• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪವಿತ್ರಾನ್ನ, ಪವಿತ್ರಕ ಮತ್ತು ದರ್ಭೆಹುಲ್ಲು

By Staff
|
Srivathsa Joshi *ಶ್ರೀವತ್ಸ ಜೋಶಿ

Darbha (Kusha) grass plantಮೊನ್ನೆ ಭಾರತಪ್ರವಾಸದ ವೇಳೆಗೆ ಸರಿಯಾಗಿ ‘ಉಪಾಕರ್ಮ’ವೂ ಒದಗಿಬಂದಿತ್ತು ; ಹೇಗೂ ಊರಿಗೆ ಹೋಗಿದ್ದೆನಾದ್ದರಿಂದ ನಮ್ಮೂರಿನ ಪರಶುರಾಮ ದೇವಸ್ಥಾನದಲ್ಲಿ ನಡೆಯುವ ಸಾಮೂಹಿಕ ಉಪಾಕರ್ಮ ಸಮಾರಂಭದಲ್ಲಿ ಭಾಗವಹಿಸಿ ಕೃತಾರ್ಥನಾಗಬೇಕೆಂದು ಒಂದು ಪ್ಲಾನ್‌ ಹಾಕಿದೆ, ಮಾತ್ರವಲ್ಲ ಆ ಪ್ಲಾನನ್ನು ಇಂಪ್ಲಿಮೆಂಟೂ ಮಾಡಿದೆ. ಉಪಾಕರ್ಮದಂಥ ಧಾರ್ಮಿಕವಿಧಿಯಲ್ಲಿ, ಅದೂ ನಮ್ಮೂರಿನ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ನಡೆಯುವಂಥದ್ದರಲ್ಲಿ ಬಹಳ ವರ್ಷಗಳ ನಂತರ ಈಗೊಮ್ಮೆ ಪಾಲ್ಗೊಳ್ಳುವುದು ನನ್ನ ಒಂದು ಉದ್ದೇಶವಾಗಿದ್ದರೆ, ಅವತ್ತಾದರೆ ದೇವಸ್ಥಾನಕ್ಕೆ ಊರವರು ತುಂಬ ಮಂದಿ ಬಂದಿರುತ್ತಾರೆ, ಅವರೆಲ್ಲ ನನಗೆ ಒಂದೇಕಡೆಯಲ್ಲಿ ಭೇಟಿಯಾಗುತ್ತಾರೆ ಎಂಬುದು ಇನ್ನೊಂದು.

ಹಾಗೆ ಭೇಟಿಯಾದವರ ಪೈಕಿ ನಮ್ಮೂರಿನ ಹಿರಿಯ ಹಿತೈಷಿಯಾಬ್ಬರಿಗೆ ‘ವಿಚಿತ್ರಾನ್ನ’ ಪುಸ್ತಕವನ್ನು ತೋರಿಸಿದಾಗ ಅದನ್ನು ನೋಡಿ ಮೆಚ್ಚಿದ ಅವರು ‘ಪವಿತ್ರಾನ್ನ’ ಎಂದರು! ಯಾಕೆ ಎಂದು ಕೇಳಿದ್ದಕ್ಕೆ, ‘ಉಪಾಕರ್ಮವಿಧಿಗಾಗಿ ಈಗಷ್ಟೆ ದರ್ಭೆಹುಲ್ಲಿನ ಪವಿತ್ರಕವನ್ನು ಧರಿಸಿದ್ದೇನೆ, ಕೈಬೆರಳಿಗೆ ಪವಿತ್ರಕವಿರುವಾಗಲೇ ವಿಚಿತ್ರಾನ್ನ ಪುಸ್ತಕವನ್ನು ಕೈಗೆತ್ತಿಕೊಂಡೆನಾಗಿ ಅದನ್ನು ಪವಿತ್ರಾನ್ನ ಎಂದು ಕರೆದೆ; ಬಹಳ ಚೆನ್ನಾಗಿದೆ ಎಂದು ಹರಸಿದಂತೆಯೂ ಆಯ್ತು’ ಎಂದು ಸಮಜಾಯಿಸಿದರು!

