• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಾಷಿಂಗ್ಟನ್‌ಪೋಸ್ಟ್‌ನಲ್ಲಿ ನಳ(ಪಾಕ)ಚರಿತ್ರೆ!

By Staff
|
Srivathsa Joshi *ಶ್ರೀವತ್ಸ ಜೋಶಿ

ಪೀಠಿಕೆ:

ಕನ್ನಡಿಗರ ನಾಡಹಬ್ಬವಾದ ನವರಾತ್ರಿಯನ್ನು ಇಲ್ಲಿ ವಾಷಿಂಗ್ಟನ್‌ ಡಿಸಿಯಲ್ಲಿನ ಕನ್ನಡತಿಯಾಬ್ಬರು ಆಚರಿಸುವ ಪದ್ಧತಿ ಅನನ್ಯವಾದುದು. ಪ್ರಖ್ಯಾತ ಸಂಗೀತವಿದುಷಿಯಾದ, ಇಲ್ಲಿನ ಅದೆಷ್ಟೋ ಸಂಗೀತಾಭ್ಯಾಸಿಗಳಿಗೆ ಸಂಗೀತಗುರುವಾಗಿರುವ ಶ್ರೀಮತಿ ಉಷಾ ಚಾರ್‌ ಅವರೇ ಆ ಹೆಮ್ಮೆಯ ಕನ್ನಡತಿ. ಪ್ರತಿವರ್ಷವೂ ನವರಾತ್ರಿಯ ಸಂದರ್ಭದ ಒಂದು ವಾರಾಂತ್ಯದಲ್ಲಿ ಅವರ ಮನೆಯಲ್ಲಿ ಅತ್ಯಂತ ಆತ್ಮೀಯವಾದ ರೀತಿಯಲ್ಲಿ ’ಶಾರದಾಪೂಜೆ’ ಜರಗುತ್ತದೆ. ವಿದ್ಯಾಧಿದೇವತೆಯ ಆ ಪೂಜೆಗೆ ಅಂದು ಸಂಗೀತವಿದ್ಯಾರ್ಥಿಗಳೆಲ್ಲರ ಗಾನಗಂಧದ ಅಲಂಕಾರ; ಸರಸ್ವತಿಯ ಅಲಂಕೃತ ಮೂರ್ತಿಯ ಪಕ್ಕದ ವೇದಿಕೆಯಲ್ಲಿ ಅಪರಾಹ್ನವಿಡೀ ಹರಿವ ಗಾನಾಮೃತಧಾರೆ ಕರ್ಣಾನಂದಕರ. ದಾಸರಕೀರ್ತನೆಗಳು, ಕರ್ನಾಟಕಸಂಗೀತದ ಶ್ರೇಷ್ಠ ಕೃತಿಗಳೆಲ್ಲ ಸಮೂಹಗಾನದಲ್ಲಿ, ವೀಣಾವಾದನದಲ್ಲಿ, ಪಕ್ಕವಾದ್ಯಗಳೊಂದಿಗೆ ಅಲ್ಲಿ ಶಾರದಾಸ್ತುತಿಯಾಗಿ ಸಮರ್ಪಿತವಾಗುತ್ತವೆ. ಶ್ರೀ ಸರಸ್ವತಿ ನಮೋಸ್ತುತೆ...ಯ ಭಕ್ತಿಪೂರ್ವಕ ಪ್ರಸ್ತುತಿಯದು.

