ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾವ ಡ್ರೆಸ್‌ ಹಾಕಿಕೊಳ್ಳಲಿ?

By Staff
|
Google Oneindia Kannada News
Srivathsa Joshi *ಶ್ರೀವತ್ಸ ಜೋಶಿ

ಯಾವ ಡ್ರೆಸ್‌ ಹಾಕಿಕೊಳ್ಳಲಿ? -ಪ್ರಶ್ನೆಗೆ ಸ್ವಲ್ಪ ಕಿಲಾಡಿತನದ (cheekನಲ್ಲಿ tongueನ) ಉತ್ತರವನ್ನೇ ಕೊಡುವುದಾದರೆ, ‘ಯಾವುದಾದ್ರೂ ಸರಿ, ಅಂತೂ ಡ್ರೆಸ್‌ ಹಾಕ್ಕೊಳ್ತಿಯಲ್ಲ, ಅದು ಮುಖ್ಯ!’ ಎನ್ನಬಹುದು. ಆದರೆ ಈ ಪ್ರಶ್ನೆ -‘ಯಾವ ಡ್ರೆಸ್‌ ಹಾಕಿಕೊಳ್ಳಲಿ?...’ ಇದೆಯಲ್ಲ ಇದು ಸಾಮಾನ್ಯ ಪ್ರಶ್ನೆ ಅಂತೇನೂ ಅಪ್ಪಿತಪ್ಪಿಯೂ ಭಾವಿಸಬೇಡಿ. ಇವತ್ತು ಆಫೀಸಿಗೆ ಹೋಗುವಾಗ ಯಾವ ಶರ್ಟ್‌(ಟಾಪ್‌) ಹಾಕಲಿ, ಈ ವೀಕೆಂಡ್‌ ಪಾರ್ಟಿಗೆ ಹೋಗುವಾಗ ಯಾವ ದಿರಿಸು (= ‘ಡ್ರೆಸ್‌’ನ ತದ್ಭವ?) ಧರಿಸಲಿ, ಮುಂದಿನ ತಿಂಗಳು ಕ್ಲೋಸ್‌ಫ್ರೆಂಡ್‌ ಒಬ್ಬರ ಮದ್ವೆ ಇದೆ ಆದಿನ ಯಾವ ಸೀರೆ ಉಟ್ಟುಕೊಳ್ಳಲಿ... ಹೀಗೆ ಡ್ರೆಸ್‌ ಬಗ್ಗೆ ಪಂಚವಾರ್ಷಿಕ ಯೋಜನೆಗಿಂತಲೂ ಗಹನವಾಗಿ ಪ್ಲಾನಿಸುವವರಿರುತ್ತಾರೆ. ಇರುತ್ತಾರೆ ಏನು, ನಾವೂ ಅದನ್ನೇ ಮಾಡೋದು, ಅದ್ಯಾವುದೇ ಸಂದರ್ಭ ಇರಲಿ ಡ್ರೆಸ್‌ ಯಾವುದಾಗಬಹುದು ಎಂದು ಸ್ವಲ್ಪವಾದರೂ ಯೋಚಿಸಿಯೇ ಧರಿಸಿಕೊಳ್ಳೋದು ... ಅಂತ ಈಗಾಗಲೇ ನಿಮ್ಮ ಮನಸ್ಸಲ್ಲೂ ಈ ವಿಚಾರದ ಬಗ್ಗೆ ಅಂಗೀಕಾರ (ನೋಡಿ, ಅಲ್ಲೂ ಬಂತು ಅಂಗಿ!) ಆಗೇಬಿಟ್ಟಿತಲ್ವೆ?

