• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಳವಾದ ಜ್ಞಾನ

By Super
|
ನನ್ನ ಒಬ್ಬ ಇ-ಸ್ನೇಹಿತ ಇದ್ದಾರೆ, ವಸಂತ್‌ ಕಜೆ ಎಂಬ ಹೆಸರಿನವರು. ಮೊನ್ನೆಯ ಯುಗಾದಿ ವಿಚಿತ್ರಾನ್ನ ರಸಪ್ರಶ್ನೆ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದವರಲ್ಲೊಬ್ಬರು. ಆ-ಸ್ಪರ್ಧೆಯ ನಂತರ ನನ್ನ ಇ-ಸ್ನೇಹಿತರಾದವರು ಈ-ಮಹಾನುಭಾವ! ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ಉದ್ಯೋಗಿಯಾಗಿರುವ ವಸಂತ್‌ ಇತ್ತೀಚೆಗಷ್ಟೆ ಯು.ಕೆಯಲ್ಲಿ ಒಂದು ಪ್ರಾಜೆಕ್ಟ್‌ ಎಸೈನ್‌ಮೆಂಟ್‌ ಮುಗಿಸಿ ವಾಪಸಾಗಿದ್ದಾರೆ. ಯು.ಕೆ ಪ್ರವಾಸದ ವೇಳೆ ಒಂದು ಒಳ್ಳೆಯ ಡಿಜಿಟಲ್‌ ಕ್ಯಾಮೆರಾ ಖರೀದಿಸಿದ್ದಾರಂತೆ, ಅದರಿಂದ ಒಳ್ಳೊಳ್ಳೆಯ ‘ಪ್ರಕೃತಿಚಿತ್ರ'ಗಳನ್ನು ಕ್ಲಿಕ್ಕಿಸಿ ದಿನಕ್ಕೊಂದರಂತೆ ಸ್ನೇಹಿತವರ್ಗಕ್ಕೆಲ್ಲ ‘ಗುಡ್‌ ಮಾರ್ನಿಂಗ್‌ ಮೈಲ್‌' ಶೀರ್ಷಿಕೆಯಡಿ ಕಳಿಸುವುದು ಅವರದೀಗ ಹೊಸದೊಂದು ಹವ್ಯಾಸ.

ಸುಂದರವಾದ ಹೂಗಳ, ಎಲೆಗಳ, ಎಲೆಯ ಮೇಲೆ ಮಂಜಿನ ಹನಿಗಳ, ಗಿಡದ ಮೇಲೆ ಸೂರ್ಯರಶ್ಮಿ ಮಿನುಗುವ... ಹೀಗೆ ನಯನಮನೋಹರ ಚಿತ್ರಗಳು ಅವರ ಕ್ಯಾಮೆರಾದಲ್ಲಿ ಸೆರೆಯಾಗಿ ಅಲ್ಲಿಂದ ಮಿತ್ರವರ್ಗಕ್ಕೆಲ್ಲ ಹಂಚಲ್ಪಡುತ್ತವೆ. ಎಷ್ಟೊಂದು ನ್ಯಾಚುರಲ್ಲೂ ಬ್ಯೂಟಿಫುಲ್ಲೂ ಆದ ಹವ್ಯಾಸವಲ್ಲವೇ? ಖುಶಿಯಾಗುತ್ತದೆ ಅಂಥ ಈಮೈಲ್‌ನಿಂದ ದಿನವನ್ನು ಆರಂಭಿಸುವುದಕ್ಕೆ. (ಸಂತಾಸಿಂಗ್‌ ಬಂಟಾಸಿಂಗ್‌ರ ಜೋಕ್‌ಗಳನ್ನು 419ನೇ ಬಾರಿ ಫಾರ್ವರ್ಡ್‌ ಮಾಡುವವರು ನಮ್ಮಲ್ಲಿ ತುಂಬಮಂದಿ ಇದ್ದೇವೆ. ಆದರೆ ತಾನೇ ಕ್ಲಿಕ್ಕಿಸಿದ ಬೆಸ್ಟ್‌ ಫೊಟೊಗ್ರಾಫ್‌ಗಳನ್ನು ನಿಯಮಿತವಾಗಿ ಈಮೈಲ್‌ಪ್ರಸರಣ ಮಾಡುವವರು ವಸಂತ್‌ನಂಥವರು ಎಲ್ಲೋ ಅಪರೂಪಕ್ಕೆ ಸಿಗುತ್ತಾರೆ).

