು ಜೇಡರಬಲೆಯ ಬಗ್ಗೆಯೇ ಹೆಣೆಯುತ್ತ ಹೋಗಬಹುದು!

ಅಂತಹ ಕುತೂಹಲಗಳಿರುವವರು ಕೆಲವರಾದರೂ ಇರುತ್ತಾರಲ್ಲ? ಮತ್ತು ಅಂತಹವರನ್ನು ವಿಜ್ಞಾನಿಗಳು ಎನ್ನುತ್ತಾರಲ್ಲ? ಹೌದು, ಆಕ್ಸ್‌ಫ‚ರ್ಡ್‌ ವಿಶ್ವವಿದ್ಯಾಲಯದ ಲೊರೈನ್‌ ಲಿನ್‌, ಡೊನಾಲ್ಡ್‌ ಎಡ್ಮಂಡ್ಸ್‌ ಮತ್ತು ಫ್ರಿಜ‚್‌ ವೊಲ್ರಾತ್‌ - ಇವರು ಆ ಸಾಲಿಗೆ ಸೇರಿದ ಕುತೂಹಲಿಗಳು; ಜೇಡರ ಬಲೆಯಾಳಕ್ಕೆ ಹೊಕ್ಕು ಅದರ ರಹಸ್ಯ ತಿಳಿಯಹೊರಟ ವಿಜ್ಞಾನಿಗಳು. ಹೈಸ್ಪೀಡ್‌ ವಿಡಿಯಾಕೆಮರಾಗಳನ್ನು ಮತ್ತು ಕಂಪ್ಯೂಟರ್‌ ಪ್ರೊಗ್ರಾಮ್‌ಗಳನ್ನು ಬಳಸಿ ಜೇಡರಬಲೆಯ ಜಾದೂವನ್ನು ಎಳೆಎಳೆಯಾಗಿ ಬಿಡಿಸಿದ ಮೇಧಾವಿಗಳು.

ಜೇಡರಬಲೆಯ ವಿನ್ಯಾಸದಲ್ಲಿ ಎರಡು ಮುಖ್ಯ ವಿಭಾಗಗಳಿರುತ್ತವೆ. ಜೇಡ ತನ್ನ ದೇಹದಿಂದ ಸ್ರವಿಸುವ ಲೋಳೆಯಂಥ ವಸ್ತುವಿನಿಂದಲೇ ಎರಡೂ ವಿಭಾಗಗಳ ನಿರ್ಮಾಣವಾಗಿರುತ್ತದೆ.

ಒಂದನೆಯದಾಗಿ, ಬಲೆಯ ಕೇಂದ್ರಬಿಂದುವಿನಿಂದ ಪರಿ-ಧಿಯವರೆಗೆ ಸೈಕಲ್‌ ಚಕ್ರದ ಕಡ್ಡಿಗಳಂತೆ ಇರುವ radial ಎಳೆಗಳು. ಇವು ಸಾಕಷ್ಟು ಗಡುಸಾಗಿದ್ದು ಬಲೆಗೆ ‘ಬಿಗಿ’ತನ ಬರುವಲ್ಲಿ ನೆರವಾಗುತ್ತವೆ. ಇವಕ್ಕೆ ಹೆಚ್ಚೆಂದರೆ ಸುಮಾರು 20%ದಷ್ಟು ಮಾತ್ರ ಹಿಗ್ಗುವ ಶಕ್ತಿ ಇರುತ್ತದೆ, ಅದಕ್ಕಿಂತ ಹೆಚ್ಚಿನ ಬಲಪ್ರಯೋಗವಾದರೆ ಮುರಿದುಹೋಗುತ್ತವೆ. ಈ ಎಳೆಗಳೇ ಬಲೆಯಾಡೆಯ ಜೇಡನ ‘ರಾಜಮಾರ್ಗಗಳು’ ಕೂಡ. ತನ್ನ ಬಲೆಯಾಳಗೆ-ಹೊರಗೆ ಜೇಡ ಸಂಚರಿಸುವುದು ಈ ಎಳೆಗಳ ಮೇಲಿನಿಂದಲೇ. ಹಾಗಾಗಿಯೇ ಜೇಡನ ಕಾಲಿಗೆ ಅಂಟಿಕೊಳ್ಳದ ಗುಣವಿರುವ ಲೋಳೆಯಿಂದ ಇವುಗಳ ನಿರ್ಮಾಣ. ಬಲೆಯಾಳಗೆ ಬೇಟೆ ಬಂದು ಬಿದ್ದಾಗ ಕೇಂದ್ರಸ್ಥಾನದಲ್ಲಿರುವ ಜೇಡಕ್ಕೆ ಸಿಗ್ನಲ್‌ ಟ್ರಾನ್ಸ್‌ಮಿಷನ್‌ ಆಗುವುದೂ ಈ ಎಳೆಗಳ ಮೂಲಕವೇ. ಅಂತೂ ಈ ರೇಡಿಯಲ್‌ ಎಳೆಗಳನ್ನು ಜೇಡರ ಬಲೆಯ ಬೆನ್ನೆಲುಬು ಎನ್ನಬಹುದು.

