• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಪ್ಪಾಳೆ ತಟ್ಟುತಟ್ಟುತಾ ನೀವು ತಾಳಮೇಳವಾಗಿ!

By Staff
|
Srivathsa Joshi *ಶ್ರೀವತ್ಸ ಜೋಶಿ

ಸಂಧ್ಯಾವಂದನೆಯ ವಿಧಿವಿಧಾನದಲ್ಲಿ, ಗಾಯತ್ರಿ ಮಂತ್ರದ ‘ಅಂಗನ್ಯಾಸ’ವೆಂಬುದೊಂದು ಬರುತ್ತದೆ. ಸ್ಥೂಲವಾಗಿ ಹೇಳುವುದಾದರೆ ಅದು ಗಾಯತ್ರಿ ಮಹಾಮಂತ್ರದ ಪ್ರತ್ಯೇಕ ಭಾಗಗಳ ಮೂಲಕ ನಮ್ಮ ದೇಹದ ವಿವಿಧ ಭಾಗಗಳ ಶುದ್ಧೀಕರಣ. ಅಂದರೆ ಹೃದಯ, ತಲೆ, ತಲೆಗೂದಲು, ದೇಹ, ಮತ್ತು ಕಣ್ಣುಗಳೇ ಮೊದಲಾದ ಪಂಚೇಂದ್ರಿಯಗಳನ್ನು ಪವಿತ್ರಗೊಳಿಸುವುದು ಆ ಅನುಷ್ಠಾನದ ಉದ್ದೇಶ. ಪ್ರತಿಯಾಂದು ಸಾಲೂ ಗಾಯತ್ರಿ ಮಂತ್ರದ ಒಂದು ಭಾಗದಿಂದ ಆರಂಭವಾಗುವ ಆ ಸೂಕ್ತ ಹೀಗಿದೆ :

ಓಂ ತತ್ಸವಿತುರ್‌ ಬ್ರಹ್ಮಾತ್ಮನೆ ಹೃದಯಾಯ ನಮಃ।

ವರೇಣ್ಯಂ ವಿಷ್ಣುರಾತ್ಮನೆ ಶಿರಸೇ ಸ್ವಾಹಾ।

ಭರ್ಗೊ ದೇವಸ್ಯ ರುದ್ರಾತ್ಮನೆ ಶಿಖಾಯೌಷಟ್‌।

ಧೀಮಹಿ ಪರಮಾತ್ಮನೆ ಕವಚಾಯ ಹೂಂ।

ಧಿಯೋಯಾನಃ ಜ್ಞಾನಾತ್ಮನೆ ನೇತ್ರತ್ರಯಾಯೌಷಟ್‌।

ಪ್ರಚೋದಯಾತ್‌ ಸರ್ವಾತ್ಮನೆ ಅಸ್ತ್ರಾಯ ಫಟ್‌।

ಈ ಮಂತ್ರೋಚ್ಚಾರದ ವೇಳೆ ಪ್ರತಿಯಾಂದು ಸಾಲಿಗೂ ಒಂದೊಂದು ಕೈಕರಣವೂ ಇದೆ; ಅಂದರೆ ಮಂತ್ರವನ್ನು ಹೇಳುತ್ತಿದ್ದಂತೆಯೇ, ದೇಹದ ಯಾವ ಭಾಗದ ಪ್ರಸ್ತಾಪ ಬಂದಿದೆಯೋ ಆ ಭಾಗವನ್ನು ಕೈಯಿಂದ ಮುಟ್ಟಿಕೊಳ್ಳುವುದು. ಕೊನೆಯ ಸಾಲಿನಲ್ಲಿದೆಯಲ್ಲಾ ‘ಅಸ್ತ್ರಾಯ ಫಟ್‌...’ ಎಂದು, ಅದರ ಕೈಕರಣವೆಂದರೆ ಒಮ್ಮೆ ಗಟ್ಟಿಯಾಗಿ ಚಪ್ಪಾಳೆ ತಟ್ಟಿಬಿಡುವುದು. (ಕೆಲವು ಗ್ರಂಥಗಳಲ್ಲಿ ಒಂದೇ ಚಪ್ಪಾಳೆ ತಟ್ಟಬೇಕು ಅಂತಿದ್ದರೆ ಇನ್ನು ಕೆಲವಲ್ಲಿ ನಾಲ್ಕು ಚಪ್ಪಾಳೆ ತಟ್ಟಬೇಕು ಎಂದಿರಬಹುದು, ಅಂತೂ ಚಪ್ಪಾಳೆಯ ಶಬ್ದವಾಗಬೇಕು). ಆ ಚಪ್ಪಾಳೆಯ ಉದ್ದೇಶ ಏನು ಗೊತ್ತೇ? ನಮ್ಮ ಸುತ್ತಮುತ್ತಲೂ ಇರಬಹುದಾದ ಭೂತ-ಪ್ರೇತ-ಪಿಶಾಚಿ ರೂಪದ ಕ್ಷುದ್ರಶಕ್ತಿಗಳನ್ನು ಅಟ್ಟಿ ಓಡಿಸುವುದು; ಆರೀತಿಯಲ್ಲಿ ನಮ್ಮ ಶರೀರ ಮತ್ತು ಮನಸ್ಸಿನ ಶುದ್ಧೀಕರಣವನ್ನು ಖಾತರಿಪಡಿಸಿಕೊಳ್ಳುವುದು.