ವಸಂತ್‌ ಹವ್ಯಾಸ ಅದಾದರೆ, ನನ್ನದೂ ಹವ್ಯಾಸವೋ ಅಭ್ಯಾಸವೋ ಒಂದಿದೆ -ಹೆಚ್ಚುಕಡಿಮೆ ಎಲ್ಲ ಈಮೈಲ್‌ಗೂ ಕನಿಷ್ಠ ಒಂದು ವಾಕ್ಯದ್ದಾದರೂ ಉತ್ತರ ಬರೆಯುವುದು! ಅಷ್ಟೊಂದು ಆಸ್ಥೆಯಿಂದ ಆದರದಿಂದ ಈಮೈಲ್‌ ಕಳಿಸಿದವರಿಗೆ ಮಿನಿಮಮ್‌ ಅಕ್ನೊಲೆಡ್ಜ್‌ಮೆಂಟ್‌ ಆದರೂ ಮಾಡಬೇಕು ಎನ್ನುವ ಒಂದು ಭಾವನೆಯೇ ಆ ಅಭ್ಯಾಸದ ಸದುದ್ದೇಶ. ವಸಂತ್‌ ಅವರಿಗೆ ನಾನು ದಿನಾ ರಿಪ್ಲೈ ಮಾಡುವುದಿಲ್ಲವಾದರೂ ಅವರು ಕಳಿಸಿದ ಚಿತ್ರ ತತ್‌ಕ್ಷಣದ ಪ್ರತಿಕ್ರಿಯೆಯೇನಾದರೂ ಹೊರಹೊಮ್ಮಿಸುವಂತಿದ್ದರೆ ತಪ್ಪದೇ ಉತ್ತರಿಸುತ್ತೇನೆ.

ಮೊನ್ನೆ ಒಂದು ದಿನದ ಗುಡ್‌ಮಾರ್ನಿಂಗ್‌ ಈಮೈಲ್‌ನಲ್ಲಿ ವಸಂತ್‌ ಒಂದು ಚಂದದ ಗುಲಾಬಿ ಹೂವಿನ ಕ್ಲೋಸ್‌ಅಪ್‌ ಶಾಟ್‌ ಚಿತ್ರ ಕಳಿಸಿದ್ದರು. ಅದನ್ನು ನೋಡಿದ ಕೂಡಲೆ ನನಗೆ ‘ಈ ಗುಲಾಬಿಯು ನಿನಗಾಗಿ ಇದು ಚೆಲ್ಲುವ ಪರಿಮಳ ನಿನಗಾಗಿ...' ಚಿತ್ರಗೀತೆ ನೆನಪಾಯಿತು. ವಸಂತ್‌ ಅವರು ಶಾಸ್ತ್ರೀಯ ಸಂಗೀತವನ್ನೂ ಕಲಿತಿರುವವರು/ಕಲಿಯುತ್ತಿರುವವರು ಎಂಬ ವಿಚಾರವೂ ನನಗೆ ಗೊತ್ತಿರುವುದರಿಂದ ಅವತ್ತು ಏನು ಮಾಡಿದೆನೆಂದರೆ ಆ ಗುಲಾಬಿ ಚಿತ್ರಕ್ಕೆ ಉತ್ತರವಾಗಿ ಮುಳ್ಳಿನಗುಲಾಬಿ ಚಿತ್ರಗೀತೆಯ ಆ ಸಾಲುಗಳನ್ನು ಬರೆದು ಆವರಣದಲ್ಲಿ ‘ರಾಗ: ಶಿವರಂಜಿನಿ' ಎಂದೂ ಸೇರಿಸಿದ್ದೆ!

ವಸಂತ್‌ಗೆ ಆಶ್ಚರ್ಯ. ‘ವ್ಹಾವ್‌! ನಿಮಗೆ ಚಿತ್ರಗೀತೆಗಳ ರಾಗಗಳನ್ನು ಗುರುತಿಸುವಷ್ಟು ಆಳವಾದ ಸಂಗೀತಜ್ಞಾನವಿದೆಯೇ? ಸಂಗೀತ ವಿದ್ಯಾರ್ಥಿಯಾದ ನಾನೇ ಸ್ವರಪ್ರಸ್ತಾರಗಳನ್ನು ಕಲಿಯಲು, ಅವುಗಳಲ್ಲಿ ಪರಿಣತಿ ಸಾಧಿಸಲು ಕಷ್ಟಪಡುತ್ತಿದ್ದೇನೆ, ನೀವು ಚಿತ್ರಗೀತೆಗಳ ರಾಗಗಳನ್ನೂ ಗುರುತಿಸುತ್ತೀರಾ?' ಎಂದು ಆಶ್ಚರ್ಯಚಿಹ್ನೆಗಳಿಂದಲಂಕೃತವಾದ ರಿಪ್ಲೈ ಬರೆದಿದ್ದರು ನನಗೆ.

