• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಕಳಿಕೆಯ ಬಗ್ಗೆ ಒಂದಿಷ್ಟು ಈ-ಕಲಿಕೆ

By Staff
|
Srivathsa Joshi *ಶ್ರೀವತ್ಸ ಜೋಶಿ

ಈ ಲೇಖನವನ್ನು ಓದುವಾಗ ಅಥವಾ ಓದಿ ಮುಗಿಸಿದಾಗ ನಿಮಗೆ ಆಕಳಿಕೆ ಬರುತ್ತದೆ!

ಅಥವಾ, ಕನಿಷ್ಠಪಕ್ಷ ಹಾಗೆಂದು ಆರಂಭದಲ್ಲೇ ಪ್ರಾಮಾಣಿಕವಾಗಿ, ಬೋಲ್ಡಾಗಿ ಸ್ಪಷ್ಟಪಡಿಸಿಬಿಟ್ಟ ಹೆಗ್ಗಳಿಕೆ(?) ಈ ಲೇಖನಕ್ಕೆ ಬರುತ್ತದೆ. ಸಿಗರೇಟ್‌ ಪ್ಯಾಕೆಟ್‌ ಮೇಲೆ ಶಾಸನ ವಿಧಿಸಿದ ಎಚ್ಚರಿಕೆ... ಅಂತ ಇರೋದಿಲ್ವಾ, ಹಾಗೆ ಇದೂ ಒಂದು ಎಚ್ಚರಿಕೆ. ಅಷ್ಟಕ್ಕೂ ಆಕಳಿಕೆಯ ಅರ್ಥವೇ ‘ಬಾಯ್ತೆರೆದು ತಿಳಿಸಿದ ಪ್ರಾಮಾಣಿಕ ಅಭಿಪ್ರಾಯ’ ಎಂದುಕೊಳ್ಳಬಹುದಲ್ಲವೇ? (Yawn = An honest opinion openly expressed)

ಆಕಳಿಕೆ ಯಾರಿಗೆ ಬರುವುದಿಲ್ಲ ಹೇಳಿ? ಸೃಷ್ಟಿಕರ್ತ ಬ್ರಹ್ಮನೇ ಆಕಳಿಸಿದ ದಾಖಲೆಗಳು (ಸೃಷ್ಟಿಕಾರ್ಯ ಮಾಡಿ ಮಾಡಿ ಮಾಡಿ ಮಾಡಿ ಬೋರ್‌ ಹೊಡೆದು?) ಪುರಾಣಗಳಲ್ಲಿವೆಯೆಂದ ಮೇಲೆ ನಾವು ನೀವು ಆಕಳಿಸುವುದೇನು ಪಾಡು? ಬ್ರಹ್ಮ ಆಕಳಿಸಿದ ಆ ಕಥೆ (ಅಂದರೆ ಬೇರಾವುದೋ ಕಥೆ ಕೇಳಿ ಬ್ರಹ್ಮ ಆಕಳಿಸಿದ್ದಲ್ಲ, ಬ್ರಹ್ಮನ ಆಕಳಿಕೆಯದೇ ಕಥೆ) ನಿಮಗೆ ಗೊತ್ತಾ?

