• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಂಬೂದ್ವೀಪದಲ್ಲೂ ಹವಾಯಿದ್ವೀಪದಲ್ಲೂ ಬೆಳೆವ ಹಣ್ಣು!

By Staff
|

ಜಂಬೂದ್ವೀಪದಲ್ಲೂ ಹವಾಯಿದ್ವೀಪದಲ್ಲೂ ಬೆಳೆವ ಹಣ್ಣು!

ಜಂಬುನೇರಳೆ ಜಾಡನ್ನು ಹಿಡಿಯುತ್ತ ಹೋದರೆ ಬಾಲ್ಯದ ನೆನಪುಗಳ ನೌಕಾವಿಹಾರವಾಗುತ್ತದೆ. ಅದಕ್ಕೆ ಮುಖ್ಯ ಕಾರಣವೆಂದರೆ ಜಂಬೂಫಲಸಾರಭಕ್ಷಿತನ ಭಕ್ತರಾದ ನಮಗೆ, ಜಂಬೂಫಲಾಹಾರವೆಂಬುದು ಬಾಲ್ಯದಲ್ಲಿ ಬೇಸಿಗೆರಜೆಯ ಬಲುಮೋಜಿನ ಸಂಗತಿಗಳಲ್ಲೊಂದು ಆಗಿರುವುದು. ವಿಚಿತ್ರಾನ್ನ 186ನೇ ಸಂಚಿಕೆಯಲ್ಲಿ ರುಚಿರುಚಿಯಾದ ಜಂಬುನೇರಳೆಯ ಸಮಾಚಾರ.

Srivathsa Joshi *ಶ್ರೀವತ್ಸ ಜೋಶಿ
ದ.ರಾ.ಬೇಂದ್ರೆಯವರು ಕರಡಿಕುಣಿಸುವವನ ಬಗ್ಗೆ ‘ಕಬ್ಬಿಣ ಕೈಕಡಗ ಕುಣಿಗೋಲು ಕೂದಲು ಕಂಬಳಿ ಹೊದ್ದಾಂವ ಬಂದಾನ...’ ಎಂದು ಆರಂಭಿಸುವ ಕವಿತೆಯಲ್ಲಿ ಮುಂದೆ ಕರಡಿಯನ್ನು ವರ್ಣಿಸುತ್ತಾರೆ: ‘ತ್ರೇತಾಯುಗದ ರಾಮನ್ನ ದ್ವಾಪರದ ಕೃಷ್ಣನ್ನ ಕಲಿಯುಗದ ಕಲ್ಕೀನ ಕಂಡಾನ... ಜಾಂಬೂನದಿ ದಂಡೆಯ ಜಂಬುನೇರಳೆ ಹಣ್ಣು ಕೃತಯುಗದ ಕೊನೆಗೀವ ಉಂಡಾನ...’ ಎನ್ನುತ್ತಾರೆ. ಆ ಕವಿತೆ ನಮಗೆ ಆರನೆಯ ತರಗತಿಯ ಕನ್ನಡಭಾರತಿ ಪಠ್ಯಪುಸ್ತಕದಲ್ಲಿತ್ತು. ನಮ್ಮ ಶಾಲೆಯ ಕನ್ನಡ ಅಧ್ಯಾಪಕಿ ಅದನ್ನು ಸೊಗಸಾಗಿ ರಾಗಬದ್ಧವಾಗಿ ಹಾಡಿ ನಮಗೆ ಬೋಧಿ-ಸಿದ್ದರು.

ತ್ರೇತಾಯುಗದಲ್ಲಿ ಶ್ರೀರಾಮಚಂದ್ರನನ್ನೂ, ದ್ವಾಪರದಲ್ಲಿ ಶ್ರೀಕೃಷ್ಣನನ್ನೂ ಕಂಡವನೆಂದರೆ (ಶ್ಯಮಂತಕೋಪಾಖ್ಯಾನದಲ್ಲಿ ಮುಖಾಮುಖಿ) ಆತ ಜಾಂಬವಂತನೇ ಆಗಿರಬೇಕು. ಕಲಿಯುಗದ ಕರಡಿಯೆಂದರೆ ಈಗಿನ ನಮ್ಮ ಸಮಕಾಲೀನ ಕರಡಿಯಿರಬಹುದು. ಇರಲಿ, ನನಗೆ ಕರಡಿಯ ಪೂರ್ವಜನ್ಮ-ಪುನರ್ಜನ್ಮ ವಿವರಗಳಿಗಿಂತಲೂ ಹೆಚ್ಚು ಕುತೂಹಲದ ಸಂಗತಿಯೆಂದರೆ - ಕೃತಯುಗದಲ್ಲಿನ ಕರಡಿ ಜಾಂಬೂನದಿ ದಂಡೆಯ ಮೇಲೆ ‘ಜಂಬುನೇರಳೆ’ ಹಣ್ಣನ್ನು ತಿನ್ನುತ್ತಿತ್ತಂತೆ - ಎಂಬುದು!