ನಿಜವಾಗಿಯೂ ನನಗೆ ಸಂಗೀತದಲ್ಲಿ ಆಳವಾದ ಜ್ಞಾನವಿದೆಯೇ? ವಸಂತ್‌ ಅವರಿಗೆ ಖುಶಿಯಾಗಲಿ ಎಂದೇ ನಾನು ಕೇವಲ ನನ್ನ ಅಲ್ಪಜ್ಞಾನವನ್ನು ಆಧರಿಸಿ ‘ಶಿವರಂಜಿನಿ ರಾಗ' ಎಂದು ಆ ಹಾಡಿನ ಸಾಲುಗಳ ಮುಂದೆ ಸೇರಿಸಿದ್ದಲ್ಲವೇ? ವಿವಿಧ ಭಾರತಿಯ ಸಂಗೀತ್‌ಸರಿತಾ ಕಾರ್ಯಕ್ರಮದಲ್ಲಿ ಯಾವಾಗಲೋ ‘ಮೇರೆ ನೈನಾ ಸಾವನ್‌ ಭಾದೋಂ ಫಿರ್‌ ಭಿ ಮೆರಾ ಮನ್‌ ಪ್ಯಾಸಾ...' ಹಾಡು, ‘ತೇರೆಮೇರೆ ಬೀಚ್‌ ಮೈಂ ಕೈಸಾ ಹೈ ಯೆ ಬಂಧನ್‌...' ಹಾಡುಗಳೆಲ್ಲ ಶಿವರಂಜಿನಿ ರಾಗದ್ದೆಂದು ಕೇಳಿದ್ದು, ಮತ್ತೆ ಯಾವುದೋ ಕನ್ನಡಪತ್ರಿಕೆಯ ಸಿನೆಮಾಪುಟಗಳಲ್ಲಿನ ಲೇಖನವೊಂದರಲ್ಲಿ ಶಿವರಂಜಿನಿ ರಾಗದ ಬಗ್ಗೆ ಸಂಗೀತ ನಿರ್ದೇಶಕರೊಬ್ಬರ ಉವಾಚಗಳನ್ನು ಓದಿದ ನೆನಪು.

‘ದೇವರದುಡ್ಡು' ಚಿತ್ರದ ‘ನಾನೇ ಎಂಬ ಭಾವ ನಾಶವಾಯಿತು ನೀನೇ ಎಂಬ ನೀತಿ ನಿಜವಾಯಿತು...' ಹಾಡು, ‘ನೀ ಬರೆದ ಕಾದಂಬರಿ' ಚಿತ್ರದ ‘ನೀ ಮೀಟಿದ ನೆನಪೆಲ್ಲವು ಎದೆ ತುಂಬಿ ಹಾಡಾಗಿದೆ...', ‘ರಥಸಪ್ತಮಿ'ಯ ‘ಶಿಲೆಗಳು ಸಂಗೀತವ ಹಾಡಿವೆ...' - ಇವೆಲ್ಲ ಶಿವರಂಜಿನಿ ರಾಗದವಂತೆ. ಹಾಗೆಯೇ ಮನಮಿಡಿಯುವ ಜನಪದಗೀತೆ ‘ತವರೂರ ಮನೆ ನೋಡಬಂದೆ ತಾಯಿ ನೆನಪಾಗಿ ಕಣ್ಣೀರತಂದೆ...', ಬೇಂದ್ರೆಯವರ ‘ನೀ ಹಿಂಗ ನೋಡಬೇಡ ನನ್ನ...' ಮುಂತಾದುವುಗಳಂತೆ ಕೇಳಲಿಕ್ಕೆ ಅದೇ ಧಾಟಿ/ರಾಗ ಭಾಸವಾಗುವ ಈ ಗುಲಾಬಿ ಗೀತೆಯೂ ಶಿವರಂಜಿನಿ ರಾಗದ್ದಿರಬೇಕು ಎಂಬ ನನ್ನದೇ ಕಲಿಕೆಯ, ಆಳವಿಲ್ಲದ ಬಟ್‌ ‘ಅಗಲವಾದ' ಜ್ಞಾನವನ್ನು ಬಳಸಿ ವಸಂತ್‌ಗೆ ನಾನು ಉತ್ತರಿಸಿದ್ದಾಗಿತ್ತು.