ಹೈಸ್ಕೂಲ್‌ ಮುಗಿಯುವವರೆಗೂ, ‘ಶಾಲೆಗೆ ಹೋಗುವಾಗ ಸಮವಸ್ತ್ರ ಧರಿಸಬೇಕು’ ಎಂಬುದು ಹೆಚ್ಚುಕಡಿಮೆ ಎಲ್ಲ ಶಾಲೆಗಳಲ್ಲಿ (ಭಾರತದ ವಿಷಯ ಹೇಳ್ತಿರೋದು ನಾನು, ಇಲ್ಲಿ ಅಮೆರಿಕದ ಶಾಲೆಗಳಲ್ಲಿ ಸಾಮಾನ್ಯವಾಗಿ ಯುನಿಫಾರ್ಮ್‌ ಕಾನ್ಸೆಪ್ಟೇ ಇಲ್ಲವೆನ್ನಬಹುದು) ಕಟ್ಟುನಿಟ್ಟಿನ ನಿಯಮವಾದ್ದರಿಂದ ಆಗ ಯಾವ ಡ್ರೆಸ್‌ ಹಾಕಿಕೊಳ್ಳಲಿ ಎಂಬ ಪ್ರಶ್ನೆಯೇ ಇಲ್ಲ. ಶಾಲೆಮುಗಿದು ಬೇಸಿಗೆರಜೆ ಬಂತೆಂದರೆ ಅಜ್ಜನಮನೆ/ ದೊಡ್ಡಪ್ಪನಮನೆ/ ಚಿಕ್ಕಮ್ಮನ ಮನೆ ಹೀಗೆ ಗಾಡಿ ಹೊರಟಾಗ ಅಮ್ಮನೇ ಬ್ಯಾಗ್‌ ತುಂಬಿಸಿ ಯಾವಾಗ ಯಾವ ಡ್ರೆಸ್‌ ಹಾಕ್ಕೋಬೇಕು ಅಂತೆಲ್ಲ ಉಪದೇಶಕೊಟ್ಟೇ ಕಳಿಸಿರುತ್ತಾರೆ. ಬೆಳೆದುದೊಡ್ಡವರಾದಂತೆ ‘ನಾನು ಧರಿಸುವ ಉಡುಪು ಯಾವುದು ಯಾವಾಗ ಹೇಗೆ ಇರಬೇಕು ಎಂಬುದನ್ನು ನಾನೇ ನಿರ್ಧರಿಸಬಲ್ಲೆ...’ ಮಟ್ಟಕ್ಕೆ ಬರುತ್ತೇವೆ. ಆಗ ಇತರರ ಅದೇಶ/ಉಪದೇಶಗಳು ಬೇಡವೇನೊ ಹೌದು, ಆದರೂ ನಮ್ಮಲ್ಲೇ ನಾವು ‘ಇವತ್ತು ಯಾವ ಪ್ಯಾಂಟ್‌ ಆಗಬಹುದು, ಈ ಜೀನ್ಸ್‌ಗೆ ಈ ಟೀ-ಶರ್ಟ್‌ ಸರಿಹೊಂದಬಹುದಾ?’ ಎಂದು ಪ್ರಶ್ನಿಸಿಕೊಳ್ಳೋದು ಇದ್ದೇ ಇರುತ್ತೆ. ‘ಇವತ್ತು ಹಣೆಬಿಂದಿ ನೇರಳೆ, ನೈಲ್‌ಪಾಲಿಶ್‌ ನೇರಳೆ, ಚಪ್ಪಲ್‌ ಕಲರ್‌ ನೇರಳೆ, ರಿಸ್ಟ್‌ವಾಚ್‌ಸ್ಟ್ರಿಪ್ಪೂ ಹೇರ್‌ಕ್ಲಿಪ್ಪೂ ಸಹ ನೇರಳೆ ಹಾಗಾಗಿ ನೇರಳೆ ಚೂಡಿದಾರ್‌ ಆಬ್‌ವಿಯಸ್‌ ಚಾಯ್ಸ್‌...’ ಎಂದು ನೇರಳೆಯಾಗುವ ತರಳೆಯರಿಲ್ಲವೆಂದೇ?