ಅಂದರೆ, ಚತುರ್ಯುಗಗಳಿಂದಲೂ ಜಂಬುನೇರಳೆ ಹಣ್ಣು ಈ ಭುವಿಯಲ್ಲಿ ಬೆಳೆದುಕೊಂಡು ಬಂದಿದೆ ಎಂದಾಯ್ತು. ಬಹುಶಃ ಇದರಲ್ಲೇನೂ ಆಶ್ಚರ್ಯವಿಲ್ಲ. ಪುರಾಣರೀತಿಯ ಜಿಯಾಗ್ರಾಫಿ‚ ಪ್ರಕಾರ ನಮ್ಮ ದೇಶವು ಜಂಬೂದ್ವೀಪದಲ್ಲಿನ ಭರತಖಂಡ ತಾನೆ? ಜಂಬೂದ್ವೀಪವೆಂಬ ಹೆಸರು ಬಂದದ್ದೇ ಅಲ್ಲಿ ಜಂಬೂ ನದಿ ಹರಿಯುವುದರಿಂದ ಮತ್ತು ನದಿಯ ಇಕ್ಕೆಲಗಳಲ್ಲಿ ಜಂಬುನೇರಳೆ ಮರಗಳು ಹೇರಳವಾಗಿ ಬೆಳೆದಿರುವುದರಿಂದ. ಭಾಗವತ, ರಾಮಾಯಣ, ಮಹಾಭಾರತ ಪುರಾಣಗಳಲ್ಲಿ, ಶಿವಾನಂದಲಹರಿಯಂತಹ ಸ್ತೋತ್ರಗಳಲ್ಲಿ ಜಂಬುನೇರಳೆಯ ಉಲ್ಲೇಖವಿದೆ. ಸಂಸ್ಕೃತ ಸುಭಾಷಿತಗಳಲ್ಲೂ ಜಂಬೂಫಲ ಸಿಗುತ್ತದೆ. ‘ಹಣ್ಣು ಬಂದಿದೆ ಕೊಳ್ಳಿರೋ...’ ಹಾಡಿನಲ್ಲಿ ದಾಸರು ಪುರಂದರವಿಠಲನೇ ಜಂಬುನೇರಳೆ ಹಣ್ಣು ಎಂದುಬಿಟ್ಟಿದ್ದಾರೆ!

ಬೌದ್ಧಧರ್ಮದವರ ನಂಬಿಕೆಯ ಪ್ರಕಾರ ರಾಜಕುಮಾರ ಸಿದ್ಧಾರ್ಥ ಮೊಟ್ಟಮೊದಲಿಗೆ ಧ್ಯಾನಮಗ್ನನಾದದ್ದು ಜಂಬುನೇರಳೆ ಮರದ ಕೆಳಗೆ. ತಮಿಳುನಾಡಿನಲ್ಲಿರುವ ಜಂಬುಕೇಶ್ವರ ದೇವಸ್ಥಾನದ ಸ್ಥಳಪುರಾಣದ ಕಥೆಯಂತೂ ಮತ್ತಷ್ಟು ಸ್ವಾರಸ್ಯಕರವಾಗಿದೆ. ಒಬ್ಬ ಮುನಿ ನದಿನೀರಲ್ಲಿ ಸಿಕ್ಕ ಜಂಬುನೇರಳೆ ಹಣ್ಣನ್ನು ಶಿವನಿಗರ್ಪಿಸುತ್ತಾನಂತೆ. ಶಿವನಾದರೂ ಹಣ್ಣನ್ನು ತಿಂದು ಬೀಜವನ್ನು ಉಗುಳಿಬಿಡುತ್ತಾನೆ. ಆ ಬೀಜವನ್ನೇ ಪ್ರಸಾದವೆಂದು ಸ್ವೀಕರಿಸಿದ ಮುನಿ ತಾನೇ ಒಂದು ಜಂಬುನೇರಳೆ ವೃಕ್ಷವಾಗಿ ಹೋಗುತ್ತಾನೆ. ಆ ವೃಕ್ಷದ ಕೆಳಗೆ ಕುಳಿತ ಶಿವ ಜಂಬುಕೇಶ್ವರನಾಗುತ್ತಾನೆ.