* * *

ಇಷ್ಟು ಹೊತ್ತಿಗೆ ನೀವು ಯೋಚಿಸತೊಡಗಿರಬಹುದು ಏನಿದು ಆಳ-ಅಗಲಗಳ ಲೆಕ್ಕಾಚಾರ, ಅದೂ ಜ್ಞಾನದ ವಿಷಯದಲ್ಲಿ ಎಂದು. ಈಗ ಇವತ್ತಿನ ವಿಷಯಕ್ಕೆ ಬರೋಣ. ನನ್ನದು ಆಳವಾದ ಜ್ಞಾನವಲ್ಲ, ಏನಾದರೂ ಕಿಂಚಿತ್‌ ಇದ್ದರೆ ಅದು ಅಗಲವಾದ ಜ್ಞಾನ ಎಂಬ ಪ್ರತಿಪಾದನೆಯೇ ಇವತ್ತಿನ ವಿಷಯ. ಅದಕ್ಕೇ ಇಷ್ಟು ಉದ್ದದ ಪೀಠಿಕೆ.

ನೀವು ಒಪ್ಪುತ್ತೀರೋ ಇಲ್ಲವೋ -ನನಗನಿಸುವಂತೆ, ಇವತ್ತಿನ ಮಾಹಿತಿಕ್ರಾಂತಿಯುಗದಲ್ಲಿ ನಮ್ಮಲ್ಲಿ ಹೆಚ್ಚಿನವರಿಗೆ ಹೆಚ್ಚಿನ ವಿಷಯಗಳಲ್ಲಿ ಅಗಲವಾದ ಜ್ಞಾನವೇ ಇರುವುದು. ಆಳವಾದ ಜ್ಞಾನ ಸಂಪಾದನೆಗೆ ಅತ್ಯಗತ್ಯವಾದ ಸಮಯ ಸಂಯಮ ಏಕಾಗ್ರತೆಗಳೆಲ್ಲಿವೆ ನಮಗೆಲ್ಲ? Vertical knowledge ಬೇಕು ಅಂದುಕೊಳ್ಳುತ್ತೇವೇನೊ ನಿಜ ಆದರೆ we all end up getting horizontal knowledge! ಹಾಗೆಯೇ ನಮ್ಮ ದೈನಂದಿನ ಆಗುಹೋಗುಗಳಲ್ಲಿ ನಾವು ಹೆಚ್ಚಾಗಿ ಅವಲಂಬಿಸೋದೂ ಉಪಯೋಗಿಸೋದೂ ನಮ್ಮ ಅಗಲಜ್ಞಾನವನ್ನೇ!

