• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಾರಿಸು ಕನ್ನಡ ‘ಡುಂಡಿ’ಮವ...

By Staff
|
Srivathsa Joshi *ಶ್ರೀವತ್ಸ ಜೋಶಿ
ಎಚ್‌.ಡುಂಡಿರಾಜ್‌ ಯಾರೆಂದು ಗೊತ್ತಿರುವವರು ಕೈ ಎತ್ತಿ!

ಹಾಗೆ ನೀವು ಕೈ ಎತ್ತಿದ ಭಂಗಿಯಲ್ಲಿರುವಾಗಲೇ ನಿಮ್ಮನ್ನೀಗ ‘ಡುಂಡಿರಾಜ್‌ ಬಗ್ಗೆ ತಿಳಿದುಕೊಳ್ಳುವುದರಲ್ಲಿ ಎತ್ತಿದ ಕೈ’ ಎಂದು ಬಣ್ಣಿಸಬಹುದೇ? ಧಾರಾಳವಾಗಿ. ಅಂಬೇಡ್ಕರ್‌ ಪ್ರತಿಮೆಯಲ್ಲಿ ಅವರ ಬಲಗೈ ಎತ್ತಿದ್ದಿರುತ್ತದೆ (ಕ್ರಿಕೆಟ್‌ ಅಂಪೈರ್‌ ‘ಔಟ್‌’ ಸೂಚಿಸಿದಂತೆ...) ಯಾಕೆ? ಎಂಬ ಪ್ರಶ್ನೆಗೆ ಡುಂಡಿರಾಜ್‌ ಒಂದು ಹನಿಗವನದಲ್ಲಿ ಉತ್ತರ ಹೇಳಿದ್ದಾರೆ - ಯಾಕೆಂದರೆ ಅಂಬೇಡ್ಕರ್‌ ಅವರದು ಸಂವಿಧಾನ ಬರೆಯೋದ್ರಲ್ಲಿ ಎತ್ತಿದ ಕೈ! (ಆದರೆ ಒಂದು ಸಂದೇಹ. ಕೈ ಎತ್ತಿಕೊಂಡೇ ಇದ್ದರೆ ಸಂವಿಧಾನ ಬರೆಯೋದಾದ್ರೂ ಹೇಗೆ?)

ಇರಲಿ, ಆ ಕುತರ್ಕವನ್ನು ಬಿಟ್ಹಾಕಿ. ಇವತ್ತು ವಿಚಿತ್ರಾನ್ನದಲ್ಲಿ ‘ಡುಂಡಿ’ರಾಜ್‌ ಬಗ್ಗೆ ಡಿಂಡಿಮ ಬಾರಿಸೋಣ. ಹಾಗಂತ ಹೇಳಿ ಇದು ಅವರ ಬಗ್ಗೆ ವ್ಯಕ್ತಿಪರಿಚಯ ಲೇಖನವೆಂದಾಗಲೀ ಅವರ ಗುಣಗಾನದ ಬಹುಪರಾಕು ಅಂತೇನೂ ಎಣಿಸಬೇಡಿ; ಇದು ಜಸ್ಟ್‌ ನನ್ನ-ಡುಂಡಿರಾಜರ ಸೌಹಾರ್ದ ಭೇಟಿಯ ಸಿಂಪಲ್‌ ಕಾಮೆಂಟರಿ.