ಅವರ ಸಮಯಪ್ರಜ್ಞೆಯ ಉತ್ತರ ಮತ್ತು ಆಶೀರ್ವಾದವೇನೊ ಒಳ್ಳೆಯದೇ ಆಯ್ತು, ಜತೆಜತೆಯಲ್ಲೇ ನನಗೆ ಲೇಖನಕ್ಕೊಂದು ವಿಷಯವೂ ಸಿಕ್ಕಿತು! ಪವಿತ್ರಕ(ಪವಿತ್ರಮ್‌ ಎಂದೂ ಹೇಳುತ್ತಾರೆ) ಧರಿಸಿ ಓದಿದರೆ ವಿಚಿತ್ರಾನ್ನ ಪವಿತ್ರಾನ್ನವಾಗುತ್ತದಾದರೆ ಆ ಪವಿತ್ರಕದ ದರ್ಭೆ ಹುಲ್ಲೇ ವಿಚಿತ್ರಾನ್ನದ್ದೊಂದು ಗ್ರಾಸ (grass ?) ಏಕಾಗಬಾರದು? ಹಾಗಾಗಿ ಈವಾರ ದರ್ಭೆಹುಲ್ಲಿನ ಬಗ್ಗೆ ಟಿಪಿಕಲ್‌ ವಿಚಿತ್ರಾನ್ನ ಶೈಲಿಯಲ್ಲಿ ಒಂದಿಷ್ಟು ಮಾಹಿತಿ ಸಂಗ್ರಹ. ಮುಖ್ಯವಾಗಿ ಕೆಲವು ಪೌರಾಣಿಕ ಕಥಾಪ್ರಸಂಗಗಳ ಉಲ್ಲೇಖ.

*

ಉಪಾಕರ್ಮವೂ ಸೇರಿದಂತೆ ಧಾರ್ಮಿಕ ವಿಧಿವಿಧಾನಗಳಲ್ಲಿ, ಪೂಜೆಪುನಸ್ಕಾರಗಳಲ್ಲಿ, ಶ್ರಾದ್ಧವೇ ಮೊದಲಾದ ಅಪರಕರ್ಮ ಕ್ರಿಯೆಗಳಲ್ಲಿಯೂ ಸಹ ಉಪಯೋಗವಾಗುವ ವಸ್ತು ದರ್ಭೆ ಹುಲ್ಲು. ಸಂಸ್ಕೃತದಲ್ಲಿ ದರ್ಭ ಅಥವಾ ಕುಶ. ದೂರ್ವೆ, ತುಳಸಿ, ಬಿಲ್ವಪತ್ರೆ ಇತ್ಯಾದಿಯಂತೆ ಅಥವಾ ಅವುಗಳಿಗಿಂತಲೂ ಸ್ವಲ್ಪ ಹೆಚ್ಚು ಧಾರ್ಮಿಕ, ದೈವಿಕ ಮಹತ್ವದ ಸಸ್ಯ. ಸೀಮಂತದಿಂದ ಹಿಡಿದು(ಅಂದರೆ ಮಗು ಇನ್ನೂ ಗರ್ಭಾಶಯದಲ್ಲಿದ್ದಾಗಿನಿಂದ), ಚೂಡಾಕರ್ಮ, ಉಪನಯನ, ವಿವಾಹ ಇತ್ಯಾದಿಯಷ್ಟೇ ಅಲ್ಲದೆ ಔರ್ಧ್ವದೈಹಿಕ ಸಂಸ್ಕಾರಗಳಲ್ಲೂ ದರ್ಭೆಹುಲ್ಲಿಗೆ ವಿಶಿಷ್ಟ ಸ್ಥಾನವಿದೆ. ಹಾಗಾಗಿಯೇ ಪುರಾತನ ಕಾಲದಿಂದಲೂ ಅದೊಂದು ಪಾವಿತ್ರ್ಯ-ಪರಿಶುದ್ಧತೆಗಳ ಸಂಕೇತವಾಗಿ, ಮನುಷ್ಯನ ಧಾರ್ಮಿಕ ನಂಬಿಕೆಗಳಲ್ಲಿ ಹಾಸುಹೊಕ್ಕಾಗಿ ಮುಂದುವರಿದು ಬಂದಿದೆ. ಒಟ್ಟಿನಲ್ಲಿ ಪೂಜ್ಯಭಾವ ತರಿಸುವ ಅದ್ಭುತವಾದ ತಾಕತ್ತು ದರ್ಭೆ ಹುಲ್ಲಿಗಿದೆ.