ಉಷಾ ಚಾರ್‌ ನೇತೃತ್ವದಲ್ಲಿನ ಈ ಸಂಗೀತಾರಾಧನೆಯ ಸಕಲ ಏರ್ಪಾಡುಗಳ ಸಂಪೂರ್ಣ ಸಹಕಾರ, ಸಹಾಯ ಅವರ ಪತಿ ಎ.ಆರ್‌.ಚಾರ್‌ ಅವರಿಂದ. ಉಷಾ ಮಗಳು ರಾಧಿಕಾ ಸಹ ಓರ್ವ ಸಂಗೀತ ಪ್ರತಿಭೆ. ಅಪ್ರತಿಮ ವಯಲಿನ್‌ ವಾದಕಿಯಾಗಿರುವ ರಾಧಿಕಾ, ಶಾರದಾಪೂಜೆಯ ಸಂಗೀತಗೋಷ್ಠಿಯಲ್ಲಿ ಮಾತ್ರವಲ್ಲದೆ ವಾಷಿಂಗ್ಟನ್‌ಗೆ ಭೇಟಿಕೊಡುವ ಘಟಾನುಘಟಿ ಸಂಗೀತಗಾರರಿಗೂ ಪಕ್ಕವಾದ್ಯವೊದಗಿಸುವಷ್ಟು ನುರಿತವಳಾಗಿದ್ದಾಳೆ. ಇನ್ನೋರ್ವ ಸ್ಥಳೀಯ ಪ್ರತಿಭಾವಂತನ ಉಲ್ಲೇಖ ಮಾಡಬೇಕಾದ್ದೆಂದರೆ ಗೌತಮ್‌ ಸುಧಾಕರ್‌ (ವಾಂಷಿಂಗ್ಟನ್‌ನ ಓರ್ವ ಜನಾನುರಾಗಿ ವೈದ್ಯ, ಕನ್ನಡಿಗ ಡಾ।ಕೆಂಪಣ್ಣ ಸುಧಾಕರ್‌ ಅವರ ಮಗ) ಎಂಬ ತರುಣನದು. ಮೃದಂಗ-ಘಟವಾದನದಲ್ಲಿ ಅತ್ಯದ್ಭುತ ಕೈಚಳಕ ತೋರಿಸುವ ಈತನ ಟು-ಇನ್‌-ವನ್‌ ತನಿಯಾವರ್ತನವನ್ನು ನೋಡಿದವರು ಆತನ ಕಲಾಸಿದ್ಧಿಗೆ, ಮೃದಂಗ ಮತ್ತು ಘಟ ಎರಡನ್ನೂ ಒಬ್ಬನೇ ನುಡಿಸಿ ಮೂಡಿಸುವ ತನಿಯ ದನಿಗೆ ತಲೆಬಾಗಲೇ ಬೇಕು.

ಚಾರ್‌ ಮನೆಯ ಶಾರದಾಪೂಜೆಯ ಗಾನವೈಭವವನ್ನು ವರ್ಧಿಸುವುದರಲ್ಲಿ ಇವರೆಲ್ಲರ ಪಾತ್ರವೂ ಇದೆ. ಸಂಗೀತಾಭ್ಯಾಸಿಗಳನ್ನಷ್ಟೇ ಅಲ್ಲದೆ ಸಂಗೀತಾಸಕ್ತ ಇಷ್ಟಮಿತ್ರ ಬಂಧುಬಾಂಧವರನ್ನೆಲ್ಲ ಶಾರದಾಪೂಜೆಗೆ ಆಹ್ವಾನಿಸುತ್ತಾರೆ ಚಾರ್‌ ಕುಟುಂಬದವರು. ಶರದೃತುವಿನ ಇಲ್ಲಿನ ಸುಂದರ ವಾತಾವರಣದಲ್ಲಿ ಜರಗುವ ಆ ಸಮಾರಂಭದಲ್ಲಿ ಪಾಲ್ಗೊಳ್ಳುವುದು ಒಂದು ಆತ್ಮೀಯ ಅನುಭವ. ನೂರಕ್ಕೂ ಹೆಚ್ಚು ಜನ ಶೃದ್ಧೆ ಭಕ್ತಿಗಳಿಂದ ಭಾಗವಹಿಸುವ ಉತ್ಸವದಲ್ಲಿ, ಸಂಗೀತವನ್ನು ಆಸ್ವಾದಿಸಿ ವಿದ್ಯಾಧಿದೇವತೆಗೆ ವಂದಿಸಿ ಸ್ನೇಹಮಯ ವಾತಾವರಣದಲ್ಲಿ ಒಂದು ಸಂಜೆಯನ್ನು ಕಳೆದು ಧನ್ಯರಾಗುವ ಅವಕಾಶ.