ಸಂಧ್ಯಾವಂದನೆಯಲ್ಲಿನ ಆ ‘ಅಸ್ತ್ರಾಯ ಫಟ್‌’ ಚಪ್ಪಾಳೆ, ಬ್ರಹ್ಮೋಪದೇಶದ ಹೊಸತರಲ್ಲಿ ಆಗಷ್ಟೇ ಸಂಧ್ಯಾವಂದನೆ ಕಲಿಯುತ್ತಿರುವಾಗ ಒಂದು ಲಘು ಮನರಂಜನೆಯಗಿ ಕಂಡುಬಂದರೂ ನಿಜವಾಗಿಯೂ ಗಹನವಾದ ವಿಚಾರವೇ ಆಗಿದೆ. ವಿದ್ಯುತ್‌ಸಂಚಾರದಂತೆ ಕ್ಷಣಾರ್ಧದಲ್ಲಿ ಜರಗಿಹೋಗುವ ಆ ಒಂದು ದೈವಿಕಶಕ್ತಿಯ ಸಪ್ಪಳದಿಂದ ದುಷ್ಟಶಕ್ತಿಗಳೆಲ್ಲ ಹೇಳಹೆಸರಿಲ್ಲದೆ ನಾಶವಾಗಿ ಹೋಗುತ್ತವೆಯೆಂದ ಮೇಲೆ ಅದೇನು ತಮಾಷೆಯ ವಿಷಯವೇ? ಅದೂ ಬ್ರಹ್ಮತೇಜಸ್ಸಿನ ಸಾಕ್ಷಾತ್‌ರೂಪದಲ್ಲಿ ಸಂಧ್ಯಾವಂದನೆಗೈಯುತ್ತಿರುವ ಬ್ರಹ್ಮಚಾರಿ ‘ಫಟ್‌’ ಎಂದು ಚಪ್ಪಾಳೆ ತಟ್ಟಿದನೆಂದರೆ ಅಲ್ಲೊಂದು ಶಬ್ದನಿರ್ವಾತದ ಅಭೇದ್ಯ ಕವಚ ನಿರ್ಮಿಸಿದಂತೆಯೇ. ಅಬ್ಬಾ! ಒಂದು ಚಪ್ಪಾಳೆಗೆ ಅದೆಷ್ಟು ಅದ್ಭುತ ಶಕ್ತಿ!

ಚಪ್ಪಾಳೆ ಪ್ರಕ್ರಿಯೆಯ ಎಳೆಎಳೆ

ಚಪ್ಪಾಳೆ ಈಗ ನಮಗೆಲ್ಲ ಗೊತ್ತಿರುವಂತೆ ಪ್ರಶಂಸೆಯ ಅಭಿವ್ಯಕ್ತಿಗೆ ಒಂದು ವಿಧಾನ ಹೌದಾದರೂ ಮೂಲತಃ ಅದು ಆ ಒಂದು ಉದ್ದೇಶಕ್ಕೆ ಮಾತ್ರ ಸೀಮಿತವಾದ ಪ್ರಕ್ರಿಯೆಯಾಗಿರಲಿಲ್ಲ. ಮಾತ್ರವಲ್ಲ, ನಮಗಾದ ಪರಮಾನಂದವನ್ನು ಸೂಚಿಸಲಿಕ್ಕೆ ಚಪ್ಪಾಳೆ ಇದ್ದದ್ದೇ ಅಲ್ಲ. ಬದಲಾಗಿ ಅಪಾಯದ ಅರಿವಾದಾಗ ತಕ್ಷಣದ ಪ್ರತಿಕ್ರಿಯೆಯಾಗಿ, ಅಥವಾ ಆ ಅಪಾಯಕಾರಿ ಶಕ್ತಿಗಳನ್ನು ಹಿಮ್ಮೆಟ್ಟಿಸಲಿಕ್ಕಾಗಿ ಚಪ್ಪಾಳೆ ತಟ್ಟಲಾರಂಭಿಸಿದ್ದಿರಬಹುದು.