ಜಂಬುನೇರಳೆಗೆ ಸಂಬಂ-ಧಿಸಿದಂತೆ ದಂತಕಥೆಗಳು ಹೀಗೆ ಅನೇಕವಿರುವುದರಿಂದ ಯುಗಯುಗಗಳಲ್ಲೂ ಅದರ ಅಸ್ತಿತ್ವವಿತ್ತೆಂಬುದು ನಿರ್ವಿವಾದ. ಹಾಗಾಗಿ ಬೇಂದ್ರೆಯವರು ತನ್ನ ದಿವ್ಯದೃಷ್ಟಿಯಿಂದ ವೀಕ್ಷಿಸಿ ಕೃತಯುಗದಲ್ಲಿನ ಕರಡಿಯು ಜಂಬುನೇರಳೆ ಹಣ್ಣನ್ನು ಚಪ್ಪರಿಸುತ್ತಿತ್ತು ಎಂದಿದ್ದರಲ್ಲಿ ಉತ್ಪ್ರೇಕ್ಷೆಯಿಲ್ಲ; ರವಿ ಕಾಣದ್ದನ್ನು ಕವಿ ಕಂಡ ಎಂಬ ಸ್ಪೆಷಾಲಿಟಿಯೂ ಇಲ್ಲ. ಕೃತಯುಗದಲ್ಲಿಯೇ ಕರಡಿಯೂ ಇತ್ತು, ಜಂಬುನೇರಳೆ ಹಣ್ಣೂ ಇತ್ತು; ಅವಕಾಶ ಸಿಕ್ಕಾಗೆಲ್ಲ ಕರಡಿ ಜಂಬುನೇರಳೆ ಹಣ್ಣನ್ನು ಯಥೇಷ್ಟ ಮೆಲ್ಲುತ್ತಿತ್ತು ಕೂಡ. ಆದರೆ, ಹಿಂದಿನ ಯುಗಗಳಲ್ಲಿ ಕರಡಿಗೆ ಮಾತ್ರ ಜಂಬುನೇರಳೆ ಇಷ್ಟವಾಗುತ್ತಿತ್ತೊ ಅಥವಾ ದೇವ-ದಾನವ ಯಕ್ಷ-ಗಂಧರ್ವ-ಮಾನವರೂ ಈ ಹಣ್ಣನ್ನು ತಿನ್ನುತ್ತಿದ್ದರೋ ಗೊತ್ತಿಲ್ಲ.

ಒಂದಂತೂ ನಿಜ. ನಮ್ಮೆಲ್ಲರ ಫ‚ೇವರಿಟ್‌ ದೇವರಾದ ಗಣಪನಿಗೆ ಜಂಬುನೇರಳೆ ಹಣ್ಣಿನ ಜ್ಯೂಸ್‌ ಮಾಡಿ ಕುಡಿಯುವ ಅಭ್ಯಾಸ ಮೊದಲಿಂದಲೂ ಇದೆ ಎಂದು ದೃಢವಾಗಿ ಹೇಳಬಹುದು - ಅದಕ್ಕೇ ಅಲ್ಲವೆ ಅವನನ್ನು ನಾವು ‘ಜಂಬೂಫಲಸಾರ ಭಕ್ಷಿತಂ’ ಎಂದು ಸ್ತುತಿಸುವುದು?