*

ಈ ವರ್ಷ (ಮೊನ್ನೆ ಅಕ್ಟೋಬರ್‌ 8ರಂದು ಶನಿವಾರ) ಉಷಾ ಚಾರ್‌ ಮನೆಯಲ್ಲಿ ಶಾರದಾಪೂಜೆಗೆ ಒಬ್ಬ ಅಮೆರಿಕನ್‌ ಮಹಿಳೆಯೂ ವಿಶೇಷ ಅತಿಥಿಯಾಗಿ ಬಂದಿದ್ದರು!

ಆಕೆಯ ಹೆಸರು ಮಿಶೆಲ್‌ ವೈಸ್ಮನ್‌. ಯಾರಿರಬಹುದು ಆಕೆ ಎಂದು ನಿಮಗೇ ಊಹಿಸಲು ಬಿಟ್ಟರೆ, ಬಹುಶಃ ಕರ್ನಾಟಕಸಂಗೀತದಲ್ಲಿ ಆಸಕ್ತಿಯಿರುವವಳೋ, ಉಷಾಚಾರ್‌ ಬಳಿ ಸಂಗೀತಾಭ್ಯಾಸ ಮಾಡುತ್ತಿರುವವಳೋ ಯಾರಾದರೂ ಇರಬಹುದು, ಅಥವಾ ಭಾರತೀಯ ಸಂಸ್ಕೃತಿ - ಹಿಂದೂ ಧಾರ್ಮಿಕ ಪದ್ಧತಿಗಳ ಬಗ್ಗೆ ಗೌರವಾಭಿಮಾನಗಳಿಂದ ಪೂಜೆಯಲ್ಲಿ ಪಾಲ್ಗೊಳ್ಳಲು ಬಂದವಳಿರಬಹುದು ಎಂದೇ ನಿಮ್ಮ ಯೋಚನಾಲಹರಿ ಸಾಗುತ್ತದೆ. ಯಾಕೆಂದರೆ ಅಮೆರಿಕನ್ನರ ಪೈಕಿ ಅಂಥವರು ತುಂಬ ಮಂದಿ ಸಿಗುತ್ತಾರೆ. ಅಮೆರಿಕದಲ್ಲಿನ ಹಿಂದೂ ದೇವಸ್ಥಾನಗಳಿಗೆ ದೇವರದರ್ಶನಕ್ಕೆ, ದೇವಸ್ಥಾನಗಳ ಸಭಾಂಗಣದಲ್ಲಿ ನಡೆವ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಿ ಆನಂದಿಸಲಿಕ್ಕೆ ಬರುವ ಅಮೆರಿಕನ್ನರು ಇದ್ದಾರೆ. ಹೆಮ್ಮೆಯ ವಿಚಾರವದು.

ಆದರೆ ಮಿಶೆಲ್‌ ವೈಸ್ಮನ್‌ ಅವತ್ತು ಉಷಾಚಾರ್‌ ಮನೆಗೆ ಬಂದದ್ದು ಸಂಗೀತ ಕೇಳಲಿಕ್ಕಲ್ಲ, ಪೂಜೆ ನೋಡಲಿಕ್ಕಲ್ಲ; ಬದಲಿಗೆ, ಆಕೆಯ ಫ‚ೋಕಸ್‌ ಅವತ್ತಿನ ಸಮಾರಂಭದ ’ಅಡುಗೆ’ಯ ಮೇಲೆ!