ಎರಡನೆಯದಾಗಿ, ಬಲೆಗೆ ‘ಬಲೆ’ತನವನ್ನು ಕೊಡುವ ಸುರುಳಿಯಾಕಾರದ, ತೀರಾ ಅಂಟುಅಂಟಾದ ಹಸಿ ಲೋಳೆಯಿಂದಾದ ಎಳೆಗಳು. ಇವುಗಳ ಸ್ಪೆಷಾಲಿಟಿಯೆಂದರೆ ಹೊರಗಿಂದ ಒತ್ತಡ ಬಂದು ಅಪ್ಪಳಿಸಿದಾಗ ಸುಮಾರು 200% ದಷ್ಟು ವಿಸ್ತೃತವಾಗಿ ಮತ್ತೆ ಮೂಲರೂಪಕ್ಕೆ ಮರಳುವ ಸಾಮರ್ಥ್ಯವಿರುವುದು. ಈ ಗುಣದಿಂದ ಎರಡು ಲಾಭಗಳಿವೆ: 1) ನೊಣ ಅಥವಾ ಕೀಟ ಬಂದು ಅಪ್ಪಳಿಸಿದಾಗಿನ ಆಘಾತವನ್ನು ತಡೆಯುವುದು ಮತ್ತು 2) ಬಾಗುವುದರ ಮೂಲಕ ನೊಣ/ಕೀಟಕ್ಕೆ ‘ಲ್ಯಾಂಡಿಂಗ್‌’ಗೆ ಗಟ್ಟಿಮೇಲ್ಮೈಯನ್ನು ಒದಗಿಸದೆ, ಅದು ಪುಟಿದೆದ್ದು ತಪ್ಪಿಸಿಕೊಳ್ಳುವ ಸಾಧ್ಯತೆಯನ್ನು ತಪ್ಪಿಸುವುದು.

ವಿವರಣೆಯಲ್ಲಿ ಇಷ್ಟು ಸರಳವಾಗಿ ಕಂಡರೂ ಬಲೆಯಲ್ಲಿ ಸಂಕೀರ್ಣತೆ ಇನ್ನೂ ಬೇಕಷ್ಟು ಇದೆ. ಸುರುಳಿಯಾಕಾರದ ಎಳೆಗಳು ತುಂಬಾ ಸೂಕ್ಷ್ಮವಾಗಿರುತ್ತವೆ. ಅವುಗಳ ದಪ್ಪ ಅಬ್ಬಬ್ಬಾ ಎಂದರೆ ಒಂದು ಮೈಕ್ರೊನ್‌ ಆಗಬಹುದು (ಒಂದು ಮೀಟರ್‌ನ ಮಿಲಿಯದ ಒಂದನೇ ಭಾಗ). ಬಲೆಯತ್ತ ಹಾರಿಬರುವ ನೊಣದ ವೇಗವೋ ಪ್ರತಿ ಸೆಕೆಂಡಿಗೆ ಎಷ್ಟೋ ಮಿಲಿಯ ಮೈಕ್ರೋನ್‌ಗಳಷ್ಟಿರುತ್ತದೆ. ಅದನ್ನು ತಡೆದುಕೊಳ್ಳಬೇಕಾದರೆ ಜೇಡರಬಲೆಗೆ ಇನ್ನೂ ಕೆಲವು ‘ಏರೊಡೈನಾಮಿಕ್‌’ ತಂತ್ರಗಳು ಅವಶ್ಯವಿರುತ್ತವೆ. ಆಕ್ಸ್‌ಫ‚ರ್ಡ್‌ ವಿಜ್ಞಾನಿಗಳು ಹೈಸ್ಪೀಡ್‌ ವಿಡಿಯಾಕೆಮರಾಗಳನ್ನು ಉಪಯೋಗಿಸಿ ಅಭ್ಯಸಿಸಿದ್ದು ಈ ಏರೊಡೈನಾಮಿಕ್‌ ತಂತ್ರಗಳನ್ನೇ.