ಪ್ರತಿಯಾಂದು ಜೀವಿಯೂ ತನ್ನ ಸುತ್ತಲಿನ ಪರಿಸರದಲ್ಲಿ ಗಮನಾರ್ಹವಾದ ಅಥವಾ ಗಣನೀಯವಾದ ಯಾವೊಂದು ಬದಲಾವಣೆಯಾದರೂ ಅದಕ್ಕೆ ತನ್ನ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಲೇಬೇಕಲ್ಲ? ಪರಿಸರದ ಈ ಪ್ರಚೋದನೆ ಬಹುತೇಕವಾಗಿ ಅಪಾಯಕಾರಿಯಾಗಿಯೇ ಇರಬಹುದೆನ್ನುವ ಕಲ್ಪನೆಯಿಂದಾಗಿ ಸ್ವರಕ್ಷಣೆ ಆಗ ಆದ್ಯಕರ್ತವ್ಯವಾಗುತ್ತದೆ.

ಅಪಾಯ ಬಂದಿದೆಯೆಂಬುದನ್ನು ತನ್ನ ಒಡನಾಡಿಗಳಿಗೆ ತಿಳಿಸಲು ಅಥವಾ ತನಗೇ ಮನದಟ್ಟುಮಾಡಿಕೊಳ್ಳಲು ಪ್ರತಿಜೀವಿಯೂ ಒಂದೊಂದು ವಿಧಾನವನ್ನನುಸರಿಸುತ್ತದೆ - ಮೈಮುದುಡಿಕೊಳ್ಳುವುದರಿಂದ ಹಿಡಿದು, ಹಲ್ಲು ಮಸೆಯುವುದು, ಕಾಲಿಂದ ನೆಲವನ್ನು ಒದೆಯುವುದು ಹೀಗೆ ವಿಧವಿಧ ರೂಪಗಳು. ಬಹುಷಃ ಮಾನವ (ಅವನ ಪೂರ್ವಜರಾದ ಚಿಂಪಾಂಜಿ, ಮಂಗಗಳೂ ಸಹ) ಕೈಗಳೆರಡನ್ನೂ ಒಂದಕ್ಕೊಂದು ಅಪ್ಪಳಿಸಿ ಶಬ್ದಮಾಡುವುದನ್ನು ಈ ರೀತಿ ಅಪಾಯದ acknowledgement ಆಗಿ ರೂಢಿಸಿಕೊಂಡಿರಬಹುದು. ಸೂಕ್ಷ್ಮವಾಗಿ ಗಮನಿಸಿದರೆ, ಈ ಅಂಗೈಗಳ ಪರಸ್ಪರ ಮುಖಾಮುಖಿಯೇ ತಥಾಕಥಿತ ಅಪಾಯ ಮತ್ತು ಸ್ವಂತದ ಮುಖಾಮುಖಿಯ ಸಂಕೇತವೆಂದೂ ಅರ್ಥೈಸಿಕೊಳ್ಳಬಹುದು.

ಬುದ್ಧಿಮಾಂದ್ಯರಲ್ಲಿ, ವಿಶೇಷವಾಗಿ ಅಂತಹ ಮಕ್ಕಳಲ್ಲಿ, ಮಾನಸಿಕ ಪ್ರೇರಣೆಯಿಂದ ಚಪ್ಪಾಳೆ ತಟ್ಟುತ್ತಲೇ ಇರುವ ಲಕ್ಷಣವನ್ನು ಗುರುತಿಸಬಹುದು. ಮಣಿರತ್ನಂ ನಿರ್ದೇಶನದ ‘ಅಂಜಲಿ’ ಚಿತ್ರದಲ್ಲಿನ ಬೇಬಿ ಶ್ಯಾಮಿಲಿ ಅಭಿನಯ ಕಣ್ಮುಂದೆ ಬರುವುದೇ ಪುಟ್ಟಪುಟ್ಟ ಕೈಗಳನ್ನು ಅನಿರ್ದಿಷ್ಟವಾಗಿ - ಆದರೆ ಒಂದು ನಿರ್ದಿಷ್ಟತೆಯನ್ನು, ಸ್ಪಷ್ಟತೆಯನ್ನು ತರುವ ಪ್ರಯತ್ನದಲ್ಲಿ - ತಟ್ಟುತ್ತಿರುವ ಮುಗ್ಧ ಹಸುಳೆಯ ರೂಪದಲ್ಲಿ. ಬುದ್ಧಿಮಾಂದ್ಯರ ಆ ಚಪ್ಪಾಳೆಯ ಹಿಂದೆಯೂ, ವಿಚ್ಛಿದ್ರವಾಗಿರುವ ಮನೋಸ್ಥಿತಿಯನ್ನು ಒಂದು ಲಯಬದ್ಧ ಸ್ವರೂಪಕ್ಕೆ ತರಬೇಕೆನ್ನುವ ತುಡಿತವನ್ನು ಅಧ್ಯಯನಗಳಿಂದ ಕಂಡುಕೊಂಡಿದ್ದಾರೆ ಮನಶ್ಶಾಸ್ತ್ರಜ್ಞರು.