ಕೆಲವು ಉದಾಹರಣೆಗಳನ್ನು ನೋಡಿ. ಮೂಲ ಕಾದಂಬರಿ ಓದಲಿಕ್ಕೆ ವ್ಯವಧಾನವಿಲ್ಲ, ವಿಮರ್ಶೆಗಳನ್ನು ಓದಿ ಆ ಕಾದಂಬರಿಯ ಬಗ್ಗೆ ಭೀಷಣವಾದ ಭಾಷಣ ಕೊರೆಯುವ ಕಲೆಯನ್ನು ಕರಗತಮಾಡಿಕೊಂಡವರು ಬೇಕಷ್ಟು ಮಂದಿ ಸಿಗುತ್ತಾರೆ. ಇಡೀದಿನ ಕ್ರಿಕೆಟ್‌ಮ್ಯಾಚ್‌ ನೋಡಲಿಕ್ಕೆ ಆಗೋದಿಲ್ಲವಾದರೂ ರಾತ್ರೆ ಪ್ರಸಾರವಾಗುವ ಹೈಲೈಟ್ಸ್‌ ಅಷ್ಟೇ ನೋಡಿ ಮಾರನೆದಿನ ಆಫೀಸಲ್ಲಿ ‘ವ್ಹಾ! ನಿನ್ನೆ ದ್ರಾವಿಡ್‌ನ ಬ್ಯಾಟಿಂಗ್‌ ಅಂದ್ರೇ... ಚಿಂದಿಚಿಂದಿ' ಎಂದು ಎಕ್ಸ್‌ಪರ್ಟ್‌ ಕಾಮೆಂಟ್ಸ್‌ ಕೊಡುವವರು ತುಂಬಾ ಮಂದಿ ಇರುತ್ತಾರೆ. ಸಿನೆಮಾಗಳ ವಿಷಯವೂ ಅಷ್ಟೇ. ವಿಮರ್ಶೆ, ವರದಿಗಳನ್ನು ಓದಿ ಆ ಬಗ್ಗೆ ವಾಗ್ವಾದ ಮಾಡುತ್ತೇವೆಯೇ ಹೊರತು ಅದರ ಒಳಹೊಕ್ಕು ನೋಡುವ ಪ್ರವೃತ್ತಿ ಕಡಿಮೆ. ಪಾರ್ಟಿಗಳಲ್ಲಿ, ಫಂಕ್ಷನ್‌ಗಳಲ್ಲಿ ಲೋಕಾಭಿರಾಮ ಹರಟೆಗಳು ಅಲ್ಲಲ್ಲಿ ಸಣ್ಣಸಣ್ಣ ಗುಂಪುಗಳಲ್ಲಿ ಅವ್ಯಾಹತವಾಗಿ ನಡೆದೇ ಇರುತ್ತವಲ್ಲ, ಅಲ್ಲಿ ನಮ್ಮ ಅಲ್ಪಸ್ವಲ್ಪ ಅಗಲಜ್ಞಾನ ಧಾರಾಳವಾಗಿ ಸಾಕಾಗುತ್ತದೆ ಗುಂಪಿನೊಳಗಡೆ ಮೂಗುತೂರಿ ನನ್ನದೂ ಎರಡು ಪೈಸೆ ಎಂದು ಒಪೀನಿಯನಿಸಲಿಕ್ಕೆ.

ಇವತ್ತಿನ ವೃತ್ತಿಕ್ಷೇತ್ರದಲ್ಲಿ, ದೊಡ್ಡದೊಡ್ಡ ಉದ್ಯಮಗಳಲ್ಲಿ ಗಮನಿಸಿ. ಆಳಜ್ಞಾನಿ ಆಳಾಗಿರುತ್ತಾನೆ, ಅಗಲಜ್ಞಾನಿ ಅರಸನಾಗಿರುತ್ತಾನೆ. ಆಳವಾದ ಜ್ಞಾನವುಳ್ಳವ ಒಂದು ತಂಡದಲ್ಲಿದ್ದರೆ ಸಂಪನ್ಮೂಲ ವ್ಯಕ್ತಿಯಾಗಿ ಉಪಯೋಗವಾಗುತ್ತಾನೆನ್ನುವುದೇನೊ ಹೌದಾದರೂ ಇವತ್ತಿನ ಯಾವುದೇ ಟೀಮ್‌ಗಳಲ್ಲಿ ನೋಡಿ, ಅಗಲಜ್ಞಾನವಂತರಿಗೇ ಹೆಚ್ಚು ಪ್ರಾಶಸ್ತ್ಯ. ಇಂಜನಿಯರಿಂಗ್‌ ಓದಿದವರಿಗೂ ಎಂ.ಬಿ.ಎ ಮಾಡಿದವರಿಗೂ ವ್ಯತ್ಯಾಸ ಬರೋದು ಇಲ್ಲಿಯೇ. ಒಂದು ಟೀಮ್‌ನಲ್ಲಿ ಒಬ್ಬ ಇಂಜನಿಯರ್‌ ಇನ್ನೊಬ್ಬ ಎಂ.ಬಿ.ಎ ಇರುತ್ತಾನೆಂದುಕೊಳ್ಳಿ. ಇಂಜನಿಯರ್‌ಗೆ ವಿಷಯದಲ್ಲಿ ಅದೆಷ್ಟು ಆಳವಾದ ಜ್ಞಾನವಿದ್ದರೂ ಅದು ಒಂದು ನಿರ್ದಿಷ್ಟ ಕೆಲಸದ ಮಟ್ಟಿಗೆ ಆಯ್ತು. ಆದರೆ ಎಂ.ಬಿ.ಎ ಯವನಿಗೆ ನಿಜವಾಗಿಯೂ ಚಾಲಾಕಿನ ‘ವ್ಯವಹಾರ ಜ್ಞಾನ' ಇರೋದ್ರಿಂದ ಆತ ಮೆರೆಯುತ್ತಾನೆ. ಇಲ್ಲಿ ಸಲ್ಲುವವನು ಅಲ್ಲಿಯೂ ಸಲ್ಲುತ್ತಾನೆ...(ಲಘುವಾಗಿ ಹೇಳಬೇಕೆಂದರೆ ಇಸ್ಪಿಟ್‌ನಲ್ಲಿ ಜೋಕರ್‌ ಕಾರ್ಡ್‌ ಇದ್ದಂತೆ) ಎಂದೆನಿಸಿಕೊಂಡವರಷ್ಟೆ ಇವತ್ತು ಕಾರ್ಪೊರೇಟ್‌ ಜಗತ್ತಲ್ಲೂ ಕ್ವಿಕ್ಕಾಗಿ ಏಣಿಯನ್ನೇರಬಲ್ಲರು.