ದರ್ಭೆಹುಲ್ಲಿನ ಸಸ್ಯಶಾಸ್ತ್ರೀಯ ಹೆಸರು Poa Cynosuroides. ಹೊಳೆಬದಿಯಲ್ಲಿ, ನೀರಿನ ಒರತೆಯಿರುವ ಜೌಗುಪ್ರದೇಶಗಳಲ್ಲಿ ಪೊದೆಪೊದೆಯಾಗಿ ಬೆಳೆಯುವ ಒಂದು ಸಸ್ಯಪ್ರಭೇದ. ದೇಹಕ್ಕೆ ತಂಪು ಕೊಡುವ ‘ಕುಶ ತೈಲ’ದ ತಯಾರಿಯಲ್ಲಿ ಬಳಕೆಯಾಗುವ ದರ್ಭೆ ಹುಲ್ಲು ಔಷಧೀಯ ಗುಣಗಳನ್ನೂ ಹೊಂದಿದೆ.

Mat made of Darbha grassಪುರಾಣಕಾಲದ ಋಷಿಮುನಿಗಳು ದರ್ಭೆಹುಲ್ಲಿನ ಚಾಪೆಯ ಮೇಲೆ ಕುಳಿತೇ ತಪಸ್ಸನ್ನಾಚರಿಸುತ್ತಿದ್ದರು; ಯಜ್ಞಯಾಗಾದಿಗಳ ವೇಳೆಯೂ ಅವರ ಆಸನ ಅದೇ(ಆ ಕುಶಾಸನವೇ ಇಂಗ್ಲಿಶ್‌ನಲ್ಲಿ cushion ಆಯ್ತೇ ಎನ್ನುವುದು ಭಾಷಾಶಾಸ್ತ್ರ ಕೋವಿದರಿಗೆ ಗ್ರಾಸವಾಗುವ ವಿಚಾರ). ಹಾಗೆಯೇ ಕೈಬೆರಳಿಗೆ ಧರಿಸಿಕೊಳ್ಳಲು ದರ್ಭೆಹುಲ್ಲಿನ ಪವಿತ್ರಕ ಮಾತ್ರವಲ್ಲದೆ ಇನ್ನಿತರ ಪೂಜಾಸಾಮಗ್ರಿಯನ್ನು, ವಸ್ತುವಿಷಯಗಳನ್ನು ಶುಚಿಗೊಳಿಸುವುದಕ್ಕಾಗಿ ದರ್ಭೆಹುಲ್ಲಿಂದ ಮಾಡಿದ ‘ಕೂರ್ಚ’ವನ್ನು ಬಳಸುತ್ತಿದ್ದರು. ಬೌದ್ಧಧರ್ಮದಲ್ಲೂ ದರ್ಭೆ ಹುಲ್ಲಿಗೆ ಬಹಳಷ್ಟು ಪ್ರಾಧಾನ್ಯವಿದೆ, ಪೂಜ್ಯಭಾವವಿದೆ. ಬೌದ್ಧ ಧರ್ಮದ ವಿಧಿವಿಧಾನಗಳಲ್ಲಿ ದರ್ಭದ ಬಳಕೆ ವಿಪುಲವಾಗಿದೆ.

ದರ್ಭೆಹುಲ್ಲು ಏಕೆ ಪವಿತ್ರ, ಪರಿಶುದ್ಧ?