ಅಂತೂ ಚಪ್ಪಾಳೆಯ ಮೂಲ ಉದ್ದೇಶ ಅಪಾಯದ ಅರಿವಿನ ಕರೆಗಂಟೆ ಎನ್ನಲಿಕ್ಕಡ್ಡಿಯಿಲ್ಲ. ಆದರೆ ಕರೆಗಂಟೆ ಎಂದಾಗ ನಮಗೆ ಚಪ್ಪಾಳೆಯ ಇನ್ನೊಂದು ಬಳಕೆ-ಸಂದರ್ಭವೂ ನೆನಪಾಗುತ್ತದೆ. ಯಕ್ಷಗಾನಗಳಲ್ಲಿ, ಪೌರಾಣಿಕ ನಾಟಕಗಳಲ್ಲಿ ನೀವು ನೋಡಿರಬಹುದು. ಮಹಾರಾಜನು ಚಪ್ಪಾಳೆ ತಟ್ಟಿಯೇ ತನ್ನ ಸೇವಕನನ್ನು ಕರೆಸಿಕೊಳ್ಳುವುದು. ‘ಯಾರಲ್ಲಿ ಸೇವಕರು!’ ಎಂದು ಚಪ್ಪಾಳೆ ತಟ್ಟಿ ದರ್ಪದ ಠೀವಿಯಿಂದ ರಾಜ ಕರೆದನೆಂದರೆ ‘ಅಪ್ಪಣೆ ಮಹಾಪ್ರಭೂ...’ ಎಂದು ಅರೆಕ್ಷಣದಲ್ಲಿ ಬಿನ್ನವಿಸಿಕೊಳ್ಳಬೇಕು ಆ ಸೇವಕ. ಹಾಗೆಯೇ ರಾಣಿಯಾದವಳು ಅಥವಾ ರಾಜಕುಮಾರಿ ಸಹ ತನ್ನ ದಾಸಿಯನ್ನು ಕರೆಯುವುದೂ ಚಪ್ಪಾಳೆಯ ಮೂಲಕವೇ. ಅಂದರೆ ಈಗಿನ ಕಾಲದ ಕಾಲಿಂಗ್‌ಬೆಲ್‌ (ಕರೆಗಂಟೆ) ಕೆಲಸವನ್ನು ನಿಭಾಯಿಸುತ್ತಿದ್ದದ್ದು ಚಪ್ಪಾಳೆ.

ಮೇಲಿನ ಈಎಲ್ಲ ಸಂದರ್ಭ ಸನ್ನಿವೇಶಗಳದೂ ವೈಯಕ್ತಿಕ ಚಪ್ಪಾಳೆ - ಅಂದರೆ ಒಬ್ಬ ವ್ಯಕ್ತಿ ಒಂದು ಸಲ ಅಥವಾ ಅನೇಕ ಸಲ ತಟ್ಟುವ ಚಪ್ಪಾಳೆ. ಜಾದೂಗಾರ ತನ್ನ ಯಕ್ಷಿಣಿವಿದ್ಯೆಯ ಪ್ರದರ್ಶನದಲ್ಲಿ, ಮಂತ್ರವಾದಿ ತನ್ನ ಮಾಟಮಂತ್ರಗಳ ಉಚ್ಚರಣೆಯ ನಡುನಡುವೆ ಸ್ಪೆಷಲ್‌ ಎಫೆಕ್ಟ್‌ಗಾಗಿ ತಟ್ಟುವ ಚಪ್ಪಾಳೆಯೂ ಸೇರಿದಂತೆ ಇವೆಲ್ಲ ಏಕವ್ಯಕ್ತಿಮೂಲದವು. ಸಮಯದ ಏಕಪ್ರಕಾರವಾದ ಹರಿವಿನ ನಡುವೆಯೇ ಹಠಾತ್ತಾಗಿ ಮತ್ತು ಕ್ಷಿಪ್ರವಾಗಿ ನಡೆದುಹೋಗುವ ಸ್ಥಿತಿಬದಲಾವಣೆಯ (status change) ಪ್ರತೀಕವಾಗಿ ಚಪ್ಪಾಳೆ ತಟ್ಟುವುದು. ಇಲ್ಲಿ ಚಪ್ಪಾಳೆ ಒಂದು ಕಾಲಘಟ್ಟದ ಅಂತ್ಯ ಮತ್ತು ಇನ್ನೊಂದರ ಆರಂಭದ ಸಂಕೇತವಾಗಿ ನಿಲ್ಲುತ್ತದೆ. ನಿಮಗೆ ಸಿನೆಮಾಪತ್ರಿಕೆಗಳಲ್ಲಿನ ಚಿತ್ರೀಕರಣ ಸಂಬಂಧಿ ಸುದ್ದಿಗಳಲ್ಲಿ ‘ಇಂಥವರು ಕ್ಲಾಪ್‌ ಮಾಡಿ ಕೆಮರಾ ಚಾಲನೆ ಮಾಡಿದರು.... ’ ಎಂದು ಓದಿದ ನೆನಪಿರಬಹುದು. ಕೈತಟ್ಟಿ ಚಪ್ಪಾಳೆ ಅಲ್ಲದಿದ್ದರೂ ಆ ಕ್ಲಾಪ್‌ ಸಹ ಒಂದು ‘ಆರಂಭ’ದ ಸಂಕೇತವೇ.