ಕಾಲೇಜುಗಳಲ್ಲಿ ಯುನಿಫಾರ್ಮ್‌ ಅಂತೇನೂ ಇರುವುದಿಲ್ಲವಾದರೂ ಹುಡುಗ-ಹುಡುಗಿಯರೇ ನಿರ್ಧರಿಸಿ ಇಡೀ ಕ್ಲಾಸಿಗೆ ಕ್ಲಾಸೇ ಒಂದು ದಿನ ‘ಅಚ್ಚಭಾರತೀಯ ಉಡುಪು (ethnic dress) ದಿನ’ ಎಂದು ಆಚರಿಸಿಕೊಳ್ಳುವುದಿದೆ. ಅಂಥದಿನ, ಇದೇ ಮೊದಲಬಾರಿ ಸೀರೆಯುಟ್ಟ ನೀರೆಯರ ಚೆಲುವಧಾರೆ... ಚೆಲುವ ಕಣ್ತುಂಬಿಸಿಕೊಳ್ಳುವ ಹುಡುಗರ ನೋಟ ವಾರೆ... ಕಾಲೇಜು ಅಂದ್ರೆ ಹಾಗೇ ಅಲ್ವೇ, ಯವ್ವನದ callಉ, ಕನಸುಗಳ ageಉ. ಎಥ್ನಿಕ್ಕೂ, ಲಾಂಗ್‌ನೆಕ್ಕೂ, ಇನ್ನೊಂದು ಮತ್ತೊಂದು ಡ್ರೆಸ್‌ನ ಮೋಜು. ಮತ್ತೆ ಕೆಲವು ಖಾಸಗಿ ಕಂಪೆನಿಗಳಲ್ಲೂ ಎಥ್ನಿಕ್‌ ಡ್ರೆಸ್‌ ಡೇ, ಸ್ಮಾರ್ಟ್‌ ಕ್ಯಾಶುವಲ್ಸ್‌ ಡೇ ಅಂತೆಲ್ಲ ವಿನೋದವೈವಿಧ್ಯಗಳಿರುತ್ತವೆ, ಕೆಲ್ಸ ಕೆಲ್ಸ ಕೆಲ್ಸ ಎಂದು ಜರ್ಜರಿತವಾದ ಮೈಮನಗಳಿಗೆ ಒಂದಿಷ್ಟು ಗೆಲುವು ಲವಲವಿಕೆ ಹೊಸತನದ ಸಿಂಚನದ ಉದ್ದೇಶದಿಂದ. ಇನ್ನು, ಮಧುರಸ್ಮೃತಿಗಳ ಮೂಟೆಯನ್ನೇ ತುಂಬಿಸಿಕೊಂಡಿರುವ ಉಡುಪುಗಳು ಒಂದೆರಡಾದರೂ ಪ್ರತಿಯಾಬ್ಬರಲ್ಲೂ ಇರುತ್ತವೆ, ಆ ಉಡುಪು ಧರಿಸಿದ ದಿನ ಅದೇನೊ ಅನಿರ್ವಚನೀಯ ಹುರುಪು! ಹೀಗೆ, ತೊಡುವ ಬಟ್ಟೆಯಲ್ಲೂ, ಪಡುವ ಖುಶಿಯಲ್ಲೂ ಸದಾ ವೈವಿಧ್ಯವನ್ನು ಕಾಣುವ ಹಂಬಲ.

ಕೆಲವೊಮ್ಮೆ, ಬಹುತೇಕವಾಗಿ ಪಾರ್ಟಿಗಳಲ್ಲಿ, ತಂತಮ್ಮಲ್ಲಿ ಮೊದಲೇ ಮಾತಾಡಿಕೊಂಡು ಒಂದು ಅನಫೀಷಿಯಲ್‌ ಡ್ರೆಸ್‌ಕೋಡ್‌ ಫಿಕ್ಸ್‌ ಮಾಡಿಕೊಳ್ಳುವುದೂ ಇದೆ. ಹೀಗೇ ಜಸ್ಟ್‌ ಫಾರ್‌ ಫನ್‌! ಅಥವಾ ಒಂದುರೀತಿ ಸಮಾನಮನಸ್ಕ, ಸಮಾನ ಅಭಿರುಚಿಯ ಗುಂಪು ಅಂತ ತೋರಿಸಿಕೊಳ್ಳಲಿಕ್ಕೂ ಆಗುತ್ತದೆ. ಇಲ್ಲಿ ನಮ್ಮ ವಾಷಿಂಗ್ಟನ್‌ ಡಿಸಿ ಏರಿಯಾದಲ್ಲಿ ಪ್ರತಿವರ್ಷ ನಡೆಯುವ ಮೂರುದಿನಗಳ ನಾದತರಂಗಿಣಿ ಸಂಗೀತೋತ್ಸವದ ವೇಳೆ ಯಾವುದಾದರೂ ಒಂದು ದಿನ ಗುಂಪಿನವರೆಲ್ಲ ಇಂಥ ಬಣ್ಣದ ಸೀರೆ ಉಟ್ಟುಕೊಂಡು ಬರೋಣ ಅಂತ ಮಾತಾಡಿ ಹಾಗೇ ಮಾಡಿ ಅವತ್ತು ಚಮಕ್‌ ಚಮಕ್‌ ಮಿಂಚಿಂಗು ಆಗೋ ಪರಿಪಾಠವಿದೆ. ಈವರ್ಷದ ಉತ್ಸವದ ಎರಡನೆ ದಿನ, ನಾದತರಂಗಿಣಿಯ ಮುಖ್ಯಸ್ಥೆ ವಿದುಷಿ ಉಷಾಚಾರ್‌ ಸಹ ಸೇರಿದಂತೆ ಬಳಗದ ನಾದತರಂ‘ಗಿಣಿ’ಗಳೆಲ್ಲ ಗಿಣಿಹಸಿರು ಬಣ್ಣದ ರೇಷ್ಮೆ ಸೀರೆ ಉಟ್ಟುಕೊಂಡು ಬಂದಿದ್ದರು! (ಆಕ್ಚುವಲಿ ಅವರೆಲ್ಲ ಗಾನ‘ಕೋಗಿಲೆ’ಗಳು, ನಾನು ಶಬ್ದಸರಸಕ್ಕಾಗಿ ಗಿಣಿ ಎಂದೆ ಅಷ್ಟೆ).