ದರ್ಭೆಹುಲ್ಲಿನ ಹುಟ್ಟಿನ ಬಗ್ಗೆ ಒಂದು ಕಥೆಯಿದೆ. ಒಮ್ಮೆ ದೇವೇಂದ್ರನು ವೃತ್ರಾಸುರ ಎಂಬ ರಾಕ್ಷಸನ ವಿರುದ್ಧ ಯುದ್ಧಮಾಡಬೇಕಾಗಿ ಬರುತ್ತದೆ. ಸಾಮಾನ್ಯವಾದ ಅಸ್ತ್ರಗಳಾವುವಕ್ಕೂ ಆ ಅಸುರ ಬಗ್ಗದಿದ್ದಾಗ ಕೊನೆಯದಾಗಿ ಇಂದ್ರ ತನ್ನ ಟ್ರಂಪ್‌ಕಾರ್ಡ್‌ ವಜ್ರಾಯುಧವನ್ನೇ ಪ್ರಯೋಗಿಸಬೇಕಾಗುತ್ತದೆ. ಊಹೂಂ, ವೃತ್ರಾಸುರನ ದೈತ್ಯಕಾಯದ ಮುಂದೆ ವಜ್ರಾಯುಧವೂ ಏನೇನೂ ಸಾಲದಾಗುತ್ತದೆ. ಇಂದ್ರ ಸೋಲಿನಂಚಿನಲ್ಲಿರುವುದನ್ನು ಸ್ವತಃ ಬ್ರಹ್ಮನೇ ಗಮನಿಸಿ, ಇಂದ್ರನ ವಜ್ರಾಯುಧವನ್ನು ತನ್ನ ಕಮಂಡಲುವಿನಲ್ಲಿ ಅದ್ದಿ ತೆಗೆದು ಮತ್ತೆ ಪ್ರಯೋಗಿಸುವಂತೆ ಇಂದ್ರನಿಗೆ ಆದೇಶಿಸುತ್ತಾನೆ. ಇದೀಗ ಹೆಚ್ಚು ಪವರ್‌ಫುಲ್‌ ಆದ ಆ ವಜ್ರಾಯುಧವು ವೃತ್ರಾಸುರನನ್ನು ಘಾಸಿಗೊಳಿಸುವುದರಲ್ಲಿ ಯಶಸ್ವಿಯಾಗುತ್ತದೆ, ಅಷ್ಟಾದರೂ ವೃತ್ರಾಸುರ ಸಾಯುವುದಿಲ್ಲ. ಗಾಯಗೊಂಡು ಇನ್ನಷ್ಟು ಕ್ರುದ್ಧನಾದ ಅವನು ಸೇಡುತೀರಿಸಲು ಹೊರಡುತ್ತಾನೆ. ಬ್ರಹ್ಮಕಮಂಡಲುವಿನ ನೀರಿನಿಂದಾಗಿ ವಜ್ರಾಯುಧಕ್ಕೆ ವಿಶೇಷಶಕ್ತಿ ಬಂದದ್ದೆಂದ ಮೇಲೆ ಜಗತ್ತಿನ ಜಲರಾಶಿಯನ್ನೆಲ್ಲ ಅಶುದ್ಧಗೊಳಿಸಬೇಕೆಂದುಕೊಳ್ಳುತ್ತಾನೆ. ತನ್ನ ರಕ್ತಸಿಕ್ತ ಮೈಯನ್ನು ನದಿ ಕೆರೆ ಸರೋವರಗಳಲ್ಲಿ ಮುಳುಗಿಸುತ್ತ ನೀರನ್ನು ಕಲುಶಿತಗೊಳಿಸತೊಡಗುತ್ತಾನೆ. ವೃತ್ರಾಸುರನ ಈ ಅಟಾಟೋಪವನ್ನು ಕಂಡ ಬ್ರಹ್ಮ ಉಳಿದ ಶುದ್ಧ ಜಲರಾಶಿಯನ್ನೆಲ್ಲ ದರ್ಭೆಹುಲ್ಲನ್ನಾಗಿಸುತ್ತಾನೆ.

ದರ್ಭೆ ಹುಲ್ಲು ಪವಿತ್ರವಾದ ಪರಿಶುದ್ಧವಾದ ಜಲಕ್ಕೆ ಸಮಾನವಾದುದು ಎಂಬ ನಂಬಿಕೆಯ ಹಿನ್ನೆಲೆ ಆ ಕಥೆ. ಪರಿಶುದ್ಧಕಾರಕ ಗುಣ ದರ್ಭೆಗಿರುವುದರಿಂದಲೇ, ನೀರಿನಿಂದ ಶುದ್ಧಗೊಳಿಸಲಾಗದ ವಸ್ತುವನ್ನು ದರ್ಭೆಹುಲ್ಲಿಂದ ಶುದ್ಧಗೊಳಿಸುವ ಪರಿಪಾಠವಿದೆ. ಉದಾಹರಣೆಗೆ ಹೋಮಹವನಾದಿಗಳಿಗೆ ಬಳಸುವ ಘೃತ(ತುಪ್ಪ)ವನ್ನು ನೀರಿನಿಂದ ಶುದ್ಧಿಗೊಳಿಸಲಾಗದಷ್ಟೇ? ಅದಕ್ಕಾಗಿ ದರ್ಭೆಹುಲ್ಲಿನ ಎರಡು ಕಡ್ಡಿಗಳನ್ನು ತುಪ್ಪದ ಪಾತ್ರೆಯಲ್ಲಿ ಅದ್ದಿ ತೆಗೆದಾಗ ಆ ತುಪ್ಪ ಪರಿಶುದ್ಧವಾಗುತ್ತದೆ ಎಂಬ ನಂಬಿಕೆ. ಪೂಜಾವಿಧಾನಗಳಲ್ಲಿ, ಸಂಕಲ್ಪಮಾಡುವಾಗ ಉಂಗುರಬೆರಳಿಗೆ ದರ್ಭೆಹುಲ್ಲಿನ ಉಂಗುರ (ಪವಿತ್ರಕ)ವನ್ನು ಧರಿಸಿಕೊಳ್ಳುವುದರ ಉದ್ದೇಶವೂ ಪೂಜೆಗೆ ಪಾವಿತ್ರ್ಯ, ಪರಿಶುದ್ಧತೆಯನ್ನು ಕಲ್ಪಿಸುವುದೇ ಆಗಿದೆ. ಇನ್ನೊಂದು ಉದಾಹರಣೆ - ಸೂರ್ಯಗ್ರಹಣ ಚಂದ್ರಗ್ರಹಣಗಳ ವೇಳೆ ಆಹಾರ ತಯಾರಿಕೆ, ಸೇವನೆ ಇತ್ಯಾದಿಯೆಲ್ಲ ವರ್ಜ್ಯ, ಮಾತ್ರವಲ್ಲ ತಯಾರಿಸಿಟ್ಟ ಆಹಾರಪದಾರ್ಥಗಳೂ ಅಶುದ್ಧವಾಗುತ್ತವೆ ಎಂಬ ಪ್ರತೀತಿಯಿದೆ (ಇದರಲ್ಲಿ ಸ್ವಲ್ಪಾಂಶ ವೈಜ್ಞಾನಿಕ ತಥ್ಯವೂ ಇದೆ); ಉಪ್ಪಿನಕಾಯಿಯ ಭರಣಿಯ ಮೇಲೆ, ಇನ್ನಿತರ ಲಾಂಗ್‌ ಟರ್ಮ್‌ ಆಹಾರವಸ್ತುಗಳ ಪಾತ್ರೆಗಳ ಮೇಲೆ ದರ್ಭೆಹುಲ್ಲಿನ ಕಡ್ಡಿಗಳನ್ನಿಡುವ ಸಂಪ್ರದಾಯ ಗ್ರಾಮೀಣಪ್ರದೇಶಗಳಲ್ಲಿ, ತೀರಾ ಸಂಪ್ರದಾಯಸ್ಥರ ಮನೆಗಳಲ್ಲಿ ಈಗಲೂ ಕಂಡುಬರುತ್ತದೆ!