ಇನ್ನೊಮ್ಮೆ ತಪ್ಪು ಊಹೆ ಮಾಡಬಹುದು ನೀವು. ಮಿಶೆಲ್‌ ಬಂದದ್ದು (ನಮ್ಮಲ್ಲಿ ಹೆಚ್ಚಿನವರಂತೆ) ಪೊಗದಸ್ತಾಗಿ ಹಬ್ಬದೂಟ ಮಾಡಿಹೋಗಲಿಕ್ಕಲ್ಲ. ಒಬ್ಬ ಲೇಖಕಿಯೂ, ಫಿ‚್ರೕಲಾನ್ಸ್‌ ಪತ್ರಕರ್ತೆಯೂ ಆಗಿರುವ ಆಕೆ ಅವತ್ತಿನ ಸಮಾರಂಭದ ಅಡುಗೆಯ ಬಗ್ಗೆ ವಾಷಿಂಗ್‌ಟನ್‌ ಪೋಸ್ಟ್‌ ಪತ್ರಿಕೆಯ ಸಾಪ್ತಾಹಿಕ ’ಅಡುಗೆ/ಆಹಾರ’ ಪುರವಣಿಗೆ ಲೇಖನವೊಂದನ್ನು ಸಿದ್ಧಪಡಿಸುವ ಪ್ರೊಜೆಕ್ಟ್‌ ಇಟ್ಟುಕೊಂಡು ಬಂದಿದ್ದಾಗಿತ್ತು. ಆ ಸಂಗತಿಯಲ್ಲೂ ನಿಮಗೆ ಅಂಥಾ ವಿಶೇಷವೇನೂ ಕಾಣಲಿಕ್ಕಿಲ್ಲ, ಇಂಡಿಯನ್‌ ರೆಸ್ಟೊರೆಂಟ್‌ನಿಂದ ಹತ್ತಾರು ನಮೂನೆಯ ಖಾದ್ಯಗಳನ್ನು, ನಾನ್‌-ರೋಟಿ-ಪಲಾವ್‌-ರಾಯ್ತಾಗಳನ್ನು ಕೇಟರ್‌ ಮಾಡಿದ್ದರೆ ಅದರಲ್ಲಿ ಲೇಖನ ಬರೆಯುವಂಥದ್ದೇನಿದೆ ಎಂದು ನೀವಂದುಕೊಳ್ಳಬಹುದು.

ಆದರೆ ಉಷಾ ಮನೆಯ ಶಾರದಾಪೂಜೆಗೆ ಊಟ ರೆಸ್ಟೊರೆಂಟ್‌ನಿಂದ ಸರಬರಾಜು ಆಗೋದಲ್ಲ. ನೂರಿನ್ನೂರು ಮಂದಿಗೂ ಆಗುವಷ್ಟು ಅಡುಗೆ ಸಿದ್ಧವಾಗುವುದು ಅವರ ಮನೆಯ ಕಿಚನ್‌ನಲ್ಲೇ. ಬಿಸಿಬೇಳೆಭಾತ್‌, ಪುಳಿಯಾಗರೆ, ಕೋಸಂಬರಿ, ಮೂರ್ನಾಲ್ಕು ನಮೂನೆ ಪಲ್ಯ, ಅನ್ನ ಸಾರು ಹುಳಿ, ಪಾಯಸ ಹೋಳಿಗೆ ಹಪ್ಪಳ ಸಂಡಿಗೆ... ಎಲ್ಲವೂ. ಸಂಗೀತಾರಾಧನೆ ಮುಗಿದು ಪೂಜೆ ಮಂಗಳಾರತಿ ಆದಮೇಲೆ ಪ್ರಸಾದರೂಪವಾಗಿ ಎಲ್ಲರಿಗೂ ಸುಗ್ರಾಸ ಭೋಜನ - ಬಿಸಿಬಿಸಿಯಾದ ಶುಚಿರುಚಿಯಾದ ರಸದೌತಣ.