ಸಮೂಹಸನ್ನಿಯಾಗಿ, ಪ್ರಶಂಸೆಯ ಅಭಿವ್ಯಕ್ತಿಯಾಗಿ ಚಪ್ಪಾಳೆ

ಪ್ರಶಂಸೆಯಾಗಿ ಚಪ್ಪಾಳೆ ತಟ್ಟುವ ರಿವಾಜು ಸಹ ಹಳೆಯ ಕಾಲದಿಂದಲೇ ಬಂದದ್ದೆಂಬುದರಲ್ಲಿ ಸಂದೇಹವಿಲ್ಲ. ಮುಖ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮನರಂಜನಾ ಕಾರ್ಯಕ್ರಮಗಳು, ಸಂಗೀತ ನೃತ್ಯ ಪ್ರದರ್ಶನಗಳ ಪದ್ಧತಿ ಶುರುವಾದಾಗ ಸಹಜವಾಗಿಯೇ ಪ್ರೇಕ್ಷಕರು ತಮ್ಮ ಪ್ರತಿಕ್ರಿಯೆಯನ್ನು ಕಲಾವಿದರಿಗೆ ತಲುಪಿಸಲಿಕ್ಕೆ ಒಂದು ವಿಧಾನದ ಅವಶ್ಯಕತೆ ಬಂತು. ಅಂಗೈಗಳನ್ನು ಒಂದಕ್ಕೊಂದು ತಟ್ಟಿ ಸಾಕಷ್ಟು ದೊಡ್ಡದಾಗಿಯೇ ಶಬ್ದ ಹುಟ್ಟಿಸುವ, ತನ್ಮೂಲಕ ಪ್ರತಿಕ್ರಿಯೆ ವ್ಯಕ್ತಪಡಿಸುವ ಚಪ್ಪಾಳೆಯೇ universal form of applause ಆಗಿ ಹುಟ್ಟಿಕೊಂಡಿತು. ಸುಮಾರು 17ನೇ ಶತಮಾನದಷ್ಟು ಹಳೆಯ ವಿಮರ್ಶಾಲೇಖನಗಳಲ್ಲೇ ಅಂದಿನ ನಾಟಕಗಳು, ನೃತ್ಯಪ್ರದರ್ಶನಗಳಿಗೆ ಭರ್ಜರಿ ಚಪ್ಪಾಳೆ ಸಿಕ್ಕಿದ್ದ ಬಗ್ಗೆ ಉಲ್ಲೇಖಗಳಿವೆಯಂತೆ. ಅಂದರೆ ಆ ಕಾಲದಿಂದಲೂ ‘ಕರತಾಡನ’ದ ಮೂಲಕ ಪ್ರಸ್ತುತಿಯಾಂದಕ್ಕೆ ಅನುಮೋದನೆ, ಅಭಿನಂದನೆ, ಪ್ರಶಂಸೆಯ ಸಲ್ಲಿಕೆ ನಡೆದಿದೆ ಎಂದಾಯಿತು.