*

ಈ ಪರಿಯಲ್ಲಿ ಪೌರಾಣಿಕ ಹಿನ್ನೆಲೆಯುಳ್ಳ ಜಂಬುನೇರಳೆ ಹಣ್ಣು ಮೊನ್ನೆ ನನಗಿಲ್ಲಿ ಅಮೆರಿಕದ ರಾಜಧಾನಿಯಲ್ಲಿನ ಗ್ರೋಸರಿ ಸೂಪರ್‌ ಮಾರ್ಕೆಟ್‌ ಒಂದರಲ್ಲಿ ಮಾರಾಟಕ್ಕಿಟ್ಟದ್ದು ಕಂಡುಬಂತು! ಒಂದು ಪುಟ್ಟ ಬುಟ್ಟಿಯಲ್ಲಿ ನಸುಗೆಂಪು ಬಣ್ಣದ ಹಣ್ಣುಗಳಿದ್ದುವು. ಆಕಾರ, ಗಾತ್ರಗಳೆಲ್ಲ ನೋಡೌಟ್‌ ಇದು ಜಂಬುನೇರಳೆ ಹಣ್ಣೇ ಎಂದು ಸಾರುತ್ತಿದ್ದುವು. ಸೂಪರ್‌ಮಾರ್ಕೆಟಲ್ಲಿ ದ್ರಾಕ್ಷಿಹಣ್ಣು ಕೊಳ್ಳುವಾಗ, ಗೊಂಚಲಿಂದ ಒಂದು ದ್ರಾಕ್ಷಿಯನ್ನು ತೆಗೆದು ಬಾಯಿಗೆಹಾಕಿ ಹುಳಿಯಾಗಿಲ್ಲವೆಂದು ಖಚಿತಪಡಿಸಿಯೇ ಕಾರ್ಟ್‌ಗೆ ಸೇರಿಸುವುದು. ಶಾಪಿಂಗ್‌ ಎಟಿಕ್ವೆಟ್‌ ದೃಷ್ಟಿಯಿಂದ ಅದು ಒಳ್ಳೆಯ ಅಭ್ಯಾಸವಲ್ಲವಾದರೂ ಎಷ್ಟೋ ಜನ ಹಾಗೆ ರುಚಿ ನೋಡಿಯೇ ದ್ರಾಕ್ಷಿಹಣ್ಣು ಕೊಳ್ಳುವವರು. ನನಗೆ ಗೊತ್ತಿದ್ದಂತೆ ದ್ರಾಕ್ಷಿಯ ಮಟ್ಟಿಗಾದರೆ ಆ ರಿವಾಜು ಪರವಾಇಲ್ಲ. ಬೇರೇನನ್ನೂ ಆ ರೀತಿ ಸ್ಯಾಂಪಲಿಂಗ್‌ ಮಾಡುವುದಿಲ್ಲ. ಹಾಗಾಗಿ ಜಂಬುನೇರಳೆ ಹಣ್ಣನ್ನು ನಾನು ಅಲ್ಲೇ ರುಚಿನೋಡಿ ತೀರ್ಮಾನಿಸುವಂತಿರಲಿಲ್ಲ. ಜಂಬೂದ್ವೀಪದ ಪರಿ-ಧಿಯಾಚೆ ಜಂಬುನೇರಳೆ ಹೇಗಿರುತ್ತದೆ ನೋಡಿಯೇ ಬಿಡುವಾ ಎಂಬ ಕುತೂಹಲ ಮಾತ್ರ ತಡೆಯಲಾರದಷ್ಟಿತ್ತು.

ಕೊನೆಗೂ ಆರು ಹಣ್ಣುಗಳನ್ನು ಪ್ಯಾಕ್‌ ಮಾಡಿದೆ; ಅಪರೂಪಕ್ಕೆ ಸಿಕ್ಕ ಹಣ್ಣುಗಳನ್ನು ನೋಡಿ ಆರನೆಯ ತರಗತಿಯ ನೊಸ್ಟಾಲ್ಜಿಯಾಕ್ಕಿಳಿದೆ!