ಮದುವೆ ಸಮಾರಂಭಕ್ಕೆ ಹೋಗುವುದೆಂದರೆ, ಅದೂ ಹತ್ತಿರದ ಸಂಬಂಧದವರ ಮದುವೆ, ಬೆಳಗಿನ ಫಳ್ಹಾರದಿಂದ ಹಿಡಿದು ಸಾಯಂಕಾಲ ವಧುವನ್ನು ಗಂಡನಮನೆಗೆ ಬೀಳ್ಕೊಡುವವರೆಗೂ ಭಾಗವಹಿಸುವಂಥ ಮದುವೆಗೆ ಹೋಗ್ತಿರೋದು ಅಂತಿಟ್ಕೊಳ್ಳಿ. ಹೆಂಗಸರಿಗಾದರೆ ‘ಯಾವ ಡ್ರೆಸ್‌ ಆಗಬಹುದು?’ ಎಂಬ ಪ್ರಶ್ನೆಗೆ ಒಂದೆರಡಲ್ಲ ನಾಲ್ಕಾದರೂ ಬೇರೆಬೇರೆ ಉತ್ತರ ಸಿಗಬೇಕು..ಯಾಕೆಂದರೆ ಹೋಗುವಾಗ ಯಾವ ಸೀರೆ, ಅಲ್ಲಿಗೆ ಹೋಗಿ ತಲುಪಿದ ಮೇಲೆ ಯಾವ ಸೀರೆ, ಮುಹೂರ್ತದ ಹೊತ್ತಿಗಾಗುವಾಗ ಯಾವ ಸೀರೆ, ಊಟದ ಟೈಮಿಗೆ ಯಾವ ಸೀರೆ, ಸಂಜೆ ರಿಸೆಪ್ಷನ್‌ ವೇಳೆ ಯಾವ ಡ್ರೆಸ್‌... ಹೀಗೆ ಟೈಮ್‌ಸ್ಲಾಟ್‌ ಎಲೊಕೇಶನ್‌ ಆಗಬೇಕಲ್ಲವೆ? ಕೆಲವೊಮ್ಮೆ ಕೊನೆಕ್ಷಣದ ಬದಲಾವಣೆ... ಬೇರೆ! ಅಥವಾ ಹೊಟ್ಟೆಯುರಿಯ/ಉರಿಸುವ ಫಲಶ್ರುತಿಯಾಗಿ ಮಿರಮಿರನೆ ಮಿಂಚುವ ಜರತಾರಿಸೀರೆ... ಅಂತೂ ವಧುವಿನಷ್ಟಲ್ಲದಿದ್ದರೂ ಅದರ ಸ್ವಲ್ಪಭಾಗವಾದರೂ ಮಿಂಚಬೇಕು ಎಂಬ ಮನದಾಸೆ. ಗಂಡಸರಿಗಾದರೆ ಆ ತಲೆನೋವೇ ಇಲ್ಲ. ಬೆಳಗ್ಗಿಂದ ಸಂಜೆವರೆಗೂ - ಬೇಕಿದ್ದರೆ ರಿಸೆಪ್ಷನ್‌ ಟೈಮಿಗೂ - ಹಾಕಿಕೊಂಡ ಒಂದೇ ಜತೆ ಪ್ಯಾಂಟ್‌-ಶರ್ಟ್‌ ಅಥವಾ ಕುರ್ತಾ-ಪೈಜಾಮಾ ಚಲ್ತಾ ಹೈ. ಯಾರಾದ್ರೂ ‘ಏನಪ್ಪಾ ಬೇರೆ ಡ್ರೆಸ್ಸೇ ಇಲ್ವಾ?’ ಎಂದು ಗೇಲಿಮಾಡಿದರೂ, ‘ಇಲ್ಲ ಗುರು, ಪಬ್ಲಿಕ್‌ ಡಿಮಾಂಡ್‌... ಅದಕ್ಕೇ ಕಂಟಿನ್ಯೂವಸ್‌ ಶೋ’ ಎಂದು ಡಯಲಾಗಿಸಿದರೆ ಆಯ್ತು!

