• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಿಯರ್ಸ್‌ : ಪಾರದರ್ಶಕ ಸೋಪಿನ ಅಪಾರವಾದ ಖ್ಯಾತಿ

By Staff
|
Srivathsa Joshi *ಶ್ರೀವತ್ಸ ಜೋಶಿ
‘ಅಳಿಯ ಮನೆ ತೊಳಿಯ...’ ಅಂತೊಂದು ಪಡೆನುಡಿಯಿದೆ ಕನ್ನಡದಲ್ಲಿ. ಸ್ವಲ್ಪ ಕುಹಕದ ನುಡಿ ಎಂದರೂ ಅಡ್ಡಿಯಿಲ್ಲ. ಮಾವನಾದವನ ಗ್ರಹಾಚಾರವನ್ನು ಇನ್ನೂ ಕೆಟ್ಟದಾಗಿಸಲು ವಕ್ಕರಿಸುವ ಹತ್ತನೇ ಗ್ರಹ ಎಂಬ (ಅಪ)ಕೀರ್ತಿ ಅಳಿಯನದ್ದು. ಆದರೆ ಅಳಿಯನೊಬ್ಬ ‘ಮನೆ ತೊಳಿಯ’ನಾಗದೆ ತನ್ನ ಮಾವನ ಉದ್ಯಮದ, ಉತ್ಪನ್ನದ ಕೀರ್ತಿಯನ್ನು ವಿಶ್ವದ ಮನೆಮನೆಗಳಲ್ಲೂ ಬೆಳಗಿಸಿದ ಯಶೋಗಾಥೆಯಾಂದಿದೆ, ಗೊತ್ತೇ ನಿಮಗೆ? ಅದೇ ಪಿಯರ್ಸ್‌ ಸಾಬೂನಿನ ಕಥೆ! ಈಗ್ಗೆ ಎರಡು ಶತಮಾನಗಳುದ್ದಕ್ಕೂ ಅಂತಾರಾಷ್ಟ್ರೀಯ ಖ್ಯಾತಿ ಮತ್ತು ಆರ್ಥಿಕವಾಗಿ ಲಾಭ ಗಳಿಸುತ್ತಲೇ ಮೆರೆದಿರುವ ಪಿಯರ್ಸ್‌ ಸೋಪಿನ ಮಹಾತ್ಮೆ!

ಪಿಯರ್ಸ್‌ ಸಾಬೂನಿನ ಆ ಪರಿಮಳ, ಬಣ್ಣ, ಆಕಾರ ಮತ್ತು ಅದರ ಚಿತ್ರಣ ನಮ್ಮ ಚಿತ್ತಭಿತ್ತಿಯಲ್ಲಿ ಮೂಡಿದಾಗ ಬರುವ ನೆನಪುಗಳ ಸರಮಾಲೆಯೇ ಸಾಕಲ್ಲ ಡೈರೆಕ್ಟಾಗಿ, ‘ಮಗುವಿನಂತೆ ನಿರ್ಮಲ ಮನಸ್ಸು, ಕೋಮಲ ಶರೀರ...’ದ ದಿನಗಳಿಗೆ ನಮ್ಮನ್ನು ಕರೆದೊಯ್ಯಲು? ಆ ಒಂದು ಕಾರಣವೇ ಧಾರಾಳ ಸಾಕಲ್ಲ ವಿಚಿತ್ರಾನ್ನದ ಒಂದು ಸಂಚಿಕೆಯನ್ನು ಪಿಯರ್ಸ್‌ ಸಾಬೂನಿನ ಪರಿಮಳದಿಂದ ಘಮಘಮಿಸಲು!

ಪಿಯರ್ಸ್‌ ಪರಿಮಳದ ನಶೆ ಏರಿಸಿಕೊಳ್ಳುತ್ತ ಈ ಪಿಯರ್ಸ್‌ ಪುರಾಣವನ್ನು ಪಠಿಸಿಬಿಡಿ.