ಬ್ರಹ್ಮನ ‘ಒಂದು ದಿನ’ ಎಂದರೆ ನಮ್ಮ ಎಷ್ಟು ಮಾನವವರ್ಷಗಳು ಅಂತ ಗೊತ್ತಲ್ಲ? ಕೃತ, ತ್ರೇತಾ, ದ್ವಾಪರ, ಕಲಿ ಯುಗಗಳ ಒಂದು ಆವರ್ತಕ್ಕೆ ಒಂದು ಮಹಾಯುಗ ಎಂದು ಹೆಸರು. ಅದು ಸುಮಾರು 4.32 ಮಿಲಿಯ ಮಾನವವರ್ಷಗಳಿಗೆ ಸಮ. ಇಂತಹ 72 ಮಹಾಯುಗಗಳೆಂದರೆ ಒಂದು ಮನ್ವಂತರ. 14 ಮನ್ವಂತರಗಳಾದರೆ ಬ್ರಹ್ಮನಿಗೆ ಒಂದು ದಿನ ಆದಂತೆ. ಬ್ರಹ್ಮನ ಆ ಒಂದು ದಿನಕ್ಕೆ ‘ಕಲ್ಪ’ ಎನ್ನುವುದು. ಒಮ್ಮೆ ಒಂದು ಕಲ್ಪ ಮುಗಿಯುವ ಹೊತ್ತಿಗೆ ಅವತ್ತಿನ ಸ್ಟ್ರೆಸ್‌ಫುಲ್‌ ಡ್ಯೂಟಿ ಮುಗಿದಾಗ ಬ್ರಹ್ಮನಿಗೆ ನಿದ್ದೆಯ ಮಂಪರು ಬಂತು (ಬ್ರಹ್ಮ ಆಫೀಸಿನಲ್ಲಿ ನಿದ್ದೆ ಮಾಡಿ ಹಗಲುಗನಸು ಕಾಣುತ್ತಾನೊ ಇಲ್ಲವೊ ಗೊತ್ತಿಲ್ಲ), ಕಣ್ಣುರೆಪ್ಪೆಗಳು ಸೇರಿಕೊಂಡವು, ಮಾತ್ರವಲ್ಲ ಅವನಿಗೇ ಅರಿವಿಲ್ಲದಂತೆ ಲೈಟಾಗಿ ಒಂದು ಆಕಳಿಕೆಯೂ ಬಂತು!

ಅಷ್ಟೇ ಆಗಿದ್ದರೆ ಅದೇನೂ ದೊಡ್ಡ ಸಂಗತಿಯಾಗುತ್ತಿರಲಿಲ್ಲ, ಬ್ರಹ್ಮನ ಆ ಆಕಳಿಕೆಯಿಂದಾಗಿ ಒಂದು ಅವಘಡವೇನಾಯ್ತೆಂದರೆ ಹಾಗೆ ತೆರೆದ ಬಾಯಿಂದ ವೇದಗಳು ಜಾರಿಹೋದುವು (ಅವೇನು ಹಲ್ಲುಗಳ ಸೆಟ್ಟಾ ಹಾಗೆ ಜಾರಿಬೀಳಲು ಅಂತ ಕೇಳಬೇಡಿ)! ಇದನ್ನೇ ಹೊಂಚುಹಾಕಿ ಕುಳಿತಿದ್ದ ಹಯಗ್ರೀವನೆಂಬ ಅಸುರನು ಆ ವೇದಗಳನ್ನು ಅಪಹರಿಸಿದ್ದು, ಆಮೇಲೆ ಮಹಾವಿಷ್ಣು ಮತ್ಸ್ಯಾವತಾರ ತಾಳಿ ಆ ಅಸುರನನ್ನು ಸದೆಬಡಿದದ್ದು, ವೇದಗಳನ್ನು ವಾಪಾಸ್‌ ಬ್ರಹ್ಮನಿಗೆ ಒಪ್ಪಿಸುವುದರಲ್ಲಿ ಯಶಸ್ವಿಯಾದದ್ದು... ಇತ್ಯಾದಿ ಕಥೆ. ಯಕ್ಕಶ್ಚಿತ್‌ ಆಕಳಿಕೆಯಿಂದಾದ ಆಕಸ್ಮಿಕ ಎಷ್ಟೊಂದು ಗಂಭೀರವಾಯ್ತು ನೋಡಿ!