ಯಾವಾಗಲೂ ಪ್ರಶಂಸೆಗೇ ಎಂದೇನಿಲ್ಲ, ಒಂದು ಕಾರ್ಯಕ್ರಮ ತೀರಾ ಕಳಪೆಯಾಗಿದ್ದರೂ ಸಭಿಕರು ಚಪ್ಪಾಳೆ ತಟ್ಟಿ ಕಲಾವಿದನಿಗೆ ‘ಇನ್ನು ಜಾಗ ಖಾಲಿ ಮಾಡಬಹುದು...’ ಎಂಬ ಸೂಚನೆಯನ್ನು ನೀಡುವುದೂ ಇದೆ. ಸಭಿಕರ ತಾಳ್ಮೆಗೂ ಒಂದು ಮಿತಿ ಇರುತ್ತದಲ್ಲ, ಅದರ ಕಟ್ಟೆಯಾಡೆದರೆ ಚಪ್ಪಾಳೆಯೇ ಮೊದಲ ಪ್ರತಿಕ್ರಿಯೆ. ಪ್ರಶಂಸೆಯ ಹಸಿವಿರುವ ಕಲಾವಿದರು ಸ್ಟೇಜ್‌ ಮೇಲೆ ತಾವೇ ಚಪ್ಪಾಳೆ ತಟ್ಟಿ ಪ್ರೇಕ್ಷಕರನ್ನೂ ಚಪ್ಪಾಳೆ ತಟ್ಟುವಂತೆ ಪ್ರೇರೇಪಿಸುವ ಪ್ರಸಂಗಗಳೂ ಇಲ್ಲದಿಲ್ಲ. ಮತ್ತೊಂದು ವಿಶಿಷ್ಟವಾದ ಚಪ್ಪಾಳೆಯಿದೆ - ವಿಶೇಷವಾಗಿ ಸಿನೆಮಾದಲ್ಲಿ ಪಾತ್ರವೊಂದರ ಭಾವುಕತೆಯ ಅಭಿವ್ಯಕ್ತಿಯಾಗಿ ತೋರಿಸುತ್ತಾರೆ. ಅದೇನೆಂದರೆ ಕಥಾನಾಯಕನ ಒಂದು ಕಲಾಪ್ರದರ್ಶನವಿರುತ್ತದೆಯೆಂದುಕೊಳ್ಳಿ, ಆವೇಳೆ ದೃಶ್ಯದಲ್ಲಿನ ಪ್ರೇಕ್ಷಕರು ನಮ್ಮ-ನಿಮ್ಮಂತೆಯೇ ಚಪ್ಪಾಳೆ ತಟ್ಟಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾರೆ, ಅತಿಭಾವುಕಳಾದ ಕಥಾನಾಯಕಿ ಅಥವಾ ನಾಯಕನ ಅಮ್ಮ ಮಾತ್ರ ಕೊನೆಯಲ್ಲಿ ಎಲ್ಲರ ಚಪ್ಪಾಳೆಯೂ ಮುಗಿದ ಮೇಲೆ ನಿಧಾನವಾಗಿ (ಬೇಕಿದ್ದರೆ ಸ್ಲೋಮೋಷನ್‌ನಲ್ಲಿ) ಚಪ್ಪಾಳೆ ತಟ್ಟುವ ಒಂದು ಇಮೊಷನಲ್‌ ‘ಕ್ಯಾ ಸೀನ್‌ ಹೈ!’ ಇರುತ್ತದೆ. ನೀವೂ ನೋಡಿಯೇ ಇರುತ್ತೀರಿ.

ಚಪ್ಪಾಳೆ ಔಟ್‌ಸೋರ್ಸ್‌ಡ್‌!

ರೋಮನ್‌ ಚಕ್ರವರ್ತಿ ನೀರೊ (ಅರಮನೆಗೆ ಬೆಂಕಿ ಬಿದ್ದಾಗಲೂ ಯಾವ ಗೊಡವೆಯೂ ಇಲ್ಲದೆ ಪಿಟೀಲು ಬಾರಿಸುವುದರಲ್ಲೇ ಮಗ್ನನಾಗಿದ್ದ ಎಂಬ ಕುಖ್ಯಾತಿಯವನು) ಚಪ್ಪಾಳೆಯನ್ನು ಅದೆಷ್ಟು ಚಪ್ಪರಿಸುತ್ತಿದ್ದನೆಂದರೆ ಆತ ತನ್ನ ಸಂಗೀತ ಕಛೇರಿಗಳಲ್ಲಿ ಚಪ್ಪಾಳೆ ತಟ್ಟಲಿಕ್ಕೆಂದೇ ಸಂಬಳಕೊಟ್ಟು ಸಭಿಕರನ್ನು ಕರೆಸಿಡುತ್ತಿದ್ದನಂತೆ! ಸಾರ್ವಜನಿಕರು ಸುಲಭದಲ್ಲಿ ಸಿಗದಿದ್ದರೆ ತನ್ನ ಸೇನಾ ತುಕಡಿಯಿಂದ ಸುಮಾರು 5000ದಷ್ಟು ಮಂದಿಯನ್ನು ಸಭೆಗೆ ಕರೆಸಿ ಅವರನ್ನೂ ಸಭಿಕರನ್ನಾಗಿಸಿ ಚಪ್ಪಾಳೆ ತಟ್ಟಿಸಿ ತನ್ನ ಸಂಗೀತಸಂಭ್ರಮವನ್ನು ಹೆಚ್ಚಿಸಿಕೊಳ್ಳುತ್ತಿದ್ದನಂತೆ.