*

ಆರನೆಯ ತರಗತಿ ವಯೋಮಾನದಲ್ಲಿ ನಮಗೆ ಬೇಸಿಗೆರಜೆ ಬಂತೆಂದರೆ ಜಂಬುನೇರಳೆ ಹಣ್ಣು ಪ್ರಮುಖ ಆಕರ್ಷಣೆಗಳಲ್ಲೊಂದು. ಅದಕ್ಕಾಗಿ ನಾವೇನೂ ಜಾಂಬೂನದಿ ದಂಡೆಗೆ ಹೋಗಬೇಕಾಗುತ್ತಿರಲಿಲ್ಲ. ಕಾರ್ಕಳ ತಾಲೂಕಿನ ‘ಮಾಳ’ವೆಂಬ ನಮ್ಮೂರಲ್ಲಿ ಅಡಿಕೆ ತೋಟಗಳ ಪಕ್ಕದಲ್ಲೇ ಜಂಬುನೇರಳೆ ಹಣ್ಣಿನ ಮರಗಳಿರುತ್ತಿದ್ದುವು. ರಜಾ ಇರುವುದೇ ಮಜಾ ಮಾಡಲು ಎಂಬ ವ್ಯಾಖ್ಯೆಯ ಆ ವಯಸ್ಸಿನಲ್ಲಿ ದಿನವಿಡೀ ಆಟ, ಗ್ರಾಮೀಣ ಪರಿಸರವಾದ್ದರಿಂದ ಕಾಡುಮೇಡು ಬೆಟ್ಟಗುಡ್ಡಗಳೆನ್ನದೆ ಸ್ವಚ್ಛಂದ ತಿರುಗಾಟ; ದಣಿವಾದಾಗ, ಬಾಯಾರಿಕೆಯಾದಾಗ ಜಂಬುನೇರಳೆ ಹಣ್ಣಿನಂಥವು ಸಿಕ್ಕರೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ!

ಜಂಬುನೇರಳೆ ಹಣ್ಣನ್ನೇ ‘ಜಾಂಬು’ ಎನ್ನುತ್ತಾರೆ ಕರಾವಳಿ ಪ್ರದೇಶದ ಜನರು. ಜಾಂಬು ಸಾಮಾನ್ಯ ಹೆಸರಾದರೆ ಅದರ ಉಪಪ್ರಭೇದಗಳಿವೆ ನಾಲ್ಕೈದು ವಿಧದವು - ಸಕ್ಕರೆಜಾಂಬು (ಪನ್ನೇರಳೆ), ಬಣ್ಣದಜಾಂಬು, ಹುಳಿಜಾಂಬು, ಪಂಜಾಬಿಜಾಂಬು ಇತ್ಯಾದಿ. ಪಶ್ಚಿಮಘಟ್ಟಗಳ ತಪ್ಪಲಿನ ನಮ್ಮೂರಿನಂಥ ಪ್ರದೇಶದಲ್ಲಿ ಈ ನಾಲ್ಕೈದು ನಮೂನೆಯ ಜಾಂಬು ಹಣ್ಣಿನ ಮರಗಳು ಯಾವೊಂದು ಪ್ರಯಾಸವೂ ಇಲ್ಲದೆ ಹುಲುಸಾಗಿ ಬೆಳೆಯುತ್ತವೆ. ಏಪ್ರಿಲ್‌, ಮೇ ತಿಂಗಳುಗಳು - ಬೇಸಿಗೆರಜೆಯ ಪರ್ವಕಾಲವೇ ಜಾಂಬು ಹಣ್ಣಿನ ಪಕ್ವಕಾಲ. ಅದಕ್ಕೆ ಮೊದಲು ಸುಮಾರು ಫ‚ೆಬ್ರವರಿ-ಮಾರ್ಚ್‌ ಅವ-ಧಿಯಲ್ಲಿ ಮರವಿಡೀ ಹೂಗಳು ಅರಳಿಕೊಂಡಾಗಲೂ ಜಾಂಬಿನ ಮರ ಆಕರ್ಷಕವಾಗಿ ಕಾಣುತ್ತದೆ.

ಹುಳಿಜಾಂಬಿನ ವಿಶೇಷವೆಂದರೆ ಅದರ ಅತ್ಯಾಕರ್ಷಕ ಗುಲಾಬಿ ಬಣ್ಣದ ಹೂವು ಸಹ ತಿನ್ನಲು ರುಚಿಯಾಗಿರುತ್ತದೆ. ಇನ್ನೂ ಪೂರ್ತಿ ಮಾಗದೆ ದೋರೆಯಾಗಿರುವ ಕಾಯಿಯನ್ನು ಚಟ್ನಿ ಅಥವಾ ಹುಳಿ ಮಾಡಲು ಉಪಯೋಗಿಸಲಿಕ್ಕೂ ಆಗುತ್ತದೆ! ಹಣ್ಣು ಸಹ ಸ್ವಾದಭರಿತ ಮತ್ತು ರುಚಿಕರ. ಮರ ತುಂಬ ಎತ್ತರಕ್ಕೆ ಬೆಳೆಯುತ್ತದೆ. ಪಂಜಾಬಿ ಜಾಂಬು (ಇದಕ್ಕೆ ‘ಪಂಜಾಬಿ’ ಎಂಬ ವಿಶೇಷಣವೇಕೊ ನನಗೆ ಗೊತ್ತಿಲ್ಲ) ಹೂವು ಬಿಳಿಬಣ್ಣದ್ದು. ಕಾಯಿಯಾಗಿರುವಾಗ ತಿಳಿಹಸಿರುಛಾಯೆಯಿದ್ದರೂ ಬೆಳೆದಂತೆಲ್ಲ ಶುಭ್ರಶ್ವೇತವರ್ಣದ ಹಣ್ಣಾಗುತ್ತದೆ. ನೀರಿನಂಶ ವಿಪುಲ, ಆದ್ದರಿಂದಲೇ ಬಾಯಾರಿಕೆಯ ನಿವಾರಣೆಗೆ ತಿನ್ನಲು ಚೆನ್ನಾಗಿರುತ್ತದೆ.