ಬ್ರಹ್ಮನ ಇನ್ನೊಂದು ಆಕಳಿಕೆಯ ಉಲ್ಲೇಖ ಬರುವುದು ಗಣೇಶಪುರಾಣದಲ್ಲಿ. ಈ ಸಲ ಬ್ರಹ್ಮ ಆಕಳಿಸಿದಾಗ ಒಂದು ಅಸುರಶಕ್ತಿಯ ಸೃಷ್ಟಿಯಾಗುತ್ತದೆ. ಆಕರ್ಷಕವಾದ ತೇಜಸ್ಸು, ಮೈಮಾಟ ಇದ್ದುದರಿಂದ ಆ ಅಸುರಬಾಲಕನಿಗೆ ಬ್ರಹ್ಮನೇ ‘ಸಿಂದೂರ’ ಎಂದು ಹೆಸರಿಟ್ಟು , ಅದೃಶ್ಯನಾಗಿರಬಲ್ಲ ಮತ್ತು ಎಲ್ಲಿಬೇಕೆಂದರಲ್ಲಿ ಸಂಚರಿಸಬಲ್ಲ ವರವನ್ನೂ ಕೊಟ್ಟುಬಿಟ್ಟ. ತೃಪ್ತನಾಗಿ ತೆಪ್ಪಗೆ ಇರಬೇಕಿದ್ದ ಸಿಂದೂರ ತನ್ನ ಅಟ್ಟಹಾಸವನ್ನು ತ್ರಿಮೂರ್ತಿಗಳೆದುರೂ ತೋರಿಸತೊಡಗಿದ. ಆಮೇಲೆ ಸ್ವತಃ ಬ್ರಹ್ಮನೇ ಅವನನ್ನು ಶಪಿಸಿ, ಗಣೇಶನಿಂದ ಅವನ ಮೃತ್ಯು ಎಂದು ವಿಧಿನಿಯಮ ಬರೆದು, ಮುಂದೆ ಗಣೇಶ ಒಂದು ಅವತಾರದಲ್ಲಿ ಸಿಂದೂರನನ್ನು ಖತಂ ಮಾಡಿಬಿಟ್ಟನಂತೆ.

ಆಕಳಿಕೆಯ ಪೌರಾಣಿಕ ಮಹತ್ವವನ್ನು ಪ್ರತಿಪಾದಿಸಲಿಕ್ಕಾಗಿಯಷ್ಟೇ ಈ ಕಥೆಗಳನ್ನಿಲ್ಲಿ ಉಲ್ಲೇಖಿಸಿದ್ದು. ಪರ್ಟಿಕ್ಯುಲರ್ಲಿ ಬ್ರಹ್ಮನ ಆ ಎರಡು ಆಕಳಿಕೆಗಳು ಪ್ರಮಾದಕರವೆನಿಸಿದವೇ ವಿನಃ ಉಳಿದಂತೆ ಪುರಾಣದ ದೇವದಾನವ ಯಕ್ಷಗಂಧರ್ವರೆಲ್ಲ ನಮ್ಮೆಲ್ಲರಂತೆ ಆಗೊಮ್ಮೆ ಈಗೊಮ್ಮೆ matter of fact ಆಗಿ ಆಕಳಿಸುತ್ತಿದ್ದರಿರಬಹುದು. ಆಕಳಿಕೆ, ಸೀನು, ತೇಗು, ಬಿಕ್ಕಳಿಕೆ, ಗೊರಕೆಗಳೆಲ್ಲ ಜೀವಿಗಳೆಲ್ಲದಕ್ಕೂ ಮ್ಯಾಟರ್‌ ಆಫ್‌ ಫಾಕ್ಟೇ ತಾನೆ?

ಇವೆಲ್ಲದರ ಪೈಕಿ ಆಕಳಿಕೆಯದೊಂದು ಅಗ್ಗಳಿಕೆ ಇದೆ. ಒಂದು ಸಂಗತಿಯನ್ನು ನೀವು ಗಮನಿಸಿದ್ದೀರೋ ಇಲ್ಲವೋ - ಸೀನು, ಬಿಕ್ಕು, ತೇಗು, ಗೊರಕೆಗಳೆಲ್ಲ ಇನ್ನೊಬ್ಬರಿಗೆ ಬರುತ್ತಿದ್ದರೆ ಅದನ್ನು ನೋಡಿ ನಮಗೆ ಬರಬೇಕೇನಂತಿಲ್ಲ, ಆದರೆ ಆಕಳಿಕೆ ಮಾತ್ರ ಹಾಗಲ್ಲ. ಒಬ್ಬರು ಆಕಳಿಸುವುದನ್ನು ನೋಡಿದರೆ ನಮಗೂ ಆಕಳಿಕೆ ಬರುವ ಸಾಧ್ಯತೆಯಿರುತ್ತದೆ. ಆ ಮಟ್ಟಿಗೆ ಆಕಳಿಕೆ ‘ಸಾಂಕ್ರಾಮಿಕ’ ಎನ್ನಲಿಕ್ಕಡ್ಡಿಯಿಲ್ಲ.