ಈಗಲೂ ನಿಮಗೆ ಕನ್ವಿನ್ಸ್‌ ಆಗಿಲ್ಲವಿರಬಹುದು, ಅದರಲ್ಲೇನು big deal, ಹಬ್ಬದಡುಗೆ ಎಂದ ಮೇಲೆ ಅವೆಲ್ಲ ಇರಬೇಕಾದ್ದೇ ಎಂದು. ವಿಶೇಷ ಇರೋದು, ಆ ಅಡುಗೆ ಏಕ್‌ದಂ ಸ್ವಾದಿಷ್ಟ ’ನಳಪಾಕ’ ಎನ್ನುವುದರಲ್ಲಿ! ಹೌದು, ಅಕ್ಷರಶಃ ಅದು ’ನಳ’ಪಾಕ. ಗಂಡಸರೇ ಸೇರಿ ತಯಾರಿಸುವ ಬಲುರುಚಿಯ ಭರ್ಜರಿ ರಸಪಾಕ. ಮತ್ತೆ ಈ ಗಂಡಸರೆಲ್ಲ, ನಮ್ಮೂರಲ್ಲಿ-ನಿಮ್ಮೂರಲ್ಲಿ-ಬೆಂಗಳೂರು-ಮೈಸೂರಲ್ಲಿ ಎಲ್ಲಕಡೆಯೂ ಇರುವ ’ಅಡಿಗೆಯವ್ರು’ ಅಂತ ತಪ್ಪಾಗಿ ತಿಳ್ಕೊಬೇಡಿ. ಇವರೆಲ್ಲ ಇಂಜನಿಯರ್ಸ್‌, ಡಾಕ್ಟರ್ಸ್‌, ಕನ್ಸಲ್ಟೆಂಟ್ಸ್‌, ಚಾರ್ಟರ್ಡ್‌ ಅಕೌಂಟೆಂಟ್ಸ್‌... ಹೀಗೆ ಅಮೆರಿಕದ ಘನಸಂಸ್ಥೆಗಳಲ್ಲಿ ದೊಡ್ಡದೊಡ್ಡ ಹುದ್ದೆಗಳಲ್ಲಿರೋರು! ವಿಶೇಷ ಸಂದರ್ಭಗಳಲ್ಲಿ ಸ್ವಯಂಸೇವಕರಾಗಿ ತಂಡ ಕಟ್ಟಿಕೊಂಡು ಅಡುಗೆಯನ್ನು ಮಾಡಿಕೊಡಲು ಅವರದೊಂದು ’ನಳಪಾಕ’ ಟೀಮ್‌.

ನಳಪಾಕ ತಂಡದಲ್ಲಿ, ಸ್ವತಃ ಉಷಾ ಚಾರ್‌ ಅವರ ಪತಿ ಎ.ಆರ್‌.ಚಾರ್‌ ಸಹ ಇದ್ದಾರೆ. ಪ್ರತಿವರ್ಷ ಶರನ್ನವರಾತ್ರಿಯ ವೇಳೆ ಉಷಾ ಚಾರ್‌ ಮನೆಯಲ್ಲಿ ಆಚರಿಸುವ ಶಾರದಾಪೂಜೆಗೆ ಮತ್ತು ಏಪ್ರಿಲ್‌ನಲ್ಲಿ ರಾಮನವರಾತ್ರಿಯ ಸಂದರ್ಭದಲ್ಲಿ ಇಲ್ಲಿನ ಶಿವವಿಷ್ಣು ದೇವಸ್ಥಾನದಲ್ಲಿ ಜರಗುವ ’ನಾದತರಂಗಿಣಿ ಸಂಗೀತೋತ್ಸವ’ ಸಮಾರಾಧನೆಗೆ ಸಹ ನಳಪಾಕ ತಂಡದವರಿಂದಲೇ ಅಡುಗೆ. ಸಂಗೀತವನ್ನು ಆಸ್ವಾದಿಸಿದಷ್ಟೇ ಅಥವಾ ಅದಕ್ಕಿಂತಲೂ ಒಂದು ತೂಕ ಹೆಚ್ಚಿನಷ್ಟು ಪ್ರಶಂಸೆಯನ್ನು ನಳಪಾಕವೂ ಪಡೆಯುತ್ತದೆ.