*

Srivathsa Joshi and Dundirajಕಾರ್ಪೋರೇಷನ್‌ ಬ್ಯಾಂಕ್‌ನಲ್ಲಿ ಮುಖ್ಯ ಪ್ರಬಂಧಕರಾಗಿ ಬಡ್ತಿಪಡೆದು ಇದೀಗ ಮಂಗಳೂರಿಂದ ಬೆಳಗಾವಿ ಶಾಖೆಗೆ ವರ್ಗವಾಗಿರುವ ಡುಂಡಿರಾಜ್‌ ಸಂಸಾರರಥದ ಮೂರು ಗಾಲಿಗಳು (ಅಂದರೆ ಹೆಂಡತಿ, ಮಗಳು ಮತ್ತು ಮಗ) ಸದ್ಯಕ್ಕೆ ಮಂಗಳೂರಲ್ಲೇ ಇದ್ದು ಡುಂಡಿರಾಜ್‌ ಮಾತ್ರ ‘ಬಲವಂತ ಬ್ರಹ್ಮಚಾರಿ’ಯಾಗಿ ಬೆಳಗಾವಿ ವಾಸಿಯಾಗಿದ್ದಾರೆ (ಅರ್ಥಾತ್‌, ‘ಮಾಡಿದ್ದುಣ್ಣೊ ಮಹಾರಾಯ...’ ಆಗಿದ್ದಾರೆ ಎಂದುಬೇಕಿದ್ದರೂ ಹೇಳಬಹುದು). ಮೂಲತಃ ಡುಂಡಿರಾಜ್‌ ನಮ್ಮ ಜಿಲ್ಲೆಯವರೇ. ಕುಂದಾಪುರ ತಾಲೂಕಿನ ‘ ಹಟ್ಟಿಕುದ್ರು’ ಅವರ ಹುಟ್ಟೂರು. ಈಹಿಂದೆ ಕಾರ್ಪೊರೇಷನ್‌ ಬ್ಯಾಂಕ್‌ನ ಕ್ಷೇತ್ರಾಧಿಕಾರಿಯಾಗಿದ್ದಾಗ ಅವರು ನಮ್ಮೂರಿನ (ಮಾಳ) ಬ್ಯಾಂಕ್‌ ಶಾಖೆಗೂ ಪ್ರತಿ ವಾರ ಭೇಟಿಕೊಡುತ್ತಿದ್ದರು, ಹಾಗಾಗಿ ನಮ್ಮೂರು, ನಮ್ಮೋರು ಅವರಿಗೆ ಚೆನ್ನಾಗಿ ಗೊತ್ತು. ವಿಚಿತ್ರಾನ್ನ ಫುಲ್‌ಮೀಲ್ಸ್‌ಗೆ (ಪುಸ್ತಕಕ್ಕೆ) ಮುನ್ನುಡಿ ಬರೆಯುವಂತೆ ಅವರನ್ನೇ ನಾನು ಕೋರುವುದಕ್ಕೆ ಅದೂ ಒಂದು ಕಾರಣ ಎನ್ನಲಿಕ್ಕಡ್ಡಿಯಿಲ್ಲ.

ಬೆಂಗಳೂರಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭಕ್ಕೂ ಡುಂಡಿರಾಜ್‌ ಅವರನ್ನು ಕರೆದಿದ್ದೆನಾದರೂ ಕಾರ್ಯಬಾಹುಳ್ಯದಿಂದ ಅವರಿಗೆ ಬರಲಿಕ್ಕಾಗಲಿಲ್ಲ. ಸ್ವಾತಂತ್ರ್ಯದಿನಾಚರಣೆಯ ರಜೆಯ ನಂತರ ಆ ವಾರವಿಡೀ ರಜೆ ಹಾಕಿ ಮಂಗಳೂರಲ್ಲಿ ಇರುವುದಾಗಿಯೂ, ಕಾರ್ಕಳಕ್ಕೆ ಹೋದಾಗ ಮಂಗಳೂರಿಗೂ ಪಯಣ ಬೆಳೆಸಿ ಅವರ ಮನೆಗೂ ಭೇಟಿಕೊಡಬೇಕೆಂದು ನನಗವರು ಆತ್ಮೀಯವಾದ ಆಮಂತ್ರಣ ಕೊಟ್ಟಿದ್ದರು. ಆ ಪ್ರಕಾರ ಮೊನ್ನೆ ಆಗಸ್ಟ್‌ 18ರಂದು ಗುರುವಾರ ಮಂಗಳೂರಲ್ಲಿ ನನ್ನ - ಡುಂಡಿರಾಜ್‌ ಅವರ ಭೇಟಿ ಎಂದು ನಿಗದಿಪಡಿಸಿಕೊಂಡಿದ್ದೆವು. ಮಂಗಳೂರಿನಲ್ಲಿ ಅವರ ಮನೆ ಇರುವುದು ಬಿಜೈ ಎಂಬ ಪ್ರದೇಶದಲ್ಲಿ. ಸೋ, ನಮ್ಮೂರಿಂದ ನನ್ನ ಅಣ್ಣನೊಂದಿಗೆ ಮಾರುತಿವ್ಯಾನ್‌ನಲ್ಲಿ ಬಿಜೈಗೆ ಬಿಜಯಂಗೈಯುವ ಪ್ರೊಗ್ರಾಂ ಫಿಕ್ಸ್‌ ಮಾಡಿಕೊಂಡೆ.