*

ಇಸವಿ 1789. ಆಂಡ್ರ್ಯೂ ಪಿಯರ್ಸ್‌ ಎನ್ನುವ ಹೆಸರಿನ ಕ್ಷೌರಿಕನೊಬ್ಬ ಬ್ರಿಟನ್‌ನ ಯಾವುದೋ ಒಂದು ಹಳ್ಳಿಮೂಲೆಯಿಂದ ಲಂಡನ್‌ಗೆ ವಲಸೆ ಬಂದ. ಸೊಹೊ ಉಪನಗರದ ಗೆರ್ರಾಡ್‌ ಸ್ಟ್ರೀಟ್‌ನಲ್ಲೊಂದು ಸಲೂನ್‌ ಆರಂಭಿಸಿದ. ಆಗಿನ ಕಾಲಕ್ಕೆ ಪಾಷ್‌, ಫಾಷನೆಬಲ್‌ ರೆಸಿಡೆನ್ಷಲ್‌ ಏರಿಯಾ ಅದು. ಧನಿಕರ ಮನೆಗಳಿಗೇ ಹೋಗಿ ಕೇಶಮುಂಡನಸೇವೆ ಮಾಡುತ್ತಿದ್ದ ಪಿಯರ್ಸ್‌ಗೆ, ತುಂಬಾ ಮಂದಿ ಗಿರಾಕಿಗಳಿದ್ದರು. ಹಾಗೆಯೇ ತನ್ನ ಕ್ಷೌರದಂಗಡಿಯಲ್ಲೇ ಆತ ಕೆಲವು ಪೌಡರ್‌, ಕ್ರೀಮ್‌, ಲೋಷನ್‌ ಇತ್ಯಾದಿ ಪ್ರಸಾಧನಸಾಮಗ್ರಿಗಳನ್ನೂ ತಯಾರಿಸುತ್ತಿದ್ದ. ಸಿರಿವಂತರ ಫ್ಯಾಷನ್‌ ಖಯಾಲಿಯ ಲಾಭಪಡೆದು ತನ್ನ ಉತ್ಪನ್ನಗಳಿಂದ, ಅವರ ತ್ವಚೆಗೆ ಮೆರುಗನ್ನು ತರುತ್ತಿದ್ದ.

ಯಾಕೆ ಆ ಕಾಲದಲ್ಲೇ ಜನ ಅಷ್ಟೊಂದು ಬ್ಯೂಟಿ ಕಾನ್ಷಿಯಸ್‌ ಆಗಿದ್ದರೆಂದರೆ, ಕಪ್ಪುಮೈಯವರು-ಚರ್ಮಸುಕ್ಕಾದವರು ಇತ್ಯಾದಿ ಸಮಾಜದ ಕೆಳವರ್ಗದವರು, ಕೂಲಿನಾಲಿ ಮಾಡಿ ಬದುಕುವವರು, ಅವರಿಗಿಂತ ತಾವು ಶ್ರೇಷ್ಠ ಎಂಬ ಪ್ರತಿಷ್ಠೆಗೆ ತ್ವಚೆಯ ಅಂದ ಮತ್ತು ಮೆರುಗು ಸಹ ಒಂದು ಮಾನದಂಡವಾಗಿತ್ತು. ಆಂಡ್ರ್ಯೂ ಪಿಯರ್ಸ್‌ ಇದನ್ನು ಸೂಕ್ಷ್ಮವಾಗಿ ಗಮನಿಸಿ ಅಂತಹ ಚರ್ಮಪೋಷಣೆಗೆ ಅನುವಾಗುವ ಒಂದು ಸಾಬೂನನ್ನು ತಯಾರಿಸುವ ಸಂಕಲ್ಪಮಾಡಿದ. ಪ್ರಯೋಗ-ಪ್ರಯತ್ನಗಳು ಕೈಗೂಡಿ ಕೊನೆಗೂ ಒಂದು ಫಾರ್ಮುಲಾ ಕಂಡುಕೊಂಡ. ಸೋಪ್‌ ತಯಾರಿಕೆಯ ವೇಳೆ ಬೇಸ್‌ ಮಿಶ್ರಣವನ್ನು ಪೂರ್ಣವಾಗಿ ಕಶ್ಮಲರಹಿತವನ್ನಾಗಿ ಮಾಡಿ ಮತ್ತಷ್ಟು ಸಂಸ್ಕರಿಸಿ, ಆಮೇಲೆ ಅದಕ್ಕೆ ಹೂಗಳ ಸುಗಂಧದ್ರವ್ಯ ಸೇರಿಸಿ ಇನ್ನೊಮ್ಮೆ ಹಸನುಗೊಳಿಸಿ, ಉತ್ಕೃಷ್ಟ ಗುಣಮಟ್ಟದ ಮತ್ತು ನೋಡಲಿಕ್ಕೆ ಪಾರದರ್ಶಕವಾದ ಸಾಬೂನಿನ ಬಿಲ್ಲೆಯ ತಯಾರಿಯ ರಸವಿದ್ಯೆ ಪಿಯರ್ಸ್‌ಗೆ ಸಿದ್ಧಿಸಿತು. ಇವತ್ತಿಗೂ ಅದೇ ಫಾರ್ಮುಲಾವನ್ನು ಉಪಯೋಗಿಸುವ ‘ಪಿಯರ್ಸ್‌ ಸೋಪ್‌’ನ ಉದಯವಾಯಿತು!