ಯಾಕೆ ನಮ್ಮಲ್ಲಿ ಜ್ಞಾನದ ಆಳ ಕಡಿಮೆಯಾಗಿ ಅಗಲ ಜಾಸ್ತಿಯಾಗುತ್ತಿದೆ? ಸೂಕ್ಷ್ಮವಾಗಿ ಗಮನಿಸಿದರೆ ನಮಗೇ ಗೊತ್ತಾಗುತ್ತದೆ. ಆಧುನಿಕ ಸೌಲಭ್ಯಗಳು ಅನುಕೂಲಗಳು, ಕೈಗಾರಿಕಾಕ್ರಾಂತಿ, ಅಟೊಮೇಷನ್‌, ಕುತ್ತಿಗೆಕಡಿಯುವಸ್ಪರ್ಧೆ (cut-throat competitionಗೆ ನನ್ನ ಕನ್ನಡಾನುವಾದ) ಇತ್ಯಾದಿಯೆಲ್ಲವೂ ನಮ್ಮನ್ನು ಅಗಲ ಜ್ಞಾನವಂತರನ್ನಾಗಿಸುತ್ತವೆ. ಮಾತ್ರವಲ್ಲ, ಆಳಜ್ಞಾನದ ಅಂತರ್ಜಲವನ್ನು ಬತ್ತಿಸಿಬಿಡುತ್ತವೆ. ಹಿಂದೆಲ್ಲ ಸಮಾಜದ ರಚನೆ ಹೇಗಿತ್ತು ನೋಡಿ. ಕುಂಬಾರ, ಕಮ್ಮಾರ, ದರ್ಜಿ, ಚಿನಿವಾರ, ಪಂಡಿತ, ಪುರೋಹಿತ ಹೀಗೆ ವೃತ್ತಿಪರ ಕುಶಲತೆಯ ಜನ ತಮ್ಮದೇ ಆದ ಆಳಜ್ಞಾನದಿಂದ ಸಮಾಜದಲ್ಲಿ ನಿರ್ದಿಷ್ಟ ಗೌರವದ ಸ್ಥಾನತುಂಬಿರುತ್ತಿದ್ದರು. ಈಗೆಲ್ಲ ಈ ವೃತ್ತಿಕೌಶಲ್ಯ ಎಲ್ಲಿದೆ? ಎಲ್ಲದಕ್ಕೂ ‘ಡು ಇಟ್‌ ಯುವರ್‌ಸೆಲ್ಫ್‌' ಕಿಟ್‌ಗಳು. ಅಮೆರಿಕದಲ್ಲಂತೂ ಎಲ್ಲವೂ ಒಂದೋ ಅಟೊಮೇಟೆಡ್‌ ಇಲ್ಲವೆ ‘ ಸೆಲ್ಫ್‌ ಸರ್ವಿಸ್‌'. ಪರಿಣಾಮವಾಗಿ ಚೂರುಪಾರು ಎಲ್ಲವನ್ನೂ ನಾವೇ ಕಲಿತಿರಬೇಕಾದ ಪರಿಸ್ಥಿತಿ.