ಡುಂಡಿರಾಜ್‌ ಮನೆ ಬಿಜೈಯಲ್ಲಿ ಒಂದು ಅಪಾರ್ಟ್‌ಮೆಂಟ್‌ ಕಾಂಪ್ಲೆಕ್ಸ್‌ನ ಮೂರನೆ ಮಹಡಿಯಲ್ಲಿ. ಬೇಸ್‌ಮೆಂಟಲ್ಲಿ ಕಾರ್‌ ಪಾರ್ಕ್‌ ಮಾಡಿ ನಾವು ಮೆಟ್ಟಲು ಹತ್ತುವವರಿದ್ದೆವಾದರೂ ಅಪಾರ್ಟ್‌ಮೆಂಟ್‌ನ ಸೆಕ್ಯುರಿಟಿ ಗಾರ್ಡ್‌ ನಮ್ಮನ್ನು ಲಿಫ್ಟ್‌ನಲ್ಲೇ ಹೋಗುವಂತೆ ಆಜ್ಞಾಪಿಸಿದ, ಮಾತ್ರವಲ್ಲ ಅವನೂ ನಮ್ಮ ಜತೆ ಲಿಫ್ಟ್‌ನಲ್ಲಿ ಸೇರಿಕೊಂಡ. ಲಿಫ್ಟ್‌ ಸರಿಸುಮಾರು ಒಂದೂವರೆ ಮಹಡಿಯಷ್ಟು ಮೇಲೇರಿದ ಕೂಡಲೇ ಕರೆಂಟ್‌ ಕಟ್‌ ಆಗಿಬಿಡಬೇಕೇ! ಸದ್ಯ ಆ ಗಾರ್ಡ್‌ ಕೂಡ ನಮ್ಮೊಂದಿಗೆ ಲಿಫ್ಟ್‌ನಲ್ಲಿದ್ದುದರಿಂದ ಬಚಾವ್‌. ಅವನು ಲಿಫ್ಟ್‌ ಬಾಗಿಲು ತೆಗೆದು ಅಲ್ಲಿಂದಲೇ ಇನ್ನೊಬ್ಬ ಗಾರ್ಡನ್ನು ಕರೆದು ಜನರೇಟರ್‌ ಸ್ಟಾರ್ಟಿಸಲು ಹೇಳಿದ, ಹಾಗಾಗಿ ಸೆಕೆಂಡ್‌ ಹಾಫ್‌ ಅಫ್‌ ಅವರ್‌ ಜರ್ನಿ ವಾಸ್‌ ಪವರ್‌ಡ್‌ ಬೈ ಜನರೇಟರ್‌. ಬಹುಶಃ ಡುಂಡಿರಾಜ್‌ ಚುಟುಕಗಳಲ್ಲಿ ಪದಗಳನ್ನು ವಾಕ್ಯಗಳನ್ನು ಅರ್ಧಂಬರ್ಧ ತುಂಡರಿಸಿ ಪನ್‌ ಮಾಡುತ್ತಾರಾದರೆ ಅವರ ಮನೆಯ ಲಿಫ್ಟ್‌ ಸಹ ತನ್ನ ಸರ್ವೀಸನ್ನು ಅರ್ಧಂಬರ್ಧ ನಿಲ್ಲಿಸಿ ನಮ್ಮ ಮೇಲೊಂದು ಲಘುವಾಗಿ ಫನ್‌ ಪ್ರಯೋಗಿಸಿತೋ ಏನೊ.