ಮರದ ತುಂಬ ಹಣ್ಣುಗಳಾದಾಗ ಕೊಯ್ದ ಬಿಳಿಜಾಂಬುಗಳನ್ನು ನೂರು-ಸಾವಿರ ಸಂಖ್ಯೆಯಲ್ಲಿ ರಖಂ ಆಗಿ ಮಾರಾಟಮಾಡಲಾಗುತ್ತದೆ. ನನಗೀಗಲೂ ನೆನಪಿದೆ, ‘ದುಂಡು ಪೈ’ ಎಂಬ ಹೆಸರಿನ ವಯೋವೃದ್ಧ ವ್ಯಾಪಾರಿಯಾಬ್ಬರಿದ್ದರು. ಜಾಂಬುಹಣ್ಣಿನ ಸೀಸನ್‌ನಲ್ಲಿ ದಿನಾಲೂ ಕಾರ್ಕಳದಿಂದ ಹಳ್ಳಿಗಳಿಗೆ ಹೋಗಿ ಹೋಲ್‌ಸೇಲಾಗಿ ಜಾಂಬುಹಣ್ಣುಗಳನ್ನು ಕೊಂಡು ತಂದು, ಪೇಟೆಯಲ್ಲಿ ಬಸ್‌ಸ್ಟಾಂಡ್‌ ಸುತ್ತಮುತ್ತ ‘ಜಾಂಬು... ಜಾಂಬು...’ ಎನ್ನುತ್ತ ಚಿಲ್ಲರೆ ವ್ಯಾಪಾರಮಾಡುವವರಿಗೆ ಪೂರೈಕೆ ಮಾಡುವುದು ದುಂಡುಪೈಯ ಕಾಯಕ. ಅದೇರೀತಿ ನಮ್ಮೂರಿನ ಕೆಲ ಹುಡುಗರು ಕುದುರೆಮುಖ-ಶೃಂಗೇರಿ ಕಡೆಗೆ ಹೋಗುವ ಬಸ್ಸು-ಲಾರಿ ಮತ್ತಿತರ ವಾಹನಗಳ ಪ್ರಯಾಣಿಕರಿಗೆ ಜಾಂಬುಹಣ್ಣು ಮಾರುತ್ತಿದ್ದುದೂ ಉಂಟು. ಬೇಸಿಗೆರಜೆಯಲ್ಲೊಂದಿಷ್ಟು ಪಾಕೆಟ್‌ಮನಿ ಮಾಡಿಕೊಂಡ ತೃಪ್ತಿ ಹುಡುಗರಿಗಾದರೆ ಸುಡುಬಿಸಿಲಿನಿಂದಾದ ದಾಹವನ್ನು ಜಾಂಬುಹಣ್ಣು ತಿಂದು ತಣಿಸಿಕೊಂಡ ತೃಪ್ತಿ ‘ಘಟ್ಟದ ಮೇಲಿನ’ ಪ್ರಯಾಣಿಕರಿಗೆ.