ದರ್ಭೆಹುಲ್ಲಿನ ಮೂಲ

ದರ್ಭೆಹುಲ್ಲಿನ ಉಗಮದ ಬಗ್ಗೆ ಇನ್ನೊಂದು ಕಥೆ ಸಮುದ್ರಮಥನದ ಸಂದರ್ಭದಲ್ಲಿ ಬರುತ್ತದೆ. ಸಮುದ್ರಮಥನದ ಕಥೆ ನಮಗೆಲ್ಲ ಗೊತ್ತಿದ್ದದ್ದೇ. ಮಂದರಪರ್ವತವನ್ನೇ ಕಡಗೋಲನ್ನಾಗಿ ಮಾಡಿ, ಸರ್ಪರಾಜ ವಾಸುಕಿಯನ್ನು ಕಡಗೋಲಿಗೆ ಹಗ್ಗವನ್ನಾಗಿಸಿ ದೇವದಾನವರು ಸೇರಿ ಕ್ಷೀರಸಾಗರವನ್ನು ಕಡೆದದ್ದು, ಕಡೆವಾಗ ಮೊದಲು ಹೊರಬಂದ ವಿಷವನ್ನು ಪರಮೇಶ್ವರನು ಗುಟುಕರಿಸಿದ್ದು, ಅದಾದ ಮೇಲೆ ಸಮುದ್ರಮಥನ ಮುಂದುವರಿದು ಲಕ್ಷ್ಮಿ, ಚಂದ್ರ, ಐರಾವತ, ಉಚ್ಛೈಶ್ರವವೇ ಮೊದಲಾಗಿ ಹಲವಾರು ಅನರ್ಘ್ಯ ಅಮೂಲ್ಯ ವಸ್ತುಗಳು ಹೊರಬಂದದ್ದು, ಕೊನೆಗೆ ಅಮೃತಕಲಶವೂ ಹೊರಬಂದು ಅದರ ಬಟವಾಡೆಯ ವಿಷಯದಲ್ಲಿ ಸುರಾಸುರರ ಮಧ್ಯೆ ಜಗಳ ಉಂಟಾದದ್ದು, ಮಹಾವಿಷ್ಣು ಮೋಹಿನಿರೂಪದಲ್ಲಿ ಬಂದು ಅದರ ಬಗೆಹರಿಸಿದ್ದು - ಈ ಎಲ್ಲ ಘಟನೆಗಳೂ ನಮ್ಮ ಕಣ್ಮುಂದೆಯೇ ನಡೆದುವೋ ಎನ್ನುವಷ್ಟು ಬಾಯಿಪಾಠವಾಗಿಹೋಗಿದೆ ನಮಗೆ ಆ ಕಥೆ. ಬಹುಷಃ ಅಮರಚಿತ್ರಕಥೆ ಪುಸ್ತಕಗಳನ್ನೋದಿದ, ಟಿವಿ ಧಾರಾವಾಹಿಗಳನ್ನು ನೋಡಿದ ಪ್ರಭಾವವಿರಬಹುದು.