ಅಂತೂ ಸುದೀರ್ಘವಾದ ಲಿಫ್ಟ್‌ ಪ್ರಯಾಣ ಮುಗಿಸಿ (ಮತ್ತು ಅದರಿಂದಾಗಿ, ಏಳು ನಿಮಿಷ ತಡವಾಗಿ) ಅಪರಾಹ್ನ 2:37ಕ್ಕೆ ನಾವು ಡುಂಡಿರಾಜ್‌ ಮನೆ ತಲುಪಿದೆವು. ಕರೆಗಂಟೆ ಒತ್ತಿದ ಕೂಡಲೆ ಬಾಗಿಲು ತೆರೆದು ನಗುಮೊಗದಿಂದ ನಮ್ಮನ್ನು ಆತ್ಮೀಯವಾಗಿ ಸ್ವಾಗತಿಸಿದ ಡುಂಡಿರಾಜ್‌ ನಿಜಕ್ಕೂ ಒಬ್ಬ ಸಹೃದಯಿ, ಸರಳ ವ್ಯಕ್ತಿಯಾಗಿ ಕಂಡರು. ಉಭಯಕುಶಲೋಪರಿ, ಅಭಿನಂದನೆ, ಪರಿಚಯ (ಅವರ ಮಡದಿ-ಮಕ್ಕಳಿಗೆ) ಇತ್ಯಾದಿ ಆಯ್ತು. ಡುಂಡಿರಾಜ್‌ಗೆ ಇಬ್ಬರು ಮಕ್ಕಳು. ಮಂಗಳೂರಲ್ಲೇ ಇಂಜನಿಯರಿಂಗ್‌ ಓದುತ್ತಿರುವ ಸಹಜಾ ಮತ್ತು ಹತ್ತನೆ ತರಗತಿಯಲ್ಲಿರುವ ಮಗ ಸಾರ್ಥಕ್‌. ಈ ಹಾಸ್ಯಕವಿ ಮಕ್ಕಳಿಗೆ ಹೆಸರಿಡುವಾಗಲೂ ಉಪಯೋಗಿಸಿರುವ ಚಾತುರ್ಯವನ್ನು ಗಮನಿಸಿ. ‘ಆರತಿಗೊಬ್ಬಳು ಮಗಳು ಕೀರ್ತಿಗೊಬ್ಬ ಮಗ’ ಎನ್ನುವ ಸಂದೇಶವನ್ನೇ ಅವರು ಮಕ್ಕಳ ಹೆಸರಲ್ಲಿ ಪ್ರತಿಬಿಂಬಿಸಿದ್ದಾರೆ. ಮೊದಲ ಮಗು ಹುಟ್ಟಿದ ಸಡಗರದಲ್ಲಿ ‘ಸಹಜಾ’; ಜನ್ಮಸಾರ್ಥಕವೆಂಬ ಭಾವದಲ್ಲಿ ಎರಡನೆ ಮಗು ‘ ಸಾರ್ಥಕ್‌’!

ಇನ್ನೊಂದು ವಿಶೇಷ ಏನಾಯ್ತೆಂದರೆ ಅವತ್ತು (ಆಗಸ್ಟ್‌ 18) ನಾನು ಹೋಗಿದ್ದ ದಿನವೇ ಡುಂಡಿರಾಜ್‌ ಅವರ ಜನ್ಮದಿನ! ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಲು ನಾನು ಸ್ಪೆಷಲ್ಲಾಗಿ ವಾಷಿಂಗ್ಟನ್‌ ಡಿಸಿಯಿಂದ ಬರುತ್ತಿದ್ದೇನೆ? ಅವರು ಬೆಳಗಾವಿಯಲ್ಲೇ ಇರುತ್ತಿದ್ದರೆ ಪರ್ಸನಲ್ಲಾಗಿ ಗ್ರೀಟಿಸುವುದು ಸಾಧ್ಯವಾಗುತ್ತಿತ್ತೇ? ಆದರೆ ಈಗ ಅಚಾನಕ್ಕಾಗಿ ಜನ್ಮದಿನದ ಶುಭಾಶಯಗಳನ್ನು ಖುದ್ದಾಗಿ ತಿಳಿಸುವುದು ಸಾಧ್ಯವಾಯ್ತು; ಮಾತ್ರವಲ್ಲ, ಬರ್ತ್‌ಡೇ ಸ್ವೀಟ್‌ ಎಂದು ನನ್ನ ಫೇವರಿಟ್‌ ಜಿಲೇಬಿ ಸಹ ಕೊಟ್ಟರು!