ನಳಪಾಕ ಟೀಮ್‌ನಲ್ಲಿ ಎಲ್ಲರೂ ಕನ್ನಡಿಗರೇ, ಕನ್ನಡದ ಅಡುಗೆಯನ್ನು ಉಂಡು ಬೆಳೆದವರೇ. (ಅಷ್ಟೇ ಏಕೆ, ನಳಪಾಕದ ’ಚೀಫ‚್‌ ಕುಕ್‌’ ಕೃಷ್ಣಮೂರ್ತಿಯವರು, ಅನಂತ ಸ್ವಾಮಿ, ಗುಂಡೂ ರಾವ್‌... ಇವರೆಲ್ಲ ವಿಚಿತ್ರಾನ್ನವನ್ನೂ ಓದುವ ಡೌನ್‌-ಟು-ಅರ್ತ್‌ ಸ್ವಭಾವದ ಹಿರಿಯರು. ಅದಕ್ಕೇ ಈ ವರ್ಷ ಏಪ್ರಿಲ್‌ನ ಸಂಗೀತೋತ್ಸವದ ವೇಳೆ ನಳಪಾಕತಂಡಕ್ಕೆ ವಿಚಿತ್ರಾನ್ನ ಕುಕ್ಕನ್ನೂ ಸೇರಿಸಿಕೊಂಡಿದ್ದರು). ಟೀಮ್‌ವರ್ಕ್‌ ವೇಳೆ ತಮಾಷೆ ಮಾತು, ಹಾಸ್ಯಚಟಾಕಿ, ಪರಸ್ಪರ ಕಾಲೆಳೆಯುವುದಕ್ಕೆ ಒಂದೊಂದು ನಾನ್‌ವೆಜ್‌ ಜೋಕು- ಎಲ್ಲ ಕನ್ನಡದಲ್ಲೇ. ತಂಡದಲ್ಲಿ ಒಬ್ಬೊಬ್ಬರದೂ ಒಂದೊಂದು ಎಕ್ಸ್‌ಪರ್ಟೈಸ್‌ ಬೇರೆ ಇದೆ! ಕೃಷ್ಣಮೂರ್ತಿಯವರ ಪುಳಿಯಾಗರೆ, ಸಾರು, ಹುಳಿ ಇವೆಲ್ಲ simply superb. ಹಾಗೆಯೇ ಮೈಸೂರು ರಾಮರಾವ್‌ ಮಾಡುವ ಹಯಗ್ರೀವ ಮಡ್ಡಿ ಸಹ ಇಲ್ಲಿ ಸಿಕ್ಕಾಪಟ್ಟೆ ಫ‚ೇಮಸ್ಸು.