ಯಾಕೆ ಆರೀತಿ ಆಕಳಿಕೆ ಬರುತ್ತದೆ ಎಂದು ಮನಶ್ಶಾಸ್ತ್ರಜ್ಞರು, ವೈದ್ಯರು, ವಿಜ್ಞಾನಿಗಳು ಸಂಶೋಧನೆಗಳನ್ನೂ ನಡೆಸಿದ್ದಾರೆ. ಇಲ್ಲಿ ವಾಷಿಂಗ್‌ಟನ್‌ ಡಿಸಿಯ ಅವಳಿನಗರ ಬಾಲ್ಟಿಮೋರ್‌ನಲ್ಲಿರುವ ಯುನಿವರ್ಸಿಟಿ ಆಫ್‌ ಮೇರಿಲ್ಯಾಂಡ್‌ನಲ್ಲಿ ಪ್ರೊಫೆಸರರಾಗಿರುವ ಡಾ। ರಾಬರ್ಟ್‌ ಪ್ರೊವಿನ್‌ ಎನ್ನುವವರು ಆಕಳಿಕೆಯ ವಿಷಯದಲ್ಲಿ ಸಂಶೋಧನೆಗಳನ್ನು ನಡೆಸಿ ಕೆಲ ಸಂಗತಿಗಳನ್ನು ಕಂಡುಕೊಂಡಿರುವವರಲ್ಲಿ ಅಗ್ರಗಣ್ಯರು. ಮನುಷ್ಯನಿಗೆ (ಮಾತ್ರವಲ್ಲ, ಪ್ರಾಣಿಗಳಿಗೂ) ಆಕಳಿಕೆ ಯಾಕೆ ಬರುತ್ತದೆ ಎನ್ನುವುದರಿಂದ ಹಿಡಿದು ಅದು ಸಾಂಕ್ರಾಮಿಕವಾಗಿರುವುದರ ಹಿಂದೆ ಏನು ತಥ್ಯವಿದೆ ಎಂದು ಸಹ ಡಾ।ಪ್ರೊವಿನ್‌ ಕೆಲವು ಥಿಯರಿಗಳನ್ನು ಮುಂದಿಡುತ್ತಾರೆ.

ಡಾ।ಪ್ರೊವಿನ್‌ ವ್ಯಾಖ್ಯೆಯಂತೆ ಆಕಳಿಕೆಯೆಂದರೆ ಬಾಯನ್ನು ಸಾಧ್ಯವಾದಷ್ಟೂ ತೆರೆದು ಗಾಳಿಯನ್ನು ಒಳ ಸೇವಿಸಿ, ಬಾಯ್ಮುಚ್ಚುತ್ತಿದ್ದಂತೆ ಸ್ವಲ್ಪಪ್ರಮಾಣದಲ್ಲಿ ಗಾಳಿಯನ್ನು ಹೊರಬಿಡುವ ಪ್ರಕ್ರಿಯೆ. ಈ ವ್ಯಾಖ್ಯೆಯಲ್ಲಿ ಹೊಸತೇನೂ ಇಲ್ಲ. ಆಕಳಿಕೆಯ ಉದ್ದೇಶ ದೀರ್ಘಶ್ವಾಸದಂತೆ ಹೆಚ್ಚು ಆಮ್ಲಜನಕವನ್ನು ದೇಹದೊಳಕ್ಕೆ ಸೇರಿಸಿಕೊಳ್ಳುವುದಿರಬಹುದು ಎಂದು ಕಂಡುಬಂದರೂ ಹಾಗಲ್ಲ. ಡಾ।ಪ್ರೊವಿನ್‌ ಪ್ರಯೋಗಗಳ ಪ್ರಕಾರ ಯಥೇಷ್ಟ ಆಮ್ಲಜನಕ ಪೂರೈಕೆಯಿರುವ ಸನ್ನಿವೇಶದಲ್ಲೂ ಆಕಳಿಕೆ ಬಂದೇ ಬರುತ್ತದೆ.