ಮುನ್ನುಡಿ ಬರೆಯುವ ಮೊದಲೇ ವಿಚಿತ್ರಾನ್ನ ಪುಸ್ತಕವನ್ನು ಆಮೂಲಾಗ್ರ ಓದಿದ್ದ (ತಿಂದು ತೇಗಿದ್ದ?) ಡುಂಡಿರಾಜ್‌ ಇನ್ನೊಮ್ಮೆ ಪುಸ್ತಕದ ಬಗ್ಗೆ, ಅದರಲ್ಲಿರುವ ಪನ್‌-ಫನ್‌ಗಳ ಬಗ್ಗೆ, ಬಾಣಲೆಯಿಂದ ತೆಗೆದು ಅದನ್ನು ಉದ್ಘಾಟಿಸಿದ ಹೊಸಪರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಾನು ಕೊಟ್ಟ ಗೌರವಪ್ರತಿಯನ್ನು ಡುಂಡಿರಾಜ್‌ ಅವರ ಮಡದಿ ಮತ್ತು ಮಗಳು ನಾಮುಂದು ತಾಮುಂದು ಎಂದು ಓದಲುಧ್ಯುಕ್ತರಾದರು. ಜತೆಯಲ್ಲೇ ನಮಗೆ ಕಾಫಿ-ತಿಂಡ್ಯೋಪಚಾರವನ್ನೂ ಮಾಡಿದರು. ಹುಟ್ಟುಹಬ್ಬದ ಜಿಲೇಬಿ ಇತ್ತು ಎಂದು ಆಗಲೇ ಅಂದ್ನಲ್ಲ, ಹಾಗೆಯೇ ಇನ್ನೂ ಒಂದೆರಡು ಸಿಹಿ-ಖಾರ ಸ್ನ್ಯಾಕ್ಸ್‌ ಮತ್ತು ನಮ್ಮ ಕರಾವಳಿ ಸ್ಪೆಷಲ್‌ ಹಲಸಿನಕಾಯಿ ಹಪ್ಪಳ ಎಣ್ಣೆಯಲ್ಲಿ ಕರಿದದ್ದು. ಡುಂಡಿರಾಜ್‌ರಂತೆಯೇ ಲವಲವಿಕೆ-ಖುಶಿಯ ಜೀವಿಗಳು ಅವರ ಮನೆಯವರೆಲ್ಲ.

ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರತಿ ಮಂಗಳವಾರ ಮಾತು ಕ(ವಿ)ತೆ ಎಂಬ ಸರಸಮಯ ಅಂಕಣವನ್ನು ಫನ್‌-ಪನ್‌ ಒಗ್ಗರಣೆ ಸೇರಿಸಿ ಡುಂಡಿರಾಜ್‌ ಬರೆಯುತ್ತಿದ್ದಾರೆ. (ದಟ್ಸ್‌ಕನ್ನಡದಲ್ಲೂ ಲೈಟ್‌ ರೀಡಿಂಗ್‌ನ ಅಂಕಣ ಮಂಗಳವಾರವೇ ಇರುವುದು ಒಂದು ಕೊ-ಇನ್ಸಿಡೆನ್ಸು. ಅಥವಾ ಮಂಗಳವಾರಕ್ಕೆ ‘ಪನ್‌’ಗಳ ವಾರ ಎಂದು ಕರೆಯಬಹುದು ಎಂಬ ಒಂದು ವಕ್ರತುಂಡೋಕ್ತಿ ಮಾಡಲೂಬಹುದು). ವಿಜಯಕರ್ನಾಟಕದ ಇತರ ಅಂಕಣಗಳಂತೆಯೇ ಅದೂ ಅತ್ಯಂತ ಜನಪ್ರಿಯ ಎಂದು ಬೇರೆ ಹೇಳಬೇಕಿಲ್ಲವಲ್ಲ. ಇದೀಗ ಮಾತುಕ(ವಿ)ತೆ ಅಂಕಣ ಬರಹಗಳ ಸಂಕಲನವೂ ಪುಸ್ತಕರೂಪದಲ್ಲಿ ಬರಲಿದೆ. ಸೆಪ್ಟಂಬರ್‌ ಮೊದಲವಾರದಲ್ಲಿ ಬಿಡುಗಡೆಯಾಗಲಿರುವ ಪುಸ್ತಕದ ಒಂದು ‘ಪ್ರಿವ್ಯೂ’ ನನಗೂ ದಕ್ಕಿತು. ಅದಲ್ಲದೆ, ಅವರ ಈಹಿಂದಿನ ಪುಸ್ತಕಗಳ ಪೈಕಿ ‘ಕೊರಿಯಪ್ಪನ ಕೊರಿಯಾಗ್ರಫಿ’ ಮತ್ತು ‘ಬನ್ನಿ ನಮ್ಮ ಹಾಡಿಗೆ’ ಪುಸ್ತಕಗಳನ್ನು ನನಗವರು ಉಡುಗೊರೆಯಾಗಿ ಕೊಟ್ಟರು.

ಡುಂಡಿರಾಜ್‌ ಸಾಕಷ್ಟು ಪ್ರಶಸ್ತಿ-ಸನ್ಮಾನಗಳಿಗೆ ಪಾತ್ರರಾಗಿದ್ದಾರೆ (deservedly). ಅವರ ಮನೆಯ ಶೋಕೇಸ್‌ನತ್ತ ಒಂದು ನೋಟ ಬೀರಿದರೆ ಅದೆಲ್ಲದರ ಸಾರಾಂಶ ತಿಳಿಯುತ್ತದೆ. ಅವರೇ ಹೇಳುವಂತೆ ಶೋಕೇಸಲ್ಲಿ ಅವರ ಮಕ್ಕಳು ಗಳಿಸಿದ ಪ್ರಶಸ್ತಿ-ಫಲಕಗಳೂ ಇವೆಯಂತೆ. ಆದರೆ ಅವು ಚುಟುಕಸಾಹಿತ್ಯದವಲ್ಲ, ಶಾಲೆಕಾಲೇಜಲ್ಲಿ ಆಟೋಟ ಸ್ಪರ್ಧೆಗಳ ಬಹುಮಾನಗಳು. ಅಪ್ಪ ಅಕ್ಷರಗಳೊಂದಿಗೆ, ಪದಗಳೊಂದಿಗೆ ಆಟ ಆಡುತ್ತಿದ್ದರೆ ಮಕ್ಕಳು ನಿಜವಾಗಿಯೂ ಆಟ ಓಟ ಗಳಲ್ಲಿ ಆಸಕ್ತರು. ಡುಂಡಿರಾಜ್‌ ಯಥೇಷ್ಟ ಸನ್ಮಾನಗಳಿಗೆ ಆಹಾರ (ಬಲಿಪಶು)ವಾಗಿದ್ದಾರೆಂಬುದಕ್ಕೆ ಇನ್ನೊಂದು ಸಾಕ್ಷಿ ಅವರ ಮನೆಯ ಹಜಾರದಲ್ಲಿರುವ ಸಾಲು ಸಾಲು ಗಂಧದ ಹಾರಗಳು.