ಓಕೆ, ಸಾಮಾನ್ಯರಲ್ಲಿ ಸಾಮಾನ್ಯರಾದ ನಾವು ನೀವು ಯಾವ ಡ್ರೆಸ್‌ ಹಾಕಿಕೊಳ್ಳಲಿ ಅಂತ ಯೋಚಿಸುವುದು, ಯೋಜಿಸುವುದು ಇವೆಲ್ಲ ಹಾಗಿರಲಿ, ಫೇಮಸ್‌ ಪರ್ಸನಾಲಿಟೀಸ್‌ ಇದನ್ನು ಹೇಗೆ ನಿರ್ವಹಿಸುತ್ತಾರೆ ಅಂತ ಕುತೂಹಲ ಬರೋದು ಸಹಜವೇ. ಫೇಮಸ್‌ ಅನ್ನೋದಕ್ಕಿಂತಲೂ ‘ಸಾರ್ವಜನಿಕ ವ್ಯಕ್ತಿ’ಗಳು (ಪಬ್ಲಿಕ್‌ ಫಿಗರ್ಸ್‌) ಅನ್ನೋಣ, ಅವರೆಲ್ಲ ಅನುದಿನದ/ವಿಶೇಷಸಂದರ್ಭಗಳ ಪೋಷಾಕನ್ನು ಹೇಗೆ ನಿರ್ಧರಿಸುತ್ತಾರೆ? ಅಮೆರಿಕ ಅಧ್ಯಕ್ಷ ಜಾರ್ಜ್‌ ಬುಷ್‌ನನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆತ ಯಾವ ಬಣ್ಣದ ಸೂಟ್‌ ಧರಿಸಬೇಕು, ಕಂಠಲಂಗೋಟಿ ಯಾವ ಕಲರ್‌/ಡಿಸೈನ್‌ದಿರಬೇಕು, ಟೆಕ್ಸಸ್‌ನವನಾದ್ದರಿಂದ ಕೌಬಾಯ್‌ ಹ್ಯಾಟ್‌ ಹಾಕಿಕೊಳ್ಳಬೇಕಾ, ಸೂಟಿನೊಳಗೆ ಅಂಗಿ ಯಾವ ಬಣ್ಣದ್ದು, ಅವನ ಅರ್ಧಾಂಗಿ ಲೌರಾ ಬುಷ್‌ ಯಾವ ಸೀರೆ ಉಟ್ಟುಕೊಳ್ಳಬೇಕು (ಐ ಮೀನ್‌ ಯಾವ ಗೌನ್‌ ಧರಿಸಬೇಕು)... ಇವೆಲ್ಲ ‘ಓಹ್‌ ಯಾವುದೋ ಒಂದು ಹಾಕಿಕೊಳ್ಳಲಿ ನಮಗೇನಂತೆ?’ ಎಂದು ನಮಗೆ ತಲೆನೋವೇ? ನೋ ವೇ! ಅವರ ಫಜೀತಿ ನಮಗಿಂತಲೂ ಕಷ್ಟದ್ದು.