ಸಮುದ್ರಮಥನದ ವೇಳೆ ಕಡಗೋಲಾದ ಮಂದರಪರ್ವತಕ್ಕೆ ಅಧಾರವಾಗಿದದ್ದು ಮಹಾವಿಷ್ಣುವಿನ ಕೂರ್ಮಾವತಾರ. ಆಮೆಯ ಚಿಪ್ಪಿನ ಮೇಲೆ ಮಂದರಪರ್ವತವಿದ್ದದ್ದಲ್ಲವೇ? ದೈತ್ಯಶಕ್ತಿಯ ದೈತ್ಯರು ಮತ್ತು ದೇವಾನುಗ್ರಹಬಲದ ದೇವತೆಗಳು ಶಕ್ತಿಮೀರಿ ಮಥಿಸಿದ್ದೆಂದ ಮೇಲೆ ಬಡಪಾಯಿ ಆಮೆ(ಅದು ಮಹಾವಿಷ್ಣುವೇ ಆಗಿದ್ದರೂ) ಗತಿ ಹೇಗಾಗಿರಬೇಡ? ಪರ್ವತದ ಘರ್ಷಣೆಯಿಂದಾಗಿ ಆಮೆಯ ಬೆನ್ನಿನ ಕೆಲ ರೋಮಗಳು ಉದುರಿದವಂತೆ, ಕ್ರಮೇಣ ಸಮುದ್ರತೀರ ಸೇರಿದ ಅವು ಹುಲ್ಲಾಗಿ ಬೆಳೆಯತೊಡಗಿದವಂತೆ. ಅಮೃತದ ಕೆಲ ಬಿಂದುಗಳೂ ಅದರ ಮೇಲೆ ಬಿದ್ದುದರಿಂದ ವಿಶೇಷವಾದ ಅಮರತ್ವ, ಪಾವಿತ್ರ್ಯ, ದೈವಿಕತೆ ಪ್ರಾಪ್ತಿಯಾಯ್ತು; ಯುಗಯುಗಗಳಿಂದಲೂ ಪವಿತ್ರವೆನಿಸಿಕೊಂಡು ಬಂದಿರುವ ದರ್ಭೆಹುಲ್ಲಿನ ಸೃಷ್ಟಿಯಾಯಿತು!

ಹರಿತವಾದ ಅಲಗು - ಕುಶಾಗ್ರಮತಿ

ದರ್ಭೆ ಹುಲ್ಲಿನ ಅಲಗು ಮತ್ತು ತುದಿ ಸಹ ಬಹಳ ಹರಿತವಾಗಿರುತ್ತದೆ. ಬೌದ್ಧಿಕಮಟ್ಟದಲ್ಲಿ ಹರಿತವಾಗಿರುವವರನ್ನು ‘ಕುಶಾಗ್ರಮತಿ’ ಎನ್ನುವುದು ಇದೇ ಕಾರಣಕ್ಕೆ. ಸಂಸ್ಕೃತದಲ್ಲಿ ಕುಶಲ, ಕೌಶಲ್ಯ (skill) ಇತ್ಯಾದಿ ಪದಗಳ ಮೂಲವೂ ‘ಕುಶ’ ಮತ್ತು ಅದರ ಹರಿತವಾದ ಅಲಗು. ಗುರುವಿಗೆ ಕುಶ(ದರ್ಭೆ) ಕಡ್ಡಿಗಳನ್ನೊದಗಿಸುವ ಶಿಷ್ಯ ಕುಶಲ ಎನಿಸಿಕೊಳ್ಳುತ್ತಾನೆ. ಗುರುವಿನ ವಿಶೇಷ ಕೃಪೆಗೆ ಪಾತ್ರನಾಗಿ ಆತ ಕುಶಲನಾಗಿಯೂ ಇರುತ್ತಾನೆ!