ಆಂಡ್ರ್ಯೂ ಮಾತ್ರ ತನ್ನ ಕ್ಷೌರಿಕವೃತ್ತಿಯನ್ನೇ ಮುಂದುವರೆಸಿದ. ಸಾಬೂನುತಯಾರಿಕೆಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ತನ್ನ ಮಗ ಫ್ರಾನ್ಸಿಸ್‌ ಪಿಯರ್ಸ್‌ನಿಗೆ ವಹಿಸಿಕೊಟ್ಟ. ಆಕ್ಸ್‌ಫರ್ಡ್‌ ಸ್ಟ್ರೀಟ್‌ ಎದುರಿಗಿನ ಹೊಸಜಾಗಕ್ಕೆ ಅವರ ಉದ್ಯಮ ಸ್ಥಳಾಂತರವಾಯಿತು. ವ್ಯಾಪಾರ ಲಾಭದಾಯಕವಾಗಿ ಚೆನ್ನಾಗಿಯೇ ಇತ್ತು, ಆಂಡ್ರ್ಯೂ ನಿವೃತ್ತನಾಗಿ ಸೋಪ್‌ ತಯಾರಿಕಾ ಘಟಕಕ್ಕೆ ಫ್ರಾನ್ಸಿಸ್‌ ಪಿಯರ್ಸ್‌ ಸಂಪೂರ್ಣ ವಾರೀಸುದಾರನಾದ. ಗುಣಮಟ್ಟಕ್ಕೆ ಅತಿಪ್ರಾಶಸ್ತ್ಯ, ಹಾಗಾಗಿ ಉತ್ಪನ್ನದ ಬೆಲೆಯೂ ಸ್ವಲ್ಪ ಜಾಸ್ತಿಯೇ. ಆ ಕಾರಣದಿಂದಲೇ ಆಗ ಪಿಯರ್ಸ್‌ ಸೋಪಿಗೆ ಸೀಮಿತ ಮಾರುಕಟ್ಟೆ. ಶ್ರೀಮಂತ ವರ್ಗದವರು ಮಾತ್ರ ಪಿಯರ್ಸ್‌ ಬಳಸುವ ಪರಮೋಚ್ಚರು ಎಂಬ ಒಂದು ಅಲಿಖಿತ ಕಟ್ಟಳೆ. ಪಿಯರ್ಸ್‌ನ ವ್ಯಾಪಾರಕ್ಕೆ, ಹೇಳಿಕೊಳ್ಳುವಂಥಾ ಜಾಹೀರಾತಾಗಲೀ ಉಚಿತಕೊಡುಗೆಯಂಥ ಆಮಿಷಗಳಾಗಲೀ ಏನೂ ಬೇಡವಾಗಿತ್ತು. ಹೆಚ್ಚೆಂದರೆ ಯಾವಾಗಲೋ ಒಮ್ಮೆ, ಪ್ರತಿಯಾಂದು ಸೋಪ್‌ಕಾರ್ಟನ್‌ ಮೇಲೆ ಅಂಡ್ರ್ಯೂ ಪಿಯರ್ಸ್‌ನ ಹಸ್ತಾಕ್ಷರದೊಂದಿಗೆ ಮಾರಾಟದ ತಂತ್ರವನ್ನು ಅನುಸರಿಸಿದ್ದಿರಬಹುದು.