ಶಾರದಾಪೂಜೆಯ ಅಡುಗೆ ಈ ನಳಪಾಕ ಟೀಮ್‌ ಬಾಣಸಿಗರಿಂದ ಎಂಬ ವಿಚಾರವನ್ನು, ವಾಷಿಂಗ್ಟನ್‌ ಪೋಸ್ಟ್‌ನಲ್ಲಿ ಲೇಖನವಾಗಿ ಪ್ರಕಟಿಸುವ ಸ್ಪೆಷಲ್‌ ಅಸೈನ್‌ಮೆಂಟ್‌ ಮೇಲೆ ಮಿಶೆಲ್‌ ವೈಸ್ಮನ್‌ ಅವತ್ತು ದಿನವಿಡೀ ಚಾರ್‌ ಮನೆಯಲ್ಲಿ ಕ್ಯಾಂಪ್‌ ಹೂಡಿದ್ದು. ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆಯಲ್ಲಿ ಬರುತ್ತದೆ ಎಂದ ಮೇಲೆ ಕೇಳಬೇಕೆ, ಲೇಖಕಿಯಷ್ಟೇ ಉಮೇದು ಪಾಕಪ್ರವೀಣರಿಗೂ. ಒಗ್ಗರಣೆ ಮಾಡುವ ವಿಧಾನವನ್ನು ಮಿಶೆಲ್‌ಗೆ ವಿವರಿಸಿದ್ದೇ ವಿವರಿಸಿದ್ದು, ದಹಿವಡಾ ಮಾಡಲು ವಡೆ ಕರಿಯುವಾಗ ಅದನ್ನು ಡೋನಟ್‌ಗೆ ಹೋಲಿಸಿದ್ದು, ಪುಳಿಯಾಗರೆಯ ಮಿಶ್ರಣತಯಾರಿಯಿಂದ ಹಿಡಿದು ಅನ್ನದಲ್ಲಿ ಕಲಸುವವರೆಗೂ ಅದರ ಹಂತಗಳನ್ನೆಲ್ಲ ವಿವರಿಸಿ ಆಕೆ ಇಡೀ ರೆಸಿಪಿಯನ್ನು ಬರೆದುಕೊಂಡದ್ದು... ಹೀಗೆ. ನಳಪಾಕದ ಬಗ್ಗೆ ಪ್ರತಿಯಾಂದನ್ನೂ ಬೆರಗುಗಣ್ಣುಗಳಿಂದ ಅತ್ಯಾಸಕ್ತಿಯಿಂದ ನೋಡಿ, ಕೇಳಿ ತಿಳಿದು ನೋಟ್‌ ಮಾಡಿಟ್ಟುಕೊಳ್ಳುತ್ತಿದ್ದ ಮಿಶೆಲ್‌ಳಂತೆಯೇ, ವೃತ್ತಿಪರ ಪತ್ರಕರ್ತೆ/ಲೇಖಕಿಯಾಗಿ ಅವಳ ವಿಷಯ ಸಂಗ್ರಹಣೆ, ಪೂರಕಮಾಹಿತಿಗಳ ಬಗ್ಗೆಯೂ attention to details ಇವನ್ನೆಲ್ಲ ಅವಳಿಂದ ಕಲಿಯುವುದು ಮಾಹಿತಿಯಾದಗಿಸಿದ ನಮಗೂ ಇತ್ತೆನ್ನಿ.

ಶಾರದಾಪೂಜೆಗೆ ಬಂದಿದ್ದ ಹೆಚ್ಚಿನೆಲ್ಲರ ಪರಿಚಯ ಮಾಡಿಕೊಂಡು, ಹೆಂಗಸರ/ಮಕ್ಕಳ ಅಂದದ ಉಡುಗೆತೊಡುಗೆಗಳನ್ನೂ ಪ್ರಶಂಸಿಸಿ, ಹಿಂದೂಧರ್ಮ-ಭಾರತ-ಕರ್ನಾಟಕ-ಕನ್ನಡಗಳ ಬಗ್ಗೆ ಒಂದಿಷ್ಟು ತಿಳಿದುಕೊಂಡು, ಕರ್ಣಾನಂದಕರ ಕರ್ನಾಟಕಸಂಗೀತವನ್ನು ಆಲಿಸಿ, ಪೂಜೆ ಮುಗಿದು ಮಂಗಳಾರತಿಯ ವೇಳೆ ಶಾರದೆಗೆ ಕೈಮುಗಿದು, ಪ್ರಸಾದರೂಪವಾಗಿ ’ನಳಪಾಕ’ವನ್ನು ಆಸ್ವಾದಿಸಿ ರಾತ್ರೆ ಹೊರಡುವವೇಳೆಗೆ ಮಿಶೆಲ್‌ ವೈಸ್ಮನ್‌ಗೆ ಅದೊಂದು ’ರೋಚಕ ಅನುಭವದ ದಿನ’ ಎನಿಸಿದ್ದರೆ ಏನೇನೂ ಆಶ್ಚರ್ಯವಿಲ್ಲ.