ಆಗಲೇ ಹೇಳಿದಂತೆ ಮನುಷ್ಯನಷ್ಟೇ ಅಲ್ಲ, ಪ್ರಾಣಿಗಳೂ ಆಕಳಿಸುತ್ತವೆ. ನಮ್ಮ ಸಾಕುಪ್ರಾಣಿಗಳಾದ ನಾಯಿ, ಬೆಕ್ಕುಗಳೆಲ್ಲ ಆಕಳಿಸುವುದನ್ನು ನಾವು ನೋಡಿರುತ್ತೇವೆ. ಹಕ್ಕಿಗಳೂ ಆಕಳಿಸುತ್ತವೆ, ಅಷ್ಟೇ ಏಕೆ, ಮೀನುಗಳೂ ಆಕಳಿಸುತ್ತವಂತೆ! ಮನುಷ್ಯನ ವಿಷಯದಲ್ಲಾದರೆ, ಭ್ರೂಣದಲ್ಲಿರುವ ಮಗು ಸುಮಾರು 11 ವಾರಗಳ ಪ್ರಾಯದ್ದಾದಾಗ ಆಕಳಿಕೆಯೂ ಅದರ ಒಂದು ಚಲನವಲನವಾಗಿರುತ್ತದೆ. ಮಗು ಚಿಕ್ಕದಿರುವಾಗ ನಿದ್ದೆಯಲ್ಲೂ ಆಕಳಿಸುವುದುಂಟು. ಸುಮಾರು ಎರಡು ವರ್ಷ ಪ್ರಾಯದ ನಂತರ ಚಿಕ್ಕಮಕ್ಕಳಿಗೂ ಆಕಳಿಕೆಯ ಸಾಂಕ್ರಾಮಿಕತೆ ಬಂದಿರುತ್ತದೆ. ಅಂದರೆ ಒಬ್ಬರು ಆಕಳಿಸುವುದನ್ನು ಕಂಡಾಗ ಬರುವ ಆಕಳಿಕೆ. (ಸದಾ ಚಟುವಟಿಕೆಯಲ್ಲಿರುವ ಮಕ್ಕಳಿಗೆ, ನಿದ್ದೆಗೆ ಸಂಬಂಧಪಟ್ಟಂತೆ ಆಕಳಿಕೆ ಬರಬಹುದೇ ವಿನಃ ಬೋರ್‌ ಹೊಡೆದು ಆಕಳಿಕೆ ಬರುವುದು ಅಷ್ಟೇ ಇದೆ ಎನ್ನಿ).