ಕಾಲಕ್ರಮೇಣ ಪಿಯರ್ಸ್‌ಸೋಪಿಗೆ ಪ್ರತಿಸ್ಪರ್ಧಿ ಉತ್ಪನ್ನಗಳು ಮಾರುಕಟ್ಟೆಗೆ ಬರತೊಡಗಿದುವು. ಮಧ್ಯಮವರ್ಗದವರೂ ದುಬಾರಿಸೋಪ್‌ ಖರೀದಿಸುವ ತಾಕತ್ತುಳ್ಳವರಾದರು. ತನ್ನ ಉದ್ಯಮದ ವಿಕಸನವಾಗದಿದ್ದರೆ ಕೊಂಪೆಸೇರುತ್ತದೆಯೆಂಬುದು ಫ್ರಾನ್ಸಿಸ್‌ಗೆ ಮನವರಿಕೆಯಾಗತೊಡಗಿತು. ರಸ್ಸೆಲ್‌ ಸ್ಟ್ರೀಟ್‌ನಲ್ಲೂ ಒಂದು ಆಫೀಸ್‌-ಕಂ-ಅಂಗಡಿಯನ್ನು ಆರಂಭಿಸಲಾಯಿತು. 1862ರ ಹೊತ್ತಿಗೆ ಸೋಪ್‌ ಕಾರ್ಖಾನೆಯ ಹೊಸ ಘಟಕವನ್ನು ಐಲ್‌ವರ್ತ್‌ ಎಂಬಲ್ಲಿ ತೆರೆದ ಫ್ರಾನ್ಸಿಸ್‌ ಆ ಘಟಕಕ್ಕೆ ತನ್ನ ಮಗ (ಅವನ ಹೆಸರೂ ಆಂಡ್ರ್ಯೂ)ನನ್ನು ಉತ್ತರಾಧಿಕಾರಿಯಾಗಿಸಿದ. ಅಂತೂ ಮಾರುಕಟ್ಟೆಯಲ್ಲಿ ಈಸಬೇಕು, ಇದ್ದುಜೈಸಬೇಕು... ಎನ್ನುವ ಅಂಶಕ್ಕೆ ಹೆಚ್ಚು ಒತ್ತುಕೊಟ್ಟು ಫ್ರಾನ್ಸಿಸ್‌ ಶ್ರಮಪಟ್ಟ.