ಕಾರ್‌ ಉತ್ಪಾದನಾ ಕಂಪೆನಿಗಳೆಲ್ಲ ಕಾರುಗಳ crash worthiness (ಅಪಘಾತ ತಡೆದುಕೊಳ್ಳುವ ಸಾಮರ್ಥ್ಯ)ವನ್ನು ಅಳೆಯಲು ಕಂಪ್ಯೂಟರ್‌ ಸಿಮುಲೇಟರ್‌ ಪ್ರೊಗ್ರಾಮ್‌ಗಳನ್ನು ಬಳಸುತ್ತವಷ್ಟೆ? ಅವೇ ತಂತ್ರಾಂಶಗಳನ್ನು ಜೇಡರಬಲೆಯ ‘ಆಘಾತ ಸಾಮರ್ಥ್ಯ’ವನ್ನು ಅಳೆಯಲಿಕ್ಕೂ ಉಪಯೋಗಿಸಲಾಯಿತು. ಅದರಲ್ಲಿ ಕಂಡುಬಂದ ಅಂಶವೆಂದರೆ ಬಲೆಯಾಳಗೆ ನೊಣ ಬಂದುಬಿದ್ದಾಗ ಬಲೆಗಾಗುವ ಆಘಾತವು ನೊಣ ಬಿದ್ದ ಆಚೀಚೆಯ ಮೂರು ರೇಡಿಯಲ್‌ ಎಳೆಗಳವರೆಗೆ ಮಾತ್ರ ವ್ಯಾಪಿಸಿರುತ್ತದೆ. ಬಲೆಯ ಉಳಿದ ಭಾಗಕ್ಕೆ ಏನೂ ಆಗಿರುವುದಿಲ್ಲ. ಆಘಾತಗೊಂಡ ಭಾಗ ಮಾತ್ರ ಒಮ್ಮೆ ಹಿಗ್ಗಿ ಮತ್ತೆ ಯಥಾಸ್ಥಿತಿಗೆ ವಾಪಸಾದರಾಯಿತು.

ಬಲೆಯು ಈರೀತಿ ಯಥಾಸ್ಥಿತಿಗೆ ಮರಳುವುದರಲ್ಲಿ ಪ್ರಧಾನ ಪಾತ್ರ ವಹಿಸುವುದು ಏರೊಡೈನಾಮಿಕ್ಸ್‌ ಅಥವಾ ಗಾಳಿಯ ಒತ್ತಡದ ಪರಿಣಾಮ. ಬಲೆಯ ಚಲನೆಯ ವೇಗಕ್ಕೂ ಗಾಳಿಯ ಒತ್ತಡಕ್ಕೂ ನೇರ ಅನುಪಾತವಿರುತ್ತದೆ. ಜೇಡರಬಲೆಗೆ ಗಾಳಿಯ ಒತ್ತಡವನ್ನು ವಿರೋಧಿ-ಸುವ ಶಕ್ತಿ ಇರುತ್ತದೆ, ಆದರೆ ಒಂದು ಮಿತವಾದ ಪ್ರಮಾಣದಲ್ಲಿ ಮಾತ್ರ. ಬಲೆಯಾಳಗೆ ಬೇಟೆ ಬಂದು ಬಿದ್ದಾಗ ಇಡೀ ಬಲೆಗೆ ಬಲೆಯೇ ಹಿಗ್ಗದೆ ಒಂದು ನಿರ್ದಿಷ್ಟ ಭಾಗ ಮಾತ್ರ ಹಿಗ್ಗುವುದು ಈ ಕಾರಣಕ್ಕೇ!

ನಿಜಕ್ಕೂ ಅದ್ಭುತವೆನಿಸುತ್ತದೆ! ಮಿಲಿಯಗಟ್ಟಲೆ ವರ್ಷಗಳಿಂದಲೂ ಯಾವೊಂದು ತಂತ್ರಜ್ಞಾನವಿಲ್ಲದೆ, ಇಂಟರ್‌ನೆಟ್‌ ಕಂಪ್ಯೂಟರ್‌ ಸಿಮ್ಯುಲೇಟರ್‌ ಮಣ್ಣುಮಸಿ ಅಂತ ಒಂದೂ ಇಲ್ಲದೆ, ಲೆಕ್ಕಾಚಾರದ ಪ್ರಕಾರ ಮಹಾಚಾಕಚಕ್ಯತೆಯಿಂದ ಬಲೆ ನೇಯ್ದು ಬೇಟೆಯಾಡುವ ಜೇಡನಿಗೆ ಸಾಟಿಯಾದ ‘ವೆಬ್‌ಡೆವಲಪರ್‌’ ಬೇರೆ ಯಾರೂ ಇರಲಿಕ್ಕಿಲ್ಲ, ಅಲ್ಲವೇ?