ನಮ್ಮ ದೇಶದ ನಾಯಕನಾಯಕಿಯರಾದರೂ ಅಷ್ಟೆಯೇ. ಮನಮೋಹನ್‌ ಸಿಂಗ್‌ಜೀ ಇವತ್ತು ಯಾವ ಬಣ್ಣದ ಟರ್ಬನ್‌ ಸುತ್ತಿಕೊಳ್ಳಲಿ (ಆಕಾಶನೀಲಿ ಅವರ ಫೇವರಿಟ್‌ ಇರಬಹುದು?) ಎಂದು ಒಮ್ಮೆಯಾದರೂ ಯೋಚಿಸುತ್ತಾರೊ ಏನೊ. ಅವರು ಕಾರ್ಯನಿಮಿತ್ತ ಪ್ರವಾಸ ಹೋಗುವಾಗ ಅವರ ಹೆಂಡತಿ, ‘ರೀ... ಇವಿಷ್ಟು ಟರ್ಬನ್‌, ಟೈ, ಸೂಟುಗಳನ್ನೆಲ್ಲ ತುಂಬಿಸಿಟ್ಟಿದ್ದೇನೆ ಸೂಟ್‌ಕೇಸ್‌ನಲ್ಲಿ. ಇಂಥಿಂಥ ದಿನ ಇಂಥಿಥದನ್ನು ಧರಿಸಿ...’ ಎಂದು ಅವರನ್ನು ತಯಾರುಮಾಡಿ ಕಳಿಸುವುದಿರಬಹುದೇ? ನನಗೆ ಗೊತ್ತಿರುವ ಒಬ್ಬ ಮೈಸೂರಿನ ಜ್ಞಾನವೃದ್ಧ ವಯೋವೃದ್ಧ ಹಿರಿಯರು ಒಂದುವೇಳೆ ಒಬ್ಬರೇ ದೂರದೂರಿಗೆ ಪ್ರವಾಸಮಾಡಿ ಯಾವುದಾದರೂ ಫಂಕ್ಷನ್‌ ಅಟೆಂಡ್‌ ಮಾಡುವುದಿದ್ದರೆ ಅವರ ಹೆಂಡತಿ ನೀಟಾಗಿ ಬ್ಯಾಗ್‌ ಎಲ್ಲ ತುಂಬಿಸಿಕೊಟ್ಟು, ‘ನೋಡಿ ಅಲ್ಲಿಗೆ ಹೋಗಿ ತಲುಪಿದ ಕೂಡಲೆ ಬಟ್ಟೆಬದಲಾಯಿಸಿ ಈ ಖಾದಿಜುಬ್ಬಾ ಇದೆಯಲ್ಲ ಅದನ್ನು ಹಾಕಿಕೊಳ್ಳಿ, ಮತ್ತೆ ಮಾರನೆದಿನ ನಿಮ್ಮ ಭಾಷಣ ಇದೆಯಲ್ಲ ಆಗ ಈ ಗಾಂಧಿಬಜಾರ್‌ನಲ್ಲಿ ಕೊಂಡಿರುವ ಸಿಲ್ಕ್‌ಜುಬ್ಬಾ ಹಾಕಿಕೊಳ್ಳಿ. ಇನ್ನೊಂದು ಜೊತೆ ಸ್ಪೇರ್‌ ಇರಲಿ ಅಂತ ಇಟ್ಟಿದ್ದೇನೆ...’ ಎಂದು ಮಗುವಿಗೆ ಹೇಳಿದಂತೆ ನಿಯತ್ತಾಗಿ ಹೇಳಿ ಕಳಿಸುತ್ತಿರುತ್ತಾರೆ. ಅರ್ಧಾಂಗಿಯ ಮಾತಿನಂತೆ ಅಂಗಿಧರಿಸುವ ಈ ಸಜ್ಜನ ವ್ಯಕ್ತಿ, ಒಂದುವೇಳೆ ಟೈಮ್‌ಟೇಬಲ್‌ ಮರೆತರೆ ಫೋನ್‌ ಮಾಡಿ ಮತ್ತೆ ಹೇಳಿಸಿಕೊಂಡಾದರೂ ಅದೇ ಪ್ರಕಾರ ಡ್ರೆಸ್‌ಅಪ್‌ ಆಗುತ್ತಾರೆ. ಇರಲಿ, ನಮ್ಮ ಪ್ರಧಾನಿಜೀ ಸಹ ಹಾಗೆಯೇ ಇರಬಹುದೇನೊ ಅಂತ ಅನಿಸಿತು ಅಷ್ಟೆ. ಅಥವಾ, ಯಾವ ಕಲರ್‌ ಟರ್ಬನ್‌ ಸುತ್ತಿಕೊಳ್ಳಬೇಕು ಎನ್ನೋದು ಕೂಡ ಅವರಿಗೆ ಇಟಲಿಯ ಮೇಡಂನಿಂದ ಆದೇಶ ಬರುವುದೋ ಯಾರಿಗೆ ಗೊತ್ತು!