ಆ ನಿರ್ಣಾಯಕಘಟ್ಟದಲ್ಲಿ ರಂಗಪ್ರವೇಶ ಮಾಡಿದವ ಥೋಮಸ್‌ ಜೆ. ಬೆರ್ರಾಟ್‌ ಎನ್ನುವ ಬಿಸಿರಕ್ತದ ತರುಣ. ಆತ ಬೇರಾರೂ ಅಲ್ಲ, ಫ್ರಾನ್ಸಿಸ್‌ ಪಿಯರ್ಸ್‌ನ ಅಳಿಯ (= ಮಗಳ ಗಂಡ)! ಕುಶಾಗ್ರಮತಿ, ಛಲವಾದಿ, ಸಾಹಸಿಗ ಮತ್ತು ಸಂಪನ್ಮೂಲ ವ್ಯಕ್ತಿ. ಪಿಯರ್ಸ್‌ ಉದ್ಯಮದ ಮಾರ್ಕೆಟಿಂಗ್‌ ಮತ್ತು ಸೇಲ್ಸ್‌ ಡಿಪಾರ್ಟ್‌ಮೆಂಟ್‌ಗಳಿಗೆ ಹೊಸಚೈತನ್ಯದ ಬಿರುಗಾಳಿಯನ್ನು ತಂದೇಬಿಟ್ಟ! ದುಬಾರಿಯಾದರೂ ಜಾಹೀರಾತುಗಳ ಮೂಲಕ ವ್ಯಾಪಕ ಪ್ರಚಾರ ಅವನ ಮೂಲಭೂತ ತತ್ವ. ಆ ಪ್ರಚಾರತಂತ್ರಗಳೋ ಒಂದೊಂದೂ ಅಮೋಘ ಮತ್ತು ಅಭೂತಪೂರ್ವವಾದಂಥವು. ಇಷ್ಟೊಂದು ರಿಸ್ಕ್‌ನ ಜುಗಾರಿವ್ಯವಹಾರ ನೋಡಿ ಸ್ವತಃ ಫ್ರಾನ್ಸಿಸ್ಸನಿಗೇ ತಲೆನೋಯಲಾರಂಭಿಸಿತು. ಅವನು ಪಿಯರ್ಸ್‌ ಉದ್ಯಮದಿಂದ ತನ್ನೆಲ್ಲ ಬಂಡವಾಳವನ್ನು ಹಿಂತೆಗೆದುಕೊಂಡು 4000 ಪೌಂಡನ್ನಷ್ಟೇ ಮಗ ಆಂಡ್ರ್ಯೂ ಮತ್ತು ಅಳಿಯ ಬೆರ್ರಾಟ್‌ರಿಗೆ ಸಾಲರೂಪದಲ್ಲಿ ಉಳಿಸಿ ಉದ್ಯಮದ ನೊಗವನ್ನು ಅವರಿಬ್ಬರ ಹೆಗಲಿಗೆ ವರ್ಗಾಯಿಸಿ ನಿವೃತ್ತನಾದ, ಏನಾದ್ರೂ ಮಾಡಿಕೊಳ್ಳಲಿ ಹೊಸ ತಲೆಮಾರಿನವರು... ಎಂದು.

ಬೆರ್ರಾಟ್‌ ತನ್ನ ಚಾಣಾಕ್ಷತನವನ್ನೆಲ್ಲ ಉಪಯೋಗಿಸಿ ಹೊಸಹೊಸ ಮಾರ್ಕೆಟಿಂಗ್‌ ವಿಧಾನಗಳನ್ನು ಅಳವಡಿಸಿಕೊಂಡ. ಕಾಲುಮಿಲಿಯದಷ್ಟು ಫ್ರೆಂಚ್‌ ಸೆಂಟೈನ್‌ ನಾಣ್ಯಗಳನ್ನು ತರಿಸಿ ಅವುಗಳ ಮೇಲೆ ‘ಪಿಯರ್ಸ್‌’ ಎಂಬ ಮುದ್ರೆಯಾತ್ತಿ ಚಲಾವಣೆಗೆ ತಂದ (ಆಗ ಬ್ರಿಟನ್‌ನಲ್ಲಿ, ಒಂದು ಪೆನ್ನಿಗೆ ಸಮವಾಗಿ ಒಂದು ಸೆಂಟೈನ್‌ ನಾಣ್ಯವೂ ನಡೀತಿತ್ತು ಮತ್ತು ವಿದೇಶೀ ನಾಣ್ಯಗಳ ಮೇಲೆ ಆರೀತಿ ಖಾಸಗಿ ಜಾಹೀರಾತು ಮುದ್ರಿಸುವುದಕ್ಕೆ ಕಾನೂನಿನ ಸಮ್ಮತಿಯಿತ್ತು; ಆಮೇಲೆ ಅದನ್ನು ನಿಷೇಧಿಸಲಾಯಿತು)! ಬ್ರಿಟನ್‌ನ ಮಹಾಮಹಾ ವೈದ್ಯರಿಂದ, ಚರ್ಮತಜ್ಞರಿಂದ, ಮೆಡಿಕಲ್‌ಕಾಲೇಜ್‌ ಪ್ರಾಂಶುಪಾಲರಿಂದ ಪಿಯರ್ಸ್‌ ಸೋಪ್‌ನ ಪ್ರಾಡಕ್ಟ್‌ ಎಂಡೋರ್ಸ್‌ಮೆಂಟ್‌ ಮಾಡಿಸಿದ. ಪತ್ರಿಕೆಗಳಲ್ಲಿ ಜಾಹೀರಾತುಗಳು, ಕರಪತ್ರಗಳು, ಪೋಸ್ಟರ್‌ಗಳು ಇತ್ಯಾದಿ ಸಾಂಪ್ರದಾಯಿಕ ವಿಧಾನಗಳನ್ನೂ ಅನುಸರಿಸಿದ. ಯುರೋಪ್‌ನ ಪ್ರಖ್ಯಾತ ನಟ-ನಟಿಯರು ಪಿಯರ್ಸ್‌ನ ರೂಪದರ್ಶಿಗಳಾದರು; ಒಂಥರಾ ವಿನ್‌-ವಿನ್‌ ಅಂದುಕೊಂಡು ಆ ರೂಪದರ್ಶಿಗಳೂ ಪಿಯರ್ಸ್‌ಗೆ ಮುಫತ್ತಾಗಿಯೇ ರೂಪದರ್ಶಿಸುತ್ತಿದ್ದರು!