*

ವಿಶ್ವವ್ಯಾಪಿಬಲೆಯ(world wide web) ಅಂತರ್ಜಾಲದಲ್ಲಿ ವಾರವಾರವೂ ವಿವಿಧ ವಿಷಯಗಳ ಕುರಿತು ಅಕ್ಷರಜಾಲವನ್ನು ಹೆಣೆಯುತ್ತ, ಓದುಗರ ಬಳಗದ ಸ್ನೇಹಜಾಲವನ್ನು ಬೆಸೆಯುತ್ತ ಬಂದಿರುವ ಈ ಅಂಕಣದಲ್ಲಿ ಇದುವರೆಗೂ ಜೇಡರಬಲೆಯನ್ನು ಹೆಣೆದಿರಲಿಲ್ಲವೆಂದರೆ ಸ್ವಲ್ಪ ಆಶ್ಚರ್ಯವೇ! ಹಾಗಾಗಿ ಜೇಡನಿಗೂ ಜಸ್ಟಿಸ್‌ ಸಿಗಲೆಂದು, ವಿಜ್ಞಾನಪತ್ರಿಕೆಗಳಿಂದ ಒಂದಿಷ್ಟು ಮಾಹಿತಿಗಳನ್ನು ಕ್ರೋಡೀಕರಿಸಿ ಇವತ್ತಿನ ಸಂಚಿಕೆಯನ್ನು ಸಿದ್ಧಪಡಿಸಿದ್ದೇನೆ.

ಜತೆಯಲ್ಲೇ ಒಂದು ರಸಪ್ರಶ್ನೆಯನ್ನೂ ಸೇರಿಸಿದ್ದೇನೆ. ನಿಮ್ಮನ್ನು ಜೇಡರಬಲೆಯಾಳಗೆ ಸಿಕ್ಕಿಹಾಕುವುದಕ್ಕಲ್ಲ, ಏಕೆಂದರೆ ಪ್ರಶ್ನೆಗೂ ಜೇಡನಿಗೂ ಏನೇನೂ ಸಂಬಂಧವಿಲ್ಲ. ಆದರೆ ‘ಜೇಡರಬಲೆ’ಗೆ ಸಂಬಂಧವಿದೆ!

ಪ್ರಶ್ನೆ ಹೀಗಿದೆ : ಕನ್ನಡದಲ್ಲಿ ಜೇಮ್ಸ್‌ಬಾಂಡ್‌ ಶೈಲಿಯಲ್ಲಿ ಮೊಟ್ಟಮೊದಲಿಗೆ ಬಂದ ‘ಜೇಡರಬಲೆ’ (ಜೇಮ್ಸ್‌ ಬಾಂಡ್‌ ಆಗಿ ಡಾ।ರಾಜ್‌ ‘ಮೋಹಕ’ ಅಭಿನಯ, ನಾಯಕಿಯಾಗಿ ಜಯಂತಿ ‘ಮಾದಕ’ ಅಭಿನಯ) ಚಲನಚಿತ್ರಕ್ಕೆ ಮೂಲ ಸ್ಪೂರ್ತಿಯಾಗಿದ್ದ ಇಂಗ್ಲಿಷ್‌ ಚಿತ್ರದ (ಅಥವಾ ಇಯಾನ್‌ ಫ‚ೆ್ಲಮಿಂಗ್‌ನ ಕಾದಂಬರಿಯ) ಹೆಸರು ಏನು? ವಿಚಿತ್ರವಾದ ಸುಳಿವು ಏನೆಂದರೆ ನಿಮಗೆ ಉತ್ತರ ಗೊತ್ತಿಲ್ಲವಾದರೆ Yes ಎನ್ನಿ, ಗೊತ್ತಿದ್ದರೆ No ಎನ್ನಿ!

ಇವತ್ತಿನ ಸಂಚಿಕೆಯ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆ, ಸಲಹೆ, ಸೂಚನೆಗಳನ್ನು ಪತ್ರಿಸಲು ಮತ್ತು ರಸಪ್ರಶ್ನೆಗೆ ಉತ್ತರಿಸಲು ವಿಳಾಸ - [email protected]

Suggested Reading : A Websters Chronicle :
WWW 15 Years: A personal journey

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X