ನಾಗರಹಾವಿನ ನಾಲಗೆ ಸೀಳಿದಂತೆ ಕಾಣುವುದರ(ನೆನಪಿಸಿಕೊಳ್ಳಿ: ಪಂಜೆ ಮಂಗೇಶರಾಯರ ಕವಿತೆಯಲ್ಲಿನ ‘ಎರಡೆಳೆ ನಾಲಗೆ ಇದ್ದರೂ ಸುಮ್ಮಗೆ...’ ಸಾಲನ್ನು) ಹಿಂದೆಯೂ ದರ್ಭೆಹುಲ್ಲಿಗೆ ಸಂಬಂಧಿಸಿದ ಕಥೆಯಿದೆ. ಅದೂ ಸಮುದ್ರಮಥನದ ಕಥೆಯದ್ದೇ ಒಂದು ಉಪಕಥೆ. ಅಮೃತ ವಿತರಣೆಯ ವೇಳೆ ಮೋಹಿನಿ ಒಮ್ಮೆ ಆ ಅಮೃತದ ಕೊಡವನ್ನು ಕೆಳಗೆ ಹುಲ್ಲಿನ ಮೇಲೆ ಇರಿಸಿದಳಂತೆ. ಅದು ದರ್ಭೆಹುಲ್ಲು ಎಂದು ಬೇರೆ ಹೇಳಬೇಕಿಲ್ಲವಷ್ಟೆ. ಸರಿ, ಅಮೃತದ ಕೊಡ ಹಾಗೆ ಇಟ್ಟಿರುವದನ್ನೇ ಕಾಯುತ್ತಿದ್ದ ನಾಗಗಳು ಅದರತ್ತ ಸರಿಯತೊಡಗಿದವು. ‘ಹದ್ದಿನ ಕಣ್ಣಿ’ನ ಗರುಡನಿಗೆ(ನಾಗ ಮತ್ತು ಗರುಡ ಅನುಕ್ರಮವಾಗಿ ಕದ್ರು ಮತ್ತು ವಿನತೆಯೆಂಬ ಸವತಿಯರಿಬ್ಬರ ಮಕ್ಕಳು, ಬದ್ಧವೈರಿಗಳು) ಇದು ಗೊತ್ತಾಯಿತು, ಕೊಡವನ್ನು ನಾಗಗಳಿಂದ ತಪ್ಪಿಸಿಯೇ ಬಿಟ್ಟ ಆತ. ಅಷ್ಟಾದರೂ ಹುಲ್ಲಿನ ಮೇಲೆ ಅಮೃತದ ಹನಿಗಳು ಬಿದ್ದಿರಬಹುದೇನೋ ಎಂದು ಅದನ್ನು ನೆಕ್ಕಿದ ನಾಗಗಳ ನಾಲಗೆ ಸೀಳಿಹೋಯಿತು!

ಶುಕ್ರಾಚಾರ್ಯ ಒಕ್ಕಣ್ಣನಾದದ್ದು

ಮುಂದೆ ವಿಷ್ಣು ವಾಮನಾವತಾರವನ್ನು ತಾಳಿದಾಗಲೂ ದರ್ಭೆಹುಲ್ಲಿನ ಒಂದು ಘಟನೆ ನಡೆದದ್ದಿದೆ. ಎಲ್ಲವನ್ನೂ ದಾನ ಮಾಡುತ್ತ ಬಂದ ಬಲಿಚಕ್ರವರ್ತಿಯ ದಾನಬುದ್ಧಿಯನ್ನು ನಿಲ್ಲಿಸಬೇಕೆಂದು ಕೊನೆಯ ಪ್ರಯತ್ನವೊಂದನ್ನು ಮಾಡುವುದಕ್ಕಾಗಿ ಅಸುರಗುರು ಶುಕ್ರಾಚಾರ್ಯ ಒಂದು ನೊಣದ ರೂಪ ಧರಿಸಿ ಬಲಿಮಹಾರಾಜನ ಅರ್ಘ್ಯಪಾತ್ರೆಯ ಮೂತಿಯಾಳಗೆ ನುಸುಳಿಬಿಡುತ್ತಾನೆ. ದಾನಕ್ಕೆ ಬೇಕಾದ ನೀರು ಅರ್ಘ್ಯಪಾತ್ರೆಯಿಂದ ಬರದಿದ್ದಾಗ ಗಾಬರಿಯಾದ ಬಲಿಗೆ ವಟುರೂಪಿ ವಾಮನನೇ ಒಂದು ಉಪಾಯವನ್ನು ಸೂಚಿಸುತ್ತಾನೆ. ದರ್ಭೆಹುಲ್ಲಿನ ಒಂದು ಕಡ್ಡಿಯಿಂದ ಆ ಅರ್ಘ್ಯಪಾತ್ರೆಯ ಮೂತಿಯಲ್ಲಿ ಸಿಕ್ಕಿಕೊಂಡ ವಸ್ತುವನ್ನು ತೆಗೆಯುವಂತೆ ಹೇಳುತ್ತಾನೆ. ಬಲಿಚಕ್ರವರ್ತಿ ಹಾಗೆಯೇ ಮಾಡಿದಾಗ ಬಲಿಯಾದದ್ದು ನೊಣದ ರೂಪ ಧರಿಸಿದ್ದ ಶುಕ್ರಾಚಾರ್ಯರ ಒಂದು ಕಣ್ಣು! ದರ್ಭೆಹುಲ್ಲಿನ ತಿವಿತದಿಂದಾಗಿ ಶುಕ್ರಾಚಾರ್ಯ ಒಕ್ಕಣ್ಣನಾದದ್ದು; ಅವತ್ತಿಂದಲೇ ‘ಒಕ್ಕಣ್ಣ ಶುಕ್ರಾಚಾರ್ಯ’ ಎಂಬ ಅನ್ವರ್ಥನಾಮ ರೂಢಿಗೆ ಬಂದದ್ದು.