Cleanliness is next to Godliness ಎನ್ನುವುದನ್ನು ನೀವು ಕೇಳಿರುತ್ತೀರಿ. ಇದೂ ಪಿಯರ್ಸ್‌ನ ಜಾಹೀರಾತಿನಿಂದ ಬಂದದ್ದೆಂಬ ವಿಚಾರ ಗೊತ್ತಿತ್ತೇ? ಯುರೋಪ್‌ನ ಮಾರುಕಟ್ಟೆಯ ನಂತರ ಅಮೆರಿಕೆಯತ್ತ ದೃಷ್ಟಿಯಿಟ್ಟ ಬೆರ್ರಾಟ್‌, ತನ್ನ ಸೋಪಿನ ಎಂಡೊರ್ಸ್‌ಮೆಂಟ್‌ಗೆ ಅಮೆರಿಕದಲ್ಲಿ ಆಗ ಅತ್ಯಂತಪ್ರಭಾವಿತ ಧರ್ಮಗುರುವಾಗಿದ್ದ ಹೆನ್ರಿ ವಾರ್ಡ್‌ ಬೀಚರ್‌ನ ಸಹಾಯ ಪಡೆದ. ಆ ಪಾದ್ರಿಯು ‘ಶುಚಿತ್ವವು ದೈವಿಕತೆಗೆ ಸೋಪಾನ, ಮತ್ತು ಅದಕ್ಕೆ ಪಿಯರ್ಸ್‌ ಸುಲಭಸಾಧನ...’ ಎಂದು ಫರ್ಮಾನು ಹೊರಡಿಸಿದ! ನ್ಯೂಯಾರ್ಕ್‌ ಹೆರಾಲ್ಡ್‌ ಪತ್ರಿಕೆಯ ಮುಖಪುಟದಲ್ಲೇ ಪಿಯರ್ಸ್‌ ಜಾಹೀರಾತು ಎಲ್ಲರ ಗಮನ ಸೆಳೆಯಿತು. ಟೈಮ್‌ ಮ್ಯಾಗಜಿನ್‌ನಲ್ಲಿ, ಶಿಶುಜನನದ ಶುಭವಾರ್ತೆ ಪ್ರಕಟಿಸುವವರಿಗೆ ಉಚಿತ ಪಿಯರ್ಸ್‌ ಗಿಫ್ಟ್‌ ಹ್ಯಾಂಪರ್‌ ತಲುಪಿಸುವ ವ್ಯವಸ್ಥೆ ಮಾಡಿಸಿದ. ಅಂತೂ ಪ್ರಚಾರಕಾರ್ಯದಲ್ಲಿ ಬೆರ್ರಾಟ್‌ ಯಾವ ‘ಕಲ್ಲನ್ನೂ ತಿರುಗಿಸದೇ’ ಇರಲಿಲ್ಲ.