ಆದರೆ ಒಂದು ಮಾತು, ಹಾರ-ತುರಾಯಿ, ಪ್ರಶಸ್ತಿ-ಪ್ರಶಂಸೆ ಏನೇ ಇರಲಿ, ಎಷ್ಟೇ ಇರಲಿ, ಡುಂಡಿರಾಜ್‌ಗೆ ಅದರಿಂದ ಕೋಡು ಮೂಡಿಲ್ಲ. ಅವರೊಬ್ಬ ಡೌನ್‌-ಟು-ಅರ್ತ್‌ ಮನುಷ್ಯ. ಸರಳಮನಸ್ಸಿನ ಸಹೃದಯಿ. ಅವರ ಮನೆಗೆ ಭೇಟಿ ಕೊಟ್ಟದ್ದು, ವೈಯಕ್ತಿಕವಾಗಿ ಅವರನ್ನು ಭೇಟಿಯಾಗಿ ಮಾತನಾಡಿಸಿದ್ದು, ಕೈಕುಲುಕಿದ್ದು ಎಲ್ಲವೂ ನನಗೆ ತುಂಬಾ ಖುಶಿ ತಂದಿತು. ಅವರ ಸೆನ್ಸ್‌ ಆಫ್‌ ಹ್ಯೂಮರ್‌, ಸಿಂಪ್ಲಿಸಿಟಿ ಮತ್ತು ಆತ್ಮೀಯತೆಗಳೆಲ್ಲ ಹೀಗೇ ಇರಲಿ, ನಮಗೆಲ್ಲ ಅವು ಆದರ್ಶವಾಗಿರಲಿ ಎಂದು ಹಾರೈಸುತ್ತ ನಾವು ಅವರನ್ನು ಬೀಳ್ಕೊಂಡು ನಮ್ಮ ಮನೆಕಡೆಗೆ ಹೊರಟೆವು.

ಕಾರ್‌ನ ತನಕವೂ ಬಂದು ನಮಗೆ ಶುಭವಿದಾಯ ಹೇಳಿದ ಡುಂಡಿರಾಜ್‌, ತಲೆಯಲ್ಲಿ ಹನಿಗವನಗಳ ನಿರಂತರ ಒರತೆಯನ್ನು ತುಂಬಿಸಿಕೊಂಡಿದ್ದರೆ ಹೃದಯದಲ್ಲಿ honeyಯಂಥ ಸಿಹಿಸ್ನೇಹವನ್ನು ತುಂಬಿಕೊಂಡಿದ್ದಾರೆ ಎಂಬುವುದರಲ್ಲಿ ಎರಡು ಮಾತಿಲ್ಲ. ಹುಟ್ಟುಹಬ್ಬದಾಚರಣೆಯಲ್ಲಿ ಅವರು ಸೆಂಚುರಿ ಬಾರಿಸಲಿ ಎಂಬುದೇ ನನ್ನ-ನಿಮ್ಮೆಲ್ಲರ ಆಶಯವಾಗಿರಲಿ. ಅಲ್ಲವೇ?

*

ಮತ್ತೆ ನಿಮ್ಮ ಸಮಾಚಾರ ಏನು? ನಾನು ಇವತ್ತು ಜನ್ಮಭೂಮಿಯಾತ್ರೆ ಮುಗಿಸಿ ಕರ್ಮಭೂಮಿಗೆ ಮರಳುತ್ತಿದ್ದೇನೆ. ನಾಳೆಯಿಂದ ಯಥಾಪ್ರಕಾರ ಅಫೀಸು, ಮುಂದಿನವಾರದಿಂದ ಮಗನಿಗೆ ಶಾಲೆ. ಮತ್ತೆ ಎಂದಿನಂತೆಯೇ ಮಂಗಳವಾರಕ್ಕೆ ವಿಚಿತ್ರಾನ್ನ ಕುಕ್ಕಿಂಗ್‌ ಮತ್ತು ನಿಮ್ಮೆಲ್ಲರ ಪತ್ರಗಳ ನಿರೀಕ್ಷೆ.

- srivathsajoshi@yahoo.com.

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more