ಅವಳ ಆ ಅನುಭವ ಪ್ರಕಟವಾಗೇ ಬಿಟ್ಟಿತು ಮೊನ್ನೆ ಅಕ್ಟೋಬರ್‌ 19ರ ವಾಷಿಂಗ್ಟನ್‌ಪೋಸ್ಟ್‌ನಲ್ಲಿ! Guys and Dals ಎಂಬ ಶೀರ್ಷಿಕೆಯಾಂದಿಗೆ ಅದ್ಭುತವಾದ ಲೇಖನ By Michaele Weissman; Special to The Washington Post ಬೈಲೈನ್‌ನೊಂದಿಗೆ ಪ್ರಕಟವಾದದ್ದನ್ನು ಓದಿದ ನಳಪಾಕ ತಂಡದವರಿಗೂ ಶಾರದಾಪೂಜೆಯಲ್ಲಿ ಭಾಗವಹಿಸಿದ್ದ ಇತರೆಲ್ಲರಿಗೂ, ವಾಷಿಂಗ್ಟನ್‌ ಡಿಸಿ ಪ್ರದೇಶದ ಕನ್ನಡಿಗರೆಲ್ಲರಿಗೂ ಪುಳಕ!

ಉಪಸಂಹಾರ:

ಸಂಗೀತಕ್ಕೆ ಸೀಮೆಗಳಿಲ್ಲ ಎನ್ನುತ್ತಾರೆ. ಸಂಗೀತಕಾರ್ಯಕ್ರಮದ ನಂತರ ಭೋಜನಪ್ರಸಾದದ ನಳಪಾಕ ಸಮಾಚಾರಕ್ಕೂ ಎಲ್ಲಿಯ ಸೀಮೆಗಳು? ವಾಷಿಂಗ್ಟನ್‌ ಪೋಸ್ಟ್‌ನಂತಹ ಅಂತಾರಾಷ್ಟ್ರೀಯ ಪ್ರತಿಷ್ಠಿತ ಪತ್ರಿಕೆಯಲ್ಲಿ ಭಾರತೀಯ ಸಂಸ್ಕೃತಿ ಪರಿಚಯದ ತುಣುಕೊಂದು ಪ್ರಕಟವಾದದ್ದನ್ನು ಅಮೆರಿಕದಲ್ಲಿನ ಭಾರತ ದೂತಾವಾಸ ಕಛೇರಿ (Indian Embassy) ತನ್ನ ವೆಬ್‌ಸೈಟ್‌ನಲ್ಲೂ, ಲಂಡನ್‌ನಲ್ಲಿನ High Commission of India ಮತ್ತಿತರ ಅಂತಾರಾಷ್ಟ್ರೀಯ ಸಂಸ್ಥೆಗಳೂ ತಂತಮ್ಮ ಜಾಲಪುಟಗಳಲ್ಲಿ ಉಲ್ಲೇಖಿಸಿದುವು. ಹೀಗೆ ’ನಳಪಾಕ’ಒಂದು ಸಾಂಸ್ಕೃತಿಕ ಸೇತುವಾಯಿತು!

ಈ ಪರಿಯ ನಳಪಾಕ ಲೇಖನವು ವಿಚಿತ್ರಾನ್ನ ಓದುಗರಿಗೆ (ವಿಶ್ವಕನ್ನಡಿಗರಿಗೆ) ಸಹ ಓದಲಿಕ್ಕೆ ಸಿಗಬೇಕೆಂದು ನಾನು ವಾಷಿಂಗ್ಟನ್‌ ಪೋಸ್ಟ್‌ ಮತ್ತು ಮಿಶೆಲ್‌ ವೈಸ್ಮನ್‌ ಸಮ್ಮತಿಯಾಂದಿಗೆ ಇಲ್ಲಿ ಪಿಡಿಎಫ‚್‌ ಕಡತವಾಗಿ ಸಂಗ್ರಹಿಸಿ ಇಟ್ಟಿದ್ದೇನೆ. ನಿಮ್ಮ ಕಂಪ್ಯೂಟರ್‌ಗೆ ಅವರೋಹಿಸಿ ನಿಧಾನಕ್ಕೆ ಓದಿ, ನಳಪಾಕವನ್ನು ನೀವೂ ಸವಿಯಿರಿ!

- srivathsajoshi@yahoo.com.

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more