ಸರ್‌ ಜಾನ್‌ ಎವರೆಟ್‌ ಮಿಲಾಯಿಸ್‌ ಎಂಬ ಪ್ರಖ್ಯಾತ ಬ್ರಿಟಿಷ್‌ ಚಿತ್ರಕಾರನ ಕಲಾಕೃತಿ ‘ಬಬಲ್ಸ್‌’ (ಆ ಕಲಾವಿದನ ಮೊಮ್ಮಗುವೇ ಸಾಬೂನಿನ ಗುಳ್ಳೆಗಳನ್ನು ದೃಷ್ಟಿಸುತ್ತ ಕುಳಿತಿರುವ ಚಿತ್ರ)ವನ್ನು ಹೇಗೋ ಪುಸಲಾಯಿಸಿ ಬೆರ್ರಾಟ್‌ ತನ್ನ ಪಿಯರ್ಸ್‌ ಸೋಪಿನ ಜಾಹೀರಾತಿಗೆ ಉಪಯೋಗಿಸಿದ. ಕಲಾಪ್ರಕಾರವೊಂದನ್ನು ಜಾಹೀರಾತಾಗಿ ಬಳಸಿದ್ದಕ್ಕೆ ಅವನಿಗೆ ಸಾಕಷ್ಟು ಛೀಮಾರಿಯೂ ಕೇಳಿಬಂತು. ಆದರೆ ಯಾವುದಕ್ಕೂ ಜಗ್ಗದ ಆ ‘ಅಸಾಧ್ಯ ಅಳಿಯ’ ಅದ್ಭುತ ಛಲವಾದಿಯಾಗಿ ವಿಶ್ವದ ಒಂದೊಂದೇ ದೇಶಗಳಲ್ಲೂ ಪಿಯರ್ಸ್‌ಅನ್ನು ಪರಿಚಯಿಸಿದ. ‘ಮಿಸ್‌ ಪಿಯರ್ಸ್‌’ ಸ್ಪರ್ಧೆಗಳನ್ನು ಏರ್ಪಡಿಸಿದ. 19ನೇ ಶತಮಾನದ ಕೊನೆಯ ವರ್ಷಗಳಲ್ಲಿ ‘ಪಿಯರ್ಸ್‌ ವಾರ್ಷಿಕ ಸಂಚಿಕೆ’ ಎಂಬ ಆಕರ್ಷಕ ಪುಸ್ತಕ ಸಹ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿತ್ತು.

ಇವತ್ತಿನ ಜಾಹೀರಾತು ತಂತ್ರಗಳೆಲ್ಲ ಏನಿವೆಯೋ ಅವೆಲ್ಲವೂ ಒಂದಲ್ಲಒಂದು ವಿಧದಲ್ಲಿ ಬೆರ್ರಾಟ್‌ನ ಯೋಜನೆಗಳದೇ ರೂಪಗಳಾಗಿವೆ. ಮುದ್ದಾದ ಮಕ್ಕಳನ್ನು, ಪ್ರಾಣಿಗಳನ್ನು, ಹೂವುಗಳನ್ನು, ಹೂವಿನಂಥ ಸುಂದರಿಯರನ್ನು ಜಾಹೀರಾತುಗಳಲ್ಲಿ ಬಳಸತೊಡಗಿದ್ದು ಬೆರ್ರಾಟ್‌ ಅಲ್ಲದೆ ಬೇರಾರೂ ಅಲ್ಲ. ಹಾಗೆಯೇ ಜಾಹೀರಾತಿನ ಚಿತ್ರಗಳು ಕಾಲಕಾಲಕ್ಕೆ ಬದಲಾಗುತ್ತಿದ್ದರೂ Matchless for the complexion, Good morning! Have you used Pears Soap? - ಮುಂತಾದ ಸರಳ ಸ್ಲೋಗನ್‌ಗಳು ಪಿಯರ್ಸ್‌ ಸಾಬೂನನ್ನು ಹೊಸ ಸಹಸ್ರಮಾನದವರೆಗೂ ಎಳೆದುಕೊಂಡು ಬಂದಿವೆ! 20ನೇ ಶತಮಾನದ ಆರಂಭದಲ್ಲೇ ಪಿಯರ್ಸ್‌ ಸೋಪ್‌ ಉತ್ಪಾದನೆ ಮತ್ತು ವಿತರಣೆಯ ಹಕ್ಕುಗಳನ್ನು ಯುನಿಲಿವರ್‌ ಕಂಪೆನಿ ಕೊಂಡುಬಿಟ್ಟಿತಾದರೂ ಜಾಹೀರಾತುಗಳ ವಿಷಯದಲ್ಲಿ ಅದು ಬೆರ್ರಾಟ್‌ನ ಹೆಜ್ಜೆಗಳನ್ನೇ ಅನುಸರಿಸಿತು. 1914ರಲ್ಲಿ ಬೆರ್ರಾಟ್‌ ಅಸುನೀಗಿದಾಗ ಪತ್ರಿಕೆಗಳು, ಜಾಹೀರಾತುಕಂಪೆನಿಗಳು ಭಾವಪೂರ್ಣ ಕಂಬನಿಗರೆದುವು. ಪಿಯರ್ಸ್‌ ಸಾಬೂನಿನ ಘಮಘಮ ಮಾತ್ರ ಇನ್ನೂಇನ್ನೂ ಹೆಚ್ಚು ಪಸರಿಸಿತು.