ಆಶ್ಚರ್ಯವೆಂದರೆ ಕರಾವಳಿ ಪ್ರದೇಶವನ್ನು ಬಿಟ್ಟರೆ ಕರ್ನಾಟಕದ ಇತರೆಡೆಗಳಲ್ಲಿ ಈ ಹುಳಿಜಾಂಬು, ಬಿಳಿಜಾಂಬು ಅಷ್ಟೇನೂ ಪರಿಚಿತವಿದ್ದಂತಿಲ್ಲ. ಪನ್ನೇರಳೆಯಾದರೆ (ಕರಾವಳಿಯ ’ಸಕ್ಕರೆಜಾಂಬು’) ಹಾಗಲ್ಲ. ದಾವಣಗೆರೆ, ಶಿವಮೊಗ್ಗ, ಮೈಸೂರು, ಬೆಂಗಳೂರುಗಳಲ್ಲೂ ಕೆಲವೊಮ್ಮೆ ತಳ್ಳುಬಂಡಿಯ ಮೇಲೆ ಅಥವಾ ಸೈಕಲ್‌ಗೆ ಸಿಕ್ಕಿಸಿದ ಬುಟ್ಟಿಯಲ್ಲಿಟ್ಟು ಪನ್ನೇರಳೆ ಹಣ್ಣನ್ನು ಮಾರುವುದನ್ನು ಕಂಡಿದ್ದೇನೆ. ಪನ್ನೇರಳೆಯ ಹೂವು ಹಳದಿಬಣ್ಣದ್ದು, ಹಣ್ಣು ತುಂಬ ಸಿಹಿಯಾಗಿರುತ್ತದೆ ಮತ್ತು ಅದಕ್ಕಿಂತ ಹೆಚ್ಚಾಗಿ ಪನ್ನೀರಿನ ಪರಿಮಳವನ್ನು ಸೂಸುತ್ತದೆ. ಒಳಗಿನ ಬೀಜ ತೊಗಟೆಯಿಂದ ಕಳಚಿಕೊಂಡಿದ್ದರೆ ಗುಡುಗುಡು ಶಬ್ದವನ್ನು ಮಾಡುವುದೂ ಇದೆ. ಹುಳಿ/ಬಿಳಿ ಜಾಂಬುಗಳ ಇಳುವರಿಗೆ ಹೋಲಿಸಿದರೆ ಪನ್ನೇರಳೆಯದು ಕಡಿಮೆ. ಆದರೆ ಬಣ್ಣ, ರುಚಿ, ಪರಿಮಳ, ಔಷ-ಧೀಯ ಗುಣಗಳ ದೃಷ್ಟಿಯಿಂದ ಪನ್ನೇರಳೆಯ ಮೌಲ್ಯ ತುಂಬಾ ಹೆಚ್ಚು.

ಹೀಗೆ ಜಾಂಬುಹಣ್ಣಿನ ಜಾಡನ್ನು ಹಿಡಿಯುತ್ತ ಹೋದರೆ ಬಾಲ್ಯದ ನೆನಪುಗಳ ನೌಕಾವಿಹಾರವಾಗುತ್ತದೆ. ಅದಕ್ಕೆ ಮುಖ್ಯ ಕಾರಣವೆಂದರೆ ಜಂಬೂಫಲಸಾರಭಕ್ಷಿತನ ಭಕ್ತರಾದ ನಮಗೆ ಜಂಬೂಫಲಾಹಾರವೆಂಬುದು ಬಾಲ್ಯದಲ್ಲಿ ಬೇಸಿಗೆರಜೆಯ ಬಲುಮೋಜಿನ ಸಂಗತಿಗಳಲ್ಲೊಂದು ಆಗಿರುವುದು.