ನೀರೊ ಚಕ್ರವರ್ತಿಯ ಈ ಚಟದಿಂದಾಗಿ ಕ್ರಮೇಣ ಫ್ರಾನ್ಸ್‌ನಲ್ಲಿ, ಇತರ ಐರೋಪ್ಯ ದೇಶಗಳಲ್ಲಿ ಚಪ್ಪಾಳೆಗಾರರನ್ನು ಒದಗಿಸಿಕೊಡುವ ದಂಧೆ ಸಹ ಶುರುವಾಯಿತು. 1830ರ ಸುಮಾರಿಗೆ, claqueur (ಚಪ್ಪಾಳೆಗಾರ)ರನ್ನು ಸರಬರಾಜು ಮಾಡುವ Claque ಕೇಂದ್ರಗಳು ಹುಟ್ಟಿಕೊಂಡವು. ನಾಟಕಕಂಪೆನಿಯ ಮೆನೆಜರ್‌ ಅಥವಾ ಥಿಯೇಟರ್‌ನವರು ನಿಗದಿತ ದೇಖಾವೆಗೆ ಇಂತಿಷ್ಟು ಜನ ಚಪ್ಪಾಳೆಗಾರರು ಬೇಕು ಎಂದು ಆರ್ಡರ್‌ ಕೊಟ್ಟರೆ ಆಯ್ತು ಅಷ್ಟು ಮಂದಿಯನ್ನು ಕಳಿಸುವ ವ್ಯವಸ್ಥೆ. ಕಿವಿಗಡಚಿಕ್ಕುವಂತೆ ಚಪ್ಪಾಳೆ ಹೊಡೆದು ಪ್ರದರ್ಶನವನ್ನು ಸುಪರ್‌ಹಿಟ್‌ ಮಾಡುವುದು ಅವರ ಕೆಲಸ. ಚುನಾವಣಾ ಪ್ರಚಾರಸಭೆಗಳಿಗೆ, ಕೊನೆಗೆ ಮತಗಟ್ಟೆಗಳಿಗೂ ಲಾರಿಗಳಲ್ಲಿ ತುಂಬಿ ಜನರನ್ನು ಕರೆಸುತ್ತಾರಲ್ಲ ಇವತ್ತಿನ ಪುಢಾರಿಗಳು, ಹಾಗೆಯೇ!

ಚಪ್ಪಾಳೆ - ಅರ್ಥವನ್ನು ಧ್ವನಿಸುವ ಪದ

ಈಗಿನ ಆಂಗ್ಲಭಾಷೆಯ clapನ ಮೂಲ, ಮಧ್ಯಯುಗದಲ್ಲಿನ ಇಂಗ್ಲಿಷ್‌ನಲ್ಲಿದ್ದ clappen ಅಥವಾ ಅದೇ ಕಾಲಕ್ಕೆ ಜರ್ಮನ್‌, ಡಚ್‌ ಭಾಷೆಗಳಲ್ಲೂ ಚಾಲ್ತಿಯಲ್ಲಿದ್ದ klappen ಎಂಬ ಪದ. ಸೂಕ್ಷ್ಮವಾಗಿ, ಸ್ವಾರಸ್ಯಕರವಾಗಿ ನೋಡಿದರೆ ಚಪ್ಪಾಳೆ ಎನ್ನುವ ಅಚ್ಚಕನ್ನಡ ಪದಕ್ಕೂ ಇವೇ ಪದಮೂಲವಿರಬಹುದೇನೊ ಎನಿಸುವಂತಿದೆ ಅಲ್ಲವೇ? ಅದಕ್ಕೆ ಕಾರಣವೂ ಇದೆಯೆನ್ನಿ. ಎಲ್ಲ ಭಾಷೆಗಳಲ್ಲೂ ಕೆಲವಾದರೂ onomatopoeic ಪದಗಳು ಇರುತ್ತವೆ, ಅವುಗಳ ಸ್ಪಷ್ಟ ಲಕ್ಷಣವೆಂದರೆ ಯಾವ ಶಬ್ದವನ್ನು ಸೂಚಿಸಲು ಉಪಯೋಗಿಸಲ್ಪಡುತ್ತದೊ ಆ ಶಬ್ದದಂತೆಯೇ ಅದರ ಉಚ್ಚಾರವಿರುವುದು. ‘ಸುಂಯ್‌’ ಎಂದು ಗಾಳಿ ಬೀಸಿದಂತೆ, ಪುಟ್ಟ ಕರು ತಾಯನ್ನರಸುತ್ತ ‘ಅಂಬೆ’ಗರೆದಂತೆ. ಚಪ್ಪಾಳೆ/ clapಗಳನ್ನೂ ಆ ಯಾದಿಗೆ ಸೇರಿಸಬಹುದು.