ಅಂದಹಾಗೆ ನಾವೆಲ್ಲ, ಅಥವಾ ನಮ್ಮ ಪೈಕಿ ಹೆಚ್ಚಿನವರು, ಬಳಸಿರಬಹುದಾದ ಪಿಯರ್ಸ್‌ ಸೋಪ್‌ನ ಭಾರತೀಯ ಅವತಾರ - ‘ಹಿಂದುಸ್ಥಾನ್‌ ಲಿವರ್‌ನ ಉತ್ಕೃಷ್ಟ ಉತ್ಪಾದನೆ’ಯ ಗುಣವಿಶೇಷಗಳೇನು ಎಂಬುದು ಲಿವರ್‌ ವೆಬ್‌ಸೈಟಲ್ಲಿ ಈ ರೀತಿ ದಾಖಲಾಗಿದೆ: Introduced in India in 1902, Pears soap has no equal. It is gentle enough, even for babys skin. Pears is manufactured like any other soap, but unlike in conventional soaps, no animal fat is used, and the glycerine is retained within the soap. That is the cause if its unique transparency. After manufacturing, the soap is mellowed under controlled conditions over weeks. At the end of this maturing process, it is individually polished and packed in cartons.

*

ಇದಿಷ್ಟು ಪಿಯರ್ಸ್‌ ಪುರಾಣ; ಇದು ಸೋಪಿನ ಜಾಹೀರಾತೆಂದೋ ಅಥವಾ ಈ ಸಂಚಿಕೆಯನ್ನು ಸೋಪ್‌ಕಂಪೆನಿ ಪ್ರಾಯೋಜಿಸಿದ್ದೆಂದೋ ತಪ್ಪುಅರ್ಥಮಾಡಿಕೊಳ್ಳಬೇಡಿ ಮತ್ತೆ! ನಮಗೆಲ್ಲ ಪರಿಚಯವಿದ್ದದ್ದೇ ಆದ ದಿನಬಳಕೆಯ ವಸ್ತುವೊಂದರ ಇಂದಿನ ಖ್ಯಾತಿ-ಕೀರ್ತಿಗಳ ಹಿಂದೆ ಏನೆಲ್ಲ ಘಟನಾವಳಿ-ಚರಿತ್ರೆ-ಸಾಹಸಗಾಥೆಗಳಿವೆ ಎಂಬುದರ ಅರಿವಾಗುವಂತೆ ಇವತ್ತು ನಾನು ಅಂಕಣಕ್ಕೆ ಈ ವಿಷಯವನ್ನಾಯ್ದುಕೊಂಡದ್ದು.

ನಿಮ್ಮ ಅನಿಸಿಕೆ, ಅಭಿಪ್ರಾಯ, ಅನುಭವಗಳನ್ನು ಬರೆದುತಿಳಿಸುವಿರಾದರೆ ವಿಳಾಸ - srivathsajoshi@yahoo.com.

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more