ಎನಿವೇ, ಕಮಿಂಗ್‌ ಬ್ಯಾಕ್‌ ಟು ನಮ್ಮ ಜಾರ್ಜ್‌ ಬುಷ್‌, ಪ್ರೆಸಿಡೆಂಟ್‌ ಬುಷ್‌ನಂಥ ವಿ.ವಿ.ಐ.ಪಿ ಗಳಿಗೆ ‘ಇಮೇಜ್‌ ಕನ್ಸಲ್ಟೆಂಟ್ಸ್‌’ ಇರುತ್ತಾರೆ. ಯಾವ ಸಂದರ್ಭಕ್ಕೆ ಯಾವ ಡ್ರೆಸ್‌ ಹಾಕಿಕೊಳ್ಳಬೇಕು ಎಂದು ಅವರೇ ಶಿಫಾರಸು ಮಾಡುತ್ತಾರೆ. ಪ್ರೆಸಿಡೆಂಟ್‌ ಬುಷ್‌ನ ಖಾಸಗಿ ಟೈಲರ್‌ ಒಬ್ಬನಿದ್ದಾನೆ, ಹೆಸರು ಘಾಸಿನ್‌ ಕರೀಂ ಎಂದು. ಟೆಕ್ಸಸ್‌ನ ಆಸ್ಟಿನ್‌ ಪಟ್ಟಣದಲ್ಲಿ ಅವನದೊಂದು ‘ಗೆಸಿನ್‌ ಟೈಲರಿಂಗ್‌’ ಶಾಪ್‌ ಇದೆಯಂತೆ, ಜಾರ್ಜ್‌ ಬುಷ್‌ ಈಮೊದಲು ಟೆಕ್ಸಸ್‌ನ ಗವರ್ನರ್‌ ಆಗಿದ್ದಾಗಿನಿಂದಲೂ ಘಾಸಿನ್‌ ಖಾನನೇ ಬುಷ್‌ಗೆ ಡ್ರೆಸ್‌ ಹೊಲಿದುಕೊಡುತ್ತಿರುವುದು. ಈಗ ಎರಡನೇ ಟರ್ಮ್‌ಗೂ ಬುಷ್‌ ಅಯ್ಕೆಯಾಗಿಬಂದಿದ್ದಾನೆಂದರೆ ಘಾಸಿನ್‌ ಹೊಲಿದ ಡ್ರೆಸ್‌ನಿಂದ ಬುಷ್‌ ಇಮೇಜ್‌ ಒಂಚೂರು ಘಾಸಿಗೊಂಡಿಲ್ಲ ಅಂತ ಶತಸಿದ್ಧವಾದ ಹಾಗಾಯ್ತಲ್ಲ? ಕ್ಲಿಂಟನ್‌, ಅಲ್‌ಗೋರ್‌, ಬುಷ್‌, ಡಿಕ್‌ಚಿನಿ ಮೊದಲಾದವರ ಡ್ರೆಸ್‌ ಪ್ರಿಫರೆನ್ಸ್‌ ಬಗ್ಗೆ ಒಂದು ಇನ್‌ಸೈಟ್‌ ಬೇಕಿದ್ದರೆ ನೀವು ಈ ಲೇಖನವನ್ನೊಮ್ಮೆ ಓದಬೇಕು.

ಯಾವ ಡ್ರೆಸ್‌ ಎಂದು ಶಿಫಾರಸು ಮಾಡುವ ಇಮೇಜ್‌ ಕನ್ಸಲ್ಟೆಂಟ್ಸ್‌ ಇದ್ದೂ ಸಹ ಕೆಲವೊಮ್ಮೆ ಈ ಪಬ್ಲಿಕ್‌ ಫಿಗರ್‌ಗಳ ‘ವಾರ್‌ಡ್ರೋಬ್‌ ಮ್ಯಾಲ್‌ಫಂಕ್ಷನ್‌’ ಅಂತ ಸುದ್ದಿಯಾಗುವುದು ಇದೆ. ಇದೇ ಪ್ರೆಸಿಡೆಂಟ್‌ ಬುಷ್‌ನ ಒಂದು ಪ್ರೈಮ್‌ಟೈಮ್‌ ನ್ಯೂಸ್‌ ಕಾನ್ಫರೆನ್ಸ್‌ ವೇಳೆ ಆತ ಧರಿಸಿದ್ದ ‘ನೀಲಿಯಲ್ಲಿ ಬಿಳಿಚುಕ್ಕಿ’ಗಳ ಟೈ ಟಿವಿಪರದೆಯ ಮೇಲೆ ಭ್ರಾಮಕಚಲನೆಯಲ್ಲಿದ್ದಂತೆ ಕಾಣುತ್ತಿತ್ತು (ಅಂದರೆ ಸ್ಥಿರವಾಗಿದ್ದ ವಸ್ತು ಚಲಿಸುತ್ತಿರುವಂತೆ ತೋರುವ moir知ffect) ಎಂದು ಸ್ಟೈಲ್‌ಗುರುಗಳೆಲ್ಲ ಅಭಿಪ್ರಾಯಪಟ್ಟಿದ್ದರು. ಟಿವಿಯಲ್ಲಿ ಟೈ ಇಂಟರ್‌ಫೆರೆನ್ಸ್‌ ವಿಷಯ ಹಾಗಿರಲಿ, ಅದಕ್ಕಿಂತ ಹೆಚ್ಚು ಆಶ್ಚರ್ಯದ, ವಿಶ್ವಾದ್ಯಂತ ಪ್ರಚಾರಗಿಟ್ಟಿಸಿದ ಮತ್ತು ಅದನ್ನು ಪ್ರಸಾರಮಾಡಿದ ಸಿ.ಬಿ.ಎಸ್‌ ನೆಟ್‌ವರ್ಕ್‌ ಸಾವಿರಾರು ಡಾಲರ್‌ ಫೈನ್‌ಕಟ್ಟಬೇಕಾಗಿ ಬಂದ ಡ್ರೆಸ್‌ ಅಚಾತುರ್ಯ (ವಾರ್‌ಡ್ರೋಬ್‌ ಮ್ಯಾಲ್‌ಫಂಕ್ಷನ್‌) ನಡೆದದ್ದೆಂದರೆ ಇಲ್ಲಿ ಅಮೆರಿಕದಲ್ಲಿ 2004ರ ಸೂಪರ್‌ಬೌಲ್‌ ಪಂದ್ಯದ ಅರ್ಧವಿರಾಮ ಮನರಂಜನೆಯ ವೇಳೆ ಜೆನಟ್‌ ಜಾಕ್ಸನ್‌ ಎನ್ನುವ ನೃತ್ಯಗಾರ್ತಿ ಎದೆತುಂಬಿ ಹಾಡಿದೆನು ಇಂದು ನಾನು... ಎನ್ನುತ್ತಿರುವಂತೆಯೇ ಎದೆತೋರಿಸಿ ಹಾಡಿದೆನು... ಎಂದಾದದ್ದು!