ದೊಡ್ಡವರಿಗಾದರೆ, ಬೋರ್‌ ಆಗುವುದರಿಂದ ಆಕಳಿಕೆ ಬರುತ್ತದೆಯೆನ್ನುವ ವಾದವನ್ನು ಡಾ।ಪ್ರೊವಿನ್‌ ಸಮರ್ಥಿಸುತ್ತಾರೆ. 30 ನಿಮಿಷಗಳ ಡಾಕ್ಯುಮೆಂಟರಿ ವಿಡಿಯಾ ತೋರಿಸಿದಾಗ ಮತ್ತು 30 ನಿಮಿಷಗಳ ರಾಕ್‌ ಮ್ಯೂಸಿಕ್‌ ವಿಡಿಯಾ ತೋರಿಸಿದಾಗ ಪ್ರೇಕ್ಷಕರಲ್ಲಿ ಆಕಳಿಕೆಯ ಪ್ರಮಾಣಗಳನ್ನು ಗುರ್ತುಹಾಕಿದ ಅವರು, ಲವಲವಿಕೆಯಿಲ್ಲದ ಸಂಗತಿಗಳನ್ನು ಮನಸ್ಸಿನೊಳಗೆ ತುರುಕಿಸುವ ಪ್ರಯತ್ನ ನಡೆದಾಗ ಆಕಳಿಕೆಯ ಸಂಭವ ಹೆಚ್ಚು ಎಂದು ಸಾಬೀತುಪಡಿಸಿದ್ದಾರೆ. ತನ್ನ ವಿದ್ಯಾರ್ಥಿಗಳಿಗೆ ‘ಆಕಳಿಕೆ ಡೈರಿ’ಯನ್ನು ಕೊಟ್ಟು ಪ್ರತಿ ಆಕಳಿಕೆಯ ಸಂದರ್ಭವನ್ನು ದಾಖಲಿಸುವಂತೆ ಸೂಚಿಸಿದ್ದರು. ನಿದ್ದೆ ಬರುವುದಕ್ಕೆ ಸ್ವಲ್ಪ ಮೊದಲು ಮತ್ತು ನಿದ್ದೆಯಿಂದೆದ್ದ ನಂತರ ಹೆಚ್ಚುಹೆಚ್ಚು ಆಕಳಿಕೆ ನಮೂದಾಗಿದ್ದುವು. (ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಆಕಳಿಕೆ ನೋಟ್‌ಬುಕ್‌ ಕೊಟ್ಟರೆ, ಇಂಗ್ಲಿಷ್‌ ಪ್ರೊಫೆಸರರ ಕ್ಲಾಸ್‌ಗೆ ಅತಿ ಹೆಚ್ಚು ಆಕಳಿಕೆ, ಮ್ಯಾಥಮ್ಯಾಟಿಕ್ಸ್‌ ಮೇಡಂ ಕ್ಲಾಸಿಗೆ ಜೀರೊ ಆಕಳಿಕೆ ದಾಖಲಾಗುತ್ತಿತ್ತೊ ಏನೊ). ಡಾ।ಪ್ರೊವಿನ್‌ರ ವಿದ್ಯಾರ್ಥಿಗಳ ಡೈರಿಯಿಂದ ತಿಳಿದುಬಂದ ಇನ್ನೊಂದು ಸಂಗತಿಯೆಂದರೆ ಸಾಮಾನ್ಯವಾಗಿ ಎಲ್ಲರೂ ಕೈ-ಕಾಲು-ಮೈಯನ್ನು stretch ಮಾಡುವಾಗ ಖಂಡಿತವಾಗೂ ಆಕಳಿಸುತ್ತಾರೆ, ಆದರೆ ಆಕಳಿಸಿದಾಗಲೆಲ್ಲ ಸ್ಟ್ರೆಚ್‌ ಮಾಡುತ್ತಾರೆ ಎಂದೇನಿಲ್ಲ.

ಅಂತೂ, ಆಕಳಿಸುವುದು ಒಂದು stereotyped action pattern ಎಂದು ಡಾ।ಪ್ರೊವಿನ್‌ರ ಅಭಿಪ್ರಾಯ. ಅಂದರೆ, ಊಹಿಸಬಲ್ಲ ಕ್ರಮವೊಂದರಲ್ಲಿ ಜರಗುವ ಚಟುವಟಿಕೆ. ಆದರೆ ಆ ಚಟುವಟಿಕೆಯ ಉದ್ದೇಶ? ಒಂದು ನಮೂನೆಯಲ್ಲಿ ಸ್ಟ್ರೆಚಿಂಗ್‌ನ ಉದ್ದೇಶವೇ ಆಕಳಿಕೆಯದೂ. ಆಕಳಿಸುವಾಗ ನಾವು ಬಾಯನ್ನು ಸ್ಟ್ರೆಚ್‌ ಮಾಡುವುದೇ ತಾನೆ? ಆದರೆ ಸಾಂಕ್ರಾಮಿಕತೆ ಯಾಕೆ? ಒಬ್ಬರು ಆಕಳಿಸುವುದನ್ನು ನೋಡಿದರೆ ನಮಗೂ ಆಕಳಿಕೆ ಬಂದುಬಿಡುವುದು ಯಾಕೆ? ಈ ಬಗ್ಗೆ ಡಾ।ಪ್ರೊವಿನ್‌ ಸಂಗ್ರಹಿಸಿದ ಕೆಲ ಅಂಕಿ-ಅಂಶಗಳು :