ಆಳಜ್ಞಾನದ ಅಂತರ್ಜಲವನ್ನು ಬತ್ತಿಸಿ ಅಗಲಜ್ಞಾನದ ದೀಪ ಹೊತ್ತಿಸುವದರಲ್ಲಿ ‘ಅಂತರ್ಜಾಲ'ದ ಪಾತ್ರ ಎಷ್ಟು ಅಗಾಧವಾದುದು, ಅದ್ಭುತವಾದುದು ಎಂದು ನಮಗೆಲ್ಲರಿಗೂ ಗೊತ್ತೇ ಇದೆ. ಕೇವಲ ಒಂದು ದಶಕಕ್ಕಿಂತಲೂ ಕಡಿಮೆ ಅವಧಿಯಲ್ಲಿ ನಮ್ಮ ಕಣ್ಣೆದುರಿಗೇ ಇಡೀ ವಿಶ್ವವನ್ನು ಒಂದು ಗ್ರಾಮವನ್ನಾಗಿಸಿದೆ ಈ ಇನ್‌ಕ್ರೆಡಿಬಲ್‌ ಇಂಟರ್‌ನೆಟ್‌! ಹತ್ತು ವರ್ಷಗಳ ಹಿಂದೆ, ಒಂದು ವಿಷಯದ ಬಗ್ಗೆ ತಿಳಿದುಕೊಳ್ಳಬೇಕಿದ್ದರೆ ಗ್ರಂಥಾಲಯದ ಮೊರೆಹೋಗಬೇಕಾಗುತ್ತಿತ್ತು. ಆದರೆ ಈಗ? ಗೂಗಲಿಸಿದರೆ (ಅದೂ ಬೇಕಿದ್ದರೆ ವೈರ್‌ಲೆಸ್‌ ನೆಟ್‌ವರ್ಕ್‌ ಉಪಯೋಗಿಸಿ) ಜಗದಗಲದ ಜಗಲಿಯ ಮೇಲೆ ನಿಂತು ಮಾಹಿತಿಯಂಗಳವನ್ನು ದೃಷ್ಟಿಸಿದಂತೆಯೇ! ಅಂತರ್ಜಾಲ ಮತ್ತು ಅಗಲಜ್ಞಾನಗಳು ಅನುಗ್ರಹಿಸಿರುವ ಇನ್ನೊಂದು ವಿಶಿಷ್ಟ ಅನುಕೂಲವೆಂದರೆ - ಏಕಕಾಲಕ್ಕೆ ನಾವು something about everything, everything about something ಅರಿಯಬಲ್ಲೆವು! ನಮ್ಮ ಚಿತ್ತಚಾಂಚಲ್ಯ ಮಾತ್ರ ಮೊದಲನೆಯದರತ್ತ ವಾಲುತ್ತದೆ, ಕ್ರಮೇಣ ನಾವು ಅಗಲಜ್ಞಾನಿಗಳಾಗುತ್ತೇವೆ!

ಅಷ್ಟಾದರೂ ನಮಗೆ, ಆಳವಾದ ಅಧ್ಯಯನಕ್ಕೆ ಜ್ಞಾನವರ್ಧನೆಗೆ ಮನ್ನಣೆಯಿದ್ದ ಗತವೈಭವದ ದಿನಗಳು ನೆನಪಾಗುತ್ತವೆಯಲ್ಲವೇ? ಜಾನೆ ಕಹಾಂ ಗಯೇ ವೊ ದಿನ್‌... ಎಂದೆನೆಸಿ ಒಂದು ವಿಷಾದದ ಗೆರೆ ಮೂಡುತ್ತದೆಯಲ್ಲವೇ? ಅಂದಹಾಗೆ, ‘ಜಾನೆ ಕಹಾಂ ಗಯೇ ವೊ ದಿನ್‌...' ಸಹ ಶಿವರಂಜಿನಿ ರಾಗವನ್ನಾಧರಿಸಿದ ಹಾಡು - as per my horizontal knowledge:&)