*

‘ಯಾವ ಡ್ರೆಸ್‌ ಹಾಕಿಕೊಳ್ಳಲಿ?’ ಪ್ರಶ್ನೆಯೇನೊ ಕಾಡುತ್ತದೆ, ಉತ್ತರವನ್ನೂ ನಾವೇ ದೊರಕಿಸಿಕೊಳ್ಳುತ್ತೇವೆ; ಆದರೆ ಇದೆಲ್ಲ ನಮ್ಮ ಐಹಿಕವ್ಯಾಮೋಹ, ಬಾಹ್ಯಸೌಂದರ್ಯಕ್ಕೆ ನಾವು ಕೊಡುವ ಮಹತ್ವ ಇವುಗಳಿಂದ ಬಂದಿರುವುದು. ಅಂತಃಸತ್ವದ, ಅಂತಃಸೌಂದರ್ಯದ ಮಾತು ಬೇರೆಯೇ ಇದೆಯಲ್ಲ? ಅದನ್ನು ಹುಣಸೂರು ಕೃಷ್ಣಮೂರ್ತಿಯವರು ಚಿತ್ರಗೀತೆಯಾಂದರಲ್ಲಿ ಪರಿಣಾಮಕಾರಿಯಾಗಿ ಹೇಳಿಯೇಬಿಟ್ಟಿದ್ದಾರೆ - ‘ಬರುವಾಗ ಬೆತ್ತಲೆ... ಹೋಗುವಾಗ ಬೆತ್ತಲೆ... ಬಂದುಹೋಗುವ ನಡುವೆ ಬರೀ ಕತ್ತಲೆ’. ಆ ಕತ್ತಲೆಯಲ್ಲೂ ಬೆಳಗಬಯಸುವ ನಮ್ಮ ಅಭಿಲಾಶೆಯೇ ‘ಯಾವ ಡ್ರೆಸ್‌ ಹಾಕಿಕೊಳ್ಳಲಿ?’ ಪ್ರಶ್ನೆ.

ಇಷ್ಟೆಲ್ಲ ಡ್ರೆಸ್ಸಾಯಣದ ನಂತರ ಈಗ ಮಾಮೂಲಿನಂತೆ ನನ್ನ ಈಮೈಲ್‌ ಎಡ್ರೆಸ್ಸು ಕೊಟ್ಟು ಇವತ್ತಿನ ಅಧ್ಯಾಯವನ್ನು ಮುಗಿಸುತ್ತಿದ್ದೇನೆ. ನಿಮ್ಮ ಪತ್ರಗಳಿಗೆ ಆದರದ ಸ್ವಾಗತ. ಇವತ್ತು ಈಮೈಲ್‌ಗೆ ಯಾವ ಫಾಂಟ್‌ ಚೂಸ್‌ ಮಾಡಲಿ ಎಂದು ಯೋಚಿಸತೊಡಗಬೇಡಿ ಮತ್ತೆ! ವಿಳಾಸ - [email protected].

ಪೂರಕ ಓದಿಗೆ-

ಟೈ ಎಂಬ ಕಂಠಲಂಗೋಟಿ !


ಮುಖಪುಟ

ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X