  • ವ್ಯಕ್ತಿಯಾಬ್ಬ 5 ನಿಮಿಷಗಳಲ್ಲಿ 30 ಸಲ ಆಕಳಿಸಿದ್ದನ್ನು ವಿಡಿಯಾದಲ್ಲಿ ತೋರಿಸಿದಾಗ ಗುಂಪಿನಲ್ಲಿ 55% ಮಂದಿ ಆಕಳಿಸಿದರು. ಅದೇ ಗುಂಪಿಗೆ, ಇನ್ನೊಂದು ವಿಡಿಯಾದಲ್ಲಿ ವ್ಯಕ್ತಿಯಾಬ್ಬ 5 ನಿಮಿಷಗಳಲ್ಲಿ 30 ಸಲ ನಕ್ಕಿದ್ದನ್ನು ತೋರಿಸಿದಾಗ 21% ಮಂದಿಗಷ್ಟೇ ಆಕಳಿಕೆ ಬಂತು.
  • ಅಂಧ ಜನರಿಗೆ ಕೇಳುವಂತೆ ಆಕಳಿಕೆಯ ಆಡಿಯಾ ಕ್ಯಾಸೆಟ್‌ ಹಾಕಿದಾಗ ಅವರೂ ಆಕಳಿಸತೊಡಗಿದರು.
  • ಆಕಳಿಕೆಯ ಬಗ್ಗೆ ಓದುತ್ತಿದ್ದ ಜನ, ಆಕಳಿಕೆಯ ಬಗ್ಗೆ ಯೋಚಿಸುತ್ತಿದ್ದ ಜನ ಸಹ ತಮಗರಿವಿಲ್ಲದಂತೆಯೇ ಆಕಳಿಸುತ್ತಿದ್ದರು.
ಸಂಶೋಧನೆಗಳನ್ನು ಮುಂದುವರಿಸಿರುವ ಡಾ।ಪ್ರೊವಿನ್‌ ಹೇಳುವಂತೆ, ಆಕಳಿಕೆಯೆಂದರೆ ಬರೀ ಒಂದು action pattern ಮಾತ್ರವಲ್ಲ ಇನ್ನೊಂದು ಆಕ್ಷನನ್ನು ಸ್ಟಿಮ್ಯುಲೇಟ್‌ ಮಾಡುವ ತಾಕತ್ತೂ ಅದಕ್ಕಿದೆ! ಹಾಗಾಗಿಯೇ ಬೇರೊಬ್ಬರು ಆಕಳಿಸುವುದನ್ನು ನೋಡಿದರೆ ನಾವೂ ಆǚǚǚǚǚಕಳಿಸುತ್ತೇವೆ!

*

ಅಂದಹಾಗೆ ಆಕಳಿಕೆ (yawn) ಬಗೆಗಿನ ಈ ಸಂಚಿಕೆಯ ಕೊನೆಗೊಂದು ಪ್ರಶ್ನೆ (ಅಯ್ಯೋ, ಪ್ರಶ್ನೆ ಬೇರೆ ಇದೆಯಾ ಅಂತ ಆಕಳಿಸಬೇಡಿ)! ರೋಮ್‌ನಲ್ಲಿ ರೋಮನ್ನನಾಗಿರು ಅಂತಿದ್ದ ಹಾಗೆ ರೋಮ್‌ನಲ್ಲಿ ರೋಮನ್‌ ಮಾದರಿಯಲ್ಲೇ ಆಕಳಿಸು ಎಂದು ಆದೇಶ ಕೊಡುವಂತಿರುವ ಈ "Yawn a more roman way" ವಾಕ್ಯದ ವಿಶೇಷವೇನಾದರೂ ನಿಮಗೆ ತಿಳಿಯಿತೇ? ವಾಕ್ಯವನ್ನು ಇನ್ನೊಮ್ಮೆ ಸೂಕ್ಷ್ಮವಾಗಿ ನೋಡಿ. ವೈಶಿಷ್ಟ್ಯ ಏನೆಂದು ಗೊತ್ತಾದರೆ ಬರೆದು ತಿಳಿಸಿ. ವಿಳಾಸ - srivathsajoshi@yahoo.com.

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more