ಇಂಟರ್‌ನೆಟ್‌ ಬಿಟ್ಟರೆ ನ್ಯೂಸ್‌ಪೇಪರ್‌ (ಓದಲಿಕ್ಕೆ ಟೈಮಿದ್ದರೆ) ನಮಗೆ ಬೈಬಲ್ಲು, ಮೂರ್ಖರಪೆಟ್ಟಿಗೆ ಮಹಾಕೋಶ. ಈ ಪರಿಯಲ್ಲಿ ನಮ್ಮ ಜ್ಞಾನಾರ್ಜನೆ. ಅದರ ಪ್ರಯೋಗ ನಮ್ಮ ನಿತ್ಯಾವಳಿಯ ಮಾತಿನಲ್ಲಿ, ನಡತೆಯಲ್ಲಿ. ಬೇರೆಲ್ಲ ಯಾಕೆ, ನಮ್ಮ ಈ ವಿಚಿತ್ರವಾದ ವಿಚಿತ್ರಾನ್ನ ಅಂಕಣವು ಮಾಡುತ್ತಿರುವುದಾದರೂ ಏನು? ನೂರನಲ್ವತ್ತೆರಡು ವಾರಗಳ ಕೊರೆತದಲ್ಲಿ ಒಂದುಸಲವಾದರೂ ಆಳವಾದ ಜ್ಞಾನಕ್ಕೆ ಒತ್ತುಕೊಡುವ ಪ್ರಯತ್ನ ಮಾಡಿದ್ದಿದೆಯೇ? ಜಗದಗಲ ವಿಷಯಗಳನ್ನೆಲ್ಲ ತೇಲಿಸುತ್ತ ಗೇಲಿಸುತ್ತ ಹೋಲಿಸುತ್ತ ವಾಲಿಸುತ್ತ ಮತ್ತೂಮತ್ತೂ ಅಗಲಜ್ಞಾನಕ್ಕೇ ಅನುವುಮಾಡಿಕೊಡುತ್ತಾ ಬಂದಿರುವುದನ್ನು ಬಿಟ್ಟರೆ ಹೇಳಿಕೊಳ್ಳುವಂಥ ಸಾಧನೆ ಏನು ಬಂತು? ಪ್ರತಿವಾರವೂ ಹೊಸಹೊಸ conceptಗಳೇನೊ ಮೋಜಾಗಿರುತ್ತವಾದರೂ content ಸಹ ಇನ್ನೂ ಒಂದಿಷ್ಟು ‘ಆಳ'ವಾಗಿರುತ್ತಿದ್ದರೆ... ಅಂತನಿಸುವುದಿಲ್ಲವೆ? ಏನ್ಮಾಡೋದ್‌ಹೇಳಿ, ಈ ವಿಚಿತ್ರಾನ್ನ ಕುಕ್ಕು ಕೇವಲ ಅಗಲಜ್ಞಾನಿ. How I wish I was ಆಳಜ್ಞಾನಿ in at least one field!

ಅದೇನೇ ಇರಲಿ. ಆಳ-ಅಗಲಗಳ ಸಂಗತಿ ಸದ್ಯಕ್ಕೆ ಇಷ್ಟು ಸಾಕು. ಜಸ್ಟ್‌ ಈ ದೃಷ್ಟಿಕೋನದಿಂದ ನೀವೆಂದಾದರೂ ನಿಮ್ಮದೇ ಅಥವಾ ಬೇರೆಯವರ ಜ್ಞಾನಮಾಪನೆಯನ್ನು ಮಾಡಿದ್ದಿದೆಯೇ ಅಂತ ಒಂದು ಕಾನ್ಸೆಪ್ಟ್‌ ಪರಿಚಯಿಸಲಿಕ್ಕಷ್ಟೆ, ವಸಂತ್‌-ಗ್ರೀಟಿಂಗ್‌-ಗುಲಾಬಿ-ಶಿವರಂಜನಿ ಅಂತೆಲ್ಲ ಕೊಂಕಣಸುತ್ತಿ ಮೈಲಾರಕ್ಕೆ ಬಂದು ಈ ವಿಷಯವನ್ನು ಪ್ರಸ್ತಾಪಿಸಿದ್ದು. ಒಂದು ಸ್ವಲ್ಪ ನಿಮ್ಮ ಚಿಂತನೆಗೆ ಮೇವು ಇರಲಿ ಎಂಬ ಆಶಯದಿಂದ. ನಿಮ್ಮ ಆಳವಾದ ಅನುಭವಗಳು, ಅಗಲವಾದ ಅನಿಸಿಕೆಗಳು ಮತ್ತು ಉನ್ನತವಾದ ಅಭಿಪ್ರಾಯಗಳು - ಏನಿದ್ದರೂ ಪತ್ರ ಬರೆದು ತಿಳಿಸಿ. ವಿಳಾಸ -

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
We all end up getting horizontal knowledge! ThatsKannanda Vichitranna columnist Srivathsa Joshi analyses Vertical Knowledge and Horizontal Knowledge.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more