*

ಅಮೆರಿಕದಲ್ಲಿ ಖರೀದಿಸಿದ ಜಂಬುನೇರಳೆಹಣ್ಣು ನನಗೆ ಬಾಲ್ಯದ ಸವಿನೆನಪುಗಳನ್ನು ತಂದದ್ದಂತೂ ಹೌದು, ಇನ್ನು ಅದರ ರುಚಿಯಾದರೂ ನಮ್ಮೂರಿನ ಜಾಂಬುಹಣ್ಣಿಗೆ ಸರಿಸಾಟಿಯಾಗಿತ್ತೇ? ‘ನಮ್ಮೂರಿನದೇ ಶ್ರೇಷ್ಠ’ ಎಂಬ ಪರಿಪಾಠವನ್ನು ಬದಿಗಿಟ್ಟು ಹೋಲಿಸಿದರೆ ಇಲ್ಲಿಯವೂ ಚೆನ್ನಾಗಿಯೇ ಇದ್ದುವು. ನಮ್ಮೂರಿಂದಲೇ ರಫ್ತಾಗಿ ಬಂದದ್ದಿರಬಹುದೇ? ದುಂಡು ಪೈ ಎಕ್ಸ್‌ಪೋರ್ಟ್‌ ಸರ್ವಿಸ್‌ ಆರಂಭಿಸಿರಬಹುದೇ? ಇರಲಿಕ್ಕಿಲ್ಲ, ದುಂಡು ಪೈ ಎರಡುವರ್ಷಗಳ ಹಿಂದೆ ಸ್ವರ್ಗಸ್ಥರಾದರು ಎಂದು ನಮ್ಮಣ್ಣ ಹೇಳಿದ್ದು ನೆನಪಾಯ್ತು. ಜಂಬುನೇರಳೆ ನಮ್ಮ ಕನ್ನಡಕರಾವಳಿಯಲ್ಲಿ ಮಾತ್ರ ಬೆಳೆಯುವುದೇನೂ ಅಲ್ಲ. ಮಲೇಷ್ಯಾ, ಇಂಡೊನೇಷ್ಯಾ, ಶ್ರೀಲಂಕಾ ಮೊದಲಾದ ಉಷ್ಣವಲಯ ಪ್ರದೇಶಗಳಲ್ಲೆಲ್ಲ ಬೆಳೆಯುತ್ತದೆ. ಅಲ್ಲಿಂದ ರಫ‚ಾ್ತಗಿದ್ದರೂ ಇರಬಹುದೇನೊ?

ಯಾಕೆ, ಅಮೆರಿಕದಲ್ಲೇ ಉಷ್ಣವಲಯಕ್ಕೆ ಹತ್ತಿರದ ಪ್ರದೇಶಗಳಿಲ್ಲವೆ? ಫ‚ೊ್ಲರಿಡಾ, ಕ್ಯಾಲಿಫ‚ೊರ್ನಿಯಾಗಳಲ್ಲಿ ಜಾಂಬು ಬೆಳೆಯಬಹುದಲ್ಲವೇ? ಹೀಗೆ ಯೋಚನಾಲಹರಿ ಸಾಗುತ್ತಿದ್ದಂತೆ ಮತ್ತೆ ಒಂದುದಿನ ಅದೇ ಸೂಪರ್‌ಮಾರ್ಕೆಟ್‌ಗೆ ಹೋದೆ. ಜಂಬುನೇರಳೆ ಹಣ್ಣಿನ ಬುಟ್ಟಿಯ ಪ್ಯಾಕಿಂಗ್‌ ನೋಡಿದೆ. Grown in Hawaii ಎಂದಿತ್ತು! ಅಮೆರಿಕ ಸಂಯುಕ್ತಸಂಸ್ಥಾನಗಳಿಗೆ ಸೇರಿದ ಹವಾಯಿ ದ್ವೀಪಗಳಲ್ಲೂ ಜಂಬುನೇರಳೆ ಬೆಳೆಯುತ್ತದೆ. ಸಹಜವೇ, ಹವಾಯಿ ದ್ವೀಪಗಳ ಹವಾಮಾನ ಜಂಬುನೇರಳೆಗೆ ಅನುಕೂಲಕರವಾದದ್ದೇ. ಹವಾಮಾನ ಮಾತ್ರವಲ್ಲ, ನಮ್ಮ ಕಾರ್ಕಳದ ದುಂಡು ಪೈಗಿಂತ ಸಾವಿರಪಾಲು ಹೆಚ್ಚು ಕಮರ್ಷಿಯಲ್‌ ಸ್ವಭಾವದ ವ್ಯಾಪಾರಿಗಳೂ ಇಲ್ಲಿದ್ದು ಅಮೆರಿಕದ ಮೂಲೆಮೂಲೆಗಳಿಗೆ ಜಂಬುನೇರಳೆ ಸಪ್ಲೈ ಮಾಡಬಲ್ಲವರಿದ್ದಾರೆ.

ಜಂಬೂದ್ವೀಪದಲ್ಲಿ ಜಂಬುನೇರಳೆ ಸಮೃದ್ಧವಾಗಿದೆಯಾದರೆ ಹವಾಯಿ ದ್ವೀಪಗಳಲ್ಲೂ ಇರಬಾರದೆಂದೇನೂ ಇಲ್ಲವಲ್ಲ!?

- srivathsajoshi@yahoo.com

ಜಂಬುನೇರಳೆ (ಜಾಂಬು) ಹಣ್ಣಿನ ಸಚಿತ್ರ ವಿವರಗಳನ್ನಿಲ್ಲಿ ನೋಡಿ.

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X