ಶುಕ್ರಾಚಾರ್ಯರಂತೆ ದ್ರೋಣಾಚಾರ್ಯರ ಕಥೆಯಲ್ಲೂ ದರ್ಭೆಹುಲ್ಲು ಬರುತ್ತದೆ. ಕೌರವ ಪಾಂಡವರಿನ್ನೂ ಬಾಲಕರಾಗಿದ್ದಾಗಿನ ದಿನಗಳಲ್ಲಿ ಒಮ್ಮೆ ಅವರೆಲ್ಲ ಉದ್ಯಾನವನದಲ್ಲಿ ಚೆಂಡಾಟವಾಡುತ್ತಿದ್ದಾಗ ಚೆಂಡು ಬಾವಿಗೆ ಹೋಗಿ ಬೀಳುತ್ತದೆ. ಅಲ್ಲಿಗೆ ಬಂದ ದ್ರೋಣಾಚಾರ್ಯರು ವಿಷಯವನ್ನು ತಿಳಿದುಕೊಂಡು, ದರ್ಭೆಹುಲ್ಲಿನ ಕಡ್ಡಿಗಳನ್ನೇ ಮಂತ್ರಿಸಿ ಅವು ಒಂದಕ್ಕೊಂದು ಅಂಟಿಕೊಳ್ಳುವಂತೆ ಮಾಡಿ ಉದ್ದದ ಕೋಲನ್ನಾಗಿಸಿ ಅದರಿಂದ ಚೆಂಡನ್ನು ಬಾವಿಯಿಂದ ಮೇಲಕ್ಕೆತ್ತುತ್ತಾರೆ! ಅಂತೂ ದರ್ಭೆಹುಲ್ಲು ಮಲ್ಟಿಪರ್ಪಸ್‌ ಯುಟಿಲಿಟಿ ಐಟಂ ಆಗಿ ಯುಗಯುಗಗಳಲ್ಲೂ ಉಪಯೋಗವಾಗುತ್ತ ಬಂದಿದೆ.

*

ಇವಿಷ್ಟು ದರ್ಭೆಹುಲ್ಲಿಗೆ ಸಂಬಂಧಿಸಿದಂತೆ ಕಾಲಗರ್ಭದಿಂದ ಸಿಗುವ ಕೆಲವು ಕಥಾನಕಗಳು. ಕುಶಾಗ್ರಮತಿಗಳಾಗುವ ನಿಟ್ಟಿನಲ್ಲಿ ಕುಶಾಲಿಗಾದರೂ ‘ ಕುಶ’ದ ಬಗ್ಗೆ ಒಂದು ಸ್ವಲ್ಪ ತಿಳಿದುಕೊಂಡಿರೋಣವೆಂದು ಈ ಸಂಚಿಕೆಯನ್ನು ಸಿದ್ಧಪಡಿಸಿದ್ದೇನೆ. ದರ್ಭೆಹುಲ್ಲಿನ ಬಗ್ಗೆ ಇನ್ನೂ ಬೇರೆಬೇರೆ ಮಾಹಿತಿ, ಪುರಾಣಕಥೆಗಳು, ಉಲ್ಲೇಖಗಳು ನಿಮಗೆ ಗೊತ್ತಿರಬಹುದು. ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಬರೆದು ತಿಳಿಸುವಿರಲ್ಲ? ವಿಳಾಸ - srivathsajoshi@yahoo.com.

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more