ವಿಚಾರ ಮಾಡಿದಷ್ಟೂ ಆಳವಾಗುತ್ತ ಹೋಗುವ ‘ಚಪ್ಪಾಳೆ’ಯಲ್ಲೇ ಪಾರಮಾರ್ಥಿಕ/ಆಧ್ಯಾತ್ಮಿಕ ವಿಚಾರಧಾರೆಯೂ ಇದೆ. ಉದಾಹರಣೆಗೆ ಈ ಒಂದು ‘ಆಳವಾದ’ ಪ್ಯಾರಾಗ್ರಾಫನ್ನು ಓದಿ :

‘‘ಚಪ್ಪಾಳೆ ನಮಗೆ ನಮ್ಮ ಬಗ್ಗೆಯೇ ಅರಿವನ್ನು ಮೂಡಿಸುತ್ತದೆ. ಜತೆಯಲ್ಲೇ ನಮ್ಮೊಳಗಿರುವ ‘ಇತರ’ರ ಬಗ್ಗೆಯೂ. ಚಪ್ಪಾಳೆಯಲ್ಲಿ ದಿಗ್ಭ್ರಮೆಯಿದ್ದಷ್ಟೇ ಬ್ರಹ್ಮಾನಂದವೂ ಇದೆ. ಒಂದು ಕೈಯಿಂದ ಇನ್ನೊಂದು ಕೈಯನ್ನು ತಟ್ಟುವ ಆ ಪ್ರಕ್ರಿಯೆಯಲ್ಲಿ ಏಕಕಾಲಕ್ಕೆ ನಾವೇ ಕರ್ತೃ ಮತ್ತು ಕರ್ಮ ಎರಡೂ ಆಗುತ್ತೇವೆ. ಅಷ್ಟಾಗಿ ಪ್ರಕೃತಿಯಲ್ಲಿ ಯಾವೊಂದು ಶಬ್ದವಾದರೂ ಎರಡು ವಸ್ತುಗಳ ಪರಸ್ಪರ ಮುಖಾಮುಖಿ-ಘರ್ಷಣೆ-ತಾಡನದಿಂದಲೇ ಆಗುವುದಷ್ಟೆ? ಚಪ್ಪಾಳೆಯೂ ಹಾಗೆಯೇ - ನಮ್ಮನ್ನು ನಮಗೆ ತಿಳಿಸುವ, ನಮ್ಮನ್ನು ಇತರರಿಗೂ ತಿಳಿಸುವ, ಇತರರೊಂದಿಗೆ ನಮ್ಮ ಸಂಪರ್ಕ ಸ್ಥಾಪಿಸುವ ಒಂದು ಅದ್ಭುತ ಪ್ರಕ್ರಿಯೆ!’’

*

ಅದೆಷ್ಟೋ ಬೇರೆಬೇರೆ ವಿಷಯಗಳು ವಿಚಿತ್ರಾನ್ನವಾಗಿ ಬೇಯಿಸಲ್ಪಟ್ಟು ಚಪ್ಪಾಳೆ ಗಿಟ್ಟಿಸಿಕೊಂಡಿರುವಾಗ ಚಪ್ಪಾಳೆಯ ಬಗ್ಗೆಯೇ ಒಂದು ಸಂಚಿಕೆಯನ್ನೇಕೆ ತಯಾರಿಸಬಾರದು ಎಂಬ ಯೋಜನೆಯ ಫಲವೇ ಇವತ್ತಿನ ವಿಚಿತ್ರಾನ್ನ. ಚಪ್ಪಾಳೆ ತಟ್ಟಿದ್ದೀರಿ ನೀವೂ ಅನೇಕ ಸಲ. ಈಗ ಚಪ್ಪಾಳೆಯ ಬಗ್ಗೆಯೇ ಈ ಎರಡು ಪ್ರಶ್ನೆಗಳಿಗೆ ಉತ್ತರಗಳನ್ನು ಕಟ್ಟಿ ಕೊಡುತ್ತೀರಾ?

ಅ) ತಟ್ಟು ಚಪ್ಪಾಳೆ ಪುಟ್ಟ ಮಗು... ತಕ್ಕೋ ಕೈ ಇಕ್ಕೊ ಕೈ... ಎಂದು ಶುರುವಾಗುವ ಒಂದು ಶಿಶುಗೀತೆಯನ್ನು ನೀವು ಕೇಳಿರಬಹುದು. ಬೊಳುವಾರು ಮಹಮ್ಮದ ಕುಞಿ ಅವರು ಮಕ್ಕಳಿಗಾಗಿ ಸಂಕಲಿಸಿದ ಕವನ ಸಂಗ್ರಹದ ಹೆಸರೂ ಅದೇ. ಪ್ರಶ್ನೆ ಏನೆಂದರೆ ಆ ಕವಿತೆಯನ್ನು ಬರೆದ ಕವಿ ಯಾರು? (ಸುಳಿವು: ಅದೊಂದು ಕಾವ್ಯನಾಮ. ಅದೇ ಹೆಸರಿನ ರಾಜವಂಶವೊಂದು ಕರ್ನಾಟಕವನ್ನು ಆಳಿದೆ)

ಆ) ಚಪ್ಪಾಳೆ ಕುರಿತಂತೆ ಕನ್ನಡದಲ್ಲಿ (ಇಂಗ್ಲಿಷಲ್ಲೂ ಇದೆ) ಒಂದು ಗಾದೆ ಅಥವಾ ನಾಣ್ಣುಡಿ ಇದೆ. ಏನದು?

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more